ಅಬೂಹುರೈರಾ(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು….. (ನಿರ್ಣಾಯಕ ದಿನದಂದು) ಒಬ್ಬ ದಾಸನು ಅಲ್ಲಾಹನ ಮುಂದೆ ಬರುವನು. ಅವನೊಂದಿಗೆ ಅಲ್ಲಾಹನು ಹೀಗೆನ್ನುವನು- ಓ ಇಂಥವನೇ! ನಾನು ನಿನಗೆ ಗೌರವಾದರಗಳನ್ನು ದಯಪಾಲಿಸಿರಲಿಲ್ಲವೆ? ನಾನು ನಿನ್ನನ್ನು ನಾಯಕನಾಗಿ ಮಾಡಿರಲಿಲ್ಲವೆ? ನಾನು ನಿನಗೆ ಪತ್ನಿಯನ್ನು ನೀಡಿರಲಿಲ್ಲವೆ? ನಿನ್ನ ಸ್ವಾಧೀನಕ್ಕೆ ಕುದುರೆ-ಒಂಟೆಗಳನ್ನು ಕೊಟ್ಟಿರಲಿಲ್ಲವೆ? ನೀನು ಆಡಳಿತವನ್ನು ನಡೆಸಿ ಜನರಿಂದ ಕಂದಾಯ ವಸೂಲು ಮಾಡಲು ನಿನಗೆ ನಾನು ಅವಕಾಶ ನೀಡಿರಲಿಲ್ಲವೇ? ಅವನು ಆ ಎಲ್ಲಾ ಕೊಡುಗೆಗಳನ್ನು ಒಪ್ಪಿಕೊಳ್ಳುವನು. ತರುವಾಯ ಅವನೊಂದಿಗೆ ಅಲ್ಲಾಹನು ಪುನಃ ಕೇಳುವನು- ನೀನು ಒಂದು ದಿನ ನನ್ನೆದುರು ಹಾಜರುಗೊಳಿಸಲ್ಪಡುವಿ ಎಂಬ ವಿಶ್ವಾಸ ವಿರಿಸಿದ್ದೆಯಾ? ಅವನು ಹೇಳುವನು- ಇಲ್ಲ, ನಾನು ಈ ದಿನದ ಬಗ್ಗೆ ವಿಶ್ವಾಸವಿರಿಸಿರಲಿಲ್ಲ. ಆಗ ಅಲ್ಲಾಹನು ಹೇಳುವನು- ಭೂಲೋಕದಲ್ಲಿ ನೀನು ನನ್ನನ್ನು ಮರೆತಂತೆಯೇ ಈ ದಿನ ನಾನೂ ನಿನ್ನನ್ನು ಮರೆತು ಬಿಡುವೆನು. (ನಿನ್ನನ್ನು ಕಡೆಗಣಿಸುವೆನು. ನನ್ನ ಅನುಗ್ರಹದಿಂದ ದೂರವಿರಿಸುವೆನು)
ಅನಂತರ ಇನ್ನೋರ್ವನು (ನಿರ್ಣಾಯಕ ದಿನವನ್ನು ನಿರಾಕರಿಸುವ) ಅಲ್ಲಾಹನ ಮುಂದೆ ಬರುವನು. ಅವನಲ್ಲೂ ಇದೇ ರೀತಿಯ ಪ್ರಶ್ನೋತ್ತರ ನಡೆಯುವುದು. ಆ ಬಳಿಕ ಮತ್ತೊಬ್ಬ ವ್ಯಕ್ತಿ ಬರುವನು. ಈ ಇಬ್ಬರೊಡನೆ ಕೇಳಿದ ಪ್ರಶ್ನೆಗಳನ್ನೇ ಅವನಿಗೂ ಹಾಕಲಾಗುವುದು. ಆಗ ಅವನು ಹೀಗೆ ಉತ್ತರಿಸುವನು- ನನ್ನ ಪ್ರಭೂ! ನಾನು ನಿನ್ನ ಮೇಲೆ ವಿಶ್ವಾಸವಿರಿಸಿದ್ದೆ. ನಮಾಝ್ ಮಾಡುತ್ತಿದ್ದೆ. ಉಪವಾಸ ವ್ರತ ಆಚರಿಸುತ್ತಿದ್ದೆ. ನಿನ್ನ ಮಾರ್ಗದಲ್ಲಿ ನನ್ನ ಸಂಪತ್ತನ್ನು ವ್ಯಯಿಸುತ್ತಿದ್ದೆ. ಅದೇ ರೀತಿ ತಾನು ಮಾಡಿದ ಸತ್ಕರ್ಮಗಳನ್ನೆಲ್ಲ ಸರಸರನೆ ಹೇಳುತ್ತಾ ಹೋಗುವನು. ಆಗ ಅಲ್ಲಾಹನು ಅವನೊಂದಿಗೆ ಹೀಗೆನ್ನುವನು- ಸಾಕು ಮಾಡು, ನಿಲ್ಲಿಸು, ನಿನ್ನ ಕುರಿತು ಇತರ ಸಾಕ್ಷಿದಾರರನ್ನು ಕರೆಯುತ್ತೇನೆ. ಆಗ ಅವನು ಮನದಲ್ಲೇ ತನ್ನ ಬಗ್ಗೆ ಸಾಕ್ಷಿ ನುಡಿಯುವವರು ಯಾರಿರಬಹುದು ಎಂದು ಅಂದುಕೊಳ್ಳುವನು. ಹಾಗೆ ಅವನ ಸುಳ್ಳು ಹೇಳುವ ಬಾಯಿಯನ್ನು ಮುಚ್ಚಲಾಗುವುದು ಮತ್ತು ಅವನ ತೊಡೆ, ಮಾಂಸ ಮತ್ತು ಮೂಳೆಗಳೊಂದಿಗೆ ವಿಚಾರಿಸಲಾಗುವುದು. ಆಗ ಅವು ಅವನ ಪ್ರತಿಯೊಂದು ಮೋಸಗಾರಿಕೆಯ ಮತ್ತು ತೋರಿಕೆಯ ಕರ್ಮಗಳನ್ನು ಸ್ಪಷ್ಟವಾಗಿ ವಿವರಿಸುವುವು. ಈ ರೀತಿ ಅವನು ಸುಳ್ಳು ಹೇಳುವ ಬಾಗಿಲನ್ನೇ ಮುಚ್ಚಿ ಬಿಡಲಾಗುವುದು.
ಪ್ರವಾದಿ(ಸ) ಹೇಳಿದರು- ಇದು ಭೂಲೋಕದಲ್ಲಿ ಕಾಪಟ್ಯ ತೋರಿದ ಮತ್ತು ಅಲ್ಲಾಹನ ಕ್ರೋಧಕ್ಕೆ ಪಾತ್ರನಾದ ವ್ಯಕ್ತಿಯಾಗಿರುವನು. [ಮುಸ್ಲಿಮ್]
ಆಯಿಶಾ(ರ) ಹೇಳುತ್ತಾರೆ- ಪ್ರವಾದಿ(ಸ) ಕೆಲವು ನಮಾಝ್ಗಳಲ್ಲಿ ಈ ರೀತಿ ಪ್ರಾರ್ಥಿಸುವುದನ್ನು ಕೇಳಿದ್ದೇನೆ- ಓ ಅಲ್ಲಾಹ್! ನನ್ನನ್ನು ಸರಳ ವಿಚಾರಣೆಗೆ ಒಳಪಡಿಸು. ನಾನು ಕೇಳಿದೆ- ಅಲ್ಲಾಹನ ಸಂದೇಶವಾಹಕರೇ! ಸರಳ ವಿಚಾರಣೆಯೆಂದರೇನು? ಪ್ರವಾದಿ(ಸ) ಹೇಳಿದರು- ಸರಳ ವಿಚಾರಣೆಯೆಂದರೆ ಅಲ್ಲಾಹನು ತನ್ನ ದಾಸನ ಕರ್ಮಪತ್ರವನ್ನು ನೋಡಿ, ಅವನ ಲೋಪದೋಷಗಳನ್ನು ಕ್ಷಮಿಸಿಬಿಡುವುದು. ಅನಂತರ ಹೀಗೆಂದರು- ಆಯಿಶಾ! ವಿಚಾರಣೆ ನಡೆಸುವಾಗ ಯಾರ ಒಂದೊಂದು ಕರ್ಮವನ್ನೂ ಸೂಕ್ಷ್ಮವಾಗಿ ಪರಿಶೀಲಿಸ ಲಾಗುವುದೋ ಅವನು ನಾಶವಾಗಿ ಹೋದನು. [ಅಹ್ಮದ್]
ಟಿಪ್ಪಣಿ: ಯಾರು ಅಲ್ಲಾಹನ ಮಾರ್ಗದಲ್ಲಿ ನಡೆಯುವ, ಅವರಿಗೆ ನೀಡಲಾದ ಆದೇಶಗಳನ್ನು ಪಾಲಿಸುತ್ತಾರೋ, ತಮಗೆ ನಿಷೇಧಿಸಲಾದ ವಿಷಯಗಳ ಹತ್ತಿರವೂ ಸುಳಿಯುವುದಿಲ್ಲವೋ ವಿಚಾರಣೆಯ ದಿನ ಅಲ್ಲಾಹನು ಅವರ ಮೇಲೆ ಕೃಪೆದೋರುವನು, ಅವರ ಚಿಕ್ಕ ಪುಟ್ಟ ದೋಷಗಳನ್ನು ಕಡೆಗಣಿಸುವನು, ಅವರನ್ನು ಸ್ವರ್ಗದಲ್ಲಿ ಪ್ರವೇಶಗೊಳಿಸುವನು ಎಂದು ಕುರ್ಆನ್ ಮತ್ತು ಅನೇಕ ಹದೀಸ್ಗಳಿಂದ ತಿಳಿದುಬರುತ್ತದೆ. ಅದಕ್ಕೆ ವ್ಯತಿರಿಕ್ತವಾಗಿ ಯಾರು ಕಡ್ಡಾಯ ಆದೇಶಗಳನ್ನು ಉದ್ದೇಶ ಪೂರ್ವಕವಾಗಿ ಮುರಿಯುತ್ತಾರೋ ಅವರನ್ನು ತಡೆಯಲಾದ ಪಾಪಗಳನ್ನು ಅರಿತೂ ಅರಿತೂ ಮಾಡುತ್ತಾರೋ ಅಂತಹ ಜನರೊಂದಿಗೆ ವಿಚಾರಣೆಯ ವೇಳೆ ಕಠಿಣವಾಗಿ ವರ್ತಿಸಲಾಗುವುದು. ಅವರ ಒಂದೊಂದು ತಪ್ಪನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು. ಇಂತಹ ವ್ಯಕ್ತಿ ಕೆಟ್ಟ ಪರಿಣಾಮದಿಂದ ಪಾರಾಗುವುದಾದರೂ ಹೇಗೆ?
ಅಬೂ ಸಈದ್ ಖುದ್ರೀ(ರ) ಹೇಳುತ್ತಾರೆ: ನಾನು ಪ್ರವಾದಿಯವರ(ಸ) ಬಳಿಗೆ ಹೋಗಿ ‘ಯೌಮ ಯಕೂಮು’ ಎಂಬ ವಚನ ಬಂದಿರುವ (ಒಂದು ದಿನವು ಒಂದು ಸಾವಿರ ವರ್ಷಗಳಿಗೆ ಸಮಾನವಾಗಿರುವ) ಆ ದಿನ ಅಲ್ಲಾಹನ ಸನ್ನಿಧಿಯಲ್ಲಿ ನಿಲ್ಲಬಲ್ಲವನು ಯಾರು ಎಂದು ಕೇಳಿದೆ. ಆಗ ಪ್ರವಾದಿ(ಸ) ಹೇಳಿದರು- ಆ ದಿನವು ಸತ್ಯವಿಶ್ವಾಸಿಯ ಮಟ್ಟಿಗೆ ಫರ್ಝ್ ನಮಾಝ್ನಂತೆ ಕನಿಷ್ಠವೂ ಹಗುರವೂ ಆಗಿರುವುದು. [ಮಿಶ್ಕಾತ್]
ಟಿಪ್ಪಣಿ: ಹ.ಅಬೂ ಸಈದ್ ಖುದ್ರೀ ಅವರಿಗೆ ಪರಲೋಕದ ಚಿಂತೆ ಎಷ್ಟಿತ್ತೆಂದು ಈ ಹದೀಸ್ನಿಂದ ತಿಳಿದು ಬರುತ್ತದೆ. ಅವರಿಗೆ ಪ್ರವಾದಿ(ಸ) ಹೀಗೆಂದರು- ಆ ದಿನದ ಸಂಕಷ್ಟವು ಅಪರಾಧಿಗಳಿಗೂ ಬಂಡುಕೋರರಿಗೂ ಇರುವುದು. ಅವರಿಗೆ ಆ ದಿನವು ಒಂದು ಸಾವಿರ ವರ್ಷದಷ್ಟು ದೀರ್ಘವಾಗಿ ತೋರುವುದು. ಸಂಕಷ್ಟದಲ್ಲಿ ಸಿಲುಕಿದ ವ್ಯಕ್ತಿಯ ದಿನವು ದೀರ್ಘವಾಗಿರುತ್ತದೆ. ಹೊತ್ತು ಹೋಗುವುದೇ ಇಲ್ಲ. ಆದರೆ ಸದಾಚಾರಿ ಮುಸ್ಲಿಮನಿಗೆ ಆ ದಿನವು ಹಗುರವಾಗಿರುವುದು, ಸುಖದಾಯಕವಾಗಿರುವುದು. ಆ ದಿನದ ಸುಖ ಸಂತೋಷಗಳಿಗಾಗಿಯೇ ಅವರು ಈ ಲೋಕದ ಎಲ್ಲ ಸಂಕಷ್ಟಗಳನ್ನು ಸಹಿಸಿದ್ದರಲ್ಲವೆ!
ಅನಸ್(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ಲೋಕದಲ್ಲಿ ನರಕಕ್ಕೆ ಅರ್ಹನಾದ ಅತ್ಯಂತ ಸಂಪನ್ನ ವ್ಯಕ್ತಿಯೊಬ್ಬನನ್ನು ತಂದು ನರಕಕ್ಕೆ ಹಾಕಲಾಗುವುದು. ಆ ಬೆಂಕಿಯು ತನ್ನ ಪ್ರಭಾವವನ್ನು ಅವನ ಮೇಲೆ ಬೀರಿದಾಗ ಅವನೊಂದಿಗೆ ಕೇಳಲಾಗುವುದು- ಓ ಮಾನವಾ! ನೀನೆಂದಾದರೂ ಸುಖ ಸಂತೋಷವನ್ನು ಕಂಡಿರುವೆಯಾ? ನಿನಗೆಂದಾದರೂ ಸಿರಿವಂತಿಕೆಯ ದಿನಗಳು ಬಂದಿವೆಯೇ? ಅವನು ಹೇಳುವನು- ನನ್ನ ಪ್ರಭೂ! ಖಂಡಿತ ಕಂಡಿಲ್ಲ.
ಅನಂತರ ಅತ್ಯಂತ ದಾರಿದ್ರ್ಯದಲ್ಲಿ ಜೀವಿಸುತ್ತಿದ್ದ ಸ್ವರ್ಗಕ್ಕೆ ಅರ್ಹನಾದ ವ್ಯಕ್ತಿಯನ್ನು ತಂದು ಸ್ವರ್ಗದಲ್ಲಿರಿಸಲಾಗುವುದು. ಅವನು ಸ್ವರ್ಗದ ಸುಖಭೋಗಗಳನ್ನು ಚೆನ್ನಾಗಿ ಅನುಭವಿಸಿದಾಗ ಅವನೊಂದಿಗೆ ಕೇಳಲಾಗುವುದು- ಓ ಮಾನವಾ! ಲೋಕದಲ್ಲಿ ನೀನೆಂದಾದರೂ ಬಡತನವನ್ನು ಅನುಭವಿಸಿದ್ದುಂಟೆ? ನಿನಗೆಂದಾದರೂ ಸಂಕಷ್ಟದ ದಿನಗಳು ಬಂದಿವೆಯೆ? ಅವನು ಹೇಳುವನು- ಪ್ರಭೂ, ನಾನೆಂದೂ ಬಡತನ-ದಾರಿದ್ರ್ಯಕ್ಕೆ ಸಿಲುಕಲಿಲ್ಲ. ನನಗೆಂದೂ ಸಂಕಷ್ಟದ ದಿನಗಳು ಬಂದಿರಲಿಲ್ಲ. [ಮುಸ್ಲಿಮ್]
IslamKannada News Portal
