ಮೌ| ಮುಹಮ್ಮದ್ ಫಾರೂಕ್ ಖಾನ್
ಮಾನವನ ಸ್ವಾಭಾವಿಕ ಪ್ರತಿಭೆ ಮತ್ತು ಸಾಮಥ್ರ್ಯಗಳು ಬೆಳೆದು ಬರಲು ಮತ್ತು ಪೋಷಿಸಲ್ಪಡಲು ಶಿಕ್ಷಣ-ತರಬೇತಿಯ ಅಗತ್ಯ ಬಹಳವಿರುತ್ತದೆ. ಅದರ ಹೊರತು ಸಾಮಾನ್ಯವಾಗಿ ಮನಸ್ಸುಗಳ ಮೇಲೆ ಭೌತಿಕತೆ ಮತ್ತು ಲಾಭ ಬಡುಕತನವು ಪ್ರಭಾವ ಬೀರುತ್ತವೆ. ಅದು ವಸ್ತುಗಳನ್ನು ಅವುಗಳ ಸ್ವಾಭಾವಿಕ ಪರಿಶುದ್ಧತೆಯೊಂದಿಗೆ ನೋಡುವುದರಿಂದ ತಡೆಯುತ್ತದೆ. ಅದು ಜೀವನದ ಪ್ರಮುಖ ಮೌಲ್ಯ ಮತ್ತು ವಾಸ್ತವಿಕತೆಗಳನ್ನು ಅರಿಯುವುದರಿಂದಲೂ ತಡೆಯುತ್ತದೆ. ಉಪವಾಸ ವ್ರತವು ಒಂದು ಪವಿತ್ರವಾದ ಆರಾಧನೆಯಾಗಿರುವಂತೆಯೇ ನಮ್ಮ ಆಧ್ಯಾತ್ಮಿಕ ಮತ್ತು ನೈತಿಕ ತರಬೇತಿಯ ಅತ್ಯುತ್ತಮ ಮಾಧ್ಯಮವೂ ಆಗಿದೆ. ಉಪವಾಸ ವ್ರತದ ಮೂಲ ಉದ್ದೇಶ ಆತ್ಮದ ಪರಿಶುದ್ಧತೆ ಮತ್ತು ಧರ್ಮನಿಷ್ಠೆಯಾಗಿದೆ.
ಆದ್ದರಿಂದಲೇ ಪವಿತ್ರ ಕುರ್ಆನ್ ಹೇಳುತ್ತದೆ,
“ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮ ನಿಷ್ಠೆಯ ಗುಣವಿಶೇಷ ಉಂಟಾಗುವುದು ಎಂದು ಆಶಿಸಲಾಗಿದೆ.” (ಅಲ್ ಬಕರ: 183)
ಎಲ್ಲಿಯ ವರೆಗೆ ವ್ಯಕ್ತಿಯು ಆತ್ಮನಿಯಂತ್ರಣವನ್ನು ಹೊಂದುವುದಿಲ್ಲವೋ ಅಲ್ಲಿಯವರೆಗೆ ಅವನಲ್ಲಿ ಧರ್ಮನಿಷ್ಠೆಯು ಬೆಳೆದು ಬರಲಾರದು. ಚಿತ್ತಾಕಾಂಕ್ಷೆಗಳ ಪ್ರಭಾವದಲ್ಲಿರುವ ವ್ಯಕ್ತಿಗೆ ಅಲ್ಲಾಹನ ಮಹಾನತೆಯ ಪರಿವೆಯೂ ಇರುವುದಿಲ್ಲ ಮತ್ತು ಜೀವನದ ಉನ್ನತ ವಾಸ್ತವಿಕತೆಗಳನ್ನು, ಅಗತ್ಯಗಳನ್ನು ಗ್ರಹಿಸುವುದೂ ಇಲ್ಲ. ಅವನ ಚಿತ್ತಾಕಾಂಕ್ಷೆಗಳು ತನ್ನ ಸೃಷ್ಟಿಯ ವಾಸ್ತವಿಕ ಬೇಡಿಕೆಗಳ ಕಡೆಗೆ ಗಮನಹರಿಸುವುದರಿಂದ ಅವನನ್ನು ತಡೆಯುತ್ತವೆ. ಹೀಗೆ ಉಣ್ಣುವ, ಕುಡಿಯುವ ಮತ್ತು ಲೈಂಗಿಕ ಆಸೆಗಳ ಈಡೇರಿಕೆಗಳ ಹೊರತು ಇನ್ನೂ ಕೆಲವು ವಿಷಯಗಳು ನಮ್ಮ ಗಮನವನ್ನು ಬಯಸುತ್ತವೆ ಎಂಬುದನ್ನು ಉಪವಾಸ ವ್ರತವು ಪ್ರಾಯೋಗಿಕವಾಗಿ ತೋರಿಸಿಕೊಡುತ್ತದೆ. ಉಪವಾಸ ವ್ರತವು ದಾಸನನ್ನು ಅಲ್ಲಾಹನೆಡೆಗೆ ಮತ್ತು ಜೀವನದ ಉನ್ನತ ವಾಸ್ತವಿಕತೆಗಳ ಕಡೆಗೆ ಗಮನಹರಿಸುವಂತೆ ಮಾಡುತ್ತದೆ. ಅದು ದಾಸನನ್ನು ಏಕಾಂತತೆಯ ಉನ್ನತ ಸ್ಥಾನದೆಡೆಗೆ ಕೊಂಡೊಯ್ಯುತ್ತದೆ; ಅಲ್ಲಿಂದ ಅವನು ತನ್ನ ಪ್ರಭುವಿಗೆ ತೀರಾ ನಿಕಟನಾಗುತ್ತಾನೆ, ಅಲ್ಲಿ ಅಂಧಕಾರವು ಕರಗಿ ಹೋಗುತ್ತದೆ ಮತ್ತು ಆಧ್ಯಾತ್ಮಿಕವಾದ ಪರದೆಗಳೆಲ್ಲವೂ ಸರಿದು ಹೋಗುತ್ತವೆ.
ಈ ವಾಸ್ತವಿಕತೆಯನ್ನೇ ಉಲೆಮಾಗಳು ಈ ರೀತಿ ಬಣ್ಣಿಸಿದ್ದಾರೆ,
“ಎಷ್ಟೋ ಮಂದಿ ಉಪವಾಸವಿರಿಸಿರುವುದಿಲ್ಲ, ಅದರ ಹೊರತಾಗಿಯೂ ವಾಸ್ತವಿಕವಾಗಿ ಅವರು ಉಪವಾಸಿಗರಾಗಿರುತ್ತಾರೆ. ಅಂತೆಯೇ ಎಷ್ಟೋ ಮಂದಿ ಉಪವಾಸಿಗರಾಗಿರುತ್ತಾರೆ, ಆದರೆ ವಾಸ್ತವದಲ್ಲಿ ಅವರು ಉಪವಾಸದಲ್ಲಿರುವುದಿಲ್ಲ.”
ಉಪವಾಸ ವ್ರತವು ಮೇಲ್ನೋಟಕ್ಕೆ ಆಹಾರ-ಪಾನೀಯ ಸೇವನೆ ಮತ್ತು ಲೈಂಗಿಕೇಚ್ಛೆಯ ಈಡೇರಿಕೆಯಿಂದ ತಡೆದಿರಿಸಿಕೊಳ್ಳುವುದರ ಹೆಸರಾಗಿದೆ. ಆದರೆ ಆಂತರಿಕವಾಗಿ ಉಪವಾಸವು ವ್ಯಕ್ತಿಗೆ ಆಕಾಂಕ್ಷೆಗಳ ನಿಯಂತ್ರಣ ಮತ್ತು ಧರ್ಮ ನಿಷ್ಠೆಯ ಜೀವನ ಲಭಿಸುವುದರ ಹೆಸರಾಗಿದೆ. ಕೆಲವೊಮ್ಮೆ ವ್ಯಕ್ತಿಯು ಮೇಲ್ನೋಟಕ್ಕೆ ಉಪವಾಸಿಗನಾಗಿ ಕಾಣುತ್ತಾನೆ. ಆದರೆ ವಾಸ್ತವದಲ್ಲಿ ಅವನ ಉಪವಾಸವು ವ್ರತವಾಗಿರುವುದಿಲ್ಲ. ಅವನ ದೃಷ್ಟಿಯು ಕರ್ಮಶುದ್ಧವಾಗಿರುವುದೂ ಇಲ್ಲ, ಅವನ ಜೀವನವು ಪರಿಶುದ್ಧತೆ ಮತ್ತು ದೇವ ನಿಷ್ಠೆಯ ದರ್ಪಣವಾಗಿರುವುದೂ ಇಲ್ಲ.
ಉಪವಾಸ ವ್ರತಕ್ಕೆ ಪವಿತ್ರ ಕುರ್ಆನ್ ‘ಸೌಮ್’ ಎಂಬ ಪದ ಬಳಸಿದೆ. ಅದರ ಶಬ್ದಾರ್ಥವು ಪಥ್ಯ, ತಡೆದಿರಿಸುವುದು ಮತ್ತು ಮೌನ ಎಂದಾಗಿದೆ. ಇಮಾಮ್ ರಾಗಿಬ್(ರ) ಹೇಳುತ್ತಾರೆ, “ಸೌಮ್ನ ಮೂಲಾರ್ಥವು ಒಂದು ಕಾರ್ಯದಿಂದ ತನ್ನನ್ನು ತಡೆದುಕೊಳ್ಳುವುದಾಗಿದೆ. ಅದು ಆಹಾರ-ಪಾನೀಯ ಸೇವನೆಗೆ ಸಂಬಂಧಿಸಿರಲಿ ಅಥವಾ ನಡೆ-ನುಡಿಗೆ ಸಂಬಂಧಿಸಿರಲಿ. ಆದ್ದರಿಂದಲೇ ಕುದುರೆಯು ನಡೆಯುವುದನ್ನು ಅಥವಾ ಮೇಯುವುದನ್ನು ನಿಲ್ಲಿಸಿದಾಗ ಅದನ್ನು ‘ಸಾಇಮ್’ ಎಂದು ಹೇಳುತ್ತಾರೆ.
ಓರ್ವ ಕವಿ ಹೇಳುತ್ತಾರೆ, “ಖೈಲು ಸಿಯಾಮುನ್ ವ ಉಖ್ರಾ ಗೈರು ಸಾಇಮತಿನ್.” (ಕೆಲವು ಅಶ್ವಗಳು ಮೇಯುವುದಿಲ್ಲ, ಕೆಲವು ಮೇಯುತ್ತವೆ.) ಸ್ತಬ್ಧವಾಗಿರುವ ಗಾಳಿ ಮತ್ತು ಮಧ್ಯಾಹ್ನದ ಸಮಯವನ್ನೂ ‘ಸೌಮ್’ ಎನ್ನುತ್ತಾರೆ. ಸೂರ್ಯನು ಅಪರಾಹ್ನದ ವೇಳೆ ಆಕಾಶದಲ್ಲಿ ಸ್ವಲ್ಪ ಹೊತ್ತು ಸ್ತಬ್ಧವಾಗುತ್ತದೆ ಎಂಬ ಕಲ್ಪನೆಯಿಂದ ಹಾಗೆ ಹೇಳಲಾಗುತ್ತದೆ.”
ಈ ವಿವರಣೆಯಿಂದ, ಒಂದು ವಸ್ತುವಿನಿಂದ ತಡೆದುಕೊಳ್ಳುವುದಕ್ಕೆ ‘ಸೌಮ್’ ಆಗಿದೆ ಎಂದು ತಿಳಿದು ಬರುತ್ತದೆ. ಒಟ್ಟಿನಲ್ಲಿ ಉಪವಾಸ ವ್ರತದ ಸ್ಥಿತಿಯಲ್ಲಿ ಆಹಾರ-ಪಾನೀಯ ಸೇವನೆ ಮತ್ತು ಲೈಂಗಿಕೇಚ್ಛೆಯಿಂದ ತನ್ನನ್ನು ತಡೆದಿರಿಸಿಕೊಂಡಂತೆಯೇ, ಪಾಪ ಕಾರ್ಯ ಮತ್ತು ಅಪ್ರಿಯ ಚಟುವಟಿಕೆಗಳನ್ನು ಶಾಶ್ವತವಾಗಿ ತೊರೆಯುವ ವ್ಯಕ್ತಿಯೇ ನಿಜವಾದ ಉಪವಾಸಿಗ ಎನಿಸಿಕೊಳ್ಳುತ್ತಾನೆ.
ಉಪವಾಸ ವ್ರತ ಎಂಬುದು, ತನ್ನನ್ನು ಅಲ್ಲಾಹನಿಗಾಗಿ ಸಕಲ ವಸ್ತು-ವಿಷಯಗಳಿಂದ ಮುಕ್ತನಾಗುವ ಮತ್ತು ಪರಿಪೂರ್ಣವಾಗಿ ಅಲ್ಲಾಹನ ಕಡೆಗೆ ಗಮನ ಕೇಂದ್ರಿತನಾಗುವುದರ ಹೆಸರಾಗಿದೆ. ಈ ಅರ್ಥದಲ್ಲಿ ಉಪವಾಸ ವ್ರತಕ್ಕೂ ಇಅïತಿಕಾಫ್(ತಪ ಶ್ಚರ್ಯೆ)ಗೂ ಬಹಳ ಸಾಮ್ಯತೆ ಇದೆ. ಆದ್ದರಿಂದಲೇ ಇಅïತಿಕಾಫ್ನೊಂದಿಗೆ ಉಪವಾಸ ವ್ರತಾಚರಿಸುವುದು ಅಗತ್ಯವೆಂದು ಹೇಳಲಾಗಿದೆ. ಗತ ಧರ್ಮಶಾಸ್ತ್ರಗಳಲ್ಲಿ ವ್ರತಾಚರಣೆಯ ಸ್ಥಿತಿಯಲ್ಲಿ ಮಾತನಾಡುವು ದರಿಂದಲೂ ತಡೆದಿರಿಸಿಕೊಳ್ಳಲಾಗುತ್ತಿತ್ತು. ಈಸಾ(ಅ)ರ ಜನನದ ವೇಳೆ ಮರ್ಯಮ್(ಅ) ರವರು ಬಹಳ ಚಿಂತಿತರಾಗಿ, ನಾನು ಇದಕ್ಕಿಂತ ಮರಣ ಹೊಂದುತ್ತಿದ್ದರೆ ಮತ್ತು ಜನರು ನನ್ನನ್ನು ಮರೆತು ಬಿಡುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಹಲುಬುತ್ತಿದ್ದ ವೇಳೆ, ಅವರಿಗೆ ಹೀಗೆ ಸಾಂತ್ವನ ನೀಡಲಾಗಿತ್ತೆಂದು ಪವಿತ್ರ ಕುರ್ಆನಿನಲ್ಲಿ ಹೇಳಲಾಗಿದೆ,
“ನೀವು ಮಾನವರಾರನ್ನಾದರೂ ಕಂಡರೆ, ‘ನಾನು ಕರುಣಾನಿಧಿ (ಅಲ್ಲಾಹ್) ಗಾಗಿ ಉಪವಾಸ ವ್ರತದ ಹರಕೆ ಹೊತ್ತಿರುವುದರಿಂದ ಇಂದು ಯಾರೊಡನೆಯೂ ಮಾತನಾಡಲಾರೆ’ ಎಂದು (ಸಂಜ್ಞೆಯಿಂದ) ಹೇಳಿಬಿಡಿರಿ.” (ಮರ್ಯಮ್: 26)
ಉಪವಾಸ ವ್ರತದ ಸ್ಥಿತಿಯಲ್ಲಿ ಮಾನವನಿಗೆ ಬಹುತೇಕವಾಗಿ ದೇವಚರರ ಗುಣವಿಶೇಷವು ಲಭಿಸುತ್ತದೆ. ದೇವಚರರು ಆಹಾರ-ಪಾನೀಯ ಸೇವನೆಯಿಂದ ನಿರ ಪೇಕ್ಷರಾಗಿದ್ದಾರೆ. ಅಲ್ಲಾಹನ ಸ್ತುತಿ ಮತ್ತು ಕೀರ್ತನೆಗಳೇ ಅವರ ಆಹಾರವಾಗಿದೆ. ಉಪವಾಸ ವ್ರತಾಚರಣೆಯ ಸ್ಥಿತಿಯಲ್ಲಿ ವಿಶ್ವಾಸಿ ದಾಸನು ತನ್ನ ಚಿತ್ತಾಕಾಂಕ್ಷೆ ಮತ್ತು ಆಹಾರ-ಪಾನೀಯ ಸೇವನೆಯಿಂದ ದೂರವುಳಿದು, ದೇವನ ದಾಸ್ಯಾರಾಧನೆಯಲ್ಲಿ ತಲ್ಲೀನನಾಗಿರುತ್ತಾನೆ.
ಉಪವಾಸ ವ್ರತಾಚರಿಸುವುದರಿಂದ ವ್ಯಕ್ತಿಯು ತನ್ನ ಚಿತ್ತಾಕಾಂಕ್ಷೆಗಳನ್ನು ನಿಯಂತ್ರಿಸಲು ಶಕ್ತನಾಗುತ್ತಾನೆ. ಇನ್ನು ತನ್ನ ಚಿತ್ತವನ್ನು ಸೋಲಿಸಲಾಗದ ವ್ಯಕ್ತಿಯು ಸತ್ಯದ ಪರ ಮತ್ತು ಮಿಥ್ಯದ ವಿರುದ್ಧ ಸತತ ಪರಿಶ್ರಮ ಪಡುವನೆಂದು ನೀವು ನಿರೀಕ್ಷಿಸಲಾರಿರಿ. ಜಿಹಾದ್ಗೆ ಸಹನೆ ಮತ್ತು ನಿಶ್ಚಯದಾಢ್ರ್ಯ ಎರಡೂ ಅಗತ್ಯವಾಗಿದೆ. ಸಹನೆ ಮತ್ತು ದೃಢ ಸಂಕಲ್ಪವು ಉಪವಾಸ ವ್ರತದ ವಿಶೇಷತೆಗಳಲ್ಲಿ ಸೇರಿದೆ. ಆದ್ದರಿಂದಲೇ ಪ್ರವಾದಿವರ್ಯರು(ಸ) ಉಪವಾಸದ ತಿಂಗಳನ್ನು ‘ಸಹನೆಯ ತಿಂಗಳು’ ಎಂದು ಹೇಳಿರುವುದು. ರಮಝಾನ್ ತಿಂಗಳಲ್ಲಿ ನಿರಂತರವಾಗಿ ಒಂದು ತಿಂಗಳ ಕಾಲ ಸಹನೆ-ಸಂಯಮ ಮತ್ತು ದೇವಾನುಸರಣೆಯ ಅಭ್ಯಾಸ ಮಾಡಿಸಲಾಗುತ್ತದೆ.
ಉಪವಾಸ ವ್ರತವು ಒಂದು ಅತ್ಯಂತ ಪರಿಶುದ್ಧ ಆರಾಧನೆಯಾಗಿದೆ. ಉಪವಾಸ ವ್ರತವು ಅಲ್ಲಾಹನ ಮಹಾನತೆ ಮತ್ತು ಶ್ರೇಷ್ಠತೆಯ ದರ್ಶನ ಮತ್ತು ಕೃತಜ್ಞತಾರ್ಪಣೆಯ ಮಾಧ್ಯಮವಾಗಿದೆ. ಉಪವಾಸ ವ್ರತಕ್ಕೆ ಸಂಬಂಧಿಸಿ ಪವಿತ್ರ ಕುರ್ಆನಿನಲ್ಲಿ ‘ಲಅಲ್ಲಕುಮ್ ತತ್ತಕೂನ್’ (ನಿಮ್ಮಲ್ಲಿ ಧರ್ಮನಿಷ್ಠೆ ಉಂಟಾಗಲು) ಎಂದು ಹೇಳಿರುವಂತೆಯೇ ಹೀಗೂ ಉದ್ಧರಿಸಲಾಗಿದೆ, “ಸನ್ಮಾರ್ಗದರ್ಶನದ ಮೂಲಕ ನಿಮ್ಮನ್ನು ಪ್ರತಿಷ್ಠಿತಗೊಳಿಸಿದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾ ಅವನಿಗೆ ಕೃತಜ್ಞರಾಗಿರಲಿಕ್ಕಾಗಿಯೂ ಈ ವಿಧಾನವನ್ನು ತೋರಿಸಿ ಕೊಡಲಾಗಿದೆ.” (ಅಲ್ ಬಕರ: 185)
ಮಾನವ ಕುಲದ ಮೇಲೆ ಅಲ್ಲಾಹನ ಕೊಡುಗೆ ಅಪಾರವಾಗಿದೆ. ಆದರೆ ಎಲ್ಲಕ್ಕಿಂತಲೂ ಮಿಗಿಲಾದ ಕೊಡುಗೆಯು ಪವಿತ್ರ ಕುರ್ಆನ್ ನಂತಹ ಅನುಗ್ರಹವಾಗಿದೆ. ಪವಿತ್ರ ಕುರ್ಆನ್ ಮಾನವನಿಗೆ ಶಾಶ್ವತ ಜೀವನದ ದಾರಿಯನ್ನು ತೋರಿಸುತ್ತದೆ; ಮಾನವನು ಸಾಮಾನ್ಯ ಸ್ಥಿತಿಯಲ್ಲಿ ಕಲ್ಪಿಸಲೂ ಸಾಧ್ಯವಿಲ್ಲದಂತಹ ನೈತಿಕ ಔನ್ನತ್ಯವನ್ನು ತೋರಿಸಿ ಕೊಡುತ್ತದೆ. ಅಲ್ಲಾಹನ ಈ ಮಹಾನ್ ಕೊಡುಗೆಗೆ ಪ್ರತಿಯಾಗಿ ಮಾನವನು ಉಪವಾಸ ವ್ರತಾಚರಿಸುವ ಮೂಲಕ ಸಂತೋಷ ವ್ಯಕ್ತಪಡಿಸುವುದರ ಜೊತೆಗೆ ಕೃತಜ್ಞತೆಯನ್ನು ಅರ್ಪಿಸುತ್ತಾನೆ. ಮಾನವನು ಅಲ್ಲಾಹನ ದಾಸ ಮತ್ತು ಅವನ ಆರಾಧಕನಾಗಿದ್ದಾನೆ. ಅಲ್ಲಾಹ್ ಅವನ ಒಡೆಯ ಮತ್ತು ಆರಾಧ್ಯನಾಗಿದ್ದಾನೆ. ತನ್ನ ಪ್ರಭುವಿನೊಂದಿಗಿನ ಸಂಬಂಧವೇನಿದೆಯೋ ಅದನ್ನು ವ್ಯಕ್ತಪಡಿಸುವುದರಲ್ಲಿ ಮಾನವನಿಗೆ ಸಂತೊಷ ಮತ್ತು ಆನಂದ ಪ್ರಾಪ್ತವಾಗುತ್ತದೆ.
ಈ ಸಂಬಂಧವನ್ನು ವ್ಯಕ್ತಪಡಿಸುವುದು ವಸ್ತುತಃ ಅಲ್ಲಾಹನ ಕೊಡುಗೆಗಳನ್ನು ಕೊಂಡಾಡುವುದು ಕೂಡ ಆಗಿದೆ. ಅದುವೇ ಕೃತಜ್ಞತೆಯ ಮೂಲ ಬುನಾದಿಯಾಗಿದೆ. ರಮಝಾನ್ ತಿಂಗಳಲ್ಲಿ ಪವಿತ್ರ ಕುರ್ಆನ್ ಅವತೀರ್ಣ ಆರಂಭಗೊಂಡುದರಿಂದಲೇ ಉಪವಾಸ ವ್ರತಾಚರಿಸಲು ಅದೇ ತಿಂಗಳನ್ನು ಆಯ್ದುಕೊಳ್ಳಲಾಗಿದೆ. ಕುರ್ಆನ್ ಅವತರಣ ಮತ್ತು ಉಪವಾಸ ವ್ರತದಲ್ಲಿ ಬಹಳ ಸಾಮ್ಯತೆಗಳಿವೆ. ಯಾವ ಉದ್ದೇಶಗಳಿಗಾಗಿ ಪವಿತ್ರ ಕುರ್ಆನ್ ಅವತೀರ್ಣಗೊಂಡಿದೆಯೋ ಅವುಗಳನ್ನು ಗಳಿಸುವಲ್ಲಿ ಉಪವಾಸ ವ್ರತವು ಸಹಾಯಕವಾಗಿದೆ.
ರಮಝಾನಿನಲ್ಲಿ ಎಲ್ಲರೂ ಒಟ್ಟಿಗೆ ಉಪವಾಸ ವ್ರತಾಚರಿಸುವುದರಿಂದ ಧರ್ಮಶೀಲತೆ ಮತ್ತು ಆಧ್ಯಾತ್ಮಿಕತೆ ಬೆಳೆಯುತ್ತದೆ. ಅದು ಹೃದಯಗಳಲ್ಲಿ ಗಾಢವಾದ ಪ್ರಭಾವವನ್ನು ಬೀರುತ್ತದೆ. ಅದರಿಂದ ಅಂಜುಬುರುಕ ಮತ್ತು ದುರ್ಬಲ ಸಂಕಲ್ಪವಿರುವ ವ್ಯಕ್ತಿಗೂ ಧರ್ಮಶೀಲತೆ ಮತ್ತು ಧರ್ಮನಿಷ್ಠೆಯ ಹಾದಿಯಲ್ಲಿ ನಡೆಯುವುದು ಸುಲಭವಾಗುತ್ತದೆ. ತನ್ನ ಹೊಣೆಗಾರಿಕೆಯು ಉಪವಾಸದ ಬಾಹ್ಯ ಶಿಷ್ಟಾಚಾರವನ್ನು ಪಾಲಿಸುವುದಕ್ಕೆ ಸೀಮಿತವಾಗಿಲ್ಲ, ಬದಲಾಗಿ ಉಪವಾಸದ ಮೂಲ ಉದ್ದೇಶದಿಂದ ಅಲಕ್ಷ್ಯನಾಗಿರಬಾರದು ಎಂಬ ವಾಸ್ತವಿಕತೆಯನ್ನು ಅರಿತುಕೊಂಡವನೇ ವಿಜಯಿಯಾಗುವನು. ಉಪವಾಸದ ಮೂಲೋದ್ದೇಶ ಮತ್ತು ಅದರ ತಾತ್ಪರ್ಯವು ಕೇವಲ ಉಪವಾಸ ವ್ರತದ ಕಾಲಕ್ಕೆ ಸೀಮಿತವಾಗಿಲ್ಲ. ಬದಲಾಗಿ ಅದು ಮಾನವನ ಇಡೀ ಜೀವನಕ್ಕೆ ಅದು ಸಂಬಂಧಿಸಿದೆ. ಗತ ದೇವಗ್ರಂಥಗಳಲ್ಲಿಯೂ ಧರ್ಮನಿಷ್ಠೆ, ನಿಷ್ಕಳಂಕತೆ ಮತ್ತು ಉನ್ನತ ಚಾರಿತ್ರ್ಯದೊಂದಿಗೆ ಸಂಬಂಧಿಸಿರದ ಉಪವಾಸ ವ್ರತವನ್ನು ನಿರರ್ಥಕವೆಂದು ಸಾರಲಾಗಿದೆ.
“ನೋಡಿರಿ, ನಿಮ್ಮ ಉಪವಾಸದ ಫಲವೇನೆಂದರೆ – ವ್ಯಾಜ್ಯ, ಕಲಹ, ಕೇಡಿನ ಗುದ್ದು, ಇವುಗಳೇ. ನೀವು ಈಗ ಮಾಡುವ ಉಪವಾಸವು ನಿಮ್ಮ ಪ್ರಾರ್ಥನೆಯನ್ನು ಉನ್ನತ ಲೋಕಕ್ಕೆ ಮುಟ್ಟಿಸತಕ್ಕದ್ದಲ್ಲ. ಮನುಷ್ಯನು ತನ್ನ ಆತ್ಮವನ್ನು ಕುಂದಿಸಿಕೊಳ್ಳುವದಕ್ಕಾಗಿ ನಾನು ನೇಮಿಸಿದ ಉಪವಾಸ ದಿನವು ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬೊಗ್ಗಿಸಿ ಕೊಂಡು ಗೋಣೀ ತಟ್ಟನ್ನೂ ಬೂದಿಯನ್ನೂ ಆಸನ ಮಾಡಿಕೊಳ್ಳುವದು ಯೆಹೋವನಿಗೆ ಸಮರ್ಪಕವಾದ ಉಪವಾಸ ಎ ನ್ನುತ್ತೀರೋ? ನೋಡಿರಿ, ಕೇಡಿನ ಬಂಧಗಳನ್ನು ಬಿಚ್ಚುವದು, ನೊಗದ ಕಣ್ಣಿಗಳನ್ನು ಕಳಚುವದು, ಜಜ್ಜಿ ಹೋದವರನ್ನು ಬಿಡುಗಡೆ ಮಾಡುವದು, ನೊಗಗಳನ್ನೆಲ್ಲಾ ಮುರಿಯುವದು, ಹಸಿದವರಿಗೆ ಅನ್ನವನ್ನು ಹಂಚುವದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವದು, ಬೆತ್ತಲೆಯವರನ್ನು ಕಂಡಾಗಲೆಲ್ಲ ಅವರಿಗೆ ಹೊದಿಸುವದು, ನಿನ್ನಂತೆ ನರನಾಗಿರುವ ಯಾವನಿಗೇ ಆಗಲಿ ಮುಖ ತಪ್ಪಿಸಿಕೊಳ್ಳದಿರುವದು, ಇವುಗಳೇ ನನಗೆ ಇಷ್ಟವಾದ ಉಪವಾಸ ವ್ರತವಲ್ಲವೇ. ಇದನ್ನು ಆಚರಿಸುವಾಗ ನಿಮಗೆ ಬೆಳಕು ಉದಯದಂತೆ ಭೇದಿಸಿಕೊಂಡು ಬರುವದು, ನಿಮ್ಮ ಕ್ಷೇಮವು ಬೇಗನೇ ವಿಕಸಿಸುವದು; ನಿಮ್ಮ ಧರ್ಮವು ನಿಮಗೆ ಮುಂಬಲವಾಗಿ ಮುಂದವರಿಯುವದು, ಯೆಹೋವನ ಮಹಿಮೆಯು ನಿಮಗೆ ಹಿಂಬಲವಾಗಿರುವದು. ಆಗ ನೀವು ಕೂಗಿದರೆ ಯೆಹೋವನು ಉತ್ತರ ಕೊಡುವನು, ಮೊರೆಯಿಟ್ಟು ಕರೆದರೆ ಇಗೋ, ಇದ್ದೇನೆ ಅನ್ನುವನು. ನೀವು ನಿಮ್ಮ ಮಧ್ಯದೊಳಗಿಂದ ನೊಗವನ್ನೂ ಬೆರಳಸನ್ನೆಯನ್ನೂ ಕೆಡುಕಿನ ನುಡಿಯನ್ನೂ ಹೋಗಲಾಡಿಸಿ ನಿಮಗೆ ಪ್ರಿಯ ವಾದದ್ದನ್ನು ಹಸಿದವರಿಗೆ ಒದಗಿಸಿ ಕುಗ್ಗಿದವರ ಆಶೆಯನ್ನು ನೆರವೇರಿಸಿದರೆ ಆಗ ನಿಮಗೆ ಕತ್ತಲಲ್ಲಿ ಬೆಳಕು ಉದಯಿಸುವದು, ನಿಮಗೆ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವದು.” (ಯೆಶಾಯ: 58: 4-10)
ಒಂದು ವೇಳೆ ಉಪವಾಸ ವ್ರತದಿಂದ ಯಥಾರ್ಥವಾಗಿ ಪ್ರಯೋಜನವನ್ನು ಪಡೆದರೆ, ಅದು ವ್ಯಕ್ತಿಯನ್ನು ಸದಾ ತನ್ನ ಹೊಣೆಗಾರಿಕೆಯ ಪ್ರಜ್ಞೆ ಇರುವಂತಹ ಸ್ಥಿತಿಗೆ ತಂದು ನಿಲ್ಲಿಸುತ್ತದೆ. ಅವನ ದಿನ ರಾತ್ರೆಗಳು ಸದಾ ದೇವಭಯದಿಂದ ಕೂಡಿರುವುದು ಮತ್ತು ಎಂದೂ ನಿರ್ಲಕ್ಷ್ಯದಿಂದ ಕಳೆಯಲಾರದು; ಅವನು ಸದಾ ಪಾಪಕಾರ್ಯ ಮತ್ತು ಅಪ್ರಿಯ ಕಾರ್ಯಗಳಿಂದ ದೂರವುಳಿಯುವನು; ತನ್ನ ಜೀವಿತೋದ್ದೇಶವು ಸದಾ ಅವನ ದೃಷ್ಟಿಯ ಮುಂದಿರುವುದು.
ಉಪವಾಸ: ಒಂದು ಅಗತ್ಯ
ಇಸ್ಲಾಮ್ ಮಾನವನ ಮುಂದೆ ಯಾವ ಮೂಲ ಬೇಡಿಕೆಗಳನ್ನಿರಿಸಿದೆಯೋ, ಅದು ಮಾನವನು ತನ್ನ ಪ್ರಕೃತಿಯ ಮೂಲಭೂತ ಬೇಡಿಕೆಗಳನ್ನು ಅರಿಯಬೇಕು ಮತ್ತು ಅವುಗಳನ್ನು ಈಡೇರಿಸಲು ಪ್ರಯತ್ನಿಸಬೇಕು ಎಂಬುದರ ಹೊರತು ಬೇರೇನೂ ಅಲ್ಲ. ಅಲ್ಲಾಹನು ದಿವ್ಯವಾಣಿಯ ಮೂಲಕ ಮಾನವನಿಗೆ, ಅವನ ಸ್ವಂತ ಪ್ರಾಕೃತಿಕ ಬೇಡಿಕೆಗಳನ್ನು ನೆನಪಿಸಿ ಕೊಟ್ಟಿದ್ದಾನೆ. ಅಲ್ಲಾಹನು ಮಾನವನಿಗೆ ತನ್ನ ವಿಶೇಷ ಕೊಡುಗೆಯನ್ನು ದಯಪಾಲಿಸಿದ್ದಾನೆ. ಇತರ ಸೃಷ್ಟಿಗಳಿಗೆ ಹೋಲಿಸಿದರೆ, ಮಾನವನಿಗೆ ಶ್ರೇಷ್ಠತೆಯನ್ನು ದಯಪಾಲಿಸಿದ್ದಾನೆ; ಜೀವನದ ಉನ್ನತ ಧ್ಯೇಯವನ್ನು ಅರಿಯುವ ಸಾಮಥ್ರ್ಯವನ್ನು ನೀಡಿದ್ದಾನೆ. ಇದುವೇ ಅವನನ್ನು ಇತರ ಜೀವಿಗಳಿಂದ ಪ್ರತ್ಯೇಕಿಸುತ್ತದೆ. ಆದರೆ ಈ ಪ್ರಜ್ಞೆಯು ಕೆಲವೇ ಕೆಲವು ಮಂದಿಗೆ ಇರುವುದು. ಸಾಮಾನ್ಯವಾಗಿ ಮಾನವನ ಮನಸ್ಸನ್ನು ಲೌಕಿಕ ಲಾಭವೇ ಆವರಿಸಿಕೊಂಡಿರುತ್ತದೆ. ಇಂತಹ ಸ್ಥಿತಿಯಲ್ಲಿ ಯಾವುದೇ ವಸ್ತುವನ್ನು ಅದರ ಸ್ವಾಭಾವಿಕ ಪರಿಶುದ್ಧತೆಯಲ್ಲಿ ನೋಡಲು ಸಾಧ್ಯವಿರುವುದಿಲ್ಲ. ಆದ್ದರಿಂದಲೇ ಜನರು ಸಾಮಾನ್ಯವಾಗಿ ಜೀವನದ ಪ್ರಮುಖ ಮೌಲ್ಯಗಳನ್ನು ಮತ್ತು ಅಮೂಲ್ಯ ವಾಸ್ತವಿಕತೆಗಳನ್ನು ಅರಿಯುವಲ್ಲಿ ವಿಫಲರಾಗುತ್ತಾರೆ.
ಮಾನವನ ಸ್ವಭಾವ ಹೇಗಿರುತ್ತದೆ ಎಂದರೆ, ಅವನ ಪ್ರಾಕೃತಿಕ ಶಕ್ತಿ-ಸಾಮಥ್ರ್ಯಗಳನ್ನು ಬೆಳೆಸಲು ಶಿಕ್ಷಣ-ತರಬೇತಿಯ ಅಗತ್ಯ ತಲೆದೋರುತ್ತದೆ. ಅಲ್ಲಾಹನು ನಮ್ಮ ಮೇಲೆ ಕಡ್ಡಾಯಗೊಳಿಸಿರುವ ಉಪವಾಸ ವ್ರತವು ಒಂದು ಪವಿತ್ರವಾದ ಆರಾಧನೆಯಾಗಿರುವುದು ಮಾತ್ರವಲ್ಲ, ಅದು ನಮ್ಮ ತರಬೇತಿಯ ಅತ್ಯುತ್ತಮ ಮಾಧ್ಯಮವೂ ಆಗಿದೆ. ಉಪವಾಸ ವ್ರತದ ಮೂಲ ಉದ್ದೇಶ ಆತ್ಮಶುದ್ಧಿ ಮತ್ತು ಧರ್ಮನಿಷ್ಠೆಯಾಗಿದೆ. ಪರಿಶುದ್ಧತೆ ಗಳಿಸುವಲ್ಲಿ ಮತ್ತು ಧರ್ಮನಿಷ್ಠೆಯ ಅಪೇಕ್ಷಿತ ಸ್ಥಾನಕ್ಕೆ ತಲುಪುವಲ್ಲಿ ಉಪವಾಸವು ಒಂದು ಪ್ರಮುಖ ಮಾಧ್ಯಮದ ಸ್ಥಾನವನ್ನು ಹೊಂದಿದೆ. ಇದೇ ಕಾರಣವಾಗಿ ಉಪವಾಸ ವ್ರತವು ಗತ ಸಮುದಾಯಗಳ ಮೇಲೂ ಕಡ್ಡಾಯವಾಗಿತ್ತು.
ಆತ್ಮನಿಯಂತ್ರಣದ ಹೊರತು ಮಾನವನಲ್ಲಿ ಧರ್ಮನಿಷ್ಠೆಯ ಅವಸ್ಥೆಯು ಹುಟ್ಟಲಾರದು. ಉಪವಾಸವು ಆತ್ಮನಿಯಂತ್ರಣದ ಒಂದು ಸ್ವಾಭಾವಿಕ ಸಾಧನವಾಗಿದೆ. ಅದರ ಮೂಲಕ ಮಾನವನು ತನ್ನ ಚಿತ್ತಾಕಾಂಕ್ಷೆಗಳ ಮೇಲೆ ಹತೋಟಿಯನ್ನು ಸಾಧಿಸಬಲ್ಲನು.
ಚಿತ್ತಾಕಾಂಕ್ಷೆಯ ದಾಸನಿಗೆ ಅಲ್ಲಾಹನ ಘನತೆಯ ಬೋಧವಿರುವುದಿಲ್ಲ. ಅವನ ಚಿತ್ತಾಕಾಂಕ್ಷೆಗಳು ಅವನನ್ನು ಜೀವನದ ಉನ್ನತ ವಾಸ್ತವಿಕತೆಗಳಿಂದ ಮತ್ತು ಮೂಲಭೂತ ಅಗತ್ಯಗಳಿಂದ ಅಲಕ್ಷ್ಯನನ್ನಾಗಿಸುತ್ತವೆ. ಅಲ್ಲಾಹನ ದೃಷ್ಟಿಯಲ್ಲಿ ತುಂಬಿದ ಹೊಟ್ಟೆಗಿಂತ ಹೆಚ್ಚಿನ ಅಪ್ರಿಯ ವಸ್ತು ಬೇರೆ ಇಲ್ಲ ಎಂದು ಹೇಳಲಾಗುತ್ತದೆ; ಹೊಟ್ಟೆ ತುಂಬಿದ ವ್ಯಕ್ತಿಯು ಆಲಸ್ಯ ಮತ್ತು ಅಲಕ್ಷ್ಯಕ್ಕೆ ತುತ್ತಾಗುತ್ತಾನೆ ಎಂಬುದೇ ಅದಕ್ಕೆ ಕಾರಣ. ಈ ಆಲಸ್ಯವು ಅವನನ್ನು ತನ್ನ ಪ್ರಾಕೃತಿಕ ಬೇಡಿಕೆಗಳ ಕಡೆಗೆ ಗಮನ ಹರಿಸುವುದರಿಂದ ತಡೆಯುತ್ತದೆ. ಉಪವಾಸ ವ್ರತವು ವಸ್ತುತಃ ಆಹಾರ-ಪಾನೀಯ ಸೇವನೆ ಮತ್ತು ಲೈಂಗಿಕೇಚ್ಛೆಯ ಈಡೇರಿಕೆಯ ಹೊರತಾಗಿಯೂ ಇತರ ಅನೇಕ ವಸ್ತು-ವಿಷಯಗಳು ನಮ್ಮ ಗಮನವನ್ನು ಬಯಸುತ್ತವೆ ಎಂಬುದನ್ನು ತೋರಿಸಲಿಕ್ಕಿರುವ ಪ್ರಾಯೋಗಿಕ ತರಬೇತಿಯಾಗಿದೆ. ಉಪವಾಸವು ಪ್ರಭಾತದಿಂದ ಪ್ರದೋಷದ ತನಕ ಆಹಾರ-ಪಾನೀಯ ಸೇವನೆ ಮತ್ತು ಸಂಸರ್ಗಂದ ದೂರವುಳಿಯುವುದರ ಹೆಸರಾಗಿ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಆಧ್ಯಾತ್ಮಿಕ ನೆಲೆಯಲ್ಲಿ ನೋಡಿದರೆ, ಉಪವಾಸ ಎಂಬುದು ವ್ಯಕ್ತಿಗೆ ತನ್ನ ಚಿತ್ತಾಕಾಂಕ್ಷೆಗಳ ಮೇಲೆ ಹಿಡಿತ ಸಾಧಿಸುವ ಮತ್ತು ಅವನಿಗೆ ಧರ್ಮನಿಷ್ಠೆಯ ಜೀವನ ಗಳಿಸುವುದರ ಹೆಸರಾಗಿದೆ. ಅದೆಷ್ಟೋ ಉಪವಾಸಿಗರು ಉಪವಾಸವಿರಿಸದವರ ಸಾಲಿನಲ್ಲಿ ಸೇರುತ್ತಾರೆ ಮತ್ತು ಉಪವಾಸವಿರಿಸದವರು ಉಪವಾಸಿಗರ ಸಾಲಿನಲ್ಲಿ ಸೇರುತ್ತಾರೆ ಎಂದು ಉಲೆಮಾಗಳು ಹೇಳಿರುವುದು ಇದೇ ಕಾರಣಕ್ಕಾಗಿದೆ. ಅಂದರೆ ಎಷ್ಟೋ ಮಂದಿ ಉಪವಾಸವಿರಿಸಿರುತ್ತಾರೆ; ಆದರೆ ವಾಸ್ತವದ ದೃಷ್ಟಿಯಲ್ಲಿ ನೋಡಿದರೆ ಅವರ ಉಪವಾಸವು ವ್ರತವಾಗಿರುವುದಿಲ್ಲ. ಏಕೆಂದರೆ ಧರ್ಮನಿಷ್ಠೆ ಮತ್ತು ಪರಿಶುದ್ಧತೆಯ ಜೀವನವು ಅವರದಾಗಿರುವುದಿಲ್ಲ. ತದ್ವಿರುದ್ಧವಾಗಿ ಎಷ್ಟೋ ಮಂದಿ ಉಪವಾಸಿಗರಾಗಿರದಿದ್ದರೂ ವಾಸ್ವವಿಕ ದೃಷ್ಟಿಯಲ್ಲಿ ಉಪವಾಸಿಗರಲ್ಲಿ ಗುರುತಿಸಲ್ಪಡುತ್ತಾರೆ. ಏಕೆಂದರೆ ಅವರ ಕಿವಿಗಳು ಪರದೂಷಣೆಯಿಂದ ಮುಕ್ತವಾಗಿರುತ್ತದೆ, ಅವರ ದೃಷ್ಟಿಯು ಕರ್ಮಶುದ್ಧಿಯಾಗಿರುತ್ತದೆ, ಅವರ ಜೀವನವು ಪರಿಶುದ್ಧತೆ ಮತ್ತು ದೇವನಿಷ್ಠೆಯ ದರ್ಪಣವಾಗಿರುತ್ತದೆ. ಇದು ನಮ್ಮಲ್ಲಿ ಹುಟ್ಟದಿದ್ದರೆ, ನಾವು ಉಪವಾಸವಿದ್ದೂ ಉಪವಾಸಿಗರಲ್ಲದವರ ಸಾಲಿನಲ್ಲಿ ಗುರುತಿಸಲ್ಪಡುವೆವು.
ದೇವಚರರ ಹೋಲಿಕೆ:
ಉಪವಾಸದಲ್ಲಿ ಮಾನವನಿಗೆ ದೇವಚರರಂತಹ ಗುಣವಿಶೇಷ ಲಭಿಸುತ್ತದೆ. ದೇವಚರರು ಆಹಾರ-ಪಾನೀಯದ ಎಲ್ಲ ಅಗತ್ಯಗಳಿಂದಲೂ ಮುಕ್ತವಾಗಿದ್ದಾರೆ. ಅಲ್ಲಾಹನ ಸ್ತುತಿ-ಕೀರ್ತನೆಯೇ ಅವರ ಆಹಾರವಾಗಿದೆ. ಉಪವಾಸದಲ್ಲಿ ಮಾನವನೂ ಚಿತ್ತಾಕಾಂಕ್ಷೆಗಳಿಂದ ದೂರವುಳಿದು ದೇವಾನುಸರಣೆ ಮತ್ತು ದೇವಾರಾಧನೆಯಲ್ಲಿ ತಲ್ಲೀನನಾಗುತ್ತಾನೆ.
ಜಿಹಾದ್ನ ಆತ್ಮ:
ಸತ್ಯಪ್ರೀತಿ ಮತ್ತು ಮಿಥ್ಯದ್ವೇಷವು ಮಾನವನ ಸ್ವಭಾವದ ಬೇಡಿಕೆಯಾಗಿದೆ. ಮಾನವನನ್ನು ನೇರ ಮಾರ್ಗದಿಂದ ತಪ್ಪಿಸಿ ಮಿಥ್ಯ ಹಾದಿಗೆ ಕೊಂಡೊಯ್ಯ ಬಲ್ಲಂತಹ ಅವನ ಶಕ್ತಿ-ಸಾಮಥ್ರ್ಯ, ಚಿತ್ತಾಕಾಂಕ್ಷೆಗಳು ಮತ್ತು ಭಾವನೆಗಳ ಮೇಲೆ ಅವನು ಹತೋಟಿಯನ್ನು ಸಾಧಿಸಿದಾಗ ಮಾತ್ರವೇ ಸತ್ಯಪ್ರೀತಿಯ ಹಕ್ಕು ಸಂದಾಯ ಮಾಡಲು ಸಾಧ್ಯವಾಗುವುದು. ತನ್ನ ಶಕ್ತಿ-ಸಾಮಥ್ರ್ಯಗಳನ್ನು ನಿಯಂತ್ರಿಸಲಿಕ್ಕಾಗಿ ಸತತ ಪರಿಶ್ರಮ ಪಡಬೇಕಾದುದು ಪ್ರಾಥಮಿಕ ಶರ್ತವಾಗಿದೆ. ಉಪವಾಸ ವ್ರತಾಚರಿಸುತ್ತಾ ವ್ಯಕ್ತಿಯು ತನ್ನ ಚಿತ್ತದೊಂದಿಗೆ ಜಿಹಾದ್ ಪ್ರಾರಂಭಿಸುತ್ತಾನೆ. ಅಂತೆಯೇ ತನ್ನ ಚಿತ್ತವನ್ನು ಮಣಿಸಲಾಗದ ವ್ಯಕ್ತಿಯಿಂದ ಸತ್ಯದ ಪರ ಮತ್ತು ಮಿಥ್ಯದ ವಿರುದ್ಧ ಪರಿಶ್ರಮದ ನಿರೀಕ್ಷೆಯನ್ನು ಇರಿಸಲು ಸಾಧ್ಯವಿಲ್ಲ. ಸಹನೆ-ಸಂಯಮದ ಹೊರತು ಜಿಹಾದ್ ಸಾಧ್ಯವಿಲ್ಲ; ಅಂತೆಯೇ ಸಹನೆ-ಸಂಯಮವು ಉಪವಾಸ ವ್ರತದ ವಿಶೇಷತೆಗಳಲ್ಲೊಂದಾಗಿದೆ. ಆದ್ದರಿಂದಲೇ ಪ್ರವಾದಿವರ್ಯರು(ಸ) ಉಪವಾಸದ ತಿಂಗಳನ್ನು ಸಹನೆಯ ತಿಂಗಳು ಎಂದು ಬಣ್ಣಿಸಿದ್ದಾರೆ.
ಹಿತಚಿಂತನೆ ಮತ್ತು ಸಹಾನುಭೂತಿ:
ಹಸಿವು ಮತ್ತು ದಾಹದಿಂದ ಮಾನವನ ಅವಸ್ಥೆ ಏನಾಗುತ್ತದೆ ಎಂಬ ಅನುಭವವು ಸ್ಥಿತಿವಂತ ವ್ಯಕ್ತಿಗೂ ಉಪವಾಸ ವ್ರತದಿಂದ ಆಗುತ್ತದೆ. ಐಷಾರಾಮಿ ಜೀವನದಲ್ಲಿ ಮಾನವನಿಗೆ ಇತರರ ಸಂಕಷ್ಟಗಳು ಮತ್ತು ಹಸಿವು-ದಾಹದ ಅರಿವು ಉಂಟಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಅವನು ಮಾನವೀಯ ಹಿತಚಿಂತನೆ ಮತ್ತು ಸಹಾನುಭೂತಿಯ ಭಾವನೆಯಿಂದ ಸಂಪೂರ್ಣ ವಂಚಿತನಾಗುವ ಸಾಧ್ಯತೆ ಇರುತ್ತದೆ. ಉಪವಾಸ ವ್ರತದ ಸ್ಥಿತಿಯಲ್ಲಿ ವ್ಯಕ್ತಿಗೆ ಹಸಿವು-ದಾಹದ ಪ್ರಾಯೋಗಿಕ ಅನುಭವವಾಗುತ್ತದೆ. ಅದರಿಂದಾಗಿ, ಬಡವರೊಂದಿಗೆ ಸಹಾನುಭೂತಿಯಿಂದ ವ್ಯವಹರಿಸುವ ಮತ್ತು ಅವರನ್ನು ಸಂಕಷ್ಟದಲ್ಲಿ ಸಹಾಯ ಮಾಡುವ ಭಾವನೆಯು ಸ್ವಾಭಾವಿಕವಾಗಿಯೇ ವ್ಯಕ್ತಿಯಲ್ಲಿ ಬೆಳೆಯುತ್ತದೆ. ಅಲ್ಲಾಹನ ಸಂದೇಶವಾಹಕರು(ಸ) ರಮಝಾನ್ ತಿಂಗಳನ್ನು ‘ಸಹಾನು ಭೂತಿ’ಯ ತಿಂಗಳು ಎಂದು ಹೇಳುತ್ತಿದ್ದರು ಮತ್ತು ಈ ತಿಂಗಳಲ್ಲಿ ಅವರು ವಿಪರೀತ ದಾನಿಯಾಗುತ್ತಿದ್ದರು.
ಅಲ್ಲಾಹನ ಶ್ರೇಷ್ಠತೆಯ ಪ್ರಕಟ:
ಉಪವಾಸ ವ್ರತವು ಅಲ್ಲಾಹನ ಮಹಾನತೆ ಮತ್ತು ಶ್ರೇಷ್ಠತೆಯ ಪ್ರಕಟಣೆಯಾಗಿದೆ. ರಮಝಾನ್ ತಿಂಗಳಲ್ಲಿ ಒಂದೆಡೆ ಮಾನವನ ದಾಸ್ಯತನ ಮತ್ತು ವಿನೀತತೆಯು ಪ್ರಕಟವಾದರೆ, ಇನ್ನೊಂದೆಡೆ ಅಲ್ಲಾಹನ ಪ್ರಭುತ್ವ ಮತ್ತು ಮಹಾನತೆಯ ಪ್ರಕಟವಾಗುತ್ತದೆ.
ಕೃತಜ್ಞತಾ ಭಾವ:
ಉಪವಾಸ ವ್ರತವು ತಕ್ವಾ ಗಳಿಕೆಯ ನಿಕಟ ಮಾಧ್ಯಮವಾಗಿರುವಂತೆಯೇ, ಕೃತಜ್ಞತೆಯ ಪ್ರಕಟವೂ ಆಗಿದೆ. ಇದರಲ್ಲಿ ಮಾನವರನ್ನು ಅಲ್ಲಾಹನಿಗೆ ಕೃತಜ್ಞ ದಾಸ ರಾಗಿಸುವ ವಿಶೇಷತೆಯು ಕಾಣಸಿಗುತ್ತದೆ. ಉಪವಾಸ ವ್ರತಕ್ಕೆ ಸಂಬಂಧಿಸಿ ‘ಲಅಲ್ಲಕುಮ್ ತತ್ತಕೂನ್’ (ನಿಮ್ಮಲ್ಲಿ ಧರ್ಮನಿಷ್ಠೆ ಉಂಟಾಗ ಬಹುದು) ಎಂದು ಹೇಳಿರುವಂತೆಯೇ ಈ ರೀತಿಯೂ ಉದ್ಧರಿಸಲಾಗಿದೆ, “ಸನ್ಮಾರ್ಗದರ್ಶನದ ಮೂಲಕ ನಿಮ್ಮನ್ನು ಪ್ರತಿಷ್ಠಿತಗೊಳಿಸಿದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾ ಅವನಿಗೆ ಕೃತಜ್ಞರಾಗಿರಲಿಕ್ಕಾಗಿಯೂ ಈ ವಿಧಾನವನ್ನು ತೋರಿಸಿ ಕೊಡಲಾಗಿದೆ.” (ಅಲ್ಬಕರ: 2: 185)
ಉಪವಾಸ ವ್ರತವು ಒಂದು ಪವಿತ್ರವಾದ ಆರಾಧನೆಯಾಗಿದೆ. ಅದರ ಸ್ಥಾನಮಾನವು ಕೇವಲ ತರಬೇತಿ ಕೋರ್ಸ್ಗೆ ಸೀಮಿತವಾಗಿಲ್ಲ. ಆದ್ದರಿಂದಲೇ ಉಪವಾಸ ವ್ರತವು ಕೃತಜ್ಞತಾ ಭಾವದ ಪ್ರಕಟಕ್ಕೂ ಹೇತುವಾಗುತ್ತದೆ. ಮಾನವ ಕುಲದ ಆರಂಭದಿಂದಲೇ ಮಾನವನ ಮೇಲೆ ಅಲ್ಲಾಹನು ವರ್ಷಿಸಿದ ಅನುಗ್ರಹಗಳಿಗೆ ಮಿತಿ ಇಲ್ಲ. ಅಲ್ಲಾಹನು ನಮಗೆ ಕುರ್ಆನಿನಂತಹ ಅನುಗ್ರಹವನ್ನು ದಯಪಾಲಿಸಿದುದಂತೂ ಅವನು ನಮ್ಮ ಮೇಲೆ ತೋರಿದ ಅತಿ ದೊಡ್ಡ ಕೃಪೆಯಾಗಿದೆ. ಕುರ್ಆನ್ ಮಾನವರ ಪಾಲಿಗೆ ಅತಿ ದೊಡ್ಡ ಅನುಗ್ರಹವೂ ಆಗಿದೆ, ಕೃಪೆಯೂ ಆಗಿದೆ. ಅದು ಮಾನವನಿಗೆ ಅಮರ ಜೀವನ ಮತ್ತು ಶಾಶ್ವತ ವಿಜಯದ ದಾರಿಯನ್ನು ತೋರಿಸಿತು; ಅಂತೆಯೇ ಮಾನವನು ಊಹಿಸಿರದಂತಹ ನೈತಿಕ ಉನ್ನತಿಗೆ ಅವನನ್ನು ಏರಿಸಿತು. ಈ ಅನುಗ್ರಹಕ್ಕೆ ದಾಸನು ಉಪವಾಸ ವ್ರತಾಚರಿಸುತ್ತಾ ತನ್ನ ಸಂತೋಷ ಮತ್ತು ಕೃತಜ್ಞತೆಯನ್ನು ಪ್ರಕಟಿಸುತ್ತಾನೆ. ಒಟ್ಟಿನಲ್ಲಿ, ಮಾನವನ ಗೌರವ ಮತ್ತು ಘನತೆಯು ಅಲ್ಲಾಹನೊಂದಿಗಿನ ಅವನ ಸಂಬಂಧದಲ್ಲಿ ಗೋಚರಿಸುತ್ತದೆ.
ವಸ್ತುತಃ ಮಾನವ ಮತ್ತು ಅಲ್ಲಾಹನ ನಡುವೆ ಇರುವ ಸಂಬಂಧದ ಪ್ರಕಟದಲ್ಲಿಯೇ ಮಾನವನ ಸಂತೋಷದ ಪ್ರಕಟನೆಯು ಅಡಕವಾಗಿದೆ. ಇದೇ ಕಾರಣವಾಗಿ ನಾವು ಉಭಯ ಈದ್ಗಳ ಸಂದರ್ಭದಲ್ಲಿ ನಮ್ಮ ಸಂತೋಷವನ್ನು ವಿಶೇಷವಾದ ತಕ್ಬೀರ್ ಮತ್ತು ನಮಾಝ್ನ ಮೂಲಕ ಪ್ರಕಟಪಡಿಸುತ್ತೇವೆ. ಈ ನಮಾಝ್ ಮತ್ತು ತಕ್ಬೀರ್ಗಳು ಸಂತೋಷದ ಪ್ರಕಟನೆಯೂ ಆಗಿದೆ ಮತ್ತು ಅಲ್ಲಾಹನ ಸನ್ನಿಧಿಯಲ್ಲಿ ದಾಸನ ಕೃತಜ್ಞತಾರ್ಪಣೆಯೂ ಆಗಿದೆ. ಇದೇ ರೀತಿ ಉಪವಾಸ ವ್ರತದಿಂದಲೂ ಕೃತಜ್ಞತೆಯ ಪ್ರಾಯೋಗಿಕ ಪ್ರಕಟನೆಯಾಗುತ್ತದೆ. ಅಲ್ಲಾಹನು ಪವಿತ್ರ ಕುರ್ಆನನ್ನು ಅವತೀರ್ಣಗೊಳಿಸುವ ಮೂಲಕ ದಾಸರ ಮೇಲಿನ ತನ್ನ ಅನುಗ್ರಹಗಳನ್ನು ಪರಿಪೂರ್ಣಗೊಳಿಸಿದನು. ದಾಸರೂ ಇದರ ಸಂತೊಷ ಮತ್ತು ಕೃತಜ್ಞತೆಯಲ್ಲಿ ಉಪವಾಸ ವ್ರತವನ್ನಾಚರಿಸುತ್ತಾರೆ; ಪರಿಪೂರ್ಣ ಪರಿಶುದ್ಧತೆಯೊಂದಿಗೆ ಅಲ್ಲಾಹನ ಕಡೆಗೆ ಗಮನ ಕೇಂದ್ರೀಕರಿಸುತ್ತಾರೆ.
ವಿನಯಶೀಲತೆ:
ಉಪವಾಸ ವ್ರತವು ಸಂಪೂರ್ಣವಾಗಿ ವಿನಯಶೀಲತೆಯ ಪ್ರಕಟನೆಯೂ ಆಗಿದೆ. ಪಾಪಗಳಿಗೆ ಪ್ರಾಯಃಶ್ಚಿತ್ತದಲ್ಲಿ ಉಪವಾಸ ವ್ರತಕ್ಕೆ ಮಹತ್ತರವಾದ ಪಾತ್ರವಿರುವುದಕ್ಕೆ ಇದುವೇ ಕಾರಣವಾಗಿದೆ. ಹೀಗೆ ಶರೀಅತ್ನಲ್ಲಿ ಪ್ರಾಯಶ್ಚಿತ್ತದ ರೂಪದಲ್ಲಿಯೂ ಉಪವಾಸ ವ್ರತಾಚರಿಸಲು ತಿಳಿಸಲಾಗಿದೆ.
ಉಪವಾಸ ವ್ರತವು ವಿನಯಶೀಲತೆಯ ಇನ್ನೊಂದು ಹೆಸರಾಗಿದೆ ಎಂಬುದಕ್ಕೆ ಗತ ದೇವಗ್ರಂಥಗಳಲ್ಲೂ ಸೂಚನೆ ಕಾಣ ಸಿಗುತ್ತದೆ. ಪ್ರಾರ್ಥನೆಯ ಸ್ವೀಕೃತಿ ಮತ್ತು ಅಲ್ಲಾಹನ ಕೃಪೆಯನ್ನು ತನ್ನೆಡೆಗೆ ತಿರುಗಿಸುವಲ್ಲಿ ಇದರ ಪಾತ್ರ ಬಹಳ ಹಿರಿದು.
ಒಂದು ಉದ್ಧರಣೆ ಹೀಗಿದೆ,
“ಯೆಹೋವನು ತನ್ನ ಸೈನ್ಯದ ಮುಂದೆ ದನಿಗೈಯುತ್ತಾನೆ; ಆತನ ದಂಡು ಬಹು ದೊಡ್ಡದು; ತನ್ನ ಮಾತನ್ನು ನೆರವೇರಿಸಿಕೊಳ್ಳುವಾತನು ಬಲಿಷ್ಠನಾಗಿದ್ದಾನೆ; ಯೆಹೋವನ ದಿನವು ಮಹತ್ತರವೂ ಅತಿ ಭಯಂಕರವೂ ಆಗಿದೆ; ಅದನ್ನು ತಾಳಿಕೊಳ್ಳುವವರು ಯಾರು? ಯೆಹೋವನು ಇಂತೆನ್ನುತ್ತಾನೆ: ಈಗಲಾದರೋ ನೀವು ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಂಡು ಉಪವಾಸ ಮಾಡಿರಿ, ಅಳಿರಿ, ಗೋಳಾಡಿರಿ; ನಿಮ್ಮ ಬಟ್ಟೆಗಳನ್ನೆಲ್ಲ ನಿಮ್ಮ ಹೃದಯಗಳನ್ನು ಹರಿದುಕೊಂಡು ನಿಮ್ಮ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ; ಆತನು ದಯೆಯೂ ಕನಿಕರವೂ ದೀರ್ಘ ಶಾಂತಿಯೂ ಮಹಾ ಕೃಪೆಯೂ ಉಳ್ಳವನಾಗಿ ಮಾಡ ಬೇಕೆಂದಿದ್ದ ಕೇಡಿಗೆ ಮನಮರುಗುತ್ತಾನೆ.” (ಯೋವೇಲನು: 2: 11-13)
ನಮ್ಮ ಉಪವಾಸ ವ್ರತ:
ಇಂದು ನಾವು ಉಪವಾಸ ವ್ರತಾಚರಿಸುತ್ತೇವೆ. ಆದರೂ ಅದರಿಂದ ಸ್ವಾಭಾವಿಕವಾಗಿಯೇ ಗಳಿಸಲು ಸಾಧ್ಯವಾಗುವಂತಹ ಪ್ರಯೋಜನಗಳು ಲಭಿಸುತ್ತಿಲ್ಲ. ವಾಸ್ತವದಲ್ಲಿ ನಾವು ಉಪವಾಸ ವ್ರತಾಚರಿಸುತ್ತೇವೆ; ಆದರೆ ಅದರ ಸಂಪೂರ್ಣ ಶಿಷ್ಟಾಚಾರವನ್ನು ಪಾಲಿಸುವುದಿಲ್ಲ ಎಂಬುದೇ ಕಾರಣವಾಗಿದೆ. ಉಪವಾಸದಲ್ಲಿ ನಾವು ಆಹಾರ-ಪಾನೀಯ ಸೇವನೆಯಿಂದ ದೂರವಿರುತ್ತೇವೆ; ಆದರೆ ನಮ್ಮನ್ನು ತಡೆದಿರುವಂತಹ ಅನೇಕ ವಿಷಯಗಳಿಂದ ನಾವು ದೂರವಿರುವುದಿಲ್ಲ. ಮೇಲ್ನೋಟಕ್ಕೆ ನಾವು ಉಪವಾಸಿಗರಾಗಿರುತ್ತೇವೆ; ಆದರೆ ನಮ್ಮ ಅಂಗಾಂಗಗಳು, ಮನಸ್ಸು, ಭಾವನೆಗಳು ಉಪವಾಸವಿರುವುದಿಲ್ಲ. ನಮ್ಮ ಕಾಲು, ದೃಷ್ಟಿಗಳು ಮತ್ತು ಹೃದಯವನ್ನು ಕೆಡುಕಿನಿಂದ ನಾವು ತಡೆಯುವುದಿಲ್ಲ; ನಮ್ಮ ನಾಲಗೆಯು ಕೆಟ್ಟ ಮಾತು, ಸುಳ್ಳು, ಪರನಿಂದೆ ಇತ್ಯಾದಿಗಳಿಂದ ಮುಕ್ತವಾಗಿರುವುದಿಲ್ಲ; ನಮ್ಮ ಕಿವಿಗಳು ಕೆಟ್ಟದರ ಕಡೆಗೆ ಆಹ್ವಾನಿಸುವವರ ಮಾತನ್ನು ಆಲಿಸುತ್ತವೆ ಹಾಗೂ ನಮ್ಮಲ್ಲಿ ಆಹಾರ-ಪಾನೀಯ, ಕೊಡು-ಕೊಳ್ಳುವಿಕೆ ಮತ್ತಿತರ ವ್ಯವಹಾರಗಳಲ್ಲಿ ಹಲಾಲ್-ಹರಾಮ್ಗಳ ಕಾಳಜಿ ಬಹಳ ಕಡಿಮೆ ಇರುತ್ತದೆ.
ಇಂತಹ ಸ್ಥಿತಿಯಲ್ಲಿ ನಾವು, ಉಪವಾಸ ವ್ರತದ ಫಲ ಮತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತಿದ್ದರೆ, ಅದು ನಮ್ಮ ಮೂರ್ಖತನವಾಗಿದೆ. ಉಪವಾಸದ ಶಿಷ್ಟಾಚಾರ ಗಳನ್ನು ಸಂಪೂರ್ಣ ಪಾಲಿಸುವುದೇ ನಿಜವಾದ ಉಪವಾಸ ವ್ರತವಾಗಿದೆ. ಇದರಿಂದಲೇ ಧರ್ಮನಿಷ್ಠ ಮತ್ತು ಉಪ ಕೃತವಾದ ಜೀವನ ಎನ್ನಬಹುದಾದಂತಹ ಜೀವನವು ದೊರೆಯುತ್ತದೆ.
ಪುರಾತನ ಗ್ರಂಥಗಳಲ್ಲೂ ಧರ್ಮನಿಷ್ಠೆ, ನಿಷ್ಕಳಂಕ ಸಂಕಲ್ಪ ಮತ್ತು ಉನ್ನತ ನೈತಿಕತೆಯಿಲ್ಲದಂತಹ ಉಪವಾಸ ವ್ರತವನ್ನು ನಿರರ್ಥಕವೆಂದು ಸಾರಲಾಗಿದೆ. ಕೆಲವು ಉದಾಹರಣೆಗಳನ್ನು ನೋಡೋಣ:
“ನೋಡಿರಿ, ನಿಮ್ಮ ಉಪವಾಸದ ಫಲವೇನಂದರೆ- ವ್ಯಾಜ್ಯ, ಕಲಹ, ಕೇಡಿನ ಗುದ್ದು, ಇವುಗಳೇ. ನೀವು ಈಗ ಮಾಡುವ ಉಪವಾಸವು ನಿಮ್ಮ ಪ್ರಾರ್ಥನೆಯನ್ನು ಉನ್ನತ ಲೋಕಕ್ಕೆ ಮುಟ್ಟಿಸ ತಕ್ಕದ್ದಲ್ಲ. ಮನುಷ್ಯನು ತನ್ನ ಆತ್ಮವನ್ನು ಕುಂದಿಸಿಕೊಳ್ಳುವದಕ್ಕಾಗಿ ನಾನು ನೇಮಿಸಿದ ಉಪವಾಸದಿನವು ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣೀ ತಟ್ಟನ್ನೂ ಬೂದಿಯನ್ನೂ ಆಸನ ಮಾಡಿಕೊಳ್ಳುವದು ಯೆಹೋವನಿಗೆ ಸಮರ್ಪಕವಾದ ಉಪವಾಸ ಎನ್ನುತ್ತೀರೋ?” (ಯೆಶಾಯ: 58: 4-5)
“ಜನರು ನೋಡಲಿ ಎಂದು ನಿಮ್ಮ ಧರ್ಮ ಕಾರ್ಯಗಳನ್ನು ಅವರ ಮುಂದೆ ಮಾಡಬಾರದು, ನೋಡಿರಿ; ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯ ಹತ್ತಿರ ನಿಮಗೆ ಫಲ ದೊರೆಯದು.” (ಮತ್ತಾಯ: 6: 1)
“ಇದಲ್ಲದೆ ನೀವು ಉಪವಾಸ ಮಾಡುವಾಗ ಕಪಟಿಗಳಂತೆ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿರಿ. ಅವರು ತಾವು ಉಪವಾಸಿಗಳೆಂದು ಜನರಿಗೆ ತೋರುವದಕ್ಕಾಗಿ ತಮ್ಮ ಮುಖವನ್ನು ವಿಕಾರ ಮಾಡಿಕೊಳ್ಳುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ನೀನು ಉಪವಾಸ ಮಾಡುವಾಗ ತಲೆಗೆ ಎಣ್ಣೆ ಹಚ್ಚಿಕೊಂಡು ಮುಖವನ್ನು ತೊಳಕೋ. ಹೀಗೆ ಮಾಡಿದರೆ ನೀನು ಉಪವಾಸಿಯೆಂದು ಜನರಿಗೆ ಕಾಣದೆ ಹೋದಾಗ್ಯೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಉಪವಾಸಿಯೆಂದು ಕಾಣಿಸಿಕೊಳ್ಳುವಿ. ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲ ಕೊಡುವನು.” (ಮತ್ತಾಯ: 6: 16-18)
ಒಂದು ವೇಳೆ ಉಪವಾಸ ವ್ರತದಿಂದ ಯಥಾರ್ಥದಲ್ಲಿ ಪ್ರಯೋಜನವನ್ನು ಪಡೆದದ್ದೇ ಆದರೆ, ಅದು ಉಪವಾಸಿಗನನ್ನು ಸದಾ ತನ್ನ ಹೊಣೆಗಾರಿಕಾ ಪ್ರಜ್ಞೆಯು ಜಾಗೃತವಾಗಿರುವಂತಹ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಅವನ ಹಗಲು-ರಾತ್ರಿಗಳು ಎಂದೂ ನಿಭರ್ಯ ಮತ್ತು ನಿಶ್ಚಿಂತೆಯಿಂದ ಕಳೆಯುವುದಿಲ್ಲ. ಕೆಲವೆಡೆ ಮಹಿಳೆಯರು ಬಾವಿಯಿಂದ ನೀರು ಸೇದಿ ಮನೆಗೆ ಕೊಂಡೊಯ್ಯುವುದನ್ನು ನೀವು ನೋಡಿರಬಹುದು. ನೀರು ತುಂಬಿದ ಒಂದು ಕೊಡಪಾನ ಅವರ ತಲೆ ಮೇಲಿದ್ದರೆ, ಇನ್ನೊಂದು ಅವರ ಬಗಲಲ್ಲಿರುತ್ತದೆ. ಮಹಿಳೆಯು ನೀರಿನ ಕೊಡಪಾನ ಹೊತ್ತು ಕೊಂಡಿರುತ್ತಾಳೆ; ದಾರಿಯಲ್ಲಿ ಪರಿಚಯದ ಮಹಿಳೆ ಸಿಕ್ಕಾಗ ನಿಂತು ಅವಳೊಡನೆ ಮಾತನಾಡಲು ತೊಡಗುತ್ತಾಳೆ; ಮಾತುಕತೆಯ ವೇಳೆ ಕೊಡಪಾನವು ತಲೆ ಮೇಲಿರುತ್ತದೆ; ಅದರಿಂದ ಕೈಯನ್ನು ಸರಿಸಿರುತ್ತಾಳೆ; ಆದರೆ ತಲೆಯಿಂದ ಕೊಡಪಾನ ಬಿದ್ದರೆ ನೋಡಿ! ಮೇಲ್ನೋಟಕ್ಕೆ ಅವಳು ಮಾತುಕತೆಯಲ್ಲಿ ವ್ಯಸ್ತಳಾಗಿರುತ್ತಾಳೆ; ಆದರೆ ಅವಳ ಗಮನವು ತಲೆಮೇಲಿರುವ ಕೊಡಪಾನದಿಂದ ತಪ್ಪಿರುವುದಿಲ್ಲ; ಅವಳಿಗೆ ತನ್ನ ಕೊಡಪಾನದ ಬಗ್ಗೆ ಕಾಳಜಿಯೂ ಇರುತ್ತದೆ; ಇದೇ ಕಾರಣವಾಗಿ ಕೊಡಪಾನವು ಬೀಳದೆ ನಿಂತಿರುತ್ತದೆ.
ಉಪವಾಸ ವ್ರತದ ಸ್ಥಿತಿಯೂ ಇದೇ ಆಗಿದೆ. ಉಪವಾಸಿಗನಲ್ಲಿ ತಾನು ಉಪವಾಸಿಗನೆಂಬ ಪ್ರಜ್ಞೆ ಸದಾ ಇರಬೇಕು. ಅವನು ತನ್ನ ಉಪವಾಸ ವ್ರತದಿಂದ ಅಲಕ್ಷ್ಯ ನಾಗಿರಬಾರದು. ಉಪವಾಸದ ರಕ್ಷಣೆಯನ್ನು ತನ್ನ ಕರ್ತವ್ಯವೆಂದು ಭಾವಿಸಬೇಕು. ತನ್ನ ಹೊಣೆಗಾರಿಕೆಯು ಉಪವಾಸದ ಬಾಹ್ಯ ಶಿಷ್ಟಾಚಾರ ಮತ್ತು ಶರ್ತಗಳ ಮೇಲ್ನೋಟ ವಹಿಸುವುದಷ್ಟೇ ಅಲ್ಲ, ಬದಲಾಗಿ ಅದಕ್ಕೂ ಮಿಗಿಲಾಗಿ ಉಪವಾಸದ ಮೂಲ ಉದ್ದೇಶದಿಂದ ಅಲಕ್ಷ್ಯನಾಗದಿರುವುದೂ ತನ್ನ ಹೊಣೆಯಾಗಿದೆ ಎಂದು ಅರಿತ ವ್ಯಕ್ತಿಯು ನಿಜಾರ್ಥದಲ್ಲಿ ಯಶಸ್ವಿಯಾದನು. ನಿಮಗೆ ಗೊತ್ತೇ? ಉಪವಾಸದ ಉದ್ದೇಶವು ಕೇವಲ ಉಪವಾಸದ ಕಾಲಕ್ಕೆ ಸೀಮಿತವಲ್ಲ, ಬದಲಾಗಿ ಅದು ಮಾನವನ ಇಡೀ ಜೀವನಕ್ಕೆ ಸಂಬಂಧಿಸಿದೆ.
IslamKannada News Portal









