@ ಶೇಖ್ ಮುಹಮ್ಮದ್ ಕಾರಕ್ಕುನ್ನು
ಪ್ರಿಯತಮಾ, ಅಲ್ಲಾಹನಾಣೆ, ಅಲ್ಲಾಹನು ನಿಮ್ಮನ್ನು ಎಂದಿಗೂ ದುಃಖಕ್ಕೀಡು ಮಾಡಲಾರ. ನೀವು ಬಂಧು ಬಳಗದವರೊಂದಿಗೆ ಸದ್ವರ್ತನೆ ತೋರುವವರು, ದೀನದಲಿತರ ಮತ್ತು ಬಡಬಗ್ಗರ ಭಾರ ಹೊರುವವರು. ದರಿದ್ರರಿಗೆ ನೆರವಾಗುವವರು. ಅತಿಥಿಗಳನ್ನು ಗೌರವಿಸುವವರು. ಸಂಕಷ್ಟಗಳ ವೇಳೆಯೂ ಸತ್ಯ ಮತ್ತು ನ್ಯಾಯದ ಪರ ವಹಿಸುವವರು. ಸತ್ಯ ಸಂಧರು” ಎನ್ನುತ್ತಾ ಪ್ರೀತಿಯ ಪತ್ನಿ ಖದೀಜಾ(ರ) ತನ್ನ ಪ್ರಿಯತಮನನ್ನು ಸಾಂತ್ವನಗೊಳಿಸಿದರು.
ಮುಹಮ್ಮದರು(ಸ)ರ ಹಿರಾಗುಹೆಯಿಂದ ಬಂದ ಬಳಿಕ ತೀವ್ರ ಕಳವಳಗೊಂಡಿದ್ದರು. ಖದೀಜಾರವರು ಅವರಿಗೆ ಆಹಾರವನ್ನು ಕಟ್ಟಿ ಕೊಟ್ಟಿದ್ದರು. ಹಲವು ಬಾರಿ ಖರ್ಜೂರ ಮತ್ತು ಹಾಲಿನೊಂದಿಗೆ ಅವರು ಹಿರಾ ಗುಹೆಗೆ ಹೋಗಿದ್ದರು. ಅದಕ್ಕೆ ಅವರ ಪ್ರಾಯ ಯಾವುದೂ ತಡೆಯಾಗಿರಲಿಲ್ಲ. ತನ್ನ ಪ್ರಿಯತಮ ಮುಹಮ್ಮದ್ರಿಗೆ ಆಧ್ಯಾತ್ಮಿಕತೆಯೊಂದಿಗೆ ಅತೀವ ಆಸಕ್ತಿಯಿತ್ತು ಎಂಬುದನ್ನು ಅವರು ಅರಿತಿದ್ದರು.
ಮಲಿನಗೊಂಡಿದ್ದ ಮಕ್ಕಾದಿಂದ ಸ್ವಲ್ಪ ದೂರವಿದ್ದ ಮುಹಮ್ಮದರು ಹಿರಾ ಗುಹೆಯಲ್ಲಿ ಪ್ರಾರ್ಥನೆ ಮತ್ತು ಕೀರ್ತನೆಯಲ್ಲಿ ಮುಳುಗಿದ್ದರು. ಕೆಡುಕಿನಲ್ಲಿ ಮುಳುಗಿದ್ದ ಆ ಜನ ಸಮೂಹದಿಂದ ದೂರವಾಗಿ ಧ್ಯಾನಾಸಕ್ತರಾಗಿದ್ದಾಗ ಆಕಸ್ಮಿಕವಾಗಿ ಒಂದು ಅನುಭೂತಿ ಉದ್ಬವಿಸುತ್ತದೆ. ಆಗ ಅವರು ಎಲ್ಲವನ್ನೂ ಮರೆಯುತ್ತಿದ್ದರು. ಅವರು ದಾಹ, ಹಸಿವು ಎಲ್ಲವನ್ನೂ ಮರೆಯುತ್ತಿದ್ದರು. ಅದಕ್ಕಾಗಿ ಅವರು ಪ್ರತೀ ವರ್ಷವೂ ರಮಝಾನ್ ನಲ್ಲಿ ಹಿರಾ ಗುಹೆಯಲ್ಲಿ ಪ್ರಾರ್ಥನಾ ನಿರತರಾಗುವ ರೂಢಿ ಇಟ್ಟುಕೊಂಡಿದ್ದರು. ವರುಷ ನಲುವತ್ತು ಆಗುವಾಗ ಕೆಲವು ಕನಸುಗಳನ್ನು ಕಾಣತೊಡಗಿದರು.
ಹಾಗೆಯೇ ಒಂದು ದಿನ ಹಿರಾ ಗುಹೆಯಲ್ಲಿ ಧ್ಯಾನಾಸಕ್ತರಾಗಿದ್ದ ಸಂದರ್ಭದಲ್ಲಿ ಮುಹಮ್ಮದರು ನಿದ್ದೆ ಹೋದರು. ನಿದ್ದೆಯಲ್ಲಿರುವಾಗ ಕೈಯಲ್ಲಿ ಒಂದು ಬರಹವನ್ನು ಹಿಡಿದು ದೇವದೂತರಾದ ಜಿಬ್ರೀಲ್ ಪ್ರತ್ಯಕ್ಷರಾಗಿ “ಓದು” ಎಂದು ಹೇಳಿತು. ಮುಹಮ್ಮದರು “ನಾನು ಓದು ಬಲ್ಲವನಲ್ಲ” ಎಂದರು. ದೇವದೂತ ಪುನಃ ಓದುವಂತೆ ಹೇಳಿತು. ಮುಹಮ್ಮದರು ಮತ್ತೆ ಅದೇ ಉತ್ತರವನ್ನೇ ನೀಡಿದರು. ಮೂರನೇ ಬಾರಿ ಮತ್ತೆ ಓದಲು ಹೇಳಿದಾಗ, “ಏನನ್ನು ಓದಬೇಕು” ಎಂದು ಕೇಳಿದರು. ಆಗ ದೇವದೂತರು ಹೇಳಿಕೊಟ್ಟರು- “ಓದಿರಿ ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ. ಅವನು ಹೆಪ್ಪುಗಟ್ಟಿದ ರಕ್ತದ ಒಂದು ಪಿಂಡದಿಂದ ಮಾನವನನ್ನು ಸೃಷ್ಟಿಸಿದನು. ಓದಿರಿ, ಮತ್ತು ನಿಮ್ಮ ಪ್ರಭು ಮಹಾ ಉದಾರಿ. ಅವನು ಲೇಖನಿಯ ಮೂಲಕ ವಿದ್ಯೆ ಕಲಿಸಿದನು. ಮಾನವನು ತಿಳಿದಿರದಂತಹ ಜ್ಞಾನವನ್ನು ಅವನಿಗೆ ದಯಪಾಲಿಸಿದನು.”
ಇದರೊಂದಿಗೆ ಅಬ್ದುಲ್ಲಾರ ಮಗ ಮುಹಮ್ಮದ್ ಅಲ್ಲಾಹನ ಅಂತಿಮ ಪ್ರವಾದಿಯಾಗಿ ನಿಯುಕ್ತರಾದರು. ಅಲ್ಲಾಹನು ತನ್ನ ದಾಸನೊಂದಿಗೆ ಜಿಬ್ರೀಲ್ ಮುಖಾಂತರ ಮಾತನಾಡಿದ್ದನು. ಅದು ರಮಝಾನ್ ತಿಂಗಳಲ್ಲಿ ಆಗಿತ್ತು. ಆದರೆ ನಡೆದ ಘಟನೆ ಏನು, ಯಾಕೆ ಎಂಬುದು ಪ್ರವಾದಿವರ್ಯರಿಗೆ(ಸ) ಅರ್ಥವಾಗಿರಲಿಲ್ಲ. ಆದ್ದರಿಂದ ದಿಗ್ಬ್ರಾಂತರಾಗಿ ಕಳವಳಗೊಂಡು ಹಿರಾ ಗುಹೆಯಿಂದ ಹೊರಬಂದು ಮನೆಯತ್ತ ಓಡುತ್ತಾ ಹೋದರು. ಬೆಟ್ಟದಿಂದ ಕೆಳಭಾಗದತ್ತ ಸ್ವಲ್ಪ ದೂರ ಸಾಗಿದಾಗ ಮೇಲ್ಬಾಗದಿಂದ ಒಂದು ಶಬ್ದ ಕೇಳಿ ಬಂತು. ಆ ಶಬ್ದವು “ಹೇ! ಮುಹಮ್ಮದ್ ತಾವು ಸಂದೇಶವಾಹಕರಾಗಿದ್ದೀರಿ. ನಾನು ದೇವದೂತ ಜಬ್ರೀಲ್ ಆಗಿದ್ದೇನೆ” ಎಂದಾಗಿತ್ತು. ಆಗ ಪ್ರವಾದಿವರ್ಯರು(ಸ) ಮೇಲ್ಬಾಗದತ್ತ ನೋಡಿದರು. ಗುಹೆಯಲ್ಲಿ ಕಂಡ ಆದೇ ರೂಪವನ್ನು ಅವರು ಕಂಡರು. ಮೇಲ್ಬಾಗ ನೋಡುತ್ತಿದ್ದಂತೆ ಆ ರೂಪ ಅಪ್ರತ್ಯಕ್ಷವಾಯಿತು. ಆಗಲೂ ಏನು ಘಟಿಸುತ್ತಿದೆಯೆಂಬ ಬಗ್ಗೆ ಅವರಿಗೆ ಅರಿವಿರಲಿಲ್ಲ. ಆದ್ದರಿಂದ ಅವರು ಭಯಭೀತರಾಗಿದ್ದರು. ಕಳವಳಗೊಂಡಿದ್ದ ಪ್ರವಾದಿವರ್ಯರು(ಸ) ನಡುಗುತ್ತಿದ್ದರು, ಹಿರಾ ಗುಹೆಯಿಂದ ನೇರವಾಗಿ ಮನೆಗೆ ತೆರಳಿದರು, ಪ್ರವಾದಿವರ್ಯರ(ಸ) ಮುಖದಲ್ಲಿ ಅಶಾಂತತೆ ಗೋಚರವಾಗುತ್ತಿತ್ತು.
ಮನೆಗೆ ತಲುಪಿದ ಕೂಡಲೇ ನನಗೆ ಹೊದಿಸಿರಿ ಎಂದು ಖದೀಜಾರ ಜೊತೆ ಹೇಳಿದರು. ಪ್ರವಾದಿವರ್ಯರು(ಸ) ಜ್ವರ ಬಾಧಿತರಂತೆ ಮೈಯೆಲ್ಲಾ ಬಿಸಿಯೇರಿತ್ತು. ಸ್ವಲ್ಪ ಸಾವರಿಸಿಕೊಂಡ ಬಳಿಕ ನಡೆದದ್ದೆಲ್ಲವನ್ನೂ ಪತ್ನಿಯ ಮುಂದೆ ವಿವರಿಸಿದರು. ಅವರು ಪತಿಯನ್ನು ಸಾಂತ್ವನ ಪಡಿಸಿದರು. ಸಾಧ್ಯವಾದಷ್ಟು ಧೈರ್ಯ ತುಂಬಿದರು. ಅವರ ಸಾಂತ್ವನದ ವಚನಗಳು ಪ್ರವಾದಿವರ್ಯ ರಿಗೆ(ಸ) ಮನಸ್ಸಿಗೆ ತಂಪೆರೆಯಿತು. ಅವರು ಖದೀಜರನ್ನು ಒಮ್ಮೆ ನೋಡಿದರು. ಖದೀಜಾರವರು ಕಾರುಣ್ಯದ ನೋಟವನ್ನು ಅವರತ್ತ ಬೀರಿದರು. ತೀವ್ರ ದಣಿದಿದ್ದ ಪ್ರವಾದಿಗಳು ಅಲ್ಲಿಯೇ ನಿದ್ದೆ ಹೋದರು.
ವಿಭಿನ್ನವಾದ ವ್ಯಕ್ತಿತ್ವ
ಪತಿ ಅಸ್ವಸ್ಥಗೊಂಡಾಗ ಎಂತಹ ಪತ್ನಿಯೂ ದಿಗ್ಬ್ರಾಂತಗೊಳ್ಳುವರು. ಏನು ಮಾಡಬೇಕೆಂದು ತೋಚದೆ ಕಳವಳಕ್ಕೀಡಾಗುವರು. ಏನಾದರೂ ಹೇಳಿದರೂ ಅದು ಪತಿಯ ಅಸ್ವಸ್ಥತೆ ಹೆಚ್ಚಾಗುವುದೊ ಎಂಬ ಆತಂಕ ಅವರನ್ನು ಕಾಡುತ್ತದೆ. ಆದರೆ ಖದೀಜಾ(ರ) ರವರು ಪ್ರವಾದಿವರ್ಯರನ್ನು(ಸ) ಸಾಂತ್ವನ ಪಡಿಸಿದ ರೀತಿಯಂತೂ ಅದ್ಭುತ. ತನ್ನ ಪತಿಯೊಂದಿಗೆ ಅವರು ಆಡುತ್ತಿದ್ದಂತಹ ಮಾತುಗಳು ಅವರ ವ್ಯಕ್ತಿತ್ವವನ್ನು ಪ್ರತಿಪಾದಿಸುತ್ತದೆ, ಅಲ್ಲಾಹನ ಬಗ್ಗೆಯಿರುವಂತಹ ಪ್ರಜ್ಞೆ, ಮಾನವ ಜೀವನದ ಕುರಿತ ದೃಷ್ಟಿಕೋನ, ಸಮಾಜದೊಂದಿಗಿರುವ ವ್ಯಕ್ತಿಯ ಜೊತೆಗಿನ ಸಂಬಂಧದ ಪ್ರತಿಫಲನ, ಆ ಕುರಿತ ದೈವಿಕ ನಿಲುವುಗಳು ಎಲ್ಲಾ ವಿಷಯಗಳ ಕುರಿತು ಅವರಿಗಿದ್ದ ಅರಿವು ಸ್ಪಷ್ಟವಾಗುತ್ತಿತ್ತು. ಅಲ್ಲಾಹನ ಮಾರ್ಗದರ್ಶನ ದೊರೆಯುವುಕ್ಕಿಂತ ಮೊದಲೇ ಇಂತಹದ್ದೊಂದು ಜೀವನ ನಡೆಸಲು ಅವರಿಗೆ ಸಾಧ್ಯವೆಂದಾದರೆ ಅವರು ಪ್ರಕೃತಿ ದತ್ತವಾಗಿ ಇತರೆಲ್ಲರಿಗಿಂತ ಭಿನ್ನರಾಗಿದ್ದರು. ಜನ್ಮಸಿದ್ಧವಾಗಿ ಅವರು ಒಳಿತಿನ ವಾಹಕರಾಗಿದ್ದರು.
ತನ್ನ ದಾಸ ಯಾರಾಗಬೇಕೆಂದು ಅಲ್ಲಾಹನು ಬಯಸುತ್ತಾನೆ? ಅದಕ್ಕೆ ಇಸ್ಲಾಮ್ “ತನ್ನ ದಾಸರಿಗೆ ಅತ್ಯಂತ ಹೆಚ್ಚು ಪ್ರಯೋಜನಕಾರಿಯಾದವನು” ಎಂದುತ್ತರಿಸುತ್ತದೆ. ಪ್ರವಾದಿತ್ವದೊಂದಿಗೆ ಈ ಗುಣ ಲಭ್ಯವಾಗುವುದಕ್ಕಿಂತ ಮೊದಲೇ ಅದನ್ನು ಗಳಿಸಿಕೊಳ್ಳಲು ಖದೀಜಾ(ರ)ರವರಿಗೆ ಸಾಧ್ಯವಾಯಿತು ಎಂಬುದು ಕೂಡಾ ಒಂದು ವಿಶೇಷತೆಯಾಗಿದೆ. ಅವರ ಅತ್ಯಪೂರ್ವವಾದ ಒಳ ನೋಟದೆಡೆಗೆ ಇದು ಬೆಳಕು ಚೆಲ್ಲುತ್ತದೆ. ಅದಕ್ಕಾಗಿ ಕಷ್ಟಪಡುವವರೊಂದಿಗೆ, ಹೊರೆ ಹೊರುವ ಕಾರ್ಮಿಕರೊಂದಿಗೆ, ಸಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವವರಿಗೆ ನೆರಳಾಗಿ, ನೆರವಾಗುವುದನ್ನು ಒಂದು ಮಹತ್ತರವಾದ ಕರ್ಮವಾಗಿ ಅವರು ಅರ್ಥೈಸಿದ್ದರು. ಒಳಿತು ಮತ್ತು ಕೆಡುಕಿನ ವ್ಯತ್ಯಾಸ ಅರಿಯುವ ಸಿದ್ಧಿಯೂ ಅವರಲ್ಲಿತ್ತು. ಆದ್ದರಿಂದ “ಸತ್ಯ ಮತ್ತು ವಿಜಯಕ್ಕಾಗಿ ಮಾತ್ರ ನೀವು ಸಕ್ರಿಯರಾಗಿರುತ್ತೀರಿ” ಎಂದು ತನ್ನ ಪತಿಯಲ್ಲಿ ಹೇಳಲು ಅವರಿಗೆ ಸಾಧ್ಯವಾಯಿತು. ಹೀಗೆ ಎಲ್ಲಾ ಅರ್ಥದಲ್ಲಿಯೂ ಖದೀಜಾರು ವಿಭಿನ್ನರಾಗಿದ್ದರು.
ದಂಪತಿಗಳು ಪರಸ್ಪರ ಸಂಗಾತಿಗಳಾಗಿದ್ದಾರೆ. ಈರ್ವರೂ ಜೊತೆಯಾಗಿ ಸವೆಸುವುದು ದಾಂಪತ್ಯ ಜೀವನವಾಗಿದೆ. ಆಗ ಓರ್ವರ ಸುಖ ಸಂತೋಷ ಈರ್ವರದ್ದಾಗಿದೆ. ದುಃಖವೂ ಈರ್ವರದ್ದಾಗಿರುವುದು. ಅಭಿಮಾನ ಮತ್ತು ಅವಮಾನವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಹೀಗೆ ಪರಸ್ಪರ ಆಸರೆಯಾಗಿ ನೆರಳಾಗಿ ಬದಲಾಗುವಾಗ ದಾಂಪತ್ಯ ಜೀವನವು ಮನೋಹರ, ಆರೋಗ್ಯಕರ ಮತ್ತು ಸುಂದರಮಯವಾಗಿರುವುದು. ಇಲ್ಲಿ ಖದೀಜ ತನ್ನ ಪ್ರಿಯತಮನಿಗೆ ದುಃಖ ಶಮನದ ಸಾಂತ್ವನದ ನೆರಳಾಗುತ್ತಾರೆ. ಅವರ ಹೊರೆಯನ್ನು ಇಳಿಸುತ್ತಾರೆ. ಅವರ ದಣಿವು ಆಯಾಸ ಅಸ್ವಸ್ಥತೆಗೆ ಅಭಯ ಕೇಂದ್ರವಾಗುತ್ತಾರೆ. ತನ್ನ ಜೀವನ ಸಂಗಾತಿಗೆ ಇದಕ್ಕಿಂತ ಹೆಚ್ಚನದ್ದನ್ನು ಏನು ಮಾಡಲು ಸಾಧ್ಯ?
ವರಕ ಬಿನ್ ನೌಫಲ್ರ ವಿವರಣೆ
ಖದೀಜ(ರ)ರವರು ತನ್ನ ಸಂಗಾತಿಗೆ ಸಾಂತ್ವನ ಮಾತುಗಳನ್ನು ಹೇಳಿ ಸುಮ್ಮನಿರಲಿಲ್ಲ. ತನ್ನ ಸಂಗಾತಿ ಸಂದೇಶವಾಹಕ ಹೌದೋ ಎಂಬುದನ್ನು ಖಾತ್ರಿ ಪಡಿಸಲು ಸಿದ್ದರಾದರು. ತನ್ನ ಸೋದರ ಸಂಬಂಧಿ ಜ್ಞಾನಿಗಳಾಗಿದ್ದ ವರಕ ಬಿನ್ ನೌಫಲ್ರನ್ನು ಭೇಟಿಯಾದರು. ಹಿರಾ ಗುಹೆಯಲ್ಲಿ ನಡೆದ ವೃತ್ತಾಂತಗಳನ್ನೆಲ್ಲಾ ವಿವರಿಸಿದರು. ಹಿರಾ ಗುಹೆಯಲ್ಲಿ ನೀಡಿದ ಸಂದೇಶವನ್ನೂ ಓದಿ ಕೇಳಿಸಿದರು. ಎಲ್ಲವನ್ನೂ ಗಂಭೀರವಾಗಿ ಆಲಿಸಿ ಸ್ವಲ್ಪ ಹೊತ್ತು ಯೋಚಿಸಿದ ವರಕ ಬಿನ್ ನೌಫಲ್ “ಪವಿತ್ರಾತ್ಮ! ಪವಿತ್ರಾತ್ಮ! ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನು ಸಾಕ್ಷಿ. ನೀನು ಹೇಳುತ್ತಿರುವುದು ಸತ್ಯವೆಂದಾದರೆ ಅದು ಮೂಸಾ(ಅ)ರ ಬಳಿಗೆ ಬಂದ ದೇವದೂತರೇ ಆಗಿದ್ದಾರೆ. ನಿಶ್ಚಯವಾಗಿಯೂ ನಿನ್ನ ಪತಿ ಸಂದೇಶವಾಹಕರಾಗಿದ್ದಾರೆ. ಆದ್ದರಿಂದ ದೃಢಚಿತ್ತತೆಯಿಂದ ಇರಲು ನಿನ್ನ ಪತಿಗೆ ಹೇಳು. ನನ್ನ ಶುಭಾಶಯಗಳನ್ನು ಅವರಿಗೆ ಹೇಳು” ಎಂದು ಹೇಳಿದರು.
ಖದೀಜ(ರ) ರು ಅಲ್ಲಿಂದ ಮನೆಗೆ ಮರಳಿ ಬಂದಾಗಲೂ ಪ್ರವಾದಿವರ್ಯರು(ಸ) ನಿದ್ದೆಯಿಂದ ಎಚ್ಚರಗೊಂಡಿರಲಿಲ್ಲ. ಅತೀವವಾದ ವಾತ್ಸಲ್ಯದ ಸ್ನೇಹದ ನೋಟವೊಂದನ್ನು ತನ್ನ ಸಂಗಾತಿಯೆಡೆಗೆ ಬೀರಿದರು. ಶಾಂತಚಿತ್ತದಿಂದ ನಿದ್ರಿಸುತ್ತಿದ್ದ ಪ್ರವಾದಿವರ್ಯರು(ಸ) ಒಮ್ಮೆಲೇ ಬೆಚ್ಚಿಬಿದ್ದಂತಾಗಿ ಎಚ್ಚರವಾದರು. ಆಗ ಉಸಿರಾಟದಲ್ಲಿ ತೀವ್ರತೆಯಿತ್ತು. ಅದು ಅವರ ಮುಖ ಭಾವದಲ್ಲಿ ಪ್ರಕಟವಾಗುತ್ತಿತ್ತು. ಹಣೆಯಲ್ಲಿ ಬೆವರ ಹನಿಗಳು ಮೂಡಲಾರಂಭಿಸಿತು. ತಕ್ಷಣ ಸಿಕ್ಕ ಅವಕಾಶ ಉಪಯೋಗಿಸಿದ ಖದೀಜರು ವರಕ ಬಿನ್ ನೌಫಲ್ ಹೇಳಿದ ವಿಚಾರವನ್ನೆಲ್ಲಾ ಹೇಳಿದರು. ತನ್ನ ಸಂಗಾತಿ ದಣಿವನ್ನು ಮನಗಂಡ ಖದೀಜರವರು ಮತ್ತೆ ನಿದ್ದೆ ಮಾಡುವಂತೆ ಸೂಚಿಸಿದರು. ಆಗ ಪ್ರವಾದಿ ಮುಹಮ್ಮದರು “ಪ್ರಿಯೆ, ಇನ್ನು ನಿದ್ದೆಯ ದಿನಗಳು ಮುಗಿಯಿತು. ಇನ್ನು ವಿಶ್ರಾಂತಿ ಎಂಬುದಿಲ್ಲ. ಜನರ ಬಳಿಗೆ ತೆರಳಲು ಅಲ್ಲಾಹನು ಆಜ್ಞಾಪಿಸಿದ್ದಾನೆ. ಆಗ ಅವತೀರ್ಣಗೊಂಡ ಸೂಕ್ತಗಳನ್ನು ಅವರಿಗೆ ಓದಿ ಕೇಳಿಸಿದರು.
“ಹೊದ್ದು ಮಲಗುವವರೇ! ಎದ್ದೇಳಿರಿ ಮತ್ತು ಎಚ್ಚರಿಸಿರಿ. ನಿಮ್ಮ ಪ್ರಭುವಿನ ಹಿರಿಮೆಯನ್ನು ಘೋಷಿಸಿರಿ. ಮತ್ತು ನಿಮ್ಮ ವಸ್ತ್ರಗಳನ್ನು ಶುಚಿಯಾಗಿರಿಸಿರಿ. ಮಾಲಿನ್ಯದಿಂದ ದೂರವಿರಿ, ಹೆಚ್ಚು ಪಡೆಯಲಿಕ್ಕಾಗಿ ಉಪಕಾರ ಮಾಡಬೇಡಿರಿ. ಮತ್ತು ನಿಮ್ಮ ಪ್ರಭುವಿಗಾಗಿ ತಾಳ್ಮೆ ವಹಿಸಿರಿ.” (ಪವಿತ್ರ ಕುರ್ಆನ್: 74: 1-7)
ಪ್ರವಾದಿವರ್ಯರು(ಸ) ಆಗಲೂ ಕಳವಳಗೊಂಡಿದ್ದರು. ಅವರು ಅಸಹಾಯಕತೆಯಿಂದ ತನ್ನ ಪತ್ನಿಯೆಡೆಗೆ ನೋಡುತ್ತಾ, “ಖದೀಜಾ, ನಾನು ಯಾರಿಗೆ ಮುನ್ನೆಚ್ಚರಿಕೆ ಕೊಡಲಿ? ನನಗೆ ಉತ್ತರ ನೀಡುವವರು ಯಾರು?” ಎಂದು ಕೇಳಿದರು.
ಅವರನ್ನು ಮತ್ತೆ ಸಾಂತ್ವನ ಪಡಿಸಿದ ಖದೀಜಾ ತನ್ನ ಇಸ್ಲಾಮ್ ಸ್ವೀಕಾರವನ್ನು ಘೋಷಿಸಿ ವಿಶ್ವಾಸವನ್ನು ಪ್ರಕಟಿಸಿದರು.
ಎಂದಿನಂತೆ ಒಮ್ಮೆ ಪ್ರವಾದಿವರ್ಯರು(ಸ) ಕಅಬಾಕ್ಕೆ ತೆರಳಿ ತವಾಫ್ ಮಾಡಿದರು. ಅದನ್ನು ಪೂರ್ತಿಗೊಳಿಸಿದ ಬಳಿಕ ಅದರ ಸಮೀಪ ಕುಳಿತಿದ್ದ ಅಂಧರಾಗಿದ್ದ ವರಕ ಬಿನ್ ನೌಫಲ್ರನ್ನು ಭೇಟಿಯಾದರು. ಆಗ ವರಕ ಬಿನ್ ನೌಫಲ್ “ನನ್ನ ಸಹೋದರ ಪುತ್ರಾ! ನೀನು ಅಲ್ಲಿ ಏನು ನೋಡಿದ್ದೆ. ಅವೆಲ್ಲವನ್ನೂ ನನ್ನೊಂದಿಗೆ ಹೇಳು. ಅಲ್ಲಿ ನೀನೇನು ಕೇಳಿದ್ದೆ? ಎಂದರು. ಆಗ ಪ್ರವಾದಿವರ್ಯರು ನಡೆದ ಘಟನೆಯನ್ನೆಲ್ಲಾ ವಿವರಿಸಿದರು. ಖದೀಜರಿಂದ ಅದೇ ಮಾತುಗಳನ್ನು ವರಕ ಆಲಿಸಿದ್ದರು. ಬಳಿಕ “ನೀನು ವಿಶ್ವನಾಯಕನಾಗುವಿ. ಆದರೆ ನೀವು ಯಾವುದನ್ನು ತಂದಿರುವಿರೋ ಅದನ್ನು ತಂದ ಯಾವ ವ್ಯಕ್ತಿಯನ್ನೂ ಜನರು ದ್ವೇಷಿಸದೆ ಬಿಟ್ಟಿಲ್ಲ. ನೀವು ಈ ಸಂದೇಶ ಪ್ರಚಾರದಲ್ಲಿ ಸಕ್ರಿಯರಾದಾಗ ನಿಮ್ಮನ್ನು ಜನರು ದ್ವೇಷಿಸುವರು. ಕಳ್ಳನೆಂದು ಜರೆಯುವರು. ಕೆಟ್ಟದ್ದಾಗಿ ವರ್ತಿಸುವರು. ನಾನು ಆ ವೇಳೆಗೆ ಬದುಕಿರುತ್ತಿದ್ದರೆ… ಅಲ್ಲಾಹನಿಗೆ ಗೊತ್ತು. ಖಂಡಿತವಾಗಿಯೂ ನಾನು ಅವನ ಮಾರ್ಗದಲ್ಲಿ ಸ್ಥಿರವಾಗಿರುತ್ತಿದ್ದೆ.’
ಆಗ ಪ್ರವಾದಿವರ್ಯರು(ಸ) ಆಶ್ಚರ್ಯದಿಂದ “ಏನು ಇವರು ನನ್ನನ್ನು ದೇಶದಿಂದ, ನಾನು ಹುಟ್ಟಿ ಬೆಳೆದ ಈ ಪ್ರದೇಶದಿಂದ ನಾನು ಹೆಚ್ಚು ಪ್ರೀತಿಸುವ ಗೌರವಿಸುವ ನನ್ನ ಜನಾಂಗ ನನ್ನನ್ನು ಹೊರ ಹಾಕುವುದೇ?” ಎಂದು ಕೇಳಿದರು.
“ಖಂಡಿತವಾಗಿಯೂ ತಮಗೆ ಆಜ್ಞಾಪಿಸಲಾದ ದೌತ್ಯ ನಿರ್ವಹಿಸಿದ ಪೂರ್ವ ಪ್ರವಾದಿಗಳೆಲ್ಲಾ ಅನೇಕ ರೀತಿಯ ಹಿಂಸೆ ದೌರ್ಜನ್ಯಗಳಿಗೆ ಗುರಿಯಾಗಿದ್ದಾರೆ. ತಮಗೂ ಆ ಅನುಭವ ಆಗಲಿದೆ” ಎಂದು ವರಕ ಹೇಳಿದರು. ಆಗ ತನಗೆ ದೊರೆತ ಹೊಣೆಗಾರಿಕೆಯ ಬಗ್ಗೆ ಅವರಿಗೆ ಹಿಂದಿಗಿಂತ ಘನತೆ, ಗೌರವ ವೃದ್ದಿಸಿತು. ಬಳಿಕ ವರಕ ಬಿನ್ ನೌಫಲ್ ಪ್ರವಾದಿವರ್ಯರ(ಸ) ಹಣೆಯನ್ನು ಚುಂಬಿಸಿದರು. ಶುಭ ಹಾರೈಸಿದರು. ಮುಹಮ್ಮದ್(ಸ)ರು ಸಂತೋಷದಿಂದ ಮನೆಯತ್ತ ಮರಳಿದರು.
IslamKannada News Portal


