Home / ಲೇಖನಗಳು / ಪುರುಷರ ಮನದಲ್ಲಿರುವ ನಾಲ್ಕು ಮಹಿಳೆಯರು

ಪುರುಷರ ಮನದಲ್ಲಿರುವ ನಾಲ್ಕು ಮಹಿಳೆಯರು

@ ಜಾಸಿಮುಲ್ ಮುತವ್ವ

ಈ ಲೇಖನದ ತಲೆ ಬರಹ ನೋಡಿದಾಗ ನೀವು ಬಹುಪತ್ನಿತ್ವದ ಕುರಿತು ಬರೆದಿರಬಹುದು ಎಂದು ಭಾವಿಸಿರಬಹುದು, ವಾಸ್ತವದಲ್ಲಿ ಹಾಗಲ್ಲ. ಪುರುಷರ ಮನದಲ್ಲಿ ನೆಲೆ ಕಾಣುವ ಪ್ರಥಮ ಮಹಿಳೆ  ಮಾತೆಯಾದರೆ, ಎರಡನೆ ಸ್ಥಾನ ಅವನ ಪತ್ನಿಗೆ, ಮೂರನೆಯದ್ದು ಸಹೋದರಿ, ನಾಲ್ಕನೆಯದ್ದು ಮಗಳಾಗಿದ್ದಾಳೆ. ಅದರಲ್ಲಿ ಮೊದಲನೆಯವಳದ್ದು ಅಲ್ಲಾಹನ ತೃಪ್ತಿಯ ಭಾಗವಾಗಿದೆ, ಎರಡನೆಯದ್ದು  ಮಹಿಳೆಯನ್ನು ಗೌರವಿಸುವುದು ಪ್ರವಾದಿವರ್ಯರ(ಸ) ಸಂದೇಶವನ್ನು ಅನುಸರಿಸು ವುದಾಗಿದೆ. ಮೂರನೆಯದ್ದು ಉತ್ತಮ ಸಂಬಂಧ ಬೆಳೆಸಿದರೆ ಅದು ಅವರ ಪಾಲಿಗೆ ಒಳಿತು ಅನುಗ್ರಹಗಳಿಗೆ  ಕಾರಣವಾಗುತ್ತದೆ. ನಾಲ್ಕನೆಯ ಮಹಿಳೆಯ ಪರಿಪಾಲನೆಯು ಅವನ ಸ್ವರ್ಗದ ಹಾದಿಯ ದ್ವಾರವಾಗಿದೆ. ಈ ನಾಲ್ವರು ಪುರುಷ ಮನಸ್ಸಲ್ಲಿ ನೆಲೆಯೂರಿದವರಾಗಿದ್ದಾರೆ.

ಇದು ಪುರುಷರಿಗೆ ಮಾತ್ರವಲ್ಲ ಇದೇ ರೀತಿ ಮಹಿಳೆಯ ಮನದಲ್ಲಿಯೂ ನೆಲೆ ಕಾಣುವ ಪುರುಷರಿದ್ದಾರೆ. ತಂದೆ, ಪತಿ, ಸಹೋದರ ಮತ್ತು ಮಗ. ಇದರಲ್ಲಿಯೂ ಮೊದಲನೆಯದ್ದು ಅಲ್ಲಾಹನ ಸಂತೃಪ್ತಿಯ ಭಾಗವಾಗಿದೆ. ಎರಡನೆಯದ್ದು ಪುರುಷನ ಮಾತುಗಳನ್ನು ಪಾಲಿಸುತ್ತಾ ಅವರೊಂದಿಗೆ ಉತ್ತಮವಾಗಿ ವರ್ತಿಸಿ ಪ್ರವಾದಿ ವರ್ಯರ(ಸ) ಉಪದೇಶವನ್ನು ಅನುಸರಿಸುವುದಾಗಿದೆ. ಮೂರನೆಯದ್ದು ಪುರುಷನ ಜೊತೆ ಉತ್ತಮ ಸಂಬಂಧ ಬೆಳೆಸಿ ಅವರಿಗೆ ಒಳಿತು ಮಾಡುವುದು ಅನುಗ್ರಹಗಳಿಗೆ ಕಾರಣವಾಗುತ್ತದೆ. ನಾಲ್ಕನೆಯದ್ದರ ಪಾಲನೆಯು ಅದು ಸ್ವರ್ಗದ ಹಾದಿಯ ದ್ವಾರವನ್ನು ಸುಗಮಗೊಳಿಸುತ್ತದೆ.

ತಂದೆ-ತಾಯಿಯರಿಗೆ ಮಾತಿನಲ್ಲಿಯೂ ವರ್ತನೆಯಲ್ಲಿಯೂ ಒಳಿತನ್ನು ಮಾಡಬೇಕು. ಜೊತೆಗೆ ಅವರ ಮನಸ್ಸನ್ನು ನೋಯಿಸುವಂತಹ ಎಲ್ಲಾ ಕಾರ್ಯಗಳಿಂದ ದೂರವಿರಬೇಕೆಂಬುದು ಅಲ್ಲಾಹನ ಆದೇಶವಾಗಿದೆ.

“ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಿರಿ, ಅವರ ಪೈಕಿ ಯಾರಾದರೊಬ್ಬರು ಅಥವಾ ಅವರೀರ್ವರೂ ವೃದ್ದರಾಗಿ ನಿಮ್ಮ ಬಳಿಯಿದ್ದರೆ ಅವರ ಬಗ್ಗೆ ಚಕಾರವೆತ್ತಬೇಡಿರಿ. ಮತ್ತು ಅವರನ್ನು  ಜರೆಯದಿರಿ, ಅವರೊಂದಿಗೆ ಗೌರವಪೂರ್ವಕವಾಗಿ ಮಾತನಾಡಿರಿ.” (ಅಲ್ ಇಸ್ರಾಅï: 23)

ಈ ವಿಚಾರವನ್ನು ಪ್ರವಾದಿವರ್ಯರೂ(ಸ) ಉಪದೇಶಿಸಿದ್ದಾರೆ, ಓರ್ವರು ಕೇಳಿದರು, ಅಲ್ಲಾಹನ ಪ್ರವಾದಿಗಳೇ, “ಉತ್ತಮವಾಗಿ ವ್ಯವಹರಿಸಲು ನನಗೆ ಅತ್ಯಂತ ಹೆಚ್ಚು ಅರ್ಹರು ಯಾರು? ಆಗ ಪ್ರವಾದಿವರ್ಯರು(ಸ) ಹೇಳಿದರು, ನಿನ್ನ ತಾಯಿ. ಬಳಿಕ ನಿನ್ನ ತಾಯಿ. ಬಳಿಕ ನಿನ್ನ ತಾಯಿ. ಬಳಿಕ ನಿನ್ನ ತಂದೆ” ಎಂದು ಹೇಳಿದರು.

ಪತಿಗೆ ಅಲ್ಲಾಹನು ನಿಮ್ಮ ಸಂಗಾತಿಯೊಂದಿಗೆ ಉತ್ತಮವಾಗಿ ವರ್ತಿಸಿರಿ ಎಂದು ಆದೇಶಿಸಿದ್ದಾನೆ. ಅಲ್ಲಾಹನು ಹೇಳುತ್ತಾನೆ, “ಅವರೊಂದಿಗೆ ನೀವು ಉತ್ತಮವಾಗಿ ವರ್ತಿಸಿರಿ” (ಅನ್ನಿಸಾ: 19)

ಉತ್ತಮ ಮಾತುಗಳು, ಉತ್ತಮವಾದ ವರ್ತನೆ, ಅವರ ಹಕ್ಕುಗಳನ್ನು ನೀಡಬೇಕೆಂಬುದು ಅಲ್ಲಿ ಕುರ್‍ಆನ್ “ಮಅರೂಫ್” ಎಂಬ ಪದ ಬಳಸಿದ ಉದ್ದೇಶವಾಗಿದೆ. ಅದರಂತೆ ಪತ್ನಿಯ ಜೊತೆ ಉತ್ತಮವಾಗಿ  ವರ್ತಿಸಬೇಕೆಂದು ಪ್ರವಾದಿವರ್ಯರು ಉಪದೇಶಿಸಿರುವುದನ್ನು ನಮಗೆ ಕಾಣಬಹುದು. “ನಿಮ್ಮಲ್ಲಿ ಪತ್ನಿಯರ ಜೊತೆ ಅತ್ಯುತ್ತಮ ರೀತಿಯಲ್ಲಿ ವರ್ತಿಸುವವರು ಶ್ರೇಷ್ಠರು. ನಾನು ಪತ್ನಿಯರ ಜೊತೆ  ಉತ್ತಮವಾಗಿ ವರ್ತಿಸುತ್ತಿದ್ದೇನೆ”.

ಹಾಗೆಯೇ ಪತ್ನಿಯರಿಗೂ ಪ್ರವಾದಿವರ್ಯರು(ಸ) ಉಪದೇಶಿಸಿರುವುದನ್ನು ಕಾಣಬಹುದು,  ಪ್ರವಾದಿವರ್ಯ(ಸ) ಹೇಳುತ್ತಾರೆ, ” ಓರ್ವ ಮಹಿಳೆ ಐದು ಹೊತ್ತು ನಮಾಝ್ ನಿರ್ವಹಿಸಿ ಉಪವಾಸ ವೃತದ ತಿಂಗಳಲ್ಲಿ ಉಪವಾಸವನ್ನು ಆಚರಿಸಿ ತನ್ನ ಪತಿವ್ರತೆಯನ್ನು ಕಾಪಾಡಿಕೊಂಡು ಪತಿಯನ್ನು ಅನುಸರಿಸಿದರೆ ನೀನು ಬಯಸುವ ಯಾವ ದ್ವಾರದಲ್ಲಿಯೂ  ಸ್ವರ್ಗವನ್ನು ಪ್ರವೇಶಿಸಬಹುದು ಎಂದು ಅವರಲ್ಲಿ ಹೇಳಲಾಗುವುದು.”

ಸಹೋದರಿ ಸಹೋದರರ ನಡುವೆಯಿರುವ ಉತ್ತಮ ವರ್ತನೆಯ ಭಾಗವಾಗಿ ಪಾಲಿಸಬೇಕಾದ ಹಲವು ವಿಚಾರಗಳಿವೆ. ಅದರಲ್ಲಿ ಆರ್ಥಿಕ ವ್ಯವಹಾರವು ಮೊದಲನೆಯದ್ದು. ಅವರ ಸ್ಥಿತಿಯನ್ನು ಗಮನಿಸುತ್ತಾ ಆ ಕುರಿತು ಅನ್ವೇಶಿಸುತ್ತಾ ಸಾಧ್ಯವಾದರೆ ನೆರವು ನೀಡುತ್ತಾ ಇರಬೇಕು. ಆಹಾರ ಮತ್ತು ಬಟ್ಟೆ ಬರೆಗಳನ್ನು ನೀಡುವುದು ಎರಡನೆಯದ್ದಾಗಿದೆ.  ಅವರು ನೆರವು ಯಾಚಿಸಿದರೆ ನೆರವಾಗುವುದು  ಮೂರನೆಯದ್ದಾಗಿದೆ. ಉತ್ತಮವಾದ ಮಾತುಗಳನ್ನಾಡುವುದು ನಾಲ್ಕನೆಯ ದ್ದಾಗಿದೆ. ಅವರನ್ನು ನಿಂದಿಸಿ ತಾತ್ಸಾರವಾಗಿ ಕಾಣಬಾರದು. ಐದನೆಯದ್ದು ಅವರ ತಪ್ಪುಗಳನ್ನು ಮನ್ನಿಸಿ ಕ್ಷಮಿಸುವುದಾಗಿದೆ. ಆರನೆಯದ್ದು ಅವರು ಬದುಕಿರುವಾಗಲೂ ಅವರು ಇಹಲೋಕ ತ್ಯಜಿಸಿದ ಬಳಿಕವೂ ಅವರಿಗಾಗಿ ಪ್ರಾರ್ಥಿಸುವುದು. ಇವೆಲ್ಲವೂ ಸಾಹೋದರ್ಯ ಸಂಬಂಧವನ್ನು ಬಲಪಡಿಸುವ ಕುರಿತು ಗ್ರಂಥಗಳಲ್ಲಿ ದಾಖಲಿಸಲ್ಪಟ್ಟವುಗಳು.

ನಾವು ಇಂದು ಮಕ್ಕಳನ್ನು ಸಂಸ್ಕರಣೆ ಮಾಡುವುದಕ್ಕಿಂತ ಅವರ ಪರಿಪಾಲನೆಯ ಬಗ್ಗೆ ಹೆಚ್ಚು ಮುತುವರ್ಜಿ ಮಾಡುವುದನ್ನು ಕಾಣಬಹುದು. ಈ ಎರಡರ ಮಧ್ಯೆ ಬಹಳ ವ್ಯತ್ಯಾಸವಿದೆ. ಉತ್ತಮ ಆಹಾರ  ಬಟ್ಟೆ ಮತ್ತು ಮನರಂಜನಾ ಕಾರ್ಯಗಳನ್ನು ಒದಗಿಸಿಕೊಡುವುದು ಪರಿಪಾಲನೆಯಾಗಿದೆ. ಅದೇ ವೇಳೆ ಸಂಸ್ಕರಣೆ ಯೆಂದರೆ ಅವರ ಮನದಲ್ಲಿ ಮೌಲ್ಯಯುತವಾದ ಸದ್ಗುಣ, ಮತ್ತು ಸತ್ಯವಿಶ್ವಾಸವನ್ನು  ತುಂಬಿಸುವುದಾಗಿದೆ. ಸದ್ಗುಣ ಮತ್ತು ಇಸ್ಲಾಮೀ ವಿಶ್ವಾಸ ಮನದಲ್ಲಿ ಬೇರೂರಲು ಸಹಾಯಕವಾದ ಪರಿಸ್ಥಿತಿಯ ನಿರ್ಮಾಣವಾಗಬೇಕು. ಆ ಮೂಲಕ ಸಂತಾನಗಳ ಪರಿಪಾಲನೆಯು ಸ್ವರ್ಗಕ್ಕೆ  ಹೇತುವಾಗುತ್ತದೆ.

ಪ್ರವಾದಿವರ್ಯರು(ಸ) ಹೇಳುತ್ತಾರೆ: “ಓರ್ವ ವ್ಯಕ್ತಿ ಎರಡು ಮೂರು ಹೆಣ್ಮಕ್ಕಳನ್ನು ಅಥವಾ ಎರಡು, ಮೂರು ಸಹೋದರಿಯರನ್ನು ಅವರ ಪ್ರಾಪ್ತ ವಯಸ್ಸಿಗೆ ಬರುವವರೆಗೆ ಅಥವಾ ಅವರ  ಮರಣದವರೆಗೆ ಉತ್ತಮವಾಗಿ ಸಾಕಿ ಸಲಹಿದರೆ  ನಾನು ಮತ್ತು ಆ ವ್ಯಕ್ತಿ ಈ ರೀತಿ ಇರುವೆವು (ಎನ್ನುತ್ತಾ ತನ್ನ ತೋಬೆರಳು ಮತ್ತು ನಡುಬೆರಳನ್ನು ಜೊತೆಯಾಗಿಸಿ ಎತ್ತಿ ತೋರಿಸಿದರು) ಮಕ್ಕಳನ್ನು ಸಂಸ್ಕರಣೆ ಮಾಡುವ ಕುರಿತು ಪವಿತ್ರ ಕುರ್‍ಆನಿನಲ್ಲಿ ಅಲ್ಲಾಹನು ತಂದೆ-ತಾಯಂದಿರಿಗೆ ತಾಕೀತು ನೀಡಿದ್ದಾನೆ.

“ಸತ್ಯವಿಶ್ವಾಸಿಗಳೇ, ಮಾನವರೂ ಶಿಲೆಗಳೂ ಇಂಧನವಾಗಲಿರುವ ಅಗ್ನಿಯಿಂದ ನಿಮ್ಮನ್ನೂ ನಿಮ್ಮ ಕುಟುಂಬದವರನ್ನೂ ರಕ್ಷಿಸಿಕೊಳ್ಳಿರಿ. ಅದರ ಮೇಲೆ ಅತ್ಯಂತ ಕಠೋರ ಮತ್ತು ಉಗ್ರರಾದ ದೇವಚರರು  ನಿಯುಕ್ತರಾಗುವರು. ಅವರೆಂದೂ ಅಲ್ಲಾಹನ ಆಜ್ಞೋಲ್ಲಂಘನೆ ಮಾಡುವುದಿಲ್ಲ ಮತ್ತು ಅವರಿಗೆ ನೀಡಲಾಗುವ ಪ್ರತಿಯೊಂದು ಅಪ್ಪನೆಯನ್ನೂ ಪಾಲಿಸುತ್ತಾರೆ. (ಅತ್ತಹ್ರೀಮ್: 6)

ಆದ್ದರಿಂದಲೇ ಪ್ರವಾದಿವರ್ಯರು(ಸ) ಮಕ್ಕಳಿಗೂ ಹಲಾಲ್ ಮತ್ತು ಹರಾಮ್‍ನ ವ್ಯತ್ಯಾಸದ ಕುರಿತು ಉಪದೇಶ ನೀಡಿದ್ದರು. ಝಕಾತ್‍ಗಾಗಿ ಸಂಗ್ರಹಿಸಲಾದ ಖರ್ಜೂರದ ರಾಶಿಯಿಂದ ಒಂದು  ಖರ್ಜೂರವನ್ನು ಹಸನ್ ಬಿನ್ ಅಲಿಯವರು ತೆಗೆದಾಗ ಅಲಿ(ರ)ರು ನಾವು ಝಕಾತ್ ತಿನ್ನುವವರಲ್ಲ ಎಂಬುದು ನಿನಗೇ ತಿಳಿದಿಲ್ಲವೇ ಎಂದು ಹೇಳಿ ಅದನ್ನು ತೊರೆಯಲು ಹೇಳಿದ್ದರು. ಪ್ರವಾದಿವರ್ಯರ ಕುಟುಂಬವು ಝಕಾತ್ ಪಡೆಯುತ್ತಿರಲಿಲ್ಲ ಎಂಬ ಮಹತ್ತರವಾದ ಸಂದೇಶವನ್ನು ಇದು ನೀಡುತ್ತದೆ. ಇದು ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವ ವಿಧಾನವಾಗಿದೆ. ಪ್ರಾಪ್ತರಾಗುವಾಗ ನಿಷಿದ್ಧವಾಗುವಂತಹ ವಿಚಾರಗಳನ್ನು ಮಕ್ಕಳ ಪ್ರಾಯದಲ್ಲಿಯೇ ಅದನ್ನು ತಿಳಿಸಿ ತರಬೇತಿ ನೀಡಬೇಕು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …