ಪ್ರಶ್ನೆ: ಜೊಲ್ಲುರಸ ನುಂಗಿದರೆ ಉಪವಾಸ ಮುರಿಯುವುದೇ?
ಉತ್ತರ: ಶರೀಅತ್ನ ವಿಧಿಗಳು ಜನರಿಗೆ ಸಂಕಷ್ಟವನ್ನುಂಟು ಮಾಡಲು ಬಯಸಿಲ್ಲ. ಬದಲಾಗಿ ಅದನ್ನು ಸುಲಭಗೊಳಿಸುವುದೂ, ಇಕ್ಕಟ್ಟನ್ನು ಇಲ್ಲವಾಗಿಸುವುದೂ ಅದರ ಮೌಲ್ಯಗಳಲ್ಲಿ ಸೇರಿದೆ. ಅಲ್ಲಾಹನು ಹೇಳುತ್ತಾನೆ: “ಅಲ್ಲಾಹನು ನಿಮಗೆ ಸೌಲಭ್ಯ ವನ್ನು ನೀಡಬಯಸುತ್ತಾನೆ. ಸಂಕಷ್ಟಕ್ಕೀಡು ಮಾಡಲು ಇಚ್ಛಿಸುವುದಿಲ್ಲ.” (ಅಲ್ಬಕರ: 185)
ಇನ್ನೊಂದೆಡೆ ಹೇಳಲಾಗಿದೆ:
ಅಲ್ಲಾಹನು ನಿಮ್ಮ ಮೇಲಿನ ಬಾಧ್ಯತೆಗಳನ್ನು ಹಗುರಗೊಳಿಸಬೇಕೆಂದು ಇಚ್ಛಿಸುತ್ತಾನೆ. ಏಕೆಂದರೆ ಮನುಷ್ಯನನ್ನು ದುರ್ಬಲನಾಗಿ ಸೃಷ್ಟಿಸಲಾಗಿದೆ. (ಅನ್ನಿಸಾ: 26-28)
ಇನ್ನೊಂದೆಡೆ ಹೀಗೆ ಹೇಳಲಾಗಿದೆ,
“ಧರ್ಮದಲ್ಲಿ ನಿಮಗೇನೂ ಸಂಕೀರ್ಣತೆಯನ್ನಿರಿಸಿಲ್ಲ.” (ಅಲ್ ಹಜ್ಜ್: 78)
ಆದ್ದರಿಂದ ಸಾಮಾನ್ಯವಾಗಿ ನಮಗೆ ಜಾಗ್ರತೆ ವಹಿಸಲು ಸಾಧ್ಯವಾಗದ ವಿಷಯಗಳಿಗಾಗಿ ಉಪವಾಸ ಮುರಿಯುವುದಿಲ್ಲ. ಇದನ್ನು ವಿದ್ವಾಂಸರು ಮತ್ತು ಇಮಾಮರು ಸ್ಪಷ್ಟಪಡಿಸಿದ್ದಾರೆ. ಉದಾಹರಣೆಗೆ ಇಮಾಮ್ ಇಬ್ನು ಖುದಾಮ ಹೇಳುತ್ತಾರೆ, “(ಜೊಲ್ಲು ರಸದಂತೆ) ಸೂಕ್ಷ್ಮತೆ ಪಾಲಿಸಲು ಸಾಧ್ಯವಾಗದ ಕಾರ್ಯಗಳಿಂದ ಉಪವಾಸ ಮುರಿಯುವುದಿಲ್ಲ. ಅದರಲ್ಲಿ ಸೂಕ್ಷ್ಮತೆ ವಹಿಸುವುದು ಕಷ್ಟಕರವಾಗಿದೆ. ದಾರಿಯ ಧೂಳುಗಳು, ಹೊಗೆ, ಬಾಯಿಯ ಜೊಲ್ಲು ರಸ ಉದ್ದೇಶಪೂರ್ವಕವಾಗಿ ನುಂಗಿದರೂ ಕೂಡ ಉಪವಾಸ ಮುರಿಯುವುದಿಲ್ಲ.” (ಮುಗ್ನಿ- 3: 16)
ಇಮಾಮ್ ಮುತವಲ್ಲಿಯವರು ಮತ್ತು ಇತರರು ಹೇಳುತ್ತಾರೆಂದು ಇಮಾಮ್ ನವವಿ ಉಲ್ಲೇಖಿಸಿದ್ದಾರೆ:
“ಉಪವಾಸಿಗರು ಬಾಯಿ ಮುಕ್ಕಳಿಸಿದರೆ ನೀರನ್ನು ಉಗುಳಬೇಕು. ಆದರೆ ಬಟ್ಟೆಯೋ ಅಥವಾ ಇನ್ಯಾವುದನ್ನೋ ಉಪಯೋಗಿಸಿ ಶುದ್ಧಿಗೊಳಿಸಬೇಕಾಗಿಲ್ಲ. ಇದರಲ್ಲಿ ಭಿನ್ನಾಭಿಪ್ರಾಯವಿಲ್ಲ.” (ಶರಹುಲ್ ಮುಹದ್ದಬ್- 6: 327)
ಆದರೆ ಜೊಲ್ಲುರಸದೊಂದಿಗೆ ಇತರ ಆಹಾರ ಪಾನೀಯಗಳ ಅವಶೇಷಗಳು ಸೇರಿಕೊಂಡಿದ್ದರೆ ಉಗುಳಲೇಬೇಕು. ಸಿಹಿಯಿದೆಯೊ? ಉಪ್ಪು ಇದೆಯೋ ಎಂದೆಲ್ಲಾ ನೋಡುವಂತೆ ಅಂತಹ ಸಂದರ್ಭಗಳಲ್ಲೂ ಜೊಲ್ಲುರಸವನ್ನು ನುಂಗಬಾರದು. ಆದ್ದರಿಂದ ಉಪವಾಸ ಆಚರಿಸುವಾಗ ಹೀಗೆ ಉಗುಳುತ್ತಾ ನಡೆಯಬೇಕಾಗಿಲ್ಲ. ಪ್ರವಾದಿಗಳೋ, ಸಹಾಬಿಗಳೋ, ಸಲಫುಸ್ವಾಲಿಹ್ಗಳೋ ಹಾಗೆ ಮಾಡುತ್ತಲೂ ಇರಲಿಲ್ಲ ಎಂದು ಮಾತ್ರವಲ್ಲ ಇತರರಿಗೂ ನಮ್ಮ ಆ ನಡವಳಿಕೆ ಅರೋಚಕವಾಗಿರುತ್ತದೆ.
ಅದೇವೇಳೆ ಕಫವನ್ನು ಉಗುಳಲೇಬೇಕು. ಗಂಟಲಿನೊಳಗೆಯೇ ಸಿಲುಕಿದ್ದು ಬಾಯಿಗೆ ಬರದಂತಹ ಕಫ ಒಳಗೆ ಹೋದರೆ ತಪ್ಪಿಲ್ಲ. ಆದರೆ ಕ್ಯಾಕರಿಸಿದ ಬಳಿಕವೋ ಮೂಗಿನಿಂದ ಎಳೆದೋ ಉಂಟಾಗುವ ಕಫವನ್ನು ನುಂಗಬಾರದು. ವಿಸರ್ಜಿಸಬೇಕಾದ ವಸ್ತು ಎಂಬ ನೆಲೆಯಲ್ಲಿ ಉಪವಾಸವಿಲ್ಲದಿದ್ದರೂ ಅದನ್ನು ಉಗುಳಲೇಬೇಕು ಎಂದು ವಿದ್ವಾಂಸರು ಕಲಿಸಿದ್ದಾರೆ. ಇಂತಹ ವಿವರಣೆಗಳನ್ನು ಹೆಚ್ಚು ತಿಳಿಯಬಯಸುವವರು ಇಮಾಮ್ ನವವಿಯವರು ಬರೆದದ್ದನ್ನು ನೋಡಬೇಕು. (ಶರಫುಲ್ ಮುಹದ್ದಬ್ 6-319)
ಆದರೆ ಜೊಲ್ಲುರಸದಂತೆಯೇ ಇದರ ವಿಧಿಯೆಂದೂ, ಅದು ನುಂಗಿದರೆ ಉಪವಾಸಕ್ಕೆ ತೊಂದರೆಯಿಲ್ಲವೆಂದೂ ಅಭಿಪ್ರಾಯವಿರುವ ವಿದ್ವಾಂಸರಿದ್ದಾರೆ. ಹನಫೀ ಫಿಕ್ಹ್ ಗ್ರಂಥವಾದ ಅಲ್ ಬಹ್ದರ್ರಾಇಖ್ 12-294 ನೋಡಿರಿ. ಆಧುನಿಕ ಸಲಫಿ ವಿದ್ವಾಂಸರು ಇದೇ ದೃಷ್ಟಿಕೋನವನ್ನು ಹೊಂದಿದ್ದಾರೆ.
IslamKannada News Portal
