– ಖದೀಜ ನುಸ್ರತ್
ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. ಇಸ್ಲಾಮ್ ಧರ್ಮವು ಅಂತ್ಯಕ್ರಿಯೆಯ ವಿಷಯದಲ್ಲಿ ತ್ವರಿತ ಹಾಗೂ ಸರಳ ವಿಧಿಗಳಿಗೆ ಪ್ರಾಧಾನ್ಯತೆ ನೀಡುತ್ತದೆ. ಮಾನವನ ಮರಣದ ಸಂದರ್ಭದಲ್ಲಿಯೂ ಮತ್ತು ಮರಣದ ನಂತರವೂ ಮೃತ ದೇಹದ ಪಾವಿತ್ರತೆಗೆ ಇಸ್ಲಾಮ್ ಧರ್ಮ ಬಹಳ ಗೌರವವನ್ನು ನೀಡುತ್ತದೆ. ವ್ಯಕ್ತಿಯ ಮೃತ ಶರೀರದ ಸಂದರ್ಶನವನ್ನು ಬಹಳ ಪುಣ್ಯ ಕಾರ್ಯವಾಗಿ ಪರಿಗಣಿಸಲಾಗುತ್ತದೆ. ಮೃತ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವುದು ಪ್ರಮುಖವಾಗಿದೆ. ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಏರ್ಪಾಡುಗಳನ್ನು ಮಾಡುವುದು ಮುಖ್ಯವಾಗಿದೆ. ಮೃತ ಶರೀರದ ಜನಾಝ ನಮಾಝ್ ನಿವಹಿಸುವುದು ಮತ್ತು ದಫನ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವುದು ಬಹಳ ಪುಣ್ಯವಿರುವ ಸತ್ಕರ್ಮವಾಗಿರುತ್ತದೆ.
ಭಾರತದಂತಹ ದೇಶಗಳಲ್ಲಿ ಮೃತ ಶರೀರದ ಸಂದರ್ಶನಕ್ಕೆ ಬಹಳ ಪ್ರಾಮು ಖ್ಯತೆಯನ್ನು ನೀಡುತ್ತಾರೆ. ಆರೋಗ್ಯ ಕೇಂದ್ರಗಳಲ್ಲಿ ಮರಣ ಹೊಂದಿದ ಮೃತ ಶರೀರವನ್ನು ಮನೆಗೆ ತಂದು ಎಲ್ಲರಿಗೂ ಸಂದರ್ಶಿಸಲು ಪ್ರತ್ಯೇಕ ಏರ್ಪಾಡುಗಳನ್ನು ಮಾಡಲಾಗುತ್ತದೆ. ಆದರೆ ಅರೇಬಿಯನ್ ರಾಷ್ಟ್ರಗಳಲ್ಲಿ ಮೃತದೇಹವನ್ನು ಮನೆಗೆ ತರುವಂತಹ ಸಂಪ್ರದಾಯ ಇಲ್ಲ. ಮರಣ ಹೊಂದಿದ ಮೃತ ಶರೀರವನ್ನು ಆಸ್ಪತ್ರೆಗಳಲ್ಲಿ ಸ್ನಾನ ಮತ್ತು ಪ್ರಾಥಮಿಕ ಕರ್ಮಗಳನ್ನು ಮಾಡಿಸಿ ತಕ್ಷಣ ದಫನಮಾಡಲಾಗುತ್ತದೆ. ನಂತರ ಮೂರು ದಿವಸಗಳ ಕಾಲ ಮನೆಯಲ್ಲಿ ಅಥವಾ ಮನೆಯ ಹತ್ತಿರ ಬಿಡಾರಗಳನ್ನು ಹಾಕಿ ಸಾಂತ್ವನ ನೀಡಲು ಬರುವ ಸಂದರ್ಶಕರನ್ನು ಸ್ವೀಕರಿಸಲಾಗುತ್ತದೆ.
“ಮತ್ತು ತನಗೆ ಯಾವ ಭೂಭಾಗದಲ್ಲಿ ಮರಣ ಬರುವುದೆಂಬ ಅರಿವು ಯಾರಿಗೂ ಇಲ್ಲ. ನಿಶ್ಚಯವಾಗಿಯೂ ಅಲ್ಲಾಹನೇ ಸರ್ವಜ್ಞನೂ ವಿವರ ಪೂರ್ಣನೂ ಆಗಿರುತ್ತಾನೆ.” (ಪವಿತ್ರ ಕುರ್ಆನ್- 31: 34)
ಯಾರಾದರೂ ಮರಣ ಹೊಂದಿದರೆ ಸಾಧ್ಯವಾದಷ್ಟು ಬೇಗ ಹತ್ತಿರವಿರುವ ಮುಸ್ಲಿಮ್ ಖಬರಸ್ಥಾನದಲ್ಲಿ ದಫನ ಮಾಡುವುದು ಉತ್ತಮವಾಗಿದೆ ಎಂದು ಇಸ್ಲಾಮ್ ಕಲಿಸುತ್ತದೆ. ಮಾನವನ ಶರೀರದ ಇಹಲೋಕದ ಎಲ್ಲಾ ಕೆಲಸ ಕಾರ್ಯ ಮುಗಿಯಿತು. ಮೃತ ಶರೀರವನ್ನು ಸಾಧ್ಯವಾದಷ್ಟು ಬೇಗ ದಫನ ಕಾರ್ಯವನ್ನು ಮಾಡಬೇಕು. ಸರಿಯಾದ ಕಾರಣಗಳಿದ್ದರೆ ಮಾತ್ರ ಮೃತದೇಹವನ್ನು ದೂರದ ಪ್ರದೇಶಗಳಿಗೆ ಸ್ಥಳಾಂತರಿಸುವುದನ್ನು ಇಸ್ಲಾಮ್ನಲ್ಲಿ ಅನುಮತಿಸಲಾಗಿದೆ. ಆಧುನಿಕ ಕಾಲದಲ್ಲಿ ವಿಮಾನ ಸೌಕರ್ಯಗಳಿರುವುದರಿಂದ ಪ್ರಾರ್ಥೀವ ಶರೀರವನ್ನು ತಾಯ್ನಾಡಿಗೆ ತಲುಪಿಸುವುದಾದರೆ ಸಾಧ್ಯವಾದಷ್ಟು ಬೇಗ ಅದರ ವ್ಯವಸ್ಥೆಮಾಡಬೇಕು. ಮರಣ ಹೊಂದಿದ 24 ಗಂಟೆಗಳ ಒಳಗೆ ದಫನ ಕ್ರಿಯೆ ನಡೆಯುವುದು ಉತ್ತಮವಾಗಿರುತ್ತದೆ. ಮೃತವ್ಯಕ್ತಿಯು ತನ್ನನ್ನು ಸ್ವದೇಶದಲ್ಲಿ ಅಥವಾ ಮರಣ ಹೊಂದಿದಲ್ಲಿಯೇ ದಫನ ಮಾಡಬೇಕೆಂದು ಉಯಿಲು ಬರೆದಿಟ್ಟಿದ್ದರೆ ಅದನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಸರಿಯಾದ ಸಮಯದಲ್ಲಿ ದಫನ ಮಾಡಲು ಸಾಧ್ಯವಾಗದಿದ್ದರೆ ಶರೀರದ ಆಂತರಿಕ ಭಾಗಗಳು ಕೊಳೆಯುವ ಮತ್ತು ಅದರಿಂದ ದುರ್ವಾಸನೆಯುಂಟಾಗುವ ಸಾಧ್ಯತೆಗಳಿರುತ್ತದೆ.
ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು- ಜನಾಝದ ಬಗ್ಗೆ ತ್ವರೆ ಮಾಡಿರಿ. ಅವರು ಸಜ್ಜನರಾಗಿದ್ದರೆ ನೀವು ಅವರನ್ನು ಒಳಿತಿನೆಡೆಗೆ ಕಳುಹಿಸುತ್ತಿರುವಿರಿ. ಅದಲ್ಲದಿದ್ದರೆ ನೀವು ನಿಮ್ಮ ಹೆಗಲಿಂದ ಒಂದು ಕೆಡುಕನ್ನು ಇಳಿಸುವಿರಿ.” (ಮುತ್ತಫಕುನ್ ಅಲೈಹಿ)
ಮೃತ ದೇಹವನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸುವುದು ಮಾನವನ ಶರೀರದ ಗೌರವಕ್ಕೆ ವಿರುದ್ಧವಾಗಿದೆ ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ವಿಮಾನಗಳಲ್ಲಿ ಮೃತದೇಹವನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸುವುದಾದರೆ ಅಂತಾರಾಷ್ಟ್ರೀಯ ನಿಯಮದಂತೆ ಎಂಬಾಮ್ ಮಾಡುವುದು ಕಡ್ಡಾಯವಾಗಿರುತ್ತದೆ. ಎಂಬಾಮ್ ಎಂದರೆ ಮೃತ ಶರೀರವು ಕೆಡದಂತೆ ರಕ್ಷಿಸುವ ವೈಜಾನಿಕ ಪ್ರಕ್ರಿಯೆಯಾಗಿರುತ್ತದೆ. ಮೃತ ಶರೀರದಿಂದ ರಕ್ತವನ್ನು ಹೊರತೆಗೆದು ಕೆಲವು ರಸಾಯನಿಕ ಪದಾರ್ಥಗಳನ್ನು ಶರೀರಕ್ಕೆ ಚುಚ್ಚಲಾಗುತ್ತದೆ. ಈ ರಸಾಯನಿಕ ತಯಾರಿಸುವಾಗ ಅದಕ್ಕೆ ಮೃತ ಶರೀರ ಬೇಗನೇ ಕೆಡದಂತೆ ಅಮಲು ಪದಾರ್ಥಗಳನ್ನು ಸೇರಿಸಲಾಗುತ್ತದೆ. ಇದು ಅಶುದ್ಧ ಮತ್ತು ಮಲಿನವಾಗಿರುತ್ತದೆ. ಆದ್ದರಿಂದ ಮೃತ ಶರೀರವು ಮಲಿನವಾಗುವ ಸಾಧ್ಯತೆಗಳಿರುತ್ತದೆ. ಇಸ್ಲಾಮ್ ಧರ್ಮವು ಮೃತದೇಹವನ್ನು ಅತ್ಯುತ್ತಮವಾಗಿ ಸ್ನಾನ ಮಾಡಿಸುವುದು, ಬಿಳಿ ಬಟ್ಟೆಯಿಂದ ಕಫನ್ ತೊಡಿಸುವುದು, ಸುಗಂಧ ದ್ರವ್ಯವನ್ನು ಪೂಸುವುದು ಇತ್ಯಾದಿಯನ್ನು ಪ್ರೋತ್ಸಾಹಿಸುತ್ತದೆ.
ಇಸ್ಲಾಮ್ ಧರ್ಮದಲ್ಲಿ ಅಂತ್ಯಕ್ರಿಯೆಯು ಅತ್ಯಂತ ಸರಳ ಮತ್ತು ಸುಂದರವಾಗಿದೆ. ಅಂತ್ಯಕ್ರಿಯೆಗೆ ಯಾವುದೇ ರೀತಿಯಲ್ಲಿ ದುಬಾರಿ ಹಣ ಖರ್ಚು ಮಾಡುವುದನ್ನು ಪ್ರೋತ್ಸಾಹಿಸುವುದಿಲ್ಲ. ಯಾರಾದರೂ ವಿದೇಶಗಳಲ್ಲಿ ಮರಣ ಹೊಂದಿದರೆ ಪೊಲೀಸ್ ಇಲಾಖೆ, ಆಸ್ಪತ್ರೆಯಿಂದ ಮರಣ ಸರ್ಟಿಫಿಕೇಟ್, ಭಾರತೀಯ ದೂತಾ ವಾಸ ಕೇಂದ್ರಗಳಿಂದ ಸರ್ಟಿಫಿಕೇಟ್ ಗಳನ್ನು ಪಡೆಯಬೇಕಾಗುತ್ತದೆ. ನಂತರ ಇದು ಯಾವುದೇ ರೀತಿಯ ಕಾನೂನಾತ್ಮಕವಾದ ಅಗತ್ಯಗಳಿಗೆ ಬೇಕಾಗುತ್ತದೆ. ಎಂಬಾಮ್ ನಿರ್ವಹಣೆ, ಸರಕಾರಿ ಸರ್ಟಿಫಿಕೇಟ್ಗಳನ್ನು ಪಡೆಯಲು ಹಾಗೂ ವಿಮಾನ ಯಾನಕ್ಕೆ ಬೃಹತ್ ಮೊತ್ತ ಖರ್ಚುವೆಚ್ಚ ಮತ್ತು ಸಮಯವು ತಗಲುತ್ತದೆ. ಕೆಲವೊಂದು ರಾಷ್ಟ್ರದ ಸರಕಾರ ಅಥವಾ ಅವರು ದುಡಿಯುವ ಕಂಪೆನಿಗಳು ಇದನ್ನು ಉಚಿತವಾಗಿ ನಿರ್ವಹಿಸಿ ಕೊಡುತ್ತದೆ. ಇಲ್ಲವಾದರೆ ಇಲ್ಲಿ ಮೃತ ವ್ಯಕ್ತಿಯ ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಬೇಕಾಗುತ್ತದೆ. ಮೃತ ವ್ಯಕ್ತಿಯ ಸೊತ್ತಿನಿಂದ ಇದಕ್ಕಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಇಂತಹ ಹಣವನ್ನು ಮರಣಾನಂತರ ವಾರೀಸುದಾರರಿಗೆ, ಅದರಲ್ಲಿಯೂ ಉತ್ತರಾಧಿಕಾರಿಗಳಲ್ಲಿ ಅಪ್ರಾಪ್ತ ಮಕ್ಕಳಿದ್ದಾಗ ಅವರಿಗೇ ಖರ್ಚು ಮಾಡುವುದು ಉತ್ತಮವಾಗಿರುತ್ತದೆ. ಅಥವಾ ಬಂಧುಮಿತ್ರರು ಹಣ ಒಟ್ಟು ಸೇರಿಸಿ ಖರ್ಚು ಮಾಡುವುದಾದರೆ ಅದೂ ಧರ್ಮಸಮ್ಮತವಾಗಿರುತ್ತದೆ. ಆದರೆ ಯಾರಿಗೂ ಆರ್ಥಿಕ ಹೊರೆಯಾಗದಂತೆ ಜಾಗರೂಕತೆ ವಹಿಸಬೇಕು.
IslamKannada News Portal
