“ದೇವರಿಗೆ ಸೃಷ್ಟಿಕರ್ತ ಇಲ್ಲದಿದ್ದರೆ, ಅದರ ಅಸ್ತಿತ್ವ ಹೇಗೆ ಸಾಧ್ಯ? ಹಾಗಾದರೆ ಅಲ್ಲಾಹನನ್ನು ಯಾರು ಸೃಷ್ಟಿಸಿದರು?”
ಮೊದಲ ನೋಟಕ್ಕೆ ಇದು ತಾರ್ಕಿಕ ಪ್ರಶ್ನೆಯಂತೆ ಕಾಣಬಹುದು. ಆದರೆ ಸ್ವಲ್ಪ ಆಳವಾಗಿ ಯೋಚಿಸಿದರೆ, ಈ ಪ್ರಶ್ನೆಯಲ್ಲೇ ಒಂದು ಮೂಲಭೂತ ದೋಷವಿದೆ.
ಮೊದಲನೆಯದಾಗಿ, ಮನುಷ್ಯ ತನ್ನ ಅಸ್ತಿತ್ವದಲ್ಲಿಯೇ ಅತ್ಯಂತ ಸೀಮಿತ ಜೀವಿ. ತನ್ನ ಜನ್ಮವನ್ನು ತಾನೇ ಆಯ್ಕೆ ಮಾಡಿಲ್ಲ. ಯಾವ ದೇಶದಲ್ಲಿ, ಯಾವ ಕುಟುಂಬದಲ್ಲಿ, ಯಾವ ಕಾಲದಲ್ಲಿ ಹುಟ್ಟಬೇಕು ಎಂಬ ನಿರ್ಧಾರ ಅವನದಲ್ಲ. ತನ್ನ ಮರಣದ ಸಮಯವನ್ನೂ ಅವನು ನಿರ್ಧರಿಸಲಾರ. ತನ್ನ ದೇಹದ ಪ್ರತಿಯೊಂದು ಜೀವಕೋಶದ ಕಾರ್ಯವಿಧಾನವನ್ನೂ ಸಂಪೂರ್ಣವಾಗಿ ನಿಯಂತ್ರಿಸಲಾರ. ಇಂತಹ ಸೀಮಿತ ಜ್ಞಾನ ಮತ್ತು ಶಕ್ತಿಯ ಮನುಷ್ಯ, ಬ್ರಹ್ಮಾಂಡದ ಒಂದು ಅತಿ ಸಣ್ಣ ಗ್ರಹದ ಒಂದು ಮೂಲೆಯಲ್ಲಿ ಕುಳಿತು “ದೇವರು ಇಲ್ಲ” ಅಥವಾ “ದೇವರನ್ನು ಯಾರೋ ಸೃಷ್ಟಿಸಿರಬೇಕು” ಎಂದು ಹೇಳಿದಾಗ, ಅದು ಅವನ ಜ್ಞಾನದ ಮಿತಿಯನ್ನು ಮಾತ್ರ ತೋರಿಸುತ್ತದೆ.
ಮಾನವನು ಇನ್ನೂ ಈ ಬ್ರಹ್ಮಾಂಡದ ಸಂಪೂರ್ಣ ವ್ಯಾಪ್ತಿಯನ್ನೇ ಅರಿತಿಲ್ಲ. ಅದರಾಚೆ ಏನಿದೆ ಎಂಬುದೂ ಅವನಿಗೆ ತಿಳಿದಿಲ್ಲ. ಹಾಗಿರುವಾಗ, ಸೃಷ್ಟಿಕರ್ತನ ಅಸ್ತಿತ್ವವನ್ನು ತನ್ನ ಸೀಮಿತ ಅನುಭವದಿಂದಲೇ ಅಳೆಯುವುದು ತಾರ್ಕಿಕವಾಗಿ ಸಮರ್ಪಕವಲ್ಲ.
ಉದಾಹರಣೆಗೆ ಸಮಯ (Time) ಎಂಬ ಪರಿಕಲ್ಪನೆಯನ್ನು ಗಮನಿಸೋಣ. ನಾವು “ನಿನ್ನೆ”, “ಇಂದು”, “ನಾಳೆ” ಎಂದು ಸಮಯವನ್ನು ಅಳೆಯುತ್ತೇವೆ. ಆದರೆ ಸಮಯದ ಆರಂಭ ಎಲ್ಲಿಂದ? ಎಂಬ ಪ್ರಶ್ನೆಗೆ ವಿಜ್ಞಾನವೂ ಅಂತಿಮ ಉತ್ತರವನ್ನು ನೀಡಿಲ್ಲ. ಇಸ್ಲಾಮಿನ ದೃಷ್ಟಿಯಲ್ಲಿ ಸಮಯವೂ ಒಂದು ಸೃಷ್ಟಿ. ಆದ್ದರಿಂದ ಅದಕ್ಕೂ ಒಂದು ಆರಂಭವಿದೆ. ಆದರೆ ಸಮಯವನ್ನು ಸೃಷ್ಟಿಸಿದ ಅಲ್ಲಾಹ್ ಅಥವಾ ದೇವರು ಸಮಯಕ್ಕೆ ಅಧೀನನಲ್ಲ. ಕಾಲವು ಸೃಷ್ಟಿಯ ಗುಣ, ಅದು ಸೃಷ್ಟಿಕರ್ತನ ಗುಣವಲ್ಲ. ಆದ್ದರಿಂದ “ದೇವರು ಯಾವಾಗ ಹುಟ್ಟಿದ?” ಎಂಬ ಪ್ರಶ್ನೆಯೇ ಸಮಯವನ್ನು ಸೃಷ್ಟಿಕರ್ತನ ಮೇಲೂ ಅನ್ವಯಿಸುವ ತಪ್ಪು ಊಹೆಯಾಗಿದೆ.
ಇಸ್ಲಾಂ “ಪ್ರತಿಯೊಂದಕ್ಕೂ ಸೃಷ್ಟಿಕರ್ತ ಇದ್ದಾನೆ” ಎಂದು ಹೇಳುವುದಿಲ್ಲ. ಬದಲಾಗಿ “ಸೃಷ್ಟಿಸಲ್ಪಡುವ ಗುಣಲಕ್ಷಣ ಹೊಂದಿರುವ ಪ್ರತಿಯೊಂದಕ್ಕೂ ಓರ್ವ ಸೃಷ್ಟಿಕರ್ತ ಇದ್ದಾನೆ” ಎಂದು ಹೇಳುತ್ತದೆ. ಇದು ಅತ್ಯಂತ ಮಹತ್ವದ ವ್ಯತ್ಯಾಸ.
ಒಂದು ಕಾಡಿನಲ್ಲಿ ಮರದ ತುಂಡು ಬಿದ್ದಿದ್ದರೆ, ಅದನ್ನು ನೋಡಿ “ಇದನ್ನು ಯಾರು ತಯಾರಿಸಿದರು?” ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡುವುದಿಲ್ಲ. ಏಕೆಂದರೆ ಅದು ಪ್ರಕೃತಿಯ ಸ್ಥಿತಿಯಲ್ಲಿದೆ. ಆದರೆ ಅದೇ ಮರದ ತುಂಡು ಒಂದು ಸುಂದರ ಕುರ್ಚಿ, ಮೇಜು ಅಥವಾ ಶಿಲ್ಪವಾಗಿ ಕಂಡಾಗ, ಅದರ ಹಿಂದೆ ಒಬ್ಬ ಶಿಲ್ಪಿ ಇದ್ದಾನೆ ಎಂದು ನಾವು ಸಹಜವಾಗಿ ತೀರ್ಮಾನಿಸುತ್ತೇವೆ. ಏಕೆ? ಏಕೆಂದರೆ ಅದರೊಳಗೆ ಉದ್ದೇಶ, ವಿನ್ಯಾಸ ಮತ್ತು ವ್ಯವಸ್ಥೆ ಗೋಚರಿಸುತ್ತವೆ. ಆದ್ದರಿಂದ ಯಾವುದೇ ಪ್ರಶ್ನೆಯನ್ನು ಹುಟ್ಟಿಸುವುದು ವಸ್ತುವಿನ ಅಸ್ತಿತ್ವವಲ್ಲ. ಅದರ ಗುಣಲಕ್ಷಣವಾಗಿದೆ.
ಹಾಗೆಯೇ, ಈ ವಿಶ್ವವು ಕೇವಲ ಪದಾರ್ಥಗಳ ಗುಂಪಲ್ಲ. ನಿಖರ ನಿಯಮಗಳು, ಗಣಿತೀಯ ಸಮತೋಲನ, ಜೀವಕ್ಕೆ ಅನುಕೂಲವಾದ ಸೂಕ್ಷ್ಮ ಹೊಂದಾಣಿಕೆ ಮತ್ತು ಅದ್ಭುತ ವ್ಯವಸ್ಥೆಯನ್ನು ಹೊಂದಿದೆ. ಆದ್ದರಿಂದ ಇದು ಸೃಷ್ಟಿಸಲ್ಪಟ್ಟ ಗುಣಲಕ್ಷಣ ಹೊಂದಿರುವುದರಿಂದ, ಅದರ ಹಿಂದೆ ಸೃಷ್ಟಿಕರ್ತನಿರುವುದು ತಾರ್ಕಿಕ ನಿರ್ಣಯವಾಗಿದೆ.
ಸೃಷ್ಟಿಸಲ್ಪಟ್ಟದ್ದು” ಮತ್ತು “ಸೃಷ್ಟಿಕರ್ತ” ಎಂಬ ಎರಡು ಪರಿಕಲ್ಪನೆಗಳನ್ನು ಒಂದೇ ಮಟ್ಟದಲ್ಲಿ ಇಟ್ಟು ಯೋಚಿಸಿದಾಗ ಮಾತ್ರ ಗೊಂದಲ ಉಂಟಾಗುತ್ತದೆ. “ಯಾರು ಸೃಷ್ಟಿಸಿದರು?” ಎಂಬ ಪ್ರಶ್ನೆಯನ್ನು ಕೇಳುವುದು ಆರಂಭವಿರುವ ವಸ್ತುಗಳ ಬಗ್ಗೆ ಮಾತ್ರ ಅರ್ಥಪೂರ್ಣವಾಗುತ್ತದೆ. ಒಂದು ಮನೆ ಇದ್ದರೆ ಅದನ್ನು ಕಟ್ಟಿದವರು ಯಾರು ಎಂದು ಕೇಳಬಹುದು. ಒಂದು ಪುಸ್ತಕ ಇದ್ದರೆ ಅದನ್ನು ಬರೆದವರು ಯಾರು ಎಂದು ಕೇಳಬಹುದು. ಏಕೆಂದರೆ ಅವುಗಳಿಗೆ ಆರಂಭವಿದೆ. ಆದರೆ ಈ ನಿಯಮವನ್ನು ಆರಂಭವೇ ಇಲ್ಲದ ಪರಮ ಸತ್ಯಕ್ಕೂ ಅನ್ವಯಿಸುವುದು ತಾರ್ಕಿಕವಾಗಿ ಸರಿಯಲ್ಲ.
ಒಂದು ಸರಳ ಉದಾಹರಣೆ ನೋಡಿ. ಪ್ರತಿಯೊಂದು ರೈಲಿಗೂ ಒಂದು ಎಂಜಿನ್ ಬೇಕು. ಆದರೆ “ಆ ಎಂಜಿನ್ನ್ನು ಎಳೆಯಲು ಇನ್ನೊಂದು ಎಂಜಿನ್ ಬೇಕು, ಅದನ್ನೂ ಎಳೆಯಲು ಮತ್ತೊಂದು ಎಂಜಿನ್ ಬೇಕು…” ಎಂದು ಅನಂತವಾಗಿ ಮುಂದುವರಿಸಿದರೆ, ರೈಲು ಎಂದಿಗೂ ಚಲಿಸುವುದಿಲ್ಲ. ಅದೇ ರೀತಿ, ಪ್ರತಿಯೊಬ್ಬ ಸೃಷ್ಟಿಕರ್ತನಿಗೂ ಮತ್ತೊಬ್ಬ ಸೃಷ್ಟಿಕರ್ತ ಇರಲೇಬೇಕು ಎಂದು ಹೇಳಿದರೆ, ಅಂತಿಮವಾಗಿ ಯಾವುದೇ ಸೃಷ್ಟಿಯೂ ಆರಂಭವಾಗುವುದಿಲ್ಲ. ತತ್ವಶಾಸ್ತ್ರದಲ್ಲಿ ಇದನ್ನು “ಅನಂತ ಹಿಂಜರಿತ” (Infinite Regress) ಎಂದು ಕರೆಯಲಾಗುತ್ತದೆ.
ಆದ್ದರಿಂದ, ತಾರ್ಕಿಕವಾಗಿ ಒಂದು ಹಂತದಲ್ಲಿ ಸ್ವತಃ ಅಸ್ತಿತ್ವ ಹೊಂದಿರುವ (Necessary Being) ಪರಮ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಅವನು ಮತ್ತೊಬ್ಬನಿಂದ ಉಂಟಾಗಿಲ್ಲ. ಅವನೇ ಮೂಲ ಆಗಿದ್ದು, ಎಲ್ಲದರ ಅಸ್ತಿತ್ವಕ್ಕೆ ಮೂಲ ಕಾರಣನಾಗಿದ್ದಾನೆ.
ಕುರ್ಆನ್ ಈ ಸತ್ಯವನ್ನು ಅತ್ಯಂತ ಸಂಕ್ಷಿಪ್ತವಾಗಿ ಹೀಗೆ ಹೇಳುತ್ತದೆ, “ಅವನು ಜನ್ಮ ನೀಡಿಲ್ಲ; ಅವನು ಜನ್ಮ ಪಡೆದವನೂ ಅಲ್ಲ.” (ಸೂರತುಲ್ ಇಖ್ಲಾಸ್ 112:3)
ಮತ್ತೊಂದು ಕಡೆ,
“ಅವನೇ ಮೊದಲನೆಯವನು ಮತ್ತು ಅವನೇ ಕೊನೆಯವನು.” (ಸೂರತುಲ್ ಹದೀದ್ 57:3)
ಅಂದರೆ, ಅಲ್ಲಾಹ್ ಕಾಲ ಮತ್ತು ಸೃಷ್ಟಿಯ ನಿಯಮಗಳಿಗೆ ಒಳಪಟ್ಟ ಅಸ್ತಿತ್ವವಲ್ಲ. ಕಾಲವೂ, ಸ್ಥಳವೂ, ಕಾರಣ-ಕಾರ್ಯ ಸಂಬಂಧವೂ ಸೃಷ್ಟಿಯ ಭಾಗಗಳೇ ಹೊರತು ಸೃಷ್ಟಿಕರ್ತ ಅವುಗಳಿಗೆ ಅಧೀನನಲ್ಲ.
ಹೀಗಾಗಿ, “ಅಲ್ಲಾಹನನ್ನು ಯಾರು ಸೃಷ್ಟಿಸಿದರು?” ಎಂಬ ಪ್ರಶ್ನೆ ತಾರ್ಕಿಕವಾಗಿ “ಬೆಳಕಿನ ಬಣ್ಣ ಏನು?” ಅಥವಾ “ಉತ್ತರ ದಿಕ್ಕಿನ ಉತ್ತರಕ್ಕೆ ಏನಿದೆ?” ಎಂದು ಕೇಳುವಂತೆಯೇ ಆಗಿದೆ. ಪ್ರಶ್ನೆಯ ರೂಪ ಸರಿಯಾಗಿದ್ದರೂ, ಅದು ಅನ್ವಯಿಸಬೇಕಾದ ವಿಷಯಕ್ಕೆ ಅನ್ವಯಿಸುವುದಿಲ್ಲ.
ಆದ್ದರಿಂದ ಇಸ್ಲಾಂ ಹೇಳುವುದು: ಸೃಷ್ಟಿಕರ್ತನನ್ನು ಸೃಷ್ಟಿಸಲ್ಪಟ್ಟ ವಸ್ತುಗಳ ಮಾನದಂಡದಿಂದ ಅಳೆಯಲು ಸಾಧ್ಯವಿಲ್ಲ. ಅವನೇ ಎಲ್ಲ ಅಸ್ತಿತ್ವಗಳ ಮೂಲ ಕಾರಣ. ಆದರೆ ಅವನ ಅಸ್ತಿತ್ವಕ್ಕೆ ಮತ್ತೊಂದು ಕಾರಣ ಅಗತ್ಯವಿಲ್ಲ. ಇದೇ ಏಕದೇವ ಪರಿಕಲ್ಪನೆಯ ಬೌದ್ಧಿಕ ಮತ್ತು ತಾತ್ವಿಕ ಅಡಿಪಾಯವಾಗಿದೆ.
–ಅಬೂಕುತುಬ್
IslamKannada News Portal
