ಜಗತ್ತು ಇಂದು ಭಯಾನಕವಾದ ಮಾರಕ ಕಾಯಿಲೆಗೆ ಬಲಿಯಾಗಿದೆ. ಈ ಕಾಯಿಲೆಗೆ ಕಾರಣವಾದ ವೈರಸ್ ಮುಖ್ಯವಾಗಿ ಮನುಷ್ಯರನ್ನೇ ಬೇಟೆಯಾಡುತ್ತಿದೆ. ಅದು ಒಂದು ನಿರ್ದಿಷ್ಟ ಜಾತಿ, ಧರ್ಮ ಅಥವಾ ಒಂದು ನಿರ್ದಿಷ್ಟ ಜನಾಂಗವನ್ನು ಹುಡುಕಿ ಹೊರಟಿಲ್ಲ. ಜಾತಿ ಮತ ಧರ್ಮ ಭೇದವಿಲ್ಲದೆ ಸಮಾನವಾಗಿ ಕಾಡುತ್ತಿದೆ. ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿರುವ ಈ ವೈರಸ್ ಹೊಸ ಸವಾಲನ್ನು ತಂದಿದೆ, ಮನುಷ್ಯನನ್ನು ಮುಂದೇನು ಎನ್ನುವ ಪ್ರಶ್ನಾರ್ಥಕ ಚಿಹ್ನೆಯಲ್ಲಿ ನಿಲ್ಲಿಸಿದೆ.
ಜಗತ್ತು ತತ್ತರಿಸಿದೆ! ಜಗತ್ತಿನೆಲ್ಲೆಡೆ ಶುಚಿತ್ವ ಹಾಗೂ ಶುದ್ಧೀಕರಣದ ಚರ್ಚೆ ಜೋರಾಗಿದೆ. ನೈರ್ಮಲೀಕರಣಕ್ಕೆ ಕರೆ ನೀಡಲಾಗುತ್ತಿದೆ. ಜಾಗರೂಕತೆಯ ನಿಟ್ಟಿನಲ್ಲಿ ಹರಡುತ್ತಿರುವ ಈ ಸಾಂಕ್ರಾಮಿಕ ಸೋಂಕು ತಮಗೆ ತಗಲದಂತೆ ತಡೆಗಟ್ಟಲು ಪ್ರತಿಯೊಬ್ಬರೂ ವೈಯಕ್ತಿಕವಾಗಿ ಶುಚಿತ್ವವನ್ನು ಕಾಪಾಡುವುದು ಕಡ್ಡಾಯವೆಂದು ಎಚ್ಚರಿಸಲಾಗುತ್ತಿದೆ.
ಹೌದು, ಇಲ್ಲಿ ಶುಚಿತ್ವದ ಬಗ್ಗೆ, ನೈರ್ಮಲ್ಯದ ಬಗ್ಗೆ ಜನಜಾಗ್ರತಿ ಮೂಡಿಸುವುದರ ಆವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮಾನವ ಇತಿಹಾಸದ ವಿವಿಧ ಅವಧಿಗಳಲ್ಲಿ ಸೊಗಸಾದ ಹೆಸರಿನಲ್ಲಿ ಇಂತಹ ಮಾರಕವಾದ ಕಾಯಿಲೆಗಳು ಕಾಣಿಸಿಕೊಂಡಾಗಲೆಲ್ಲ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಜನಜಾಗೃತಿ ಹುಟ್ಟಿಸಲು ಜನ ಸಮೂಹವನ್ನು ಮುಖ್ಯವಾಗಿ ಶುಚಿತ್ವದೆಡೆಗೆ, ನೈರ್ಮಲ್ಯದೆಡೆಗೆ, ಶುದ್ಧೀಕರಣದೆಡೆಗೆ ಮತ್ತು ಸಂಸ್ಕರಣೆಯೆಡೆಗೆ ಕರೆ ನೀಡಿರುವುದನ್ನು ನಾವು ನೋಡಿದ್ದೇವೆ.
ಒಟ್ಟಿನಲ್ಲಿ ಮಾನವ ಬದುಕಿಗೆ ಶುದ್ಧತೆ ಮತ್ತು ನೈರ್ಮಲ್ಯತೆ ಅನಿವಾರ್ಯ. ಆದರೆ, ಇಂದು ಶುದ್ಧತೆ ಮತ್ತು ಪವಿತ್ರತೆ ಎನ್ನುವುದು ಕೇವಲ ಮರೀಚಿಕೆಯಾಗಿ ಬಿಟ್ಟಿದೆ. ಈ ನಿಟ್ಟಿನಲ್ಲಿ, ಶುದ್ಧೀಕರಣ ಮತ್ತು ಸಂಸ್ಕರಣೆಯ ಪ್ರಕ್ರಿಯೆಯು ವ್ಯಕ್ತಿಯಿಂದ ಪ್ರಾರಂಭವಾಗಬೇಕು ಮತ್ತು ಜಾಗತಿಕ ಮಟ್ಟದಲ್ಲಿ ಮುಂದುವರಿಯಬೇಕು. ಇದು ಇಂದು ವಿಶ್ವದ ಹೆಚ್ಚಿನ ಬೇಡಿಕೆಯಾಗಿದೆ.
ಮನುಷ್ಯನನ್ನು ಸೃಷ್ಟಿಸಿ ಪರಿಪಾಲಿಸುತ್ತಿರುವ ಜಗತ್ತಿನ ಒಡೆಯನೇ ಸಹಸ್ರಾರು ವರುಷಗಳ ಹಿಂದೆ ಮಾನವ ಸೃಷ್ಟಿಯ ಅರಂಭದಲ್ಲೇ ಎಚ್ಚರಿಸಿರುತ್ತಾನೆ; ಮನುಷ್ಯ ಜೀವ ಅದ್ಭುತವಾದದ್ದು ಮತ್ತು ಪವಿತ್ರವಾದದ್ದು. ಅತ್ಯಂತ ಪವಿತ್ರವಾದ ಸ್ವರ್ಗವೆಂಬ ದೇವನ ಲೋಕದಲ್ಲಿ ಶಾಶ್ವತ ಬದುಕಿನ ನಿವಾಸಕ್ಕೆಂದೇ ಅವನನ್ನು ಸೃಷ್ಟಿಸಲಾಗಿದೆ. ಮನಸ್ಸು ಮತ್ತು ದೇಹ ಶುದ್ಧವಿರುವವನಿಗೆ ಮಾತ್ರ ಅಲ್ಲಿ ಪ್ರವೇಶವಿದೆ. ಮನಸ್ಸು ಮತ್ತು ಶರೀರವನ್ನು ಎಲ್ಲಾ ರೀತಿಯ ಮ್ಲೇಚ್ಚತೆಗಳಿಂದ ಸದಾ ದೂರವಿಡಬೇಕು. ಆಯುಷ್ ಕಾಲದಲ್ಲಿ ಬದುಕಿನಲ್ಲಿ ಕೆಡುಕು ಮ್ಲೇಚ್ಚತೆಗಳು ಸೋಂಕದಂತೆ ಕಾಪಾಡಲು ಮನಸ್ಸು ಮತ್ತು ಶರೀರವನ್ನು ಶಾರೀರಿಕ ಶುದ್ಧತೆ ಮತ್ತು ಆತ್ಮಸಂಸ್ಕರಣೆಗೆ ಒಳಪಡಿಸುತ್ತಿರಬೇಕು. ನಮಾಜ್ ಮತ್ತು ಉಪವಾಸ ಕ್ರಮಗಳು ಇದಕ್ಕೆ ಪೂರಕವಾದ ವಿಧಾನಗಳಾಗಿವೆ. ನಿಶ್ಚಯವಾಗಿಯೂ ನಮಾಜ್ ನಿಮ್ಮನ್ನು ಅಸಭ್ಯತೆ ಹಾಗೂ ಕೆಡುಕುಗಳಿಂದ ತಡೆಯುತ್ತದೆ
ಈ ನಿಟ್ಟಿನಲ್ಲಿ ಸರ್ವೇಶ್ವರನಾದ ಅಲ್ಲಾಹನು ಮಾನವ ಇತಿಹಾಸದುದ್ದಕ್ಕೂ ಅವುಗಳ ವಿಧಿ-ವಿಧಾನಗಳನ್ನು ಬರಹದ ಮೂಲಕ ಧರೆಗೆ ಇಳಿಸಿ, ಲೋಕಾನಿವಾಸಿಗಳಿಗೆ ಕಲಿಸಿ ಅರ್ಥೈಸಿ ಕೊಡಲು ಪ್ರವಾದಿಗಳನ್ನು ಕಳಿಸುತ್ತ ಬಂದಿರುತ್ತಾನೆ.
ಯಾವಾಗಲೆಲ್ಲ ಜನರು ಆ ಪ್ರವಾದಿಗಳನ್ನು ಅನುಸರಿಸಿ ಅವರು ನೀಡಿದ ಶಿಕ್ಷಣದಂತೆಯೇ ಬದುಕು ರೂಪಿಸಿಕೊಂಡರೋ ಅವಾಗಲೆಲ್ಲ ಬಾನಲೋಕದಿಂದ ದೇವಾನುಗ್ರಹಗಳು ಮಳೆಯಂತೆ ಸುರಿದು ಜಗತ್ತನ್ನೇ ಸ್ವರ್ಗಮಯಗೊಳಿಸಿದೆ. ಹಾಗೇನೇ ಯಾವಾಗಲೆಲ್ಲ ಜನರು ಪ್ರವಾದಿಗಳ ಶಿಕ್ಷಣದಿಂದ ವಿಮುಖರಾಗಿ ಬದುಕಿ ದೇವಾಧಿಕ್ಕಾರಿಗಳಾಗಿ ಮಾರ್ಪಟ್ಟರೋ ಆವಾಗಲೆಲ್ಲ ದೇವನ ಕೋಪ ಪ್ರಕೃತಿ ವಿಕೋಪಗಳ ರೂಪದಲ್ಲಿ, ಮಾರಕ ರೋಗ ರುಜಿನಗಳ ರೂಪದಲ್ಲಿ ಧರೆಗಿಳಿದು ಮನುಷ್ಯ ಬದುಕನ್ನೇ ತತ್ತರಿಸುವಂತೆ ಮಾಡಿ ಬಿಟ್ಟಿದೆ. ಇದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಇದೀಗ ವ್ಯಾಪಕವಾಗಿ ಹಬ್ಬುತ್ತಿರುವ ಮಾರಕ ಕೊರೊನವು ಜ್ವಲಂತ ಸಾಕ್ಷಿಯಾಗಿದೆ.
ನಿರ್ಣಾಯಕ ಸನ್ನಿವೇಶ ಎದುರಾಗಿದೆ, ಎಂದಿಲ್ಲದ ಭೀತಿ ಜನ ಮನಸ್ಸನ್ನು ಕಾಡುತ್ತಿದೆ. ದುಡಿಯಲು ಹೋಗಿ ಮರಳಿ ಮನೆಗೆ ಬಂದ ಮನೆಮಂದಿಯನ್ನು, ಮನೆಗೆ ಭೇಟಿ ಕೊಡುವ ಚಿರಪರಿಚಿತರನ್ನು ಸಂಶಯದ ಕೆಂಗಣ್ಣಿನಿಂದ ನೋಡುವಂತಹ ದುಃಸ್ಥಿತಿ ಎದುರಾಗಿದೆ. “ಮುಟ್ಟ ಬೇಡ, ದೂರ ನಿಲ್ಲು” ಎನ್ನುವ ಮಾತು ಎಲ್ಲರೂ ಹೇಳುವಂತಾಗಿದೆ.
ಈ ಸನ್ನಿವೇಶ ದೇವ ವಿಶ್ವಾಸದಲ್ಲಿ ಕಳಂಕವನ್ನು ತರಲು ಪ್ರೇರೇಪಿಸಿದ ಸಾಮಿರಿ ಎಂಬಾತನಿಗೆ ಅಲ್ಲಾಹನು ನೀಡಿದ ಶಿಕ್ಷೆಯನ್ನು ನೆನಪಿಸುತ್ತದೆ. “ಹೋಗು ಜೀವನ ಪರ್ಯಂತ ಲಾ ಮಿಸಾಸ್ (ನನ್ನನ್ನು ಮುಟ್ಟಬೇಡಿ) ಎಂದು ಹೇಳುತ್ತಿರಬೇಕು” ಎಂದು ಆಜ್ಞೆ ಕೊಡಲು ಅಲ್ಲಾಹನು ಪ್ರವಾದಿ ಮೂಸಾರಲ್ಲಿ ಹೇಳಿದನು. (ಹೆಚ್ಚಿನ ವಿವರ: ಪವಿತ್ರ ಕುರಾನ್ ಅಧ್ಯಾಯ ತ್ವಾಹ, ಸೂಕ್ತ 92)
ತಾನಾಯಿತು ತನ್ನ ಪಾಡಾಯಿತು ಎನ್ನುವ ಸ್ವಾರ್ಥ ಮನಸ್ಸಿನ ಮನುಷ್ಯನಿಗೆ ಜನ ಸಂಪರ್ಕ ಏಕೆ ಬೇಕು ಎಂದು ಪ್ರಶ್ನಿಸುವ ಹಂತಕ್ಕೆ ಈ ಕಾಯಿಲೆ ಪರಸ್ಪರರನ್ನು ಅಗಲಿಸಿದೆ. ಬಿರುಕು ಬಿಟ್ಟ ಹೃದಯಗಳ ಒಡೆಯನಿಗೆ ಒಡಲ ಮಿಲನವೇಕೆ, ಸನಿಹವಿದ್ದು ಸಾನಿಧ್ಯತೆಯ ಪರಿವೆಯಿಲ್ಲದ, ಆಪ್ತನಲ್ಲಿ ಅಪ್ಪುಗೆಯಿಲ್ಲದ, ಬಾಂದವ್ಯದ ಬದುಕಿನ ಬದ್ಧತೆಯಲ್ಲಿ ಸ್ಥಿರತೆಯಿಲ್ಲದ ನಿನಗೆ ಕುಟುಂಬವೇಕೆ ಸಮಾಜವೇಕೆ ಹೋಗು ಏಕಾಂತ ಜೇವನ ಸಾಗಿಸು ಎನ್ನುವಷ್ಟಕ್ಕೆ ಕೋರೋಣ ಪರಸ್ಪರನ್ನು ದೂರ ಸರಿಸುವಂತೆ ಮಾಡಿದೆ. ಕೀಳರಿಮೆಯ ಮನಸ್ಸು ಹೊಂದಿದ ವ್ಯಕ್ತಿ ಕೀಳ್ಜಾತಿಯ, ಕೀಳಂತಸ್ತಿನ ವ್ಯಕ್ತಿ ಬಳಿ ಬಂದಾಗ “ದೂರ ನಿಲ್ಲು ನನ್ನನ್ನು ಮುಟ್ಟಬೇಡ, ನನ್ನ ಬಳಿ ಬರಬೇಡ” ಎನ್ನುವ ಚುಚ್ಚು ಮಾತಿನ ನೋವಿನ ಅರಿವನ್ನು ಕೊರೋನಾ ಎಲ್ಲರಿಗೂ ಸಾರ್ವತ್ರಿಕವಾಗಿ ನೀಡಿದೆ.
ಕೊರೋನಾ ಪೀಡಿತರ ಸಂಖ್ಯೆ ದಿನನಿತ್ಯ ಹೆಚ್ಚುತ್ತಿದೆ. ಇದರಿಂದ ಮೃತರಾಗುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಮರಣ ಭೀತಿ ಎಲ್ಲರನ್ನೂ ವಿಹ್ಹಳ ಗೊಳಿಸಿದೆ. ಈ ಮಾರಕ ಕಾಯಿಲೆಗೆ ಕಾರಣವಾದ ವೈರಸ್ ಅನ್ನು ಪೂರ್ಣವಾಗಿ ನಾಶಗೊಳಿಸಲು ಮತ್ತು ಜನ ಸಮೂಹವನ್ನು ಈ ಭೀಕರ ಕಾಯಿಲೆಯಿಂದ ರಕ್ಷಿಸಲು ಎಡೆಬಿಡದೆ ಜಾಗತಿಕ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ. ಮನುಷ್ಯ ಜೀವವನ್ನು ರಕ್ಷಿಸಲು ನಡೆಸಲಾಗುವ ಈ ಪರಿಶ್ರಮ ಜಾತಿಯ ಹೆಸರಲ್ಲಿ ಮನುಷ್ಯರ ಸಾಮೂಹಿಕ ಹತ್ಯೆಗೆ ಯೋಜನೆಯನ್ನು ಹಾಕುವವರ ಕಣ್ಣು ತೆರೆಸಲಿ.
ಕೊರೋನಾ ಕಾಯಿಲೆಗೆ ಸೂಕ್ತ ಚಿಕಿತ್ಸೆ ಇನ್ನೂ ಪತ್ತೆಯಾಗಿಲ್ಲ, ಮುಂಜಾಗರೂಕತೆಯ ಸಲುವಾಗಿ ಕೆಲವು ಬದುಕಿನ ಶಿಷ್ಟಾಚಾರಗಳನ್ನು ಕಲಿಸಲಾಗುತ್ತಿದೆ. ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತಿದೆ. ನೈರ್ಮಲ್ಯಕ್ಕೆ ಪರಿಗಣನೆ ಕಲ್ಪಿಸಲಾಗುತ್ತಿದೆ. ವಾಣಿಜ್ಯ ಸಂಕೀರ್ಣಗಳನ್ನು, ವಿದ್ಯಾ ಸಂಸ್ಥೆಗಳನ್ನು, ಪ್ರಾರ್ಥನಾಲಯಗಳನ್ನು ಮುಚ್ಚಲಾಗಿದೆ. ಸಭೆ ಸಮಾರಂಭ ಗಳಿಗೆ ಕಡಿವಾಣ ಹಾಕಲಾಗಿದೆ. ವಿಮಾನಯಾಣ ಸ್ಥಗಿತಗೊಳಿಸಲಾಗಿದೆ. ವ್ಯಾಪಾರ ವಹಿವಾಟುಗಳು ಬಹುತೇಕ ಸ್ಥಗಿತಗೊಡಿವೆ, ಜಗತ್ತಿನ ಹಲವೆಡೆ ವಿದ್ಯಾರ್ಥಿಗಳು, ಉದ್ಯಮಿಗಳು, ಉದ್ಯೋಗಿಗಳು ಒಟ್ಟಾಗಿ ಮನೆಯಲ್ಲಿ ಕೂರಬೇಕಾದ ಧಾರುಣ ಪರಿಸ್ಥಿತಿ ಎದುರಾಗಿದೆ. ಜನ ನಿಭಿಡತೆ ಇರುವ ಪ್ರದೇಶಗಳಲ್ಲಿ ಅತ್ಯಾಧುನಿಕ ಉಪಕರಣಗಳ ಮೂಲಕ ಕಾಯಿಲೆಯ ತಪಾಸಣೆ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಬದುಕು ಹಿಂದೆಂದಿಗಿಂತಲೂ ಭಯಾನಕವಾಗಿ ಬಿಟ್ಟಿದೆ. ಇಡೀ ವಿಶ್ವವೇ ವಿನಾಶದ ಕೂಪಕ್ಕೆ ತಳ್ಳಿ ಹೋಗುತ್ತಿದೆ. ಭೂಮಿಯಲ್ಲಿ ಮತ್ತು ಸಮುದ್ರದಲ್ಲಿ ಕ್ಷೋಭೆ ಉಂಟಾಗಲು ಮನುಷ್ಯನ ಕರ್ಮ ಫಲವೇ ಕಾರಣವೆಂದು ಪವಿತ್ರ ಕುರ್ಆನ್ ಸ್ಪಷ್ಟವಾಗಿ ಹೇಳುತ್ತದೆ, (ಅಧ್ಯಾಯ: 30, ಸೂಕ್ತ 41)
ಹಾಗಾದರೆ ಇದಕ್ಕೆ ಪರಿಹಾರವೇನು? ಯಾರು ಈ ಪರಿಸ್ಥಿತಿಯನ್ನು ಸರಿಪಡಿಸಬೇಕು? ಇಂದು ಎಲ್ಲರ ಕಣ್ಣು ಮತ್ತು ಕೈಗಳು ದೇವನತ್ತ ಚಾಚಿವೆ. ತಮ್ಮನ್ನು ರಕ್ಷಿಸಬೇಕೆಂದು, ಮಹಾ ವಿಪತ್ತಿನಿಂದ ಮುಕ್ತಿ ನೀಡೆಂದು ಯಾಚಿಸುತ್ತಿದೆ. ಆದರೆ ಆ ದೇವನು ಮನುಷ್ಯ ಸ್ವತಃ ತನ್ನನ್ನು ಆತ್ಮ ಪರಿಶೋಧನೆಗೆ ಒಳಪಡಿಸಿ ತಿದ್ದಿ ಸರಿಪಡಿಸದೆ ನಾನು ಈ ದುಃಸ್ಥಿತಿಯಿಂದ ಮುಕ್ತಿಕೊಡುವವನಲ್ಲ ಎಂದು ನಿಖರವಾಗಿ ಹೇಳಿ ಬಿಟ್ಟಿರು ತ್ತಾನೆ. (ಪವಿತ್ರ ಕುರ್ಆನ್: ಅಧ್ಯಾಯ 13 ಸೂಕ್ತ 11)
ಮಾನವನ ರಕ್ತದಲ್ಲಿ ಕಾಮ ಕ್ರೋದ ಈಷ್ರ್ಯೆಗಳಂತಹ ರೋಗಾಣುಗಳು ಹೆಚ್ಚಾಗಿ ಕೊರೋನಾವೆಂಬ ಮಹಾಮಾರಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಮನುಷ್ಯನಲ್ಲಿ ಮನೆ ಮಾಡಿಕೊಂಡ ಸ್ವಾರ್ಥಗುಣಗಳಿಂದಾಗಿ ಉಸಿರಾಡುವ ವಾಯು, ಕುಡಿವ ನೀರು, ಸೇವಿಸುವ ಆಹಾರ ವಿಷಮಯವಾಗಿದೆ. ವ್ಯಾಪಾರ ವಹಿವಾಟುಗಳಲ್ಲಿ ಮೋಸ ವಂಚನೆ ಹರಿದಾಡುತ್ತಿದೆ. ಸೇವಾರಂಗದಲ್ಲಿ ಭ್ರಷ್ಟಾಚಾರ ತುಂಬಿ ಹೋಗಿದೆ. ವಿಶ್ವಾಸದಲ್ಲಿ ಕಾಪಟ್ಯ ನುಸುಳಿ ಬಿಟ್ಟಿದೆ. ಒಟ್ಟಿನಲ್ಲಿ ಪರಿಶುದ್ಧತೆ ಮತ್ತು ಪಾವಿತ್ರ್ಯತೆ ಕಳಕೊಂಡು ಸಮಾಜ ಕಳಂಕಮಯವಾಗಿದೆ. ಹರಡುತ್ತಿರುವ ರೊಗಾಣುವನ್ನು ನಾಶ ಪಡಿಸಲು ಸ್ವಚ್ಛತೆ ಹಾಗು ಶಾರೀರಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವುದರ ಜತೆಗೆ ಸತ್ಯ, ಪ್ರೀತಿ, ನ್ಯಾಯಗಳಂತವು ಗಳನ್ನು ನಮ್ಮ ರಕ್ತದಲ್ಲಿ ಹರಿಯಗೊಡಬೇಕು. ಹಾಗಾದಾಗಲೇ ಎಲ್ಲೆಡೆ ಶಾಂತಿ, ಸಮೃದ್ಧಿ, ಸುಭಿಕ್ಷೆ ಮರಳಿ ಬರಲು ಸಾಧ್ಯ. ಸಾರ್ವತ್ರಿಕ ದೇವ ಕ್ಷಮಾಪಣೆ ಹಾಗು ಬದುಕಿನ ಶುದ್ದೀಕರಣವೊಂದೇ ಇಂದಿನ ಪರಿಸ್ಥಿತಿಯ ಬದಲಾವಣೆಗೆ ಏಕೈಕ ಪರಿಹಾರ. ಇದಕ್ಕೆ ಕಾಲ ಸಾಕ್ಷಿಯಾಗಿದೆ.
ಕಾಲದಾಣೆ, ವಾಸ್ತವವಾಗಿ, ಮಾನವ ಕುಲವು ನಷ್ಟದಲ್ಲಿದೆ, ನೈಜ ದೇವನಲ್ಲಿ ವಿಶ್ವಾಸವನ್ನು ತಂದು ನೀತಿವಂತ ಕಾರ್ಯಗಳನ್ನು ಮಾಡಿ, ಪರಸ್ಪರ ಸತ್ಯಕ್ಕೆ ಮತ್ತು ತಾಳ್ಮೆಗೆ ಪರಸ್ಪರ ಸಲಹೆ ನೀಡಿದವರು ಇದರಿಂದ ಸುರಕ್ಷಿತರಾಗುವರು. (ಪವಿತ್ರ ಕುರ್ಆನ್: ಅಧ್ಯಾಯ 103)
IslamKannada News Portal
