- ಡಾ| ಯೂಸುಫುಲ್ ಕರ್ಝಾವಿ
ಕಂಠಪಾಠ ಮಾಡಲು ಹೃದ್ಗತ ಮಾಡಿಕೊಳ್ಳುವ ರೀತಿಯಲ್ಲಿ ಕುರ್ಆನ್ ಅತ್ಯಂತ ಸರಳವಾದ ಗ್ರಂಥವಾಗಿದೆ. ಚಿಂತನೆ ನಡೆಸಲು, ಅರ್ಥೈಸಿಕೊಳ್ಳಲು ಸಾಧ್ಯವಿರುವ ಗ್ರಂಥ ಎಂಬುದು ಕುರ್ಆನ್ನ ಸವಿಶೇಷತೆಯಾಗಿದೆ. “ನಾವು ಈ ಕುರ್ಆನನ್ನು ಉಪದೇಶಕ್ಕಾಗಿ ಸುಲಭ ಸಾಧನವಾಗಿ ಮಾಡಿರುವೆವು. ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ?” (ಅಲ್ಕಮರ್: 17)
ಕುರ್ಆನ್ನ ಪದಗಳು, ವಾಕ್ಯಗಳು, ಸೂಕ್ತಗಳು ಸುಲಭವೂ, ಸರಳವೂ, ಸುಂದರವೂ ಆಗಿದೆ. ಹೃದಯದಲ್ಲಿ ಕುರ್ಆನನ್ನು ತುಂಬಿಕೊಳ್ಳಲು, ಕಂಠಪಾಠ ಮಾಡಲು, ಹೃದಯವನ್ನು ಕುರ್ಆನ್ ನಂತೆ ರೂಪಿಸಿಕೊಳ್ಳಬಯಸುವವರಿಗೆ ಕುರ್ಆನ್ ಸುಲಭದಲ್ಲಿ ಹೃದ್ಯವಾಗುತ್ತವೆ. ಆದ್ದರಿಂದಲೇ ಲಕ್ಷಾಂತರ ಮಂದಿ ಕುರ್ಆನ್ ಕಂಠಪಾಠ ಮಾಡಿರುವುದನ್ನು ನಾವು ಕಾಣುತ್ತೇವೆ. ಅದರಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳಿದ್ದಾರೆ. ಒಂದು ಗ್ರಂಥವನ್ನು ಅದು ಪವಿತ್ರವೋ, ಅಪವಿತ್ರವೋ ಎಂದು ತಿಳಿದುಕೊಳ್ಳಲು ಕೂಡ ಸಮರ್ಥರಲ್ಲದ ಚಿಕ್ಕ ಮಕ್ಕಳು ಕುರ್ಆನ್ ಕಂಠಪಾಠ ಮಾಡುತ್ತಾರೆ.
ಕ್ರೈಸ್ತರು ತಮ್ಮ ದೈವಿಕ ಗ್ರಂಥದ ವಿಶ್ವಾಸಿಗಳಾಗಿದ್ದರೂ ಕೂಡಾ ಸಂಪೂರ್ಣವಾಗಿ ಬಿಡಿ, ಅರ್ಧವೋ, ನಾಲ್ಕರಲ್ಲಿ ಒಂದು ಭಾಗವೋ ಕಂಠಪಾಠ ಮಾಡಿದಂತೆ ತೋರುವುದಿಲ್ಲ. ಅವರ ವಿದ್ವಾಂಸರು, ಬಿಷಪ್ಗಳು, ಕಾರ್ಡಿನಾಲ್ಗಳು ಧರ್ಮಗ್ರಂಥವನ್ನು ಕಂಠಪಾಠ ಮಾಡಿದವರಲ್ಲ. ಕುರ್ಆನನ್ನು ಅರಬಿಗಳಲ್ಲದವರು ಸುಂದರವಾಗಿ ಬಾಯಿ ಪಾಠ ಮಾಡುತ್ತಾರೆ. ಏಷ್ಯಾ, ಆಫ್ರಿಕಾದೊಂದಿಗೆ ಸೇರಿಕೊಂಡಿರುವ ಭಾರತ, ಪಾಕಿಸ್ತಾನ, ಬಾಂಗ್ಲಾದೇಶಿಯರು, ಅಫ್ಘಾನಿಸ್ತಾನ, ತುರ್ಕಿಗಳು, ಸೆನೆಗಲ್ನವರು ಕುರ್ಆನ್ ಕಂಠಪಾಠ ಮಾಡಿದವರಲ್ಲಿ ಸೇರಿದ್ದಾರೆ. ಅವರು ಅರಬಿ ಭಾಷೆಯನ್ನು ಭಾಷೆ ಎಂಬ ನೆಲೆಯಲ್ಲಿ ಅರಿತವರಲ್ಲ. ಕತರ್ ನಲ್ಲಿ ನಡೆದ ಕುರ್ಆನ್ ಕಂಠಪಾಠ ಸ್ಪರ್ಧೆಯಲ್ಲಿ ಪರೀಕ್ಷಕನಾಗುವ ಅವಕಾಶ ನನಗೆ ದೊರೆತಿತ್ತು. ಅದರಲ್ಲಿ ಓರ್ವನ ಕುರ್ಆನ್ ಪಠಣವು ನನಗೆ ಕುರ್ಆನ್ನ ಆಡಿಯೋ ಕ್ಯಾಸೆಟ್ನಂತೆ ತೋರಿತು. ಒಂದು ಅಕ್ಷರವೋ, ಪದವೋ ಬಿಟ್ಟು ಹೋಗದಂತೆ ಕುರ್ಆನನ್ನು ಬಹಳ ಸುಂದರವಾಗಿ ಪಾರಾಯಣ ಮಾಡುತ್ತಿದ್ದ. ನಾನು ಆತನೊಡನೆ ಅರಬಿಯಲ್ಲಿ “ನಿನ್ನ ಹೆಸರೇನು?” ಎಂದು ಕೇಳಿದಾಗ, ಉತ್ತರ ಹೇಳಲು ತಿಳಿದಿರಲಿಲ್ಲ. ಅರಬಿ ಪದಗಳ ಅರ್ಥ ಆತನಿಗೆ ತಿಳಿದಿಲ್ಲ ಎಂಬುದೇ ಇದರ ಅರ್ಥ. “ಈ ಉಪದೇಶವನ್ನು ನಿಶ್ಚಯವಾಗಿಯೂ ನಾವು ಅವತೀರ್ಣಗೊಳಿಸಿರುತ್ತೇವೆ ಮತ್ತು ಸ್ವತಃ ನಾವೇ ಅದರ ರಕ್ಷಕರೂ ಆಗಿರುತ್ತೇವೆ” (ಅಲ್ಹಿಜ್ರ್: 9). ಅಂದರೆ ಕುರ್ಆನನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅಲ್ಲಾಹನೇ ವಹಿಸಿದ್ದಾನೆ ಎಂದು ಈ ಸೂಕ್ತದಲ್ಲಿ ಸ್ಪಷ್ಟಪಡಿಸಲಾಗಿದೆ. ತಲೆಮಾರುಗಳಿಂದ ಕುರ್ಆನ್ ಕಂಠಪಾಠ ಮಾಡಿಕೊಂಡು ಬರುತ್ತಿರುವುದು, ಹೃದ್ಗತಗೊಳಿಸಿದವರನ್ನು ಸಜ್ಜುಗೊಳಿಸುವುದು ಕುರ್ಆನ್ ಸಂರಕ್ಷಣೆಯ ಒಂದು ರೀತಿಯಾಗಿದೆ.
ಕುರ್ಆನನ್ನು ತಜ್ವೀದ್ನೊಂದಿಗೆ ಕಂಠಪಾಠ ಮಾಡುವಾಗ ನನಗೆ ಹತ್ತಕ್ಕಿಂತ ಸಣ್ಣ ಪ್ರಾಯವಾಗಿತ್ತು. ಅದಕ್ಕಿಂತಲೂ ಕಡಿಮೆ ಪ್ರಾಯದಲ್ಲಿ ಕುರ್ಆನ್ ಕಂಠಪಾಠ ಮಾಡಲು ನನಗೆ ಸಾಧ್ಯವಾಗುತ್ತಿತ್ತು. ಏಳು ವರ್ಷ ಪ್ರಾಯದಲ್ಲೇ ಕುರ್ಆನ್ ಕಂಠಪಾಠ ಮಾಡಿದವರನ್ನು ನಾನು ಈಜಿಪ್ಟ್ ನಲ್ಲಿ ಕಂಡಿದ್ದೇನೆ. ಸಣ್ಣ ಪ್ರಾಯದಲ್ಲಿ ಕುರ್ಆನ್ ಕಂಠಪಾಠ ಮಾಡುವುದನ್ನು ವಿಮರ್ಶಿಸುವ ಕೆಲವು ಶಿಕ್ಷಣ ತಜ್ಞರಿದ್ದಾರೆ. ಅರ್ಥ ಗ್ರಹಿಸದೆ ಅದೆಂಥ ಕಂಠಪಾಠ ಮಾಡುವುದು ಎಂಬುದು ಅವರ ಪ್ರಶ್ನೆ. ತನಗೆ ಅರ್ಥವಾಗದ್ದನ್ನು ಕಂಠಪಾಠ ಮಾಡಬೇಕಾಗಿಲ್ಲವೆಂದು ಅವರು ಭಾವಿಸುತ್ತಾರೆ. ಈ ವಾದ ಕುರ್ಆನ್ಗೆ ಅನ್ವಯಿಸಬೇಕಾಗಿಲ್ಲ. ಮಕ್ಕಳು ಸಣ್ಣಂದಿನಲ್ಲೇ ಕುರ್ಆನ್ ಕಂಠಪಾಠ ಮಾಡಲಿ. ದೊಡ್ಡವರಾಗುವಾಗ ಅವರು ಅರ್ಥವನ್ನು ಗ್ರಹಿಸಬಹುದು. ಸಣ್ಣ ಪ್ರಾಯದಲ್ಲಿ ಕಂಠಪಾಠ ಮಾಡುವುದು ಕಲ್ಲಿನಲ್ಲಿ ಕೆತ್ತಿದಂತೆ ಆಗುತ್ತದೆ. ಸಣ್ಣಂದಿನಲ್ಲೇ ಕುರ್ಆನ್ ಕಂಠಪಾಠ ಮಾಡಿದ ನಾವು ದೊಡ್ಡವರಾಗುವಾಗ ಅದರ ಪ್ರಯೋಜನವನ್ನು ಅನುಭವಿಸಿದ್ದೇವೆ. ಸಣ್ಣ ಪ್ರಾಯ ದಲ್ಲೇ ಅದರ ನಿಯಮ, ಶಿಸ್ತುಗಳನ್ನು ಪಾಲಿಸಿ ಕಂಠಪಾಠ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಅಕ್ಷರ ಸ್ಪಷ್ಟತೆ, ಉಚ್ಚಾರ, ಸೌಮ್ಯತೆಯಿಂದ ಬಹಳ ಸುಲಲಿತವಾಗಿ ಕುರ್ಆನನ್ನು ಓದುವಂತೆ ಮಾಡುವುದು ಬಾಲ್ಯದಲ್ಲಿನ ಕಲಿಕೆಯಿಂದಾಗಿದೆ.
ಕುರ್ಆನ್ ಕಂಠಪಾಠವನ್ನು ಪ್ರೋತ್ಸಾಹಿಸುವ ಧಾರಳ ಪ್ರವಾದಿ ವಚನಗಳಿವೆ. ಸತ್ಯವಿಶ್ವಾಸಿಯ ಅಂತರಂಗದಲ್ಲಿ ಕುರ್ಆನ್ ಪ್ರತಿಧ್ವನಿಸುತ್ತಿರಬೇಕು. ಪ್ರವಾದಿಯವರು(ಸ) ಸೂಚಿಸಿರುವರು- “ಕುರ್ಆನ್ ಇಲ್ಲದ ಹೃದಯವು ಜನ ವಾಸವಿಲ್ಲದ ಮನೆಯಂತೆ.” (ತಿರ್ಮಿದಿ)
ಕುರ್ಆನ್ ಕಲಿತ ತನ್ನ ಅನುಚರರನ್ನು ಪ್ರವಾದಿವರ್ಯರು(ಸ) ಗೌರವಿಸಿದ್ದರು. ಅವರಿಗೆ ಸ್ಥಾನಮಾನವನ್ನು ಪದವಿಗಳನ್ನು ನೀಡಿ ಗೌರವಿಸಿದ್ದರು.
ಅಬೂಹುರೈರರಿಂದ ಉದ್ಧರಿಸಲಾದ ಒಂದು ಘಟನೆ ಹೀಗಿದೆ: ಪ್ರವಾದಿ(ಸ) ಒಮ್ಮೆ ಯಾತ್ರಾ ತಂಡವನ್ನು ಕಳುಹಿಸಿದರು. ಅದರಲ್ಲಿ ತುಂಬಾ ಜನರಿದ್ದರು. ಅವರಲ್ಲಿ ಪ್ರತಿಯೊಬ್ಬರೊಂದಿಗೂ ಪ್ರವಾದಿವರ್ಯರು(ಸ) ಕುರ್ಆನ್ ಓದಿಸಿದರು. ತಂಡದಲ್ಲಿದ್ದ ಓರ್ವ ಯುವಕನೊಡನೆ ಪ್ರವಾದಿಯವರು(ಸ) “ಮಗನೇ, ಕುರ್ಆನ್ನಲ್ಲಿ ನಿನಗೆ ಎಷ್ಟು ಅಧ್ಯಾಯ ತಿಳಿದಿದೆ?”
ಯುವಕ: ಇಂತಿಂಥ ಸೂರಃ ಮತ್ತು ಸೂರಃ ಅಲ್ಬಕರವು ತಿಳಿದಿದೆ.
ಪ್ರವಾದಿ(ಸ): “ನಿನಗೆ ಸೂರಃ ಅಲ್ಬಕರ ತಿಳಿದಿದೆಯೇ?”
ಯುವಕ: “ಹೌದು”
ಪ್ರವಾದಿ(ಸ): “ಹೋಗು, ನೀನು ಈ ತಂಡದ ಅಮೀರ್ (ನಾಯಕ)”.
ಸಭೆಯಲ್ಲಿದ್ದ ಓರ್ವ ಪ್ರಸಿದ್ಧ ವ್ಯಕ್ತಿ ಹೇಳುತ್ತಾರೆ:
“ಸೂರತುಲ್ ಬಕರದೊಂದಿಗೆ ನನಗೆ ನ್ಯಾಯ ಪಾಲಿಸಿ ಬದುಕಲು ನನ್ನಿಂದ ಸಾಧ್ಯವಾಗಲಿಕ್ಕಿಲ್ಲ ಎಂಬ ಕಾರಣಕ್ಕೆ ನಾನು ಸೂರಃ ಅಲ್ಬಕರ ಕಲಿತಿಲ್ಲ.”
ಪ್ರವಾದಿ(ಸ) ಹೇಳುತ್ತಾರೆ: “ನೀವು ಕುರ್ಆನ್ ಕಲಿತು ಅದನ್ನು ಪಾರಾಯಣ ಮಾಡುತ್ತಿರಬೇಕು. ಕುರ್ಆನ್ ಅಧ್ಯಯನ ಮಾಡಿ, ಅದನ್ನು ಪಾರಾಯಣ ಮಾಡುವವನ ಉದಾಹರಣೆಯು ಕಸ್ತೂರಿ ತುಂಬಿಸಿ ತೆರೆದಿಟ್ಟ ಪಾತ್ರೆಯಂತಿದೆ. ಅದರ ಸುಗಂಧ ಎಲ್ಲೆಡೆಗೂ ಹಬ್ಬುವುದು. ಕುರ್ಆನನ್ನು ಕಲಿತು ನಿದ್ರಿಸುವವನ (ನಿಶ್ಚಲ) ಸ್ಥಿತಿಯು ಮುಚ್ಚಿದ ಕಸ್ತೂರಿಯ ಪಾತ್ರೆಯಂತಿದೆ.” (ತಿರ್ಮಿದಿ)
ಅವರು ಜೀವಿಸಿದ ಕಾಲದಲ್ಲಿ ಇಂತಹ ಗೌರವವಾದರೆ, ಮರಣಾನಂತರವೂ ಪ್ರವಾದಿ(ಸ) ಕುರ್ಆನ್ ವಾಹಕರೊಂದಿಗೆ ವಿಶೇಷ ಗೌರವ ತೋರಿಸಿದ್ದರೆಂದು ಇತಿಹಾಸ ತಿಳಿಸುತ್ತದೆ. ಕುರ್ಆನ್ ಚೆನ್ನಾಗಿ ತಿಳಿದವರನ್ನೇ ಮಯ್ಯತನ್ನು ಕಬರ್ ಗೆ ಇರಿಸುವಾಗಲೂ ಪ್ರಥಮ ಪ್ರಾಶಸ್ತ್ಯ ನೀಡಲಾಗಿತ್ತು. ಉಹುದ್ನ ಹುತಾತ್ಮರನ್ನು ದಫನ ಮಾಡಿದ್ದೇ ಇದಕ್ಕೆ ಮುಖ್ಯ ಉದಾಹರಣೆ. ವಿವಿಧ, ವಂಶ, ಗೋತ್ರದವರಿಗೆ ಇಸ್ಲಾಮ್ನ ನಿಯಮ ನಿರ್ದೇಶನಗಳನ್ನು ಕಲಿಸಲು ಕುರ್ಆನ್ನ ಜ್ಞಾನಿಗಳನ್ನು ಪ್ರವಾದಿಯವರು(ಸ) ನಿಯೋಗಿಸುತ್ತಿದ್ದರು. ಕುರ್ಆನ್ ವಾಹಕರಿಗೆ ಮಾತ್ರ ತಮ್ಮ ಕರ್ತವ್ಯವನ್ನು ಸುಂದರವಾಗಿ ನೆರವೇರಿಸಲು ಸಾಧ್ಯವೆಂದು ಪ್ರವಾದಿಯವರು(ಸ) ಅರಿತಿದ್ದರು. “ಬಿಅïರ್ ಮಊನ’ ಘಟನೆಯಲ್ಲಿ ಹುತಾತ್ಮರಾದ ಎಪ್ಪತ್ತಕ್ಕಿಂತ ಹೆಚ್ಚು ಸಹಾಬಿಗಳನ್ನು ಶತ್ರುಗಳು ಮೋಸದಿಂದ ಕೊಂದು ಹಾಕಿದ್ದರು.
ಅಬೂ ಹುರೈರ(ರ) ವರದಿ ಮಾಡಿದ ಇನ್ನೊಂದು ಪ್ರವಾದಿ ವಚನ: ಪ್ರವಾದಿ(ಸ) ಹೇಳಿದರು, “ಅಂತ್ಯ ದಿನದಂದು ಕುರ್ಆನನ್ನು ಪ್ರೀತಿಸುತ್ತಿದ್ದ ವ್ಯಕ್ತಿ ಹಾದು ಬರುವಾಗ ಕುರ್ಆನ್ ಹೇಳುತ್ತದೆ. ರಕ್ಷಕನೇ, ಆತನಿಗೆ ನೀನು ಚಿನ್ನದ ರುಮಾಲನ್ನು ಹೊದಿಸು. ಆಗ ಅವರನ್ನು ಗೌರವಿಸಲಾಗುವುದು. ಕುರ್ಆನ್ ಪುನಃ ಹೇಳು ತ್ತದೆ: “ಅಲ್ಲಾಹನೇ ಅದು ಸಾಕಾಗದು, ಇನ್ನೂ ಕರುಣಿಸು.” ಗೌರವದ ಸಂಕೇತವಾದ ಚಿನ್ನದ ರುಮಾಲನ್ನು ಪುನಃ ಹೊದಿಸಲಾಗುವುದು. ಪುನಃ ಕುರ್ಆನ್: “ರಕ್ಷಕನೇ. ಆತನಿಂದ ನೀನು ಸಂತೃಪ್ತಿ ಪಡು. ಅಲ್ಲಾಹನು ಅವನಿಂದ ಸಂಪ್ರೀತನಾಗುತ್ತಾನೆ.” ನಂತರ ಅಲ್ಲಾಹನು: ಓದು, ಓದುತ್ತಾ ಮೆಟ್ಟಲನ್ನು ಹತ್ತು. ಪ್ರತಿಯೊಂದು ಸೂಕ್ತಕ್ಕೂ ಒಂದೊಂದು ಒಳಿತಿನ ರೀತಿಯಲ್ಲಿ ಆತ ಎತ್ತರಕ್ಕೆ ಸಾಗುತ್ತಾನೆ. (ತಿರ್ಮಿದಿ)
ಪರಲೋಕದ ಪ್ರತಿಫಲವು ಕೇವಲ ಕುರ್ಆನ್ ವಾಹಕರಲ್ಲಿ ಮಾತ್ರ ಸೀಮಿತಗೊಳಿಸುವುದಿಲ್ಲ. ಅದರ ಪ್ರತಿಫಲ ಮಾತಾಪಿತರಿಗೂ ದೊರೆಯುತ್ತದೆ. ಬುರೈದ(ರ)ರಿಂದ ವರದಿಯಾದ ಪ್ರವಾದಿ ವಚನ: ಪ್ರವಾದಿಯವರು(ಸ) ಹೇಳಿದರು, ಕುರ್ಆನ್ ಕಲಿತು ಅದನ್ನು ಪಾರಾಯಣ ಮಾಡುವ ಮತ್ತು ಕುರ್ಆನನ್ನು ಅನುಸರಿಸಿ ಕಾರ್ಯನಿರತರಾಗುವ ವ್ಯಕ್ತಿಗಳಿಗೆ ಅಂತ್ಯ ದಿನದಂದು ಪ್ರಕಾಶದ ಕಿರೀಟವನ್ನು ಧರಿಸಲಾಗುವುದು. ಅದು ಸೂರ್ಯ ಪ್ರಕಾಶಕ್ಕೆ ಸಮಾನವಾಗಿರುತ್ತದೆ. ಅವರ ಮಾತಾಪಿತರಿಗೂ ಚಿನ್ನದ ರುಮಾಲನ್ನು ಹೊದಿಸಲಾಗುವುದು. ಅವರೀರ್ವರು ಪ್ರಶ್ನಿಸುತ್ತಾರೆ, “ನಮಗೆ ಏಕೆ ಇದನ್ನು ಹೊದಿಸುತ್ತೀರಿ?” ಉತ್ತರವಾಗಿ: “ನಿಮ್ಮ ಮಗನ ಕುರ್ಆನ್ನೊಂದಿಗಿನ ಸಂಬಂಧವನ್ನು ಪರಿಗಣಿಸಿ ನಿಮಗೆ ಈ ಗೌರವವನ್ನು ನೀಡಲಾಗಿದೆ.” (ಹಾಕಿಂ)
ಸಣ್ಣಂದಿನಲ್ಲೇ ಮಕ್ಕಳಿಗೆ ಕುರ್ಆನನ್ನು ಕಲಿಸಬೇಕೆಂದು ಮಾತಾಪಿತರಿಗೆ ಸೂಚನೆಯೂ ಇದರಲ್ಲಿ ಅಡಕವಾಗಿದೆ. ಕುರ್ಆನ್ ಪಾರಾಯಣ ಮಾಡಿ, ಕಂಠಪಾಠ ಮಾಡುವವರಿಗಿರುವ ಮಹತ್ವವನ್ನು ಸ್ಪಷ್ಟಪಡಿಸುವ ಹಲವು ಪ್ರವಾದಿ ವಚನಗಳಿವೆ. ಬುಖಾರಿಯಲ್ಲಿ ಉಲ್ಲೇಖಿಸಿದ ಹದೀಸ್ ನಂತೆ ಕುರ್ಆನ್ ಕಂಠಪಾಠ ಮಾಡಿದ ಸಹಾಬಿಗಳು ಮುಆದ್ ಇಬ್ನು ಜಬಲ್, ಉಬಯ್ಯ ಇಬ್ನು ಕಅïಬ್, ಝೈದ್ ಬಿನ್ ಸಾಬಿತ್, ಅಬೂ ಝೈದ್. ಇನ್ನೊಂದು ವರದಿಯಲ್ಲಿ ಅಬೂದರ್ದಾಅïರ ಹೆಸರೂ ಸೇರಿಕೊಂಡಿದೆ.
ಇಂದಿನ ಕಾಲದಲ್ಲಿ ಕಾಣುವಂತೆ ಸಹಾಬಿಗಳ ಕಾಲದಲ್ಲಿ ಖಾರಿಗಳ ಹೆಚ್ಚಳ ಕಾಣುವುದಿಲ್ಲ. ಅವರಲ್ಲಿ ಅಧ್ಯಯನ ಮತ್ತು ಕರ್ಮವು ಒಟ್ಟಿಗೆ ಸಾಗುತ್ತಿತ್ತು. ಅದನ್ನೇ ಉಮರ್ ಬಿನ್ ಖತ್ತಾಬ್(ರ) ಹೇಳಿರುತ್ತಾರೆ: “ನಮ್ಮ ಪೈಕಿ ಸೂರತುಲ್ ಬಕರ, ಅಲೆ ಇಮ್ರಾನ್ ಕಲಿತವರು `ಮಹಾನ್’ ಎಂದು ಗಣಿಸಲ್ಪಟ್ಟರು. ಸೂರತುಲ್ ಬಕರ ಕಂಠಪಾಠ ಮಾಡಿದ ಸಮಯದಲ್ಲಿ ಒಂಟೆಯನ್ನು ದಿಬ್ಹ ಮಾಡಿ ಉಮರ್(ರ) ಸಂತೋಷವನ್ನು ಹಂಚಿಕೊಂಡರು. ಅಬ್ದುಲ್ಲಾ ಇಬ್ನು ಮಸ್ಊದ್(ರ) ಹೇಳುತ್ತಾರೆ: “ಈ ಕುರ್ಆನ್ ಅಲ್ಲಾಹನ ಔತಣವಾಗಿದೆ. ಅದು ಕಲಿಯಲು ಸಾಧ್ಯವಿರುವವರು ಕಲಿಯಲಿ. ಕುರ್ಆನ್ ಓದುವಿಕೆ ಇಲ್ಲದ ಮನೆ ಫಲಶೂನ್ಯವಾದ ವಸತಿಗಳಾಗಿವೆ. ಒಂದು ಒಳಿತು ಕೂಡ ಅಲ್ಲಿ ಇರುವುದಿಲ್ಲ. ಕುರ್ಆನ್ ಇಲ್ಲದ ಮನೆಗಳು ಒಕ್ಕಲು ಇಲ್ಲದ ಮನೆಗಳಂತೆ. ಸೂರತುಲ್ ಬಕರ ಓದುವ ಮನೆಗಳಿಂದ ಶೈತಾನನು ಹೊರಟು ಹೋಗುತ್ತಾನೆ.” (ತ್ವಬ್ರಾನಿ)
IslamKannada News Portal



