Home / ಲೇಖನಗಳು / ಅತ್ಯಾಚಾರಿಗೆ ಉಗ್ರ ಶಿಕ್ಷೆ ನೀಡಲು ಇಸ್ಲಾಮ್ ಕರೆ ಕೊಡುವುದಾದರೂ ಯಾಕೆ?

ಅತ್ಯಾಚಾರಿಗೆ ಉಗ್ರ ಶಿಕ್ಷೆ ನೀಡಲು ಇಸ್ಲಾಮ್ ಕರೆ ಕೊಡುವುದಾದರೂ ಯಾಕೆ?

ಮಾನವ ಜೀವ, ಪವಿತ್ರ ಕಅಬಾದ ಪವಿತ್ರತೆಗೆ ಸಮಾನ ಎಂದು ಇಸ್ಲಾಮಿನ ಘೋಷಣೆಯಾಗಿದೆ. “ಒಬ್ಬ ಮಾನವನ ಕೊಲೆ ಅಥವಾ ಭೂಮಿಯಲ್ಲಿ ಕ್ಷೋಭೆ ಮಾಡುವ ಕಾರಣಕ್ಕಾಗಿ ಹೊರತು ಯಾರಾದರೂ ಒಬ್ಬ ಮನುಷ್ಯನನ್ನು ವಧಿಸಿದರೆ ಅವನು ಸಕಲ ಮಾನವಕೋಟಿಯನ್ನೇ ವಧಿಸಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವಕೋಟಿಗೆ ಜೀವದಾನ ಮಾಡಿದಂತೆ” (ಪವಿತ್ರ ಕುರ್‍ಆನ್ – 5: 32) ಎಂಬುದು ಕುರ್‍ಆನಿನ ಸಾರಾಂಶವಾಗಿದೆ. ಇಲ್ಲಿ ಜಾತಿ ಮತ ದೇಶ ಭಾಷೆ ಧರ್ಮದ ಭೇದವಿಲ್ಲ. ಎಲ್ಲರೂ ಸಮಾನರು.

ಅದೇ ಸಂದರ್ಭದಲ್ಲಿ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡಲು ಶ್ರಮಿಸುವವರನ್ನು ಉಗ್ರವಾಗಿ ಶಿಕ್ಷಿಸಬೇಕೆಂದು ಕುರ್‍ಆನ್ ಕರೆ ಕೊಡುತ್ತದೆ. ಅಂದರೆ ಆ ಶಿಕ್ಷೆ ಯಾವುದೇ ಮನುಷ್ಯ ಅಥವಾ ನಾಗಾಲ್ಯಾಂಡ್‍ನಲ್ಲಿ ಗುಂಪು ಕಾನೂನನ್ನು ಕೈಗೆತ್ತಿ ನೀಡುವುದು ಇನ್ನಷ್ಟು ಕ್ಷೋಭೆಗೆ ಅಪಾಯಕ್ಕೆ ಕಾರಣವಾಗಬಹುದು. ಬದಲಾಗಿ ಶಿಕ್ಷೆಯನ್ನು ಸರಕಾರ ನ್ಯಾಯಾಲಯ ನೀಡಬೇಕು. ಆ ಮೂಲಕ ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಮತ್ತು ಜನಮನಗಳಲ್ಲಿ ಅಪರಾಧದ ಬಗ್ಗೆ ಭಯ ಮೂಡಬೇಕು.

ಪ್ರವಾದಿ (ಸ) ರ ಕಾಲದಲ್ಲಿ ಕಲ್ಲಿನಿಂದ ಹೊಡೆದು ಕೊಲ್ಲುವ ಅಥವಾ ಎತ್ತರದಿಂದ ಎಸೆಯುವ ಇನ್ನಿತರ ಇಂತಹ ಶಿಕ್ಷೆಗಳು ಜಾರಿಯಾಗಿದ್ದವು.. ಇವು ಪ್ರವಾದಿ(ಸ) ಕುರ್‍ಆನಿನ ಆದೇಶದಂತೆ ಜಾರಿಗೊಳಿಸಿದ ಶಿಕ್ಷೆ ಎಂಬುದು ಅಷ್ಟೇ ನಿಚ್ಚಳವಾಗಿದೆ. ಈ ಬಗ್ಗೆ ಬಹಳಷ್ಟು ಭಿನ್ನಭಿಪ್ರಾಯಗಳೂ ಇವೆ.

ಈ ಬಗ್ಗೆ ಕುರ್‍ಆನ್ ನ ಸೂಕ್ತ ಹೇಳುತ್ತದೆ
” ಕ್ಷೋಭೆಯನ್ನುಂಟು ಮಾಡಲಿಕ್ಕಾಗಿಯೇ ಭೂಮಿಯ ಮೇಲೆ ಶ್ರಮಿಸುತ್ತಿರುವವರಿಗೆ ಇರುವ ಶಿಕ್ಷೆಯು ವಧಿಸುವುದು ಅಥವಾ ಶಿಲುಬೆಗೇರಿಸುವುದು ಅಥವಾ ಅವರ ಕೈಯನ್ನೂ ಕಾಲನ್ನೂ ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುವುದು ಅಥವಾ ಅವರನ್ನು ಗಡೀಪಾರು ಮಾಡುವುದು ಆಗಿರುತ್ತದೆ. ಇದು ಇಹಲೋಕದಲ್ಲಿ ಅವರಿಗಿರುವ ಅಪಮಾನ. ಪರಲೋಕದಲ್ಲಿ ಅವರಿಗೆ ಇದಕ್ಕಿಂತಲೂ ಕಠಿಣ ಶಿಕ್ಷೆ ಕಾದಿದೆ.” (ಪವಿತ್ರ ಕುರ್‍ಆನ್ – 5:33)

ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡಲಿಕ್ಕಾಗಿಯೇ ಭೂಮಿಯ ಮೇಲೆ ಶ್ರಮಿಸುವವರಿಗೆ 4 ವಿಧದ ಶಿಕ್ಷೆಯನ್ನು ಇಲ್ಲಿ ಪ್ರಸ್ತಾಪಿಸಿದೆ. ಅಂದಿನ ಸಾಮಾಜಿಕ ಸನ್ನಿವೇಶವನ್ನು ಮುಂದಿಟ್ಟು ನೀಡಿದಂತಹ ಆದೇಶಗಳಾಗಿವೆ. ಶಿಕ್ಷೆಗಿಂತ ಮುಖ್ಯವಾಗಿ ಅಪರಾಧಿಗೆ ಮತ್ತು ಸಮಾಜಕ್ಕೆ ಪಾಠ ಭೋಧಕವಾಗಿರಬೇಕೆಂಬುದೇ ಇಲ್ಲಿ ಉದ್ದೇಶವಾಗಿದೆ.

ಒಬ್ಬ ವ್ಯಕ್ತಿ ಸಮ್ಮತಿ ಸೆಕ್ಸ್ ಅಥವಾ ವ್ಯಭಿಚಾರ ಮಾಡುತ್ತಾನೆ. ಇಸ್ಲಾಮ್ ಪ್ರಕಾರ ಅದೂ ಮಹಾ ಪಾಪವೇ..

ಆದರೆ ಒಬ್ಬ ವ್ಯಕ್ತಿ ಸಮಾಜದ ಮಗಳು, ಸೊಸೆ, ಯುವತಿಯ ಶೀಲಕ್ಕೆ ಅಪಾಯಕಾರಿಯಾಗುತ್ತಾನೆ. (ನಿರ್ಭಯ, ಆಸಿಫಾ ಮತ್ತು ಇನ್ನಿತರ ಪ್ರಕರಣಗಳಲ್ಲಿ ಸಂಭವಿಸಿದಂತೆ ಅಥವಾ ಹೈದರಾಬಾದ್ ವೈದ್ಯೆಯ ಮೇಲೆ ನಡೆದ ಪೈಶಾಚಿಕ ಕೃತ್ಯ) ಕೇವಲ ವ್ಯಭಿಚಾರ ಅಲ್ಲ, ಬಲಾತ್ಕಾರ ಮತ್ತು ಅತ್ಯಾಚಾರ ಮಾಡುತ್ತಾನೆ. ಗಲ್ಲಿ, ಕೇರಿ ಮಾರುಕಟ್ಟೆಯಲ್ಲಿ ಮುಗ್ಧ ಮಗಳೂ ಅಂಥವನಿಂದ ಸುರಕ್ಷಿತನಲ್ಲ ಎಂಬ ವಾತಾವರಣ ನಿರ್ಮಾಣವಾದರೆ ಅವನು ಭೂಮಿಯಲ್ಲಿ ಕ್ಷೋಭೆ ಹರಡುವ ಅಪರಾಧಿಯಾಗುತ್ತಾನೆ ಮತ್ತು ಅವನಿಗೆ ತಕ್ಕ ಶಾಸ್ತಿ ಆಗಬೇಕೆಂದು ಇಸ್ಲಾಮ್ ಬಯಸುತ್ತದೆ ಮತ್ತು ಅವನನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕುರ್‍ಆನ್ ಹೇಳುತ್ತದೆ. ಪೂರ್ವ ದೈವಿಕ ಗ್ರಂಥಗಳನ್ನು ಅಧ್ಯಯನ ನಡೆಸಿದರೆ ಅಲ್ಲೂ ಶಿಕ್ಷೆಯ ಉಲ್ಲೇಖಗಳಿವೆ. ಕುರ್‍ಆನ್ ಸೂಕ್ತದಲ್ಲಿ ಹೇಳಿದಂತೆ, (ಪವಿತ್ರ ಕುರ್‍ಆನ್ – 5:33)

1. ಭಯಾನಕ ರೀತಿಯಲ್ಲಿ ಅವನನ್ನು ವಧಿಸುವುದು:
ಇದು ಆಡಳಿತದ ವತಿಯಿಂದ ಜಾರಿಗೊಳಿಸುವುದಾಗಿದೆ. ಕಲ್ಲೆಸೆದು ಕೊಲ್ಲುವುದು, ಎತ್ತರ ಪ್ರದೇಶದಿಂದ ಕೆಳಗೆ ಎಸೆಯುವುದು, ಬಂದೂಕು ಸಿಡಿಸುವುದು, ಕತ್ತನ್ನು ಬೇರ್ಪಡಿಸುವುದು ಅಥವಾ ಗಲ್ಲಿಗೇರಿಸುವುದು. ಯಾವುದೇ ಆದರೂ ಸಾರ್ವಜನಿಕವಾಗಿ ಅದು ಬಹಳ ಭಯಾನಕವಾಗಿರಬೇಕು. ಯಾಕೆಂದರೆ ಅದರಿಂದ ಜನರು ಪಾಠ ಕಲಿಯಬೇಕು ಮತ್ತು ನ್ಯಾಯವು ಜಾರಿಗೊಳ್ಳಬೇಕು. ಇದಲ್ಲದೆ ಇತರ ಶಿಕ್ಷಾ ಮಾರ್ಗವನ್ನು ಕಂಡು ಹಿಡಿಯಲೂಬಹುದು. ಒಂದು ಕಾಲದಲ್ಲಿ ರಾಜಂದಿರು ಆನೆಯಿಂದ ತುಳಿದು ಕೊಲ್ಲುವ ಶಿಕ್ಷೆಯನ್ನೂ ನೀಡಿದ್ದರು.

2. ಅಥವಾ ಶಿಲುಬೆಗೇರಿಸುವುದು:
ಶಿಲುಬೆಗೇರಿಸುವುದು ಒಂದು ಪ್ರಾಚೀನ ಶಿಕ್ಷೆಯಾಗಿದೆ. ಅಪರಾಧಿಯ ಎರಡು ಕೈ ಕಾಲುಗಳಿಗೆ ಮೊಳೆ ಹೊಡೆದು ನೇತಾಡಿಸಲಾಗುತ್ತದೆ. ಹೀಗೆ ರಕ್ತಸೋರಿ ಅವನು ಪ್ರಾಣ ಬಿಡುವ ಶಿಕ್ಷೆ ಪ್ರವಾದಿತ್ಯಕ್ಕಿಂತ ಮುಂಚೆಯೇ ಜಾರಿಯಲ್ಲಿತ್ತು. ಇದು ಪಾಸಿಯಲ್ಲ, ಗಲ್ಲಿಗೇರಿಸುವುದಲ್ಲ, ಇಲ್ಲೂ ಭಯಾನಕ ಶಿಕ್ಷೆ ಆಗಿದೆ.

3. ಮೂರನೇ ಶಿಕ್ಷೆ ಅವನ ಕೈ ಕಾಲುಗಳನ್ನು ವಿರುದ್ಧ ದಿಕ್ಕುಗಳಿಂದ ಕಡಿಯಿರಿ:
ವಿರುದ್ಧ ದಿಕ್ಕಿನಿಂದ ಕಡಿಯುವ ಉದ್ದೇಶವೂ ಅವನ ಬದುಕನ್ನು ಉಳಿಸಿ ಅವನನ್ನು ಸಮಾಜಕ್ಕೆ ಒಂದು ಭಯಾನಕ ಪಾಠ ಭೋದಕವನ್ನಾಗಿ ಮಾಡುವುದು. ಉದಾ:- ಬಲ ಕೈ ಕಡಿದು ಎಡ ಕಾಲನ್ನು ಕಡಿದು ಅವನನ್ನು ಜೀವಂತ ಬಿಡುವುದು. ಮತ್ತು ಜನರು ಅವನನ್ನು ನೋಡಿ ಪಾಠ ಕಲಿಯುವುದು. ಇದು ಶಿಕ್ಷೆಯ ಪ್ರಮಾಣದಲ್ಲಿ ಕಡಿತವಾದರೂ ಇಲ್ಲಿ ಭಯಾನಕತೆಯನ್ನು ಕಾಪಾಡಲಾಗಿದೆ.

4. ಗಡೀ ಪಾರುಗೊಳಿಸುವುದು:
ಇದು ಇಂತಹ ಅಪರಾಧಿಗಳಿಗೆ ನೀಡುವ ಅತೀ ಕಡಿಮೆ ಶಿಕ್ಷೆ ಆಗಿದೆ. ಒಬ್ಬನು ಇಂತಹ ಕೃತ್ಯವೆಸಗಿದ್ದಾನೆ. ಇದರಿಂದ ಯಾರದೇ ಜೀವ ಹೋಗಿಲ್ಲ. ಅತ್ಯಾಚಾರವಾಗಿಲ್ಲ. ಆದರೆ ವ್ಯಕ್ತಿ ಬಲತ್ಕಾರಕ್ಕೆ ಶ್ರಮಿಸಿದ್ದಾನೆ. ಅವನನ್ನು ಊರಿನಿಂದ ಹೊರ ಹಾಕುವುದು. ದೇಶದಿಂದ ಹೊರ ಹಾಕುವುದು ಅಥವಾ ಇಂದು ಅದು ಸಾಧ್ಯವಲ್ಲವೆಂದಾದರೆ ಕೆಲವು ಕಾಲ ಜೈಲಿಗೆ ಗಡೀ ಪಾರುಗೊಳಿಸಿ ಅವನಿಗೆ ಅಂತಹ ಅಪರಾಧ ಕಡಿವಾಣ ಹಾಕುವುದು. ನಂತರ ಅವನಿಗೆ ಪರಿಶುದ್ಧತೆಗೆ ಸುಧಾರಣೆಗೆ ಅವಕಾಶವನ್ನು ನೀಡುವುದು.

ಆದರೆ ಇಲ್ಲಿ ಗಮನಿಸಬೇಕಾದ ವಿಷಯ ಸಾಮಾಜಿಕ ಸನ್ನಿವೇಶಕ್ಕನುಗುಣವಾಗಿ ಆರೋಪಿಯ ಆರೋಪ ಸಾಬೀತಾಗಬೇಕು. ಇದು ದ್ವೇಷ ಸಾಧಿಸುವ ಸಾಧನವಾಗಬಾರದು. ಅಪರಾಧಿಯ ವಾತಾವರಣ, ಅವನ ಮನಸ್ಥಿತಿ, ಅವನ ಸನ್ನಿವೇಶ ಎಲ್ಲವನ್ನು ಮುಂದಿಟ್ಟು ನ್ಯಾಯ ಸಮ್ಮತವಾಗಿ ಶಿಕ್ಷೆ ಜಾರಿಗೊಳಿಸಲೇಬೇಕಾಗಿದೆ.

ಪ್ರವಾದಿ(ಸ) ಕಾಲದಲ್ಲಿ ಅಲ್ಲಾಹನು ಅಧಿಪತಿಯಾಗಿದ್ದು , ಪ್ರವಾದಿ(ಸ) ಅಲ್ಲಾಹನ ಪ್ರತಿನಿಧಿ ಎಂಬಂತೆ ಆದೇಶವನ್ನು ಜಾರಿಗೊಳಿಸುತ್ತಿದ್ದರು.

ಅಪರಾಧದ ಸನ್ನಿವೇಶ ಮತ್ತು ಪರಿಸ್ಥಿತಿ ಹಾಗೂ ರೂಪುರೇಷೆ ಉಗ್ರವಾಗಿದ್ದರೆ ಅಥವಾ ಮೃದುವಾಗಿದ್ದರೆ ಎರಡೂ ಸನ್ನಿವೇಶಗಳಿಗೆ ಕುರ್‍ಆನ್ ಶಿಕ್ಷೆಯಲ್ಲಿ ಮಧ್ಯಮ ನಿಲುವನ್ನು ಇಲ್ಲಿ ತಳೆದಿದೆ.

ಶಿಕ್ಷೆ ನೀಡುವಾಗ ಜನರ ಮುಂದೆ ನೀಡಲು ಕುರ್‍ಆನ್ ಕರೆ ಕೊಡುತ್ತದೆ. ಇದು ಇತರರಿಗೆ ಪಾಠ ಬೋಧಕವಾಗಲು ಮತ್ತು ಜನರ ಮನದಲ್ಲಿ ಭಯವುಂಟಾಗಲಿಕ್ಕಾಗಿದೆ. ಕೇವಲ ದೇವ ಭಯ ಕೆಡುಕನ್ನು ನಿಯಂತ್ರಿಸದು. ಅದರಿಂದಾಗಿ ದೇವಭಯವುಳ್ಳವರನ್ನು ಮಾತ್ರ ನಿಯಂತ್ರಿಸಬಹುದು. ಆದರೆ ಪಾಪಿಗಳನ್ನು, ದುಷ್ಟರನ್ನು, ಅಪರಾಧಿಗಳನ್ನು, ಕ್ಷೋಭೆ ಹರಡುವವರನ್ನು ನಿಯಂತ್ರಿಸಲು ಸರಕಾರ ಉಗ್ರ ಶಿಕ್ಷೆ ನೀಡಲೇಬೇಕಾಗಿದೆ.

ಎಲ್ಲದಕ್ಕೂ ಒಂದೇ ರೀತಿಯ ಶಿಕ್ಷೆ ನೀಡುವುದು ತರವಲ್ಲ. ಜಗತ್ತಿನಲ್ಲಿ ಸಂಭವಿಸುವ ಎಲ್ಲ ಶಿಕ್ಷೆಯನ್ನು ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಬೇಕು.

ಅಪರಾಧಿ ಅಪ್ರಾಪ್ತನಾಗಿದ್ದರೆ, ಅವನ ತರಬೇತಿ ಆಗದಿದ್ದರೆ, ಅಥವಾ ಮಾನಸಿಕ ರೋಗಿ ಆಗಿದ್ದರೆ, ಕುಡಿದಿದ್ದರೆ, ಹೀಗೆ ನೂರಾರು ಕಾರಣಗಳನ್ನು ಆರೋಪಿ ಅಥವಾ ಅಪರಾಧಿಗೆ ಶಿಕ್ಷೆ ನೀಡುವುದಕ್ಕಿಂತ ಮುಂಚೆ ನೋಡಬೇಕಾಗಿದೆ.

ನಮ್ಮ ಸಮಾಜ, ಪಾವಿತ್ರ್ಯ ವಾತಾವರಣ ನಿರ್ಮಾಣ ಮಾಡಿದೆಯೋ ಇಲ್ಲವೋ ಇತ್ಯಾದಿಗಳನ್ನು ನೋಡಬೇಕಾಗುತ್ತದೆ. ಒಂದು ಶಿಕ್ಷೆ ಎಲ್ಲ ಪರಿಸ್ಥಿತಿಗಳಲ್ಲಿ ನೀಡಲು ಸಾಧ್ಯವಿಲ್ಲ. ಆದ್ದರಿಂದಲೇ ಉಮರ್(ರ) ಕೆಲವೊಮ್ಮೆ ಶರೀಅತ್ ಕಾನೂನನ್ನು ಜಾರಿಗೊಳಿಸಿದರು ಇನ್ನೂ ಕೆಲವೊಮ್ಮೆ ಶಿಕ್ಷೆಯನ್ನೂ ರದ್ದುಗೊಳಿಸಿದರು. ಇದಕ್ಕೆ ಕಾರಣ`ಅಪರಾಧಿ’ಯನ್ನು ಎಲ್ಲ ರೀತಿಯಲ್ಲಿ ಅಳೆಯಬೇಕಾಗುತ್ತದೆ. ಈ ಅಧಿಕಾರ ಎಲ್ಲ ಸರಕಾರಗಳಿಗೆ ಇದೆ.

ಕೊನೆಯಲ್ಲಿ ಕುರ್‍ಆನಿನಲ್ಲಿ ಹೇಳುತ್ತಾ ಇದು ಇಹಲೋಕದಲ್ಲಿ ಅವರಿಗಿರುವ ಅಪಮಾನವಾಗಿದೆ. ಆದ್ದರಿಂದ ಇಂತಹ ಅಪರಾಧಿಗಳ ಬಗ್ಗೆ ಇಹಲೋಕದಲ್ಲಿ ಯಾರೂ ಕರುಣೆ ತೋರಿಸಬಾರದು. ಮತ್ತು ಪರಲೋಕದಲ್ಲಿ ಅವರಿಗೆ ಅಲ್ಲಾಹನಿಂದ ಇದಕ್ಕಿಂತಲೂ ಕಠಿಣ ಶಿಕ್ಷೆ ಇದೆ. ಶಿಕ್ಷೆಯಿಂದ ಪಾರಾಗಲು ಯಾರಿಗೂ ಸಾಧ್ಯವಿಲ್ಲ.

ಜಗತ್ತು ಎಷ್ಟು ಪ್ರಗತಿ ಹೊಂದುತ್ತದೋ ಅಷ್ಟೇ ನರಕ ಸದೃಶ್ಯವಾಗಲು ಕಾರಣ, ಮನುಷ್ಯ ಎಷ್ಟೇ ದೊಡ್ಡ ತಪ್ಪು ಮಾಡಿದರೂ ಅವನಿಗೆ ಕರುಣೆ ಮತ್ತು ಕ್ಷಮೆ ನೀಡಬೇಕು ಎಂಬ ಸಿದ್ಧಾಂತವಾಗಿದೆ. ದೈವಿಕ ಧರ್ಮ ಈ ಸಿದ್ಧಾಂತವನ್ನು ಒಪ್ಪುವುದಿಲ್ಲ.

ಇದೆಲ್ಲದರ ಹೊರತಾಗಿಯೂ ಉಗ್ರ ಶಿಕ್ಷೆಯ ಕಾನೂನಿನಿಂದ ಸಮಾಜದಲ್ಲಿ ಕೆಡುಕು ಅತ್ಯಾಚಾರ ಕೊನೆಗೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದುದರಿಂದ ಕೆಡುಕು ಮುಕ್ತ ಉತ್ತಮ ವಾತಾವರಣವನ್ನು ಆಡಳಿತವು ಬೆಳೆಸಬೇಕಾಗಿದೆ. ಅದಕ್ಕಾಗಿ ಪ್ರತಿ ಹೆಜ್ಜೆ ಇರಿಸಬೇಕಾಗಿದೆ.

  • ಅಬೂ ಕುತುಬ್
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …