✍️ ಶೌಕತ್ ಅಲಿ
ಮಾಜಿ ರಾಜ್ಯಾಧ್ಯಕ್ಷರು, ಎಸ್.ಐ.ಓ ಕರ್ನಾಟಕ
ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಚರಿತ್ರೆಯನ್ನು ಕೇವಲ ಧಾರ್ಮಿಕ ವಿಧಿ-ವಿಧಾನಗಳ ವಿವರಣೆಯಾಗಿ ಅಥವಾ ಕೆಲವು ಐತಿಹಾಸಿಕ ಘಟನೆಗಳ ಸರಣಿಯಾಗಿ ನೋಡುವುದು ಅದರ ವಿಶಾಲತೆಯನ್ನು ಸೀಮಿತಗೊಳಿಸುವಂತಾಗುತ್ತದೆ. ಸೀರತ್ ಒಂದು ಸಮಗ್ರ ಜೀವನದರ್ಶನ. ಮನುಷ್ಯನ ನಂಬಿಕೆ, ನೈತಿಕತೆ, ಕುಟುಂಬ, ಸಮಾಜ, ಆರ್ಥಿಕತೆ, ರಾಜಕೀಯ, ಜ್ಞಾನ, ಕಲೆ, ಭಾಷೆ, ಸಂಸ್ಕೃತಿ ಮತ್ತು ಪರಸ್ಪರ ಸಂಬಂಧಗಳ ಕುರಿತು ಅದು ನೀಡುವ ಮಾರ್ಗದರ್ಶನ ಅಪಾರವಾಗಿದೆ.
ವಿಶೇಷವಾಗಿ ಸಾಂಸ್ಕೃತಿಕ ದೃಷ್ಟಿಯಿಂದ ನೋಡಿದಾಗ, ಪ್ರವಾದಿ(ಸ) ಅವರ ಜೀವನದಲ್ಲಿ ಒಂದು ವಿಶಿಷ್ಟ ಸಮತೋಲನ ಗೋಚರಿಸುತ್ತದೆ. ಅನ್ಯಾಯ ಮತ್ತು ಅಂಧನಂಬಿಕೆಗಳನ್ನು ಪ್ರಶ್ನಿಸಿದರು; ಆದರೆ ಪ್ರತಿಯೊಂದು ಸ್ಥಳೀಯ ಸಂಪ್ರದಾಯವನ್ನೂ ನಾಶಪಡಿಸಲಿಲ್ಲ. ತಮ್ಮ ಧರ್ಮದ ಸತ್ಯದಲ್ಲಿ ಸ್ಥಿರವಾಗಿದ್ದರು; ಆದರೆ ಇತರ ಧರ್ಮೀಯರ ಅಸ್ತಿತ್ವವನ್ನು ನಿರಾಕರಿಸಲಿಲ್ಲ. ಜ್ಞಾನವನ್ನು ಅರೇಬಿಯಾದ ಗಡಿಗಳೊಳಗೆ ಬಂಧಿಸಲಿಲ್ಲ. ಭಾಷೆ, ಕಾವ್ಯ ಮತ್ತು ಅಭಿವ್ಯಕ್ತಿಯ ಶಕ್ತಿಯನ್ನು ಗುರುತಿಸಿದರು. ವಿಭಿನ್ನ ಜನಾಂಗ ಮತ್ತು ಸಂಸ್ಕೃತಿಯ ಜನರನ್ನು ಒಂದೇ ಮಾನವೀಯ ಬಾಂಧವ್ಯದಲ್ಲಿ ಜೋಡಿಸಿದರು ಎಂಬುದು ನಿಚ್ಚಳವಾಗಿ ಗೋಚರಿಸುತ್ತದೆ.
ಬಹುತ್ವ ಎಂದರೆ ಏಕರೂಪತೆಯಲ್ಲ, ಸಹಬಾಳ್ವೆ
ಪ್ರವಾದಿ(ಸ) ರವರು ಮದೀನಾಕ್ಕೆ ವಲಸೆ ಬಂದಾಗ ಅಲ್ಲಿ ಮುಸ್ಲಿಮರ ಜೊತೆಗೆ ಯಹೂದಿಗಳು ಹಾಗೂ ವಿವಿಧ ಅರಬ್ ಬುಡಕಟ್ಟುಗಳಿದ್ದವು. ಮದೀನಾ ಒಪ್ಪಂದದ ಮೂಲಕ ವಿಭಿನ್ನ ಸಮುದಾಯಗಳ ನಡುವೆ ಹಕ್ಕು ಮತ್ತು ಹೊಣೆಗಾರಿಕೆಗಳನ್ನು ನಿರ್ದಿಷ್ಟಗೊಳಿಸಲಾಯಿತು. ಒಂದು ಸಮಾಜದ ಏಕತೆ ಎಂದರೆ ಅದರಲ್ಲಿರುವ ಎಲ್ಲರೂ ಒಂದೇ ರೀತಿಯವರಾಗಬೇಕು, ಒಂದೇ ಸಂಸ್ಕೃತಿಯವರಾಗಿರಬೇಕು, ಒಂದೇ ರೀತಿಯ ಆಹಾರ ಪದ್ಧತಿ ಅನುಸರಿಸಬೇಕು ಎಂಬುದಲ್ಲ. ನ್ಯಾಯ, ಭದ್ರತೆ ಮತ್ತು ನಾಗರಿಕ ಹೊಣೆಗಾರಿಕೆಯ ಆಧಾರದ ಮೇಲೆ ಭಿನ್ನ ಸಮುದಾಯಗಳು ಹೇಗೆ ಬಹುತ್ವದ ಆಧಾರದಲ್ಲಿ ಸಹಬಾಳ್ವೆ ನಡೆಸಬಹುದು ಎಂಬುದು ಪ್ರವಾದಿವರ್ಯರ ಮದೀನಾ ಚಾಪ್ಟರ್ನಲ್ಲಿ ಗೋಚರಿಸುತ್ತದೆ. ಇಂದಿನ ಬಹುಸಾಂಸ್ಕೃತಿಕ ಸಮಾಜಗಳಿಗೆ ಇದು ಅತ್ಯಂತ ಪ್ರಸ್ತುತವಾದ ಸೀರತ್ ಪಾಠ.
ಸಂಪ್ರದಾಯ ಎಂದರೆ ಸಂಪೂರ್ಣ ನಿರಾಕರಣೆ ಅಲ್ಲ, ಪರಿಷ್ಕರಣೆ
ಪ್ರವಾದಿ(ಸ) ಅವರ ಕಾಲದಲ್ಲಿ ಅರಬ್ ಸಮಾಜದಲ್ಲಿ ಅನೇಕ ಸಂಪ್ರದಾಯಗಳಿದ್ದವು. ಕೆಲವು ಮಾನವೀಯವಾಗಿದ್ದರೆ, ಕೆಲವು ಶೋಷಣೆ ಮತ್ತು ಅನ್ಯಾಯವನ್ನು ಒಳಗೊಂಡಿದ್ದವು. ಇಸ್ಲಾಮಿನ ವಿಧಾನ ಎಲ್ಲವನ್ನೂ ಒಂದೇ ಬಾರಿಗೆ ನಾಶಪಡಿಸುವುದಾಗಿರಲಿಲ್ಲ.
ಉದಾಹರಣೆಗೆ, ಅರಬ್ ಸಮಾಜದಲ್ಲಿದ್ದ ಅತಿಥಿ ಸತ್ಕಾರ, ವಾಗ್ದಾನ ಪಾಲನೆ ಮತ್ತು ಧೈರ್ಯದಂತಹ ಗುಣಗಳಿಗೆ ಹೊಸ ನೈತಿಕ ಅರ್ಥ ನೀಡಲಾಯಿತು. ಆದರೆ ಹೆಣ್ಣುಮಕ್ಕಳ ಹತ್ಯೆ, ಬುಡಕಟ್ಟು ದ್ವೇಷ ಮತ್ತು ಶೋಷಣೆಯಂತಹ ಪದ್ಧತಿಗಳನ್ನು ಪ್ರಶ್ನಿಸಲಾಯಿತು. ಅರಬರು ಮಕ್ಕಳ ಜನ್ಮ ಆದಾಗ ಪ್ರಾಣಿ ಬಲಿ ನೀಡಿ ಅದರ ರಕ್ತವನ್ನು ಲಾತ್, ಮನಾತ್ ಮುಂತಾದ ವಿಗ್ರಹಗಳಿಗೆ ಒರೆಸುತ್ತಿದ್ದರು. ಪ್ರವಾದಿ(ಸ) ಅದೇ ಅಖೀಕಾ ಸಂಪ್ರದಾಯವನ್ನು ಶುದ್ಧೀಕರಣ ಮಾಡಿ ಅದರ ಮಾಂಸವನ್ನು ಬಡವರಿಗೆ ಹಂಚಲು ಹೇಳಿದರು.
ಇದು ನಮಗೆ ಒಂದು ಪ್ರಮುಖ ಸಾಂಸ್ಕೃತಿಕ ತತ್ವವನ್ನು ಕಲಿಸುವುದೇನೆಂದರೆ ಪರಂಪರೆಯಿರುವುದೇ ಅದರ ಸತ್ಯದ ಸಾಕ್ಷಿಯಲ್ಲ. ಹೊಸದಾಗಿರುವುದೇ ಅದರ ತಪ್ಪಿನ ಸಾಕ್ಷಿಯೂ ಅಲ್ಲ. ಜೀವನದಲ್ಲಿ ಮೌಲ್ಯವೇ ಪ್ರತಿಯೊಂದಕ್ಕೂ ಮಾನದಂಡ ಎಂಬುದಾಗಿದೆ.
ಜ್ಞಾನ: ಭೌಗೋಳಿಕ ಗಡಿಗಳನ್ನು ಮೀರುವ ಮುಕ್ತತೆ
ಕಂದಕ್ ಯುದ್ಧದ ಸಂದರ್ಭದಲ್ಲಿ ಸಲ್ಮಾನ್ ಅಲ್-ಫಾರ್ಸಿ(ರ) ಅವರು ಕಂದಕ ತೋಡುವ ತಂತ್ರವನ್ನು ಸೂಚಿಸಿದ ಘಟನೆ ಸೀರತ್ನಲ್ಲಿ ಪ್ರಸಿದ್ಧವಾಗಿದೆ. ಅರೇಬಿಯಾದಲ್ಲಿ ಅಪರಿಚಿತವಾಗಿದ್ದ ತಂತ್ರವನ್ನು ಅದರ ಉಪಯುಕ್ತತೆಯ ಕಾರಣದಿಂದ ಸ್ವೀಕರಿಸಲಾಯಿತು.
ಇದು ಕೇವಲ ಯುದ್ಧತಂತ್ರದ ಘಟನೆ ಮಾತ್ರ ಅಲ್ಲ, ಇದರ ಹಿಂದೆ ಒಂದು ಬೌದ್ಧಿಕ ತತ್ವವಿದೆ. ಜ್ಞಾನವನ್ನು ಅದರ ಮೂಲದ ಆಧಾರದ ಮೇಲೆ ತಿರಸ್ಕರಿಸಬಾರದು.
“ಇದು ನಮ್ಮ ಸಂಸ್ಕೃತಿಯದ್ದಲ್ಲ” ಎಂಬ ಕಾರಣಕ್ಕೆ ಸತ್ಯವನ್ನು ತಿರಸ್ಕರಿಸುವುದೂ, “ವಿದೇಶದ್ದಾಗಿದೆ” ಎಂಬ ಕಾರಣಕ್ಕೆ ಅಂಧವಾಗಿ ಸ್ವೀಕರಿಸುವುದೂ ಎರಡೂ ತಪ್ಪು. ವಿಚಾರವನ್ನು ಅದರ ಸತ್ಯ ಮತ್ತು ಉಪಯುಕ್ತತೆಯಿಂದ ಮೌಲ್ಯಮಾಪನ ಮಾಡುವುದು ಸೀರತ್ನ ಮುಕ್ತ ಬೌದ್ಧಿಕತೆಯ ಲಕ್ಷಣ.
ಸೀರತ್ ನಮಗೆ ಜ್ಞಾನಕ್ಕೆ ಯಾವುದೇ ಭೌಗೋಳಿಕ, ಜನಾಂಗೀಯ ಅಥವಾ ಸಾಂಸ್ಕೃತಿಕ ಗಡಿ ಇಲ್ಲವೆಂಬುದನ್ನು ಕಲಿಸುತ್ತದೆ. “ಚೀನಾಕ್ಕೆ ಹೋಗಿಯಾದರೂ ಜ್ಞಾನವನ್ನು ಹುಡುಕಿ” ಎಂಬ ಪ್ರವಾದಿಯವರ ಪ್ರಸಿದ್ಧ ಮಾತಿನ ಆಶಯವು ಸೀರತ್ನ ಘಟನೆಗಳು ಸ್ಪಷ್ಟವಾಗಿ ತೋರಿಸುತ್ತವೆ. ನಬಿ(ಸ) ಅವರು ಝೈದ್ ಬಿನ್ ಸಾಬಿತ್(ರ) ಅವರಿಗೆ ಯಹೂದ್ಯರ ಭಾಷೆ/ಲಿಪಿಯನ್ನು ಕಲಿಯುವಂತೆ ಆದೇಶಿಸಿದರು. ಅವರು ಅಲ್ಪಾವಧಿಯಲ್ಲೇ ಕಲಿತು, ಯಹೂದ್ಯರಿಂದ ಬಂದ ಪತ್ರಗಳನ್ನು ಓದಿ, ಅವರಿಗೆ ಪತ್ರಗಳನ್ನು ಬರೆಯುತ್ತಿದ್ದರು. ಬದ್ರ್ ಯುದ್ಧದ ನಂತರ ಕೆಲವು ಕೈದಿಗಳಲ್ಲಿದ್ದ ಬರವಣಿಗೆಯ ಜ್ಞಾನವನ್ನೂ ಮುಸ್ಲಿಂ ಮಕ್ಕಳಿಗೆ ಕಲಿಸುವ ಮೂಲಕ ಉಪಯೋಗಿಸಿಕೊಳ್ಳಲಾಯಿತು.
ಶೂರಾ ಸಂಸ್ಕೃತಿ: ಜ್ಞಾನವು ಒಬ್ಬನ ಸೊತ್ತಲ್ಲ
ನಬಿ(ಸ) ಅವರು ಅಲ್ಲಾಹನ ಸಂದೇಶವನ್ನು ಪಡೆದ ಪ್ರವಾದಿಯಾಗಿದ್ದರೂ, ಲೋಕ ವ್ಯವಹಾರಗಳ ನಿರ್ಧಾರಗಳಲ್ಲಿ ಸಹಾಬಿಗಳ ಅಭಿಪ್ರಾಯವನ್ನು ಕೇಳುತ್ತಿದ್ದರು. ಉಹುದ್ ಯುದ್ಧದ ಸಂದರ್ಭದಲ್ಲಿ ಮದೀನಾದೊಳಗೇ ಉಳಿದು ರಕ್ಷಣಾತ್ಮಕವಾಗಿ ಹೋರಾಡಬೇಕೆಂಬ ನಬಿ(ಸ) ಅವರ ಆರಂಭಿಕ ಅಭಿಪ್ರಾಯವಾಗಿತ್ತು. ಆದರೆ, ಯುವ ಸಹಾಬಿಗಳು ಮದೀನಾದಿಂದ ಹೊರಗೆ ಹೋಗಿ ಮುಖಾಮುಖಿಯಾಗಿ ಯುದ್ಧ ಮಾಡುವ ಅಭಿಪ್ರಾಯವನ್ನು ಬಲವಾಗಿ ವ್ಯಕ್ತಪಡಿಸಿದಾಗ, ಪ್ರವಾದಿ(ಸ) ಅವರ ಅಭಿಪ್ರಾಯವನ್ನು ಪರಿಗಣಿಸಿ ಅದನ್ನು ಅನುಸರಿಸಿದರು. ಉಹುದ್ನ ಕಠಿಣ ಪರಿಣಾಮದ ನಂತರವೂ ಅಲ್ಲಾಹನು “ಅವರೊಂದಿಗೆ ಕಾರ್ಯಗಳಲ್ಲಿ ಸಮಾಲೋಚಿಸಿರಿ. ನಿರ್ಧಾರ ಕೈಗೊಂಡ ನಂತರ ಅಲ್ಲಾಹನ ಮೇಲೆ ಭರವಸೆ ಇಡಿರಿ” ಎಂದು ಹೇಳಿದನು(3:159). ಇಲ್ಲಿ ಶೂರಾ ಎಂದರೆ ಕೇವಲ “ಬಹುಮತದ ಅಭಿಪ್ರಾಯ ಕೇಳುವುದು” ಅಲ್ಲ. ಅದು ಜ್ಞಾನವು ಅಧಿಕಾರದೊಂದಿಗೆ ಏಕೀಕರಿಸಿಕೊಳ್ಳುವುದಿಲ್ಲ ಎಂಬ ಆಳವಾದ ಜ್ಞಾನಶಾಸ್ತ್ರೀಯ ತತ್ವವಾಗಿದೆ. ನಾಯಕನ ಬಳಿ ಅಧಿಕಾರ ಇರಬಹುದು, ಅನುಭವ ಇರಬಹುದು, ಅಂತಿಮ ನಿರ್ಧಾರದ ಹೊಣೆಗಾರಿಕೆಯೂ ಇರಬಹುದು. ಆದರೆ ಒಂದು ವಿಷಯವನ್ನು ನೋಡುವ ಎಲ್ಲ ದೃಷ್ಟಿಕೋನಗಳು ಅವನೊಬ್ಬನಲ್ಲಿರಬೇಕೆಂದಿಲ್ಲ.
ಇದಕ್ಕಾಗಿಯೇ ಶೂರಾ ಒಂದು ಬೌದ್ಧಿಕ ಸಂಸ್ಕೃತಿಯನ್ನು ನಿರ್ಮಿಸುತ್ತದೆ. ಪ್ರಶ್ನಿಸುವುದು ಅವಿಧೇಯತೆ ಅಲ್ಲ, ಭಿನ್ನಾಭಿಪ್ರಾಯ ದ್ರೋಹವಲ್ಲ, ಮತ್ತು ನಾಯಕನ ನಿರ್ಧಾರವನ್ನು ಪ್ರಶ್ನಿಸುವವನು ಶತ್ರುವೂ ಅಲ್ಲ. ಉದಾಹರಣೆಗೆ, ಕಂದಕ್ ಸಂದರ್ಭದಲ್ಲಿ ಸಲ್ಮಾನ್ ಅಲ್-ಫಾರ್ಸಿ(ರ) ನೀಡಿದ ಪರ್ಷಿಯನ್ ಯುದ್ಧತಂತ್ರದ ಸಲಹೆಯನ್ನು ಸ್ವೀಕರಿಸಿದ ಪ್ರವಾದಿ(ಸ)ರವರು ಜ್ಞಾನವು “ಯಾರಿಂದ ಬಂದಿದೆ?” ಎನ್ನುವುದಕ್ಕಿಂತ “ಅದು ಸತ್ಯವೇ? ಉಪಯುಕ್ತವೇ?” ಎಂಬುದನ್ನು ನೋಡಿದರು. ಇದೇ ತತ್ವವನ್ನು ಇಂದಿನ ಶಾಲೆಯಲ್ಲಿ ಶಿಕ್ಷಕನು ವಿದ್ಯಾರ್ಥಿಯ ಪ್ರಶ್ನೆಯನ್ನು ಸ್ವೀಕರಿಸುವುದರಿಂದ, ಸಂಸ್ಥೆಯಲ್ಲಿ ಕಿರಿಯ ಉದ್ಯೋಗಿಯ ಹೊಸ ಆಲೋಚನೆಗೆ ಅವಕಾಶ ನೀಡುವುದರಿಂದ, ಆಡಳಿತದಲ್ಲಿ ಪರಿಣಿತರ ಅಭಿಪ್ರಾಯ ಕೇಳುವುದರಿಂದ ಮತ್ತು ಕುಟುಂಬದಲ್ಲಿ ಮಕ್ಕಳ ಅಭಿಪ್ರಾಯಕ್ಕೂ ಕಿವಿಗೊಡುವುದರಿಂದ ಅನ್ವಯಿಸಬಹುದು. ಶೂರಾ ಎಂದರೆ ನಾಯಕನು ತನ್ನ ಜ್ಞಾನವನ್ನು ಕಳೆದುಕೊಳ್ಳುವುದು ಅಲ್ಲ. ಇತರರ ಜ್ಞಾನವನ್ನು ತನ್ನ ನಿರ್ಧಾರದ ಭಾಗವನ್ನಾಗಿ ಮಾಡಿಕೊಂಡು ತನ್ನ ಜ್ಞಾನವನ್ನು ವಿಸ್ತರಿಸುವುದಾಗಿದೆ.
ಪರಧರ್ಮ ಗೌರವ: ವಿಶ್ವಾಸದಲ್ಲಿ ದೃಢತೆ, ಸಂಂಧದಲ್ಲಿ ಸೌಜನ್ಯ
ಇಸ್ಲಾಮ್ ತನ್ನ ಆಚರಣೆಯಲ್ಲಿ ದೃಢವಾಗಿರಲು ಹೇಳುತ್ತದೆ. ಆದರೆ ಆ ದೃಢತೆ ಮತ್ತೊಬ್ಬರ ಧಾರ್ಮಿಕ ಅಸ್ತಿತ್ವವನ್ನು ಅವಮಾನಿಸುವುದಾಗಿರಬಾರದು. ಕುರ್ಆನ್ ಹೇಳುತ್ತದೆ: “ಅವರು ಅಲ್ಲಾಹನ ಹೊರತು ಯಾರನ್ನು ಆರಾಧಿಸುತ್ತಾರೋ ಅವರನ್ನು ನಿಂದಿಸಬೇಡಿ”(6:108). “ಧರ್ಮದಲ್ಲಿ ಯಾವುದೇ ಬಲವಂತವಿಲ್ಲ” (2:256), “ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ”(109:6), ಮತ್ತು ಧಾರ್ಮಿಕ ಸಂವಾದವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸುವಂತೆ (29:46) ಮಾರ್ಗದರ್ಶನ ನೀಡುತ್ತದೆ. ಕುರ್ಆನ್, ನಿಮ್ಮ ವಿರುದ್ಧ ಧರ್ಮದ ಕಾರಣದಿಂದ ಯುದ್ಧ ಮಾಡದವ ರೊಂದಿಗೆ ಒಳ್ಳೆಯತನ ಮತ್ತು ನ್ಯಾಯದಿಂದ ವರ್ತಿಸುವುದನ್ನು ಅಲ್ಲಾಹನು ನಿಷೇಧಿಸಿಲ್ಲ (60:8) ಎಂದು ಹೇಳುತ್ತದೆ. ಅಂದರೆ ಇಸ್ಲಾಮಿನ ಪರಧರ್ಮ ಗೌರವವು ಧಾರ್ಮಿಕ ಸಾಪೇಕ್ಷತಾವಾದವಲ್ಲ. ಇಸ್ಲಾಮ್ ಎಲ್ಲ ನಂಬಿಕೆಗಳೂ ಸಮ ಎನ್ನುವುದಿಲ್ಲ, ಬದಲಾಗಿ “ನನ್ನ ಸತ್ಯದ ನಂಬಿಕೆಯಲ್ಲಿ ನಾನು ದೃಢವಾಗಿರಬಹುದು. ಅದೇ ಸಮಯದಲ್ಲಿ ಭಿನ್ನ ನಂಬಿಕೆಯ ವ್ಯಕ್ತಿಯ ಮಾನವೀಯ ಗೌರವವನ್ನು ಕಾಪಾಡಬಹುದು” ಎಂಬ ಬೌದ್ಧಿಕ ನೈತಿಕತೆ ಅದರ ಅಡಿಪಾಯವಾಗಿದೆ.
ಪರಧರ್ಮ ಗೌರವ ಎಂದರೆ ತನ್ನ ನಂಬಿಕೆಯನ್ನು ದುರ್ಬಲಗೊಳಿಸುವುದು ಅಲ್ಲ. ತನ್ನ ನಂಬಿಕೆಯನ್ನು ಅಷ್ಟು ಪ್ರೌಢವಾಗಿ ಹೊಂದಿರುವುದು. ಭಿನ್ನ ನಂಬಿಕೆಯ ವ್ಯಕ್ತಿಯನ್ನು ಅವಮಾನಿಸದೆ ಅದನ್ನು ಪ್ರತಿಪಾದಿಸಲು ಸಾಧ್ಯವಾಗುವುದು. ಪ್ರಶ್ನೆಗೆ ಉತ್ತರವನ್ನು ವಾದದಿಂದ ಕೊಡಬಹುದು. ಆದರೆ ಅವಮಾನದಿಂದಲ್ಲ. ಭಿನ್ನಾಭಿಪ್ರಾಯವನ್ನು ಉಳಿಸಿ ಕೊಂಡೇ ಸಂಬಂಧವನ್ನು ಉಳಿಸಬಹುದು.
ಭಾಷೆ ಮತ್ತು ಸಾಹಿತ್ಯ: ಸಂಸ್ಕೃತಿಯ ಪರಿವರ್ತನಾ ಶಕ್ತಿ
ಅರಬ್ ಸಮಾಜದಲ್ಲಿ ಕಾವ್ಯವು ಕೇವಲ ಮನರಂಜನೆಯ ಸೀಮಿತವಾದ ಮಾಧ್ಯಮವಾಗಿರಲಿಲ್ಲ. ಅದು ಜನರ ಚಿಂತನೆ, ಗೌರವ, ಸಾಮಾಜಿಕ ಸ್ಥಾನಮಾನ ಮತ್ತು ಸಮುದಾಯದ ನರೇಟಿವ್ ಕಟ್ಟುವ ಅತ್ಯಂತ ಪ್ರಭಾವಶಾಲಿ ಸಾಂಸ್ಕೃತಿಕ ಶಕ್ತಿಯಾಗಿತ್ತು. ಈ ಶಕ್ತಿಯನ್ನು ಪ್ರವಾದಿ(ಸ) ನಿರ್ಲಕ್ಷಿಸಲಿಲ್ಲ. ಹಸ್ಸಾನ್ ಬಿನ್ ಸಾಬಿತ್(ರ) ಅವರ ಕಾವ್ಯವನ್ನು ಇಸ್ಲಾಮಿನ ಪರವಾಗಿ ಬಳಸಲು ಪ್ರೋತ್ಸಾಹಿಸಿದ ಪ್ರಸಂಗಗಳು ಸೀರತ್ನಲ್ಲಿ ಕಾಣುತ್ತವೆ. “ಹಸ್ಸಾನ್ನೊಂದಿಗೆ ಜಿಬ್ರೀಲ್ ಇದ್ದಾರೆ” ಎಂಬ ಹದೀಸ್ ಇದೆ. ಸೀರತ್ ಕಲೆಯನ್ನು ನಿರಾಕರಿಸುವುದಿಲ್ಲ. ಬದಲಾಗಿ ಕಲೆಯು ಯಾವ ಮೌಲ್ಯವನ್ನು ಪ್ರತಿನಿಧಿಸುತ್ತಿದೆ, ಅದು ಯಾರ ಮನಸ್ಸನ್ನು ಹೇಗೆ ರೂಪಿಸುತ್ತಿದೆ ಮತ್ತು ಯಾವ ಸಾಮಾಜಿಕ ಪರಿಣಾಮವನ್ನು ಉಂಟುಮಾಡುತ್ತಿದೆ ಎಂಬುದನ್ನು ಮುಖ್ಯವಾಗಿಸುತ್ತದೆ. ಇಸ್ಲಾಮ್ ಕಾವ್ಯದ ಶಕ್ತಿಯನ್ನು ಸತ್ಯ, ನ್ಯಾಯ ಮತ್ತು ಉತ್ತಮ ಮೌಲ್ಯಗಳ ಪರವಾಗಿ ಬಳಸುವುದನ್ನು ಕಲಿಸುತ್ತದೆ. ಕೆಟ್ಟ, ಅಶ್ಲೀಲ ಭಾಷೆಯ, ಕ್ಷೋಭೆ ಹರಡುವ ಮಾಧ್ಯಮವನ್ನು ಮಾತ್ರ ಇಸ್ಲಾಮ್ ನಿಷೇಧಿಸುತ್ತದೆ. ಆದ್ದರಿಂದ ಸೀರತ್ನ ದೃಷ್ಟಿಯಲ್ಲಿ “ಕಲೆ ಇರಬೇಕೇ?” ಎಂಬ ಪ್ರಶ್ನೆಗಿಂತ “ಕಲೆ ಮನುಷ್ಯನನ್ನು ಯಾವ ದಿಕ್ಕಿಗೆ ಕರೆದೊಯ್ಯುತ್ತಿದೆ?” ಎಂಬ ಪ್ರಶ್ನೆಯೇ ಹೆಚ್ಚು ಬೌದ್ಧಿಕವಾದುದು.
ಮಾನವ ಸಮಾನತೆ: ವಂಶ, ಕುಲ, ಗೋತ್ರ, ಮೇಲ್ಮೈಯಿಂದ ಮೌಲ್ಯಕ್ಕೆ
ಸೀರತ್ನ ಅತ್ಯಂತ ಕ್ರಾಂತಿಕಾರಿ ಸಾಮಾಜಿಕ ಸಂದೇಶಗಳಲ್ಲಿ ಒಂದು ಮನುಷ್ಯನ ಮೌಲ್ಯವನ್ನು ಜನ್ಮ, ವಂಶ, ವರ್ಣ ಅಥವಾ ಸಾಮಾಜಿಕ ಸ್ಥಾನಮಾನದಿಂದ ಬೇರ್ಪಡಿಸಿ ನೈತಿಕತೆಯೊಂದಿಗೆ ಜೋಡಿಸಿರುವುದು. ಕುರ್ಆನ್ ಹೇಳುತ್ತದೆ, “ನೀವು ಪರಸ್ಪರ ಪರಿಚಯವಾಗಲೆಂದು ನಾವು ನಿಮ್ಮನ್ನು ಜನಾಂಗಗಳೂ ಗೋತ್ರಗಳೂ ಆಗಿ ಮಾಡಿದ್ದೇವೆ. ನಿಮ್ಮಲ್ಲಿ ಅಲ್ಲಾಹನ ಬಳಿ ಅತ್ಯಂತ ಗೌರವಾನ್ವಿತನು ಅತ್ಯಂತ ದೇವಭಯ ಉಳ್ಳವನು” (49:13).
ಇದು ಸಾಮಾಜಿಕ ಮೌಲ್ಯಮಾಪನದ ಮಾನದಂಡವನ್ನೇ ಬದಲಿಸಿದ ಸಾಂಸ್ಕೃತಿಕ ಕ್ರಾಂತಿಯಾಗಿದೆ. “ನೀನು ಯಾರ ಮಗ?” ಎಂಬ ಪ್ರಶ್ನೆಯಿಂದ “ನೀನು ಯಾವ ರೀತಿಯ ಮನುಷ್ಯ?” ಎಂಬ ಪ್ರಶ್ನೆಯ ಕಡೆಗೆ ಸಮಾಜವನ್ನು ಕರೆದೊಯ್ಯುವುದು ಇದರ ವೈಚಾರಿಕ ಅರ್ಥವಾಗಿದೆ. ವೈವಿಧ್ಯತೆ ನಿರ್ಮೂಲಗೊಳಿಸಬೇಕಾದ ಸಮಸ್ಯೆಯಲ್ಲ. ಅದು ಮಾನವ ಸಮಾಜದ ಸಹಜ ವಾಸ್ತವ. ಇಂದಿನ ಜಗತ್ತಿನಲ್ಲಿ ಸೀರತ್ನ ಪ್ರಶ್ನೆ ಇನ್ನೂ ಪ್ರಸ್ತುತವಾಗಿದೆ. “ನಿನ್ನ ಜನ್ಮ ನಿನ್ನ ಪರಿಚಯವಾಗಬಹುದು. ಆದರೆ ಅದು ನಿನ್ನ ಮೌಲ್ಯವನ್ನು ನಿರ್ಧರಿಸುವುದಿಲ್ಲ.”
ಕುಟುಂಬ: ಸಂಸ್ಕೃತಿಯ ಮೊದಲ ವಿಶ್ವವಿದ್ಯಾಲಯ
“ನಿಮ್ಮಲ್ಲಿ ಉತ್ತಮರು ತಮ್ಮ ಕುಟುಂಬದವರಿಗೆ ಉತ್ತಮರು” ಎಂಬ ಪ್ರವಾದಿ(ಸ) ಅವರ ಮಾತು ಕುಟುಂಬದ ನೈತಿಕತೆಯನ್ನು ವ್ಯಕ್ತಿತ್ವದ ಮಾನದಂಡವನ್ನಾಗಿ ಮಾಡುತ್ತದೆ. ಆಯಿಶಾ(ರ) ಅವರೊಂದಿಗೆ ಓಟದ ಸ್ಪರ್ಧೆ ನಡೆಸಿದ ಪ್ರಸಂಗವೂ ಕುಟುಂಬ ಸಂಬಂಧದಲ್ಲಿ ಪ್ರೀತಿ, ಸ್ನೇಹ ಮತ್ತು ಆಟಕ್ಕೂ ಸ್ಥಾನವಿದೆ ಎಂಬುದನ್ನು ತೋರಿಸುತ್ತದೆ. ಹೀಗಾಗಿ ಸೀರತ್ನ ಕುಟುಂಬ ಮಾದರಿಯಲ್ಲಿ ಅಧಿಕಾರಕ್ಕಿಂತ ಪ್ರೀತಿ, ನಿಯಂತ್ರಣಕ್ಕಿಂತ ವಿಶ್ವಾಸ, ಭಯಕ್ಕಿಂತ ಸಂವಾದ ಮುಖ್ಯವಾಗುತ್ತದೆ. ಸಮಾಜವನ್ನು ಬದಲಿಸುವ ಮೊದಲು ಕುಟುಂಬದ ಸಂಸ್ಕೃತಿಯನ್ನು ಬದಲಿಸಬೇಕು. ಮಗು ಮೊದಲ ಬಾರಿಗೆ ಭಾಷೆಯನ್ನು ಶಾಲೆಯಲ್ಲಿ ಅಲ್ಲ, ಮನೆಯಲ್ಲಿ ಕಲಿಯುತ್ತದೆ. ಪ್ರೀತಿಯ ಅರ್ಥ, ಗೌರವದ ಭಾಷೆ, ಭಿನ್ನಾಭಿಪ್ರಾಯವನ್ನು ಎದುರಿಸುವ ವಿಧಾನ, ಧಾರ್ಮಿಕ ಮೌಲ್ಯಗಳು, ಶಿಸ್ತು ಮತ್ತು ಜವಾಬ್ದಾರಿಯನ್ನೂ ಅದು ಮನೆಯ ವಾತಾವರಣದಿಂದಲೇ ಕಲಿಯುತ್ತದೆ. ಆದ್ದರಿಂದ ಕುಟುಂಬವನ್ನು ಕೇವಲ ಖಾಸಗಿ ವಲಯವೆಂದು ನೋಡುವುದು ಅದರ ಸಾಮಾಜಿಕ ಮಹತ್ವವನ್ನು ಕಡಿಮೆ ಮಾಡುತ್ತದೆ. ಒಂದು ಮನೆಯಲ್ಲಿನ ಮಾತಿನ ಸಂಸ್ಕೃತಿ ಮುಂದಿನ ಪೀಳಿಗೆಯ ಸಾರ್ವಜನಿಕ ಸಂಸ್ಕೃತಿಯಾಗುತ್ತದೆ. ಮನೆಯಲ್ಲಿ ಅವಮಾನ ಕಲಿತ ಮಗು ಸಮಾಜದಲ್ಲಿ ಗೌರವವನ್ನು ಹೇಗೆ ನಿರ್ಮಿಸುತ್ತದೆ? ಮನೆಯಲ್ಲಿ ಪ್ರಶ್ನೆಗೆ ಅವಕಾಶವಿಲ್ಲದ ಮಗು ಸಮಾಜದಲ್ಲಿ ಬೌದ್ಧಿಕ ಸ್ವಾತಂತ್ರ್ಯವನ್ನು ಹೇಗೆ ಬೆಳೆಸುತ್ತದೆ? ಈ ಕಾರಣದಿಂದ ಸೀರತ್ನ ಕುಟುಂಬದರ್ಶನವು ಮೂಲತಃ ಒಂದು ನಾಗರಿಕ ಯೋಜನೆಯ ಭಾಗವಾಗಿದೆ. ಉತ್ತಮ ಕುಟುಂಬಗಳನ್ನು ನಿರ್ಮಿಸುವ ಮೂಲಕ ಉತ್ತಮ ಮನುಷ್ಯರನ್ನು, ಉತ್ತಮ ಮನುಷ್ಯರ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವ ಪ್ರಯತ್ನವಾಗಿದೆ.
ಸೌಂದರ್ಯ ಮತ್ತು ಸ್ವಚ್ಛತೆ: ಬಾಹ್ಯದಿಂದ ಆಂತರಿಕದವರೆಗೆ
ಪ್ರವಾದಿಯ ಬದುಕಿನಲ್ಲಿ ಸ್ವಚ್ಛತೆ ಕೇವಲ ಆರೋಗ್ಯದ ನಿಯಮವಲ್ಲ. ಅದು ವ್ಯಕ್ತಿತ್ವ ಮತ್ತು ಸಂಸ್ಕೃತಿಯ ಭಾಗವಾಗಿದೆ. ಕುರ್ಆನ್ ಹೇಳುತ್ತದೆ: “ಅಲ್ಲಾಹನು ಪಶ್ಚಾತ್ತಾಪಪಡುವವರನ್ನೂ ಶುದ್ಧತೆಯನ್ನು ಕಾಪಾಡುವವರನ್ನೂ ಪ್ರೀತಿಸುತ್ತಾನೆ” (2:222). ಪ್ರವಾದಿವರ್ಯರು(ಸ) ಮಸೀದಿಗೆ ಕೆಟ್ಟ ವಾಸನೆಯೊಂದಿಗೆ ಬರುವುದನ್ನು ನಿರುತ್ಸಾಹಗೊಳಿಸಿದರು. ಅಂದರೆ ಸ್ವಚ್ಛತೆ ವೈಯಕ್ತಿಕ ಅಭ್ಯಾಸದಿಂದ ಸಾರ್ವಜನಿಕ ಸೌಜನ್ಯದವರೆಗೆ ವಿಸ್ತರಿಸುತ್ತದೆ. ನಮ್ಮ ದೇಹ, ಬಟ್ಟೆ ಮತ್ತು ಸುತ್ತಮುತ್ತಲಿನ ಪರಿಸರದ ಸ್ಥಿತಿ ಇತರರ ಮೇಲಿನ ನಮ್ಮ ಗೌರವವನ್ನೂ ವ್ಯಕ್ತಪಡಿಸುತ್ತದೆ.
ಪ್ರವಾದಿ(ಸ) ಅವರ ಸ್ವಚ್ಛತೆಯ ಪರಿಕಲ್ಪನೆ ಇನ್ನೂ ಆಳವಾದುದು. ಬಾಹ್ಯ ಶುಚಿತ್ವದ ಜೊತೆಗೆ ಆಂತರಿಕ ಶುಚಿತ್ವವೂ ಅಗತ್ಯ. ಸುಳ್ಳು, ಅಹಂಕಾರ, ದ್ವೇಷ, ಹಗೆ, ಲೋಭ ಮತ್ತು ಅನ್ಯಾಯದಿಂದ ಹೃದಯವನ್ನು ಶುದ್ಧಗೊಳಿಸುವುದು ಅದರ ನೈತಿಕ ವಿಸ್ತರಣೆ. ಸೀರತ್ ನಮಗೆ ಒಂದು ವಿಶಾಲವಾದ ಸಾಂಸ್ಕೃತಿಕ ಮಾನದಂಡವನ್ನು ನೀಡುತ್ತದೆ. ಸೌಂದರ್ಯ ಕೇವಲ ಮುಖದಲ್ಲಿ ಅಲ್ಲ, ವರ್ತನೆಯಲ್ಲಿದೆ, ಸ್ವಚ್ಛತೆ ಕೇವಲ ದೇಹದಲ್ಲಿ ಅಲ್ಲ, ಮನಸ್ಸಿನಲ್ಲೂ ಇರಬೇಕು.
ವಿಶ್ವಮಾನವೀಯತೆ: ಸ್ಥಳೀಯದಿಂದ ಸಾರ್ವತ್ರಿಕತೆಗೆ
ಪ್ರವಾದಿ(ಸ) ಅವರ ಸೀರತ್ನ ವಿಶ್ವಮಾನವೀಯತೆಯ ಒಂದು ವಿಶಿಷ್ಟ ಅಂಶವೆಂದರೆ, ಇಸ್ಲಾಮ್ ಜನರ ಸ್ಥಳೀಯ ಸಂಸ್ಕೃತಿಗಳನ್ನು ಅಳಿಸುವುದಕ್ಕಿಂತ, ಅವುಗಳಲ್ಲಿ ಇರುವ ಉತ್ತಮ ಅಂಶಗಳಿಗೆ ಮಾನವೀಯ ಮತ್ತು ನೈತಿಕ ಅರ್ಥ ನೀಡಿತು. ಅರಬ್ ಸಮಾಜದ ಮದುವೆ, ಆತಿಥ್ಯ, ಉಡುಪು, ಭಾಷೆ, ಕಾವ್ಯ, ವ್ಯಾಪಾರ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಧರ್ಮಕ್ಕೆ ವಿರುದ್ಧವಲ್ಲದ ಅನೇಕ ಅಂಶಗಳು ಮುಂದುವರಿದವು. ಇಸ್ಲಾಮೀಕರಣವೆಂದರೆ ಪ್ರತಿಯೊಂದು ಸ್ಥಳೀಯ ಸಂಪ್ರದಾಯವನ್ನು ಒಂದೇ ಮಾದರಿಗೆ ಪರಿವರ್ತಿಸುವುದಲ್ಲ. ಒಂದು ಆಚರಣೆಯ ಆಕಾರ ಸ್ಥಳೀಯವಾಗಿರಬಹುದು. ಅದರೊಳಗಿನ ಮೌಲ್ಯವು ಸಾರ್ವತ್ರಿಕವಾಗಿರಬಹುದು. ಹೀಗಾಗಿ ಪ್ರವಾದಿ(ಸ) ಅವರ ಸೀರತ್ನಲ್ಲಿ ಸಂಸ್ಕೃತಿಯ ಬಗ್ಗೆ ಮೂಲಭೂತ ಪ್ರಶ್ನೆ “ಇದು ಅರಬ್ ಸಂಪ್ರದಾಯವೇ?” ಎಂಬುದಲ್ಲ. “ಇದರಲ್ಲಿ ಅನ್ಯಾಯವಿದೆಯೇ? ಅಶ್ಲೀಲತೆಯಿದೆಯೇ? ಶಿರ್ಕ್ ಅಥವಾ ಮಾನವ ಘನತೆಗೆ ವಿರುದ್ಧವಾದ ಅಂಶವಿದೆಯೇ?” ಎಂಬುದಾಗಿತ್ತು.
ಧಾರ್ಮಿಕ ಅಂಶಗಳು ಸಾರ್ವತ್ರಿಕವಾಗಿದ್ದರೂ, ಅದರ ಸುತ್ತಲಿನ ಸಾಮಾಜಿಕ ಅಭಿವ್ಯಕ್ತಿಗಳು ಸ್ಥಳೀಯ ಸಂಸ್ಕೃತಿಯ ಪ್ರಕಾರ ಬದಲಾಗಬಹುದು. ಅರಬ್ನ ಮದುವೆಯ ಸಂಭ್ರಮ ಅರಬ್ನದ್ದಾಗಿರಬಹುದು. ಭಾರತದ ಮದುವೆಯ ಕೆಲವು ಸಾಂಸ್ಕೃತಿಕ ಅಭಿವ್ಯಕ್ತಿಗಳು ಭಾರತೀಯವಾಗಿರಬಹುದು. ಸೀರತ್ನ ದೃಷ್ಟಿಯಲ್ಲಿ ಪ್ರಶ್ನೆ ಸಂಸ್ಕೃತಿಯ ಮೂಲವಲ್ಲ, ಅದರ ನೈತಿಕ ಗುಣಮಟ್ಟ ಮುಖ್ಯವಾಗಿದೆ. ಹೀಗಾಗಿ ವಿಶ್ವಮಾನವೀಯತೆ ಎಂದರೆ “ಎಲ್ಲರೂ ಒಂದೇ ರೀತಿಯಲ್ಲಿ ಬದುಕಬೇಕು” ಎಂಬುದಲ್ಲ. “ವಿಭಿನ್ನ ರೀತಿಯಲ್ಲಿ ಬದುಕಿದರೂ ಒಂದೇ ಮಾನವೀಯ ಮೌಲ್ಯಗಳೊಳಗೆ ಸಹಬಾಳ್ವೆ ನಡೆಸಬಹುದು.
IslamKannada News Portal
