ಪ್ರವಾದಿಗಳ ಮೇಲೆ ವಿಶ್ವಾಸವಿರಿಸುವುದರ ತಾತ್ಪರ್ಯವೇನೆಂದರೆ- ಅಲ್ಲಾಹನ ವತಿಯಿಂದ ಬಂದಿರುವ ಪ್ರವಾದಿಗಳೆಲ್ಲರೂ ಸತ್ಯವಂತರು. ಅವರೆಲ್ಲರೂ ಅಲ್ಲಾಹನ ವಾಣಿಯನ್ನು ಯಾವುದೇ ಹೆಚ್ಚು ಕಡಿಮೆ ಮಾಡದೆ ಜನರಿಗೆ ತಲಪಿಸಿದರು. ಈ ಪರಂಪರೆಯ ಕೊನೆಯ ಕೊಂಡಿ ಪ್ರವಾದಿ ಮುಹಮ್ಮದ್(ಸ) ಆಗಿದ್ದಾರೆ. ಇನ್ನು ಮಾನವರ ಮೋಕ್ಷವು ಕೇವಲ ಅವರನ್ನು ಅನುಸರಿಸುವುದರಲ್ಲಿದೆ ಎಂದು ನಂಬುವುದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಕೆಲವು ಹದೀಸ್ಗಳನ್ನು ಇಲ್ಲಿ ಕೊಡಲಾಗಿದೆ-
ಅನಸ್(ರ) ಹೇಳುತ್ತಾರೆ: ಪ್ರವಾದಿ(ಸ) ನನ್ನೊಂದಿಗೆ ಹೀಗೆಂದರು- ನನ್ನ ಪ್ರಿಯ ಪುತ್ರಾ! ನಿನಗೆ ನಿನ್ನ ಮನಸ್ಸಿನಲ್ಲಿ ಯಾರ ವಿರುದ್ಧವಾದರೂ ಅಹಿತ ಭಾವನೆಯಿಲ್ಲದಂತಹ ಅವಸ್ಥೆಯಲ್ಲಿ ಜೀವನ ಸಾಗಿಸಲು ಸಾಧ್ಯವಾದರೆ ಹಾಗೆಯೇ ಜೀವಿಸು. ಅನಂತರ ಹೇಳಿದರು- ಪ್ರಿಯ ಪುತ್ರಾ! ನನ್ನ ಕ್ರಮವೂ ಇದುವೇ ಆಗಿದೆ. ನನ್ನ ಮನಸ್ಸಿನಲ್ಲಿ ಯಾರ ವಿರುದ್ಧವೂ ಯಾವುದೇ ಮಾಲಿನ್ಯವಿಲ್ಲ. ಯಾರು ನನ್ನ ಚರ್ಯೆ (ಕ್ರಮ)ಯನ್ನು ಪ್ರೀತಿಸಿದನೋ ಅವನು ನನ್ನನ್ನು ಪ್ರೀತಿಸಿದನು. ಯಾರು ನನ್ನನ್ನು ಪ್ರೀತಿಸಿದನೋ ಅವನು ನನ್ನೊಂದಿಗೆ ಸ್ವರ್ಗದಲ್ಲಿರುವನು. [ಮುಸ್ಲಿಮ್]
ಅನಸ್(ರ) ಹೇಳುತ್ತಾರೆ: ಪ್ರವಾದಿಯವರ(ಸ) ಆರಾಧನೆಗಳ ಬಗ್ಗೆ ತಿಳಿಯಲು ಮೂರು ಮಂದಿಯ ನಿಯೋಗವೊಂದು ಪ್ರವಾದಿ ಪತ್ನಿಯರ(ರ) ಬಳಿಗೆ ಹೋದರು. ಅವರಿಗೆ ಆ ಕುರಿತು ತಿಳಿಸಲಾಯಿತು. ಆಗ ಅವರಿಗೆ ಈ ಆರಾಧನೆಗಳ ಪ್ರಮಾಣ ಕಡಿಮೆ ಎನಿಸಿತು. ಅವರು ಹೀಗೆ ಹೇಳತೊಡಗಿದರು- ಪ್ರವಾದಿಯವರಿಗೆ(ಸ) ಹೋಲಿಸಿದರೆ ನಮ್ಮ ಸ್ಥಿತಿಯೇನು? ನಾವಂತೂ ಪ್ರವಾದಿಗೆ ಸಮಾನರಲ್ಲ. ಪ್ರವಾದಿವರ್ಯರ ಹಿಂದಿನ ಮತ್ತು ಮುಂದಿನ ಪಾಪಗಳೆಲ್ಲವೂ ಕ್ಷಮಿಸಲ್ಪಟ್ಟಿವೆಯಷ್ಟೆ. ಹಾಗೆ ಅವರಲ್ಲಿ ಒಬ್ಬನು, ನಾನು ರಾತ್ರಿಯಿಡೀ ನಫಿಲ್ ನಮಾಝ್ ಮಾಡುವೆನೆಂದು ನಿಶ್ಚಯಿಸಿಕೊಂಡನು. ಇನ್ನೊಬ್ಬನು, ನಾನು ಎಡೆಬಿಡದೆ ಉಪವಾಸ ಆಚರಿಸುವೆನೆಂದು ಹೇಳಿದನು. ಮತ್ತೊಬ್ಬನು, ನಾನು ಜೀವನದಾದ್ಯಂತ ಸ್ತ್ರೀಯರಿಂದ ದೂರವಿರುವೆ, ಎಂದೂ ವಿವಾಹ ಮಾಡಲಾರೆನೆಂದೂ ಹೇಳಿದನು. (ಪ್ರವಾದಿಯವರಿಗೆ(ಸ) ಇವರ ಈ ವೈರಾಗ್ಯದ ಮಾತುಗಳ ಸುದ್ದಿ ಸಿಕ್ಕಿದಾಗ) ಅವರು ಅವರ ಬಳಿಗೆ ಹೋಗಿ, ನೀವು ಈ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದೀರಾ? ಎಂದು ಕೇಳಿದರು, ಅನಂತರ ಹೀಗೆಂದರು- ನೋಡಿ, ನಾನು ನಿಮ್ಮೆಲ್ಲರಿಗಿಂತಲೂ ಅಧಿಕ ಅಲ್ಲಾಹನನ್ನು ಭಯಪಡುವವನಾಗಿರುತ್ತೇನೆ ಮತ್ತು ಅವನ ಆಜ್ಞೋಲ್ಲಂಘನೆಯಿಂದ ದೂರವಿರುವವನಾಗಿರುತ್ತೇನೆ. ಆದರೆ ನೋಡಿ, ನಾನು ಉಪವಾಸ ಆಚರಿಸುತ್ತಲೂ ಇದ್ದೇನೆ, ಆಚರಿಸದೆಯೂ ಇರುತ್ತೇನೆ. ನಫಿಲ್ ನಮಾಝ್ಗಳನ್ನು ಮಾಡುತ್ತಲೂ ಇದ್ದೇನೆ. ನಿದ್ರಿಸುತ್ತಲೂ ಇದ್ದೇನೆ. ನಾನು ಸ್ತ್ರೀಯರೊಂದಿಗೆ ವಿವಾಹವನ್ನೂ ಮಾಡಿಕೊಳ್ಳುತ್ತೇನೆ. ಆದುದರಿಂದ ನನ್ನ ವಿಧಾನವನ್ನು ಅನುಸರಿಸುವುದರಲ್ಲೇ ನಿಮ್ಮ ಒಳಿತಿದೆ. ಯಾರ ದೃಷ್ಟಿಯಲ್ಲಿ ನನ್ನ ಚರ್ಯೆಗೆ ಬೆಲೆಯಿಲ್ಲವೋ ಯಾರು ನನ್ನ ಚರ್ಯೆಯನ್ನು ಧಿಕ್ಕರಿಸುತ್ತಾರೋ ಅವರು ನನ್ನವರಲ್ಲ. ನನಗೆ ಅವರೊಂದಿಗೆ ಯಾವ ಸಂಬಂಧವೂ ಇಲ್ಲ. [ಮುಸ್ಲಿಮ್]
ಆಯಿಶಾ(ರ) ಹೇಳುತ್ತಾರೆ- ಪ್ರವಾದಿ(ಸ) ಒಂದು ಕೆಲಸ ಮಾಡಿದರು ಮತ್ತು ಜನರಿಗೆ ಅದರಲ್ಲಿ ಸೌಲಭ್ಯವುಂಟು ಮಾಡಿದರು. ಆದರೆ ಕೆಲವರು ಸೌಲಭ್ಯದ ಅಂಶವನ್ನು ಸ್ವೀಕರಿಸಲು ಹಿಂಜರಿದರು. ಪ್ರವಾದಿಯವರಿಗೆ(ಸ) ಜನರ ಈ ಮನೋಭಾವದ ಅರಿವಾದಾಗ ಅವರು ಒಂದು ಉಪನ್ಯಾಸವಿತ್ತರು. ಸ್ತುತಿ-ಸ್ತೋತ್ರಗಳ ಬಳಿಕ ಹೀಗೆಂದರು- ಕೆಲವರು ನಾನು ಮಾಡುವ ಕೆಲಸವನ್ನು ಮಾಡಲು ಏಕೆ ಹಿಂಜರಿಯುತ್ತಾರೆ? ಅಲ್ಲಾಹನಾಣೆ! ನಾನು ಇವರೆಲ್ಲರಿಗಿಂತ ಹೆಚ್ಚು ಅಲ್ಲಾಹನನ್ನು ತಿಳಿದವನಾಗಿದ್ದೇನೆ (ಅವನ ಇಂಗಿತವೇನು ಮತ್ತು ಅವನಿಗೆ ಅಪ್ರಿಯವಾದುದೇನು ಎಂಬುದರ ಕುರಿತು) ಮತ್ತು ನಾನು ಇವರೆಲ್ಲರಿಗಿಂತ ಹೆಚ್ಚು ಅಲ್ಲಾಹನನ್ನು ಭಯಪಡುವವನಾಗಿದ್ದೇನೆ. [ಬುಖಾರಿ, ಮುಸ್ಲಿಮ್]
ಜಾಬಿರ್(ರ) ಪ್ರವಾದಿವರ್ಯರಿಂದ(ಸ) ವರದಿ ಮಾಡುತ್ತಾರೆ. ಹ. ಉಮರ್(ರ) ಪ್ರವಾದಿಯವರ(ಸ) ಬಳಿಗೆ ಹೋಗಿ ಹೀಗೆ ಕೇಳಿದರು- ನಮಗೆ ಯಹೂದಿಯರ ಕೆಲವು ವಿಷಯಗಳು ಒಳ್ಳೆಯದಾಗಿ ಕಾಣುತ್ತವೆ. ನಾವು ಅವುಗಳಿಂದ ಏನನ್ನಾದರೂ ಬರೆದಿಡುವ ಬಗ್ಗೆ ತಮ್ಮ ಅಭಿಪ್ರಾಯವೇನು? ಪ್ರವಾದಿ(ಸ) ಹೇಳಿದರು- ಯಹೂದಿ-ಕ್ರೈಸ್ತರು (ತಮ್ಮ ಗ್ರಂಥವನ್ನು ಬಿಟ್ಟು) ಪಥಭ್ರಷ್ಟತೆಯ ಕೂಪಕ್ಕೆ ಬಿದ್ದಂತೆ ನೀವೂ ಪಥಭ್ರಷ್ಟರಾಗ ಬಯಸುತ್ತೀರಾ? ನಾನು ನಿಮ್ಮ ಬಳಿಗೆ ಸೂರ್ಯನಿಗಿಂತಲೂ ಪ್ರಕಾಶಮಾನವಾದ ಹಾಗೂ ಕನ್ನಡಿಗಿಂತಲೂ ಶುಭ್ರವಾದ ಶರೀಅತ್ (ಧರ್ಮಶಾಸ್ತ್ರ) ತಂದಿದ್ದೇನೆ. ಈಗ ಒಂದು ವೇಳೆ ಮೂಸಾ(ಅ) ಜೀವಿಸಿರುತ್ತಿದ್ದರೆ ಅವರೂ ನನ್ನನ್ನು ಅನುಸರಿಸಬೇಕಾಗುತ್ತಿತ್ತು. [ಮುಸ್ಲಿಮ್] ಟಿಪ್ಪಣಿ: ಯಹೂದಿಯರು ಮತ್ತು ಕ್ರೈಸ್ತರು ತಮ್ಮ ಗ್ರಂಥಗಳಲ್ಲಿ ತಿದ್ದುಪಡಿಗಳನ್ನು ಮಾಡಿ ಅವುಗಳನ್ನು ವಿಕೃತಗೊಳಿಸಿದ್ದರು. ಆದರೆ ಅವರಲ್ಲಿ ಕೆಡುಕು ಮಾತ್ರ ಇದ್ದುದಲ್ಲ. ಬದಲಾಗಿ ಅವರ ಬಳಿ ಅಲ್ಲಾಹನ ಕೆಲವು ಒಳ್ಳೆಯ ವಿಷಯಗಳೂ ಇದ್ದುವು. ಅದನ್ನು ಮುಸ್ಲಿಮರು ಕೇಳುತ್ತಲೂ ಮೆಚ್ಚುತ್ತಲೂ ಇದ್ದರು. ಒಂದು ವೇಳೆ ಪ್ರವಾದಿ(ಸ) ಅದಕ್ಕೆ ಅನುಮತಿ ನೀಡುತ್ತಿದ್ದರೆ ಧರ್ಮದಲ್ಲಿ ಅನೇಕ ಕೆಡುಕುಗಳುಂಟಾಗುತ್ತಿತ್ತು. ಸತ್ಯ ಮತ್ತು ಉತ್ತಮ ಅಂಶಗಳಿಲ್ಲದ ಯಾವುದಾದರೂ ಧರ್ಮ ಈ ಲೋಕದಲ್ಲಿರಬಹುದೆ? ಪ್ರವಾದಿಯವರು(ಸ) ಉಮರ್ರಿಗೆ(ರ) ನೀಡಿದ ಉತ್ತರದಿಂದ ಸ್ಪಷ್ಟವಾಗುವುದೇನೆಂದರೆ ಯಾರ ಮನೆಯಲ್ಲಿ ಶುದ್ಧ ಚಿಲುಮೆಯಿರುವುದೋ ಅವರು ಮಲಿನ ಕೊಳದಿಂದ ತಮ್ಮ ಬಾಯಾರಿಕೆ ನೀಗಿಸ ಬಯಸುವುದು ವಿಚಿತ್ರ!
ಅಬ್ದುಲ್ಲಾ ಬಿನ್ ಅಮ್ರ್(ರ) ಹೇಳುತ್ತಾರೆ- ಪ್ರವಾದಿ(ಸ) ಹೇಳಿದರು- ಒಬ್ಬ ವ್ಯಕ್ತಿಯ ಇಚ್ಛೆ ಮತ್ತು ಅವನ ಮಾನಸಿಕ ಒಲವುಗಳು ನಾನು ತಂದಿರುವ ಧರ್ಮಶಾಸ್ತ್ರಕ್ಕೆ ಅನುಗುಣ ವಾಗುವ ತನಕ ಆತ ವಿಶ್ವಾಸಿಯಾಗಲಾರ. [ಮಿಶ್ಕಾತ್] ಟಿಪ್ಪಣಿ: ವ್ಯಕ್ತಿಯು ತನ್ನ ಇಚ್ಛೆ ಮತ್ತು ಮಾನಸಿಕ ಒಲವುಗಳನ್ನು ಅಲ್ಲಾಹನ ಪ್ರವಾದಿ(ಸ) ತಂದಿರುವ ಧರ್ಮಶಾಸ್ತ್ರಕ್ಕೆ ಅಧೀನಗೊಳಿಸಬೇಕಾದುದು ಹಾಗೂ ಕುರ್ಆನ್ ಮತ್ತು ಪ್ರವಾದಿ ಚರ್ಯೆಯ ಕೈಯಲ್ಲಿ ತನ್ನ ಅಭಿಲಾಷೆಗಳ ಲಗಾಮನ್ನು ನೀಡಬೇಕಾದುದು ಪ್ರವಾದಿಯವರ(ಸ) ಮೇಲೆ ವಿಶ್ವಾಸವಿರಿಸುವುದರ ಬೇಡಿಕೆಯಾಗಿದೆ. ಯಾರಾದರೂ ಈ ಬೇಡಿಕೆಗಳನ್ನು ಪೂರೈಸದಿದ್ದರೆ ಅವನ ವಿಶ್ವಾಸಕ್ಕೆ ಅಲ್ಲಾಹನ ಬಳಿ ಯಾವ ಬೆಲೆಯೂ ಇರಲಾರದು.
ಅನಸ್(ರ) ಹೇಳುತ್ತಾರೆ- ಪ್ರವಾದಿ(ಸ) ಹೇಳಿದರು- ಒಬ್ಬನಿಗೆ ಆತನ ತಂದೆ- ತಾಯಿಗಳು, ಅವನ ಸಂತಾನ ಮತ್ತು ಇತರ ಎಲ್ಲ ಮನುಷ್ಯರಿಗಿಂತಲೂ ನಾನು ಪ್ರಿಯವಾಗುವ ತನಕ ನಿಮ್ಮ ಪೈಕಿ ಯಾರೂ ವಿಶ್ವಾಸಿಯಾಗಲಾರ. [ಬುಖಾರಿ, ಮುಸ್ಲಿಮ್] ಟಿಪ್ಪಣಿ: ಈ ವಚನದ ತಾತ್ಪರ್ಯವೇನೆಂದರೆ ಪ್ರವಾದಿ(ಸ) ಅವರ ಮೇಲಿನ ಪ್ರೀತಿ ಮಿಕ್ಕೆಲ್ಲ ಪ್ರೀತಿಗಳಿಗಿಂತ ಅಧಿಕವಾಗುವ ತನಕ ಒಬ್ಬನು ನೈಜ ವಿಶ್ವಾಸಿಯಾಗಲಾರ. ತಂದೆ-ತಾಯಿಗಳು, ಸಂತಾನ ಮತ್ತು ಸಮಾಜದ ಇತರ ವ್ಯಕ್ತಿಗಳು ಒಬ್ಬನನ್ನು ಒಂದು ಮಾರ್ಗದಲ್ಲಿ ನಡೆಸ ಬಯಸುತ್ತಿರುವಾಗ ಅಲ್ಲಾಹನ ಪ್ರವಾದಿ ಅವನನ್ನು ಇನ್ನೊಂದು ಮಾರ್ಗದತ್ತ ಕರೆದರೆ ಸತ್ಯವಿಶ್ವಾಸಿಯಾದವನು ಅವರೆಲ್ಲರ ಬೇಡಿಕೆಗಳನ್ನು ತಿರಸ್ಕರಿಸಿ ತನ್ನ ನೆಚ್ಚಿನ ಪ್ರವಾದಿಯವರ(ಸ) ಕರೆಗೆ ಓಗೊಡಬೇಕು.
ಅಬ್ದುಲ್ಲ ಬಿನ್ ಮುಗಫ್ಫಲ್(ರ) ಹೇಳುತ್ತಾರೆ: ಒಬ್ಬ ವ್ಯಕ್ತಿ ಪ್ರವಾದಿಯವರ(ಸ) ಬಳಿಗೆ ಬಂದು ಹೀಗೆಂದ- ನಾನು ತಮ್ಮನ್ನು ಪ್ರೀತಿಸುತ್ತೇನೆ. ಪ್ರವಾದಿ(ಸ) ಹೇಳಿದರು- ನೀನೇನು ಹೇಳುತ್ತಿರುವೆಯೆಂದು ಯೋಚಿಸು. ಅವನು ಮೂರು ಬಾರಿ ಆಣೆ ಹಾಕಿ ‘ನಾನು ತಮ್ಮನ್ನು ಪ್ರೀತಿಸುತ್ತೇನೆ’ ಎಂದನು. ಆಗ ಪ್ರವಾದಿ(ಸ) ಹೇಳಿದರು- ನೀನು ಸತ್ಯವಂತನಾಗಿದ್ದರೆ ಬಡತನ-ದಾರಿದ್ರ್ಯವನ್ನು ಎದುರಿಸಲು ಸಿದ್ಧನಾಗು. ಏಕೆಂದರೆ ನನ್ನನ್ನು ಪ್ರೀತಿಸುವವರ ಕಡೆಗೆ ಬಡತನವು, ನೆರೆ ನೀರು ಇಳಿಜಾರಿಗೆ ಹರಿಯುವುದಕ್ಕಿಂತಲೂ ವೇಗವಾಗಿ ಬರುತ್ತದೆ.
[ತಿರ್ಮಿದಿ]
ಟಿಪ್ಪಣಿ: ಪ್ರವಾದಿಯವರನ್ನು(ಸ) ಪ್ರೀತಿಸುವುದೆಂದರೆ ಅವರ ಒಂದೊಂದು ಹೆಜ್ಜೆಗುರುತುಗಳನ್ನೂ ಮಾರ್ಗ ಸಂಕೇತಗಳನ್ನೂ ಗುರುತಿಸಿ ಅದನ್ನು ಅನುಸರಿಸಿ ನಡೆಯುವುದಾಗಿದೆ. ಪ್ರವಾದಿ(ಸ) ಯಾವ ಮಾರ್ಗದಲ್ಲಿ ಸಂಕಷ್ಟಗಳನ್ನು ಅನುಭವಿಸಿದ್ದಾರೋ ಆ ಮಾರ್ಗದಲ್ಲಿ ಸಂಕಷ್ಟಗಳನ್ನು ಸಹಿಸುವ ಪಣ ತೊಡುವುದಾಗಿದೆ. ಪ್ರವಾದಿಯವರ(ಸ) ಮಾರ್ಗದಲ್ಲಿ ನಡೆಯುವ ಪಣ ತೊಡುವವನು ತನ್ನತ್ತ ಹರಿಯುವ ಬಡತನ- ದಾರಿದ್ರ್ಯವನ್ನು ಅಲ್ಲಾಹನ ಮೇಲೆ ಭರವಸೆ ಮತ್ತು ದೇವಪ್ರೇಮದ ಆಯುಧಗಳಿಂದ ತಡೆಯ ಬಲ್ಲನು. ಅವನು ತನ್ನ ಮನಸ್ಸಿನಲ್ಲಿ, ಅಲ್ಲಾಹನೇ ನನ್ನ ಸಂರಕ್ಷಕ, ನಾನೇನೂ ಅಸಹಾಯಕನಲ್ಲ ವೆಂದು ದೃಢ ಮಾಡಿಕೊಳ್ಳಬೇಕು. ನಾನು ಗುಲಾಮನಾಗಿದ್ದು ನನ್ನ ಯಜಮಾನನ ಇಚ್ಛೆಯನ್ನು ಪೂರೈಸಲೇ ಬೇಕಾಗಿದೆ ಮತ್ತು ನಾನು ಯಾರ ಕೆಲಸಕ್ಕಾಗಿ ನೇಮಿಸಲ್ಪಟ್ಟಿರುವೆನೋ ಅವನು ನ್ಯಾಯಪೂರ್ಣನೂ ಕರುಣಾಳುವೂ ಆಗಿದ್ದಾನೆ. ಆದುದರಿಂದ ನನ್ನ ಪರಿಶ್ರಮವೆಂದೂ ವ್ಯರ್ಥವಾಗದು ಎಂದು ನಂಬಿರಬೇಕು. ಅದೇ ರೀತಿ ನಾನು ಯಾರನ್ನು ಪ್ರೀತಿಸುತ್ತಿದ್ದೇನೆ ಎಂಬುದನ್ನು ಅವನು ಸದಾ ನೆನಪಿನಲ್ಲಿಡಬೇಕು.
IslamKannada News Portal
