ಪ್ರಶ್ನೆ: ಈದುಲ್ ಅಝ್ಹಾದ ವೇಳೆ ಮಾಡುವ ದಿಬ್ಹ್ನ ಮಾಂಸವನ್ನು ಬೇರೆ ಧರ್ಮದವರಿಗೆ ನೀಡಬಹುದೇ? ಇದಕ್ಕೆ ಇಸ್ಲಾಂ ಏನು ಹೇಳುತ್ತದೆ?
ಉತ್ತರ: ಈದುಲ್ ಅಝ್ಹಾದ ಭಾಗವಾಗಿ ಮಾಡುವ ಬಲಿ ಕರ್ಮದ ಮಾಂಸವನ್ನು ಮುಸ್ಲಿಮೇತರರಿಗೂ ನೀಡುವುದು ಅನುವದನೀಯವಾಗಿದೆ ಎಂದು ಹೆಚ್ಚಿನ ವಿದ್ವಾಂಸರ ಅಭಿಪ್ರಾಯವಾಗಿದೆ. ಈ ಅಭಿಪ್ರಾಯ ಪ್ರಬಲವೂ ಆಗಿದೆ. ಮುಸ್ಲಿಮೇತರರಿಗೆ ಬಲಿ ಮಾಂಸವನ್ನು ನೀಡಬಾರದು ಎಂದು ಹೇಳುವ ಕುರ್ಆನ್ ವಾಕ್ಯಗಳು ಅಥವಾ ಪ್ರವಾದಿ ವಚನಗಳು ಇಲ್ಲ.
ಆಧಾರಗಳು ಸ್ಪಷ್ಟವಾಗಿ ನಿಷೇಧಿಸದ ಒಂದು ಕಾರ್ಯವು ಇಸ್ಲಾಮ್ನಲ್ಲಿ ಮೂಲದಲ್ಲಿ ಅನುವದನೀಯವಾಗಿದೆ. ಒಂದು ಕಾರ್ಯವನ್ನು ಮಾಡಬಾರದು ಅಥವಾ ಅದು ನಿಷಿದ್ಧವೆಂದು ಹೇಳಲು ಇಸ್ಲಾಮೀ ಕಾನೂನಿನ ಪ್ರಕಾರ ಸ್ಪಷ್ಟವಾದ ಪುರಾವೆಗಳು ಬೇಕು. ಅಬ್ದುಲ್ಲಾ ಬಿನ್ ಉಮರ್ ಮುಂತಾದವರ ಕಾರ್ಯಕ್ರಮಗಳೂ ಶೈಖ್ ಇಬ್ನು ಬಾಝ್ ಮುಂತಾದ ವಿದ್ವಾಂಸರ ನಿಲುವುಗಳೂ ಇದರ ಪರವಾಗಿದೆ. ನೆರೆಕರೆಯವರು, ಕುಟುಂಬ ಸಂಬಂಧಿಕರು, ಆಪ್ತರು, ದರಿದ್ರರು ಮುಂತಾದವರಿಗೆ ವಿಶೇಷತಃ ಬಲಿ ಮಾಂಸವನ್ನು ನೀಡಬಹುದಾಗಿದೆ.
ಯುದ್ಧ ಶತ್ರುಗಳಲ್ಲದವರಿಗೆ ಒಳಿತು (ಬಿರ್ರ್) ಮಾಡುವುದು ತಡೆಯಲ್ಪಟ್ಟ ಕಾರ್ಯವಲ್ಲ ಎಂಬ ಕುರ್ಆನ್ ವಚನವನ್ನು ವಿದ್ವಾಂಸರು ಒಂದನೇ ಪುರಾವೆಯಾಗಿ ಉದ್ಧರಿಸುತ್ತಾರೆ. “ಧರ್ಮದ ವಿಷಯದಲ್ಲಿ ನಿಮ್ಮೊಡನೆ ಯುದ್ಧ ಮಾಡಿರದ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರ ಹಾಕದವರೊಂದಿಗೆ ಸೌಜನ್ಯ ಹಾಗೂ ನ್ಯಾಯದೊಂದಿಗೆ ವರ್ತಿಸುವುದರಿಂದ ಅಲ್ಲಾಹನು ನಿಮ್ಮನ್ನು ತಡೆಯುವುದಿಲ್ಲ. ಅಲ್ಲಾಹನು ನ್ಯಾಯ ಪಾಲನೆ ಮಾಡುವವರನ್ನು ಪ್ರೀತಿಸುತ್ತಾನೆ.”(ಅಲ್ ಮುಮ್ರಹಿನ- 8)
ಬಲಿ ಮಾಂಸವನ್ನು ನೆರೆಕರೆಯವರು, ಆಪ್ತರು, ದರಿದ್ರರು ಆದ ಮುಸ್ಲಿಮೇತರರಿಗೆ ನೀಡುವುದು ಕುರ್ಆನ್ ಅಂಗೀಕರಿಸುವ ಒಳಿತು ಹಾಗೂ ಪುಣ್ಯ ಕಾರ್ಯಗಳಿಗೆ ಸೇರಿದೆ. ಪ್ರಮುಖ ತಾಬಿಈ ವಿದ್ವಾಂಸರಾದ ಮುಜಾಹಿದ್ ಉದ್ಧರಿಸಿದ್ದಾರೆ-
ಸಹಾಬಿಯಾದ ಅಬ್ದುಲ್ಲಾ ಬಿನ್ ಉಮರ್ ರ ಮನೆಯಲ್ಲಿ ಒಂದು ಆಡನ್ನು ಬಲಿ ನೀಡಲಾಯಿತು. ಇದನ್ನು ಕಂಡ ಅವರು ನೀವು ನೆರೆಕರೆಯವನಾದ ಯಹೂದಿಗೆ ನೀಡಿದ್ದೀರಾ?” ಎಂದು ವಿಚಾರಿಸಿದರು. ಬಳಿಕ ಅವರು ಹೇಳಿದರು, “ಪ್ರವಾದಿ(ಸ) ಹೇಳುವುದನ್ನು ನಾನು ಕೇಳಿದ್ದೇನೆ, ಪಿತ್ರಾರ್ಜಿತ ಸೊತ್ತಿನಲ್ಲಿ ನೆರೆಕರೆಯವನಿಗೆ ಹಕ್ಕು ನೀಡುವರೆಂದು ಭಾಸ ವಾಗುವಷ್ಟರ ಮಟ್ಟಿಗೆ ನೆರೆಕರೆಯವನ ವಿಷಯದಲ್ಲಿ ಜಿಬ್ರೀಲ್ ನನಗೆ ಉಪದೇಶ ನೀಡಿದರು” (ತಿರ್ಮಿದಿ, 1943). ಇದು ಪ್ರಬಲವಾದದ್ದಾಗಿದೆ ಎಂದು ಅಲ್ಬಾನಿ ದಾಖಲಿಸಿದ್ದಾರೆ.
ಮುಸ್ಲಿಮರು ದಿಬ್ಹ್ ಮಾಡಿದ ಮಾಂಸ ಹಾಗೂ ಐಚ್ಛಿಕ ದಾನವನ್ನು ಮುಸ್ಲಿಮೇತರರಿಗೆ ನೀಡಬಹುದು ಎಂಬುದಕ್ಕೆ ಈ ಘಟನೆಯು ಪುರಾವೆಯಾಗಿದೆ. ಬಹುದೇವಾರಾಧಕಿಯಾದ ತಾಯಿಗೆ ಹಣವನ್ನು ನೀಡಲು ಅಸ್ಮಾ ಬಿಂತ್ ಅಬೂಬಕರ್ ರೊಂದಿಗೆ ಪ್ರವಾದಿ(ಸ) ಆಜ್ಞಾಪಿಸಿದ್ದಾರೆ. (ಬುಖಾರಿ, 2946)
ಸಂಬಂಧಗಳನ್ನು ಜೋಡಿಸಲಿಕ್ಕಾಗಿ ಮುಸ್ಲಿಮೇತರರಿಗೆ ದಾನ ಮಾಡಬಹುದೆಂದು ಈ ಹದೀಸ್ ಸೂಚಿಸುತ್ತದೆ. ಯಹೂದಿ ಮಹಿಳೆಗೆ ಆಯಿಶಾ(ರ) ದಾನ ಮಾಡಿದ್ದನ್ನು ಹದೀಸ್ಗಳಲ್ಲಿ ಕಾಣಬಹುದಾಗಿದೆ. (ಮುಸ್ನದ್ ಅಹ್ಮದ್, 24815) ಇವೆಲ್ಲವೂ ಈ ವಿಷಯದಲ್ಲಿ ವಿದ್ವಾಂಸರು ಉದ್ಧರಿಸಿರುವ ಪುರಾವೆಗಳಾಗಿವೆ.
ಬಲಿ ಮಾಂಸವನ್ನು ಮುಸ್ಲಿಮೇತರರಿಗೆ ನೀಡಬಾರದು ಎಂದು ಇಮಾಮ್ ಶಾಫಿ ಅಭಿಪ್ರಾಯಪಟ್ಟಿದ್ದಾಗಿ ಮದ್ಹಬ್ನ ಗ್ರಂಥಗಳಲ್ಲಿ ಕಾಣಬಹುದಾಗಿದೆ. (ತುಹ್ಫ, ಹಾಶಿಯತ್ ಬಿನ್ ಕಾಸಿಂ)
ಈ ನಿಲುವಿಗೆ ಕುರ್ಆನ್ ಹಾಗೂ ಹದೀಸ್ಗಳಿಂದ ಪುರಾವೆಗಳನ್ನು ಉದ್ಧರಿಸಲಾಗಿಲ್ಲ. ಆದ್ದರಿಂದ ಈ ವಾದವು ಪ್ರಬಲವಲ್ಲ. ಅದೇ ವೇಳೆ, ಕಡ್ಡಾಯವಲ್ಲದ ದಾನವನ್ನು ಮುಸ್ಲಿಮೇತರರಿಗೆ ನೀಡಬಹುದೆಂದು ಇಮಾಮ್ ಶಾಫಿ ಅಭಿಪ್ರಾಯ ಪಟ್ಟಿದ್ದಾರೆ. ನಿರ್ಗತಿಕರಿಗೆ ಆಹಾರ ನೀಡುವವರನ್ನು ಅಲ್ಲಾಹನು ಪ್ರಶಂಸಿಸಿದ ಕುರ್ಆನ್ ವಚನವನ್ನು ಇಮಾಮ್ ಶಾಫಿ ಪುರಾವೆಯಾಗಿ ಉದ್ಧರಿಸಿದ್ದಾರೆ. (ಕಿತಾಬುಲ್ ಉಮ್ಮ್)
ಶಾಫಿ ಮದ್ಹಬ್ನ ಪ್ರಮುಖ ವಿದ್ವಾಂಸ ಇಮಾಮ್ ನವವಿ ಬಲಿ ಮಾಂಸವನ್ನು ಮುಸ್ಲಿಮೇತರರಿಗೆ ನೀಡಬಹುದೆಂದು ಸ್ಪಷ್ಟಪಡಿಸಿದ್ದಾರೆ. ಶಾಫಿ ಮದ್ಹಬ್ನ ಅಧಿಕೃತ ಕೃತಿಗಳ ಪೈಕಿ ಒಂದಾದ ಶರಹುಲ್ ಮುಹದ್ದಬ್ನಲ್ಲಿ ಹೀಗೆ ಕಾಣಬಹುದಾಗಿದೆ.
ಇಮಾಮ್ ಹಸನುಲ್ ಬಸ್ವರಿ, ಇಮಾಮ್ ಅಬೂ ಹನೀಫ ಮುಂತಾದವರು ಬಲಿಮಾಂಸವನ್ನು ಮುಸ್ಲಿಮೇತರರಿಗೆ ನೀಡಬಹುದೆಂದು ಹೇಳಿದ್ದಾರೆ. ಮೊದಲ ಆದ್ಯತೆಯು ಮುಸ್ಲಿಮರಿಗಾಗಿದೆ ಎಂದು ಇಮಾಮ್ ಮಾಲಿಕ್ರ ಅಭಿಪ್ರಾಯವಾಗಿದೆ. ಶಾಫಿ ಮದ್ಹಬ್ನಲ್ಲಿ ಪ್ರಸ್ತಾಪಿಸಬಹುದಾದಂತಹ ಅಭಿಪ್ರಾಯವನ್ನು ನಾನು ಕಂಡಿಲ್ಲ. ಆದರೆ ಶಾಫಿ ಮದ್ಹಬ್ನ ಎಲ್ಲಾ ಅಭಿಪ್ರಾಯಗಳನ್ನು ಮುಂದಿರಿಸಿ ಅವಲೋಕಿಸಿದರೆ ಐಚ್ಛಿಕವಾದ ಬಲಿ ಮಾಂಸವನ್ನು ಮುಸ್ಲಿಮೇತರರಿಗೆ ನೀಡುವುದು ಅನುವದನೀಯವಾಗಿದೆ ಎಂದು ತಿಳಿದು ಬರುತ್ತದೆ. ಹರಕೆ ಮುಂತಾದವುಗಳ ಮೂಲಕ ಕಡ್ಡಾಯವಾಗುವ ಬಲಿಮಾಂಸವನ್ನು ನೀಡಬಾರದು. (ಶರಹುಲ್ ಮುಅದ್ದಬ್ 8/316)
ಶಾಫಿ ಮದ್ಹಬ್ನಲ್ಲಿ ಈದುಲ್ ಅಝ್ಹಾದ ಬಲಿಯು ಕಡ್ಡಾಯ (ವಾಜಿಬ್) ಅಲ್ಲ. ಪ್ರಬಲವಾದ ಸುನ್ನತ್ ಮಾತ್ರವಾಗಿದೆ. ಆದ್ದರಿಂದ ಮುಸ್ಲಿಮೇತರರಿಗೂ ನೀಡಬಹುದಾಗಿದೆ ಎಂಬುದು ಇಮಾಮ್ ನವವಿಯ ನಿಲುವಾಗಿದೆ. ಬಲಿ ಮಾಂಸವು ಐಚ್ಛಿಕ ದಾನಕ್ಕೆ ಸೇರಿದ್ದಾಗಿದೆ. ನಿರ್ಗತಿಕರ ಆಹಾರ ಹಾಗೂ ಸಂಬಂಧಗಳನ್ನು ಸುದೃಢಗೊಳಿಸಲಿಕ್ಕಿರುವ ಮಾರ್ಗವಾಗಿ ಅದನ್ನು ಪರಿಗಣಿಸಬಹುದಾಗಿದೆ. ಆದ್ದರಿಂದ ಶ್ರೇಷ್ಠ ವಿದ್ವಾಂಸರಾದ ಇಬ್ನು ಕುದಾಮ, ಬಲಿಮಾಂಸವನ್ನು ಮುಸ್ಲಿಮೇತರರಿಗೆ ನೀಡಬಹುದು ಎಂದು ಹೇಳಿದ್ದಾರೆ. ಅದರಿಂದ ಸತ್ಯನಿಷೇಧಿಗೂ ತಿನ್ನಿಸುವುದು ಅನುವದನೀಯವಾಗಿದೆ. ಹಸನ್ ಅಬೂ ಗೌರ್ ಹಾಗೂ ಹನಫೀ ವಿದ್ವಾಂಸರು ಇದೇ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಕಾರಣ ಅದು ಐಚ್ಛಿಕ ದಾನವಾಗಿದೆ. ಇತರೆಲ್ಲಾ ಐಚ್ಛಿಕ ದಾನಗಳಂತೆ ಸಂರಕ್ಷಿತ ಪೌರನಿಗೂ ಖೈದಿಗೂ ಅದನ್ನು ನೀಡಬಹುದಾಗಿದೆ. (ಇಬ್ನು ಕುದಾಮ, ಅಲ್ ಮುಗ್ನಿ 21/482)
ಆಧುನಿಕ ಸಲಫಿ ವಿದ್ವಾಂಸರ ಪೈಕಿ ಪ್ರಮುಖರಾದ ಶೈಖ್ ಇಬ್ನು ಬಾಝ್ ಪ್ರಕಾರ, ಯುದ್ಧ ಶತ್ರುವಲ್ಲದ, ಮುಸ್ಲಿಮೇತರರು, ಶಾಂತಿ ಸಮಾಧಾನದಲ್ಲೂ ಪರಸ್ಪರ ಕರಾರಿನಲ್ಲೂ ಒಟ್ಟಾಗಿ ಜೀವಿಸುವವರು ಮುಂತಾದವರಿಗೆ ಬಲಿ ಮಾಂಸವನ್ನೂ ದಾನ-ಧರ್ಮಗಳನ್ನೂ ನೀಡಬಹುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. (ಮಜ್ಮೂಅï ಫತ್ವಾ ಇಬ್ನು ಬಾಝ್ 18/48) ಸೌದಿಯ ಲಜ್ನತುದ್ದಾಇಮದ ಫತ್ವಾ ಕೂಡಾ ಇದು ಅನುವದನೀಯ ಎಂದು ಹೇಳುತ್ತದೆ. ಪರಸ್ಪರ ಕರಾರಿನೊಂದಿಗೆ ಬದುಕುವ ಮುಸ್ಲಿಮೇತರರಿಗೂ ಕೈದಿಗಳಿಗೂ ಈದುಲ್ ಅಝ್ಹಾದ ಬಲಿಮಾಂಸವನ್ನು ನೀಡಬಹುದಾಗಿದೆ. ಅವರ ದಾರಿದ್ರ್ಯ, ಕುಟುಂಬ ಸಂಬಂಧ, ನೆರೆಹೊರೆ ಸಂಬಂಧ ಮುಂತಾದ ಕಾರಣಗಳಿಂದಲೂ ಮನಸ್ಸಿನಲ್ಲಿ ಪ್ರೀತಿ ಉಂಟಾಗಲೂ ಮುಸ್ಲಿಮೇತರರಿಗೆ ಬಲಿಮಾಂಸವನ್ನು ನೀಡುವುದು ಅನುವದನೀಯವಾಗಿದೆ. ಅಲ್ ಮುಮ್ತಹಿನ ಅಧ್ಯಾಯದ ಎಂಟನೇ ಸೂಕ್ತದ ತಾತ್ಪರ್ಯದಲ್ಲಿ ಇದು ಒಳಗೊಂಡಿದೆ (ಫತ್ವಾ ಸಂಖ್ಯೆ 11/424) ಮುಸ್ಲಿಮರನ್ನು ಕೊಲ್ಲುವ. ಆದರೆ, ಯುದ್ಧ ಶತ್ರುಗಳಲ್ಲದ ಮುಸ್ಲಿಮೇತರರಿಗೂ ಬಲಿಮಾಂಸವನ್ನು ನೀಡಬಹುದೆಂದು ಸ್ವಾಲಿಹ್ ಬಿನ್ ಉಸೈಮಿನ್ ಸ್ಪಷ್ಟಪಡಿಸಿದ್ದಾರೆ. (ಫತ್ವಾ ಇಬ್ನು ಉಸೈಮೀನ್)
ದರಿದ್ರರಿಗೂ ನಿರ್ಗತಿಕರಿಗೂ ಇರುವ ಐಚ್ಛಿಕ ದಾನಗಳ ಆಹಾರ ವಿತರಣೆ, ಇಂತಹ ಸಹಾಯಗಳು, ನೆರೆಕರೆ ಸಂಬಂಧ ಮುಂತಾದವುಗಳಲ್ಲಿ ಧಾರ್ಮಿಕವಾದ ತಾರತಮ್ಯವನ್ನು ಕುರ್ಆನ್ ವಚನಗಳಲ್ಲಿ ಕಾಣಲು ಸಾಧ್ಯವಿಲ್ಲ. ವಿವಿಧ ಧರ್ಮೀಯರು ಪರಸ್ಪರ ಆಸುಪಾಸಿನಲ್ಲಿ ಬದುಕುತ್ತಿರುವ ಸಮಾಜದಲ್ಲಿ ಮಾಂಸ ವಿತರಣೆ ಮುಂತಾದ ವಿಚಾರದಲ್ಲಿ ಮನಸ್ಸಿಗೆ ನೋವನ್ನುಂಟು ಮಾಡುವ ರೀತಿಯಲ್ಲಿ ಬೇಧಭಾವ ತೋರುವುದು ಇಸ್ಲಾಮೀ ತತ್ವಗಳಿಗೆ ವಿರುದ್ಧವಾದ ಕಾರ್ಯವಾಗಿದೆ. ಇದು ಇಸ್ಲಾಮೀ ಸಮಾಜದ ಉತ್ತಮವಾದ ಬೇಡಿಕೆಗಳಿಗೆ ಕಂಟಕವಾಗುತ್ತದೆ. ಈ ಅರ್ಥದಲ್ಲಿ ಐಚ್ಛಿಕ ದಾನವೆಂಬ ನೆಲೆಯಲ್ಲಿ ಈದುಲ್ ಅಝ್ಹಾದ ಬಲಿ ಮಾಂಸವನ್ನು ಮುಸ್ಲಿಮೇತರರಿಗೂ ನೀಡಬಹುದೆಂದು ಪುರಾವೆಗಳು ಹಾಗೂ ಇಬ್ನು ಕುದಾಮರಿಂದ ಇಬ್ನು ಬಾಝ್ ವರೆಗಿನ ವಿದ್ವಾಂಸರ ಅಭಿಪ್ರಾಯಗಳನ್ನು ಮುಂದಿರಿಸಿ ಹೇಳಬಹುದಾಗಿದೆ.
IslamKannada News Portal
