@ ಅಶೀರುದ್ದೀನ್ ಆಲಿಯಾ, ಮಂಜನಾಡಿ
“ಅವರ ವ್ಯಾಪಾರ ಮತ್ತು ಕ್ರಯ-ವಿಕ್ರಯಗಳು ಅಲ್ಲಾಹನ ಸ್ಮರಣೆಯಿಂದಲೂ ನಮಾಝ್ನ ಸಂಸ್ಥಾಪನೆಯಿಂದಲೂ ಝಕಾತಿನ ಪಾವತಿಯಿಂದಲೂ ಅವರನ್ನು ಅಲಕ್ಷ್ಯರಾಗಿ ಮಾಡುವುದಿಲ್ಲ. ಹೃದಯಗಳು ಪಲ್ಲಟಗೊಳ್ಳುವ ಮತ್ತು ದೃಷ್ಟಿಗಳು ಸ್ತಬ್ಧಗೊಳ್ಳುವಂತಹ ಆ ದಿನವನ್ನು ಅವರು ಭಯ ಪಡುತ್ತಿರುವರು. ಅಲ್ಲಾಹನು ಅವರಿಗೆ ಅವರ ಅತ್ಯುತ್ತಮ ಕರ್ಮದ ಫಲಗಳನ್ನು ಮತ್ತು ತನ್ನ ಅನುಗ್ರಹದಿಂದ ಇನಷ್ಟನ್ನು ದಯಪಾಲಿಸುವಂತಾಗಲಿಕ್ಕಾಗಿ (ಅವರು ಇದನ್ನೆಲ್ಲಾ ಮಾಡುತ್ತಾರೆ). ಅಲ್ಲಾಹನು ತಾನಿಚ್ಛಿಸಿದವರಿಗೆ ಅಪರಿಮಿತವಾಗಿ ನೀಡುತ್ತಾನೆ.” (ಅನ್ನೂರ್: 37-38)
ಮೇಲಿನ ಕುರ್ಆನ್ ಸೂಕ್ತದಲ್ಲಿ ನ್ಯಾಯಯುತವಾದ ವ್ಯಾಪಾರ ಮಾಡುವವರಿಗೆ ಮತ್ತು ನಿಷ್ಠೆಯಿಂದ ವ್ಯಾಪಾರ ಮಾಡುವವರಿಗೆ ಅಲ್ಲಾಹನು ನೀಡುವ ಅಪರಿಮಿತ ಅನುಗ್ರಹದ ಬಗ್ಗೆಯೂ ವಿವರಿಸಲಾಗಿದೆ.
ವಸ್ತುಗಳನ್ನು ಪರಸ್ಪರಕೊಳ್ಳುವಿಕೆ, ಮಾರುವಿಕೆ, ಮಿನಿಮಯವನ್ನು ವ್ಯಾಪಾರ, ವ್ಯವಹಾರ ಎಂದು ಕರೆಯುತ್ತೇವೆ. ಅದೇ ರೀತಿ ವ್ಯಾಪಾರ ವಹಿವಾಟು ನಡೆಸುವ ಸ್ಥಳವನ್ನು ಮಾರುಕಟ್ಟೆ ಎಂತಲೂ ಕರೆಯುತ್ತೇವೆ. ಇಂಗ್ಲಿಷ್ನಲ್ಲಿ ಟ್ರೇಡ್, ಬಿಸಿನೆಸ್ ಎಂದು ಕರೆಯುತ್ತೇವೆ. ಅರಬಿಕ್ನಲ್ಲಿ ಬುಯಾಅï ಎಂದು ಕರೆಯುತ್ತೇವೆ. ಸರಕು, ಸೇವೆಗಳನ್ನು ಇತರ ಸರಕು, ಸೇವೆಗಳಿಗೆ ವಿನಿಮಯ ಮಾಡುವುದು ಮತ್ತು ಬೆಲೆಗೆ ಇವುಗಳನ್ನು ಮಾರುವುದು ವ್ಯಾಪಾರವೆನಿಸುತ್ತದೆ, ವ್ಯಾಪಾರ ದಿಂದಲೇ ಒಂದು ದೇಶಕ್ಕೆ ಆದಾಯ ಸಿಗುತ್ತದೆ. ವ್ಯಾಪಾರದಿಂದ ದೇಶ ಬೆಳೆಯುತ್ತದೆ. ರಾಷ್ಟ್ರಗಳ ನಡುವೆ ಸಂಬಂಧಗಳು ಉಂಟಾಗುತ್ತವೆ. ಮಾನವ ಸಮಾಜ ಬೆಳೆಯುತ್ತಿದ್ದಂತೆಯೇ ವ್ಯಾಪಾರವೂ ಬೆಳೆಯಿತು. ಒಂದೊಂದು ಯುಗಕ್ಕೆ ಒಂದೊಂದು ವ್ಯಾಪಾರ ರೀತಿಯಿದ್ದವು. ವ್ಯಾಪಾರದಿಂದಾಗಿ ಸಾಂಸ್ಕ್ರತಿಕ, ವೈಜ್ಞಾನಿಕ ಬದಲಾವಣೆಗಳು ಆದುವು. ವ್ಯಾಪಾರ ಸಂಬಂಧದಿಂದಲೇ ವಿಶ್ವದಲ್ಲೆಲ್ಲಾ ಧರ್ಮಗಳು ಪರಸ್ಪರ ಪಸರಿಸಿಕೊಳ್ಳಲು ಮೂಲ ಕಾರಣ.
ಉದಾಹರಣೆಗೆ ಹೇಳುವುದಾದರೆ ಭಾರತದಲ್ಲಿ ಇಂದು ಪ್ರಚಾರದಲ್ಲಿರುವ ಆರ್ಯ(ಹಿಂದೂ) ಧರ್ಮವು ಮೂಲತ ಇರಾನ್ನಿಂದ ವಲಸೆ ಬಂದವರ ಧರ್ಮವಾಗಿದೆ. ಭಾರತ ಮತ್ತು ಅರಬರ ಸಂಬಂಧ, ಇಂಗ್ಲಿಷ್, ಡಚ್ಚರು, ಫ್ರೆಂಚರು ಮುಂತಾದವರ ಧರ್ಮಗಳು ವ್ಯಾಪಾರದ ಮೂಲಕ ಪರಿಚಿತವಾಗಿದೆ. ವ್ಯಾಪಾರವು ಮನುಷ್ಯನಿಗೆ ಅವನ ಬೆಳವಣಿಗೆಗೆ, ಸಾಂಸ್ಕ್ರತಿಕ ಪರಿಷ್ಕರಣೆಗೆ ಅತ್ಯಗತ್ಯವಾಗಿರುತ್ತದೆ. ತನ್ನ ಭೂಮಿಯಲ್ಲಿ ಉಲುಮೆ ಮಾಡಿ ಕೃಷಿ ಮಾಡಿ ವ್ಯಾಪಾರ ಮಾಡಬಹುದು ಅಥವಾ ಖರೀದಿಸಿ ವ್ಯಾಪಾರ ಮಾಡಬಹುದು. ಅಥವಾ ಅನ್ಯ ರಾಷ್ಟ್ರಗಳಿಂದ ಆಮದು-ರಫ್ತುಗಳ ಮೂಲಕ ವ್ಯಾಪಾರ ನಡೆಸಬಹುದು. ಮನುಷ್ಯನು ವ್ಯಾಪಾರದ ಮೇಲೆ ಆಶ್ರಿತನಾಗಿರುತ್ತಾನೆ. ಬಂಡವಾಳದ ಕೊರತೆಯಿಂದ ಅಥವಾ ನಷ್ಟದ ಹೆದರಿಕೆಯಿಂದ ಹಿಂಜರಿಯುತ್ತಾನೆ. ಕೆಲವರು ಸಾಲ ಸೋಲ ಮಾಡಿ, ಬಡ್ಡಿ ತಿಂದು ಕೆಲವೊಮ್ಮೆ ವಂಚನೆಯಿಂದಲಾದರೂ ವ್ಯಾಪಾರ ಮಾಡಿ ಸ್ವಲ್ಪ ಹಣ ಗಳಿಸಿ ಸುಖ ಪಡುತ್ತಾರೆ. ಕೆಲವರು ನಿಯತ್ತಿನಿಂದ ವ್ಯಾಪಾರ ಮಾಡಿ ಜನರಿಗೆ ಶುದ್ಧವಾದ ವಸ್ತುಗಳನ್ನೇ ನೀಡಿ ವಿನಿಮಯ ಮಾಡಿಕೊಳ್ಳುವುದಲ್ಲದೆ ತಮಗೆ ಸಿಕ್ಕಿದ ಲಾಭದಂಶವನ್ನು ಬಡವರಿಗೂ ದರಿದ್ರರಿಗೂ ದಾನ-ಧರ್ಮವನ್ನು ಮಾಡಿ ಉತ್ತಮ ವ್ಯಾಪಾರಿಗಳಾಗಿ ಬದುಕುತ್ತಾರೆ. ಇಂತಹ ಜನರು ಸಮಾಜದಲ್ಲಿ ವಿರಳವಾಗಿರುತ್ತಾರೆ.
ಎಲ್ಲಾ ಧರ್ಮ ಸಿದ್ಧಾಂತ ಮತ್ತು ನಾಗರಿಕತೆಯು ವ್ಯಾಪಾರವನ್ನು ಪ್ರೋತ್ಸಾಹಿಸಿದೆ. ವೈದಿಕ ಯುಗದಲ್ಲಿ ಕೃಷಿ, ಲೋಹ ಮತ್ತು ಸರಕು ಉತ್ಪಾದನೆ ಜೊತೆಗೆ ವ್ಯಾಪಾರವು ಬಹಳವಾಗಿ ಬೆಳೆಯಿತು. ಪ್ರವಾದಿ(ಸ)ರ ಕಾಲದಲ್ಲಿ ರೋಮ್, ಸಿರಿಯಾ, ಪೇಷ್ರ್ಯ (ಇರಾನ್), ಸಿಲೋನ್ (ಶ್ರೀಲಂಕ) ಮತ್ತು ಹಿಂದ್ (ಸಿಂದ್ ಪ್ರಾಂತ್ಯ)ಗಳಲ್ಲಿ ದೊಡ್ಡ ಮಟ್ಟದಲ್ಲಿ ವ್ಯಾಪಾರ ಸಂಬಂಧ ಬೆಳೆದಿದ್ದವು. ಖರ್ಜೂರ ಮತ್ತು ಸುಗಂಧ ದ್ರವ್ಯಗಳ ಬದಲಿಗೆ ಭಾರತದಿಂದ ಕಾಳು ಮೆಣಸು, ಏಲಕ್ಕಿ, ಚಿನ್ನ, ಗೋಧಿ ಅರಬ್ ದೇಶದ ಕಡೆಗೆ ರವಾನೆಯಾಗುತ್ತಿದ್ದವು.
ಹಿಂದೂ ಧರ್ಮದಲ್ಲಿ ವ್ಯಾಪಾರ ಮಾಡುವ ಜನರನ್ನು ವೈಶ್ಯರು ಎಂದು ಕರೆಯಲಾಗುತ್ತದೆ. ಹಿಂದಿನ ಕಾಲದ ಜೀವನ ಪದ್ಧತಿಯಂತೆ ವೈಶ್ಯರು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುತ್ತಾ ವ್ಯಾಪಾರ ಮಾಡುತ್ತಿದ್ದರು. ಅವರು ವ್ಯಾ ಪಾರಿಗಳಾಗಿದ್ದರು. (ಆದರೆ ಇಂದು ಅವರನ್ನು ಒಂದು ಜಾತಿಯಾಗಿ ಪರಿಗಣಿಸಿರುವುದು ಖೇದಕರ) ಭಗವತ್ಗೀತೆಯಲ್ಲಿ ಈ ರೀತಿ ವಿವರಿಸಲಾಗಿದೆ.” ಕೃಷಿ ಗೋ ರಕ್ಷ್ಯ ವಾಣಿಜ್ಯಂ ವೈಶ್ಯ ಕರ್ಮಂ ಸ್ವಭಾವಜಮ್!”
(ಅಧ್ಯಾಯ 18: 44)
ಬೇಸಾಯ, ಅಕಳು ಸಾಕಣೆ ಮತ್ತು ವ್ಯಾಪಾರ ವೈಶ್ಯರ ಸ್ವಭಾವ ಸಹಜವಾದ ಕರ್ಮ ಎನ್ನಲಾಗಿದೆ. ಅದೇ ರೀತಿ ಪ್ರವಾದಿ(ಸ)ರ ಕಾಲದಲ್ಲಿ ಹ. ಅಬೂಬಕ್ಕರ್(ರ), ಹ. ಉಮರ್(ರ), ಹ. ಉಸ್ಮಾನ್(ರ), ಹ. ಅಬ್ಬಾಸ್(ರ) ಮೊದಲಾದ ಸಹಚರರು ದೊಡ್ಡ ವ್ಯಾಪಾರಿಗಳಾಗಿದ್ದರು. ಇವಿಷ್ಟು ವಿಷಯಗಳಿಂದ ಮನುಷ್ಯನ ಬೆಳವಣಿಗೆಯ ಉದ್ದಕ್ಕೂ ವ್ಯಾಪಾರ, ವಹಿವಾಟು, ಕ್ರಯ ವಿಕ್ರಯಗಳು, ವಿನಿಮಯಗಳು, ಮಾರುಕಟ್ಟೆಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿತ್ತೆಂದು ತಿಳಿಯುತ್ತದೆ. ಆದರೆ ಇತಿಹಾಸ ಹಾಗೂ ವರ್ತಮಾನದಲ್ಲಿ ನಡೆಯುತ್ತಿರುವ ಹೆಚ್ಚಿನ ವ್ಯಾಪಾರಗಳು, ನೀತಿ ನಿಯಮವನ್ನು ಪಾಲಿಸದವುಗಳಾಗಿವೆ. ಸರಕಾರ ಅಥವಾ ಧರ್ಮ ರೂಪಿಸಿದ ಮೇರೆಗಳನ್ನು ಅವು ಮೀರಿವೆ. ಗುಣಮಟ್ಟವನ್ನು ವಿಶ್ವಾಸವನ್ನು ಕಳೆದುಕೊಂಡಿವೆ. ವಂಚನೆಯಿಂದ ಕೂಡಿದವುಗಳಾಗಿವೆ. ಕೆಮಿಕಲ್ ಮಿಶ್ರಿತ ಹಣ್ಣು ಹಂಪಲುಗಳು, ತರಕಾರಿಗಳು ಕಲಬೆರಕೆಯಿಂದ ಕೂಡಿದ ಆಹಾರ ಧಾನ್ಯಗಳು, ಸಾಮಾನ್ಯ ಗುಣ ಮಟ್ಟವನ್ನು ಹೊಂದಿರದ ಜನರ ನಿತ್ತ್ಯೋಪಯೋಗಿ ವಸ್ತುಗಳು, ಸರಕುಗಳು ಇಂದು ವ್ಯಾಪಾರದಲ್ಲಿ ಬೆರೆತು ಹೋಗಿವೆ. ಒಳ್ಳೆಯ ಉದ್ದೇಶದಿಂದ ವ್ಯಾಪಾರಕ್ಕೆ ಇಳಿದವರು ಹಣದ ಅತಿಯಾದ ಬಯಕೆಯಿಂದ ಅನ್ಯಾಯಕ್ಕೂ ವಂಚನೆಗೂ ಕೈ ಹಾಕಿ ತಮ್ಮನ್ನು ತಾವು ಮರೆತುಕೊಳ್ಳುತ್ತಾರೆ. ದಿನಸಿ ಅಂಗಡಿಗಳು, ಕೃಷಿ ಸ್ಥಳಗಳು, ವಾಣಿಜ್ಯ ಕೇಂದ್ರಗಳು, ಮಾರುಕಟ್ಟೆಗಳು ಅಥವಾ ಇಂದಿನ ಯುಗದ ಆನ್ಲೈನ್ ಮಾರುಕಟ್ಟೆಗಳಾಗಿರಲಿವೆ. ಎಲ್ಲವೂ ಕಲುಷಿತಗೊಂಡಿದೆ. ಬೈಬಲ್ ಹೇಳುತ್ತದೆ, “ನಾವು ಲೋಭದ ವಿರುದ್ಧ ನಮ್ಮನ್ನು ಕಾಪಾಡಿ ಕೊಳ್ಳಬೇಕು.” (ಲೋಕ 12: 15)
ಇಸ್ಲಾಮ್ ವ್ಯಾಪಾರಕ್ಕೆ ಹೆಚ್ಚಿನ ಮಹತ್ವ ಕೊಡುತ್ತದೆ. ಮತ್ತು ಒಬ್ಬ ವ್ಯಕ್ತಿ ವ್ಯಾಪಾರ ಹೇಗೆ ಮಾಡಬೇಕೆಂದು ಸಹ ಸ್ಪಷ್ಟವಾಗಿ ವಿವರಿಸುತ್ತದೆ. ಕುರ್ಆನಿನಲ್ಲೂ, ಪ್ರವಾದಿ ವಚನದಲ್ಲೂ ವ್ಯಾಪಾರಕ್ಕೆ ನೀತಿ ನಿಯಮಗಳನ್ನು ಮಾಡಲಾಗಿದೆ. ಇಸ್ಲಾಮ್ ಹೇಳಿಕೊಟ್ಟ ವ್ಯಾಪಾರದ ನೀತಿಗಳು ಕೇವಲ ಮುಸ್ಲಿಮ್ ವ್ಯಾಪಾರಿಗಳಿಗೆ ಸಂಬಂಧಪಟ್ಟವುಗಳೆಂಬ ಭಾವನೆಗಳಿದ್ದರೆ ಅದು ತಪ್ಪಾಗಿದೆ. ಕುರ್ಆನ್ ಮತ್ತು ಪ್ರವಾದಿ(ಸ) ಹೇಳಿಕೊಟ್ಟ ವ್ಯಾಪಾರದ ನಿಯಮಗಳು ಸಮಾಜದ ಎಲ್ಲಾ ಜನರಿಗೆ ಅನ್ವಯಿಸುವುದು.
ವ್ಯಾಪಾರದಲ್ಲಿ ಪ್ರಾಮಾಣಿಕತೆಯಿರಬೇಕು. ಪ್ರವಾದಿ(ಸ) ಹೇಳಿರುವರು, ಹೆಚ್ಚು ಉತ್ತಮ ಮತ್ತು ಶುದ್ಧವಾದದ್ದು ತನ್ನ ಕೈಯ ಸಂಪಾದನೆ ಮತ್ತು ಪ್ರಾಮಾಣಿಕ ವ್ಯಾಪಾರವಾಗಿದೆ (ಮಿಶ್ಕಾತ್).
“ಸತ್ಯಸಂಧ ಹಾಗೂ ಪ್ರಾಮಾಣಿಕ ವ್ಯಾಪಾರಿಯು ಪ್ರವಾದಿಗಳ, ಸತ್ಯಸಂಧರ ಮತ್ತು ಹುತಾತ್ಮರ ಜೊತೆಯಲ್ಲಿರುವನು” (ತಿರ್ಮಿದಿ).
ವ್ಯಾಪಾರ, ವ್ಯವಸಾಯ ಅಥವಾ ವ್ಯವಹಾರ ಮಾಡುವಾಗ ತಾನು ಸಾಮೂಹಿಕ ಬಾಧ್ಯತೆಯನ್ನು ಮಾಡುತ್ತಿರುವೆನೆಂದು ಸಂಕಲ್ಪಿಸಬೇಕು. ವ್ಯಾಪಾರದಲ್ಲಿ ದುರಾ ಲೋಚನೆ ಮತ್ತು ಅತ್ಯಾಸೆ ಇರಬಾರದು. ವ್ಯಾಪಾರಿ ಅಥವಾ ಮಾರಾಟಗಾರನೆಂದರೆ ಜನರಿಗೆ ಅಗತ್ಯ ವಸ್ತುಗಳನ್ನು, ಅವರ ಬೇಡಿಕೆಗಳನ್ನು ಪೂರೈಸುವವನಾಗಿದ್ದಾನೆ. ಅವನು ಸುಳ್ಳುಗಳ ಮೂಲಕ ವ್ಯಾಪಾರ ಮಾಡುವುದಾದರೆ ಅದರ ಹೊರೆಯನ್ನು ಸಮಾಜ ಹೊರಬೇಕಾಗುತ್ತದೆ. ಕಷ್ಟವನ್ನು ಎದುರಿಸಬೇಕಾಗುತ್ತದೆ.
ಪ್ರವಾದಿ(ಸ) ಹೇಳಿರುವರು, “ವ್ಯಾಪಾರದಲ್ಲಿ ಹೆಚ್ಚು ಆಣೆ ಹಾಕುವುದನ್ನು ವರ್ಜಿಸಿರಿ. ಇದು ತಾತ್ಕಾಲಿಕವಾಗಿ ವ್ಯಾಪಾರವನ್ನು ಹೆಚ್ಚಿಸಬಹುದು. ಆದರೆ ಕೊನೆಯಲ್ಲಿ ಸಮೃದ್ಧಿ ಹೊರಟು ಹೋಗುವುದು” (ಮುಸ್ಲಿಮ್).
ಯಾವುದೇ ವಸ್ತುವನ್ನು ಮಾರುವಾಗ ಅದರಲ್ಲಿರುವ ದೋಷ ಗಳನ್ನು ತಿಳಿಸದೆ ಮಾರಾಟ ಮಾಡುವುದು ಓರ್ವ ವ್ಯಾಪಾರಿಗೆ ಧರ್ಮ ಸಮ್ಮತವಲ್ಲ. ಆ ದೋಷವನ್ನು ತಿಳಿದಿರುವವನು ಅದನ್ನು ಗಿರಾಕಿಗಳಿಗೆ ತಿಳಿಸದಿರುವುದು ಧರ್ಮಸಮ್ಮತವಲ್ಲ. “ಕ್ರಯ ವಿಕ್ರಯದ ವೇಳೆ ಮೃದು ನೀತಿಯನ್ನು ಕೈಗೊಳ್ಳಬೇಕು” ಎಂದು ಪ್ರವಾದಿ(ಸ) ಹೇಳಿದ್ದಾರೆ.
ವ್ಯಾಪಾರದಲ್ಲಿ ಮುಳುಗಿ ಹೋಗಿರುವ ಹೆಚ್ಚಿನ ಜನರು ಅತ್ಯಾಸೆ ಮತ್ತು ದುರಾಸೆಯಿಂದ ಕಾಪಟ್ಯಕ್ಕೆ ಇಳಿದಿದ್ದಾರೆ. ಅವರ ಕುರಿತು ಪ್ರವಾದಿ(ಸ) ಈ ರೀತಿ ಖೇದ ವ್ಯಕ್ತ ಪಡಿಸಿದ್ದಾರೆ, “ಜನರ ಮೇಲೆ ಒಂದು ಕಾಲ ಬರಲಿದೆ. ಆಗ ತಾವು ಸಂಪಾದಿಸಿದ ಸೊತ್ತು ಧರ್ಮ ಸಮ್ಮತವೊ ಧರ್ಮ ಬಾಹಿರವೋ ಎಂಬ ಚಿಂತೆಯೂ ಅವರಿಗಿರದು.” (ಬುಖಾರಿ)
ಮಾರುವುದು, ಖರೀದಿಸುವುದು, ವ್ಯಾಪಾರದ ಸರಕು, ವಸ್ತು, ಮಾತುಕತೆಗಳು, ಬೆಲೆ, ವಸ್ತುವಿನ ಅಥವಾ ಸರಕುಗಳ ಒಡೆತನದ ಹಕ್ಕು, ಇನ್ನೊಬ್ಬರ ವಸ್ತು ವಾದರೆ ಅದನ್ನು ಮಾರುವ ಅನುಮತಿ, ವ್ಯವಹಾರ ಜ್ಞಾನವಿರುವುದು ಇವು ವ್ಯಾಪಾರದ ಪ್ರಮುಖದ ಅಂಗಗಳಾಗಿವೆ.
ವ್ಯಾಪಾರಿಗಳು ಒಮ್ಮೆ ವಂಚನೆಯ ಮಾರ್ಗವನ್ನು ಕಲಿತುಕೊಂಡರೆ ಮತ್ತೆ ಅದನ್ನು ತೊರೆಯಲು ಅವರಿಂದ ಸಾಧ್ಯವಾಗುವುದಿಲ್ಲ. ಪ್ರವಾದಿ(ಸ)ರು ಕೆಲವೊಂದು ನಿಷಿದ್ಧಾಂಶಗಳನ್ನು ನಮಗೆ ಕಲಿಸಿದ್ದಾರೆ.
ತನ್ನ ಸಹೋದರನ ವ್ಯಾಪಾರದ ಮೇಲೆ ವ್ಯಾಪಾರ ಮಾಡುವುದು” (ಬುಖಾರಿ).
ಗರ್ಭದಲ್ಲಿರುವ ಪ್ರಾಣಿಯ ಮರಿಯನ್ನು ಮಾರುವುದು.
ಒಣ ಹಣ್ಣಿನ ಬದಲಿಗೆ ಹಸಿ ಹಣ್ಣನ್ನು ನೀಡುವುದು.
ಹಣ್ಣುಗಳು ತಿನ್ನಲು ಯೋಗ್ಯವಾಗುವ ವರೆಗೆ ಅದನ್ನು ಮಾರಾಟ ಮಾಡುವುದು.
ಭೂಮಿಯಿಂದ ಬರುವ ವರಮಾನದ ನಿಶ್ಚಿತ ಪಾಲು ಕೊಡಬೇಕೆಂಬ ಶರತ್ತಿನೊಂದಿಗೆ ಭೂಮಿ ಗೇಣಿಗೆ ನೀಡುವುದು.
ಧಾನ್ಯ, ಹಣ್ಣು, ತರಕಾರಿ ಇತ್ಯಾದಿಗಳು ಬಲಿಯುವುದಕ್ಕಿಂತ ಮುಂಚೆ ಮಾರುವುದು.
ಸರಕನ್ನು ತೂಗುವಾಗ ಕಲ್ಲು ಅಥವಾ ಗಟ್ಟಿಯಾದ ವಸ್ತು ಇಡುವುದು.
ಮದ್ಯ, ಶವ, ಹಂದಿ ಮಾಂಸ.
ವಸ್ತು ಪ್ರತ್ಯಕ್ಷವಾಗಿ ಇಲ್ಲದಿರುವಾಗ ವಿನಿಮಯ ನಡೆಸುವುದು.
ಹಾಲು ಹಸುವಿನ ಕೆಚ್ಚಲಲ್ಲಿ ರುವಾಗ ಮಾರುವುದು.
ಧಾನ್ಯಗಳಲ್ಲಿ ಕಲಬೆರಕೆ ಮಾಡುವುದು.
ಬಡ್ಡಿ ವ್ಯಾಪಾರವು ನಿಷಿದ್ಧವಾಗಿದೆ. (ನಾಣ್ಯದ ಬದಲಿಗೆ ನಾಣ್ಯವನ್ನು ಮಾರುವುದು).
ಹಾಲಿಗೆ ನೀರು ಸೇರಿಸುವುದನ್ನು ಪ್ರವಾದಿ(ಸ) ತಡೆದಿದ್ದಾರೆ.
ಅದೇ ರೀತಿ ಅಗತ್ಯ ವಸ್ತುಗಳನ್ನು ತಡೆದಿರಿಸುವವನು ಮಹಾದುಷ್ಟ! ವಸ್ತುಗಳ ಬೆಲೆ ಇಳಿಮುಖವಾಗುವ ಅವನಿಗೆ ದುಃಖವಾಗುತ್ತದೆ ಮತ್ತು ಬೆಲೆಯೇರುವಾಗ ಅವನು ಸಂತೋಷ ಪಡುತ್ತಾನೆ (ಮಿಷ್ಕಾತ್).
ವ್ಯಾಪಾರ ಮಾಡುವಾಗ ಎಲ್ಲವೂ ಪ್ರಾಮಾಣಿಕವಾಗಿರಬೇಕು. ಮಾರುವುದು ಮತ್ತು ಖರೀದಿಸುವುದು. ಪ್ರವಾದಿಯವರು(ಸ) ಧಾನ್ಯವನ್ನು ಅಳೆಯದೆ ತೂಕ ಮಾಡದೆ ಖರೀದಿಸಿ ತಮ್ಮ ವಶಕ್ಕೆ ತೆಗೆದು ಮನೆಗೆ ಒಯ್ಯುವವರನ್ನು ಮಾರುತ್ತಿದ್ದವರನ್ನು ಶಿಕ್ಷಿಸಿದ್ದಾರೆ.
ಬಡ್ಡಿ ವ್ಯಾಪಾರವು ಅತ್ಯಂತ ಕೆಟ್ಟ ವ್ಯಾಪಾರವಾಗಿದೆ. ಕುರ್ಆನ್ ಈ ರೀತಿ ಹೇಳಿದೆ, “ಅಲ್ಲಾಹನು ವ್ಯಾಪಾರವನ್ನು ಧರ್ಮ ಸಮ್ಮತಗೊಳಿಸಿರುತ್ತಾನೆ ಮತ್ತು ಬಡ್ಡಿಯನ್ನು ನಿಷಿದ್ಧಗೊಳಿಸಿರುತ್ತಾನೆ.” (ಅಲ್ಬಕರ: 275)
ಮೇಲಿನ ಸೂಕ್ತದಲ್ಲಿ ವ್ಯಾಪಾರಿಗಳಿಗೆ ಜಾಗೃತಿಯನ್ನು ನೀಡಲಾಗಿದೆ. ಮತ್ತೊಂದು ವಿಷಯವೇನೆಂದರೆ ದೇವ ಸ್ಮರಣೆ. ಹೆಚ್ಚಿನ ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಮುಳುಗಿ ಹೋದಾಗ ಅಲ್ಲಾಹನ ಸ್ಮರಣೆಯನ್ನು ಮರೆತು ಬಿಡುತ್ತಾರೆ. ಇದರಿಂದಾಗಿ ಅವರು ಇನ್ನಷ್ಟು ವಂಚನೆಯ ಕೂಪಕ್ಕೆ ಬೀಳುತ್ತಾರೆ. ವ್ಯಾಪಾರದ ಜೊತೆಗೆ ದೇವ ಸ್ಮರಣೆಯೂ ಕ್ರಮ ಪ್ರಕಾರವಾಗಿದ್ದರೆ ವ್ಯಾಪಾರಿ ಮೇರೆ ಮೀರುವುದಿಲ್ಲ. ಅದಕ್ಕೆ ಅವನ ಅಂತರಾತ್ಮ ಸಮ್ಮತಿಸುವುದಿಲ್ಲ. ನಮಾಝ್, ಉಪವಾಸ, ದಾನ-ಧರ್ಮ, ಹಿತ ನುಡಿ ಇವೆಲ್ಲವು ಅವನನ್ನು ನ್ಯೂನ್ಯತೆಯಿಲ್ಲದ ವ್ಯಾಪಾರಕ್ಕಾಗಿ ಒತ್ತು ನೀಡುತ್ತದೆ. ಮತ್ತು ಇಂತವರಿಗೆ ಅವರ ವ್ಯಾಪಾರದಲ್ಲಿ ಹೆಚ್ಚಿನ ಅನುಗ್ರಹವನ್ನು ಅಲ್ಲಾಹನು ನೀಡುತ್ತಾನೆ.
ವ್ಯಾಪಾರದಲ್ಲಿ ಪ್ರಾಮಾಣಿಕತೆ, ಸತ್ಯ ಸಂಧತೆ ಇರಬೇಕು. ವ್ಯಾಪಾರವು ಜನರಿಗೆ ಮಾಡುವ ಒಂದು ಸೇವೆ ಎಂಬ ರೂಪದಲ್ಲಿ ನಿಮ್ಮ ಸಂಕಲ್ಪವಿರಲಿ. ಗುಣಮಟ್ಟವಿರಲಿ. ಕಡಿಮೆ ಗುಣಮಟ್ಟದ ಸಿಮೆಂಟ್ ಇಟ್ಟಿಗೆ ಗಳಿಂದಾಗಿ ಕಟ್ಟಡ ಉರುಳಬಹುದು. ಸಾವು ನೋವು ಸಂಭವಿಸಬಹುದು. ಕಲಬೆರಕೆಯೆಂಬ ಆಹಾರ ಧಾನ್ಯಗಳಿಂದ ದೇಹದ ಆರೋಗ್ಯ ಕೆಟ್ಟು ಹೋಗಬಹುದು. ಕೆಮಿಕಲ್ ಪೂರಿತ ಹಣ್ಣು ಹಂಪಲು ತರಕಾರಿಗಳಿಂದ ಕ್ಯಾನ್ಸರ್ ನಂತಹ ಮಹಮಾರಿ ರೋಗಗಳು ಬರಬಹುದು. ದುರ್ಬಲ ಬಿಡಿಭಾಗಗಳನ್ನು ಬಳಸಿ ವಾಹನ ನಿರ್ಮಿಸುವುದರಿಂದ ಅಪಘಾತ ಅನಾಹುತ ಸಂಭವಿಸಬಹುದು. ವ್ಯಾಪಾರಿಗಳಿಗೆ ಒಂದಿಷ್ಟು ಲಾಭ ಹೆಚ್ಚು ಸಿಗಬಹುದು. ಆದರೆ ಕಷ್ಟ ನಷ್ಟ ಅನುಭವಿಸಿದ ಖರೀದಿದಾರರ ನೋವುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದರ ಶಿಕ್ಷೆಯನ್ನು ದೇವನು ಪರಲೋಕದಲ್ಲಿ ನೀಡದೆ ಇರಲಾರ. ಆದ್ದರಿಂದ ವ್ಯಾಪಾರದಲ್ಲಿ ಲೋಭ ದುರಾಸೆಯನ್ನು ಬಿಟ್ಟು ಪ್ರಾಮಾಣಿಕತೆ ಯಿಂದ ವ್ಯಾಪಾರ ನಡೆಸಬೇಕು. ಹಾಗಿದ್ದರೆ ದೇವನ ಕರುಣೆ ಸದಾ ಒಲಿಯಬಹುದು.
IslamKannada News Portal