@ ಅಬೂ ಸಲ್ವಾನ್
ಇಂದು ಮುಸ್ಲಿಮ್ ಸಮಾಜದಲ್ಲಿ ರಜಬ್ ತಿಂಗಳಿಗೆ ಹೆಚ್ಚು ಮಹತ್ವ ನೀಡುವುದು ಕಂಡು ಬರುತ್ತದೆ. ಸಾಮಾನ್ಯವಾಗಿ ಕೆಲ ಮುಸ್ಲಿಮರು ಹೊಸ ಮನೆಯ ಗೃಹ ಪ್ರವೇಶ, ವಿವಾಹ ಮುಂತಾದ ಶುಭ ಸಮಾರಂಭಗಳನ್ನು ನಡೆಸಲು ಈ ತಿಂಗಳನ್ನೇ ಕಾಯುವವರಿದ್ದಾರೆ. ಆದರೆ ಇವೆಲ್ಲ ಯಾರೋ ಮಾಡಿದ್ದ ಸಂಪ್ರದಾಯವನ್ನು ನಮ್ಮ ಮೇಲೆ ನಾವೇ ಹೇರಿದ್ದಾಗಿದೆಯೇ ಹೊರತು ಇಸ್ಲಾಮಿನಲ್ಲಿ ಈ ಬಗ್ಗೆ ಯಾವುದೇ ಆಧಾರ ಪುರಾವೆ ಕಂಡು ಬರದು.
ಇತಿಹಾಸದಲ್ಲಿ ಈ ಮಾಸಕ್ಕೆ ಗೌರವವಿದೆ. ಇತಿಹಾಸದ ಅಧ್ಯಯನದ ಮೂಲಕ ನಾವು ಈ ತಿಂಗಳಿನ ಮಹತ್ವದ ಕುರಿತು ಅರಿಯಬೇಕಾಗಿದೆ. ಇದು ಅಲ್ಲಾಹನು ಗೌರವಿಸಿದ ಮಾಸವಾಗಿದೆ. ಈ ತಿಂಗಳ ಕುರಿತು ಅರಿಯುವುದು ಇಸ್ಲಾಮಿನ ಜ್ಞಾನಗಳಿಸುವ ವಿಚಾರಗಳಲ್ಲಿ ಸೇರಿದೆ. ಪ್ರವಾದಿವರ್ಯರ(ಸ) ಇಸ್ರಾಅï ಮತ್ತು ಮೆಅರಾಜ್- ಆಕಾಶ ರೋಹಣ- ನಡೆದಿರುವುದು ಕೂಡಾ ಈ ತಿಂಗಳಲ್ಲಿ ಆಗಿದೆ. ಹೀಗಿರುವಾಗ ರಜಬ್ ತಿಂಗಳ ಮಹತ್ವ ಮತ್ತೂ ವರ್ಧಿಸುತ್ತದೆ. ಇಸ್ರಾಅï ಮೆಅರಾಜ್ ಯಾನವು ಅಲ್ಲಾಹನು ಪ್ರವಾದಿವರ್ಯರನ್ನು ತನ್ನೆಡೆಗೆ ಆಹ್ವಾನಿಸಿ ಗೌರವಾದರ ನೀಡಿದ ಗಗನಯಾನವಾಗಿದೆ. ಯಾಕೆಂದರೆ ಪವಿತ್ರಾತ್ಮವೆಂದು ಹೇಳಲಾಗುವ ಮಲಾಯಿಕ್ ಜಿಬ್ರೀಲ್(ಅ)ರಿಗೆ ಕೂಡಾ ಪ್ರವೇಶವಿಲ್ಲದಂತಹ ಅಲ್ಲಾಹನ ಸಿಂಹಾಸನದ ಬಳಿಗೆ ತನ್ನ ಪ್ರೀತಿಯ ದಾಸನನ್ನು ಕರೆದುಕೊಂಡು ಬಂದಿರುವುದಾಗಿದೆ. ಇದು ಮಾನವ ಕುಲಕ್ಕೆ ಅಭಿಮಾನ ಪಡುವಂತಹ ಆಕಾಶರೋಹಣವಾಗಿದೆ, ಪ್ರವಾದಿವರ್ಯರು(ಸ) ಮಕ್ಕಾದಲ್ಲಿ ಶತ್ರು ಪಾಳಯದಿಂದ ತೀವ್ರ ಹಿಂಸೆ ಯಾತನೆ ಅನುಭವಿಸುತ್ತಿರುವಾಗ ಅವರಿಗೆ ನೆಮ್ಮದಿ ನೀಡಲು, ಮನಸ್ಸಿಗೆ ಸಾಂತ್ವನ ನೀಡಲು ಅಲ್ಲಾಹನು ಅನುಗ್ರಹಿಸಿದ ವಿಸ್ಮಯಕಾರಿಯಾದ ಆಕಾಶರೋಹಣವಾಗಿದೆ.
ಈ ಆಕಾಶರೋಹಣದ ಕುರಿತು ಕುರ್ಆನಿನಲ್ಲಿ ಈ ರೀತಿ ಪ್ರಸ್ತಾಪಿಸಲಾಗಿದೆ.
“ತನ್ನ ಕೆಲವು ನಿದರ್ಶನಗಳನ್ನು ತೋರಿಸಿ ಕೊಡಲಿಕ್ಕಾಗಿ ತನ್ನ ದಾಸನನ್ನು ಒಂದು ರಾತ್ರಿ ಮಸ್ಜಿದುಲ್ ಹರಾಮ್ನಿಂದ ನಾವು ಪರಿಸರ ಸಮೃದ್ಧಗೊಳಿಸಿರುವಂತಹ ಅಕ್ಸಾ ಮಸೀದಿಯ ತನಕ ಕೊಂಡು ಹೋದವನು ಪರಮ ಪಾವನನು. ನಿಶ್ಚಯವಾಗಿಯೂ ಅವನು ಸರ್ವಶ್ರುತನೂ ಸರ್ವ ವೀಕ್ಷಕನೂ ಆಗಿರುತ್ತಾನೆ.” (ಬನೀ ಇಸ್ರಾಈಲ್: 1)
ಈ ಸೂಕ್ತದಲ್ಲಿ ತಿಳಿಸಿದ ಮಸ್ಜಿದುಲ್ ಹರಾಮ್ನಿಂದ ಫೆಲೆಸ್ತೀನಿನ ಮಸ್ಜಿದುಲ್ ಅಕ್ಸಾದ ವರೆಗಿನ ಪ್ರಥಮ ಹಂತದ ಯಾನವನ್ನು ಇಸ್ರಾಅ ಎಂದೂ ನಂತರ ಮಸ್ಜಿದುಲ್ ಅಕ್ಸಾದಿಂದ ದೇವನ ಸನ್ನಿಧಾನದೆಡೆಗಿನ ಯಾನವನ್ನು “ಮೆಅರಾಜ್” ಎಂದು ಕರೆಯುತ್ತೇವೆ. ಇದು ಇಸ್ಲಾಮೀ ಇತಿಹಾಸದ ಅತ್ಯಂತ ಮಹತ್ತರವಾದ ಘಟನೆಯಾಗಿದೆ. ಈ ಗಗನಯಾನವು ಕನಸಿನ ಮೂಲಕ ಆದದ್ದೋ ಅಥವಾ ಭೌತಿಕ ದೇಹದೊಂದಿಗೆ ಆದ ಯಾನವೋ ಎಂಬ ಬಗ್ಗೆ ವಿದ್ವಾಂಸರಲ್ಲಿ ವಿವಿಧ ರೀತಿಯ ಚರ್ಚೆ ನಡೆದಿದೆ. ಪ್ರವಾದಿತ್ವದ ಹನ್ನೆರಡನೇ ವರ್ಷದ ರಜಬ್ ತಿಂಗಳ ಇಪ್ಪತ್ತೇಳರ ರಾತ್ರಿ ಈ ಘಟನೆ ಸಂಭವಿಸಿದೆ. ಸೃಷ್ಟಿಕರ್ತನು ಹನ್ನೆರಡು ವರ್ಷಗಳ ಕಾಲ ಸಂಕಷ್ಟಭರಿತ ಜೀವನ ಸವೆಸಿದ ತನ್ನ ಸಂದೇಶವಾಹಕನನ್ನು ತನ್ನೆಡೆಗೆ ಕರೆಸಿ ಸನ್ಮಾನ ಮಾಡಿ ಗೌರವಿಸಿದ ದಿನವಿದು.
ಈ ಗಗನಯಾನದಲ್ಲಿ ಪ್ರವಾದಿವರ್ಯರು ಜಿಬ್ರೀಲ್(ಅ)ರೊಂದಿಗೆ ಬೈತುಲ್ ಮುಕದ್ದಿಸ್ಗೆ ತೆರಳುತ್ತಾರೆ. ಗಗನ ಯಾನದ ಪ್ರತಿಯೊಂದು ಹಂತದಲ್ಲಿ ಪ್ರವಾದಿ ಮುಹಮ್ಮದ್(ಸ)ರವರನ್ನು ಕ್ರಮವಾಗಿ ಪ್ರವಾದಿಗಳಾದ ಆದಮ್(ಅ), ಹ್ಯಾ(ಅ), ಈಸಾ(ಅ), ಯೂಸುಫ್(ಅ), ಇದ್ರೀಸ್(ಅ), ಹಾರೂನ್(ಅ), ಮೂಸಾ(ಅ) ಕೊನೆಗೆ ಪ್ರವಾದಿ ಇಬ್ರಾಹೀಮ್(ಅ)ರ ಭೇಟಿಯಾಗುತ್ತದೆ. ಬಳಿಕ ಹ. ಜಿಬ್ರೀಲರನ್ನು ತೊರೆದು ಇನ್ನಷ್ಟು ಉನ್ನತಿಗೇರುತ್ತಾರೆ, ಅಲ್ಲಿ ಅಲ್ಲಾಹನಲ್ಲಿ ಸಂಭಾಷಣೆ ನಡೆಸುತ್ತಾರೆ. ಇಲ್ಲಿ ನಡೆದ ಸಂಭಾ ಷಣೆಯಲ್ಲಿ ದೊರೆತ ಸಂದೇಶದಲ್ಲಿ ಪ್ರಮುಖವಾಗಿ ಪ್ರತಿದಿನ ಐವತ್ತು ಹೊತ್ತಿನ ನಮಾಝ್ ಕಡ್ಡಾಯಗೊಳಿಸಲಾಯಿತು. ಅಲ್ಲಾಹನ ಬಳಿಯಿಂದ ಮರಳಿದಾಗ ಪ್ರವಾದಿ ಮೂಸಾ(ಅ)ರ ಭೇಟಿಯಾಗುತ್ತದೆ. ದಿವ್ಯ ದರ್ಶನದ ವೃತ್ತಾಂತವನ್ನೆಲ್ಲಾ ಅಲ್ಲಿ ವಿವರಿಸುತ್ತಾರೆ. ಅದನ್ನು ಆಲಿಸಿದ ಪ್ರವಾದಿ ಮೂಸಾ(ಅ) “ನನಗೆ ಬನೀ ಇಸ್ರಾಈಲರ ಕಹಿ ಅನುಭವವಿದೆ. ನಿಮ್ಮ ಸಮುದಾಯ ಪ್ರತಿ ದಿನ ಐವತ್ತು ಹೊತ್ತಿನ ನಮಾಝ್ ಪಾಲಿಸಲಾರರು. ಅದನ್ನು ಕಡಿತಗೊಳಿಸಲು ವಿನಂತಿಸಿರಿ” ಎಂದು ಹೇಳುತ್ತಾರೆ. ಪ್ರವಾದಿವರ್ಯರು(ಸ) ಮತ್ತೆ ಅಲ್ಲಾಹನ ಬಳಿಗೆ ತೆರಳಿ ನಮಾಝ್ ಕಡಿತಗೊಳಿಸಲು ಭಿನ್ನವಿಸುತ್ತಾರೆ. ಕೊನೆಗೆ ಐದು ಹೊತ್ತಿನ ನಮಾಝ್ ಕಡ್ಡಾಯವೆಂಬ ಆಜ್ಞೆ ಸಿಗುತ್ತದೆ. ಆದರೆ ಅದಕ್ಕೆ ಐವತ್ತು ನಮಾಝ್ಗಳ ಪುಣ್ಯ ಲಭಿಸುವುದೆಂದು ತಿಳಿಸಲಾಗುತ್ತದೆ. ಹೀಗೇ ಸತ್ಯವಿಶ್ವಾಸಿಗಳಿಗೆ ಅತ್ಯಂತ ಮಹತ್ತರವಾದ ಐದು ಹೊತ್ತಿನ ನಮಾಝ್ ಎಂಬ ಅಲ್ಲಾಹನ ಉಡುಗೊರೆ ದೊರೆತಿರುವುದು.
ಪುನರುತ್ಥಾನ ದಿನದಂದು ಅಲ್ಲಾಹನ ಮುಂದೆ ಹಾಜರಾಗುವಾಗ ಅಲ್ಲಾಹನು ಅವನ ದಾಸರಲ್ಲಿ ಮೊತ್ತ ಮೊದಲ ಪ್ರಶ್ನೆ ಕೇಳುವುದು ಈ ಐದು ಹೊತ್ತಿನ ನಮಾಝ್ನ ಕುರಿತಾಗಿದೆ. ಆದ್ದರಿಂದ ಈ ಇಹಲೋಕದ ಈ ಐದು ಹೊತ್ತಿನ ಕಡ್ಡಾಯ ನಮಾಝ್ ನಮ್ಮ ಪರಲೋಕದ ಫಲಿತಾಂಶದ ಮುಖ್ಯ ಮೈಲಿಗಲ್ಲು ಎಂಬುದು ದಿಟ. ಆದರೆ ಸಮುದಾಯವು ಈಗಲೂ ಈ ಮಹತ್ತರವಾದ ಆರಾಧನೆಯ ಅನುಗ್ರಹದಿಂದ ದೂರ ಉಳಿದಿರುವುದು ಕಂಡು ಬರುತ್ತದೆ. ಈ ನಮಾಝ್ನಲ್ಲಿ ಸುಜೂದ್ಗೆ (ಸಾಷ್ಟಾಂಗಕ್ಕೆ) ಹೆಚ್ಚು ಪ್ರಾಧಾನ್ಯತೆಯಿದೆ. ಸೃಷ್ಟಿಕರ್ತನ ಹೊರತು ಸತ್ಯವಿಶ್ವಾಸಿ ಎಂದಿಗೂ ಯಾರ ಮುಂದೆಯೂ ಸಾಷ್ಟಾಂಗವೆರಗಲಾರನು. ಅದು ಮಹಾ ಪಾಪವಾಗಿದೆ. ಸತ್ಯವಿಶ್ವಾಸಿಯಾದವನು ಎಷ್ಟೇ ಕೋಟಿ ಸಂಪತ್ತು ವಾಗ್ದಾನ ಮಾಡಿದರೂ ಅಲ್ಲಾಹನ ಹೊರತು ಅನ್ಯರ ಮುಂದೆ ಸಾಷ್ಟಾಂಗವೆರಗಲಾರನು. ಮಾತ್ರವಲ್ಲ ಯಾವ ವಸ್ತುವಿನ ಮುಂದೆಯೂ ಸಾಷ್ಟಾಂಗವೆರಗಲಾರ. ಅದು ಈ ಅಖಿಲ ವಿಶ್ವದ ಸೃಷ್ಟಿಕರ್ತ ಏಕೈಕ ಅಧಿಪತಿ ಅಲ್ಲಾಹನಿಗೆ ಮಾತ್ರ ಇರುವಂತಹದ್ದು. ಇದು ಅರಿತೂ ಕೂಡಾ ಓರ್ವ ವಿಚಲಿತಗೊಂಡರೆ ಅವನು ಧರ್ಮದಿಂದಲೇ ವಿಚಲಿತನಾದಂತೆ. ತನ್ನ ಶಿರವನ್ನು ದಿನದ ಐದು ಹೊತ್ತು ದೇವನ ಮುಂದೆ ದೈನ್ಯತೆ, ಭಯ ಭಕ್ತಿಯಿಂದ ಬಾಗುವುದಾಗಿದೆ. ನಾನೇನಿದ್ದರೂ ದೇವನ ಸೃಷ್ಟಿ. ಎಲ್ಲವೂ ಅತನ ಮಹಿಮೆ, ಅನುಗ್ರಹವಾಗಿದೆ. ನನ್ನದು ಅಂತ ಏನೂ ಇಲ್ಲ ಎಂದು ತಲೆಯನ್ನು ಬಾಗಿಸಿಸ್ತುತಿಸುವುದರ ಅರ್ಥವಾಗಿದೆ ಸಾಷ್ಟಾಂಗ. ಅಲ್ಲಾಹನು ನನಗೆ ನೀಡಿದ ಮಹತ್ತರವಾದ ಅನುಗ್ರಹಗಳಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ. ಈ ಐದು ಹೊತ್ತಿನ ನಮಾಝ್ ನಿರ್ವಹಿಸಲು ಮನುಷ್ಯ ಹಿಂಜರಿಯುತ್ತಾನೆಂದಾದರೆ ಅವನಿಗೆ ಮತ್ತು ದೇವನ ನಡುವೆ ಇರುವ ಸಂಬಂಧ ಏನಿರಬಹುದು? ವ್ಯಾಪಾರ ವಹಿವಾಟು ಉದ್ಯೋಗದ ನೆಪದಲ್ಲಿ ನಮಾಝ್ಗೆ ತೋರುವ ಅಸಡ್ಡೆ ನಿಜಕ್ಕೂ ಅದು ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದು ನಿಶ್ಚಿತ.
ಈ ತಿಂಗಳನ್ನು ನಾವು ಈ ನಮಾಝ್ ನೆಲೆ ನಿಲ್ಲಿಸುವ ನಿರ್ಧಾರದ ಮೂಲಕ ಗೌರವಿಸಬೇಕಾಗಿದೆ. ಕೇವಲ ಶುಭ ಸಮಾರಂಭಗಳಿಗೆ ಕಾದು ದಿನ ನಿಗದಿಗೊಳಿಸುವುದರಲ್ಲಿ ಏನೂ ಪುಣ್ಯ ಲಭ್ಯವಾಗದು. ನಮಾಝನ್ನು ಸ್ವರ್ಗದ ಕೀಲಿಕೈಯಾಗಿದೆ ಎಂದು ಪ್ರವಾದಿವರ್ಯರು(ಸ) ಹೇಳಿರುತ್ತಾರೆ. ನಮಾಝ್ ಸತ್ಯವಿಶ್ವಾಸ ಮತ್ತು ಸತ್ಯನಿಷೇಧದ ನಡುವಿನ ವ್ಯತ್ಯಾಸವಾಗಿದೆ. ನಮಾಝ್ನ ಮಹತ್ವದ ಕುರಿತು ಬಹಳಷ್ಟು ವಿಚಾರಗಳಿವೆ.
ಒಮ್ಮೆ ಅಬ್ದುಲ್ಲಾ ಬಿನ್ ಮಸ್ಊದ್(ರ) ಪ್ರವಾದಿವರ್ಯರಲ್ಲಿ(ಸ) ಈ ರೀತಿ ಕೇಳಿದರು: “ಓ ಪ್ರವಾದಿವರ್ಯರೇ(ಸ), ಅಲ್ಲಾಹನ ಬಳಿ ಅತ್ಯಂತ ಪ್ರೀತಿಯ ಕರ್ಮ ಯಾವುದು?” ಆಗ ಪ್ರವಾದಿವರ್ಯರು(ಸ) ಹೇಳಿದರು, “ನಮಾಝನ್ನು ಅದರ ಕ್ಲಪ್ತ ಸಮಯದಲ್ಲಿ ನಿರ್ವಹಿಸುವುದು.”
ಪವಿತ್ರ ಕುರ್ಆನ್ ಈ ರೀತಿ ಹೇಳುತ್ತದೆ, “ನಮಾಝ್ ಮಾಡುವವರು ತಮ್ಮ ನಮಾಝ್ನ್ನು ಕ್ರಮಬದ್ದವಾಗಿ ನಿರ್ವಹಿಸುತ್ತಾರೆ.” (70: 22-23) ಆದ್ದರಿಂದ ನಮಾಝ್ಗಳಲ್ಲಿ ಭಯಭಕ್ತಿ ತುಂಬಿರಬೇಕಾಗಿದೆ. ಭಯಭಕ್ತಿ ಇಲ್ಲದ ತೋರಿಕೆಯ ನಮಾಝ್ ಅಲ್ಲಾಹನ ಬಳಿ ಸ್ವೀಕೃತವಾಗದು ಎಂಬುದು ಕುರ್ಆನ್ ಮತ್ತು ಹದೀಸ್ಗಳಿಂದ ತಿಳಿದು ಬರುತ್ತದೆ.
ಅಲ್ಲಾಹನು ನಮ್ಮನ್ನು ವೀಕ್ಷಿಸುತ್ತಿದ್ದಾನೆಂಬ ಪ್ರಜ್ಞೆಯು ನಮಾಝಿಗನಲ್ಲಿ ಮೂಡಿ ಬರಬೇಕು. ನಮಾಝ್ ಸತ್ಯವಿಶ್ವಾಸಿಯ ಆಕಾಶರೋಹಣ (ಮೆಅರಾಜುಲ್ ಮುಅïಮಿನೀನ್) ಆಗಿದೆ ಎಂದು ಪ್ರವಾದಿವರ್ಯರು(ಸ) ಕಲಿಸಿರುತ್ತಾರೆ. ಅಂದರೆ ನಾವು ಅಲ್ಲಾಹನ ಸಮ್ಮುಖದಲ್ಲಿದ್ದೇವೆ ಮತ್ತು ನಮ್ಮನ್ನು ಅಲ್ಲಾಹನು ನೋಡುತ್ತಿದ್ದಾನೆಂಬ ಪ್ರಜ್ಞೆ ನಮಾಝಿಗನಲ್ಲಿ ಮೂಡಬೇಕು. ಆಗ ನಮ್ಮ ಮನದಲ್ಲಿ ಭಯ ಭಕ್ತಿ ಟಿಸಿಲೊಡೆಯುತ್ತದೆ, ಅದು ನಮಾಝನ್ನು ಸಾರ್ಥಕಗೊಳಿಸುತ್ತದೆ.
ಆರೋಗ್ಯವಂತನಾದರೂ ಅನಾರೋಗ್ಯಪೀಡಿತನಾದರೂ ನಮಾಝ್ ಕಡ್ಡಾಯವಾಗಿದೆ. ನಿಂತು ನಮಾಝ್ ಮಾಡಲು ಸಾಧ್ಯವಾಗದಿದ್ದರೆ ಕುಳಿತು ನಮಾಝ್ ನಿರ್ವಹಿಸಬೇಕು. ಅದೂ ಅಸಾಧ್ಯವಾದರೆ ಮಲಗಿ ನಿರ್ವಹಿಸಬೇಕು. ಅಂಗಾಂಗಗಳ ಚಲನೆಯಿಲ್ಲದಿದ್ದರೆ ಮನಸ್ಸಿನಲ್ಲಿ ಕಲ್ಪಿಸಿಕೊಂಡು ನಮಾಝ್ ನಿರ್ವಹಿಸಬೇಕು. ಪ್ರಯಾಣದ ಸಂದರ್ಭದಲ್ಲಿ ಜಮ್ಅï ಮತ್ತು ಕಸ್ರ್ ಮಾಡಬೇಕು ಎಂದು ಇಸ್ಲಾಮ್ ಆದೇಶಿಸುತ್ತದೆ. ಇಸ್ಲಾಮ್ ನಮಗೆ ಅಸಾಧ್ಯವಾದುದನ್ನು ಯಾವುದೂ ಹೇರಿಲ್ಲ ಎಂಬುದಕ್ಕೆ ನಮಾಝ್ ಸ್ಪಷ್ಟ ಪುರಾವೆಯಾಗಿದೆ. ಅದಕ್ಕೆ ಯಾವುದೇ ಖರ್ಚು ವೆಚ್ಚ ಮಾಡಬೇಕಿಲ್ಲ. ಅನ್ಯ ಧರ್ಮದ ಆರಾಧನೆಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಹೂ ಹಣ್ಣು ಅಗರಬತ್ತಿ ಹೀಗೆ ವಿವಿಧ ಖರ್ಚು ವೆಚ್ಚಗಳಿವೆ. ಆದರೆ ಇಸ್ಲಾಮಿನ ಈ ಪ್ರಮುಖವಾದ ಆರಾಧನೆಗೆ ಯಾವುದೇ ರೀತಿಯ ಖರ್ಚು ವೆಚ್ಚ ಇಲ್ಲ. ಬಡವನಿಗೂ ಬಲ್ಲಿದನಿಗೂ ಕರಿಯನಿಗೂ ಬಿಳಿಯನಿಗೂ ಒಂದೇ ರೀತಿಯಲ್ಲಿ ಒಂದೇ ಪಂಕ್ತಿಯಲ್ಲಿ ನಿಂತು ನಿರ್ವಹಿಸುವ ಸಮಾನತೆಯ ಆರಾಧನೆಯಾಗಿದೆ ನಮಾಝ್. ಆದ್ದರಿಂದ ಮನಸ್ಸುಗಳನ್ನು ನಿರ್ಮಲಗೊಳಿಸುವಂತಹ ನಮಾಝ್ನ ಸಂಸ್ಥಾಪನೆಯು ನಮ್ಮ ಇಹಪರದ ವಿಜಯದ ಸಂಕೇತವಾಗಿದೆ. ಈ ಬಗ್ಗೆ ನಾವು ಆಲಸ್ಯ ತೋರಿದರೆ ನಮ್ಮಷ್ಟು ನತದೃಷ್ಟರು ಯಾರೂ ಇರಲಾರರು. ಆದ್ದರಿದ ಅಲ್ಲಾಹನಿಂದ ಅನುಗ್ರಹೀತವಾದ ಈ ನಮಾಝ್ ನಮ್ಮ ಜೀವನದ ಬೆಳಕಾಗುವಂತಾಗಲು ನಾವು ಶ್ರಮಿಸಬೇಕಾಗಿದೆ.
IslamKannada News Portal



