ವಿಧಿಯ ಮೇಲೆ ವಿಶ್ವಾಸವಿರಿಸುವುದೆಂದರೆ ಈ ಲೋಕದಲ್ಲಿ ನಡೆಯುವುದೆಲ್ಲವೂ ಅಲ್ಲಾಹನ ವತಿಯಿಂದಲೇ ನಡೆಯುತ್ತದೆ. ಇಲ್ಲಿ ಕೇವಲ ಅವನ ಆಜ್ಞೆ ನಡೆಯುತ್ತದೆ ಎಂದು ನಂಬುವುದು. ಅಲ್ಲಾಹನ ಇಚ್ಛೆಗೆ ವಿರುದ್ಧವಾಗಿ ಲೋಕದಲ್ಲಿ ಏನೂ ನಡೆಯುವುದಿಲ್ಲ. ಎಲ್ಲ ಒಳಿತು-ಕೆಡುಕು ಮತ್ತು ಸನ್ಮಾರ್ಗ-ದುರ್ಮಾರ್ಗಕ್ಕೆ ಒಂದು ನಿಯಮವಿದೆ. ಅದನ್ನು ಅವನು ಮುಂಚೆಯೇ ಮಾಡಿದ್ದಾನೆ. ಅಲ್ಲಾಹನ ಕೃತಜ್ಞ ದಾಸರ ಮೇಲೆ ಎರಗುವ ವಿಪತ್ತುಗಳು, ಅವರು ಎದುರಿಸುವ ಸಂಕಷ್ಟ ಮತ್ತು ಪರೀಕ್ಷೆಗಳೆಲ್ಲವೂ ಅವರ ಪ್ರಭುವಿನ ಆಜ್ಞೆ ಮತ್ತು ಮೊದಲೇ ನಿಶ್ಚಯಿಸಲ್ಪಟ್ಟ ನಿಯಮಗಳಿಗೆ ಅನುಸಾರವಾಗಿ ಬರುತ್ತವೆ. ಅಲ್ಲಾಹನ ವಿಧಿಯನ್ನು ವ್ಯಕ್ತ ಪಡಿಸುವ ಕೆಲವು ಹದೀಸ್ಗಳನ್ನು ಇಲ್ಲಿ ಕೊಡಲಾಗಿದೆ-
ಅಲೀ(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ನಿಮ್ಮ ಪೈಕಿ ಪ್ರತಿಯೊಬ್ಬನ ಸ್ವರ್ಗ ಮತ್ತು ನರಕದ ತೀರ್ಮಾನವಾಗಿ ಬಿಟ್ಟಿದೆ. ಆಗ ಜನರು ಕೇಳಿದರು- ಅಲ್ಲಾಹನ ಸಂದೇಶ ವಾಹಕರೇ! ಹಾಗಾದರೆ ನಾವೇಕೆ ನಮ್ಮ ಬಗೆಗಿನ ತೀರ್ಮಾನವನ್ನು ಹೇತುವಾಗಿಸಿ ಕರ್ಮ ಮಾಡುವುದನ್ನು ಬಿಟ್ಟು ಬಿಡಬಾರದು? ಪ್ರವಾದಿ(ಸ) ಹೇಳಿದರು- ಇಲ್ಲ. ನೀವು ಕರ್ಮ ಮಾಡಿರಿ. ಏಕೆಂದರೆ ಪ್ರತಿಯೊಬ್ಬನಿಗೂ ಅವನು ಯಾವುದಕ್ಕಾಗಿ ಸೃಷ್ಟಿಸಲ್ಪಟ್ಟಿರುವನೋ ಅದರ ಅನುಗ್ರಹವೇ ಸಿಗುವುದು. ಸೌಭಾಗ್ಯವಂತನಿಗೆ ಸ್ವರ್ಗಕ್ಕೆ ಅರ್ಹವಾದ ಕೆಲಸಗಳನ್ನು ಮಾಡುವ ತೌಫೀಕ್ (ಅನುಗ್ರಹ) ಸಿಗುವುದು. ದುರದೃಷ್ಟವಂತನಿಗೆ ನರಕಕ್ಕೆ ಅರ್ಹವಾದ ಕೆಲಸಗಳನ್ನು ಮಾಡುವ ತೌಫೀಕ್ ಸಿಗುವುದು.
ಅನಂತರ ಪ್ರವಾದಿಯವರು(ಸ) ಹದೀಸ್ನಲ್ಲಿ ಪ್ರಸ್ತಾಪಿಸಲಾದ (ಸೂರಃ ಲೈಲ್ನ) ಎರಡು ಆಯತ್ಗಳನ್ನು ಪಠಿಸಿದರು. ಅದರ ಅರ್ಥ ಹೀಗಿದೆ: ಯಾರು ಅಲ್ಲಾಹನ ಮಾರ್ಗದಲ್ಲಿ ಖರ್ಚುಮಾಡಿದನೋ, ಪಾವಿತ್ರ್ಯದ ಮಾರ್ಗವನ್ನು ಅವಲಂಬಿಸಿದನೋ ಮತ್ತು ಅತ್ಯುತ್ತಮ ಮಾತನ್ನು ದೃಢೀಕರಿಸಿದನೋ (ಅರ್ಥಾತ್: ಇಸ್ಲಾಮ್ ಸ್ವೀಕರಿಸಿದನೋ) ನಾವು ಅವನಿಗೆ ಉತ್ತಮ ಜೀವನ(ಸ್ವರ್ಗ)ದ ಅನುಗ್ರಹ ನೀಡುವೆವು ಮತ್ತು ಯಾರು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವಲ್ಲಿ ಜಿಪುಣತೆ ತೋರಿದನೋ, ಅಲ್ಲಾಹನ ಬಗ್ಗೆ ಅಲಕ್ಷ್ಯನಾದನೋ ಮತ್ತು ಉತ್ತಮ ಜೀವನವನ್ನು ನಿರಾಕರಿಸಿದನೋ ನಾವು ಅವನಿಗೆ ಕಷ್ಟದ ಜೀವನ (ನರಕ)ವನ್ನು ಅನುಗ್ರಹಿಸುವೆವು (ಅರ್ಥಾತ್: ಅವನಿಗೆ ನರಕದ ಮಾರ್ಗದಲ್ಲಿ ನಡೆಯುವುದನ್ನು ಸುಲಭಗೊಳಿಸುವೆವು). ತನ್ನ ಕೆಟ್ಟ ಕೆಲಸಗಳಿಂದಾಗಿ ಅವನು ನರಕಕ್ಕೆ ಹೋಗುವನು. [[ಬುಖಾರಿ, ಮುಸ್ಲಿಮ್]
ಟಿಪ್ಪಣಿ: ಮನುಷ್ಯನು ಯಾವ ಕರ್ಮಗಳಿಂದಾಗಿ ನರಕಕ್ಕೆ ಅರ್ಹನಾಗುವನು ಮತ್ತು ಯಾವ ಕರ್ಮಗಳಿಂದಾಗಿ ಸ್ವರ್ಗಕ್ಕೆ ಹೋಗುವನು ಎಂಬುದನ್ನು ಅಲ್ಲಾಹನು ಬಳಿ ತೀರ್ಮಾನಿಸಿದ್ದಾನೆ. ಈ ‘ವಿಧಿ’ಯ ಕುರಿತು ಕುರ್ಆನ್ ಮತ್ತು ಹದೀಸ್ಗಳಲ್ಲಿ ವಿವರವಾಗಿ ಪ್ರಸ್ತಾಪಿಸಲ್ಪಟ್ಟಿದೆ. ಇನ್ನು ತಾನು ನರಕದ ಮಾರ್ಗದಲ್ಲಿ ನಡೆಯಬೇಕೋ, ಸ್ವರ್ಗದ ಮಾರ್ಗದಲ್ಲಿ ನಡೆಯಬೇಕೋ ಎಂಬುದು ಮಾನವನಿಗೆ ಬಿಟ್ಟ ವಿಷಯ. ಎರಡರಲ್ಲೊಂದನ್ನು ಆಯ್ಕೆ ಮಾಡಬೇಕಾದುದು ಅವನ ಕರ್ತವ್ಯ. ಅಲ್ಲಾಹನು ಮಾನವನಿಗೆ ತಾನು ಬಯಸುವ ಮಾರ್ಗದ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿರುವನು. ಆದುದರಿಂದಲೇ ಈ ಹೊಣೆಗಾರಿಕೆಯನ್ನು ಅವನ ಮೇಲೆ ಹೊರಿಸಿರುವನು. ಅವನಿಗೆ ಎರಡೂ ಮಾರ್ಗಗಳನ್ನು ತೋರಿಸ ಲಾಗಿದೆ. ದಯಾಮಯನ ಮಾರ್ಗವನ್ನೂ ಶೈತಾನನ ಮಾರ್ಗವನ್ನೂ ಸ್ಪಷ್ಟಪಡಿಸಲಾಗಿದೆ. ಈ ಸ್ವಾತಂತ್ರ್ಯವೇ ಅವನಿಗೆ ಶಿಕ್ಷೆಯನ್ನು ವಿಧಿಸಬಲ್ಲುದು ಅಥವಾ ಅವನನ್ನು ಶಾಂತಿಗೇಹಕ್ಕೂ ತಲಪಿಸಬಲ್ಲುದು. ಆದರೆ ಬಹುತೇಕ ತಿಳಿಗೇಡಿಗಳು ತಮ್ಮ ಹೊಣೆಗಾರಿಕೆಯನ್ನು ಅಲ್ಲಾಹನ ಮೇಲೆ ಹಾಕಿ ತಾವು ಅಸಹಾಯಕರೆಂದು ಸಾರಿಬಿಡುತ್ತಾರೆ.
ಅಬೂ ಖಿಝಾಮರವರು ತನ್ನ ತಂದೆಯಿಂದ ಹೀಗೆ ವರದಿ ಮಾಡುತ್ತಾರೆ- ನನ್ನ ತಂದೆಯವರು ಪ್ರವಾದಿಯವರಲ್ಲಿ(ಸ) ಹೀಗೆ ವಿಚಾರಿಸಿದರು- ನಾವು ರೋಗ ಶಮನಕ್ಕಾಗಿ ಉಪಯೋಗಿಸುವ ತಾಯಿತ, ಔಷಧಿ ಮತ್ತು ಅವುಗಳಿಂದ ರಕ್ಷಣೆ ಪಡೆಯಲಿಕ್ಕಾಗಿ ನಾವು ಕೈಗೊಳ್ಳುವ ಉಪಾಯಗಳು ಅಲ್ಲಾಹನ ವಿಧಿಯನ್ನು ಬದಲಾಯಿಸಬಹುದೆ?
ಪ್ರವಾದಿ(ಸ) ಹೇಳಿದರು- ಇದೆಲ್ಲವೂ ಅಲ್ಲಾಹನ ವಿಧಿಯೇ ಆಗಿವೆ. [ತಿರ್ಮಿದಿ]
ಟಿಪ್ಪಣಿ: ಪ್ರವಾದಿ(ಸ) ಅವರ ಮಾತಿನ ತಾತ್ಪರ್ಯವೇನೆಂದರೆ ನಮ್ಮ ವಿಧಿಯಲ್ಲಿ ರೋಗವನ್ನು ಬರೆದಿರುವ ಅಲ್ಲಾಹನೇ ಅದನ್ನು ಇಂತಿಂತಹ ಔಷಧಿ ಮತ್ತು ಉಪಾಯಗಳಿಂದ ದೂರಗೊಳಿಸಬಹುದೆಂಬುದನ್ನೂ ನಿಶ್ಚಯಿಸಿದ್ದಾನೆ. ರೋಗದ ಸೃಷ್ಟಿಕರ್ತನೂ ಅವನೇ, ಔಷಧಿಯ ಸೃಷ್ಟಿಕರ್ತನೂ ಅವನೇ. ಎಲ್ಲವೂ ಅವನು ನಿಶ್ಚಯಿಸಿದ ನಿಯಮ-ನಿಬಂಧನೆಗಳಿಗೆ ಒಳಪಟ್ಟಿವೆ.
ಇಬ್ನು ಅಬ್ಬಾಸ್(ರ) ಹೇಳುತ್ತಾರೆ: ಒಂದು ದಿನ ನಾನು ಪ್ರವಾದಿಯವರ(ಸ) ಹಿಂದೆ ಸವಾರಿಯಲ್ಲಿ ಕುಳಿತಿದ್ದೆ. ಪ್ರವಾದಿ(ಸ) ಹೇಳಿದರು- ಎಲೈ ಬಾಲಕನೇ! ನಾನು ನಿನಗೆ ಕೆಲವು ವಿಷಯಗಳನ್ನು ಹೇಳಿ ಕೊಡುತ್ತೇನೆ (ಗಮನ ಕೊಟ್ಟು ಕೇಳು), ನೀನು ಅಲ್ಲಾಹನನ್ನು ಸ್ಮರಿಸು; ಅವನು ನಿನ್ನನ್ನು ಸ್ಮರಿಸುವನು. ಅಲ್ಲಾಹನನ್ನು ಸ್ಮರಿಸಿದರೆ ಅವನನ್ನು ನಿನ್ನ ಮುಂದೆ ಕಾಣುವಿ. ನೀನು ಬೇಡುವಾಗ ಅಲ್ಲಾಹನಲ್ಲಿ ಬೇಡು. ಸಂಕಷ್ಟ ಎದುರಾಗಿ ನಿನಗೆ ಸಹಾಯದ ಅಗತ್ಯವಿರುವಾಗ ಅಲ್ಲಾಹನಿಂದ ಸಹಾಯ ಯಾಚಿಸು. ಎಲ್ಲರೂ ಸೇರಿ ನಿನಗೇನಾದರೂ ಲಾಭ ಉಂಟು ಮಾಡಬೇಕೆಂದು ಬಯಸಿದರೆ ಅಲ್ಲಾಹನು ನಿನಗಾಗಿ ಬರೆದಿರುವುದರ ಹೊರತು ಯಾವ ಲಾಭವನ್ನೂ ಅವರು ನಿನಗೆ ಉಂಟು ಮಾಡಲಾರರು. (ಅರ್ಥಾತ್: ಕೊಡಲಿಕ್ಕೆ ಯಾರ ಬಳಿಯಲ್ಲೂ ಏನೂ ಇಲ್ಲ. ಎಲ್ಲವೂ ಅಲ್ಲಾಹನದೇ ಆಗಿದ್ದು ಅವನು ಯಾರಿಗೆ ಎಷ್ಟು ನೀಡಲು ನಿರ್ಧರಿಸಿದ್ದಾನೋ ಅಷ್ಟು ಮಾತ್ರ ಅವನಿಗೆ ಸಿಗುವುದು) ಅದೇ ರೀತಿಯಲ್ಲಿ ಎಲ್ಲರೂ ಸೇರಿ ನಿನಗೆ ಏನಾದರೂ ನಷ್ಟವುಂಟು ಮಾಡಬೇಕೆಂದು ಬಯಸಿದರೆ ಅಲ್ಲಾಹನು ನಿನಗೆ ವಿಧಿಸಿದ್ದರ ಹೊರತು ಅವರು ಯಾವುದೇ ನಷ್ಟವುಂಟು ಮಾಡಲಾರರು ಎಂಬುದನ್ನು ದೃಢವಾಗಿ ನಂಬಿರಬೇಕು. [ಮಿಶ್ಕಾತ್]
ಅಬೂಹುರೈರಾ(ರ) ವರದಿ ಮಾಡುತ್ತಾರೆ: ಪ್ರವಾದಿ(ಸ) ಹೇಳಿದರು- ಬಲಶಾಲಿಯಾದ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮ ಹಾಗೂ ಅಲ್ಲಾಹನಿಗೆ ಪ್ರಿಯ ನಾಗಿರುತ್ತಾನೆ. ಇಬ್ಬರೂ ಒಳ್ಳೆಯವರೆ. ನೀನು (ಪರಲೋಕದಲ್ಲಿ) ಪ್ರಯೋಜನ ನೀಡುವಂತಹ ವಸ್ತುವಿನ ಆಶೆ ಪಡು. ಸಂಕಷ್ಟಗಳೆದುರಾದಾಗ ಅಲ್ಲಾಹನಿಂದ ಸಹಾಯ ಯಾಚಿಸು ಮತ್ತು ಧೈರ್ಯಗುಂದದಿರು. ಇನ್ನು ನಿನ್ನ ಮೇಲೆ ಏನಾದರೂ ವಿಪತ್ತೆರಗಿದರೆ, ‘ನಾನು ಇಂತಹ ಉಪಾಯ ಕೈಗೊಳ್ಳುತ್ತಿದ್ದರೆ ಈ ವಿಪತ್ತು ಎದುರಾಗುತ್ತಿರಲಿಲ್ಲ’ವೆಂದು ಹೇಳಬೇಡ. ಬದಲಾಗಿ, ಅದನ್ನು ಅಲ್ಲಾಹನೇ ವಿಧಿಸಿದ್ದಾನೆ ಮತ್ತು ಅವನು ಬಯಸಿದ್ದು ಆಗಿಯೇ ತೀರುವುದು ಎಂದು ಹೇಳು. ಏಕೆಂದರೆ ‘ಹಾಗಾಗುತ್ತಿದ್ದರೆ’ ಎಂಬ ಮನೋಭಾವ ಪೈಶಾಚಿಕ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತದೆ. [ಮಿಶ್ಕಾತ್]
ಟಿಪ್ಪಣಿ: ಈ ಹದೀಸ್ನ ಮೊದಲ ವಾಕ್ಯದ ಅರ್ಥವೇನೆಂದರೆ ಒಬ್ಬ ಶಾರೀರಿಕವಾಗಿ ಮಾನಸಿಕ ಹಾಗೂ ನಿರ್ಧಾರ ಶಕ್ತಿಯ ಬಲಶಾಲಿಯಾದ ಮೂಮಿನನು ಅರ್ಥಾತ್ ಸತ್ಯವಿಶ್ವಾಸಿಯು ದುರ್ಬಲನಾದ ಮೂಮಿನನಿಗಿಂತ ಅಲ್ಲಾಹನಿಗೆ ಪ್ರಿಯನಾಗಿರುತ್ತಾನೆ. ಏಕೆಂದರೆ ಧರ್ಮದ ಸೇವೆಯು ಅವನಿಂದಲೇ ಹೆಚ್ಚು ಆಗಲು ಸಾಧ್ಯ. ಶಾರೀರಿಕವಾಗಿ ದುರ್ಬಲನಾಗಿರುವ, ಆರೋಗ್ಯ ಸರಿಯಿಲ್ಲದ ಹಾಗೂ ಆಲೋಚನೆ ಮತ್ತು ನಿರ್ಧಾರ ಶಕ್ತಿ ಕುಂದಿರುವ ಒಬ್ಬನಿಂದ ಅಂತಹ ಕಾರ್ಯ ಸಾಧ್ಯವಿಲ್ಲ. ಆದರೆ ಈ ಇಬ್ಬರೂ ಒಂದೇ ಸತ್ಯಮಾರ್ಗದ ಯಾತ್ರಿಕರಾಗಿರುವಾಗ ಪುರಸ್ಕಾರದಿಂದ ದುರ್ಬಲನನ್ನು ವಂಚಿತಗೊಳಿಸಲಾಗದು. ಇಲ್ಲಿ ಉದ್ದೇಶವು ಶಕ್ತಿಶಾಲಿ ಮೂಮಿನನಿಗೆ ಆದಷ್ಟು ಕೆಲಸ ಮಾಡಲು ಪ್ರೇರಣೆ ನೀಡುವುದೇ ಆಗಿದೆ.
ಕೊನೆಯ ವಾಕ್ಯದ ತಾತ್ಪರ್ಯವೇನೆಂದರೆ ಮೂಮಿನನು ತನ್ನ ಬುದ್ದಿ ಶಕ್ತಿ, ಶಾರೀರಿಕ ಶಕ್ತಿ ಮತ್ತು ತನ್ನ ಕಾರ್ಯದಕ್ಷತೆಯ ಕುರಿತು ಜಂಭಕೊಚ್ಚಿಕೊಳ್ಳುವುದಿಲ್ಲ. ಅವನ ಮೇಲೆ ಏನಾದರೂ ವಿಪತ್ತು ಬಂದೆರಗಿದರೆ ನಾನು ಇಂತಹ ಉಪಾಯ ಕೈಗೊಂಡಿದ್ದರೆ ಇದರಿಂದ ಪಾರಾಗಬಹುದಿತ್ತು ಎಂದು ಯೋಚಿಸುವುದಿಲ್ಲ. ಬದಲಾಗಿ ಅವನ ಮನೋಭಾವ ಹೀಗಿರುತ್ತದೆ- ಇದು ನನ್ನ ಪ್ರಭು ನಿಶ್ಚಯಿಸಿದುದಾಗಿದೆ. ಅವನ ಈ ತೀರ್ಮಾನ ನನ್ನ ಮಟ್ಟಿಗೆ ಒಳಿತಾಗಿರಬಹುದು. ಅವನು ಈ ವಿಪತ್ತನ್ನು ನನ್ನ ಸಂಸ್ಕರಣೆಗಾಗಿ ಕಳಿಸಿರಬಹುದು.
IslamKannada News Portal
