ಅನ್ ಅಬೀ ಹುರೈರತ(ರ), ಖಾಲ: ಕಾಲ ರಸೂಲುಲ್ಲಾಹಿ(ಸ): ಕುಲ್ಲು ಅಮಲಿಬ್ನಿ ಆದಮ ಯುಲ್ವಾಅಫುಲ್ ಹಸನತ ಅಮ್ಸಾಲಿಹಾ ಇಲಾ ಸಬ್ ಹಮಿಅತಿಲ್ವಿಅïಫಿನ್ ಖಾಲಲ್ಲಾಹ ಅಝ್ಝವಜಲ್ಲ: ಇಲ್ಲ ಸ್ಸೌಮ ಫಇನ್ನಹೂ ಲೀ ವಅನ ಅಜ್ಝಿ ಬಿಹಿ ಯದಲೂ ಶಹ್ವತಹು ವತ್ತಾಮಹು ಮಿನ್ ಅಜಲಿ. (ಸಹೀಹ್ ಮುಸ್ಲಿಮ್ 1151)
ಅಬೂಹುರೈರಾ(ರ)ರಿಂದ ವರದಿಯಾಗಿದೆ: ಪ್ರವಾದಿ(ಸ) ಹೇಳಿದರು, “ಮನುಷ್ಯನ ಎಲ್ಲಾ ಕರ್ಮಗಳಿಗೂ ಏಳ್ನೂರು ಪಟ್ಟು ಅಧಿಕ ಪ್ರತಿಫಲ ಸಿಗಬಹುದು. ಅಲ್ಲಾಹನು ಹೇಳುತ್ತಾನೆ: ಆದರೆ ಉಪವಾಸವನ್ನು ಹೊರತು. ಅದು ನನಗಾಗಿದೆ. ಅದಕ್ಕೆ ನಾನೇ ಪ್ರತಿಫಲವನ್ನು ನೀಡುತ್ತೇನೆ. ಅವನು ತನ್ನ ಭಾವವಿಕಾರ, ಆಹಾರವನ್ನು ನನಗಾಗಿ ಉಪೇಕ್ಷಿಸುತ್ತಾನೆ.” (ಮುಸ್ಲಿಮ್)
ಇಹಲೋಕವೆಂಬ ಈ ಕರ್ಮ ಭೂಮಿಯಲ್ಲಿ ಅಲ್ಲಾಹನ ಸಂಪ್ರೀತಿಗಾಗಿ ನಿಸ್ವಾರ್ಥವಾಗಿ ಮಾಡುವ ಕರ್ಮಗಳಿಗೆ ಅಲ್ಲಾಹನು ಅಗಣಿತ ಪ್ರತಿಫಲವನ್ನು ನಿಶ್ಚಯಿಸಿದ್ದಾನೆ. ಅದು ಅಲ್ಲಾಹನಿಗೆ ತನ್ನ ದಾಸರ ಮೇಲಿರುವ ಕರುಣೆಯ ಸಂಕೇತವಾಗಿದೆ. ಅಲ್ಲಾಹನು ಅದನ್ನು ಹತ್ತರಿಂದ ಏಳ್ನೂರು ಪಟ್ಟು ಹೆಚ್ಚಿಸಬಹುದು. ಆದರೆ ಉಪವಾಸವನ್ನು ಅವನು ಇದಕ್ಕಿಂತಲೂ ಹೆಚ್ಚು ಪರಿಗಣನೆಯನ್ನು ನೀಡುತ್ತಾನೆ. `ಉಪವಾಸವು ನನಗಾಗಿದೆ’ ಎಂಬ ವಾಕ್ಯವು ಅದನ್ನೇ ಸ್ಪಷ್ಟಪಡಿಸುತ್ತದೆ. ಅಲ್ಲಾಹನ ಈ ಅಗಣಿತ ಪ್ರತಿಫಲವು ರಮಝಾನ್ನ ಒಂದು ತಿಂಗಳಲ್ಲಿ ಆವರಿಸಿಕೊಂಡಿದೆ.
ಮಾನವನ ಪ್ರಕೃತಿಯು ಸದಾ ತಿಂದು, ಕುಡಿದು, ಆಡಿಕೊಂಡು, ಕುಣಿದು ಕುಪ್ಪಳಿಸುತ್ತಿರಬೇಕೆಂದು ಬಯಸುತ್ತದೆ. ಆದ್ದರಿಂದ ಇದನ್ನು ನಿಯಂತ್ರಿಸಲು ಅಸಾಮಾನ್ಯವಾದ ಇಚ್ಛಾಶಕ್ತಿ ಬೇಕಾಗುತ್ತದೆ. ಅಲ್ಲಾಹನು ಯಾವುದೇ ನಿಯಂತ್ರಣವಿಲ್ಲದಂತೆ, ಅಗಾಧವಾದ ಪ್ರತಿಫಲವನ್ನು ಈ ಕರ್ಮಕ್ಕೆ ನೀಡುತ್ತಾನೆ ಎಂಬ ಪ್ರಜ್ಞೆಯೇ ನಮ್ಮ ಇಚ್ಛಾಶಕ್ತಿಯನ್ನು ಬಲ ಪಡಿಸಲು ಸಹಾಯಕವಾಗುತ್ತದೆ. ಇದು ಇತರೆಲ್ಲಾ ಲೌಕಿಕ ವ್ಯಾಮೋಹಗಳಿಂದ ಮುಕ್ತವಾಗಿ ಕೇವಲ ಅಲ್ಲಾಹನಿಗಾಗಿ ಮಾತ್ರ ಉಪವಾಸ ಆಚರಿಸಲು ನಮಗೆ ಸಾಧ್ಯವಾಗುತ್ತದೆ.
ಉಪವಾಸವೆಂದರೆ ಕೇವಲ ಆಹಾರ ಪಾನೀಯ, ಲೈಂಗಿಕ ಕಾಮನೆಗಳ ನಿಯಂತ್ರಣ ಮಾತ್ರ ಅಲ್ಲ, ಮನಸ್ಸು ಮತ್ತು ಶರೀರವು ಒಟ್ಟಾಗಿ ಪಾಲ್ಗೊಳ್ಳಬೇಕಾದ ಒಂದು ಪ್ರಕ್ರಿಯೆಯಾಗಿದೆ. ಇದರಲ್ಲಿ ಬಾಹ್ಯ ಹಾಗೂ ಆಂತರಿಕವಾದ ಎರಡು ವಿಧಗಳನ್ನು ಪರಿಗಣಿಸಬೇಕು. ಇದುವೇ ಉಪವಾಸದ ಮರ್ಮ ಹಾಗೂ ಚೈತನ್ಯವಾಗಿದೆ. `ಸುಳ್ಳು, ಅಸಭ್ಯ ಮಾತು ವರ್ತನೆಗಳನ್ನು ತೊರೆಯದೆ ಉಪವಾಸ ಆಚರಿಸಬೇಕೆಂಬ ಅಗತ್ಯ ಅಲ್ಲಾಹನಿಗೆ ಇಲ್ಲವೇ ಇಲ್ಲ. ಎಷ್ಟೋ ಉಪವಾಸಿಗರು ಕೇವಲ ಹಸಿವನ್ನು ಸಹಿಸಿ, ರಾತ್ರಿಯಲ್ಲಿ ನಿದ್ದೆ ಕಳೆದುದರ ಹೊರತು ಬೇರಾವುದೇ ಪ್ರಯೋಜನ ಸಿಗದೆ ಇದ್ದಾರೆ” ಎಂದು ಪ್ರವಾದಿಯವರು ಎಚ್ಚರಿಸಿದ್ದಾರೆ.
ನಮ್ಮ ಬುದ್ಧಿ ಶಕ್ತಿ, ಚಿಂತನೆ ಹಾಗೂ ಅವಯವಗಳನ್ನು ಕಠಿಣವಾದ ನಿಯಂತ್ರಣಕ್ಕೆ ವಿಧೇಯಗೊಳಿಸಬೇಕು. ಅಲ್ಲಾಹನಿಗೆ ಇಷ್ಟವಿಲ್ಲದ ಅಥವಾ ಸತ್ಯವಿಶ್ವಾಸಿಗೆ ಭೂಷಣವಲ್ಲದ ಎಲ್ಲಾ ಕರ್ಮಗಳಿಂದಲೂ ದೂರವುಳಿಯಬೇಕು. ಅದೇ ವೇಳೆ ಅಲ್ಲಾಹನಿಗೆ ಇಷ್ಟವಾದ ಎಲ್ಲಾ ಕಾರ್ಯಗಳನ್ನು ಹೆಚ್ಚಿನ ಮುತುರ್ವಜಿಯಿಂದ ನೆರವೇರಿಸಬೇಕು.
`ಶ್ರೇಷ್ಠವಾದ ಅತಿಥಿ’ ಎಂದು ರಮಝಾನ್ ಕುರಿತು ಉಲ್ಲೇಖಿಸಿದ ಪ್ರವಾದಿ(ಸ) ಅದನ್ನು ಸತ್ಕರಿಸುವುದು ನಮ್ಮೆಲ್ಲರ ಹೊಣೆಗಾರಿಕೆಯೆಂದು ಹೇಳಿದ್ದಾರೆ. ಅಲ್ಲಾಹನ ಪ್ರತಿಫಲದ ಆಕಾಂಕ್ಷೆಯಿಂದ ಆತನ ಸಾಮೀಪ್ಯ ಗಳಿಸುವ ಪ್ರಯತ್ನ ನಮ್ಮಿಂದಾಗಬೇಕು. ಅದಕ್ಕೆ ತಡೆಯೊಡ್ಡುವ ಕಾರ್ಯಗಳಿಂದ ದೂರವಿರಬೇಕು. ಸಂಬಂಧಗಳಲ್ಲಿ ಬಿರುಕು ಗೋಚರಿಸಿದ್ದರೆ ಅದನ್ನು ಸರಿಪಡಿಸಿ, ರಮಝಾನನ್ನು ಸ್ವಾಗತಿಸಬೇಕು. ನಾನೇ ಪ್ರತಿಫಲ ನೀಡುತ್ತೇನೆ ಎಂದು ಹೇಳಿದಂತಹ ಏಕೈಕ ಆರಾಧನೆಯಾದುದರಿಂದ ಅದರ ಪ್ರಯೋಜನ ಪಡೆಯಲು ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಪ್ರವಾದಿ(ಸ)ರು ಹೇಳಿದರು: “ಜನರೇ ನೀವು ರಮಝಾನ್ನ ಗೌರವವನ್ನು ಪರಿಗಣಿಸಿಕೊಳ್ಳಿರಿ. ಏಕೆಂದರೆ ಅದು ಅಲ್ಲಾಹನ ತಿಂಗಳಾಗಿದೆ.” (ಮುಸ್ಲಿಮ್)
IslamKannada News Portal

