Home / ಪ್ರಶ್ನೋತ್ತರ / ಹಿಜಾಬ್ ಎಂದರೇನು? ಹಿಜಾಬ್ ಏನು? ಏನಲ್ಲ?

ಹಿಜಾಬ್ ಎಂದರೇನು? ಹಿಜಾಬ್ ಏನು? ಏನಲ್ಲ?

 ಬಿ. ಆಯಿಶ, ಮಂಗಳೂರು 

ಹಿಜಾಬ್ ಎಂದರೇನು? ಪ್ರಶ್ನೆ ಬಹಳ ಪ್ರಸಕ್ತವಾಗಿದೆ. ಏಕೆಂದರೆ ಹಿಜಾಬ್ ಇದು ಬಿಸಿ ಚರ್ಚೆಯ ವಿಷಯವಾಗಿದೆ. `ಹಿಜಾಬ್’ ಎಂಬ ಪದವು ಅರಬಿ ಭಾಷೆಯ `ಹಜಬ’ ಎಂಬ ಮೂಲ ಪದದಿಂದ ಬಂದಿದೆ. ಇದರ ಅರ್ಥ ಮರೆ ಮಾಡು ಅಥವಾ ಹೊದಿಸು.

ಇಸ್ಲಾಮಿನಲ್ಲಿ ಪ್ರಾಯ ಪ್ರಬುದ್ಧರಾದ ಹೆಣ್ಣು ಮಕ್ಕಳು ಕಡ್ಡಾಯವಾಗಿ ಧರಿಸಬೇಕಾದ ವಸ್ತ್ರಸಂಹಿತೆಯನ್ನು ಹಿಜಾಬ್ ಎನ್ನಲಾಗುತ್ತದೆ. ಮುಖ ಮತ್ತು ಮುಂಗೈಗಳನ್ನು ಹೊರತುಪಡಿಸಿ ದೇಹದ ಎಲ್ಲ ಭಾಗಗಳನ್ನು ವಸ್ತ್ರದಿಂದ ಮುಚ್ಚುವುದು ಹಿಜಾಬ್ ಆಗಿದೆ. ಕೆಲವರು ತಮ್ಮ ಕೈ ಮತ್ತು ಮುಖವನ್ನೂ ಮರೆಸಿಕೊಳ್ಳುತ್ತಾರೆ. ಇದಕ್ಕೆ ಬುರ್ಖಾ ಅಥವಾ ನಕಾಬ್ ಎನ್ನಲಾಗುತ್ತದೆ. ಇದು ಅವರವರ ಆಯ್ಕೆಗೆ ಬಿಟ್ಟ ವಿಚಾರ. ಕೇವಲ ಮಹಿಳೆಯರು ಮಾತ್ರ ಇರುವಲ್ಲಿ ಮತ್ತು ಕೆಲವು ನಿರ್ದಿಷ್ಟ ಪುರುಷ ಸಂಬಂಧಿಗಳ ಮುಂದೆ ಹಿಜಾಬ್ ಪಾಲಿಸಬೇಕಾಗಿಲ್ಲ. ಹಿಜಾಬ್ ಕೇವಲ ಹೊರಗಿನ ಬಟ್ಟೆ ಬರೆಗಳಿಗೆ ಸೀಮಿತವಾಗಿಲ್ಲ. ಇದು ನಮ್ಮ ಮಾತು, ಲಜ್ಜೆ ಮತ್ತು ಗೌರವಪೂರ್ಣ ನಡವಳಿಕೆಗಳನ್ನು ಒಳಗೊಂಡಿದೆ. ಇಂತಹ ವರ್ತನೆಗಳು ಪುರುಷರಿಗೂ ಕಡ್ಡಾಯ. ಇದೇ ಕಾರಣಕ್ಕೆ ಇಸ್ಲಾಮ್ ಪುರುಷರೊಂದಿಗೂ ಗೌರವಯುತವಾದ ಲಜ್ಜೆಯನ್ನು ಕಾಪಾಡಲು ಸಡಿಲವಾದ ಅಂಗಾಂಗ ಪ್ರದರ್ಶನವಾಗದ ವಸ್ತ್ರವನ್ನು ಧರಿಸಬೇಕು ಎಂದೇ ನಿರ್ದೇಶಿಸಿದೆ.

ಹಿಜಾಬ್ ಎಂದರೆ ವಿಧೇಯತೆಯಾಗಿದೆ
ಹಿಜಾಬ್‌ನಿಂದ ಬಹಳಷ್ಟು ಪ್ರಯೋಜನಗಳಿವೆ. ಇದನ್ನು ಧರಿಸಿದವರು ಖಂಡಿತ ಇದರ ಪ್ರಯೋಜನವನ್ನು ಚೆನ್ನಾಗಿ ಮನಗಾಣಬಲ್ಲರು. ಎಲ್ಲಕ್ಕಿಂತ ಮಿಗಿಲಾಗಿ ಇದು ಸೃಷ್ಟಿಕರ್ತನ ಆದೇಶವಾಗಿದೆ. ಆದುದರಿಂದ ಹಿಜಾಬ್ ಧರಿಸುವುದೆಂದರೆ ಅದು ನಂಬಿಕೆ ಮತ್ತು ಸೃಷ್ಟಿಕರ್ತನ ವಿಧೇಯತೆಯಾಗಿದೆ. ಪವಿತ್ರ ಕುರ್‌ಆನ್ ಈ ಬಗ್ಗೆ ಹೇಳುತ್ತದೆ, “ಪೈಗಂಬರರೇ, ತಮ್ಮ ಪತ್ನಿಯರೊಡನೆಯೂ ಪುತ್ರಿಯರೊಡನೆಯೂ ಸತ್ಯವಿಶ್ವಾಸಿನಿಯರೊಡನೆಯೂ ತಮ್ಮ ಮೇಲೆ ತಮ್ಮ ಚದ್ದರದ ಸೆರಗನ್ನು ಇಳಿಸಿಕೊಳ್ಳಬೇಕೆಂದು ಹೇಳಿ ಬಿಡಿರಿ. ಅವರು ಗುರುತಿಸಲ್ಪಡುವಂತಾಗಲಿಕ್ಕೂ, ಸತಾಯಿಸಲ್ಪಡದಿರಲಿಕ್ಕೂ ಇದು ಹೆಚ್ಚು ಸೂಕ್ತವಾದ ವಿಧಾನ. ಅಲ್ಲಾಹ್ ಅತ್ಯಂತ ಕ್ಷಮಾಶೀಲನೂ ಕರುಣಾಳುವೂ ಆಗಿರುತ್ತಾನೆ.” (ಪವಿತ್ರ ಕುರ್‌ಆನ್- 33: 59)

ಸೃಷ್ಟಿಕರ್ತನು ಅಪಾರ ಬುದ್ಧಿಯುಳ್ಳವನು. ಅವನಿಗೆ ತನ್ನ ಸೃಷ್ಟಿಗಳಿಗೆ ಏನು ಒಳಿತು ಎಂಬುದು ತಿಳಿದಿದೆ. ಆದುದರಿಂದಲೇ ಅವನು ಮನುಷ್ಯರ ಪ್ರಯೋಜನಕ್ಕಾಗಿ ಮಾರ್ಗದರ್ಶನಗಳನ್ನು ಒದಗಿಸಿದನು. ಆದುದರಿಂದಲೇ ಹಿಜಾಬ್ ಧರಿಸುವಾಗ ಅದು ದೇವನಿಗೆ ತೋರುವ ವಿಧೇಯತೆಯಾಗಿದೆ. ದೇವನ ಸಾಮೀಪ್ಯಕ್ಕೆ ಕಾರಣವಾಗುತ್ತದೆ. ತನ್ಮೂಲಕ ಅದನ್ನು ಧರಿಸುವವರು ಸಂತೃಪ್ತಿ ಮತ್ತು ಸಮಾಧಾನವನ್ನು ಅನುಭವಿಸುತ್ತಾರೆ.

ಹಿಜಾಬ್ ಲಜ್ಜೆಯಾಗಿದೆ
ಇಸ್ಲಾಮ್ ಲಜ್ಜೆ ಮತ್ತು ಸಭ್ಯತೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಸಮಾಜದಲ್ಲಿ ಅನೈತಿಕತೆಯನ್ನು ತಡೆಯುತ್ತದೆ. ಹಿಜಾಬ್‌ನ ವ್ಯವಸ್ಥೆಯು ಇತರ ಎಲ್ಲ ಅನುಕೂಲತೆಗಳೊಂದಿಗೆ ಈ ಉದ್ದೇಶ ಪೂರ್ತಿಯಾಗಲು ಕೂಡಾ ಸಹಕರಿಸುತ್ತದೆ.
“ಪೈಗಂಬರರೇ, ಸತ್ಯವಿಶ್ವಾಸಿಗಳೊಡನೆ ತಮ್ಮ ದೃಷ್ಟಿಗಳನ್ನು ಕೆಳಗಿರಿಸಿಕೊಳ್ಳಲಿಕ್ಕೂ ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲಿಕ್ಕೂ ಹೇಳಿರಿ. ಇದು ಅವರ ಪಾಲಿಗೆ ಹೆಚ್ಚು ಪರಿಶುದ್ಧವಾದ ಕ್ರಮವಾಗಿದೆ. ಅಲ್ಲಾಹನು ಅವರು ಮಾಡುವುದೆಲ್ಲವನ್ನೂ ಅರಿಯುವವನಾಗಿದ್ದಾನೆ.
ಪೈಗಂಬರರೇ, ಸತ್ಯವಿಶ್ವಾಸಿನಿಯರೊಡನೆ ಹೇಳಿರಿ ಅವರು ತಮ್ಮ ದೃಷ್ಟಿಗಳನ್ನು ಕೆಳಗಿರಿಸಿಕೊಳ್ಳಲಿ ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲಿ ಮತ್ತು ತಮ್ಮ ಶೃಂಗಾರಗಳನ್ನು ತೋರಿಸದಿರಲಿ (ಆದರೆ) ಸ್ವಯಂ ಪ್ರಕಟವಾಗುವಂತಹವುಗಳನ್ನು ಹೊರತು. ಮತ್ತು ತಮ್ಮ ಎದೆಯ ಮೇಲೆ ತಮ್ಮ ಮೇಲು ಹೊದಿಕೆಯ ಸೆರಗನ್ನು ಹಾಕಿಕೊಂಡಿರಲಿ. ಅವರು ತಮ್ಮ ಶೃಂಗಾರವನ್ನು ಇವರ ಹೊರತು ಇತರರಿಗೆ ತೋರಿಸದಿರಲಿ ಪತಿಯರು, ತಂದೆಯರು, ಪತಿಯ ತಂದೆಯರು, ತಮ್ಮ ಪುತ್ರರು, ಪತಿಯರ ಪುತ್ರರು, ಸಹೋದರರು, ಸಹೋದರ ಪುತ್ರರು, ಸಹೋದರಿಯರ ಪುತ್ರರು, ಆಪ್ತ ಸ್ತ್ರೀಯರು, ತಮ್ಮ ದಾಸಿಯರು, ಯಾವುದೇ ದುರಪೇಕ್ಷೆ ಇಲ್ಲದಂತಹ ಅಧೀನ ಸೇವಕರು ಮತ್ತು ಇನ್ನೂ ಸ್ತ್ರೀಯರ ರಹಸ್ಯ ವಿಷಯಗಳನ್ನರಿಯದ ಬಾಲಕರು. ಅವರು, ತಾವು ಮರೆಸಿಟ್ಟಿರುವಂತಹ ಅಲಂಕಾರದ ಅರಿವು ಜನರಿಗಾಗುವಂತೆ ತಮ್ಮ ಪಾದಗಳನ್ನು ನೆಲಕ್ಕೆ ಬಡಿಯುತ್ತಾ ನಡೆಯದಿರಲಿ.” (ಪವಿತ್ರ ಕುರ್‌ಆನ್ 24 ಸೂರಃ ಅನ್ನೂರ್ 30 ಮತ್ತು 31ನೇ ವಚನ)

ಈ ಮೇಲಿನ ವಚನಗಳನ್ನು ಗಮನಿಸುವಾಗ ಪುರುಷರೊಂದಿಗೆ ಪ್ರಥಮವಾಗಿ ತಮ್ಮ ದೃಷ್ಟಿಗಳನ್ನು ಕೆಳಗಿರಿಸಿಕೊಳ್ಳಲು ಆದೇಶಿಸಿರುವುದನ್ನು ನೋಡಬಹುದಾಗಿದೆ. ಇದು ಅವರ ಸಭ್ಯತೆಯನ್ನು ಸಂರಕ್ಷಿಸಲಿಕ್ಕಾಗಿದೆ. ಮಹಿಳೆಯರಿಗೆ ಮಾತ್ರ ಸಭ್ಯತೆಯನ್ನು ಪಾಲಿಸುವ ಹೊಣೆಗಾರಿಕೆಯನ್ನು ನೀಡಲಾಗಿದೆ ಎಂಬ ಕೆಲವರ ವಾದವನ್ನು ಇದು ತಳ್ಳಿ ಹಾಕುತ್ತದೆ.

ಹಿಜಾಬ್ ಸುರಕ್ಷೆಯಾಗಿದೆ
ಸಮಾಜದಲ್ಲಿ ಲೈಂಗಿಕ ಶೋಷಣೆ ಮತ್ತು ಅನೈತಿಕತೆಯನ್ನು ತಡೆಯಲು ಪುರುಷರಿಗೆ ಮತ್ತು ಮಹಿಳೆಯರಿಗೆ ಸಾಧ್ಯವಾಗಲಿಕ್ಕಾಗಿ ಹಿಜಾಬನ್ನು ಕಡ್ಡಾಯಗೊಳಿಸಲಾಗಿದೆ. ಹಿಜಾಬ್ ಪುರುಷ ಮತ್ತು ಸ್ತ್ರೀಗೆ ಮಾತ್ರವಲ್ಲ ಸಮಾಜಕ್ಕೆ, ಕುಟುಂಬ ಭದ್ರತೆ ಮತ್ತು ಸಮಾಜದಲ್ಲಿ ಭದ್ರತೆಯನ್ನು ಉಂಟು ಮಾಡಲು ಅನೇಕ ರೀತಿಯಲ್ಲಿ ಸಹಕಾರಿಯಾಗಿದೆ.
* ಅನಗತ್ಯ ವ್ಯವಹಾರದಿಂದ ರಕ್ಷಣೆ ಒದಗಿಸುತ್ತದೆ.
* ಕೆಟ್ಟ ದೃಷ್ಟಿ ಮತ್ತು ವಿಮರ್ಶನಾತ್ಮಕ ದೃಷ್ಟಿಯಿಂದ ತಡೆಯುತ್ತದೆ.
* ಮಹಿಳೆಯ ಮೇಲೆ ನಡೆಯುವ ಲೈಂಗಿಕ ಶೋಷಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಬಾಹ್ಯ ಅಲಂಕಾರದ ಕಾರಣದಿಂದ ಹೆಣ್ಣು ಲೈಂಗಿಕ ಶೋಷಣೆಗೊಳಗಾಗುವುದರಿಂದ ಸಂರಕ್ಷಿಸುತ್ತದೆ.
* ಪ್ರಲೋಭನೆಗೊಳಗಾಗುವುದರಿಂದ ಮತ್ತು ಕೆಟ್ಟ ಅಭಿಲಾಶೆಗಳನ್ನು ತಾಳುವುದರಿಂದ ರಕ್ಷಣೆಯನ್ನು ಒದಗಿಸುತ್ತದೆ.

ಹಿಜಾಬ್ ಮರ್ಯಾದೆಯಾಗಿದೆ
ಹಿಜಾಬ್ ಮಹಿಳೆಯ ಹೆಣ್ಣುತನವನ್ನು ಅದುಮಿಡುವ ಬದಲು ಪ್ರೋತ್ಸಾಹಿಸುತ್ತದೆ. ಕೇವಲ ಬಾಹ್ಯ ಅಲಂಕಾರಕ್ಕಾಗಿ ಆಕೆಯನ್ನು ಪರಿಗಣಿಸುವುದಕ್ಕೆ ವಿರುದ್ಧವಾಗಿ ಅವಳಿರುವಂತೆಯೇ ಅವಳಿಗೆ ಗೌರವ ಮತ್ತು ಆತ್ಮಗೌರವ ದೊರೆಯುವಂತೆ ಮಾಡುತ್ತದೆ.
ಇದು ಹೆಣ್ಣಿಗೆ ತನ್ನದೇ ಆದ ಮರ್ಯಾದೆಯನ್ನು ಹೊಂದಲು ಮತ್ತು ಅತ್ಯುತ್ತಮ ಮಟ್ಟದಲ್ಲಿ ಅದನ್ನು ತನ್ನದಾಗಿಸಲು ಸಹಕರಿಸುತ್ತದೆ. ಉನ್ನತ ಚಾರಿತ್ರ್ಯ, ಶಿಕ್ಷಣ ಮತ್ತು ಸಮಾಜಕ್ಕೆ ಕೊಡುಗೆಗಳನ್ನು ನೀಡಲು ಪ್ರೇರೇಪಿಸುತ್ತದೆ. ಆದರೆ ಗ್ರಾಹಕ ಸಂಸ್ಕೃತಿಯು ಆಕೆಯನ್ನು ಒಂದು ಸಾಮಗ್ರಿಯಂತೆ ಬಿಂಬಿಸುತ್ತದೆ. ಆಕೆಯ ಸೌಂದರ್ಯದ ಮೂಲಕ ಎಷ್ಟು ಹಣ ಸಂಪಾದಿಸಬಹುದು ಎಂದು ಲೆಕ್ಕ ಹಾಕುತ್ತದೆ.

ಹಿಜಾಬ್ ಗೌರವವಾಗಿದೆ
ನೀವೆಷ್ಟು ಆಕರ್ಷಣೀಯರಾಗಿರುತ್ತೀರೋ ಅಷ್ಟೇ ನಿಮಗೆ ಮಹತ್ವ ಇರುತ್ತದೆ ಎಂಬುವುದಾಗಿ ಅನೇಕ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಎಳವೆಯಲ್ಲೇ ಕಲಿಸಿ ಕೊಡಲಾಗುತ್ತದೆ. ಇಂತಹ ವಾತಾವರಣದಲ್ಲಿ ಸಮಾನ ಮನಸ್ಕರು ತಮ್ಮ ಅನಗತ್ಯ ಬಯಕೆಗಳನ್ನು ಪೂರ್ತೀಕರಿಸಲಿಕ್ಕಾಗಿ ಅಪ್ರಾಯೋಗಿಕ ಮತ್ತು ಕೀಳುಮಟ್ಟದ ವರ್ತನೆಯನ್ನು ಅನುಸರಿಸಲು ನಿರ್ಬಂಧಿಸ ಲ್ಪಡುತ್ತಾರೆ. ಇಂತಹ ವಾತಾವರಣದಲ್ಲಿ (ಬಾಹ್ಯ ಸೌಂದರ್ಯಕ್ಕೆ ಬಹಳ ಮಹತ್ವ ಕೊಡುವ ಸ್ಥಳದಲ್ಲಿ) ಹೆಣ್ಣಿನ ಆಂತರಿಕ ಸೌಂದರ್ಯಕ್ಕೆ ಕನಿಷ್ಠ ಗಮನ ನೀಡಲಾಗುತ್ತದೆ.

ಇಸ್ಲಾಮಿನ ಶಿಕ್ಷಣದ ಪ್ರಕಾರ ಮಹಿಳೆಯ ಬಾಹ್ಯ ಸೌಂದರ್ಯಕ್ಕಿಂತ ಆಕೆಯ ಗೌರವಪೂರ್ಣ ಚಾರಿತ್ರ್ಯ ಮತ್ತು ವರ್ತನೆಗೆ ಹೆಚ್ಚು ಆದ್ಯತೆ ನೀಡಬೇಕು. ಆಕೆಯ ದೈಹಿಕ ಲಕ್ಷಣಗಳಲ್ಲಿ ಆಕೆಯ ಪಾತ್ರ ಬಹಳ ಸೀಮಿತವಾಗಿರುತ್ತದೆ. ಅಥವಾ ಅದು ಆಕೆಯ ನಿಯಂತ್ರಣದಲ್ಲಿರುವುದಿಲ್ಲ. ಆಕೆ ತನ್ನ ದೇಹ ಮತ್ತು ಸೌಂದರ್ಯವನ್ನು ಸಮಾಜದಲ್ಲಿ ಪರಿಗಣಿಸಲ್ಪಡಲಿಕ್ಕಾಗಿ ಮತ್ತು ಸಮಾಜವು ಒಪ್ಪಿಕೊಳ್ಳುವುದಕ್ಕೆ ಉಪಯೋಗಿಸಬೇಕಾಗಿಲ್ಲ. ಹಿಜಾಬ್ ಆಕೆಗೆ ಬಾಹ್ಯತೋರ್ಪಡಿಸಿಕೊಳ್ಳುವುದಕ್ಕಿಂತ ಮಿಗಿಲಾಗಿ ಧರ್ಮನಿಷ್ಠೆ, ಸದ್ಗುಣ, ಲಜ್ಜೆ, ಬುದ್ಧಿಮತ್ತೆಗೆ ಮಾರ್ಗದರ್ಶನ ನೀಡುತ್ತವೆ. ಇದು ಎಲ್ಲರಿಗೂ ಗಳಿಸಲು ಸಮಾನ ಅವಕಾಶಗಳಿರುವ ವಿಷಯಗಳಾಗಿವೆ.
ಹಿಜಾಬ್ ಧರಿಸುವ ಮಹಿಳೆಯರೂ ಅನುಪಮ ವ್ಯಕ್ತಿತ್ವಗಳಾಗಿದ್ದಾರೆ. ಒಂದು ರೀತಿಯ ವಸ್ತ್ರಧಾರಣೆಯನ್ನು ಮಾಡಿದ್ದಾರೆ ಎಂಬ ಕಾರಣಕ್ಕೆ ಅವರ ಧ್ವನಿಯಡಗಿಸುವ ತೀರ್ಮಾನ ಮಾಡುವುದು ಸರಿಯಲ್ಲ ಮತ್ತು ಅನ್ಯಾಯವಾಗಿದೆ.

ಬೈಬಲ್‌ನಲ್ಲಿ ಹಿಜಾಬ್
ಹಿಜಾಬ್ ಎಂಬುದು ಹೊಸ ವಿಷಯವಲ್ಲ. ಮುಸ್ಲಿಮರು ಏಸು (ಈಸಾ(ಅ))ರ ಮಾತೆ ಮರ್ಯಮರ ಆದರ್ಶವನ್ನು, ಹಿಂದಿನ ಪಾವನ ಮಹಿಳೆಯರ ಆದರ್ಶವನ್ನು ಪಾಲಿಸುತ್ತಿದ್ದಾರೆ. ಈ ಬಗ್ಗೆ ಬೈಬಲಿನ ಈ ಕೆಳಗಿನ ಎರಡು ವಚನಗಳು ಸಾಕ್ಷಿ ನೀಡುತ್ತವೆ.
“ಯಾವ ಮಹಿಳೆ ತಲೆ ಮರೆಸದೆ ಪ್ರಾರ್ಥನೆ ಮಾಡುತ್ತಾಳೋ ಆಕೆ ತನ್ನ ತಲೆಯನ್ನು ಅಗೌರವಿಸುತ್ತಾಳೆ.” (ಕೋರಿ ಯಂಥರ 11: 3-6)
ನಾವು ಮಹಿಳೆಯರು ಗೌರವಪೂರ್ಣ ವಸ್ತ್ರ ಧರಿಸಬೇಕು. ಸಭ್ಯವಾಗಿರಬೇಕು. ಮರ್ಯಾದೆಯುತವಾಗಿರಬೇಕು. ಕೂದಲನ್ನು ತುರುಬು ಕಟ್ಟಿ. ಚಿನ್ನ ಮುತ್ತುಗಳಿಂದ ಅಥವಾ ಬೆಲೆಬಾಳುವ ಬಟ್ಟೆಗಳನ್ನು ಧರಿಸಬಾರದು. ಆಕೆಯ ಉತ್ತಮ ವರ್ತನೆ ಇದು ದೇವನನ್ನು ಪ್ರಾರ್ಥಿಸಲು ಬರುವ ಮಹಿಳೆಯರು ಗಮನಿಸಬೇಕು. (ತಿಮೋಥಿ 2: 9-10)

ಹಿಜಾಬ್ ಆತ್ಮವಿಶ್ವಾಸವಾಗಿದೆ
ಜೇಮಾನ ಎಂಬ ಇಪ್ಪತ್ತಮೂರು ವರ್ಷದ ಯುವತಿ ಹಿಜಾಬ್‌ನ ಕುರಿತು “ನಾನು ಧಮನಿಸಲ್ಪಟ್ಟಿದ್ದೇನೆ ಎಂಬುವುದಕ್ಕಾಗಿ ಇದನ್ನು ಧರಿಸುತ್ತಿಲ್ಲ. ನಾನು ಸಬಲಳಾಗಿದ್ದೇನೆ ಎಂಬ ಕಾರಣಕ್ಕೆ ಧರಿಸುತ್ತಿದ್ದೇನೆ” ಎಂದು ಹೇಳಿಕೆ ನೀಡಿದ್ದಾರೆ.
ಹಿಜಾಬ್ ಮನುಷ್ಯ ಎಂಬ ನೆಲೆಯಲ್ಲಿ ಹೆಣ್ಣಿಗೆ ಅವಳ ಬಗ್ಗೆ ಆತ್ಮವಿಶ್ವಾಸ ಉಂಟಾಗುವಂತೆ ಮಾಡುತ್ತದೆ. ಜೀವನದ ನಿಜವಾದ ಆದ್ಯತೆಗಳತ್ತ ಗಮನ ಕೇಂದ್ರೀಕರಿಸಲು ಅನುವು ಮಾಡಿ ಕೊಡುವ ಮೂಲಕ ಆತ್ಮ ಗೌರವವನ್ನು ಹೆಚ್ಚಿಸುತ್ತದೆ. ಬಾಹ್ಯ ಸೌಂದರ್ಯದ ಅತಿಯಾದ ಭ್ರಾಂತಿಯು ಅಪಾಯಕಾರಿ ಮತ್ತು ಅನಾರೋಗ್ಯಕರ ಪರಿಣಾಮಗಳನ್ನುಂಟು ಮಾಡಬಹುದು. ಸಮಾಜದಲ್ಲಿ ಹೆಣ್ಣಿನ ಸೌಂದರ್ಯಕ್ಕೆ ಸಿಗುತ್ತಿರುವ ಬೇಡಿಕೆಗೆ ಒಗ್ಗಿಕೊಳ್ಳಲು ಕೆಲವು ಮಹಿಳೆಯರು ಯಾವುದೇ ಅಪಾಯಕಾರಿ ಮಟ್ಟಕ್ಕೆ ಇಳಿಯಲು ಸಿದ್ಧರಾಗುತ್ತಾರೆ. ಹಿಜಾಬ್ ಆತ್ಮವಿಶ್ವಾಸದ ಕೊರತೆಯಿಂದ ಉಂಟಾಗುವ ಇಂತಹ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಬಾಹ್ಯ ಸೌಂದರ್ಯಕ್ಕೆ ಮಿಗಿಲಾಗಿ ಸ್ತ್ರೀ ಸಬಲೀಕರಣಕ್ಕೆ ಹಿಜಾಬ್ ಆದ್ಯತೆ ನೀಡುತ್ತದೆ.

ಹಿಜಾಬ್ ಎಂದರೆ ಇವಲ್ಲ
1) ಹಿಜಾಬ್ ಸಮಾಜಕ್ಕೆ ಕೊಡುಗೆಗಳನ್ನು ನೀಡುವುದಕ್ಕೆ ಹೆಣ್ಣಿಗೆ ಎಂದೂ ಅಡ್ಡಿಯಾಗುವುದಿಲ್ಲ.
2) ಹಿಜಾಬ್ ದಮನಿಸುವಿಕೆಯ ಚಿಹ್ನೆಯಲ್ಲ.
3) ನಿರ್ದಿಷ್ಟ ಪುರುಷ ಸಂಬಂಧಿಗಳು ಮತ್ತು ಕೇವಲ ಮಹಿಳೆಯರು ಮಾತ್ರ ಇರುವಲ್ಲಿ ಹಿಜಾಬ್ ಧರಿಸಬೇಕಾಗಿಲ್ಲ.
4) ಪುರುಷರಿಗಿಂತ ಹೆಣ್ಣು ಎಂದೂ ಕೆಳಗಿನ ದರ್ಜೆಯವಳಲ್ಲ.
5) ಹೆಣ್ಣಿನ ಸ್ವಾತಂತ್ರ್ಯ ಮತ್ತು ಅಭಿಪ್ರಾಯಗಳ ಅಭಿವ್ಯಕ್ತಿಗೆ ನಿರ್ಬಂಧವನ್ನು ಹೇರುವ ಮಾಧ್ಯಮವಲ್ಲ ಹಿಜಾಬ್.
6) ಉನ್ನತ ಶಿಕ್ಷಣ ಗಳಿಸುವುದಕ್ಕೆ ಅಥವಾ ಸೂಕ್ತ ಉದ್ಯೋಗ ಕೈಗೊಳ್ಳುವುದಕ್ಕೆ ಹಿಜಾಬ್ ಅಡ್ಡಿಯಾಗುವುದಿಲ್ಲ.
7) ಇದು ಚಲಿಸುವ ಸೆರೆಮನೆಯಲ್ಲ.
8) ಇದು ಮುಸ್ಲಿಮರಲ್ಲದವರ ವಿರುದ್ಧ ಪ್ರತಿಭಟನೆ ಅಥವಾ ಪಂಥಾಹ್ವಾನವಲ್ಲ.
9) ಇದು ಹೊಸ ವಿಷಯವಲ್ಲ. ಇತಿಹಾಸದುದ್ದಕ್ಕೂ ಪಾವನ ಮಹಿಳೆಯರು ಈ ರೀತಿ ಹಿಜಾಬ್ ಧರಿಸುತ್ತಿದ್ದರು.
10) ಇದು ಸಾಮಾಜಿಕ ಮೌಲ್ಯಗಳಿಗೆ ವಿರುದ್ಧವಲ್ಲ.

ಸಾಮಾಜಿಕ ಜೀವನದ ಮೌಲ್ಯಗಳ ಪ್ರಕಾರ ಮನುಷ್ಯ ಏನು ಧರಿಸಿದ್ದಾನೆ ಎಂಬ ಕಾರಣಕ್ಕೆ ಅವನ ಮೌಲ್ಯಮಾಪನ ಮಾಡಬೇಕಾಗಿಲ್ಲ. ವಸ್ತ್ರಧಾರಣೆಯ ಆಯ್ಕೆಯ ವಿಷಯದಲ್ಲಿ ಅಥವಾ ಬಾಹ್ಯವಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ರೀತಿಯಿಂದ ಯಾರನ್ನು ಶೋಷಣೆ ಮಾಡುವಂತಿಲ್ಲ ಮತ್ತು ಅನುಚಿತವರ್ತನೆ ತೋರುವಂತಿಲ್ಲ. ಸಮಾಜದಲ್ಲಿ ಭಯ ಹುಟ್ಟಿಸಲು ಅಥವಾ ಸಮಾಜ ವಿರೋಧಿ ಎನಿಸಿಕೊಳ್ಳುವ ಉದ್ದೇಶದಿಂದ ಯಾರೂ ಹಿಜಾಬ್ ಧರಿಸುವುದಿಲ್ಲ.

ಒಟ್ಟಿನಲ್ಲಿ ಹಿಜಾಬ್ ಮುಸ್ಲಿಮ್ ಹೆಣ್ಣು ಮತ್ತು ದೇವನ ಮಧ್ಯೆ ಇರುವ ವಿಧೇಯತೆಯ ಪ್ರಕಟನೆಯಾಗಿದೆ. ಇದು ಸ್ತ್ರೀ ಸಬಲೀಕರಣ ಮತ್ತು ಘನತೆಯ ಮಾಧ್ಯಮವಾಗಿದೆ. ಜಗತ್ತಿನಾದ್ಯಂತ ಮಿಲಿಯಾಂತರ ಮುಸ್ಲಿಮ್ ಹೆಣ್ಣು ಮಕ್ಕಳು ವಿಶ್ವಾಸದ ಭಾಗವೆಂಬಂತೆ ಹಿಜಾಬ್ ಧರಿಸುತ್ತಿರುವರು. ಶೋಷಣೆಗೆ ಪರ್ಯಾಯವಾಗಿ ವಿಮೋಚನೆ, ಪಾವಿತ್ರ್ಯ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವಾಸ ಇದರ ಹಿಂದಿದೆ. ಮಹಿಳೆಯರ ಬಗ್ಗೆ ಗೌರವ ಭಾವನೆ ಇರಬೇಕು ಎಂಬುದು ಇಸ್ಲಾ ಮಿನ ಶಿಕ್ಷಣದ ಭಾಗವಾಗಿದೆ. ಇದಕ್ಕೆ ಹಿಜಾಬ್ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.

ಹೆಣ್ಣಿಗೆ ತನ್ನನ್ನು ಪ್ರದರ್ಶಿಸದೆ ಇರಲು ಅವಕಾಶ ಸಿಕ್ಕಾಗಲೇ ಆಕೆಗೆ ನಿಜವಾದ ಸಮಾನತೆ ಲಭಿಸುತ್ತದೆ. ತನ್ನನ್ನು ಅನ್ಯರ ಮುಂದೆ ಪ್ರದರ್ಶಿಸಿದರೆ ಮಾತ್ರ ತನಗೆ ಮಹತ್ವ ಇಲ್ಲದಿದ್ದರೆ ಇಲ್ಲ ಎಂದರೆ ಅದು ಶೋಷಣೆ, ಸಮಾನತೆಯಲ್ಲ. ಹೆಣ್ಣಿನ ದೇಹದ ಮೇಲೆ ಆಕೆಗೆ ಇರುವ ಹಕ್ಕಾಗಿದೆ ಹಿಜಾಬ್. 

SHARE THIS POST VIA

About editor

Check Also

ಮೃತದೇಹವನ್ನು ವಿಮಾನಗಳಲ್ಲಿ ಸಾಗಿಸುವುದರ ವಿಧಿ ಏನು?

– ಖದೀಜ ನುಸ್ರತ್ ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. …