Home / ಪ್ರಶ್ನೋತ್ತರ / ಅನ್ಯ ಸ್ತ್ರೀಯಿಂದ ಎದೆಹಾಲುಣಿಸುವುದು?

ಅನ್ಯ ಸ್ತ್ರೀಯಿಂದ ಎದೆಹಾಲುಣಿಸುವುದು?

ಪ್ರಶ್ನೆ: ಅನ್ಯ ಮಹಿಳೆಯರಿಂದ ಎದೆಹಾಲು ಕುಡಿಸುವುದಕ್ಕಾಗಿ ಅವರಿಗೆ ಪ್ರತಿಫಲ ನೀಡುವ ಬಗ್ಗೆ ಇಸ್ಲಾಮಿನ ನಿಲುವೇನು?

ಉತ್ತರ: ಅನ್ಯ ಮಹಿಳೆಯರಿಂದೇಕೆ, ಸ್ವಂತ ತಾಯಿಯೂ ಗಂಡನಿಂದ ವಿಚ್ಛೇದನ ಪಡೆದ ಕಾರಣ ತನ್ನ ಮಗುವಿಗೆ ಹಾಲುಣಿಸುವುದಕ್ಕೆ ಪ್ರತಿಫಲ ಕೇಳಿದರೆ ಕೊಡಬೇಕಾದೀತು. ಪವಿತ್ರ ಕುರ್‍ಆನಿನಲ್ಲಿ ಈ ಬಗ್ಗೆ  ಸ್ಪಷ್ಟ ಆದೇಶವಿದೆ. “ತಮ್ಮ ಶಿಶುಗಳು ಪೂರ್ಣ ಸ್ತನಪಾನಾವಧಿಯವರೆಗೆ ಹಾಲು ಕುಡಿಯಬೇಕೆಂದು ಪಿತರು ಬಯಸಿದರೆ, ತಾಯಂದಿರು ತಮ್ಮ ಶಿಶುಗಳಿಗೆ ಎರಡು ವರ್ಷ ಪೂರ್ತಿಯಾಗಿ ಹಾಲುಣಿಸಬೇಕು. ಆಗ ಶಿಶುವಿನ ತಂದೆಯು ಅವರಿಗೆ ನ್ಯಾಯೋಚಿತ ರೀತಿಯಿಂದ ಅನ್ನ, ಬಟ್ಟೆ ಕೊಡಲು ಬಾಧ್ಯಸ್ಥನಾಗುವನು. ಆದರೆ ಅವನವನ ಶಕ್ತಿಗಿಂತ ವಿೂರಿದ ಭಾರವನ್ನು ಯಾರ ಮೇಲೂ ಹಾಕಬಾರದು. ಶಿಶುವು ತಾಯಿಯದ್ದು ಎಂಬ ಕಾರಣದಿಂದ ಅವಳನ್ನು ಕಷ್ಟಕ್ಕೊಳಪಡಿಸಬಾರದು ಮತ್ತು ಶಿಶುವಿನ ತಂದೆಯೆಂಬ ಕಾರಣದಿಂದ ಅವನನ್ನೂ ಪೇಚಾಟಕ್ಕೊಳಪಡಿಸಬಾರದು. ಎದೆಹಾಲನ್ನುಣಿಸುವವಳ ಈ ಹಕ್ಕು ತಂದೆಯ ಮೇಲಿರುವಂತೆಯೇ ಅವನ ವಾರೀಸುದಾರರ ಮೇಲೂ ಇದೆ. ಆದರೆ ಉಭಯತ್ರರು ಪರಸ್ಪರ ವಿಚಾರ ವಿನಿಮಯದಿಂದ ಒಮ್ಮತರಾಗಿ ಮೊಲೆ ಹಾಲನ್ನು ಬಿಡಿಸಲಿಚ್ಛಿಸುವುದರಲ್ಲಿ ತಪ್ಪಿಲ್ಲ ಮತ್ತು ನಿಮ್ಮ ಶಿಶುಗಳಿಗೆ ಅನ್ಯ ಸ್ತ್ರೀಯಿಂದ ಸ್ತನಪಾನ ಮಾಡಿಸುವ ಇರಾದೆ ನಿಮಗಿದ್ದರೆ, ಅದಕ್ಕೆ ಪ್ರತಿಫಲವನ್ನು ನಿಶ್ಚಯಿಸಿ ಅದನ್ನು ನ್ಯಾಯೋಚಿತವಾಗಿ ಪಾವತಿ ಮಾಡಿದರೆ  ಅದರಲ್ಲೂ ತಪ್ಪಿಲ್ಲ. ಅಲ್ಲಾಹನನ್ನು ಭಯಪಡಿರಿ. ನೀವು ಮಾಡುವುದೆಲ್ಲವೂ ಅಲ್ಲಾಹನ ವೀಕ್ಷಣದೊಳಗಿದೆ ಎಂಬುದನ್ನು ನೀವು ತಿಳಿದಿರಬೇಕು.” (ಅಲ್‍ಬಕರ: 233)

ಈ ಕೆಲವು ಕರ್ಮಶಾಸ್ತ್ರಜ್ಞರು ವಿಭಿನ್ನ  ಅಭಿಪ್ರಾಯಗಳನ್ನು ಹೊಂದಿದ್ದಾರೆ.
ಮೊಲೆಹಾಲು ಸ್ತ್ರೀಯ ದೇಹದ ಭಾಗವಾಗಿದೆ. ಅದರ ಮಾರಾಟ ಧರ್ಮಸಮ್ಮತವಲ್ಲವೆಂಬುದು ಇಮಾಮ್ ಅಬೂ ಹನೀಫಾರ ನಿಲುವು. ಆದರೆ ಇಮಾಮ್ ಮಾಲಿಕ್ ಮತ್ತು ಶಾಫೀಯವರು ಧರ್ಮಸಮ್ಮತವೆನ್ನುತ್ತಾರೆ. ಇಮಾಮ್ ಅಹ್ಮದ್‍ರ ಅನುಯಾಯಿಗಳಲ್ಲಿ ಕೆಲವರ ಅಭಿಪ್ರಾಯವೂ ಇದೇ ಆಗಿದೆ. ದೇಹಭಾಗವನ್ನು ಮಾರಾಟ ಮಾಡುವುದು ಧರ್ಮಸಮ್ಮತವಲ್ಲವೆಂಬ ಅಭಿಪ್ರಾಯವನ್ನು ಇಬ್ನು ಕುದಾಮ ಹಂಬಲಿ ಒಪ್ಪುವುದಿಲ್ಲ. ಸ್ತ್ರೀಗೆ ಕೊಡುವ ಪ್ರತಿಫಲವು ಹಾಲಿನ ಮೌಲ್ಯವೆಂದು ಅವರು ಹೇಳುತ್ತಾರೆ.

SHARE THIS POST VIA

About editor

Check Also

ಮೃತದೇಹವನ್ನು ವಿಮಾನಗಳಲ್ಲಿ ಸಾಗಿಸುವುದರ ವಿಧಿ ಏನು?

– ಖದೀಜ ನುಸ್ರತ್ ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. …