Home / ಲೇಖನಗಳು / ರಾತ್ರಿ ನಮಾಝ್ ರೂಢಿಸಿಕೊಳ್ಳಿ

ರಾತ್ರಿ ನಮಾಝ್ ರೂಢಿಸಿಕೊಳ್ಳಿ

ಸಂಗ್ರಹ: ಎನ್.ಎಂ. ಪಡೀಲ್

ಅನ್ ಅಬೀ ಉಮಾಮತ್ ಅಲ್‍ಬಾಹಿಲೀ(ರ) ಖಾಲ: ಖಾಲ ರಸೂಲುಲ್ಲಾಹಿ ಸಲ್ಲಲ್ಲಾಹುವಲೈಹಿ ವಸಲ್ಲಮ ಅಲೈಕುಂ ಬಿಕಿಯಾಮಿಲ್ಲೈಲಿ ಫಿಇನ್ನಹು ದಅïಬು ಸ್ಸಾಲಿಹೀನ ಕಬ್‍ಲಕುಂ ವಇನ್ನ ಕಿಯಾಮುಲ್ಲೈಲಿ ಕುರ್‍ಬತ್ಗುಂ ಇಲಲ್ಲಾಹಿ ವಮನ್‍ಹಾತು  ಲಿನಿಲ್ ಇಸ್ಮಿ ವತಕ್‍ಫೀರುಲ್ಲಿ ಸಯ್ಯಿಅತಿ ವಮತ್‍ರದತುಲ್ಲಿದ್ದಾಇ ಅನಿಲ್ ಜಸದಿ. (ತಿರ್ಮಿದಿ)

ಅಬೂ ಉಮಾಮ(ರ) ರಿಂದ ವರದಿಯಾಗಿದೆ. ಅಲ್ಲಾಹನ ಪ್ರವಾದಿ ಹೇಳಿದರು: “ನೀವು ರಾತ್ರಿ ನಮಾಝ್ ನಿರ್ವಹಿಸುತ್ತಲಿರಿ. ಅದು ಪೂರ್ವಿಕರಾದ ಸಜ್ಜನರ ರೀತಿಯಾಗಿದೆ. ಅದು ಅಲ್ಲಾಹನ ಸಾಮಿಪ್ಯವನ್ನು ಗಳಿಸಿಕೊಡುತ್ತದೆ. ಕೆಡುಕನ್ನು ತಡೆಯುತ್ತದೆ. ಪಾಪಗಳಿಗೆ ಪ್ರಾಯಶ್ಚಿತ್ತವಾಗುತ್ತದೆ. ರೋಗಗಳಿಂದ ಶರೀರವನ್ನು ರಕ್ಷಿಸುತ್ತದೆ.”  (ತಿರ್ಮಿದಿ, ಅಲ್ಬಾನಿ ಸ್ವಹೀಹುಲ್ ಜಾಮಿಇಯಿಂದ ಉಲ್ಲೇಖಿ)

ಈ ಹದೀಸ್ ರಾತ್ರಿ ನಮಾಝ್‍ನ ಪ್ರಾಮುಖ್ಯತೆಯನ್ನೂ, ಅದರಿಂದುಂಟಾಗುವ ಆಧ್ಯಾತ್ಮಿಕ ಹಾಗೂ ಭೌತಿಕ ಪ್ರಯೋಜನಗಳನ್ನೂ ವಿವರಿಸಿಕೊಡುತ್ತದೆ.
ರಾತ್ರಿ ನಮಾಝ್ (ಕಿಯಾಮುಲ್ಲೈಲ್) ವಿಶ್ವಾಸಿಗಳಿಗೆ ಐಚ್ಛಿಕ ಕರ್ಮವಾಗಿದೆ. ರಾತ್ರಿ ನಮಾಝನ್ನು ನಿರಂತರವಾಗಿ ನಿರ್ವಹಿಸುವುದು ಆಧ್ಯಾತ್ಮಿಕ ಭಾವದ ಹೆಚ್ಚಳಕ್ಕೆ ಹಾಗೂ ಇಹಪರ ವಿಜಯಕ್ಕೆ ಕಾರಣವಾಗುತ್ತದೆ.

ರಾತ್ರಿಯ ಪ್ರಶಾಂತತೆಯಲ್ಲಿ ಅಲ್ಲಾಹನಿಗೆ ತನ್ನನ್ನು ಅರ್ಪಿಸಿ, ಅವನೊಡನೆ ಇಹಪರ ಸೌಭಾಗ್ಯವನ್ನು ಅಪೇಕ್ಷಿಸುವ ಸುವರ್ಣ ಗಳಿಗೆಯದು. ಅಲ್ಲಾಹನೊಂದಿಗೆ ಮನಸ್ಸನ್ನು ಕೇಂದ್ರೀಕರಿಸಲು ರಾತ್ರಿ ನಮಾಝ್ ಸಹಾಯಕವಾಗಿದೆ. ಕರುಣಾನಿಧಿಯಾದ ಅಲ್ಲಾಹನ ನೈಜ ದಾಸರ ಲಕ್ಷಣವು  ಅವರು ತಮ್ಮ ಪ್ರಭುವಿನ ಮುಂದೆ ಸಾಷ್ಟಾಂಗವೆರಗುತ್ತಲೂ ರಾತ್ರಿಯನ್ನು ಕಳೆಯುವವರಾಗಿದ್ದಾರೆ.

ಹಸನ್ ಬಸ್ವರಿ(ರ) ಹೇಳುತ್ತಾರೆ, “ರಾತ್ರಿ ನಮಾಝ್ ನಿರ್ವಹಿಸುವವರು ರಹ್ಮಾನನಾದ ಅಲ್ಲಾಹನೊಂದಿಗೆ ಏಕಾಂತದಲ್ಲಿರುತ್ತಾರೆ. ಹೀಗೆ ಅಲ್ಲಾಹನು  ಅವರನ್ನು ತಮ್ಮ ಪ್ರಕಾಶದಿಂದ ಸುತ್ತವರಿಯುತ್ತಾನೆ.” ಕಿಯಾಮುಲ್ಲೈಲ್‍ನ ಮೂಲಕ ಅಲ್ಲಾಹನೊಂದಿಗಿನ ರಹಸ್ಯ ಸಂಭಾಷಣೆಯ ಸಿಹಿಯನ್ನು ಅನುಭವಿಸುತ್ತೇವೆ.

ಹಗಲಿನ ನಿಬಿಡ ಜೀವನದಿಂದ ಬಿಡುವು ಪಡೆದ ವಿಶ್ವಾಸಿಗೆ ರಾತ್ರಿ ಸ್ವಲ್ಪ ಸಮಯ ತನ್ನ ಪ್ರಭುವಿನೊಂದಿಗೆ ಸಂವಾದ ನಡೆಸಲು ಸಾಧ್ಯವಾಗಬೇಕು. ಅದು ಅವನ ಜೀವನಕ್ಕೆ ಯಶಸ್ಸಿಗೆ ಕಾರಣವಾಗುತ್ತದೆ. ಜ್ಞಾನಿಗಳು, ಅಜ್ಞಾನಿಗಳು ಸಮಾನರಾಗಲು  ಸಾಧ್ಯವಿಲ್ಲವೆಂಬಂತೆ, ರಾತ್ರಿ ವೇಳೆಗಳಲ್ಲಿ ಸಾಷ್ಟಾಂಗ ಮಾಡುವವರೂ, ನಿಂತುಕೊಂಡು ಅಲ್ಲಾಹನೊಂದಿಗೆ ವಿನಯದೊಂದಿಗೆ ಪ್ರಾರ್ಥಿಸುವವರೂ ಹಾಗೆ ಮಾಡದವರೂ ಸಮಾನರಾಗಲು ಸಾಧ್ಯವಿಲ್ಲವೆಂದು ಪವಿತ್ರ ಕುರ್‍ಆನ್ ಎಚ್ಚರಿಸುತ್ತದೆ.  (ಅಝ್ಝುಮರ್) ಆದ್ದರಿಂದ ಪ್ರವಾದಿ(ಸ)ರು ಹೇಳುತ್ತಾರೆ, ಕಡ್ಡಾಯ ನಮಾಝ್‍ನ ಬಳಿಕದ ನಮಾಝ್‍ಗಳಲ್ಲಿ ರಾತ್ರಿ ನಮಾಝ್ ಅತ್ಯಂತ ಶ್ರೇಷ್ಠವಾಗಿದೆ. (ಮುಸ್ಲಿಮ್)

ಕುರ್‍ಆನ್ ಆಶಯಗಳನ್ನು ಅರ್ಥೈಸಿಕೊಂಡು, ಚಿಂತನೆ ನಡೆಸಿಯೂ ಸಾವಕಾಶದಿಂದ  ಓದಲು ರಾತ್ರಿಯ ನಮಾಝ್‍ನಲ್ಲಿ ಸಾಧ್ಯವಾಗುತ್ತದೆ. ಪ್ರವಾದಿ(ಸ)ರ ಚರ್ಯೆಯೂ ಅದೇ ರೀತಿಯಾಗಿತ್ತು. ಒಮ್ಮೆ ಪ್ರವಾದಿ(ಸ)ರು ಸ್ವರ್ಗದ ಕುರಿತು ಸೂಕ್ತಗಳನ್ನು ಪಠಿಸುತ್ತಿರುವಾಗ ಸ್ವರ್ಗದ ಹಣ್ಣುಗಳನ್ನು ಕಿತ್ತು ತೆಗೆಯುವಂತೆ ತನ್ನ ಕರಗಳನ್ನು  ಚಾಚಿದ್ದರು.

ರಾತ್ರಿ ನಮಾಝ್ ವಿಶ್ವಾಸಿಗಳ ಜೀವನ ಚರ್ಯೆಯಾಗಿ ಬದಲಾಗಬೇಕಾದರೆ ಅದು ಅವರ ಭಾವನೆಯಾಗಿ ಮಾರ್ಪಡಬೇಕು. ರಾತ್ರಿ ದೀರ್ಘ ಹೊತ್ತು ನಮಾಝ್ ಮಾಡುವ ಪ್ರವಾದಿ(ಸ) ರೊಂದಿಗೆ ಖದೀಜಾ(ರ) ಕೇಳಿದರು: “ಪ್ರವಾದಿವರ್ಯರೇ,  ಶರೀರಕ್ಕೆ ಸ್ವಲ್ಪ ವಿಶ್ರಾಂತಿ ದೊರೆಯಲು ರಾತ್ರಿ ಸ್ವಲ್ಪ ನಿದ್ರಿಸಬಾರದೆ?” ಆಗ ಅವರು ಹೇಳಿದರು; “ಖದೀಜಾ, ನಿದ್ರಿಸುವ ಸಮಯವು ಮುಗಿದಿದೆ” ಎಂದಾಗಿದೆ. ಭಯ ಹಾಗೂ ನಿರೀಕ್ಷೆಯಿಂದ ತನ್ನ ಪ್ರಭುವಿನೊಂದಿಗೆ ಪ್ರಾರ್ಥಿಸಲು ತಾವು ನಿದ್ರಿಸಿದ ಸ್ಥಳದಿಂದ ವಿಶ್ವಾಸಿಗಳ ಪಾಶ್ರ್ವಗಳು ಬಿಟ್ಟಗಲುವುದು ಎಂದು ಪವಿತ್ರ ಕುರ್‍ಆನ್ ವಿಶ್ವಾಸಿಗಳನ್ನು ವರ್ಣಿಸುತ್ತದೆ. (ಅಸ್ಸಜ್‍ದಾ: 16)

ರಾತ್ರಿಯ ಸ್ವಲ್ಪ ಭಾಗವೇ ಮುತ್ತಕೀಗಳು ನಿದ್ರಿಸುತ್ತಾರೆ. ಪ್ರವಾದಿಯವರು(ಸ) ಹೇಳಿರುವರು: “ಅನುಗ್ರಹಗಳ ಧಾತನೂ, ಉನ್ನತನೂ ಆದ ಅಲ್ಲಾಹನು ಎಲ್ಲಾ ರೀತಿಯಲ್ಲೂ, ಅದರ ಮೂರನೇ ಒಂದು ಭಾಗ ಉಳಿದಿರುವ ಸಮಯದಲ್ಲಿ ಸಮೀಪದ ಆಕಾಶವನ್ನು ಬಿಡುತ್ತಾನೆ. ನಂತರ ಆತ ಕೇಳುತ್ತಾನೆ, ನನ್ನನ್ನು ಕರೆದು ಪ್ರಾರ್ಥಿಸುವವರು ಯಾರಿದ್ದಾರೆ? ನಾನವನಿಗೆ ಉತ್ತರ  ನೀಡುವೆನು. ನನ್ನೊಡನೆ ಕೇಳುವವನು ಯಾರಿದ್ದಾನೆ. ನಾನು ಅದನ್ನು ಅವನಿಗೆ ನೀಡುತ್ತೇನೆ, ನನ್ನೊಂದಿಗೆ ಪಾಪ ವಿಮೋಚನೆಗಾಗಿ ಮೊರೆಯಿಡುವವನಾರು? ನಾನವನನ್ನು ಕ್ಷಮಿಸುತ್ತೇನೆ.” (ಮುಸ್ಲಿಮ್)

ಇನ್ನೊಂದು ಪ್ರವಾದಿ ವಚನ ಹೀಗಿದೆ: “ರಾತ್ರಿ  ಒಂದು ಪ್ರತ್ಯೇಕವಾದ ಸಮಯವಿದೆ. ಮುಸ್ಲಿಮನಾದ ಓರ್ವನು ಅಲ್ಲಾಹನೊಂದಿಗೆ ಇಹಪರ ವಿಷಯಗಳಲ್ಲಿ ಒಳಿತನ್ನು ಕೇಳುವ ಸಮಯವು ಅದಾದರೆ ಅಲ್ಲಾಹನು ಅದನ್ನು ಅವನಿಗೆ ನೀಡದಿರುವುದಿಲ್ಲ. ಎಲ್ಲಾ ರಾತ್ರಿಯಲ್ಲಿಯೂ ಹೀಗೆ ಇದೆ.”  (ಮುಸ್ಲಿಮ್)

ಪ್ರವಾದಿ(ಸ) ತನ್ನ ಪುತ್ರಿ ಫಾತಿಮ(ರ)ರ ಮತ್ತು ಅಲಿ(ರ)ರ ಮನೆಗೆ ಒಂದು ರಾತ್ರಿ ಹೋಗಿ ಕೇಳಿದರು: “ನೀವೀರ್ವರೂ ನಮಾಝ್ ಮಾಡುವುದಿಲ್ಲವೇ?” (ಮುಸ್ಲಿಮ್).

ಪ್ರವಾದಿ(ಸ)ರು ಅಮ್ರ್ ಇಬ್ನುಲ್ ಆಸ್‍ರೊಂದಿಗೆ ಹೇಳಿದರು, “ಅಲ್ಲಾಹನಿಗೆ ಅತ್ಯಂತ  ಇಷ್ಟವಾದ ನಮಾಝ್ ದಾವೂದ್(ಅ)ರ ನಮಾಝ್ ಆಗಿದೆ. ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿದ್ದ ಉಪವಾಸವೂ ಅವರದ್ದೇ ಆಗಿತ್ತು. ಅವರು ರಾತ್ರಿಯ ಅರ್ಧಭಾಗ ನಿದ್ರಿಸುತ್ತಲೂ, ಮೂರರಲ್ಲಿ ಒಂದು ಭಾಗ ನಮಾಝ್ ನಿರ್ವಹಿಸುತ್ತಲೂ, ಪುನಃ  ಆದರಲ್ಲೊಂದು ಭಾಗ ನಿದ್ರಿಸುತ್ತಿದ್ದರು- ಒಂದು ದಿನ ಉಪವಾಸ ಆಚರಿಸುತ್ತಲೂ, ಇನ್ನೊಂದು ದಿನ ಉಪವಾಸ ಆಚರಿಸದೆ ಇರುತ್ತಿದ್ದರು.” (ಮುಸ್ಲಿಮ್)

ಇಲ್ಲಿ ಸುನ್ನತ್ ಉಪವಾಸದ ಕುರಿತು ಹೇಳಲಾಗಿದೆ. ರಾತ್ರಿ ಎದ್ದು ವುಝೂ ಮಾಡಿ ನಮಾಝ್  ಮಾಡುವುದಾದರೆ ಅವನಿಗೆ ಉತ್ಸಾಹ ಹಾಗೂ ಮನ ಸಂತೃಪ್ತಿಯೊಂದಿಗೆ ಪ್ರಭಾತಕ್ಕೆ ಪ್ರವೇಶಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅವನು ಸೋಮಾರಿಯೂ, ನಿರುತ್ಸಾಹವುಳ್ಳವನೂ ಆಗಿ ಪ್ರಭಾತವನ್ನು ಪ್ರವೇಶಿಸುತ್ತಾನೆ ಎಂದು ಪ್ರವಾದಿ(ಸ)ರು ಹೇಳಿರುವರು.

ರಾತ್ರಿ ನಮಾಝ್ ನಮ್ಮ ಜೀವನದ ಶೈಲಿಯಾಗಬೇಕು. ಪ್ರವಾದಿ(ಸ)ರು ಅಬ್ದುಲ್ಲಾ ಹಿಬ್ನು ಅಮ್ರ್ ಇಬ್ನು ಆಸ್‍ರೊಂದಿಗೆ ಹೇಳಿದರು: “ಅಬ್ದುಲ್ಲಾ, ನೀನು ಆ ವ್ಯಕ್ತಿಯಂತೆ ಆಗಬಾರದು. ಆತ ರಾತ್ರಿ ನಮಾಝ್ ನಿರ್ವಹಿಸುತ್ತಿದ್ದ. ಆದರೆ ನಂತರ ಅದನ್ನು ಉಪೇಕ್ಷಿಸಿದ.” (ಮುಸ್ಲಿಮ್)

ಬೆಳಿಗ್ಗೆ ಆಗುವವರೆಗೆ ಮಲಗುತ್ತಿದ್ದ ಓರ್ವ ವ್ಯಕ್ತಿಯ ಕುರಿತು ಪ್ರವಾದಿ(ಸ)ರೊಂದಿಗೆ ಹೇಳಿದಾಗ ಅವರು ಉತ್ತರಿಸಿದರು: “ಅವನ ಎರಡು ಕಿವಿಗಳಲ್ಲಿಯೂ ಪಿಶಾಚಿ ಮೂತ್ರ ಮಾಡಿದ್ದಾನೆ.” (ಬುಖಾರಿ, ಮುಸ್ಲಿಮ್).

ರಾತ್ರಿ ನಮಾಝ್ ಸ್ವರ್ಗ ಪ್ರವೇಶಕ್ಕೆ ಕಾರಣವಾಗುತ್ತದೆ.
ಪ್ರವಾದಿ(ಸ)ರು ಹೇಳಿರುವರು: “ಜನರೇ, ನೀವು ಸಲಾಮ್ ವ್ಯಾಪಕಗೊಳಿಸಿ, ಬಡವರಿಗೆ ಆಹಾರ ನೀಡುತ್ತಲೂ, ಜನರು ನಿದ್ರಿಸುವ ಸಮಯದಲ್ಲಿ ನಮಾಝ್ ಮಾಡಿ. ಹಾಗಾದರೆ ನೀವು ನಿರ್ಭಯರಾಗಿ ಸ್ವರ್ಗ ಪ್ರವೇಶಿಸಲು ಸಾಧ್ಯವಾಗುವುದು.”  (ತಿರ್ಮಿದಿ)

ರಾತ್ರಿ ನಮಾಝ್‍ಗಾಗಿ ಪತಿ-ಪತ್ನಿಯರು ಪರಸ್ಪರ ಎಬ್ಬಿಸಬೇಕೆಂದು ಪ್ರವಾದಿ(ಸ)ರ ಹದೀಸ್‍ಗಳಲ್ಲಿ ಕಾಣಲು ಸಾಧ್ಯವಿದೆ. ಪ್ರವಾದಿ(ಸ) ಹೇಳಿದರು: “ರಾತ್ರಿಯಲ್ಲಿ ಸಂಗಾತಿಯನ್ನು ಎಬ್ಬಿಸಿ ಒಬ್ಬರೋ ಅಥವಾ ಅವರೀರ್ವರೂ ಒಟ್ಟಾಗಿ ಎರಡು ರಕಅತ್  ನಮಾಝ್ ನಿರ್ವಹಿಸುತ್ತಾರೆಂದಾದರೆ ಅಲ್ಲಾಹನನ್ನು ಸ್ಮರಿಸುವವರಾಗಿ ಅವರ ಬಗ್ಗೆ ದಾಖಲಿಸಲಾಗುವುದು.” (ಅಬೂ ದಾವೂದ್)

ಇನ್ನೊಮ್ಮೆ ಪ್ರವಾದಿ(ಸ)ರು ಹೇಳಿದರು: “ರಾತ್ರಿ ಎದ್ದು ನಮಾಝ್ ಮಾಡಿದವನನ್ನೂ, ಪತ್ನಿಯನ್ನು ಎಬ್ಬಿಸಿದ್ದಾಗ ಅವಳು ಏಳದಿದ್ದರೆ ಅವಳ ಮುಖಕ್ಕೆ ನೀರು ಚಿಮುಕಿಸಿ ಎಬ್ಬಿಸುವವನನ್ನು ಅಲ್ಲಾಹನು ಅನುಗ್ರಹಿಸಲಿ. ಹೀಗೆ ರಾತ್ರಿ ಎದ್ದು ನಮಾಝ್ ಮಾಡಿ ಪತಿಯನ್ನು ಎಬ್ಬಿಸಿ, ಆತ ಏಳಲು ಒಪ್ಪದಿದ್ದರೆ ಅವನ ಮುಖಕ್ಕೆ ನೀರು ಚಿಮುಕಿಸಿ ಎಬ್ಬಿಸುವವಳನ್ನು ಅಲ್ಲಾಹನು ಅನುಗ್ರಹಿಸಲಿ.” (ಅಬೂದಾವೂದ್)

ರಾತ್ರಿ ನಮಾಝ್‍ನ ಕುರಿತು ಸಹಾಬಿಗಳ ಮುತುರ್ವರ್ಜಿ ಬಹಳ ಆಶ್ಚರ್ಯದಾಯಕವಾಗಿದೆ. ಒಂದು ಯುದ್ಧದ ವೇಳೆಯಲ್ಲಿ ಅಬ್ಬಾದುಬ್ನು ಬಶರ್(ರ)ರು ಮುಸ್ಲಿಮ್ ಸೇನೆಯ ಕಾವಲುಗಾರರಾಗಿದ್ದರು. ರಾತ್ರಿ ನಮಾಝ್ ನಿರ್ವಹಿಸುತ್ತಿದ್ದ ಅವರ ಮೇಲೆ ಶತ್ರುವೊಬ್ಬ ಬಾಣ ಎಸೆದ. ಅವರ ಕೈಗೆ ತಾಗಿತು. ಅದನ್ನು ಕಿತ್ತೆಸೆದ ಬಳಿಕ ಅವರು ಪುನಃ ನಮಾಝ್ ಮುಂದುವರಿಸಿದರು. ಗಾಯವೋ, ರಕ್ತವೋ, ನೋವೋ ಯಾವುದೂ ಅವರಿಗೆ ಸಮಸ್ಯೆಯಾಗಲಿಲ್ಲ. ಅವರು ಅಷ್ಟೊಂದು ಏಕಾಗ್ರತೆಯಿಂದ  ನಮಾಝ್ ನಿರ್ವಹಿಸುತ್ತಿದ್ದರು. ಪುನಃ ಎರಡು ಬಾರಿ ಶತ್ರುಗಳು ಅವರ ಮೇಲೆ ಬಾಣ ಎಸೆದರು. ಅದೂ ಅವರ ತೋಳಿಗೆ ತರಚಿತು. ಹಾಗಿದ್ದರೂ ನಮಾಝ್ ಮುಂದುವರಿಸಿದರು. ರುಕೂಅï, ಸುಜೂದ್ ಎಲ್ಲವನ್ನೂ ಮುಗಿಸಿ ಸಲಾಮ್ ಹೇಳಿದರು.  ಬಳಿಕ ಕಾವಲು ಕಾಯುವ ನಂತರದ ಸರದಿಯ ವ್ಯಕ್ತಿಯನ್ನು ಎಬ್ಬಿಸಿದ ಬಳಿಕ ತನ್ನ ಕೆಲಸದಿಂದ ನಿರ್ಗಮಿಸಿದರು. ಆಗ ಆ ವ್ಯಕ್ತಿ ಕೇಳಿದರು: “ಮೊದಲ ಬಾರಿಗೆ ಬಾಣ ಎಸೆದಾಗ ನನ್ನನ್ನು ಏಕೆ ಎಬ್ಬಿಸಲಿಲ್ಲ? ಅಬ್ಬಾದ್ ಹೇಳಿದರು; “ನಾನು ಪವಿತ್ರ  ಕುರ್‍ಆನ್ ಓದುತ್ತಾ ನಮಾಜ್ ನಿರ್ವಹಿಸುತ್ತಿದ್ದೆ. ಅದು ಭಂಗವಾಗುವುದು ನನಗೆ ಇಷ್ಟವಾಗಲಿಲ್ಲ. ನನ್ನ ರೂಹ್ ಹೋಗುವುದಕ್ಕಿಂತಲೂ ನಾನು ಆ ಎರಡು ರಕಅತ್ ಪೂರ್ತಿಗೊಳಿಸುವುದನ್ನು ಇಷ್ಟಪಟ್ಟೆ.”

ಉಮರ್(ರ)ರ ಕಣ್ಣಿನ ಕೆಳಗೆ ಕಪ್ಪಾದ ಎರಡು ಕಲೆಗಳು ಗೋಚರಿಸಿತು. ರಾತ್ರಿ ಎದ್ದು ಅತ್ತು ನಮಾಝ್ ಮಾಡುವಾಗ ಕಣ್ಣೀರು ಹರಿದು ಉಂಟಾದ ಕಲೆಯಾಗಿತ್ತು ಅದು. ಅವರು ರಾತ್ರಿ ನಮಾಜ್ ಮಾಡಿ, ಕುಟುಂಬದವರನ್ನು ಎಬ್ಬಿಸಿದ ಬಳಿಕ `ಸ್ವಕುಟುಂಬವನ್ನು ನಮಾಝ್‍ಗಾಗಿ ಆದೇಶಿಸುತ್ತಾ ಸ್ವಯಂ ಅದನ್ನು ಸ್ಥಿರಗೊಳಿಸಬೇಕು” ಎಂಬ ಸೂರಃ ತ್ವಾಹಾದ ಸೂಕ್ತವನ್ನು ಕೇಳಿಸುತ್ತಿದ್ದರು.

ಅನಸ್ ಇಬ್ನು ಮಾಲಿಕ್(ರ) ರಾತ್ರಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿ, ಮೊದಲ ಭಾಗದಲ್ಲಿ ರಾತ್ರಿ  ನಮಾಝ್ ನಿರ್ವಹಿಸಿ, ಎರಡನೇ ಭಾಗದಲ್ಲಿ ಪತ್ನಿಯನ್ನು ಎಬ್ಬಿಸಿ ನಮಾಝ್ ನಿರ್ವಹಿಸುವಂತೆ ಹೇಳಿ, ಮೂರನೇ ಭಾಗದಲ್ಲಿ ಪತ್ನಿ ಅವರ ಏಕ ಮಗಳನ್ನು ಎಬ್ಬಿಸಿ ನಮಾಝ್ ಮಾಡಿಸುತ್ತಲೂ ಇದ್ದರು. ಅವರ ಪತ್ನಿ ಮರಣ ಹೊಂದಿದ ಬಳಿಕ  ರಾತ್ರಿಯ ಸಮಯವನ್ನು ಎರಡಾಗಿ ವಿಂಗಡಿಸಿ ಮೊದಲನೆಯ ಭಾಗದಲ್ಲಿ ತಾನು ನಮಾಝ್ ನಿರ್ವಹಿಸಿ, ಎರಡನೇ ಭಾಗದಲ್ಲಿ ಮಗಳನ್ನು ಎಬ್ಬಿಸುತ್ತಿದ್ದರು. ಅನಸ್(ರ)ರು ಮರಣ ಹೊಂದಿದ ಬಳಿಕ ಮಗಳು ರಾತ್ರಿಯಿಡೀ ಎದ್ದು ನಮಾಝ್  ಮಾಡುವುದನ್ನು ರೂಢಿಸಿಕೊಂಡರು.

ಹಸನುಬ್ನು ಅಲಿ(ರ) ಹೇಳಿದರು, “ರಾತ್ರಿ ಎದ್ದು ನಮಾಝ್ ನಿರ್ವಹಿಸಲು, ಹಗಲಿನಲ್ಲಿ ಉಪವಾಸ ಆಚರಿಸಲು ಸಾಧ್ಯವಾಗದವರು ದೌರ್ಭಾಗ್ಯವಂತರು. ಅವನ ಪಾಪಗಳ ಆಧಿಕ್ಯವು ಅವನನ್ನು ಅದರಿಂದ ತಡೆದಿದೆ.” ಉಮರ್(ರ) ಹೇಳುತ್ತಾರೆ: “ಈ  ಲೋಕದ ಆಸ್ವಾದನೆಗಳು ಮೂರು ಆಗಿದೆ. ರಾತ್ರಿ ನಮಾಝ್, ಸಹೋದರನನ್ನು ಭೇಟಿ ಮಾಡುವುದು, ಸಂಘಟಿತ ನಮಾಝ್” ಎಂಬುದಾಗಿದೆ.

“ಹುದೈಲುಬ್ನು ಇಯಾದ್(ರ)ರು ಸೂರ್ಯನು ಅಸ್ತಮಿಸಿ, ಕತ್ತಲು ಆವರಿಸಿದಾಗ ಸಂತೋಷ ಪಡುತ್ತಿದ್ದರು. ಜನರು ಮಲಗಲು, ತನಗೆ ಅಲ್ಲಾಹನೊಂದಿಗೆ ಭೇಟಿಯಾಗಲು ಅವರು ಉತ್ಸಾಹ ಪಡುತ್ತಿದ್ದರು. ಇಬ್ನುಲ್ ಖಯ್ಯಮ್ ಹೇಳುತ್ತಾರೆ: “ನಾಲ್ಕು  ವಿಷಯಗಳು ಉಪ ಜೀವನ (ರಿಸ್ಕ್) ನೀಡುವುದು. ರಾತ್ರಿ ನಮಾಝ್ ರಾತ್ರಿ ಪಾಪವಿಮೋಚನೆಗಾಗಿ ಪ್ರಾರ್ಥನೆ, ದಾನ-ಧರ್ಮ ಮಾಡುವುದರ ಸಂತೋಷ, ಪ್ರಭಾತ ಹಾಗೂ ಪ್ರದೋಷದ ದೇವ ಸ್ಮರಣೆಗಳಾಗಿವೆ ಅದು. ಶರೀರದ ಆರೋಗ್ಯ  ಉಳಿಸಿಕೊಳ್ಳಲು, ಈಮಾನ್ ಉಳಿಸಲು, ರಾತ್ರಿ ನಮಾಝ್ ಉಪಕಾರ ಪ್ರದವಾಗಿದೆಯೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ರಾತ್ರಿಯಲ್ಲಿ ನಿದ್ರಿಸಿದ ಬಳಿಕ ಎದ್ದು ಅಲ್ಲಾಹನೊಂದಿಗೆ ಇಹಪರ ಒಳಿತುಗಳು ಅಪೇಕ್ಷಿಸಿದರೆ ಅಲ್ಲಾಹನು ಅವನಿಗೆ ಅದನ್ನು ನೀಡದೆ ಇರುವುದಿಲ್ಲವೆಂದು ಪ್ರವಾದಿ ವಚನಗಳಿಂದ ಅರ್ಥಮಾಡಿಕೊಳ್ಳಬಹುದು. ಬೈಹಕಿ ವರದಿ ಮಾಡಿದ ಒಂದು ಹದೀಸ್‍ನಲ್ಲಿ  ಹೀಗಿದೆ: ಪ್ರವಾದಿ(ಸ) ಹೇಳಿದರು, “ನನ್ನ ಸಮುದಾಯದ ಶ್ರೇಷ್ಠರು ಕುರ್‍ಆನ್ ವಹಿಸಿ ಕೊಂಡವರೂ, ರಾತ್ರಿ ನಮಾಝ್ ನಿರ್ವಹಿಸುವವರೂ ಆಗಿದ್ದಾರೆ.” ರಾತ್ರಿ ನಮಾಝ್ ನಿರ್ವಹಿಸುವವನ ಮುಖವನ್ನು ಅಲ್ಲಾಹನು ಪ್ರಕಾಶಮಯಗೊಳಿಸುವನೆಂದು  ಸಈದುಬ್ನು ಮುಸಯ್ಯಬ್(ರ) ಹೇಳಿರುವರು. ರಾತ್ರಿ ನಮಾಝ್ ದೀರ್ಘವಾಗಿ ನಿರ್ವಹಿಸುವವನಿಗೆ ಅಂತ್ಯ ದಿನದ ಕಾಯುವಿಕೆಯನ್ನು ಲಘೂಕರಿಸಿ ಕೊಡಲಾಗುವುದೆಂದು ಇಮಾಮ್ ಔಸಾಈ ಹೇಳುತ್ತಾರೆ, ರಾತ್ರಿ ನಮಾಝನ್ನು ಜೀವನದ ಶೈಲಿಯಾಗಿ  ಬದಲಾಯಿಸಲು ರಮಝಾನ್ ತಿಂಗಳು ಪ್ರೇರಣೆ ನೀಡುತ್ತದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …