Home / ಲೇಖನಗಳು / ಇಸ್ಲಾಮೀ ಇತಿಹಾಸದ ಮಹಾ ಅದ್ಭುತ

ಇಸ್ಲಾಮೀ ಇತಿಹಾಸದ ಮಹಾ ಅದ್ಭುತ

ಪವಿತ್ರ ಕುರ್‍ಆನ್ ಹೇಳುತ್ತದೆ-
” ಅವರು ಅದೆಷ್ಟೋ ಉದ್ಯಾನಗಳನ್ನು ಚಿಲುಮೆಗಳನ್ನು ಹೊಲಗಳನ್ನು ಭವ್ಯ ಅರಮನೆಗಳನ್ನು ಬಿಟ್ಟು ಹೋದರು. ಅವರು ಸುಖಿಸುತ್ತಿದ್ದ ಎಷ್ಟೋ ಭೋಗ ಸಾಮಾಗ್ರಿಗಳು ಅವರ ಹಿಂದೆಯೇ ಉಳಿದು ಬಿಟ್ಟವು. ಅವರ ಅಂತ್ಯ ಹೀಗಾಯಿತು. ನಾವು ಇತರರನ್ನು ಈ ವಸ್ತುಗಳ ವಾರೀಸುದಾರರನ್ನಾಗಿ ಮಾಡಿದೆವು. ತರುವಾಯ ಆಕಾಶವಾಗಲಿ ಭೂಮಿಯಾಗಲಿ ಅವರಿಗಾಗಿ ರೋದಿಸಲಿಲ್ಲ ಮತ್ತು ಒಂದಿಷ್ಟು ಕಾಲಾವಕಾಶವನ್ನು ಅವರಿಗೆ ನೀಡಲಿಲ್ಲ. (ಅದ್ದುಖಾನ್ 25-29)

ಮುಸ್ಲಿಮರಿಗೆ ಸಿಕ್ಕಿದ ಯಶಸ್ಸಿನ್ನಲ್ಲಿ ಅಲ್ಲಾಹನ ಪಾತ್ರ ಹಿರಿದಾಗಿತ್ತು. ಸಮಾಜದಿಂದ ದುಷ್ಟ ಶಕ್ತಿಯನ್ನು ಕೆಲವೊಮ್ಮೆ ಯುದ್ಧದ ಮೂಲಕ ಅಥವಾ ಕೆಲವೊಮ್ಮೆ ಪ್ರತಿರೊಧ ಎದುರಿಸದೆಯೇ ಸೋಲಿಸಲು ಸಾಧ್ಯ ಎಂಬುದಕ್ಕೆ ಇಸ್ಲಾಮೀ ಇತಿಹಾಸದಲ್ಲಿ ಸಾಕ್ಷ್ಯಗಳಿವೆ. ಪರ್ಶಿಯದ ಅರಮನೆ ಮುಸ್ಲಿಮರ ವಶವಾಗಿದ್ದು ಪ್ರತಿರೋಧವಿಲ್ಲದೆ ಆಗಿತ್ತು. ಪರ್ಶಿಯನ್ನರ ದುರಾಡಳಿತದ ವಿರುದ್ಧ ಪ್ರಜೆಗಳೇ ರೋಸಿ ಹೋಗಿದ್ದರು. ಚಕ್ರವರ್ತಿಗಳ ವೈಭವದ ಜೀವನ ಶೈಲಿ, ಜನರ ಮೇಲೆ ದುಬಾರಿ ತೆರಿಗೆ. ಹೀಗಿದ್ದರೆ ಜನಾಕ್ರೋಶ ಸಹಜವೇ ಆಗಿತ್ತು.

ಪರ್ಶಿಯದ ಅರಮನೆಯ ಬಳಿ ಮುಸ್ಲಿಮರು ಬಂದಾಗ ಕಾವಲುಗಾರನೇ ಅರಮನೆಯ ಬಾಗಿಲು ತೆರೆದು ಕೊಟ್ಟನು. ಮುಸ್ಲಿಮರ ಮೇಲೆ ದಾಳಿ ಮಾಡಲು ಒಬ್ಬನೇ ಒಬ್ಬ ಸೈನಿಕ ಅಲ್ಲಿರಲಿಲ್ಲ. ಇದನ್ನು ಚರಿತ್ರಕಾರ ಇಬ್ನು ಕಸೀರ್ ಮುಅïಜಿಝಿಯಾತ್ ಪವಾಡ ಎಂದು ಕರೆದಿದ್ದಾರೆ. ನಾಡನ್ನೇ ಅದುಮಿಟ್ಟು ಆಡಳಿತ ನಡೆಸಿದ ಪರ್ಶಿಯನ್ ಚಕ್ರವರ್ತಿಗಳು ತಮ್ಮ ಅರಮನೆಗೆ ಮುಸ್ಲಿಮರು ಬರುತ್ತಿದ್ದಾರೆ ಎಂದಾಗ ಅದನ್ನೆ ತೊರೆದು ಅಲ್ಲಿಂದ ಕಾಲ್ಕಿತ್ತಿದ್ದರು. ದಮನ ನೀತಿ ಸದಾ ಮುಂದೆ ಸಾಗವುದಿಲ್ಲ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆ.

ಚಕ್ರವರ್ತಿ ಯಝ್ದ್‍ಗಿದ್ ಹುಲ್ವಾನ್ ಎಂಬಲ್ಲಿಗೆ ತನ್ನ ಸೇನೆಯನ್ನು ಕರೆದು ಕೊಂಡು ಅರಮನೆಯಿಂದ ಪರಾರಿಯಾಗಿದ್ದ. ಅದು ಕೂಡ ಅಮೂಲ್ಯ ಆಸ್ತಿಪಾಸ್ತಿಗಳನ್ನು ಆತ ಅಲ್ಲೇ ಬಿಟ್ಟು ಹೋಗಿದ್ದ. ಅಲ್ಲಿ ಏನಿಲ್ಲ ಏನಿದೆ. ಪೂರ್ಣ ಕಾಯದ ವಿಗ್ರಹಗಳು, ಸ್ಮಾರಕ ಶಿಲೆಗಳು, ಚೀನದ ರಾಜ ಕುಮಾರರ, ದಹರ್ ಚಕ್ರವರ್ತಿಗಳ, ಕಾನ್‍ಸ್ಟಾಂಟಿಯನ್ ಆಡಳಿತಗಾರರ ಮತ್ತು ಬಹ್ರಾಬ್ ಚೌಬಿಯ ಯುದ್ಧ ದಿರಿಸುಗಳು ಅಲ್ಲಿದ್ದವು. ಖಡ್ಗಳು, ಕಿಸ್ರೋ ಹುರ್ಮುಸಾನನ ಮತ್ತು ಕಬ್ಬಾದ್‍ರ ಕಠಾರಿಗಳು, ನೌಶೇರ್‍ವಾನನ ಚಿನ್ನದ ಕಿರೀಟ, ರಾಜ ಪೋಷಾಕುಗಳು, ಬಳಿ ಜೀನು ಗೋಮೇಧಕ( ನವ ರತ್ನಗಳಲ್ಲಿ ಬರುವ ಒಂದು ರತ್ನ) ಎದೆ ಭಾಗದಲ್ಲಿ ಕುದುರೆ ಚಿನ್ನದ್ದು. ಬಂಗಾರ ಕವಚದ ಮಂಟಪ, ಅದರ ಮೇಲೆ ರತ್ನ ಧರಿಸಿರುವ ಯಾತ್ರಿಕನ ಚಿತ್ರ ವಿಶ್ವ ಪ್ರಸಿದ್ಧ ಪಾರ್ಸಿ ರತ್ನ ಗಂಬಳಿ, ಪಚ್ಚೆ ಕಲ್ಲಿನ(ಎಮ್ರಾಲ್ಡ್) ಕುಸುರಿಯಲ್ಲಿ ಮಾಡಿರುವ ಸಸ್ಯಗಳ ಚಿತ್ರಗಳು ಅದರಲ್ಲಿತ್ತು. ಗೋಮೇಧಕದ ಗಿಡಗಳ ಕಲಾಕೃತಿ , ಚಿನ್ನದಲ್ಲಿ ಮಾಡಿಟ್ಟ ಮರಗಳು, ಮೂವತ್ತು ಲಕ್ಷ ಕೋಟಿ ದೀನಾರ್ ಹಣ ಬೇರೆ, ಇನ್ನು ಮುತ್ತು ರತ್ನ ಖಚಿತ ಕಿರೀಟಗಳು, ಚಿನ್ನದ ನೂಲಿನಿಂದ ನೇಯದ್ದ ಉಡುಪುಗಳು, ಬೆಲೆ ಬಾಳುವ ವಿವಿಧ ಪಾತ್ರೆ ಪಗಡಿಗಳು ಮತ್ತು ಮನೆಯ ಸಲಕರಣೆಗಳೆಲ್ಲವೂ ಅಲ್ಲಿತ್ತು. ಬೆಲೆ ಕಟ್ಟಲಾಗದ ಈ ಎಲ್ಲ ಅಪೂರ್ವ ಸಂಪತ್ತಿನ ವಾರಿಸುದಾರನಾದ ಚಕ್ರವರ್ತಿಯೇ ಇಲ್ಲ. ಆತನ ಸೇನೆಯೂ ಇಲ್ಲ. ಈ ರೀತಿ ಒಂದು ಸಾಮ್ರಾಜ್ಯದ ಅರಮನೆ ಎದುರು ಪಕ್ಷದ ವಶವಾಗಬೇಕಾದರೆ ಅಲ್ಲಿ ಅಲ್ಲಾಹನ ಪಾತ್ರ ಖಂಡಿತ ಇದ್ದೇ ಇರಬೇಕು. ಹೌದು ಅದುವೇ ನಡೆಯಿತು.

ಆದ್ದರಿಂದ ಪವಿತ್ರ ಕುರ್‍ಆನ್ ಮುಸ್ಲಿಮರೇ ಗತ ಇತಿಹಾಸದ ದಮನಕಾರರ ಪತನದ ಸಾಕ್ಷ್ಯಗಳನ್ನು ಗುರುತಿಸಿ ನಿಮ್ಮ ವಿಶ್ವಾಸವನ್ನು ಗಟ್ಟಿಗೊಳಿಸಿ ಎಂದು ಕರೆ ನೀಡಿತು. ಅವರ ಅಂತ್ಯಕ್ಕೆ ಅಂದು ರೋದಿಸುವವರಿರಲಿಲ್ಲ. ಪ್ರಜೆಗಳ ಮೇಲೆ ಎಲ್ಲ ರೀತಿಯ ದೌರ್ಜನ್ಯಗಳನ್ನು ಹೇರಿದರೆ ಪ್ರಜೆಗಳೇಕೆ ಅವರ ಪತನಕ್ಕೆ ಶೋಕಿಸಬೇಕು. ಅದನ್ನೆ ಪವಿತ್ರ ಕುರ್‍ಆನ್ ಒತ್ತು ನೀಡಿ ಬಿಂಬಿಸಿದೆ.

ಅಧಿಕಾರ ಬಲದಿಂದ, ಸ್ವಂತ ಜನರ ಮೇಲೆ ಅಕ್ರಮವೆಸಗುವ ಮರ್ದಕ ಆಡಳಿತಗಾರರಿಗೆ ಈ ಘಟನೆ ಇತಿಹಾಸದ ಪಾಠವಾಗಿದೆ. ಇಸ್ಲಾಮ್ ದಮನಿಸುವವರನ್ನು ಹಿಂದೆಯೂ ಸಹಿಸಿಲ್ಲ. ಇಂದೂ ಸಹಿಸುವುದಿಲ್ಲ. ಜನರ ಹಕ್ಕುಗಳಿಗಾಗಿ ಅದು ಧ್ವನಿಯೆತ್ತಿದೆ. ಮತ್ತು ಅವರನ್ನು ಮಣಿಸುವುದಕ್ಕೆ ಕಾರ್ಯಾಚರಣೆಯನ್ನೂ ನಡೆಸಿದೆ. ಪರ್ಶಿಯ ಮಹಾ ಸಾಮ್ರಾಜ್ಯದ ಕೊನೆಯನ್ನು ಚಕ್ರವರ್ತಿಯೇ ಸ್ವಯಂ ತನ್ನನ್ನು ತನ್ನ ಅರಮನೆಯಿಂದ ಉಚ್ಚಾಟಿಸಿದ್ದು ಇತಿಹಾಸದ ಮಹಾ ಅದ್ಭುತ. ಇತಿಹಾಸ ತಿರುವಿ ನೋಡಿ ಅಲ್ಲಿ ಪಾಠವಿದೆ ಎನ್ನುವುದು ಇದಕ್ಕೇ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …