ಈಗಾಗಲೇ ತಿಳಿಸಿರುವಂತೆ ಇಸ್ಲಾಮಿನ ಮೂಲ ವಚನವು “ಅಲ್ಲಾಹನ ಹೊರತು ಆರಾಧ್ಯನಿಲ್ಲ. ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ” ಎಂಬರ್ಥದ ಪವಿತ್ರ ವಚನವಾಗಿದೆ. ಈ ಪೈಕಿ “ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದವರು ಯಾರೂ ಇಲ್ಲ”ವೆಂಬ ವಿಶ್ವಾಸವನ್ನು ಪ್ರಥಮ ಅಧ್ಯಾಯದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಈಗ ಅದರ ದ್ವಿತೀಯಾರ್ಧವನ್ನು ತೆಗೆದುಕೊಳ್ಳೋಣ.
“ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ” ಎಂಬುದೇ ಆ ವಾಕ್ಯ.
– ಪ್ರವಾದಿತ್ವ
ಈ ಲೋಕದಲ್ಲಿ ಮಾನವನ ಮಾರ್ಗದರ್ಶನಕ್ಕಾಗಿ ಅಲ್ಲಾಹನು ಮಾಡಿರುವ ವ್ಯವಸ್ಥೆಯೇ ಪ್ರವಾದಿತ್ವ. ಭೂಮುಖದ ಮೇಲೆ ಮಾನವ ಜನಾಂಗದ ಆರಂಭವೇ ಓರ್ವ ಪ್ರವಾದಿಯ ಮೂಲಕ ಆಯಿತೆಂದು ಪವಿತ್ರ ಕುರ್ಆನ್ ಕಲಿಸುತ್ತದೆ. ಅವರಿಗೆ ಅಲ್ಲಾಹನು ತನ್ನ ದೂತರ ಮೂಲಕ ತನ್ನ ಸಂದೇಶವನ್ನು ಮುಟ್ಟಿಸಿದನು. ಅವರು ಅದನ್ನು ತಮ್ಮ ಸಂತತಿಗೆ ಮುಟ್ಟಿಸಿದರು. ಆ ಬಳಿಕ ಆ ಸಂತತಿಗಳು ಶೈತಾನನ ದುಷ್ಪ್ರೇರಣೆಯಿಂದ ಅಥವಾ ತಮ್ಮ ಭ್ರಷ್ಟ ಚಿತ್ತದ ಪ್ರೇರಣೆಯಿಂದ ಪ್ರವಾದಿ ಆದಮ್ರವರು(ಅ) ಬೋಧಿಸಿದ ಶಿಕ್ಷಣಗಳನ್ನು ಮರೆತಾಗ ಪುನಃ ದೇವನ ವತಿಯಿಂದ ಅವರ ಮಧ್ಯೆಯೇ ಪ್ರವಾದಿಗಳು ಜನಿಸಿ ಬಂದರು. ಈ ರೀತಿ ದೇವನು ಮಾನವರಿಗೆ ತನ್ನ ಸಂದೇಶವನ್ನು ಮುಟ್ಟಿಸಲು ಆರಿಸುವ ಪ್ರವಾದಿಗಳು ಮನುಷ್ಯರ ಪೈಕಿ ಅತ್ಯುತ್ತಮ ಗುಣನಡತೆ ಮತ್ತು ಚಾರಿತ್ರ್ಯವುಳ್ಳವರಾಗಿರುತ್ತಿದ್ದರು. ಆ ಪ್ರವಾದಿಗಳು ಮಾನವ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ವಿವಿಧ ಜನಾಂಗಗಳಲ್ಲಿ ಬಂದರು. ಅವರ ಪೈಕಿ ಪ್ರತಿಯೊಬ್ಬರೂ ಜನರಿಗೆ ತಂತಮ್ಮ ಜನಾಂಗದ ಭಾಷೆಯಲ್ಲೇ ದೇವ ಸಂದೇಶವನ್ನು ಮುಟ್ಟಿಸಿದರು.
ಹೀಗೆ ಮಾನವ ಜನಾಂಗದ ಸನ್ಮಾರ್ಗದರ್ಶನಕ್ಕಾಗಿ ಬಂದ ಪ್ರವಾದಿಗಳ ಸಂಖ್ಯೆ ಸುಮಾರು ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಇದೆಯೆಂದು ಪ್ರವಾದಿ ಮುಹಮ್ಮದ್(ಸ) ತಿಳಿಸಿರುವರು. ಎಲ್ಲ ಪ್ರವಾದಿಗಳೂ ಮಾನವರೇ ಆಗಿದ್ದರು. ಅವರಿಗೆ ಮಾನವ ಸಹಜವಾದ ಎಲ್ಲ ಬಯಕೆ-ಬೇಡಿಕೆಗಳೂ ಇದ್ದವು. ಅವರು ಆಹಾರ ಸೇವಿಸುತ್ತಿದ್ದರು. ಹೆಂಡತಿ ಮಕ್ಕಳನ್ನು ಹೊಂದಿದ್ದರು. ಜೀವನೋಪಾಯಕ್ಕಾಗಿ ಅವರು ದುಡಿಯುತ್ತಿದ್ದರು. ಅವರ ಪೈಕಿ ಯಾರೂ ದೇವರಾಗಲಿ, ದೇವ ಪುತ್ರರಾಗಲಿ, ದೇವಾಂಶ ಸಂಭೂತರಾಗಲಿ ಆಗಿರಲಿಲ್ಲ. ಅವರ ಪೈಕಿ ಯಾರೂ ಅತಿ ಮಾನವರೋ ದೇವನಿಗೆ ಸಮಾನರೋ ಅವನ ಭಾಗೀದಾರರೋ ಆಗಿರಲಿಲ್ಲ.
– ಅಂತಿಮ ಪ್ರವಾದಿ
ಪ್ರವಾದಿ ಮುಹಮ್ಮದ್(ಸ) ಈ ಪ್ರವಾದಿಗಳ ಪೈಕಿ ಕೊನೆಯವರೂ ಪ್ರವಾದಿ ಶೃಂಖಲೆಯ ಕೊನೆಯ ಕೊಂಡಿಯೂ ಪ್ರವಾದಿತ್ವ ವ್ಯವಸ್ಥೆಯ ಪರಿಪೂರ್ಣತೆಯೂ ದೇವ ಸಂದೇಶವಾಹಕತ್ವದ ಪರಿಸಮಾಪ್ತಿಯೂ ಆಗಿದ್ದಾರೆ. ಅವರು ಇತಿಹಾಸದ ಪೂರ್ಣ ಬೆಳಕಿನಲ್ಲಿ ಜನಿಸಿದರು, ಬಾಳಿದರು ಮತ್ತು ಬೆಳೆದರು. ಆಮಿನಾ ಮತ್ತು ಅಬ್ದುಲ್ಲಾ ದಂಪತಿಗಳ ಮಗನಾಗಿ ಮುಹಮ್ಮದ್(ಸ) ಅರೇಬಿಯಾದ ಮಕ್ಕಾ ಪಟ್ಟಣದಲ್ಲಿ ಕ್ರಿ.ಶ. 571ರಲ್ಲಿ ಜನಿಸಿದರು. ಮುಹಮ್ಮದ್ರವರು(ಸ) ತಮ್ಮ ಜನನಕ್ಕೆ ಮುಂಚೆಯೇ ತಂದೆಯನ್ನು ಕಳಕೊಂಡಿದ್ದರು. ಕೇವಲ 6 ವರ್ಷ ಪ್ರಾಯದವರಾಗಿದ್ದಾಗ ತಾಯಿಯ ಆಶ್ರಯವೂ ಇಲ್ಲದಂತಾಯಿತು. ತಾತ ಅಬ್ದುಲ್ ಮುತ್ತಲಿಬ್ ಅವರ ಪೋಷಣೆಯಲ್ಲಿ ಎರಡು ವರ್ಷ ಕಳೆದರು. 8ನೆಯ ವರ್ಷ ಪ್ರಾಯದಲ್ಲಿ ತಾತನ ನೆರಳೂ ಇಲ್ಲದಾಯಿತು. ಆ ಬಳಿಕ ಮುಹಮ್ಮದ್(ಸ) ತಮ್ಮ ಚಿಕ್ಕಪ್ಪ ಅಬೂ ತಾಲಿಬರ ಆಸರೆಯಲ್ಲಿ ಬೆಳೆದರು. ಮುಹಮ್ಮದ್ ರವರಿಗೆ(ಸ) ಅಕ್ಷರಾಭ್ಯಾಸ ಮಾಡುವ ಮತ್ತು ವಿದ್ಯೆ ಕಲಿಯುವ ಸಂದರ್ಭವೇ ಒದಗಿ ಬಂದಿರಲಿಲ್ಲ. ಅವರು ಓರ್ವ ನಿರಕ್ಷರಿಯಾಗಿಯೇ ಬೆಳೆದರು. ಕುಡಿತ, ದರೋಡೆ, ಜೂಜಾಟ, ವ್ಯಭಿಚಾರಗಳ ಆಗರವಾಗಿದ್ದ ಅರಬ್ ದೇಶದಲ್ಲಿ ಅವರು ಕೆಡುಕಿನ ಗಂಧಗಾಳಿಯೂ ಸೋಂಕದೆ ಯೌವನಾವಸ್ಥೆಯನ್ನು ಕಳೆದರು. ಅರಬರು ಅವರ ಪ್ರಾಮಾಣಿಕತೆಯನ್ನೂ ಸತ್ಯನಿಷ್ಠೆಯನ್ನೂ ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದರು. ‘ಅವಿೂನ್’ (ಪ್ರಾಮಾಣಿಕ) ಮತ್ತು ‘ಸಾದಿಕ್’ (ಸತ್ಯಸಂಧ) ಎಂಬ ಬಿರುದನ್ನು ಮಕ್ಕಾ ನಿವಾಸಿಗಳು ಅವರಿಗೆ ನೀಡಿದ್ದರು. ಸುತ್ತಮುತ್ತಲ ಜನರು ಸೃಷ್ಟಿ ಪೂಜೆ, ಸ್ವಾರ್ಥ, ಅನೀತಿ, ಅತ್ಯಾಚಾರಗಳಲ್ಲಿ ನಿರತರಾಗಿರುವುದನ್ನು ಕಂಡು ಹೃದಯ ಬೇಗುದಿಯಿಂದ ಮುಹಮ್ಮದ್(ಸ) ‘ಹಿರಾ’ ಎಂಬ ಗುಹೆಯಲ್ಲಿ ಧ್ಯಾನಾಸಕ್ತರಾಗಿ ಕಾಲ ಕಳೆಯ ತೊಡಗಿದರು.
ಈ ರೀತಿ ಸೃಷ್ಟಿಕರ್ತನಾದ ಅಲ್ಲಾಹನ ಧ್ಯಾನದಲ್ಲಿ ನಿರತರಾಗಿರುವಾಗ ಒಂದು ದಿನ ದೇವಚರ ಜಿಬ್ರೀಲರ ಮೂಲಕ ದೇವವಾಣಿ ಅವರಿಗೆ ಅವತೀರ್ಣಗೊಳ್ಳಲು ಆರಂಭವಾಯಿತು. ಮಕ್ಕಾದ ಪರಿಸರದಲ್ಲಿರುವ ‘ಹಿರಾ’ ಗುಹೆಯಲ್ಲಿ ಪ್ರವಾದಿ ಮುಹಮ್ಮದ್ರವರ(ಸ) 40ನೆಯ ವಯಸ್ಸಿನಲ್ಲಿ ಆರಂಭಗೊಂಡ ಈ ದಿವ್ಯ ಬೋಧನೆಯು ಅವರ ಜೀವನಾಂತ್ಯದ ವರೆಗೆ ಮುಂದುವರಿಯಿತು.
ಜಗತ್ತಿಗೆ ಬಂದ ಇತರ ಎಲ್ಲ ಪ್ರವಾದಿಗಳಂತೆ ತಾನೂ ಒಬ್ಬ ಪ್ರವಾದಿಯೆಂದು ಅವರು ಘೋಷಿಸಿದರು. ತಾನೂ ಇತರ ಮನುಷ್ಯರಂತೆ ಓರ್ವ ಮನುಷ್ಯನಾಗಿರುವೆನೆಂಬುದನ್ನೂ ಅವರು ಬಹಳ ಒತ್ತುಕೊಟ್ಟು ಹೇಳಿದರು. ಹಾಗೆ ಸಾರಿ ಹೇಳಬೇಕೆಂದು ಅಲ್ಲಾಹನು ಅವರಿಗೆ ಆಜ್ಞಾಪಿಸಿದ್ದನ್ನು ಪವಿತ್ರ ಕುರ್ಆನ್ ಈ ರೀತಿ ಉಲ್ಲೇಖಿಸಿದೆ:
“ಓ ಪೈಗಂಬರರೇ, ಹೇಳಿರಿ- ನಾನು ನಿಮ್ಮಂತೆಯೇ ಇರುವ ಒಬ್ಬ ಮನುಷ್ಯ. ನಿಮ್ಮ ದೇವನು ಏಕ ಮಾತ್ರ ದೇವನೆಂದು ನನ್ನ ಕಡೆಗೆ ‘ದಿವ್ಯವಾಣಿ’ ಮಾಡಲಾಗುತ್ತಿದೆ. ಆದುದರಿಂದ ತನ್ನ ಪ್ರಭುವಿನ ಭೇಟಿಯನ್ನು ನಿರೀಕ್ಷಿಸುವವನು ಸತ್ಕರ್ಮಗಳನ್ನೆಸಗಲಿ ಮತ್ತು ಆರಾಧನೆಯಲ್ಲಿ ತನ್ನ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡದಿರಲಿ.” (18:110)
ಸತ್ಯವಿಶ್ವಾಸಿಗಳು ಪ್ರವಾದಿ ಮುಹಮ್ಮದ್ರವರನ್ನು(ಸ) ಕರೆದು ಪ್ರಾರ್ಥಿಸುವುದಿಲ್ಲ. ಅಲ್ಲಾಹನ ವ್ಯಕ್ತಿತ್ವದಲ್ಲಾಗಲೀ ಗುಣಗಳಲ್ಲಾಗಲೀ ಹಕ್ಕು ಮತ್ತು ಅಧಿಕಾರಗಳಲ್ಲಾಗಲೀ ಅವರನ್ನು ಪಾಲುದಾರರೆಂದು ಬಗೆಯುವುದಿಲ್ಲ.
ಪ್ರವಾದಿ ಮುಹಮ್ಮದ್(ಸ) ಇತರ ಎಲ್ಲ ಪ್ರವಾದಿಗಳಂತೆಯೇ ಓರ್ವ ಪ್ರವಾದಿಯಾಗಿದ್ದರೂ ಎರಡು ವಿಷಯಗಳಲ್ಲಿ ಅವರಿಗೆ ಇತರ ಪ್ರವಾದಿಗಳಿಗಿಂತ ಶ್ರೇಷ್ಠತೆ ಪ್ರಾಪ್ತವಿದೆ. ಹಿಂದಿನ ಎಲ್ಲ ಪ್ರವಾದಿಗಳೂ ಒಂದು ನಿರ್ದಿಷ್ಟ ಪ್ರದೇಶ ಮತ್ತು ಒಂದು ನಿರ್ದಿಷ್ಟ ಕಾಲಕ್ಕಾಗಿ ಕಳುಹಿಸಲ್ಪಡುತ್ತಿದ್ದರು. ಕೆಲವೊಮ್ಮೆ ಒಂದೇ ಸಮಯದಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಬೇರೆ ಬೇರೆ ಪ್ರವಾದಿಗಳನ್ನು ಕಳುಹಿಸಲಾಗುತ್ತಿತ್ತು. ಒಂದೇ ಪ್ರದೇಶಕ್ಕೆ ಒಬ್ಬರಿಗಿಂತ ಹೆಚ್ಚು ಪ್ರವಾದಿಗಳನ್ನು ರವಾನಿಸಿದ್ದೂ ಇದೆ. ಪ್ರತಿಯೊಬ್ಬ ಪ್ರವಾದಿಯ ಪ್ರವಾದಿತ್ವವು ಮುಂದಿನ ಪ್ರವಾದಿಯ ಆಗಮನದೊಂದಿಗೆ ಕೊನೆಗೊಳ್ಳುತ್ತಿತ್ತು. ಆದರೆ ಪ್ರವಾದಿ ಮುಹಮ್ಮದ್(ಸ) ಸಮಸ್ತ ವಿಶ್ವದ ಸಂಪೂರ್ಣ ಮಾನವ ಜನಾಂಗಕ್ಕೆ ಲೋಕಾಂತ್ಯ ಕಾಲದ ವರೆಗೆ ಮಾರ್ಗದರ್ಶನ ಮಾಡಲು ಕಳುಹಿಸಲ್ಪಟ್ಟ ಅಂತಿಮ ಪ್ರವಾದಿಯಾಗಿರುವರು:
“ಹೇಳಿರಿ: ಓ ಮಾನವರೇ, ನಾನು ನಿಮ್ಮೆಲ್ಲರ ಕಡೆಗೆ ಭೂಮಿ ಆಕಾಶಗಳ ಸಾರ್ವಭೌಮನಾಗಿರುವ ಅಲ್ಲಾಹನ ಸಂದೇಶವಾಹಕನಾಗಿರುತ್ತೇನೆ.”(ಪವಿತ್ರ ಕುರ್ಆನ್, 7:158)
“(ಪೈಗಂಬರರೇ,) ನಾವು ನಿಮ್ಮನ್ನು ಸಕಲ ಮಾನವರಿಗೆ ಸುವಾರ್ತೆ ಕೊಡುವವರಾಗಿಯೂ ಎಚ್ಚರಿಕೆ ನೀಡುವವರಾಗಿಯೂ ಮಾಡಿ ಕಳುಹಿಸಿರುತ್ತೇವೆ. ಆದರೆ ಹೆಚ್ಚಿನವರು ಅರಿಯುವುದಿಲ್ಲ.”(ಪವಿತ್ರ ಕುರ್ಆನ್, 34:28)
“ಪೈಗಂಬರರೇ, ನಾವು ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.” (ಪವಿತ್ರ ಕುರ್ಆನ್, 21:107)
“(ಜನರೇ) ಮುಹಮ್ಮದ್ರು ನಿಮ್ಮ ಪುರುಷರ ಪೈಕಿ ಯಾರದೇ ತಂದೆಯಲ್ಲ. ವಾಸ್ತವದಲ್ಲಿ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಪ್ರವಾದಿಗಳಲ್ಲಿ ಕೊನೆಯವರಾಗಿರುತ್ತಾರೆ.” (ಪವಿತ್ರ ಕುರ್ಆನ್, 33:40)
ಕೇವಲ ಸಮಾಜ ಸುಧಾರಕರೇ?
ಪ್ರವಾದಿ ಮುಹಮ್ಮದ್ರನ್ನು(ಸ) ಓರ್ವ ಕ್ರಾಂತಿಕಾರಿ ಸಮಾಜ ಸುಧಾರಕರೆಂದೂ ತತ್ವಜ್ಞಾನಿಯೆಂದೂ ಸಾಮಾನ್ಯವಾಗಿ ಜಗತ್ತಿನ ಎಲ್ಲ ಪ್ರಜ್ಞಾವಂತ ಮಾನವರೂ ಒಪ್ಪುತ್ತಾರೆ. ಕೇವಲ ತತ್ವಜ್ಞಾನಿ ಮತ್ತು ಸಮಾಜ ಸುಧಾರಕರೆಂದ ಮಾತ್ರಕ್ಕೆ ಪ್ರವಾದಿ ಮುಹಮ್ಮದ್ರನ್ನು(ಸ) ಒಪ್ಪಿದಂತಾಗುವುದಿಲ್ಲ. ಪ್ರವಾದಿ ಮುಹಮ್ಮದ್(ಸ) ತಮ್ಮ ಜೀವಮಾನದ ಮೊದಲ ನಲ್ವತ್ತು ವರ್ಷಗಳ ಕಾಲ ಯಾವ ತತ್ವವನ್ನೂ ಪ್ರತಿಪಾದಿಸಿರಲಿಲ್ಲ. ಸಮಾಜದ ಸುಧಾರಣೆಗೆ ಯಾವುದೇ ರೂಪರೇಷೆಯನ್ನು ಜನತೆಯ ಮುಂದೆ ಇಟ್ಟಿರಲಿಲ್ಲ. 40ನೆಯ ವರ್ಷ ಪ್ರಾಯದಲ್ಲಿ ದಿವ್ಯ ಬೋಧನೆ ಲಭಿಸಿದ ಬಳಿಕವೇ ಅವರು ಏಕದೇವ ವಿಶ್ವಾಸ, ಪ್ರವಾದಿತ್ವ ಮತ್ತು ಪರಲೋಕ ವಿಶ್ವಾಸದ ಮೂಲಭೂತ ತತ್ವಗಳನ್ನು ಜನತೆಯ ಮುಂದಿಟ್ಟರು. ವ್ಯಕ್ತಿಯ ವಿಕಾಸ, ಸಮಾಜದ ಸುಧಾರಣೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಒಂದು ಸಮಗ್ರ ಕಾರ್ಯಕ್ರಮವನ್ನು ಜನತೆಯ ಮುಂದಿಟ್ಟರು. ಮಾತ್ರವಲ್ಲ 23 ವರ್ಷಗಳ ಪ್ರವಾದಿತ್ವ ಜೀವನ ಕಾಲದಲ್ಲಿ ತಾವು ಪ್ರತಿಪಾದಿಸಿದ ತತ್ವಗಳ ಬುನಾದಿಯಲ್ಲಿ ಮತ್ತು ತಾವು ಮುಂದಿಟ್ಟ ಕಾರ್ಯಕ್ರಮದ ಆಧಾರದಲ್ಲಿ ಒಂದು ಸಮಾಜವನ್ನು ಕಟ್ಟಿ ಬೆಳೆಸಿದರು ಮತ್ತು ಒಂದು ರಾಷ್ಟ್ರವನ್ನು ನಿರ್ಮಿಸಿದರು. 14 ಶತಮಾನಗಳ ಬಳಿಕ ಇಂದಿಗೂ ಆ ತತ್ವಗಳು ಮತ್ತು ಕಾರ್ಯಕ್ರಮಗಳು ಜಗತ್ತಿನ ಜನರ ಗಮನ ಕೇಂದ್ರವಾಗಿದೆ. ಇದು ಕೇವಲ ಒಬ್ಬ ಸುಧಾರಕನಿಂದ ಸಾಧ್ಯವಾಗುವ ಕಾರ್ಯವಲ್ಲ. ತಾನು ಯಾವ ಮಾತನ್ನೂ ತನ್ನ ಚಿತ್ತದಿಂದ ಹೇಳುವುದಿಲ್ಲ. ಎಲ್ಲವೂ ದೇವನ ವತಿಯಿಂದ ಬಂದ ದಿವ್ಯ ಬೋಧನೆಯನ್ನು ಆಧರಿಸಿದೆ ಎಂದು ಅವರೇ ಘೋಷಿಸುತ್ತಾರೆ. ಅವರು ಸ್ವಯಂ ಪ್ರತಿಪಾದಿಸಿದಂತೆ ಅವರನ್ನು ಓರ್ವ ದೇವ ಪ್ರವಾದಿಯೆಂದು ನಂಬದೆ ಕೇವಲ ಒಬ್ಬ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಎನ್ನುವುದು ಅವರ ನಿರಾಕರಣೆಯಲ್ಲದೆ ಇನ್ನೇನು?
“ಅವರು ತಮ್ಮ ಸ್ವಚಿತ್ತದಿಂದ ನುಡಿಯುವುದಿಲ್ಲ. ಇದು ಅವರಿಗೆ ಅವತೀರ್ಣಗೊಳ್ಳುವಂತಹ ಒಂದು ‘ದಿವ್ಯವಾಣಿ’ ಆಗಿದೆ.”(ಪವಿತ್ರ ಕುರ್ಆನ್, 53:3-4)
ತಾನು ದೇವ ಪ್ರವಾದಿಯೆಂದು ಸಾರಿ 23 ವರ್ಷಗಳ ತನಕ ತಮ್ಮ ಘೋಷಣೆಯಲ್ಲಿ ಸ್ಥಿರವಾಗಿದ್ದು ಜಗತ್ತು ಕಂಡರಿಯದಂತಹ ಒಂದು ಮಹಾನ್ ಕ್ರಾಂತಿಯನ್ನು ಸಾಧಿಸಿದ ವ್ಯಕ್ತಿ ಯನ್ನು ಕೇವಲ ಒಬ್ಬ ಒಳ್ಳೆಯ ಮನುಷ್ಯನೆಂದು ಸಾರುವುದು ಮತ್ತು ಅವರ ಪ್ರವಾದಿತ್ವವನ್ನು ಅಲ್ಲಗಳೆಯುವುದು ಅವರಿಗೆ ಎಸಗುವ ಅತಿ ದೊಡ್ಡ ಅಪಚಾರವಾಗಿದೆ. ತನ್ನನ್ನು ದೇವ ಪ್ರವಾದಿಯೆಂದು ಘೋಷಿಸಿಕೊಂಡ ಒಬ್ಬ ವ್ಯಕ್ತಿ ನಿಜವಾಗಿ ದೇವ ಪ್ರವಾದಿಯಾಗಿರದೆ ಕೇವಲ ಒಬ್ಬ ಸುಧಾರಕನಾಗಿದ್ದು ಸಮಾಜ ಸುಧಾರಣೆಯ ಕಳಕಳಿಯಿಂದ ಪ್ರವಾದಿಯೆಂಬ ಸೋಗು ಹಾಕಿದ್ದರೆ ಆ ವ್ಯಕ್ತಿ ಒಬ್ಬ ಮಹಾ ಸುಳ್ಳುಗಾರ ಮತ್ತು ಮಹಾ ವಂಚಕ ಆಗುವನೇ ಹೊರತು ಒಬ್ಬ ಸಜ್ಜನ ವ್ಯಕ್ತಿ ಅದರಲ್ಲೂ ವಿಶೇಷವಾಗಿ ಮಾನವ ಕುಲಕ್ಕೆ ಮಾದರಿಯಾಗಬಲ್ಲ ಆದರ್ಶ ವ್ಯಕ್ತಿಯಾಗುವುದು ಸಾಧ್ಯವೇ ಇಲ್ಲ.
“ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರಲ್ಲಿ ನಿಮಗಾಗಿ ಒಂದು ಅತ್ಯುತ್ತಮ ಮಾದರಿ ಇತ್ತು.” (ಪವಿತ್ರ ಕುರ್ಆನ್, 33:21)
ಆದ್ದರಿಂದ ಅವರ ಇತರ ಗುಣಗಳ ಶ್ಲಾಘನೆ ಅರ್ಥಪೂರ್ಣವಾಗಬೇಕಿದ್ದರೆ ಅವರು ದೇವ ಸಂದೇಶವಾಹಕರೆಂಬುದನ್ನು ಅಂಗೀಕರಿಸಬೇಕಾದುದು ಅತ್ಯವಶ್ಯಕವಾಗಿದೆ.
ಮುಹಮ್ಮದ್(ಸ) ಇಸ್ಲಾಮಿನ ಸ್ಥಾಪಕರಲ್ಲ
ಪ್ರವಾದಿ ಮುಹಮ್ಮದ್(ಸ) ಇಸ್ಲಾಮ್ ಧರ್ಮದ ಸ್ಥಾಪಕರೆಂಬುದು ನಮ್ಮ ದೇಶ ಬಾಂಧವರಲ್ಲಿ ವ್ಯಾಪಕವಾಗಿರುವ ಒಂದು ತಪ್ಪುಕಲ್ಪನೆ. ಕ್ರೈಸ್ತ ಧರ್ಮದ ಸ್ಥಾಪಕ ಏಸುಕ್ರಿಸ್ತ ಎನ್ನಲಾಗುವಂತೆ, ಬೌದ್ಧ ಧರ್ಮದ ಸ್ಥಾಪಕ ಬುದ್ಧರಾಗಿರುವಂತೆ, ಝರತುಷ್ಟ್ರ ಧರ್ಮದ ಸ್ಥಾಪಕ ಝರತುಷ್ಟ್ರರಾಗಿರುವಂತೆ, ಇಸ್ಲಾಮ್ ಧರ್ಮವು ಮುಹಮ್ಮದರಿಂದ(ಸ) ಸ್ಥಾಪಿಸಲ್ಪಟ್ಟಿತು ಎಂದು ಜನರು ತಿಳಿಯುವುದು ಸಹಜ.
ಆದರೆ ಇಸ್ಲಾಮ್ ಧರ್ಮದ ಹೆಸರೇ ಸೂಚಿಸುವಂತೆ ಅದು ಮುಹಮ್ಮದ್ರವರು(ಸ) ಸ್ಥಾಪಿಸಿದ ಧರ್ಮವಾಗಲೀ ಅವರು ಸ್ಥಾಪಿಸಿದ ಒಂದು ಹೊಸ ಪಂಥವಾಗಲೀ ಅಲ್ಲ. ಅಂತೆಯೇ ಯಹೂದಿ ಜನಾಂಗದ ಧರ್ಮಕ್ಕೆ ಯಹೂದಿ ಪಂಥವೆಂದು ಹೆಸರಿರುವಂತೆ, ಸಿಂಧೂ ನದಿಯ ದೇಶದ ವಾಸಿಗಳು ಹಿಂದೂಗಳೆನಿಸಿಕೊಂಡಿರುವಂತೆ, ಇಸ್ಲಾಮ್ ಒಂದು ವರ್ಗ ಅಥವಾ ಪ್ರದೇಶದೊಂದಿಗೆ ಸಂಬಂಧವಿರಿಸಿಕೊಂಡ ಧರ್ಮವೂ ಅಲ್ಲ. ಅದು ಮುಹಮ್ಮದ್(ಸ) ಆವಿಷ್ಕರಿಸಿದ ಮುಹಮ್ಮದೀಯ ಧರ್ಮವಾಗಿರದೇ ಮಾನವಕುಲದ ಆದಿಪಿತ ಆದಮರಿಂದ(ಅ) ಹಿಡಿದು ಅಂತಿಮ ಪ್ರವಾದಿ ಮುಹಮ್ಮದ್ರವರ(ಸ) ವರೆಗೆ ವಿಶ್ವದ ಒಡೆಯನಿಂದ ನೇಮಿಸಲ್ಪಟ್ಟ ಎಲ್ಲ ಪ್ರವಾದಿಗಳೂ ಪ್ರತಿಪಾದಿಸಿದ ಸನಾತನವೂ ಚಿರನೂತನವೂ ಆದ ಧರ್ಮವಾಗಿದೆ.
ಇಸ್ಲಾಮ್ ಎಂಬ ಪದದ ಅರ್ಥವು ಅನುಸರಣೆ, ವಿಧೇಯತೆ ಮತ್ತು ಶಾಂತಿ ಎಂದಾಗಿದೆ. ಮನುಷ್ಯನು ತನ್ನ ಸೃಷ್ಟಿಕರ್ತ, ಪಾಲಕ, ಪ್ರಭು ಮತ್ತು ಅಧಿಪತಿಯಾದ ಅಲ್ಲಾಹನಿಗೆ ಸಂಪೂರ್ಣ ವಿಧೇಯನಾಗಿ ಅವನ ಆಜ್ಞೆಗಳನ್ನು ಅನುಸರಿಸಿ ಜೀವಿಸುವ ಜೀವನ ಪದ್ಧತಿ ಎಂಬುದೇ ಆ ಪದದ ತಾತ್ಪರ್ಯ. ಹಾಗೆ ಜೀವಿಸಿದಾಗ ಅವನು ಇಹ-ಪರ ಲೋಕಗಳಲ್ಲಿ ಶಾಂತಿ ಮತ್ತು ನೆಮ್ಮದಿ ಹಾಗೂ ಮೋಕ್ಷ ಮತ್ತು ವಿಜಯವನ್ನು ಪಡೆಯುವನು.
ಅಲ್ಲಾಹನ ಬಳಿ ಸ್ವೀಕಾರ ಯೋಗ್ಯವಾದ ಧರ್ಮವು ಇದೊಂದೇ ಆಗಿದೆ ಎಂಬುದನ್ನು ಪವಿತ್ರ ಕುರ್ಆನ್ ಸ್ಪಷ್ಟಪಡಿಸಿದೆ. ಮಾತ್ರವಲ್ಲ, ಪ್ರಥಮ ಮಾನವರೂ ಪ್ರಥಮ ಪ್ರವಾದಿಯೂ ಆದ ಆದಮ್ರಿಂದ(ಅ) ಅಂತಿಮ ಪ್ರವಾದಿ ಹ. ಮುಹಮ್ಮದ್ರ(ಸ) ತನಕ ಎಲ್ಲ ಪ್ರವಾದಿಗಳು ತಂತಮ್ಮ ಜನತೆಯ ಮುಂದೆ ಇದೇ ಧರ್ಮವನ್ನು ಪ್ರತಿಪಾದಿಸಿದರು ಮತ್ತು ಅದರಂತೆ ಬದುಕಿ ತೋರಿಸಿದರು. ಈ ಧರ್ಮವು ಮನುಷ್ಯನ ಪರಲೋಕ ಮೋಕ್ಷಕ್ಕೆ ಹೇತುವಾಗುವುದು ಮಾತ್ರವಲ್ಲ ಅವನ ಇಹಲೋಕ ಜೀವನದ ಅತ್ಯುತ್ತಮ ನಿರ್ಮಾಣವೂ ಈ ಧರ್ಮದಿಂದಲೇ ಆಗುವುದು. ಅವನ ಎಲ್ಲಾ ಸಮಸ್ಯೆಗಳಿಗೂ ಇದರಲ್ಲಿ ಸೂಕ್ತ ಪರಿಹಾರವಿದ್ದು ಈ ಧರ್ಮ ಮಾತ್ರ ನೈಜ ಅರ್ಥದಲ್ಲಿ ಅವನನ್ನು ವಿಜಯದ ಕಡೆಗೆ ಒಯ್ಯಬಲ್ಲುದು. ಅವನಿಗೆ ಶಾಂತಿ, ಸುಭಿಕ್ಷೆ ಮತ್ತು ಕಲ್ಯಾಣವನ್ನು ನೀಡಬಲ್ಲುದು.
- ತಪ್ಪು ಕಲ್ಪನೆಗಳು ಕೃತಿಯಿಂದ
IslamKannada News Portal


