Home / ಲೇಖನಗಳು / ಪ್ರವಾದಿ ಮುಹಮ್ಮದ್(ಸ)ರ ಬಾಲ್ಯ ಕಾಲದ ಸದ್ವರ್ತನೆಗಳು

ಪ್ರವಾದಿ ಮುಹಮ್ಮದ್(ಸ)ರ ಬಾಲ್ಯ ಕಾಲದ ಸದ್ವರ್ತನೆಗಳು

@ ಅಶೀರುದ್ದೀನ್ ಆಲಿಯಾ, ಸಾರ್ತಬೈಲ್

ಪ್ರವಾದಿ ಮುಹಮ್ಮದ್(ಸ)ರು ಹುಟ್ಟುವ ಮುಂಚೆ, ತಂದೆ ಅಬ್ದುಲ್ಲಾರು ಸಿರಿಯಾದಿಂದ ವ್ಯಾಪಾರಿ ತಂಡದೊಂದಿಗೆ ಮರಳುವಾಗ ದಾರಿ ಮಧ್ಯದಲ್ಲಿ ತೀರಿ ಹೋಗಿದ್ದರು. ಅನಾಥರಾಗಿ ಹುಟ್ಟಿದ ಮುಹಮ್ಮದ್‌ರ, ದಾದಿ ಅಲೀಮಾ ಸಅದಿಯ್ಯಾರ ಆಸರೆಯಲ್ಲಿ ಮಕ್ಕಾದ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ಜೀವನ ಆರಂಭವಾಗುತ್ತದೆ. ಗ್ರಾಮೀಣ ಸೊಗಡು, ಪ್ರಾಕೃತಿಕ ವಾತಾವರಣ. ಸುಂದರ ಭಾಷಾ ಶೈಲಿ ಮತ್ತು  ಉತ್ತಮ ಗುಣ ನಡತೆ ಅವರಲ್ಲಿ ಬೆಳೆಯುತ್ತದೆ. ಆರನೇ ವರ್ಷದಲ್ಲಿ ತಾಯಿ ಆಮಿನಾ ಇಹಲೋಕ ತ್ಯಜಿಸಿದರು. ನಂತರ ತಾತ ಅಬ್ದುಲ್  ಮುತ್ತಲಿಬರ ನೆರಳಿನಲ್ಲಿ ಬೆಳೆದ ಮುಹಮ್ಮದ್‌ರಿಗೆ ತಾತನಂತೆ ನಾಯಕತ್ವದ ಗುಣವೂ ಬೆಳೆಯಿತು. ತನ್ನ 8ನೇ ವಯಸ್ಸಿಗೆ ತಾತನನ್ನೂ  ಕಳೆದುಕೊಂಡರು.

ಅನಾಥರಾಗಿ ಹುಟ್ಟಿದ್ದರೂ ಈ ಎಲ್ಲಾ ವಾತಾವರಣದಿಂದ ಮತ್ತು ಕುಟುಂಬದವರ ವಾತ್ಸಲ್ಯದಿಂದ ಮುಹಮ್ಮದರ ಬಾಲ್ಯ ಕಾಲದ ವರ್ತನೆಗಳು, ಸ್ವಭಾವ ಮತ್ತು ಸಂಸ್ಕಾರ ಮಾದರಿ ಪೂರ್ಣವಾಗಿ ಎಲ್ಲರೂ ಮೆಚ್ಚುವಂತಹದ್ದು ಮತ್ತು ಸ್ಮರಿಸುವಂತಹದ್ದು ಆಗಿತ್ತು ಎಂದು  ಇತಿಹಾಸಕಾರರು ಬಣ್ಣಿಸುತ್ತಾರೆ.

“ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಅನೇಕ ಮಹಾನ್ ಪುರುಷರ, ಪ್ರವಾದಿಗಳ ಬಾಲ್ಯ ಜೀವನದ ಕತೆಗಳು ಉತ್ತಮ ಗುಣಗಳಿಂದ ಕೂಡಿದ್ದವು. ಜನಪರ ಕಾಳಜಿ ಅವರ ಲ್ಲಿತ್ತು. ಕೆಡುಕುಗಳಿಂದ, ದುಷ್ಟ ಸಹವಾಸದಿಂದಲೂ ಅವರು ದೂರ ನಿಲ್ಲುತ್ತಿದ್ದರು.  ಪ್ರವಾದಿ ಮಹಮ್ಮದ್(ಸ)ರ ಕಾಲದ ಹಿಂದಿನ ಪ್ರವಾದಿಗಳ ಮತ್ತು ಅವರ ನಂತರದ ಮಹಾನ್ ಪುರುಷರ ಜೀವನವೂ ಹಾಗೆಯೇ ಆಗಿತ್ತು ಎಂಬುದನ್ನು ನಾವು ತಿಳಿದಿದ್ದೇವೆ. ಅಬ್ರಹಾಂ, ಏಸು, ಮೋಸೆಸ್, ಡೇವಿಡ್, ಶ್ರೀ ರಾಮ, ಬಸವಣ್ಣ, ಸ್ವಾಮಿ ವಿವೇಕಾನಂದ, ಶ್ರೀ  ನಾರಾಯಣ ಗುರು, ಮದರ್ ತೆರೇಸಾ ಇತ್ಯಾದಿ ಇತ್ಯಾದಿ ವಿಶ್ವದ ನಾನಾ ಭಾಗಗಳಲ್ಲಿನ ಮಹಾನ್ ವ್ಯಕ್ತಿಗಳ ಬಾಲ್ಯ ಮಾದರಿ ಪೂರ್ಣವಾಗಿತ್ತು.

ಮಹಾನ್ ಪುರುಷರು, ಪ್ರವಾದಿಗಳು ಜನ ಸಾಮಾನ್ಯರಂತೆ ಬದುಕಿದ್ದರೂ ಸಹ ಕೆಲವು ಇತಿಹಾಸಕಾರರು ಅವರನ್ನು ದೈವತ್ವಕ್ಕೇರಿಸಿ ಬಣ್ಣಿಸಿರುವುದನ್ನು ಕಾಣುತ್ತೇವೆ. ವಾಸ್ತವಕ್ಕೆ ನಿಕಟವಲ್ಲದ ಪವಾಡಗಳ ಕಥೆಗಳನ್ನು ಅವರ ಚರಿತ್ರೆಯಲ್ಲಿ ಕಟ್ಟಲಾಗಿದೆ. ಇದು ಪ್ರವಾದಿ ಮುಹಮ್ಮದ್(ಸ)ರ ಜೀವನ ಚರಿತ್ರೆಯ ಮೇಲೂ ಸಂಭವಿಸಿದೆ. ಅವರನ್ನು ಸ್ಮರಿಸಿ ಬರೆದ ಸ್ತುತಿಸಿ ಗೀತೆಗಳು, ಕವನಗಳು, ಲೇಖನಗಳು,  ಪುಸ್ತಕಗಳು, ಜೀವನ ಚರಿತ್ರೆಗಳು ಇಸ್ಲಾಮಿನ ಮೂಲ ತತ್ವದ ಎಲ್ಲೆಯನ್ನು ಮೀರಿದೆ ಎಂದರೂ ತಪ್ಪಾಗಲಾರದು.

ಪ್ರವಾದಿ ಮುಹಮ್ಮದ್(ಸ) ಅಸಾಧಾರಣ ವ್ಯಕ್ತಿಯೇ ಅಥವಾ ಸಾಧಾರಣ ವ್ಯಕ್ತಿಯೇ? ಎಂಬ ಚರ್ಚೆಗಳು ಈ ಕಾಲದಲ್ಲೂ ಮುಕ್ತಾಯ ಕಂಡಿಲ್ಲ ಎಂಬುದೇ ಸಣ್ಣ ಉದಾಹರಣೆ.

ಒಬ್ಬ ಇತಿಹಾಸಕಾರ ಅಥವಾ ಅನುಯಾಯಿ ಪ್ರವಾದಿ ಮುಹಮ್ಮದ್(ಸ) ಬಗ್ಗೆ ಕಲ್ಪಿಸಿಕೊಂಡ ಅವನ ಭಾವನೆಯಂತೆ, ಕುರ್‌ಆನ್ ಅಥವಾ ಹದೀಸ್(ಪ್ರವಾದಿ ವಚನ)ಗಳಲ್ಲಿ ಬಳಸಲಾಗಿದ್ದ ಸಾಹಿತ್ಯಿಕ ಅಥವಾ ಭಾಷಾ ಪ್ರಯೋಗಗಳು ಮತ್ತು ಉದಾಹರಣೆಗಳನ್ನು  ಆಧಾರವಾಗಿಟ್ಟುಕೊಂಡು ಪ್ರವಾದಿಯವರ(ಸ) ಬಗ್ಗೆ ಅನೇಕ ಪವಾಡ ಕಥೆಗಳನ್ನು ಇತಿಹಾಸಕಾರರು ಹೆಣೆದಿದ್ದಾರೆ. ಈ ಐತಿಹಾಸಿಕ ಲೋಪಕ್ಕೆ ಒಂದು ಪ್ರಮುಖ ಕಾರಣ ಪ್ರವಾದಿಯ ಅಗಲಿಕೆಯ ಒಂದೂವರೆ ಶತಮಾನದ ಬಳಿಕ ಪ್ರವಾದಿಯ ವಚನಗಳು ಮತ್ತು ಜೀವನ  ಚರಿತ್ರೆಯ ಕ್ರೋಢೀಕರಣ ನಡೆಯಲಾರಂಭಿಸಿದ್ದು. ಅಷ್ಟರವರೆಗೆ ಬಾಯ್ಮಾತಿನಲ್ಲಿ, ಜನಪದಗಳಲ್ಲಿ, ಕಲ್ಲು ಬಂಡೆ, ಹಲಗೆ, ಚರ್ಮಗಳ  ಮೇಲೆ ಶೇಖರಣೆಗೊಂಡಿದ್ದವು. ಅಲ್ಲದೆ ಪ್ರವಾದಿ ಜೊತೆಗಿದ್ದ ಬಹುಪಾಲು ಸಹಚರರು ಗತಿಸಿ ಹೋಗಿದ್ದರು. ಇದು ಐತಿಹಾಸಿಕ ಲೋಪ ಉಂಟಾಗಲು ಮತ್ತೊಂದು ಕಾರಣ ಎನ್ನಬಹುದು.

ನಿಜವಾಗಿಯೂ ಮುಹಮ್ಮದ್ ಯಾವುದೇ ಪವಾಡಗಳನ್ನು ಅಥವಾ ಜಾದೂಗಳನ್ನು ಪ್ರದರ್ಶಿಸಲು ಬಂದವರಲ್ಲ. ಅವರು ಜನರಿಗೆ ಸತ್ಯದ ಸಂದೇಶವನ್ನು ನೀಡಲು ನಿಯುಕ್ತರಾದವರು. ಅವರು ಮನುಷ್ಯರು ಎಂದು ಕುರ್‌ಆನ್ ಹೇಳುತ್ತದೆ; “ಪ್ರವಾದಿವರ್ಯರೇ(ಸ),  ಅವರೊಡನೆ ಹೇಳಿರಿ- ನನ್ನ ಪ್ರಭು ಮಹಿಮಾವಂತನು. ನಾನು ಸಂದೇಶವಾಹಕನಾಗಿರುವ ಓರ್ವ ಮನುಷ್ಯನ ಹೊರತು ಇನ್ನೇನು ಆಗಿರುವನೇ?” (ಬನೀ ಇಸ್ರಾಈಲ್: 90-93)

ಪ್ರವಾದಿಯ ಬಾಲ್ಯ ಮತ್ತು ಯೌವನ:
ಪ್ರವಾದಿ ಮುಹಮ್ಮದ್(ಸ)ರು ಬಾಲ್ಯ ಮತ್ತು ತಮ್ಮ ಯೌವನದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡಿದ್ದರು ಎಂದು ಇತಿಹಾಸಕಾರರು ವಿವರಿಸುತ್ತಾರೆ. ಸುಳ್ಳು ಹೇಳುತ್ತಿರಲಿಲ್ಲ, ಅನಗತ್ಯ ವಿಚಾರಗಳಲ್ಲಿ ತಲ್ಲಿನರಾಗುತ್ತಿರಲಿಲ್ಲ, ಕಠಿಣ ಪರಿಶ್ರಮಿಯಾಗಿದ್ದರು,  ಮಕ್ಕಾದ ಸಂತೆಗಳಲ್ಲಿ ಕಿನಾನ ಗೋತ್ರದವರು ಆಯೋಜಿಸುತ್ತಿದ್ದ ಅಶ್ಲೀಲ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಅಸಮ್ಮತಿ ಸೂಚಿಸುತ್ತಿದ್ದರು. ಸೂಕ್ ಉಕ್ಕಾಝ್‌ನಲ್ಲಿ ನಡೆಯುವ ಸುರಾಪಾನದಿಂದ, ವೇಶ್ಯಾವಾಟಿಕೆ, ಜೂಜುಗಳಿಂದ ದೂರವಿದ್ದರು, ಹರಟೆಗಳಲ್ಲಿ  ಭಾಗವಹಿಸುತ್ತಿರಲಿಲ್ಲ.

ಅಬ್ದುಲ್ ಮುತ್ತಲಿಬರ ಅಗಲಿಕೆಯ ನಂತರ ಚಿಕ್ಕಪ್ಪ ಅಬೂ ತಾಲಿಬ್‌ರ ಅತ್ಯುತ್ತಮ ಮಾರ್ಗದರ್ಶನದಲ್ಲಿ ಬೆಳೆದ ಮುಹಮ್ಮದ್ ಮಕ್ಕಾದ ರಾಜಕೀಯ, ಸಾಮಾಜಿಕ ಮತ್ತು ವ್ಯಾವಹಾರಿಕ ಜ್ಞಾನವನ್ನು ಕರಗತ ಮಾಡಿಕೊಂಡರು. “ಸತ್ಯಸಂಧತೆ”, “ಪ್ರಾಮಾಣಿಕತೆ”ಗೆ  ಹೆಸರುವಾಸಿಯಾದರು, ಜನರ ನೋವು-ನಲಿವಿಗೆ, ಕಷ್ಟ-ಸುಖಗಳಿಗೆ, ಒಡಕು-ತೊಡಕುಗಳಿಗೆ ಹಾಗೂ ತೀರ್ಮಾನಗಳನ್ನು ಕೈಗೊಳ್ಳುವ ಸಲಹೆಯನ್ನು ನೀಡುವ ಮತ್ತು ನಾಡಿನ ಪ್ರಖ್ಯಾತರ ಸಭೆಯಲ್ಲಿ ಭಾಗವಹಿಸುವ ಅರ್ಹತೆಯನ್ನು ಗಳಿಸುವ ಮಟ್ಟಕ್ಕೆ ಬೆಳೆದರು.

ನಗರದಲ್ಲಿ ಶಾಂತಿ ಕಾಪಾಡಲು ಮಾಡಿಕೊಂಡ ಫುಝೂಲ್ ಒಪ್ಪಂದಕ್ಕೆ ಮುಹಮ್ಮದ್(ಸ)ರು ಸಹಿ ಹಾಕಿ ಅಲ್ಲಿನ ರಾಜಕೀಯದಲ್ಲಿ ಸೌಹಾರ್ದದ ಪ್ರತೀಕವಾಗಿ ಗುರುತಿಸಲ್ಪಟ್ಟರು. ಯಮನ್, ಸಿರಿಯಾ ಈಜಿಪ್ಟ್, ಯಸ್ರಿಬ್ ನಾಡಿಗೆ ವ್ಯಾಪಾರಿ ತಂಡದೊಂದಿಗೆ ಸಂಚರಿಸಿ ಉತ್ತಮ ವ್ಯಾಪಾರಿಯೂ ಆದರು. ಮಾತಿನಲ್ಲಿ ಸತ್ಯವಂತ, ವ್ಯವಹಾರದಲ್ಲಿ ಪ್ರಾಮಾಣಿಕರಾಗಿದ್ದರು. ಬಡ್ಡಿ ವ್ಯವಹಾರ ಮಾಡುತ್ತಿರಲಿಲ್ಲ. ವೃದ್ಧರಿಗೆ, ಯುದ್ಧದಲ್ಲಿ ಮಡಿದ ಕುಟುಂಬದವರಿಗೆ, ರೋಗಿಗಳಿಗೆ ಬಡವರಿಗೆ, ಮಕ್ಕಳಿಗೆ, ವಿಧವೆಯರಿಗೆ ಅನಾಥರಿಗೆ ನೆರವಾಗುತ್ತಿದ್ದರು.

ಒಮ್ಮೆ ಉತ್ಬಾರವರು ಹೀಗೆ ಹೇಳಿದರು:
“ಮುಹಮ್ಮದ್‌ರಿಗೆ ಸಂಪತ್ತಿನ ಬೆಲೆ ಗೊತ್ತಿಲ್ಲ. ಬಡವರಿಗೆ ಅನಾಥರಿಗೆ ನೀರಿನಂತೆ ವ್ಯಯಿಸುತ್ತಾನೆ. ಇಲ್ಲದಿದ್ದರೆ ಅವನು ಮಕ್ಕಾದ ದೊಡ್ಡ  ಶ್ರೀಮಂತನಾಗುತ್ತಿದ್ದ.”

ನಾಡಿನ ಪ್ರಖ್ಯಾತ ಶ್ರೀಮಂತ ವ್ಯಾಪಾರಿ, ವಿಧವೆ ಖದೀಜರ ವ್ಯಾಪಾರ ವಹಿವಾಟುಗಳನ್ನು ನೋಡಿಕೊಳ್ಳುವ ಉಸ್ತುವಾರಿಯನ್ನು ಪ್ರವಾದಿ(ಸ) ವಹಿಸಿದ್ದರು. ವ್ಯಾವಹಾರಿಕ ಶೈಲಿ ಮತ್ತು ಬುದ್ಧಿವಂತಿಕೆಯಿಂದಾಗಿ ಖದೀಜರ ವ್ಯಾಪಾರ ವೃದ್ಧಿಸಿತು. ಮುಹಮ್ಮದರನ್ನು ಮೆಚ್ಚಿ ಖದೀಜ ವಿವಾಹ ಪ್ರಸ್ತಾಪ ಮುಂದಿಟ್ಟಿದ್ದು ಅವರ ಪ್ರಾಮಾಣಿಕತೆಗೆ ಸಿಕ್ಕಿದ ಗೌರವ ಎನ್ನಬಹುದು.

ಯೌವನದಲ್ಲಿ ಅಬೂಬಕ್ಕರ್‌ರಂತಹ ಒಳ್ಳೆಯ ಗೆಳೆಯರ ಬಳಗದೊಂದಿಗೆ ಮಾತ್ರ ಬೆರೆಯುತ್ತಿದ್ದರು. ಬಹುದೇವರಾಧನೆಯಲ್ಲಿ ನಂಬಿಕೆ ಇಡದ ಮೂಢಾಚಾರಗಳನ್ನು ವಿಮರ್ಶಿಸುತ್ತಿದ್ದ ಬೆರಳೆಣಿಕೆಯ ಜನರಲ್ಲಿ ಮುಹಮ್ಮದರೂ ಒಬ್ಬರಾಗಿದ್ದರು. ಸಾಮಾಜಿಕ ಬದ್ಧತೆಯಿರುವ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗಿ, ಜನರ ಮೆಚ್ಚುಗೆಯ ಯುವಕನಾಗಿ ಅರಬ್ ನಾಡಿನಲ್ಲಿ ಪ್ರಖ್ಯಾತರಾಗಿದ್ದರು.

ಕಅಬಾದ ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ ಹಜರುಲ್ ಅಸ್ವದ್ (ಕಪ್ಪು ಶಿಲೆ) ಪ್ರತಿಷ್ಠಾಪಿಸುವ ಬಗ್ಗೆ ವಿವಿಧ ಮನೆತನದವರ ನಡುವೆ ವಿವಾದವೆದ್ದಾಗ ಅದನ್ನು ಚಾಣಾಕ್ಷತೆ ಯಿಂದ ಪರಿಹರಿಸಿದ್ದರು. ಮಕ್ಕಾದಲ್ಲಿ ಬರಗಾಲ ಆವರಿಸಿದಾಗ “ನಗರದ ಜನರೇ,  ಮುಹಮ್ಮದರ ಮನೆಯ ದ್ವಾರ ಬಡವರಿಗೆ ಮುಕ್ತವಾಗಿದೆ” ಎಂದಿದ್ದರು. ಇದರ ಹಿಂದೆ ಪತ್ನಿ ಖದೀಜ ಸಂಪೂರ್ಣ ಸಹಕಾರವೂ ಇತ್ತು.  ವಾಸ್ತವದಲ್ಲಿ ಪ್ರವಾದಿ ಮುಹಮ್ಮದ್(ಸ) ಓರ್ವ ಮನುಷ್ಯರಾಗಿದ್ದಾರೆ. ಅವರಲ್ಲಿ ಉತ್ತಮ ಗುಣನಡೆತೆಗಳು, ಮಾತುಗಾರಿಕೆ, ನಾಯಕತ್ವ, ಪ್ರೀತಿ, ಕರುಣೆ, ಸೇವಾ ಮನೋಭಾವ ಉದಾತ್ತವಾಗಿತ್ತು. ಬದಲಾಗಿ ವಾಸ್ತವಕ್ಕೆ ನಿಕಟವಲ್ಲದ ಘಟನೆಗಳನ್ನು ಪವಾಡಗಳಂತೆ ಬಿಂಬಿಸುವುದು ಅವರ ವ್ಯಕ್ತಿತ್ವಕ್ಕೆ ಬಗೆಯುವ ದ್ರೋಹ ಎನ್ನಬಹುದು. ಪ್ರವಾದಿತ್ವದ ನಂತರ ಮುಅಜಿಝತ್‌ಗಳು (ದೃಷ್ಟಾಂತ) ಅವರಿಗೆ ಪ್ರದಾನವಾಗಿದೆ. ಅವುಗಳ ಮೇಲೆ ನಂಬಿಕೆ ಇರಿಸುವುದು ಅನುಸರಣೆಯ ಭಾಗವಾಗಿದೆ.

ಕಾವ್ಯಗಳಲ್ಲಿ, ಗಝಲ್‌ಗಳಲ್ಲಿ, ಹಾಡುಗಳಲ್ಲಿ, ಸ್ತುತಿ ಗೀತೆಗಳಲ್ಲಿ, ಚಾರಿತ್ರಿಕ ವಿಶ್ಲೇಷಣೆಯಲ್ಲಿ ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ವಾಸ್ತವಕ್ಕೆ ನಿಕಟವಲ್ಲದ ಪವಾಡಗಳನ್ನು ಕಥೆಗಳನ್ನು ಕಲ್ಪಿಸಿ ಅಜ್ಞಾನದಿಂದ ದೈವತ್ವಕ್ಕೇರಿಸುವವರ ಬಗ್ಗೆ ಜಾಗರೂಕರಾಗಬೇಕು. ಇದು ಧರ್ಮದ  ಮೂಲ ತತ್ವಕ್ಕೆ ವಿರುದ್ಧ.

ಕುರ್‌ಆನ್ ಹೇಳುತ್ತದೆ: “ಅಲ್ಲಾಹನ ನ್ನು ಬಿಟ್ಟು ತಮ್ಮ ಧರ್ಮ ಪಂಡಿತರನ್ನೂ ಸನ್ಯಾಸಿಯರನ್ನೂ ಅವರು ದೇವರಾಗಿ ಇರಿಸಿಕೊಂಡು ಮರಿಯಮ್ಮಳ ಪುತ್ರ ಮಸೀಹರನ್ನೂ (ದೇವರಾಗಿಸಿದರು). ಇಷ್ಟಾಗಿ ಒಬ್ಬನೇ ದೇವನನ್ನು ಆರಾಧಿಸಲು ಅವರು ಆಜ್ಞಾಪಿಸಲ್ಪಟ್ಟಿದ್ದರೇ  ಹೊರತು, ಅವರಾರನ್ನೂ ಆರಾಧಿಸಲಿಕ್ಕೆ ಅಲ್ಲ. ಆ ದೇವನ ಹೊರತು ಇನ್ನೊಬ್ಬ ದೇವನಿಲ್ಲ. ಇವರು ಭಾಗೀದಾರರಾಗಿ ಮಾಡುವ  ಅದರಿಂದ ಆತನೆಷ್ಟೋ ಪರಿಶುದ್ಧನು.” (ಅತ್ತೌಬಾ – 31)

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …