Home / ಪ್ರವಾದಿ ವಚನಗಳು / ಸಂಕಲ್ಪಶುದ್ಧಿ

ಸಂಕಲ್ಪಶುದ್ಧಿ

ಹ. ಉಮರ್ ಬಿನ್ ಖತ್ತಾಬ್(ರ) ಹೇಳುತ್ತಾರೆ-

ಪ್ರವಾದಿ(ಸ) ಹೇಳಿದರು: ಕರ್ಮಗಳು ಸಂಕಲ್ಪವನ್ನು ಅವಲಂಬಿಸಿವೆ. ಮಾನವನಿಗೆ ಅವನು ಸಂಕಲ್ಪ ಮಾಡಿದುದು ಮಾತ್ರ ಸಿಗುವುದು. ಯಾರು ಅಲ್ಲಾಹ್ ಮತ್ತು ರಸೂಲರಿಗಾಗಿ ಹಿಜ್ರತ್ ಮಾಡಿದನೋ ಅವನ ಹಿಜ್ರತ್ ನೈಜ ಹಿಜ್ರತ್ ಆಗಿರುವುದು. ಯಾರು ಲೌಕಿಕ ಸಂಪತ್ತು ಗಳಿಸಲಿಕ್ಕಾಗಿ ಅಥವಾ ಯಾವುದೇ ಸ್ತ್ರೀಯೊಂದಿಗೆ ವಿವಾಹ ಮಾಡಲಿಕ್ಕಾಗಿ ಹಿಜ್ರತ್ ಮಾಡಿದನೋ ಅವನ ಹಿಜ್ರತ್ ಲೌಕಿಕ ಸಂಪತ್ತು ಅಥವಾ ಸ್ತ್ರೀಗಾಗಿರುವುದು.

ಟಿಪ್ಪಣಿ: ಇದು ಸಂಸ್ಕರಣೆಯ ಬಾಬ್ತು ಇರುವ ಅತ್ಯಂತ ಮಹತ್ವದ ಹದೀಸ್ ಆಗಿದೆ. ಪ್ರವಾದಿವರ್ಯರ(ಸ) ಮಾತಿನ ಇಂಗಿತವೇನೆಂದರೆ ಸತ್ಕರ್ಮಗಳಿಗೆ ಪುಣ್ಯ ಸಿಗಬೇಕಾದರೆ ಅದಕ್ಕೆ ಸಂಕಲ್ಪಶುದ್ಧಿ ಅನಿವಾರ್ಯ. ಸಂಕಲ್ಪ ಸರಿಯಾಗಿದ್ದರೆ ಪುಣ್ಯ ಸಿಗುವುದು, ಅನ್ಯಥಾ ಸಿಗಲಾರದು. ಯಾವ ಕರ್ಮವೇ ಆಗಲಿ ಅದು ಎಷ್ಟೇ ಉತ್ತಮವಾಗಿದ್ದರೂ ಅದರ ಪ್ರೇರಕ ಶಕ್ತಿ ಅಲ್ಲಾಹನ ಸಂಪ್ರೀತಿಯ ಹೊರತು ಬೇರೇನಾದರೂ ಆದರೆ ಪರಲೋಕದ ಮಾರುಕಟ್ಟೆಯಲ್ಲಿ ಅದಕ್ಕೆ ಬೆಲೆಯೇ ಇರಲಾರದು. ಅಲ್ಲಿ ಅದು ಖೋಟಾ ನಾಣ್ಯವೆಂದು ಪರಿಗಣಿಸಲ್ಪಡುವುದು. ಈ ವಾಸ್ತವಿಕತೆಯನ್ನು ಪ್ರವಾದಿವರ್ಯರು(ಸ) ಹಿಜ್ರತ್‍ನ(ವಲಸೆ) ಉದಾಹರಣೆ ಕೊಟ್ಟು ಸ್ಪಷ್ಟಪಡಿಸಿದ್ದಾರೆ. ಹಿಜ್ರತ್ ಎಂಬುದು ಮಹಾ ಪುಣ್ಯಕಾರ್ಯವಾಗಿದೆ. ಆದರೆ ಅದರ ಪ್ರೇರಕ ಶಕ್ತಿ ಸರಿಯಾಗಿಲ್ಲದಿದ್ದರೆ, ಅಲ್ಲಾಹನ ಸಂಪ್ರೀತಿಯ ಹೊರತಾದ ಬೇರೆ ಯಾವುದೇ ಉದ್ದೇಶವಿದ್ದರೆ, ಆತನು ಪರಲೋಕದಲ್ಲಿ ಅದರ ಪುಣ್ಯದಿಂದ ವಂಚಿತನಾಗುವನು. ಮಾತ್ರವಲ್ಲ ಅವನ ವಿರುದ್ಧ ಮೋಸ, ವಂಚನೆಯ ಮೊಕದ್ದಮೆ ಹೂಡಿದರೂ ಅಚ್ಚರಿಯಿಲ್ಲ.

ಪ್ರವಾದಿ(ಸ) ಹೀಗೆ ಹೇಳಿರುವುದಾಗಿ ಅಬೂಹುರೈರಾ(ರ) ಹೇಳುತ್ತಾರೆ: ನಿರ್ಣಾಯಕ ದಿನದಂದು ಪ್ರಪ್ರಥಮವಾಗಿ ಜಿಹಾದ್‍ನಲ್ಲಿ ತನ್ನ ಪ್ರಾಣವನ್ನು ಅರ್ಪಿಸಿದ ಒಬ್ಬ ವ್ಯಕ್ತಿಯ ವಿರುದ್ಧ ತೀರ್ಪು ನೀಡಲಾಗುವುದು. ಅವನನ್ನು ನ್ಯಾಯಾಲಯದಲ್ಲಿ ಹಾಜರುಗೊಳಿಸಲಾಗುವುದು. ಅನಂತರ ಅಲ್ಲಾಹನು ಅವನಿಗೆ ತನ್ನ ಕೊಡುಗೆಗಳನ್ನು ನೆನಪಿಸಿಕೊಡುವನು. ಅವನು ಅದನ್ನೆಲ್ಲ ಒಪ್ಪಿಕೊಳ್ಳುವನು. ಆಗ ಅಲ್ಲಾಹನು ಅವನೊಂದಿಗೆ ಕೇಳುವನು- ನೀನು ನನ್ನ ಅನುಗ್ರಹಗಳನ್ನು ಪಡೆದು ಏನು ಮಾಡಿದೆ? ಅವನು ಹೇಳುವನು- ನಾನು ನಿನ್ನ ಸಂಪ್ರೀತಿಗಾಗಿ ನಿನ್ನ ಧರ್ಮದ ವೈರಿಗಳೊಂದಿಗೆ ಹೋರಾಡಿ ಕಟ್ಟಕಡೆಗೆ ಪ್ರಾಣಾರ್ಪಣೆಯನ್ನೇ ಮಾಡಿದೆ. ಆಗ ಅಲ್ಲಾಹನು ಹೇಳುವನು- ನೀನು ಸುಳ್ಳು ಹೇಳುತ್ತಿರುವೆ. ಜನರು ನಿನ್ನನ್ನು ಪರಾಕ್ರಮಿಯೆಂದು ಕರೆಯಲಿಕ್ಕಾಗಿ ನೀನು ಯುದ್ಧಮಾಡಿದೆ. ಆದುದರಿಂದ ನಿನಗೆ ನಿನ್ನ ಪ್ರತಿಫಲ ಭೂಲೋಕದಲ್ಲೇ ಸಿಕ್ಕಿತು. ಅನಂತರ ಇವನನ್ನು ಮೂತಿ ಹಿಡಿದೆಳೆದು ನರಕಕ್ಕೆ ಹಾಕಿರಿ ಎಂದು ಆಜ್ಞಾಪಿಸಲಾಗುವುದು. ಹಾಗೆಯೇ ಅವನನ್ನು ನರಕಕ್ಕೆ ಹಾಕಲಾಗುವುದು.

ತರುವಾಯ ಇನ್ನೊಬ್ಬ ವ್ಯಕ್ತಿಯನ್ನು ಅಲ್ಲಾಹನ ನ್ಯಾಯಾಲಯದ ಮುಂದೆ ತರಲಾಗುವುದು. ಅವನೊಬ್ಬ ಕುರ್‍ಆನಿನ ವಿದ್ವಾಂಸನಾಗಿರುವನು. ಅವನಿಗೂ ಅಲ್ಲಾಹನು ತನ್ನ ಕೊಡುಗೆಗಳನ್ನು ನೆನಪಿಸುವನು. ಅವನು ಅವುಗಳನ್ನು ಒಪ್ಪಿಕೊಳ್ಳುವನು. ಆಗ ಅಲ್ಲಾಹನು ಅವನೊಂದಿಗೆ ಕೇಳುವನು, ಈ ಅನುಗ್ರಹಗಳನ್ನು ಪಡೆದು ನೀನೇನು ಮಾಡಿದೆ? ಅವನು ಹೇಳುವನು- ದೇವಾ! ನಾನು ನಿನಗಾಗಿ ನಿನ್ನ ಧರ್ಮವನ್ನು ಕಲಿತೆ, ಪವಿತ್ರ ಕುರ್‍ಆನನ್ನು ಆಳವಾಗಿ ಅಭ್ಯಸಿಸಿದೆ ಮತ್ತು ಇತರರಿಗೆ ಅದನ್ನು ಕಲಿಸಿದೆ. ಆಗ ಅಲ್ಲಾಹನು ಹೇಳುವನು- ನೀನು ಸುಳ್ಳು ಹೇಳುತ್ತಿರುವೆ. ನೀನು ಧರ್ಮವನ್ನು ಕಲಿತದ್ದು, ಕಲಿಸಿದ್ದು ಮತ್ತು ಪವಿತ್ರ ಕುರ್‍ಆನನ್ನು ಅಭ್ಯಸಿಸಿದ್ದು ಜನರು ನಿನ್ನನ್ನು ವಿದ್ವಾಂಸನೆಂದೂ ವ್ಯಾಖ್ಯಾನಕಾರನೆಂದೂ ಹೇಳಬೇಕೆಂಬ ಉದ್ದೇಶದಿಂದಾಗಿತ್ತು. ನಿನ್ನ ಉದ್ದೇಶಿತ ಪ್ರತಿಫಲ ನಿನಗೆ ಭೂಲೋಕದಲ್ಲೇ ಸಿಕ್ಕಿತು. ಅನಂತರ, ಇವನನ್ನು ಮುಖ ಹಿಡಿದೆಳೆದು ನರಕಕ್ಕೆ ಹಾಕಿರಿ ಎಂದು ಆಜ್ಞಾಪಿಸಲಾಗುವುದು. ಹಾಗೆಯೇ ಅವನನ್ನು ಎಳೆದುಕೊಂಡು ನರಕಕ್ಕೆ ಹಾಕಲಾಗುವುದು.

ಇನ್ನು ಮೂರನೆಯದಾಗಿ, ಅಲ್ಲಾಹನು ಭೂಲೋಕದಲ್ಲಿ ಅಪಾರ ಸಿರಿಸಂಪತ್ತನ್ನು ನೀಡಿದ ವ್ಯಕ್ತಿಯನ್ನು ಹಾಜರು ಪಡಿಸಲಾಗುವುದು. ಅವನಿಗೂ ಅವನಿಗೆ ನೀಡಲಾದ ಅನುಗ್ರಹ ಗಳನ್ನು ನೆನಪಿಸಲಾಗುವುದು. ಅವನು ಅವುಗಳನ್ನು ಒಪ್ಪಿಕೊಳ್ಳುವನು. ಅನಂತರ ಅವನೊಂದಿಗೆ, ನೀನೇನು ಮಾಡಿ ಬಂದಿರುವೆ? ಎಂದು ಕೇಳಲಾಗುವುದು. ಅವನು ಹೇಳುವನು- ಯಾವ ವಿಷಯಗಳಲ್ಲಿ ನೀನು ಖರ್ಚು ಮಾಡಬೇಕೆಂದು ವಿಧಿಸಿದ್ದೆಯೋ ಅವುಗಳಲ್ಲಿ ನಿನ್ನ ಸಂಪ್ರೀತಿಗಾಗಿ ನಾನು ಖರ್ಚುಮಾಡಿದೆ. ಆಗ ಅಲ್ಲಾಹನು, ಅದನ್ನು ಅಲ್ಲಗಳೆಯುವನು ಮತ್ತು ‘ಜನರು ನಿನ್ನನ್ನು ಕೊಡುಗೈ ದಾನಿ ಎನ್ನಬೇಕೆಂಬ ಉದ್ದೇಶದಿಂದ ನೀನು ಖರ್ಚುಮಾಡಿದೆ. ನಿನ್ನ ಉದ್ದೇಶದ ಪ್ರತಿಫಲ ನಿನಗೆ ಸಿಕ್ಕಿದೆ’ ಎನ್ನುವನು. ತರುವಾಯ ಅಲ್ಲಾಹನ ಆಜ್ಞೆಯ ಮೇರೆಗೆ ಅವನನ್ನೂ ಮುಖ ಹಿಡಿದೆಳೆದು ನರಕಕ್ಕೆ ಹಾಕಲಾಗುವುದು.

ಟಿಪ್ಪಣಿ: ಈ ಹದೀಸ್ ಹಿಂದಿನ ಹದೀಸ್‍ನ ವಿವರಣೆಯಾಗಿದೆ. ಹಿಜ್ರತ್, ಜಿಹಾದ್, ಧಾರ್ಮಿಕ ವಿದ್ಯೆ ಕಲಿಯುವುದು ಮತ್ತು ಕಲಿಸುವುದು, ದೇವಮಾರ್ಗದಲ್ಲಿ ವೆಚ್ಚಮಾಡುವುದು ಇತ್ಯಾದಿಗಳು ಉನ್ನತ ಮಟ್ಟದ ಪುಣ್ಯ ಕಾರ್ಯಗಳಾಗಿವೆ. ಆದರೆ ಉದ್ದೇಶ ಶುದ್ದಿ ಇಲ್ಲದಿದ್ದರೆ ಪರಲೋಕದಲ್ಲಿ ಪುಣ್ಯ ನಿಷ್ಫಲವಾಗುವುದು. ಮಾತ್ರವಲ್ಲ, ಅವುಗಳಿಂದಾಗಿಯೇ ನರಕದ ಬೆಂಕಿಯಲ್ಲಿ ಉರಿಯಬೇಕಾದೀತು.

ಅಬೂ ಉಮಾಮಾ(ರ)ರಿಂದ ವರದಿ: ಒಬ್ಬ ವ್ಯಕ್ತಿ ಪ್ರವಾದಿವರ್ಯರ(ಸ) ಬಳಿಗೆ ಬಂದು ಈ ರೀತಿ ಕೇಳಿದನು- ಒಬ್ಬನಿಗೆ ಪರಲೋಕದಲ್ಲಿ ಪುಣ್ಯ ದೊರಕಿಸಿಕೊಳ್ಳಲಿಕ್ಕಾಗಿ ಮತ್ತು ಈ ಲೋಕದಲ್ಲಿ ಹೆಸರು ಗಳಿಸಲಿಕ್ಕಾಗಿ ಜಿಹಾದ್ ಮಾಡಿದರೆ ಪುಣ್ಯ ಸಿಗುವುದೇ? ಪ್ರವಾದಿ(ಸ) ಹೇಳಿದರು- ಅವನಿಗೆ ಪರಲೋಕದಲ್ಲಿ ಏನೂ ದೊರೆಯಲಾರದು. ಅವನು ತನ್ನ ಪ್ರಶ್ನೆಯನ್ನು ಮೂರು ಬಾರಿ ಪುನರಾವರ್ತಿಸಿದನು. ಪ್ರವಾದಿ(ಸ) ಪ್ರತಿಯೊಂದು ಬಾರಿಯೂ ಅಂತಹ ವ್ಯಕ್ತಿಗೆ ಪರಲೋಕದಲ್ಲಿ ಯಾವುದೇ ಪುಣ್ಯ ಸಿಗಲಾರದು ಎಂದುತ್ತರಿಸಿದರು. ಕಟ್ಟಕಡೆಗೆ ಪ್ರವಾದಿವರ್ಯರು(ಸ) ‘ಅಲ್ಲಾಹನು ಕೇವಲ ತನಗಾಗಿ ಮಾಡಿದ ಕರ್ಮವನ್ನಷ್ಟೆ ಸ್ವೀಕರಿಸುತ್ತಾನೆ ಮತ್ತು ಅವನ ಸಂಪ್ರೀತಿಯೇ ಅವನ ಕರ್ಮದ ಪ್ರೇರಣೆಯಾಗಿರಬೇಕು’ ಎಂದರು. [ಅಬೂ ದಾವೂದ್, ನಸಾಈ]

ಅನಸ್ ಬಿನ್ ಮಾಲಿಕ್(ರ) ವರದಿ ಮಾಡುತ್ತಾರೆ- ತಬೂಕ್ ಯುದ್ಧ ಮುಗಿದ ನಂತರ ನಾವು ಪ್ರವಾದಿ(ಸ) ಅವರೊಂದಿಗೆ ಮರಳಿದೆವು. (ಪ್ರಯಾಣದ ಮಧ್ಯೆ) ಪ್ರವಾದಿ(ಸ) ಹೀಗೆಂದರು- ನಮ್ಮ ಪೈಕಿ ಕೆಲವರು ಮದೀನಾದಲ್ಲಿ ಉಳಿದಿದ್ದಾರೆ. ಆದರೆ ವಾಸ್ತವದಲ್ಲಿ ಅವರು ಈ ಪ್ರಯಾಣದಲ್ಲಿ ನಮ್ಮೊಂದಿಗಿದ್ದಾರೆ. ನಾವು ಸಾಗುವ ಎಲ್ಲ ಬೆಟ್ಟ ಕಣಿವೆಗಳಲ್ಲೂ ಅವರು ನಮ್ಮೊಂದಿಗಿದ್ದಾರೆ. ಸೂಕ್ತ ಕಾರಣಗಳಿಂದಲೇ ಅವರು ತಡೆಹಿಡಿಯಲ್ಪಟ್ಟಿರುವರು. [ಬುಖಾರಿ] ಟಿಪ್ಪಣಿ: ಯಾರಾದರೂ ಒಂದು ಪುಣ್ಯ ಕಾರ್ಯವನ್ನು ಮಾಡಬೇಕೆಂದು ಬಯಸಿದ್ದು ಯಾವುದೇ ಕಾರಣದಿಂದ ಅದನ್ನು ಮಾಡಲಾಗದಿದ್ದರೆ, ಆ ವ್ಯಕ್ತಿ ಪರಲೋಕದಲ್ಲಿ ಅಲ್ಲಾಹನ ಬಳಿ ತನ್ನ ಕರ್ಮದ ಪುಣ್ಯದಿಂದ ವಂಚಿತನಾಗಲಾರನು ಎಂದು ಈ ಹದೀಸ್‍ನಿಂದ ತಿಳಿದುಬರುತ್ತದೆ.

ಅಬೂದ್ದರ್ದಾ(ರ) ಅವರು ಪ್ರವಾದಿ(ಸ) ಅವರಿಂದ ಈ ರೀತಿ ಉಲ್ಲೇಖಿಸುತ್ತಾರೆ-
ಪ್ರವಾದಿ(ಸ) ಹೇಳಿದರು- ಒಬ್ಬನು ತಾನು ತಹಜ್ಜುದ್ ನಮಾಝ್‍ಗಾಗಿ ಏಳುವೆನು ಎಂಬ ಸಂಕಲ್ಪದೊಂದಿಗೆ ಮಲಗಿದ್ದು, ಅವನಿಗೆ ಗಾಢನಿದ್ರೆ ಬಂದು ಅವನು ಮುಂಜಾನೆಯಾದ ಬಳಿಕವೇ ಎಚ್ಚರಗೊಂಡಿದ್ದರೆ ಅಂತಹ ವ್ಯಕ್ತಿಯ ಕರ್ಮಪತ್ರದಲ್ಲಿ ಆ ರಾತ್ರಿಯ ತಹಜ್ಜುದ್ ನಮಾಝ್ ದಾಖಲಿಸಲ್ಪಡುವುದು ಮತ್ತು ಈ ನಿದ್ರೆಯು ಅವನಿಗೆ ಅವನ ಪ್ರಭುವಿನ ವತಿಯಿಂದ ಉಡುಗೊರೆಯಾಗಿ ಲಭಿಸಿತು. [ನಸಾಈ, ಇಬ್ನುಮಾಜಃ]

ಇಬ್ನು ಮಸ್‍ವೂದ್‍ರಿಂದ(ರ) ವರದಿ: ಪ್ರವಾದಿ(ಸ) ಹೇಳಿದರು- ಒಬ್ಬನು ಜನರ ಮುಂದೆ ಸರಿಯಾಗಿ ನಮಾಝ್ ಮಾಡುತ್ತಾನೆ (ಅರ್ಥಾತ್ ಭಯಭಕ್ತಿಯಿಂದ ರುಕೂಅ, ಸುಜೂದ್‍ಗಳನ್ನು ಸರಿಯಾಗಿ ಮಾಡುತ್ತಾನೆ) ಮತ್ತು ಏಕಾಂತದಲ್ಲಿ ನಮಾಝ್ ಮಾಡುವಾಗ ಸರಿಯಾಗಿ ಮಾಡುವುದಿಲ್ಲ. ಅಂತಹ ವ್ಯಕ್ತಿ ತನ್ನ ಪ್ರಭುವನ್ನು ಅಪಮಾನಿಸುತ್ತಾನೆ.
[ಅಲ್‍ಮುಂದಿರೀ]

ಮುಆದ್ ಬಿನ್ ಜಬಲ್‍ರಿಂದ(ರ) ವರದಿ: ಪ್ರವಾದಿ(ಸ) ನನ್ನನ್ನು ಯಮನ್‍ನ ರಾಜ್ಯಪಾಲನಾಗಿ ನೇಮಿಸಿ ಕಳಿಸುವಾಗ, ‘ನನಗೇನಾದರೂ ಉಪದೇಶಿಸಿರಿ’ ಎಂದು ನಾನು ಬಿನ್ನವಿಸಿದೆ. ಆಗ ಪ್ರವಾದಿ(ಸ) ಹೇಳಿದರು- ನಿಮ್ಮ ಉದ್ದೇಶವನ್ನು ಎಲ್ಲ ರೀತಿಯ ಕಲ್ಮಶದಿಂದ ನಿರ್ಮಲಗೊಳಿಸಿರಿ. ಯಾವುದೇ ಕರ್ಮವನ್ನು ಕೇವಲ ದೇವನ ಸಂಪ್ರೀತಿಗಾಗಿ ಮಾಡಿರಿ. ಅದು ಸ್ವಲ್ಪವಾದರೂ ಸರಿ, ಮೋಕ್ಷಕ್ಕೆ ಸಾಕಾಗುವುದು. [ಮುಸ್ತದ್ರಿಕ್ ತರ್ಗೀಬ್ ವ ತರ್ಹೀಬ್]

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …