Home / ವಾರ್ತೆಗಳು / ರಮಝಾನ್ ಉಪವಾಸ ಆಚರಿಸುತ್ತಾ, ಸ್ಥಳದಿಂದ ಕದಲದೆ ಮಗುವಿನ ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ ಎಸಿ ಆಬೀದ್ ಗದ್ಯಾಳ

ರಮಝಾನ್ ಉಪವಾಸ ಆಚರಿಸುತ್ತಾ, ಸ್ಥಳದಿಂದ ಕದಲದೆ ಮಗುವಿನ ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ ಎಸಿ ಆಬೀದ್ ಗದ್ಯಾಳ

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಭೆಯಲ್ಲಿದ್ದ ಎಸಿ ಆಬೀದ್ ಗದ್ಯಾಳ ಅವರು ಮಗುವೊಂದು ಕೊಳವೆ ಬಾವಿಗೆ ಬಿದ್ದ ಸುದ್ದಿ ಕೇಳಿದಾಕ್ಷಣವೇ ಇಂಡಿ ತಾಲೂಕಿನ ಲಚ್ಯಾಣಕ್ಕೆ ಧಾವಿಸಿದರು.

ವಿಜಯಪುರ ಅಸಿಸ್ಟೆಂಟ್ ಕಮಿಷನರ್ ಆಬೀದ್ ಗದ್ಯಾಳ ಸತತ 21 ಗಂಟೆಗಳ ಕಾಲ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಕಾರ್ಯಾಚರಣೆ ಮುಗಿಯುವವರೆಗೂ ಸ್ಥಳ ಬಿಟ್ಟು ಕದಲಿಲ್ಲ, ಏತನ್ಮಧ್ಯೆ ಉಪವಾಸ ವೃತ ಆಚರಿಸುತ್ತಿದ್ದ ಆಬೀದ್ ಗದ್ಯಾಳ, ಸಭೆ ಮೊಟಕುಗೊಳಿಸಿ ಸ್ಥಳಕ್ಕೆ ಧಾವಿಸಿದ ಅಲ್ಲಿಯೇ ಕೇವಲ ನೀರು ಹಾಗೂ ಒಂದೇ ಒಂದು ಖರ್ಜೂರ ಸೇವಿಸಿ ಉಪವಾಸ ಪಾರಣೆ ಮಾಡಿದ್ದಾರೆ. ಮನೆಯಿಂದ ಆಹಾರದ ಬುತ್ತಿ ಬಂದರೂ ಅದನ್ನು ಸವಿಯುತ್ತಾ ಕುಳಿತರೆ ಸಮಯ ಹಾಳಾಗಬಹುದು ಎಂದು ಅದನ್ನು ತಿರಸ್ಕರಿಸಿದ್ದಾರೆ.

ಸತತ ಕರೆಗಳು, ಅಧಿಕಾರಿಗಳೊಂದಿಗೆ ಸಮನ್ವಯ, ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿಗಳನ್ನು ನಿಭಾಯಿಸಿದರು. ನಸುಕಿನ ಜಾವ ಸಹರಿಯ ಸಮಯ (ಉಪವಾಸ ಆಚರಣೆಗೆ ಅಣಿಯಾಗುವ ಸಮಯ) ಸ್ಥಳ ಬಿಟ್ಟು ಕದಲದೇ ಅಲ್ಲಿಯೇ ಚಹಾ, ಕೆಲವು ಬಿಸ್ಕಟ್ ಸೇವನೆ ಮಾಡಿ ಮತ್ತೆ ಉಪವಾಸ ಆರಂಭಿಸಿದ್ದಾರೆ.

ಒಂದು ಕ್ಷಣವೂ ರೆಸ್ಟ್ ತೆಗೆಯದೆ ಆಬೀದ್ ಗದ್ಯಾಳ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಲಚ್ಯಾಣದಲ್ಲಿ ಕಾರ್ಯಾಚರಣೆಯಲ್ಲಿ ತಲ್ಲೀನರಾದರು. ಹೈದರಾಬಾದ್ ಎನ್‌ಡಿಆರ್‌ಎಫ್ ತಂಡದೊಂದಿಗೆ ಸಮನ್ವಯ, ಅವರನ್ನು ಸ್ಥಳಕ್ಕೆ ಕರೆ ತರುವಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಜಿಲ್ಲಾಡಳಿತದ ಜತೆ ಸತತ ಸಂಪರ್ಕದ ಮೂಲಕ ಕ್ಷಣ ಕ್ಷಣದ ಮಾಹಿತಿ, ರಕ್ಷಣಾ ಕಾರ್ಯಾಚರಣೆ ಕಾರ್ಯ ವಿಧಾನ ಹೀಗೆ ಎಲ್ಲ ಕಾರ್ಯವನ್ನು ಆಬೀದ್ ಗದ್ಯಾಳ ಅವರು ಉಪವಾಸ ಆಚರಿಸುತ್ತಲೇ ನಿಭಾಯಿಸಿದ್ದಾರೆ.

“ಮಗುವಿನ ರಕ್ಷಣಾ ಕಾರ್ಯ ದೇವರ ಕಾರ್ಯವಿದ್ದಂತೆ”, ಉಪವಾಸ ಆಚರಿಸಿದರೆ ಇನ್ನಷ್ಟೂ ಶ್ರದ್ಧೆಯಿಂದ ಈ ಕಾರ್ಯ ಕೈಗೊಳ್ಳಲು ಸಾಧ್ಯ. ಕೊಳವೆ ಬಾವಿಯಲ್ಲಿ ಸಿಲುಕಿದ ಮಗು ನಮಗಿಂತಲೂ ಕಠಿಣ ಪರಿಸ್ಥಿತಿಯಲ್ಲಿದೆ. ಆ ಮಗು ಸಹ ಏನನ್ನೂ ತಿಂದಿಲ್ಲ, ಅಲ್ಲಿ ತೇವಾಂಶವೂ ಅಧಿಕ, ಆ ಮಗುವಿನ ಪರಿಸ್ಥಿತಿ ಹೇಗಿರಬೇಡ? ಎಂಬ ನೋವಿನ ಅನುಭವವಾಯಿತು. ಇಲ್ಲಿ ನಮಗೆ 40° ಡಿಗ್ರಿ ಸೆಲ್ಸಿಯಸ್ ಬಿಸಿಲಿದೆ. ನಮಗೆ ವಿಶ್ರಾಂತಿಗೆ ಅವಕಾಶವೂ ಇದೆ. ಗಿಡಗಳ ನೆರಳಿದೆ, ಆದರೆ ಆ ಮಗುವಿಗೆ?. ಹೀಗಾಗಿ ಮಗುವಿನ ರಕ್ಷಣೆಯೇ ಮೂಲ ಮಂತ್ರವಾಯಿತು ಎಂದು ಎಸಿ ಆಬೀದ್ ಗದ್ಯಾಳ ಅಭಿಪ್ರಾಯ ಹಂಚಿಕೊಂಡಿದ್ದಾರೆ.

SHARE THIS POST VIA

About editor

Check Also

‘ರಮಝಾನ್’ ಮಕ್ಕಾ-ಮದೀನದಲ್ಲಿ ಹೆಚ್ಚಿದ ಜನಸಂದಣಿ: ಮಸ್ಜಿದುಲ್ ಹರಂ ಬರುವವರಿಗೆ ಮಾಸ್ಕ್ ಕಡ್ಡಾಯ

ರಮಝಾನಿನಲ್ಲಿ ಮಕ್ಕಾ ಮತ್ತು ಮದೀನಕ್ಕೆ ಬರುವವರು ಮಾಸ್ಕ್ ಧರಿಸಬೇಕು ಎಂದು ಸೌದಿ ಸರಕಾರ ಆದೇಶಿಸಿದೆ. ಮಕ್ಕಾದ ಮಸ್ಜಿದುಲ್ ಹರಾಂಗೆ ಜನ …

Leave a Reply

Your email address will not be published. Required fields are marked *