ಪ್ರಶ್ನೆ: ಇಸ್ಲಾಮ್ ಖಡ್ಗದಿಂದ ಪಸರಿಸಿದ ಧರ್ಮ ಎಂದು ಹೇಳಲಾಗುತ್ತದೆ, ಇದು ಸರಿಯೇ?
ಉತ್ತರ: ಮುಸ್ಲಿಮನೆಂದರೆ, “ಒಂದು ಕೈಯಲ್ಲಿ ಖಡ್ಗ ಮತ್ತೊಂದು ಕೈಯಲ್ಲಿ ಕುರ್ಆನ್ ಹಿಡಿದುಕೊಂಡು ಒಂದೋ ಕುರ್ಆನನ್ನು ನಂಬಿ ಮುಸ್ಲಿಮನಾಗು ಇಲ್ಲವೇ ಖಡ್ಗಕ್ಕೆ ಶರಣಾಗಿ ಸಾಯಲು ಸಿದ್ಧನಾಗು” ಎಂದು ಹೇಳುವ ಮತ್ತು ಖಡ್ಗದ ಬಲದಿಂದ ಜನರನ್ನು ಮತಾಂತರ ಮಾಡುವ ಒಬ್ಬ ಮತಾಂಧನೆಂಬ ವಿಕೃತ ಚಿತ್ರವನ್ನು ಇಸ್ಲಾಮಿನ ಪಾಶ್ಚಾತ್ಯ ಶತ್ರುಗಳು ಮತ್ತವರ ಪೌರ್ವಾತ್ಯ ಅಂಧಾನುಯಾಯಿಗಳು ಮೂಡಿಸಿರುವರು. ಸಾಮಾನ್ಯವಾಗಿ ‘ಜಿಹಾದ್’ ಎಂದರೆ ಧರ್ಮವನ್ನು ಬಲಾತ್ಕಾರವಾಗಿ ಹೇರಲು ಮಾಡುವಂತಹ ಯುದ್ಧ ಎಂದು ಭಾವಿಸಲಾಗುತ್ತದೆ. ಆದರೆ ಪವಿತ್ರ ಕುರ್ಆನ್, ಪ್ರವಾದಿ ವಚನಗಳು, ಪ್ರವಾದಿ ಜೀವನ ಚರಿತ್ರೆ ಮತ್ತು ಅವರ ಸತ್ಯಸಂಧರಾದ ಖಲೀಫರುಗಳ ಇತಿಹಾಸವು ಜಿಹಾದ್ನ ಬಗ್ಗೆ ಇದಕ್ಕೆ ತೀರಾ ವ್ಯತಿರಿಕ್ತವಾದ ಒಂದು ಚಿತ್ರವನ್ನು ನಮ್ಮ ಮುಂದಿಡುತ್ತದೆ.
‘ಧರ್ಮದಲ್ಲಿ ಯಾವುದೇ ಒತ್ತಾಯ, ಬಲಾತ್ಕಾರಗಳಿಲ್ಲ’ (2:256)ವೆಂದು ಪವಿತ್ರ ಕುರ್ಆನ್ ಖಡಾಖಂಡಿತವಾಗಿ ಸಾರಿದೆ. ವಿಚಾರ ಸ್ವಾತಂತ್ರ್ಯವು ಮನುಷ್ಯನ ಜನ್ಮಸಿದ್ಧ ಹಕ್ಕು. ಅದನ್ನು ಕಸಿಯುವ ಅಧಿಕಾರವನ್ನು ಇಸ್ಲಾಮ್ ಯಾರಿಗೂ ನೀಡುವುದಿಲ್ಲ. ಒತ್ತಾಯ-ಬಲಾತ್ಕಾರಗಳಿಂದ, ಖಡ್ಗ-ಬಂದೂಕುಗಳಿಂದ ಜನರ ಶಿರಬಾಗಿಸಬಹುದೇ ಹೊರತು ಅವರ ಮನಗಳನ್ನು ಜಯಿಸಲು ಸಾಧ್ಯವಿಲ್ಲ. ಇಸ್ಲಾಮ್ ಮನುಷ್ಯರ ಮನವನ್ನು ಜಯಿಸ ಬಯಸುತ್ತದೆ. ಅದು ಮಾನವನ ಮನಸ್ಸಿನಲ್ಲಿ ಕೆಲವು ವಿಶ್ವಾಸ-ಶ್ರದ್ಧೆಗಳನ್ನು ಬಿತ್ತ ಬಯಸುತ್ತದೆ. ಮನುಷ್ಯನಲ್ಲಿ ವೈಚಾರಿಕ ಕ್ರಾಂತಿಯನ್ನು ತರಬಯಸುತ್ತದೆ. ಈ ಕಾರ್ಯ ಖಡ್ಗದಿಂದ ಸಾಧ್ಯವಲ್ಲವೆಂಬುದು ಶತಃಸಿದ್ಧ. ಇಸ್ಲಾಮಿನ ಸಂಪೂರ್ಣ ಧರ್ಮಸಂಹಿತೆಯು ಈ ವೈಚಾರಿಕ ಕ್ರಾಂತಿಯನ್ನು ಅವಲಂಬಿಸಿರುವಾಗ ಅದನ್ನು ಖಡ್ಗದ ಮೂಲಕ ಸಾಧಿಸಬಹುದೆನ್ನುವುದು ಮಹಾ ಮೂರ್ಖತನ.
ಪ್ರವಾದಿವರ್ಯರ(ಸ) ಮಕ್ಕಾ ಜೀವನದ 13 ವರ್ಷಗಳಲ್ಲಿ ಅವರು ಮತ್ತು ಅವರ ಅನುಯಾಯಿಗಳು ಅನುಭವಿಸಿದ ಕಷ್ಟ-ನಷ್ಟಗಳಿಗೆ, ಹಿಂಸೆ-ದೌರ್ಜನ್ಯಗಳಿಗೆ ಲೆಕ್ಕ ಮಿತಿ ಇರಲಿಲ್ಲ. ಆದರೂ ಪ್ರವಾದಿ(ಸ) ಆ ಕಾಲದಲ್ಲಿ ತಮ್ಮ ಅನುಯಾಯಿಗಳಿಗೆ ಆತ್ಮ ರಕ್ಷಣೆಗಾಗಿಯೂ ಖಡ್ಗ ಎತ್ತುವ ಅನುಮತಿ ನೀಡಿರಲಿಲ್ಲ. ಕೊನೆಗೊಮ್ಮೆ ಶತ್ರುಗಳ ಹಿಂಸೆ ಮಿತಿ ವಿೂರಿದಾಗ ಪ್ರವಾದಿವರ್ಯರು(ಸ) ಮತ್ತವರ ಅನುಯಾಯಿಗಳು(ರ) ಮಕ್ಕಾ ಪಟ್ಟಣವನ್ನು ತೊರೆದು ಮದೀನಾಕ್ಕೆ ವಲಸೆ ಹೋಗುತ್ತಾರೆ. ಅಲ್ಲಿಯೂ ಪ್ರವಾದಿವರ್ಯರು(ಸ) ಮತ್ತವರ ಅನುಯಾಯಿಗಳನ್ನೂ ತಮ್ಮಿಷ್ಟದ ಧರ್ಮವನ್ನು ಪಾಲಿಸುತ್ತಾ, ಹಾಯಾಗಿ ಜೀವಿಸಲು ಮತ್ತು ಶಾಂತಿಯುತವಾಗಿ ಅದನ್ನು ಪ್ರಚಾರ ಪಡಿಸಲು ಮಕ್ಕಾದ ಬಹುದೇವಾರಾಧಕರು ಅನುಮತಿಸಲಿಲ್ಲ. ಅವರು ಮಕ್ಕಾದಿಂದ ದಂಡೆತ್ತಿ ಬಂದು ಮದೀನಾದ ಮೇಲೆ ಆಕ್ರಮಣಕ್ಕೆ ಸಜ್ಜಾದಾಗ ಮುಸ್ಲಿಮರಿಗೆ ಮೊಟ್ಟ ಮೊದಲು ಯುದ್ಧ ಮಾಡುವ ಅನುಮತಿ ದೊರೆಯಿತು. ಪವಿತ್ರ ಕುರ್ಆನಿನಲ್ಲಿ ಅದು ಈ ರೀತಿ ಉಲ್ಲೇಖಿಸಲ್ಪಟ್ಟಿದೆ- “ನಿಮ್ಮೊಡನೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿಕ್ರಮಿಸಬೇಡಿರಿ. ಅಲ್ಲಾಹನು ಅತಿಕ್ರಮಿಸುವವರನ್ನು ಮೆಚ್ಚುವುದಿಲ್ಲ.” (2:190)
ಅದೇ ರೀತಿ ಧರ್ಮಾಚರಣೆ ಮತ್ತು ಧರ್ಮ ಪ್ರಚಾರವು ಮನುಷ್ಯನ ಮೂಲಭೂತ ಸ್ವಾತಂತ್ರ್ಯ. ತನಗಿಷ್ಟ ಬಂದ ಧರ್ಮವನ್ನು ಸ್ವೀಕರಿಸುವ, ಅದರಂತೆ ಜೀವನ ಸಾಗಿಸುವ ಮತ್ತು ಶಾಂತಿಯುತವಾಗಿ ಅದನ್ನು ಇತರರಲ್ಲಿ ಪ್ರಚಾರಪಡಿಸುವ ಹಕ್ಕು ಪ್ರತಿಯೊಬ್ಬ ಮನುಷ್ಯನಿಗೂ ಇದೆ. ಇಸ್ಲಾಮ್ ಮನುಷ್ಯನ ಈ ಸ್ವಾತಂತ್ರ್ಯವನ್ನು ಮಾನ್ಯ ಮಾಡುತ್ತದೆ. ಈ ಸ್ವಾತಂತ್ರ್ಯವು ಕಸಿಯಲ್ಪಟ್ಟಾಗ ಅಥವಾ ಶಾಂತಿಯುತ ಧರ್ಮಪ್ರಚಾರ ಕಾರ್ಯಗಳು ಹಿಂಸಾ ಮಾರ್ಗದಿಂದ ತಡೆಯಲ್ಪಟ್ಟಾಗ, ಇಸ್ಲಾಮ್ ಹಾಗೆ ಹಿಂಸೆಗಿಳಿಯುವವರ ವಿರುದ್ಧ ಯುದ್ಧ ಮಾಡುವ ಅನುಮತಿ ನೀಡುತ್ತದೆ.
“ಓ ಸತ್ಯವಿಶ್ವಾಸಿಗಳೇ, ‘ಫಿತ್ನ'(ಕ್ಷೋಭೆ) ಅಳಿದು ಹೋಗುವವರೆಗೂ ‘ಧರ್ಮ'(ದೀನ್) ಸರ್ವಸಂಪೂರ್ಣವಾಗಿ ಅಲ್ಲಾಹನಿಗಾಗಿ ಆಗುವವರೆಗೂ ಈ ಸತ್ಯನಿಷೇಧಿಗಳೊಡನೆ ಹೋರಾಡಿರಿ.” (8:39)
ಆದರೆ ಶಾಂತಿಯ ಎಲ್ಲ ಮಾರ್ಗಗಳು ಮುಚ್ಚಲ್ಪಟ್ಟಾಗ ಮಾತ್ರ ಯುದ್ಧಕ್ಕೆ ಅನುಮತಿ ನೀಡಲಾಗಿದೆ. ಅನಿವಾರ್ಯ ಸ್ಥಿತಿಯಲ್ಲಿ ಯುದ್ಧಕ್ಕೆ ಅನುಮತಿ ಸಿಕ್ಕಿದ ಬಳಿಕವೂ ಅದಕ್ಕೆ ಕೆಲವು ನೀತಿ-ನಿಯಮಗಳನ್ನು ಇಸ್ಲಾಮ್ ಧರ್ಮವು ನಿರ್ಧರಿಸಿದೆ. ಅವುಗಳ ಪಾಲನೆಯು ಕಡ್ಡಾಯವಾಗಿದೆ. ಮುನ್ನೆಚ್ಚರಿಕೆ ಅಥವಾ ಪೂರ್ವ ಘೋಷಣೆಯಿಲ್ಲದೆ ಯುದ್ಧ ಮಾಡುವಂತಿಲ್ಲ. ರಕ್ತಪಾತವನ್ನು ತಪ್ಪಿಸಿ ಶಾಂತಿ ಸ್ಥಾಪನೆಯ ಅಂತಿಮ ಅವಕಾಶವನ್ನು ನೀಡದೆ ಯುದ್ಧಕ್ಕೆ ಧುಮುಕುವಂತಿಲ್ಲ.
“ಓ ಪೈಗಂಬರರೇ, ಶತ್ರುವು ಶಾಂತಿ ಸಂಧಾನಗಳ ಕಡೆಗೆ ವಾಲಿದರೆ ನೀವೂ ಅದಕ್ಕೆ ಸಿದ್ಧರಾಗಿರಿ ಮತ್ತು ಅಲ್ಲಾಹನ ಮೇಲೆ ಭರವಸೆಯನ್ನಿರಿಸಿರಿ.” (8:61)
IslamKannada News Portal
