‘ಈಮಾನ್ ಬಿಲ್ಲಾಹ್’ ಅರ್ಥಾತ್ ಅಲ್ಲಾಹನ ಮೇಲೆ ವಿಶ್ವಾಸವಿರಿಸುವುದೆಂದರೆ, ಅಲ್ಲಾಹನನ್ನು ಸದಾ ಇರುವವನೆಂದು ನಂಬುವುದು. ಅವನೇ ಈ ಪ್ರಪಂಚದ ಸೃಷ್ಟಿಕರ್ತನೆಂದೂ ಅದರ ವ್ಯವಸ್ಥೆಯನ್ನು ನೋಡಿಕೊಳ್ಳುವವನೆಂದೂ ಒಪ್ಪಿಕೊಳ್ಳುವುದು. ಅವನು ಎಲ್ಲ ರೀತಿಯ ನ್ಯೂನತೆ ಹಾಗೂ ದೌರ್ಬಲ್ಯಗಳಿಂದ ಮುಕ್ತನೆಂದೂ ಎಲ್ಲ ಒಳ್ಳೆಯ ಗುಣಗಳನ್ನು ಹೊಂದಿದವನೂ ಎಲ್ಲ ಒಳಿತುಗಳ ಮೂಲವೆಂದೂ ನಂಬುವುದು. ಅವನೇ ನೈಜ ಆರಾಧ್ಯ, ಜೀವನದ ನಿಯಮಗಳನ್ನು ನೀಡುವ ಆಜ್ಞಾಧಿಕಾರಿ ಮತ್ತು ಒಡೆಯನೆಂದು ಅಂಗೀಕರಿಸುವುದು.
ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಹದೀಸ್ಗಳನ್ನು ನೀಡಲಾಗುತ್ತದೆ. ಅದರಿಂದ ಅಲ್ಲಾಹನ ಮೇಲೆ ವಿಶ್ವಾಸವಿರಿಸುವುದರ ತಾತ್ಪರ್ಯ ಮನವರಿಕೆಯಾಗುತ್ತದೆ.
ಪ್ರವಾದಿ(ಸ) ಅವರು (ಅಬುಲ್ಕೈಸ್ ಗೋತ್ರದ ನಿಯೋಗದೊಂದಿಗೆ) ಹೇಳಿದರು- ಏಕ ಅಲ್ಲಾಹನ ಮೇಲೆ ವಿಶ್ವಾಸವಿರಿಸುವುದೆಂದರೆ ಏನೆಂದು ನಿಮಗೆ ತಿಳಿದಿದೆಯೆ? ಅವರು ಹೇಳಿದರು- ಅದನ್ನು ಅಲ್ಲಾಹ್ ಮತ್ತು ಅವನ ಸಂದೇಶವಾಹಕರೇ ಚೆನ್ನಾಗಿ ಬಲ್ಲರು. ಪ್ರವಾದಿ(ಸ) ಹೇಳಿದರು- ಈಮಾನ್(ವಿಶ್ವಾಸ) ಎಂದರೆ ಅಲ್ಲಾಹನ ಹೊರತು ಯಾವ ಆರಾಧ್ಯರೂ ಇಲ್ಲವೆಂದೂ ಮುಹಮ್ಮದ್(ಸ) ಆತನ ಸಂದೇಶವಾಹಕರೆಂದೂ ಸಾಕ್ಷ್ಯ ನುಡಿಯುವುದು (ಮತ್ತು ಘೋಷಿಸುವುದು), ನಮಾಝ್ ಸಂಸ್ಥಾಪಿಸುವುದು, ಝಕಾತ್ ಕೊಡುವುದು ಮತ್ತು ರಮಝಾನ್ ತಿಂಗಳಲ್ಲಿ ಉಪವಾಸ ವ್ರತ ಆಚರಿಸುವುದು. [ಬುಖಾರಿ, ಮುಸ್ಲಿಮ್- ವರದಿ: ಇಬ್ನು ಅಬ್ಬಾಸ್(ರ)]
ಅನಸ್(ರ) ಹೇಳುತ್ತಾರೆ- ಪ್ರವಾದಿಯವರು(ಸ) ಉಪನ್ಯಾಸ ನೀಡುತ್ತಿದ್ದಾಗಲೆಲ್ಲ ‘ಯಾರಲ್ಲಿ ಅಮಾನತ್ ಇಲ್ಲವೋ ಆತನಲ್ಲಿ ಈಮಾನ್ ಇಲ್ಲ, ಯಾರು ವಚನ ಪಾಲನೆ ಮಾಡುವುದಿಲ್ಲವೋ ಅವನ ಬಳಿ ಧರ್ಮವಿಲ್ಲ’ ಎಂಬ ಮಾತನ್ನು ಹೇಳದೆ ಇರುತ್ತಿರಲಿಲ್ಲ. [ಮಿಶ್ಕಾತ್- ಬೈಹಕಿಯಿಂದ] ಟಿಪ್ಪಣಿ: ಅಲ್ಲಾಹನ ಮತ್ತು ಜನರ ಹಕ್ಕುಗಳನ್ನು ಪೂರೈಸದವನ ವಿಶ್ವಾಸ ದೃಢವಾಗಿರುವುದಿಲ್ಲ ಪ್ರವಾದಿಯವರ(ಸ) ಈ ಮಾತಿನ ಇಂಗಿತವೆಂಬುದು ಅದೇ ರೀತಿ ಒಬ್ಬನು ಯಾವುದಾದರೂ ಹೊಣೆ ವಹಿಸುವ ವಾಗ್ದಾನ ಮಾಡಿದ್ದು ಅದನ್ನು ಪೂರೈಸದಿದ್ದರೆ ಅವನಲ್ಲಿ ಧರ್ಮನಿಷ್ಠೆಯಿಲ್ಲವೆಂದರ್ಥ. ಒಬ್ಬನ ಮನಸ್ಸಿನಲ್ಲಿ ವಿಶ್ವಾಸವು ದೃಢವಾಗಿ ಬೇರೂರಿದರೆ ಅವನು ಎಲ್ಲರ ಹಕ್ಕುಗಳನ್ನು ಪೂರೈಸುವಲ್ಲಿ ಪ್ರಾಮಾಣಿಕನಾಗಿರುತ್ತಾನೆ. ಯಾರ ಹಕ್ಕನ್ನೂ ವಂಚಿಸುವುದಿಲ್ಲ. ಅದೇ ರೀತಿ ಒಬ್ಬನಲ್ಲಿ ಧರ್ಮನಿಷ್ಠೆಯಿದ್ದರೆ ಅವನು ಮಾಡಿದ ವಾಗ್ದಾನಗಳನ್ನು ಜೀವನದಾದ್ಯಂತ ಪಾಲಿಸುವನು. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಅತಿ ದೊಡ್ಡ ಹಕ್ಕು ಇರುವುದು ಅಲ್ಲಾಹನದ್ದು, ಆತನ ಪ್ರವಾದಿಯದ್ದು(ಸ) ಹಾಗೂ ಅವನ ಗ್ರಂಥ (ಕುರ್ಆನ್)ದ್ದಾಗಿದೆ. ಅನಂತರ ಜನರ ಹಕ್ಕುಗಳಾಗಿವೆ. ಅತಿದೊಡ್ಡ ವಾಗ್ದಾನ ಮನುಷ್ಯನು ಅಲ್ಲಾಹನೊಂದಿಗೆ, ಆತನು ಕಳಿಸಿದ ಪ್ರವಾದಿಯೊಂದಿಗೆ ಹಾಗೂ ಅವರು ತಂದ ಧರ್ಮದೊಂದಿಗೆ ಮಾಡುವ ವಾಗ್ದಾನವಾಗಿದೆ. ಪವಿತ್ರ ಕುರ್ಆನ್ ಮತ್ತು ಹದೀಸ್ಗಳಲ್ಲಿ ‘ಅಮಾನತ್’ ಮತ್ತು ‘ಅಹ್ದ್’ (ವಚನ) ಎಂಬ ಪದಗಳು ವಿಶಾಲಾರ್ಥಗಳಲ್ಲಿ ಪ್ರಯೋಗವಾಗಿವೆ.
ಅಮ್ರ್ ಬಿನ್ ಅಬಸ(ರ) ಹೇಳುತ್ತಾರೆ- ನಾನು ಪ್ರವಾದಿಯವರೊಂದಿಗೆ(ಸ) ‘ಈಮಾನ್’ ಎಂದರೇನೆಂದು ಕೇಳಿದೆ. ಪ್ರವಾದಿ(ಸ) ಹೇಳಿದರು- ‘ಸಬ್ರ್ ಮತ್ತು ಸಮಾಹತ್.’
[ಮುಸ್ಲಿಮ್]
ಟಿಪ್ಪಣಿ: ಈಮಾನ್ ಎಂದರೆ ಮನುಷ್ಯನು ಅಲ್ಲಾಹನ ಮಾರ್ಗವನ್ನು ಮೆಚ್ಚಿಕೊಂಡು ಈ ಮಾರ್ಗದಲ್ಲಿ ಬರುವ ಸಕಲ ಸಂಕಷ್ಟಗಳನ್ನು ಸಂತೋಷದಿಂದ ಸಹಿಸುವುದು ಮತ್ತು ಅಲ್ಲಾಹನ ಆಶ್ರಯ ಹಿಡಿದು ಮುಂದೆ ಸಾಗುವುದಾಗಿದೆ (ಇದುವೇ ಸಬ್ರ್). ‘ಸಮಾಹತ್’ ಎಂದರೆ ಮನುಷ್ಯನು ತಾನು ಸಂಪಾದಿಸಿದುದನ್ನು ಅಲ್ಲಾಹನ ಅಪೇಕ್ಷಿತ ದಾಸರ ಮೇಲೆ ಖರ್ಚು ಮಾಡಿ ಅದರಿಂದ ಸಂತೋಷಗೊಳ್ಳುವುದಾಗಿದೆ. ಈ ಪದಕ್ಕೆ ಮೃದುತ್ವ ಮತ್ತು ಹೃದಯ ವೈಶಾಲ್ಯ ಎಂಬ ಅರ್ಥಗಳೂ ಇವೆ.
ಅಬೂ ಉಮಾಮರಿಂದ(ರ) ವರದಿ: ಪ್ರವಾದಿ(ಸ) ಹೇಳಿದರು- ಯಾರು ಅಲ್ಲಾಹನಿಗಾಗಿ ಗೆಳೆತನ ಬೆಳೆಸಿದನೋ, ಅಲ್ಲಾಹನಿಗಾಗಿ ಹಗೆತನ ಕಟ್ಟಿದನೋ, ಅಲ್ಲಾಹನಿಗಾಗಿ ಕೊಟ್ಟನೋ ಹಾಗೂ ಅಲ್ಲಾಹನಿಗಾಗಿ ತಡೆಹಿಡಿದನೋ ಅವನು ತನ್ನ ವಿಶ್ವಾಸವನ್ನು ಪೂರ್ಣಗೊಳಿಸಿದನು.
[ಬುಖಾರಿ]
ಟಿಪ್ಪಣಿ: ಮನುಷ್ಯನು ತನ್ನನ್ನು ಸಂಸ್ಕರಿಸುತ್ತಾ ಎಲ್ಲಿಗೆ ತಲಪುತ್ತಾನೆಂದರೆ ಯಾರೊಂದಿಗಾದರೂ ಸ್ನೇಹ ಬೆಳೆಸುವುದಾದರೆ ಅಲ್ಲಾಹನಿಗಾಗಿ ಬೆಳೆಸುತ್ತಾನೆ ಮತ್ತು ಯಾರಿಂದಾದರೂ ಸ್ನೇಹ ಮುರಿಯುವುದಾದರೆ ಅಲ್ಲಾಹನಿಗಾಗಿ ಮುರಿಯುತ್ತಾನೆ. ಅದೇ ರೀತಿ ಯಾರಿಗಾದರೂ ನೀಡುವುದಿದ್ದರೂ ನೀಡದಿರುವುದಿದ್ದರೂ ಆಗಲೂ ಅದರಲ್ಲಿ ಅಲ್ಲಾಹನ ಸಂಪ್ರೀತಿಯಲ್ಲದೆ ಬೇರಾವ ಉದ್ದೇಶ ಅಥವಾ ಪ್ರೇರಣೆಯಿರುವುದಿಲ್ಲ. ಅವನ ಪ್ರೀತಿ ಮತ್ತು ದ್ವೇಷಕ್ಕೆ ಅಲ್ಲಾಹನ ಧರ್ಮವೇ ಮೂಲಾಧಾರವಾಗಿದ್ದು, ಅವನ ಮನಸ್ಸು ಲೌಕಿಕ ಹಿತಾಸಕ್ತಿಯಿಂದ ಸಂಪೂರ್ಣ ಮುಕ್ತವಾಗಿರುವುದು. ಒಬ್ಬ ಮನುಷ್ಯನು ಈ ಸ್ಥಿತಿಗೆ ತಲಪಿದನೆಂದರೆ ಅವನ ಈಮಾನ್ (ವಿಶ್ವಾಸ) ಪೂರ್ಣಗೊಂಡಿತೆಂದು ಭಾವಿಸಬೇಕು.
ಅಬ್ಬಾಸ್(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ಅಲ್ಲಾಹನನ್ನು ತನ್ನ ಪ್ರಭುವೆಂದೂ ಇಸ್ಲಾಮನ್ನು ತನ್ನ ಧರ್ಮವೆಂದೂ ಮುಹಮ್ಮದ್ರನ್ನು(ಸ) ತನ್ನ ಪ್ರವಾದಿಯೆಂದೂ ಒಪ್ಪಿ, ಅದರಲ್ಲಿ ಸಂತೃಪ್ತನಾದವನು ಈಮಾನಿನ (ಸತ್ಯವಿಶ್ವಾಸದ) ರುಚಿಯನ್ನು ಸವಿದನು.
[ಬುಖಾರಿ, ಮುಸ್ಲಿಮ್]
ಟಿಪ್ಪಣಿ: ಆತ ಅಲ್ಲಾಹನ ದಾಸ್ಯಕ್ಕೆ ತನ್ನನ್ನು ಸಮರ್ಪಿಸಿ, ಇಸ್ಲಾಮನ್ನು ತನ್ನ ಜೀವನ ಕ್ರಮವಾಗಿ ಅಂಗೀಕರಿಸಿ, ತನ್ನನ್ನು ಪ್ರವಾದಿ ಮುಹಮ್ಮದ್ರ(ಸ) ಮಾರ್ಗದರ್ಶನಕ್ಕೆ ಒಪ್ಪಿಸಿ ಸಂಪೂರ್ಣ ತೃಪ್ತನಾದನು. ತನಗೆ ಇನ್ನಾರ ದಾಸ್ಯವನ್ನೂ ಕೈಗೊಳ್ಳಲಿಕ್ಕಿಲ್ಲ, ಎಲ್ಲ ಸ್ಥಿತಿಯಲ್ಲೂ ಇಸ್ಲಾಮ್ ತೋರಿಸಿದ ಮಾರ್ಗದಲ್ಲಿ ನಡೆಯಬೇಕಾಗಿದೆ ಮತ್ತು ಪ್ರವಾದಿ ಮುಹಮ್ಮದ್ರ(ಸ) ಹೊರತು ಇನ್ನಾರ ಮಾರ್ಗದರ್ಶನ ದಂತೆಯೂ ತನಗೆ ಜೀವಿಸಬೇಕಾಗಿಲ್ಲ ಎಂಬ ಸ್ಥಿತಿಗೆ ಯಾರಾದರೂ ತಲಪಿದರೆ ಆ ಭಾಗ್ಯವಂತನು ಈಮಾನಿನ ರುಚಿಯನ್ನು ಪಡೆದನು ಎಂದು ಭಾವಿಸಬೇಕು.
ಝೈದ್ ಬಿನ್ ಅರ್ಕಮ್(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ಯಾರು ‘ಪ್ರಾಮಾಣಿಕ’ವಾಗಿ ‘ಲಾ ಇಲಾಹ ಇಲ್ಲಲ್ಲಾಹ್’ (ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ) ಎಂದು ಹೇಳುವನೋ ಅವನು ಸ್ವರ್ಗ ಪ್ರವೇಶಿಸುವನು. ‘ಪ್ರಾಮಾಣಿಕವಾಗಿ ಲಾ ಇಲಾಹ ಇಲ್ಲಲ್ಲಾಹ್ ಹೇಳುವುದೆಂದರೆ’ ಏನೆಂದು ಜನರು ಕೇಳಿದರು. ಪ್ರವಾದಿ(ಸ) ಹೇಳಿದರು- ಅರ್ಥಾತ್: ಹಾಗೆ ಹೇಳುವವನು ಅಲ್ಲಾಹನು ನಿಷೇಧಿಸಿದ ಎಲ್ಲ ವಿಷಯಗಳಿಂದ ದೂರವಿರುತ್ತಾನೆಂದಾಗಿದೆ.
ಮುಸ್ನದ್ ಅಹ್ಮದ್ನಲ್ಲಿ ರಿಪಾಅ ಜುಹ್ನೀ ಉಲ್ಲೇಖಿಸಿದ ಪದಗಳು ಹೀಗಿವೆ- ಅಲ್ಲಾಹನ ಹೊರತು ಆರಾಧ್ಯರಾರೂ ಇಲ್ಲವೆಂದೂ, ನಾನು [ಮುಹಮ್ಮದ್(ಸ)] ಅಲ್ಲಾಹನ ಸಂದೇಶವಾಹಕನೆಂದೂ ಪ್ರಾಮಾಣಿಕವಾಗಿ ಹೇಳಿ ಸನ್ಮಾರ್ಗದಲ್ಲಿ ನಡೆಯುವ (ಅಂದರೆ ಈಮಾನಿನ ಬೇಡಿಕೆಗಳನ್ನು ಪೂರೈಸಿದರೆ, ಸತ್ಕರ್ಮಗಳನ್ನು ಮಾಡಿದರೆ ಮತ್ತು ಕೆಟ್ಟ ಕಾರ್ಯಗಳಿಂದ ದೂರವಿದ್ದರೆ) ಅಲ್ಲಾಹನ ದಾಸನು ಸ್ವರ್ಗ ಪ್ರವೇಶ ಮಾಡುವನು.
ತಿರ್ಮಿದಿಯ ವರದಿಯಲ್ಲಿ ಹೀಗಿದೆ- ತೌಹೀದ್ನ (ಏಕದೇವತ್ವ) ವಚನ ಉಚ್ಚರಿಸಿ ಮಹಾ ಪಾಪಗಳಿಂದ ದೂರವಿರುವ ಅಲ್ಲಾಹನ ದಾಸನು ಸ್ವರ್ಗಕ್ಕೆ ಹೋಗುವನು. [ಮುಸ್ನದ್ ಅಹ್ಮದ್]
ಟಿಪ್ಪಣಿ: ಪ್ರಸ್ತುತ ಮೂರೂ ಹದೀಸ್ಗಳನ್ನು ಗಮನಿಸಿದರೆ, ಕೇವಲ ಈಮಾನಿನ ಕಲಿಮ (ವಿಶ್ವಾಸದ ವಚನ) ಸ್ವರ್ಗ ಪ್ರವೇಶಕ್ಕೆ ಸಾಕಾಗಲಾರದು. ಬದಲಾಗಿ ಈ ಹದೀಸ್ಗಳಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲ ವಿಷಯಗಳನ್ನೂ ಪಾಲಿಸಬೇಕು ಎಂದು ತಿಳಿದು ಬರುತ್ತದೆ.
IslamKannada News Portal
