ಪ್ರಶ್ನೆ: ಕೆಲವೊಮ್ಮೆ ಪ್ರಯಾಣದಲ್ಲಿರುವಾಗ ಕಿಬ್ಲಾದ ದಿಕ್ಕು ಸ್ಪಷ್ಟವಾಗಿರುವುದಿಲ್ಲ ಅಂತಹ ಸ್ಥಿತಿಯಲ್ಲಿ ಅಂದಾಜಿಗೆ ಕಿಬ್ಲಾ ಇದಾಗಿರಬಹುದೆಂದು ನಮಾಝ್ ಮಾಡಬಹುದೆ? ಒಂದು ವೇಳೆ ನಮಾಝ್‍ನಲ್ಲಿರುವಾಗ ಅಥವಾ ನಮಾಝ್ ಮುಗಿದ ನಂತರ ನಮ್ಮ ಮುಖ ಮಾಡಿದ್ದು ಕಿಬ್ಲಾದ ಕಡೆಗಲ್ಲವೆಂದು ತಿಳಿದು ಬಂದರೆ ಆಗ ಏನು ಮಾಡಬೇಕು?
ಉತ್ತರ: ಕಿಬ್ಲಾ (ಅಭಿಮುಖ ಕೇಂದ್ರ ಮಸ್ಜಿದುಲ್ ಹರಾಮ್)ದ ಕಡೆಗೆ ಮುಖ ಮಾಡಿ ನಮಾಝ್ ಮಾಡುವುದು ಕಡ್ಡಾಯವಾಗಿದೆ. ಆದರೆ ಪ್ರಯಾಣದಲ್ಲಿರುವಾಗ ಅಥವಾ ಅಂಧಕಾರದಲ್ಲಿ ಕಿಬ್ಲಾ ಸರಿಯಾಗಿ ತಿಳಿದಿಲ್ಲವಾದರೆ ದಿಕ್ಕನ್ನು ಅಂದಾಜಿಸಿ ನಮಾಝ್ ಮಾಡಬಹುದು. ಅಬ್ದುಲ್ಲಾ ಬಿನ್ ಆಮಿರ್ ಬಿನ್ ರಬೀಅ ತನ್ನ ತಂದೆಯಿಂದ ವರದಿ ಮಾಡುತ್ತಾರೆ. ಅವರು ಹೇಳಿದರು- ಒಮ್ಮೆ ನಾವು ಅಂಧಕಾರದಲ್ಲಿ ಪ್ರಯಾಣಿಸುತ್ತಿದ್ದೆವು. ನಮ್ಮ ಕಿಬ್ಲಾ ಎಲ್ಲಿ ಎಂದು ತಿಳಿದಿರಲಿಲ್ಲ. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ತಂತಮ್ಮ ಅಂದಾಜಿನಂತೆ ನಮಾಝ್ ನಿರ್ವಹಿಸಿದರು. ಬೆಳಿಗ್ಗೆ ನಾವು ಪ್ರವಾದಿವರ್ಯರಿಗೆ ಈ ವಿಷಯ ತಿಳಿಸಿದೆವು. ಆಗ ಪವಿತ್ರ ಕುರ್‍ಆನಿನ ಈ ಸೂಕ್ತ ಅವತೀರ್ಣಗೊಂಡಿತು- “ನೀವೆತ್ತ ಮುಖ ಮಾಡಿದರೂ ಅಲ್ಲಿ ಅಲ್ಲಾಹನ ಮುಖವಿದೆ.” (2:115)
ವಿಶ್ವಾಸಿಯು ಮರುಭೂಮಿಯಲ್ಲಿ ಅಥವಾ ಕಿಬ್ಲಾ ಸಂದೇಹಾಸ್ಪದವಾಗಿರುವ ಒಂದು ಊರಿನಲ್ಲಿ ಕಿಬ್ಲಾದ ದಿಕ್ಕು ತಿಳಿಯಲು ಪೂರ್ಣ ಪ್ರಯತ್ನಿಸಿ ತನ್ನ ಸಂಶೋಧನೆಯಿಂದ ನಮಾಝ್ ನಿರ್ವಹಿಸಿದರೆ ಅದು ಸಿಂಧುವಾಗುತ್ತದೆಂದು ಅಲ್ಲಾಮಾ ಇಬ್ನು ಬಾಝ್ ಫತ್ವಾ ನೀಡಿದ್ದಾರೆ. ಇನ್ನು ನಮಾಝ್ ನಿರ್ವಹಿಸಿದ ನಂತರ ಅದು ಕಿಬ್ಲಾದ ದಿಕ್ಕಿಗಾಗಿರಲಿಲ್ಲವೆಂದು ತಿಳಿದು ಬಂದರೆ ಆ ನಮಾಝನ್ನು ಪುನರಾರ್ವತಿಸಬೇಕೇ ಎಂಬ ಬಗ್ಗೆ ಫುಕಹಾಗಳ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ಹನಫೀ ಮತ್ತು ಹಂಬಲಿಗಳು ಪುನರಾವರ್ತಿಸಬೇಕಿಲ್ಲವೆಂದು ಹೇಳುತ್ತಾರೆ. ಮಾಲಿಕಿಗಳು ಆ ನಮಾಝ್‍ನ ಸಮಯದಲ್ಲಿ ಅದನ್ನು ಪುನರಾವರ್ತಿಸಬೇಕೆಂದು ಹೇಳುತ್ತಾರೆ. ಶಾಫೀಗಳ ಪ್ರಕಾರ, ಅದರ ಸಮಯದಲ್ಲಿ ಅಥವಾ ಆ ನಮಾಝ್‍ನ ಸಮಯ ಕಳೆದ ನಂತರವೂ ಅದನ್ನು ಪುನರಾವರ್ತಿಸುವುದು ಕಡ್ಡಾಯವೆಂದು ಹೇಳುತ್ತಾರೆ. ಈ ಎಲ್ಲ ಅಭಿಪ್ರಾಯಗಳನ್ನು ಮುಂದಿಟ್ಟು ನೋಡುವುದಾದರೆ ನಮಾಜ್‍ನ ಸಮಯದಲ್ಲಾಗಲಿ ಅದು ಕಳೆದ ನಂತರವಾಗಲಿ ಪುನರಾವರ್ತಿಸುವ ಅಗತ್ಯವಿಲ್ಲವೆಂದೇ ಸರಿಯಾದ ಅಭಿಪ್ರಾಯವೆಂದು ತಿಳಿದು ಬರುತ್ತದೆ. ಏಕೆಂದರೆ ಮೇಲೆ ಉದ್ಧರಿಸಿದ ಘಟನೆಯಲ್ಲಿ ಪ್ರವಾದಿ(ಸ) ಸಹಾಬಿಗಳಿಗೆ ಪುನರಾವರ್ತಿಸಲು ಆದೇಶಿಸಲಿಲ್ಲವೆಂದು ನೈಲುಲು ಅವುತಾರ್, ಅಸ್ಸಯಿಲುಲ್ ಹರಾರ್ ಮತ್ತು ತುಹ್ಪ ಹಾಗೂ ಅಲ್‍ಮುಗ್ನಿ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇನ್ನು ನಮಾಝ್‍ನಲ್ಲಿರುವಾಗಲೇ ಕಿಬ್ಲಾದ ದಿಕ್ಕು ನಿಖರವಾಗಿ ತಿಳಿದು ಬಂದರೆ ಅದೇ ಸ್ಥಿತಿಯಲ್ಲಿ ಕಿಬ್ಲಾದ ಕಡೆಗೆ ತಿರುಗಬೇಕು. ಇದರಲ್ಲಿ ವಿದ್ವಾಂಸರೆಲ್ಲರೂ ಏಕಾಭಿಪ್ರಾಯ ಹೊಂದಿದ್ದಾರೆ.
IslamKannada News Portal
