“ಯಾವ ವ್ಯಕ್ತಿಯ ಉಪಟಳಗಳಿಂದಾಗಿ ಅವನ ನೆರೆಯವನಿಗೆ ಶಾಂತಿ ಭಂಗವಾಗುತ್ತದೋ ಆತ ಮುಸಲ್ಮಾನನಲ್ಲ”,
ಪ್ರವಾದಿ ಮುಹಮ್ಮದ್(ಸ)ರ ಇನ್ನೊಂದು ವಚನವು ಹೀಗಿದೆ; “ಒಬ್ಬನು ಹೊಟ್ಟೆ ತುಂಬಾ ಉಣ್ಣುತ್ತಿದ್ದು, ಅದೇ ವೇಳೆ ಅವನ ನೆರೆಯವನು ಹೊಟ್ಟೆಗಿಲ್ಲದೆ ಉಪವಾಸ ಬಿದ್ದಿದ್ದರೆ ಅವನು ಸತ್ಯವಿಶ್ವಾಸಿಯಲ್ಲ.”
“ನಿಮ್ಮ ಮಕ್ಕಳಿಗಾಗಿ ನೀವು ಹಣ್ಣು ಹಂಪಲು ಏನಾದರೂ ತಂದರೆ ಅದರಲ್ಲಿ ಸ್ವಲ್ಪವನ್ನು ನಿಮ್ಮ ಅಕ್ಕಪಕ್ಕದ ಮನೆಗಳಿಗೂ ಕಳಿಸಿ ಕೊಡಿರಿ. ಹಾಗಲ್ಲದಿದ್ದರೆ ಕನಿಷ್ಠ ಪಕ್ಷ ಹಣ್ಣಿನ ಸಿಪ್ಪೆಗಳನ್ನು ಮನೆಯ ಹೊರಕ್ಕೆ ಎಸೆಯಬೇಡಿರಿ. ನೆರೆಯ ಬಡವರಿಗೆ ನೋವಾಗಬಾರದು.”- ಪ್ರವಾದಿ ಮುಹಮ್ಮದ್(ಸ)
ಒಮ್ಮೆ ಯಾರೋ ಪ್ರವಾದಿ ಮುಹಮ್ಮದ್(ಸ)ರೊಡನೆ ಹೇಳಿದರು: “ಒಬ್ಬ ಹೆಂಗಸು ಬಹಳಷ್ಟು ನಮಾಜ್ (ಆರಾಧನೆ) ಮಾಡುತ್ತಾಳೆ, ಆಗಾಗ ಉಪವಾಸ ವ್ರತ ಆಚರಿಸುತ್ತಾಳೆ, ಸಾಕಷ್ಟು ದಾನ ಧರ್ಮ ಮಾಡುತ್ತಾಳೆ, ಆದರೆ ಅವಳ ಜಗಳಗಂಟಿ ಸ್ವಭಾವದಿಂದಾಗಿ ಅವಳ ನೆರೆಯವರೆಲ್ಲಾ ಬೇಸತ್ತಿದ್ದಾರೆ.” ಆಗ ಪ್ರವಾದಿ(ಸ) ಹೇಳಿದರು: “ಆಕೆ ನರಕಕ್ಕೆ ಯೋಗ್ಯಳು.” ಇನ್ನೊಬ್ಬರು “ಇನ್ನೊಬ್ಬ ಹೆಂಗಸಿದ್ದಾಳೆ. ಅವಳಲ್ಲಿ ಪ್ರಸ್ತುತ ವೈಶಿಷ್ಟೃಗಳೇನೂ ಇಲ್ಲ. ಆದರೆ ಅವಳು ತನ್ನ ನೆರೆಯವರಿಗೆ ಯಾವುದೇ ತೊಂದರೆ ಕೊಡುವುದಿಲ್ಲ.” ಪ್ರವಾದಿ ಮುಹಮ್ಮದ್(ಸ) ಹೇಳಿದರು: “ಆಕೆ ಸ್ವರ್ಗ ಪಡೆಯುವಳು.”
ಇನ್ನೊಂದು ಸಂದರ್ಭದಲ್ಲಿ ಪ್ರವಾದಿ(ಸ) ಹೇಳಿದರು: “ನಿನ್ನ ಅಕ್ಕಪಕ್ಕದವರು ನಿನ್ನನ್ನು ಒಳ್ಳೆಯವನೆಂದು ಭಾವಿಸುತ್ತಾರೆಂದಾದರೆ ನೀನು ನಿಜಕ್ಕೂ ಒಳ್ಳೆಯವನು, ಅವರ ದೃಷ್ಟಿಯಲ್ಲಿ ನೀನು ಕೆಟ್ಟವನಾಗಿದ್ದರೆ ನೀನು ನಿಜಕ್ಕೂ ಕೆಟ್ಟವನು.”
IslamKannada News Portal
