✍️ ಅಬೂ ಕುತುಬ್
ಸಾಮಾನ್ಯವಾಗಿ ಜನರು ಚರ್ಚಿಸುವಾ ಇಸ್ಲಾಮ್ ಧರ್ಮದ ಉಗಮವನ್ನು ಕ್ರಿಸ್ತಶಕ ಏಳನೇ ಶತಮಾನಕ್ಕೆ, ಅಂದರೆ ಪ್ರವಾದಿ ಮುಹಮ್ಮದ್(ಸ) ಅವರ ಕಾಲಕ್ಕೆ ಸೀಮಿತಗೊಳಿಸಿ ನೋಡುವ ಕ್ರಮವೊಂದು ರೂಢಿಯಲ್ಲಿದೆ. ಆದರೆ, ಇಸ್ಲಾಮಿನ ಮೂಲ ತತ್ವಜ್ಞಾನ ಮತ್ತು ಕುರ್ಆನ್ನ ಅಧ್ಯಯನವು ನಮಗೆ ಭಿನ್ನವಾದ, ವಿಶಾಲವಾದ ಚಿತ್ರಣವನ್ನು ನೀಡುತ್ತದೆ. ಇಸ್ಲಾಮ್ ಎನ್ನುವುದು ಕೇವಲ 1400 ವರ್ಷಗಳ ಹಿಂದೆ ಹುಟ್ಟಿದ ಹೊಸ ಧರ್ಮವಲ್ಲ. ಬದಲಿಗೆ ಅದು ಮಾನವಕುಲದ ಸೃಷ್ಟಿಯ ಮೊದಲ ಕ್ಷಣದಿಂದಲೇ ಆರಂಭವಾದ ಒಂದು ಸಾರ್ವತ್ರಿಕ ಮತ್ತು ಶಾಶ್ವತ ಜೀವನ ಪದ್ಧತಿಯಾಗಿದೆ.
ದೇವನ ವತಿಯಿಂದ ಈ ಭೂಮಿಗೆ ಬಂದಿರುವ ಏಕೈಕ ಜೀವನ ಧರ್ಮವೆಂದರೆ ಅದು ಇಸ್ಲಾಮ್ ಮಾತ್ರ, ಅಂದರೆ ಇಸ್ಲಾಮ್ ಪದದ ಅರ್ಥ ದೇವನಿಗೆ ಶರಣಾಗಿ, ಅವನು ಕಲಿಸಿದ ದೈವಿಕ ಮಾರ್ಗದರ್ಶನದಂತೆ ಜೀವನ ಸಾಗಿಸುವುದಾಗಿದೆ. (ಕುರ್ಆನ್ 3:19) ಈ ಶರಣಾಗತಿಯ ಹಾದಿಯನ್ನು ಪ್ರಥಮ ಮಾನವ ಆದಮ್(ಅ) ಅವರಿಂದಲೇ ಆರಂಭಿಸಲಾಯಿತು. ಆದ್ದರಿಂದ ಈ ಮಾರ್ಗದರ್ಶನ ತತ್ವವು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಕಾಲಘಟ್ಟಕ್ಕೆ ಸೀಮಿತವಾಗಿಲ್ಲ.
ಪ್ರವಾದಿಗಳ ಸರಣಿ: ಒಂದೇ ಸಂದೇಶದ ವಿಭಿನ್ನ ಕೊಂಡಿಗಳು ಇತಿಹಾಸದ ಪ್ರತಿ ಹಂತದಲ್ಲೂ ಮಾನವಕುಲದ ಮಾರ್ಗದರ್ಶನಕ್ಕೆ ದೇವನು ಪ್ರವಾದಿಗಳನ್ನು ಕಳುಹಿಸಿದನು. ನೂಹ್(ಅ) ಅವರ ದೃಢತೆ, ಇಬ್ರಾಹೀಮ್(ಅ) ಅವರ ಏಕೇಶ್ವರವಾದದ ಹೋರಾಟ ಮತ್ತು ತ್ಯಾಗ, ಮೂಸಾ(ಅ) ಅವರು ತಂದ ವಿಮೋಚನೆ ಮತ್ತು ಕಾನೂನು, ಹಾಗೂ ಈಸಾ(ಅ) ಅವರು ಬೋಧಿಸಿದ ಪ್ರೀತಿ ಮತ್ತು ಕರುಣೆ, ಇವೆಲ್ಲವೂ ಒಂದೇ ದೈವಿಕ ಸತ್ಯದ ವಿವಿಧ ಆಯಾಮಗಳು. “ನಾವೆಲ್ಲರೂ ಒಬ್ಬನೇ ಸೃಷ್ಟಿಕರ್ತನ ಸೃಷ್ಟಿಗಳು, ಉತ್ತರದಾಯಿಗಳು ಮತ್ತು ಅವನು ಕಲಿಸಿದ ದೈವಿಕ ಜೀವನವೇ ಮುಕ್ತಿಯ ಹಾದಿ” ಎಂಬುದು ಈ ಎಲ್ಲಾ ಪ್ರವಾದಿಗಳ ಏಕೈಕ ಘೋಷಣೆಯಾಗಿತ್ತು.
ಕುರ್ಆನ್ ಸ್ಪಷ್ಟವಾಗಿ ಹೇಳುತ್ತದೆ: “ನಾವು ಇಬ್ರಾಹೀಂ, ಇಸ್ಮಾಯೀಲ್, ಇಸ್ಹಾಕ್, ಯಾಕೂಬ್ ಮತ್ತು ಅವರ ಸಂತತಿಗಳಿಗೆ ನೀಡಿದ್ದರಲ್ಲಿ ಹಾಗೂ ಮೂಸಾ ಮತ್ತು ಈಸಾ ಅವರಿಗೆ ನೀಡಿದ್ದರಲ್ಲಿ ಯಾವುದೇ ಭೇದ ಮಾಡುವುದಿಲ್ಲ” (2:136).
ಪ್ರತಿಯೊಬ್ಬ ಪ್ರವಾದಿಯೂ ತನ್ನ ಕಾಲದ ಅಧರ್ಮದ ವಿರುದ್ಧ ನಿಂತು ದೇವನಿಗೆ ಶರಣಾಗಿ ಎಂದು ಕರೆ ನೀಡಿದರು. ಅಂತಿಮವಾಗಿ ಪ್ರವಾದಿ ಮುಹಮ್ಮದ್(ಸ) ಅವರು ಖಾತಮುನ್ನಬಿಯ್ಯೀನ್’ (ಪ್ರವಾದಿಗಳ ಸರಣಿಯಲ್ಲಿ ಕೊನೆಯವರು ಅಥವಾ ಅವರ ಆಗಮನದ ಬಳಿಕ ಆ ಸರಣಿಗೆ ಮುದ್ರೆ ಹಾಕಲಾಯಿತು) ಆಗಿ ಬಂದಾಗ, ಈ ದೈವಿಕ ಸಂದೇಶವು ಪರಿಪೂರ್ಣತೆಯನ್ನು ಪಡೆಯಿತು. ಅವರ ಮೂಲಕ ಸೃಷ್ಟಿಕರ್ತ ಹೀಗೆ ಘೋಷಿಸಿದನು, “ಇಂದು ನಾನು ನಿಮಗಾಗಿ ನಿಮ್ಮ ಧರ್ಮವನ್ನು ಪೂರ್ಣಗೊಳಿಸಿದ್ದೇನೆ, ನನ್ನ ಅನುಗ್ರಹವನ್ನು ನಿಮ್ಮ ಮೇಲೆ ಸಂಪೂರ್ಣಗೊಳಿಸಿದ್ದೇನೆ ಮತ್ತು ಇಸ್ಲಾಮ್ ಧರ್ಮವನ್ನು (ದೇವನಿಗೆ ಶರಣಾಗಿ ಬಾಳುವುದನ್ನು) ನಿಮ್ಮ ಜೀವನ ಧರ್ಮವಾಗಿ ಆಯ್ಕೆ ಮಾಡಿಕೊಂಡಿದ್ದೇನೆ” (ಕುರ್ಆನ್- 5:3). ಹೀಗಾಗಿ, ಇಸ್ಲಾಮಿನ ದರ್ಶನವು ಕೇವಲ ಒಂದು ಮತಕ್ಕೆ ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ.
ಅದು ಆದಮ್(ಅ)ರಿಂದ ಆರಂಭವಾಗಿ ಮುಹಮ್ಮದ್(ಸ) ಅವರಲ್ಲಿ ಪೂರ್ಣಗೊಂಡ ಸತ್ಯದ ಪಯಣ. ಇಸ್ಲಾಮ್ ಎಂದರೆ ಕೇವಲ ಕೆಲವು ಆಚರಣೆಗಳಲ್ಲ, ಬದಲಿಗೆ ಅದು ಸೃಷ್ಟಿಕರ್ತನ ಜೊತೆಗಿನ ಸಂಬಂಧ ಮತ್ತು ಸೃಷ್ಟಿಗಳ ಜೊತೆಗಿನ ನ್ಯಾಯಯುತ ನಡವಳಿಕೆಯ ಸಮಗ್ರ ಸಂಹಿತೆಯಾಗಿದೆ. ಸೃಷ್ಟಿಯ ಮೊದಲ ದಿನದಿಂದ ಅಂತಿಮ ದಿನದವರೆಗೆ ಮಾನವಕುಲಕ್ಕೆ ನೀಡಲಾದ ಏಕೈಕ ಶಾಶ್ವತ ಸಂದೇಶದ ಅಂತಿಮ ಮತ್ತು ಸಂರಕ್ಷಿತ ರೂಪವೇ ಇಂದಿನ ಕುರ್ಆನ್ ಎಂಬ ದೈವಿಕ ಮಾರ್ಗದರ್ಶಿ ಗ್ರಂಥ. ಈ ವಿಶಾಲ ಹಿನ್ನೆಲೆಯಲ್ಲಿ ಇಸ್ಲಾಮನ್ನು ಗ್ರಹಿಸಿದಾಗ ಮಾತ್ರ ನಮಗೆ ಅದರ ನೈಜ ಸಾರ್ವತ್ರಿಕತೆ ಮತ್ತು ಮಾನವೀಯ ಮೌಲ್ಯಗಳ ಆಳ ಅರ್ಥವಾಗಲು ಸಾಧ್ಯ.
IslamKannada News Portal
