Home / ಲೇಖನಗಳು / ಪರಲೋಕ ವಿಶ್ವಾಸ

ಪರಲೋಕ ವಿಶ್ವಾಸ

ಇಸ್ಲಾಮ್ ಧರ್ಮದ ದೃಷ್ಟಿಯಲ್ಲಿ ಮನುಷ್ಯನ ಈ ಲೌಕಿಕ ಜೀವನವು ಒಂದು ಶಿಕ್ಷೆಯಾಗಲೀ ಪುರಸ್ಕಾರವಾಗಲೀ ಅಲ್ಲ. ಇದು ಹಿಂದಿನ ಜನ್ಮದ ಪಾಪಗಳಿಗೆ ಸಿಕ್ಕಿದ ಶಿಕ್ಷೆಯೂ ಅಲ್ಲ. ಹಿಂದಿನ ಜನ್ಮದ ಪುಣ್ಯಗಳಿಗೆ ಸಿಕ್ಕಿದ ಪುರಸ್ಕಾರವೂ ಅಲ್ಲ. ವಾಸ್ತವದಲ್ಲಿ ಇದು ಮನುಷ್ಯನ ಪರೀಕ್ಷಾರ್ಥವಾಗಿ ಅವನಿಗೆ ಲಭಿಸಿದ ಜೀವನವಾಗಿದೆ. ಇಲ್ಲಿ ಅವನಿಗೆ ವಿಚಾರ-ಆಚಾರಗಳ ತಾತ್ಕಾಲಿಕ ಸ್ವಾತಂತ್ರ್ಯ ನೀಡಲಾಗಿದೆ. ಆತನು ತನ್ನ ನೈಜ ಸೃಷ್ಟಿಕರ್ತನನ್ನು ಯಥಾವತ್ತಾಗಿ ಗುರುತಿಸಿ ಅವನ ಆರಾಧನೆ, ದಾಸ್ಯ ಮತ್ತು ಅನುಸರಣೆ ಮಾಡಲು ಸಿದ್ಧನಾಗುತ್ತಾನೆಯೇ ಅಥವಾ ತನ್ನ ಭ್ರಷ್ಟ ಚಿತ್ತದ ಪ್ರೇರಣೆಗಳಿಗೆ ಬಲಿಯಾಗಿ ಸ್ವೇಚ್ಛಾ ವಿಹಾರಿಯಾಗಿ ಜೀವಿಸುತ್ತಾನೆಯೇ ಎಂಬುದನ್ನು ಪರೀಕ್ಷಿಸುವ ತಾಣವಿದು. ಆತನು ದೇವ ಪ್ರವಾದಿಗಳ ಶಿಕ್ಷಣಗಳನ್ನು ಅರಿತು ಅವುಗಳನ್ನು ಮೈಗೂಡಿಸಿಕೊಂಡು ಜೀವಿಸುತ್ತಾನೋ ಅಥವಾ ಶೈತಾನನ ಜಾಲಗಳಿಗೆ ಸಿಲುಕಿ ಆತನ ಅನುಸರಣೆಯಲ್ಲಿ ಜೀವಿಸುತ್ತಾನೋ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಆತನು ತನ್ನ ಸೃಷ್ಟಿಕರ್ತನ ಇಷ್ಟಾನಿಷ್ಟಗಳನ್ನರಿತು ಅವುಗಳಿಗೆ ಬದ್ಧವಾಗಿ ಜೀವನ ಸಾಗಿಸಲು ಸಿದ್ಧನಾಗುತ್ತಾನೋ ಅಥವಾ ಮಾನವ ನಿರ್ಮಿತ ಸಿದ್ಧಾಂತಗಳಿಗೆ ಮರುಳಾಗುತ್ತಾನೋ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಪರಸ್ಪರ ವಿರುದ್ಧವಾದ ಈ ಎರಡು ಮಾರ್ಗಗಳನ್ನು ಅಲ್ಲಾಹನು ಮನುಷ್ಯನ ಮುಂದೆ ತೆರೆದಿಟ್ಟಿರುವನು. ಅವುಗಳ ಪೈಕಿ ಮನುಷ್ಯನು ಯಾವ ಮಾರ್ಗವನ್ನು ಆರಿಸಿಕೊಳ್ಳುವನೋ ಅದರಲ್ಲಿ ನಡೆಯಲುಬೇಕಾದ ಎಲ್ಲ ಅನುಕೂಲತೆಗಳನ್ನು ಒದಗಿಸಿ ಕೊಡಲಾಗುತ್ತದೆ. ಪವಿತ್ರ ಕುರ್‍ಆನ್ ಮನುಷ್ಯ ಜೀವನದ ಈ ವಾಸ್ತವಿಕತೆಯನ್ನು ಅನೇಕ ಕಡೆ ವಿವರಿಸಿದೆ. ಆ ಪೈಕಿ ಕೆಲವು ಸೂಕ್ತಗಳನ್ನು ಮಾತ್ರ ಇಲ್ಲಿ ಉದಾಹರಣೆಗಾಗಿ ಕೊಡಲಾಗುತ್ತಿದೆ:
“ನಾವು ಅವನಿಗೆ ಮಾರ್ಗದರ್ಶನ ಮಾಡಿದೆವು. ಅವನು ಕೃತಜ್ಞತೆ ಸಲ್ಲಿಸುವವನಾಗಲಿ ಅಥವಾ ಕೃತಫ್ನನಾಗಲಿ.” (ಪವಿತ್ರ ಕುರ್‍ಆನ್, 76:3)

“ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವವನೆಂದು ನೋಡಲಿಕ್ಕಾಗಿ ಅವನು ಜೀವನವನ್ನೂ ಮರಣವನ್ನೂ ಆವಿಷ್ಕರಿಸಿದನು. (ಪವಿತ್ರ ಕುರ್‍ಆನ್, 67:2)
“ಅವನಿಗೆ ಎರಡು ಸುಸ್ಪಷ್ಟ ದಾರಿಗಳನ್ನು ತೋರಿಸಿ ಕೊಡಲಿಲ್ಲವೇ?” (ಪವಿತ್ರ ಕುರ್‍ಆನ್, 90:10)

ಐಹಿಕ ಜೀವನದ ವಾಸ್ತವಿಕತೆ

ಪವಿತ್ರ ಕುರ್‍ಆನಿನ ಪ್ರಕಾರ ಮನುಷ್ಯನ ಇಹಲೋಕ ಜೀವನವು ಆತನ ಪ್ರಥಮ ಜೀವನವಾಗಿದ್ದು ಪರೀಕ್ಷಾರ್ಥವಾಗಿರುವ ಈ ಇಹಜೀವನವು ಮರಣದೊಂದಿಗೆ ಕೊನೆಗೊಳ್ಳುತ್ತದೆ. ಒಂದು ದಿನ ಈ ಸಂಪೂರ್ಣ ವಿಶ್ವ ವ್ಯವಸ್ಥೆಯು ಅಸ್ತವ್ಯಸ್ತಗೊಂಡು ಸಂಪೂರ್ಣವಾಗಿ ನಾಶಗೊಳಿಸಲ್ಪಡುವುದು. ಮನುಷ್ಯ ಸಮೇತ ಭೂಮುಖದ ಮೇಲಿರುವ ಎಲ್ಲ ಜೀವಿಗಳು ಸಾವನ್ನಪ್ಪುವರು. ಆ ಬಳಿಕ ಅಲ್ಲಾಹನು ಒಂದು ಹೊಸ ವಿಶ್ವ ವ್ಯವಸ್ಥೆಯನ್ನು ಹೊಸ ನಿಯಮಾವಳಿಗಳೊಂದಿಗೆ ಸೃಷ್ಟಿಸುವನು. ಅದುವೇ ಪರಲೋಕ. ಭೂಮುಖದ ಮೇಲೆ ಪ್ರಥಮ ಮಾನವ ನಿಂದಾರಂಭಿಸಿ ಪ್ರಳಯ ಕಾಲದ ತನಕ ಹುಟ್ಟಿ ಮರಣ ಹೊಂದಿದ ಪ್ರತಿಯೊಬ್ಬ ಮನುಷ್ಯನನ್ನೂ ಅಂದು ಅಲ್ಲಾಹನು ಪುನಃ ಜೀವಂತಗೊಳಿಸುವನು. ಎಲ್ಲ ಮನುಷ್ಯರೂ ತಮ್ಮ ಸೃಷ್ಟಿಕರ್ತನಾದ ಅಲ್ಲಾಹನ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಹಾಜರುಗೊಳಿಸಲ್ಪಡುವರು. ಆ ಮಹಾ ನ್ಯಾಯಾಧೀಶನ ನ್ಯಾಯಾಲಯದಲ್ಲಿ ಮನುಷ್ಯನು ತನ್ನ ಎಲ್ಲ ಆಚಾರ-ವಿಚಾರ ಮತ್ತು ಸತ್ಕರ್ಮ-ದುಷ್ಕರ್ಮಗಳ ಜತೆ ಹಾಜರಾಗುವನು. ಅವನ ಯಾವ ಕರ್ಮವೂ ಯಾವ ವಿಚಾರವೂ ಯಾವ ಸಂಕಲ್ಪವೂ ಅಲ್ಲಾಹನಿಂದ ಮರೆಯಾಗಿರ ಲಾರದು. ಅಲ್ಲಿ ತೀರ್ಮಾನವು ಮನುಷ್ಯನ ವಿಚಾರ ಮತ್ತು ವಿಶ್ವಾಸ ಹಾಗೂ ಆಚಾರ ಮತ್ತು ಕರ್ಮಗಳ ಆಧಾರದಲ್ಲಾಗುವುದು. ಆ ನಿರ್ಣಾಯಕ ದಿನದ ಅಧಿಪತಿಯೂ ಸರ್ವಶ್ರೇಷ್ಠ ನ್ಯಾಯಾಧೀಶನೂ ಆದ ಅಲ್ಲಾಹನು ಮನುಷ್ಯರ ಮಧ್ಯೆ ಅತ್ಯಂತ ನ್ಯಾಯಪೂರ್ಣವಾಗಿ ತೀರ್ಮಾನಿಸುವನು.

ಪರಲೋಕ ಜೀವನದ ವಾಸ್ತವಿಕತೆ
ಇಲ್ಲಿ ಸತ್ಯದ ಮೇಲೆ ವಿಶ್ವಾಸವಿರಿಸುತ್ತಾ ಸತ್ಕರ್ಮಗಳನ್ನು ಮಾಡುತ್ತಾ ಜೀವಿಸಿದವನು ಆ ನಿರ್ಣಾಯಕ ದಿನದಂದು ವಿಜಯಿಯಾಗುವನು, ಮೋಕ್ಷ ಹೊಂದುವನು ಮತ್ತು ಅನುಗ್ರಹಭರಿತ ಸ್ವರ್ಗದ ಶಾಶ್ವತ ನಿವಾಸಿಯಾಗುವನು. ಅಲ್ಲಿ ಅವನಿಗೆ ಯಾವ ಕಣ್ಣೂ ನೋಡಿರದ, ಯಾವ ಕಿವಿಯೂ ಕೇಳಿರದ, ಯಾವ ನಾಲಗೆಯೂ ಸವಿದಿರದ, ಯಾವ ಬುದ್ಧಿಯೂ ಯೋಚಿಸಿರದಂತಹ ಎಲ್ಲ ಸುಖ ಸೌಭಾಗ್ಯಗಳು ಲಭ್ಯವಾಗುವುವು. ಅಲ್ಲಿ ಕಾಯಿಲೆಯಾಗಲೀ ಮುಪ್ಪಾಗಲೀ ಮರಣವಾಗಲೀ ಮನುಷ್ಯನಿಗೆ ಬಾರದು. ಅಲ್ಲಿ ಮನುಷ್ಯನು ತಾನು ಬಯಸಿದ್ದೆಲ್ಲವನ್ನೂ ಪಡೆಯುವನು. ಶಾಶ್ವತ ಐಶ್ವರ್ಯ, ಶಾಶ್ವತ ಯೌವನ, ಶಾಶ್ವತ ಆರೋಗ್ಯ ಮತ್ತು ಶಾಶ್ವತ ಜೀವನ ಅವನಿಗೆ ಅಲ್ಲಿ ಪ್ರಾಪ್ತವಾಗುವುದು. ಯಾವ ಚಿಂತೆಯೂ ಅವನನ್ನು ಕಾಡದು, ಯಾವ ಭಯವೂ ಅವನ ಬಳಿ ಸುಳಿಯದು.

ಜೀವನವನ್ನು ಮಿಥ್ಯ ವಿಚಾರಗಳು ಮತ್ತು ದುರಾಚಾರಗಳಲ್ಲಿ ಕಳೆದವನು ಆ ನಿರ್ಣಾಯಕ ನ್ಯಾಯಾಲಯದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗುವನು. ಅವನ ದುರ್ವಿಚಾರ ಮತ್ತು ದುರಾಚಾರಗಳಿಗೆ ಅನುಗುಣವಾದ ಶಿಕ್ಷೆಯನ್ನು ಅವನು ನರಕದಲ್ಲಿ ಅನುಭವಿಸುವನು. ಯಾವ ಶಿಫಾರಸೂ ಅವನನ್ನು ಅದರಿಂದ ರಕ್ಷಿಸಲಾರದು. ಯಾವನ ವಕಾಲತ್ತೂ ಅವನಿಗೆ ಫಲಕಾರಿಯಾಗದು. ಲಂಚವಾಗಲೀ ಪರಿಹಾರ ಧನವಾಗಲೀ ಅಲ್ಲಾಹನ ನ್ಯಾಯಾಲಯದಲ್ಲಿ ಸ್ವೀಕರಿಸಲ್ಪಡದು. ದೇವನ ಹೊರತು ಅವನು ಯಾರ್ಯಾರಲ್ಲಿ ನಂಬಿಕೆಯಿಟ್ಟು ಕರೆದು ಪ್ರಾರ್ಥಿಸುತ್ತಿದ್ದನೋ, ಯಾರ್ಯಾರಲ್ಲಿ ಭರವಸೆಯಿಟ್ಟು ಅವನು ಜೀವನದಲ್ಲಿ ಸ್ವೇಚ್ಛಾವಿಹಾರಿಯಾಗಿ ವರ್ತಿಸಿದ್ದನೋ, ಯಾರ್ಯಾರ ಆರಾಧನೆ ಉಪಾಸನೆಗಳಲ್ಲಿ ಅವನು ಮೋಕ್ಷವನ್ನು ಅರಸಿದ್ದನೋ, ಅವೆಲ್ಲವೂ ಮಿಥ್ಯವೆಂದು ಅವನಿಗೆ ಮನವರಿಕೆಯಾಗುವುದು. ಯಾರಿಗಾಗಿ ಮನುಷ್ಯನು ಜೀವನದಲ್ಲಿ ಎಲ್ಲ ನಿಷಿದ್ಧ ಮಾರ್ಗಗಳಿಂದ ಸಂಪಾದಿಸಿದ್ದನೋ ಆ ತಂದೆ ತಾಯಿಗಳಾಗಲೀ ಮಡದಿ ಮಕ್ಕಳಾಗಲೀ ಬಂಧು, ನೆಂಟರಿಷ್ಟರಾಗಲಿ ಯಾರೂ ಅಂದು ಅವನ ನೆರವಿಗೆ ಬರಲಾರರು. ನರಕಾಗ್ನಿಯ ಘೋರ ಯಾತನೆಯಿಂದ ಅವನನ್ನು ರಕ್ಷಿಸಲಾರರು.

ಈ ಬಗ್ಗೆ ಪವಿತ್ರ ಕುರ್‍ಆನ್ ಹೀಗೆನ್ನುತ್ತದೆ:
“ಅಂದು ಮನುಷ್ಯನು ದೂರ ಓಡುವನು- ತನ್ನ ಸಹೋದರನಿಂದ- ತನ್ನ ತಾಯಿಯಿಂದ ಮತ್ತು ತನ್ನ ತಂದೆಯಿಂದ- ತನ್ನ ಪತ್ನಿಯಿಂದ ಮತ್ತು ತನ್ನ ಮಕ್ಕಳಿಂದ. ಅವರಲ್ಲಿ ಪ್ರತಿಯೊಬ್ಬನಿಗೂ ಅಂದು, ತನ್ನ ಹೊರತು ಬೇರೆ ಯಾರ ಪ್ರಜ್ಞೆಯೂ ಇಲ್ಲದಂತಹ ಪರಿಸ್ಥಿತಿ ಬಂದೊದಗುವುದು.” (ಪವಿತ್ರ ಕುರ್‍ಆನ್, 8ಂ:34-37)
“ಜನರೇ ನಿಮ್ಮ ಪ್ರಭುವಿನ ಕ್ರೋಧವನ್ನು ಭಯಪಡಿರಿ. ವಾಸ್ತವದಲ್ಲಿ ಪುನರುತ್ಥಾನದ ಫಳಿಗೆಯ ಮಹಾಕಂಪನವು (ಭಯಾನಕ) ವಿಷಯವಾಗಿದೆ. ನೀವು ಅದನ್ನು ಕಾಣುವಂದು ಹಾಲುಣಿಸುವವಳು ಹಾಲುಣ್ಣುವ ತನ್ನ ಶಿಶುವನ್ನು ಮರೆತು ಬಿಡುವಳು. ಪ್ರತಿಯೊಬ್ಬ ಗರ್ಭಿಣಿಗೆ ಗರ್ಭಪಾತವಾಗಿ ಬಿಡುವುದು. ಜನರು ನಿಮಗೆ ಉನ್ಮತ್ತರಂತೆ ತೋರುವರು. ವಸ್ತುತಃ ಅವರು ಉನ್ಮತ್ತರಾಗಿರಲಾರರು. ನಿಜವಾಗಿ ಅಲ್ಲಾಹನ ಯಾತನೆಯೇ ಅಷ್ಟು ಭೀಕರವಾಗಿರುವುದು.” (ಪವಿತ್ರ ಕುರ್‍ಆನ್, 22:1-2)
“ಭೂಮಿಯು ತನ್ನ ಸಂಪೂರ್ಣ ಉಗ್ರತೆಯೊಂದಿಗೆ ಕುಲುಕಲ್ಪಡುವಾಗ, ಭೂಮಿಯು ತನ್ನೊಳಗಿನ ಸಕಲ ಹೊರೆಗಳನ್ನೂ ಹೊರ ಹಾಕಿ ಬಿಡುವಾಗ- ಮತ್ತು ಮನುಷ್ಯನು ‘ಇದಕ್ಕೇನಾಗುತ್ತಿದೆ?’ ಎನ್ನುವಾಗ, ಅಂದು ಅದು ತನ್ನ (ಮೇಲೆ ಗತಿಸಿದ) ಸ್ಥಿತಿಗತಿಗಳನ್ನು ವಿವರಿಸುವುದು- ಏಕೆಂದರೆ ನಿನ್ನ ಪ್ರಭು ಅದಕ್ಕೆ (ಹಾಗೆ ಮಾಡಬೇಕೆಂದು) ಅಪ್ಪಣೆ ಕೊಟ್ಟಿರುವನು. ಅಂದು ಜನರು ವಿಭಿನ್ನ ಸ್ಥಿತಿಗಳಲ್ಲಿ ಮರಳುವರು. (ಇದು) ಅವರ ಕರ್ಮಗಳು ಅವರಿಗೆ ತೋರಿಸಲ್ಪಡಲಿಕ್ಕಾಗಿ, ತರುವಾಯ ಅಣು ಗಾತ್ರದಷ್ಟು ಪುಣ್ಯ ಕಾರ್ಯವೆಸಗಿ ದವನು ಅದನ್ನು ಕಂಡೇ ತೀರುವನು. ಮತ್ತು ಅಣು ಗಾತ್ರದಷ್ಟು ಪಾಪ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು.” (ಪವಿತ್ರ ಕುರ್‍ಆನ್, 99:1-8)

ಮಾನವ ಹುಟ್ಟು ಪಾಪಿಯಲ್ಲ
ಮೇಲಿನ ವಿವರಗಳಿಂದ ಇಹಲೋಕ ಜೀವನ ಮತ್ತು ಪರಲೋಕದ ಕುರಿತು ಇಸ್ಲಾಮಿನ ಕಲ್ಪನೆಗಳ ಸ್ಥೂಲ ಪರಿಚಯವಾಯಿತು. ಈ ಕಲ್ಪನೆಯಲ್ಲಿ ಮಾನವನು ಜನ್ಮತಃ ಪಾಪಿಯಾಗಿದ್ದಾನೆ ಎಂಬುದಕ್ಕೆ ಯಾವ ಸ್ಥಾನವೂ ಇಲ್ಲ. ಎಲ್ಲಾ ಮನುಷ್ಯರು ಜನ್ಮತಃ ಸೃಷ್ಟಿಕರ್ತನಾದ ಅಲ್ಲಾಹನ ಮೂಲ ಪ್ರಕೃತಿಯಲ್ಲಿ ಸೃಷ್ಟಿಸಲ್ಪಡುತ್ತಾರೆ. ನಿಷ್ಕಳಂಕವಾದ ಬೌದ್ಧಿಕ ಮತ್ತು ಶಾರೀರಿಕ ಸಾಮರ್ಥ್ಯಗಳೊಂದಿಗೆ ಅವನನ್ನು ಸೃಷ್ಟಿಸಲಾಗಿದೆ. ಅವನು ಜನ್ಮತಃ ಪಾಪಿಯೋ ಪುಣ್ಯವಂತನೋ ಆಗಿರದೆ ಬೆಳೆದು ಪ್ರೌಢನಾದ ಬಳಿಕ ಇರಿಸಿ ಕೊಳ್ಳುವ ವಿಶ್ವಾಸ – ನಂಬಿಕೆಗಳು, ವಿಚಾರ-ಶ್ರದ್ಧೆಗಳು, ಆಚಾರ – ಸಂಪ್ರದಾಯಗಳು ಮತ್ತು ಕೃತಿ – ಕರ್ಮಗಳ ಆಧಾರದಲ್ಲೇ ಪಾಪ ಪುಣ್ಯಗಳನ್ನು ಕಟ್ಟಿಕೊಳ್ಳುತ್ತಾನೆ.

ಮಾನವಕುಲದ ಆದಿಪಿತರಾದ ಆದಮ್‍ರವರು(ಅ) ಸ್ವರ್ಗದಲ್ಲಿ ಮಾಡಿದ ಒಂದು ತಪ್ಪಿಗಾಗಿ ಅವರನ್ನು ಶಿಕ್ಷಾ ರೂಪದಲ್ಲಿ ಧರೆಗಿಳಿಸಲಾಯಿತೆಂಬ ನಂಬಿಕೆಯನ್ನೂ ಆದಮ್‍ರ(ಅ) ಸಂತತಿಗಳ ಪಾಪದ ಪ್ರಾಯಶ್ಚಿತ್ತಕ್ಕಾಗಿ ಪ್ರವಾದಿ ಈಸಾರನ್ನು[ಏಸುಕ್ರಿಸ್ತ](ಅ) ದೇವನು ಶಿಲುಬೆಗೇರಿಸಿದನೆಂಬ ವಿಶ್ವಾಸವನ್ನೂ ಇಸ್ಲಾಮ್ ಖಂಡಿಸುತ್ತದೆ. ಆದುದರಿಂದ ಕೇವಲ ಒಬ್ಬ ಪ್ರವಾದಿಯನ್ನು ದೇವ ಪುತ್ರನೆಂದು ನಂಬಿದ ಮಾತ್ರಕ್ಕೆ ಜನರ ಎಲ್ಲ ಪಾಪಗಳಿಗೂ ಪ್ರಾಯಶ್ಚಿತ್ತವಾಗಿ ಬಿಡುತ್ತದೆ ಎಂಬ ಮಿಥ್ಯ ಕಲ್ಪನೆಗೆ ಇಸ್ಲಾಮಿನಲ್ಲಿ ಆಸ್ಪದವೇ ಇಲ್ಲ. ಆದಮ್‍ರವರು(ಅ) ಸೃಷ್ಟಿಸಲ್ಪಟ್ಟಿದ್ದೇ ಭೂಮುಖದ ಮೇಲೆ ಅಲ್ಲಾಹನ ಪ್ರತಿನಿಧಿಯಾಗಿ ಕಳುಹಿಸಲ್ಪಡಲಿಕ್ಕಾಗಿ ಎಂದು ಪವಿತ್ರ ಕುರ್‍ಆನ್ ಸ್ಪಷ್ಟಪಡಿಸುತ್ತದೆ.

ಮನುಷ್ಯರ ಸೃಷ್ಟಿಗೆ ಮುಂಚೆ ಸೃಷ್ಟಿಕರ್ತನು ತನ್ನ ದೇವಚರರನ್ನು ಉದ್ದೇಶಿಸಿ ಹೀಗೆ ಹೇಳಿರುವುದಾಗಿ ಪವಿತ್ರ ಕುರ್‍ಆನ್ ಉಲ್ಲೇಖಿಸಿದೆ:
“ನಿಮ್ಮ ಪ್ರಭುವು ಮಲಾಯಿಕಃ(ದೇವಚರ)ರೊಡನೆ, “ನಾನು ಭೂಮಿಯಲ್ಲಿ ಒಬ್ಬ ಖಲೀಫಃನನ್ನು (ಪ್ರತಿನಿಧಿ) ನೇಮಿಸಲಿದ್ದೇನೆ” ಎಂದು ಹೇಳಿದ ಸಂದರ್ಭವನ್ನು ಕೊಂಚ ಊಹಿಸಿರಿ.” (ಪವಿತ್ರ ಕುರ್‍ಆನ್, 2:30)
ಮನುಷ್ಯನನ್ನು ಭೂಮಿಗೆ ಕಳುಹಿಸುವಾಗ ಜೀವನದ ವಾಸ್ತವಿಕತೆಯನ್ನು ಮತ್ತು ದೇವ ಮಾರ್ಗದರ್ಶನದ ಅನುಸರಣೆಯ ಅಗತ್ಯವನ್ನು ಆತನಿಗೆ ಈ ರೀತಿ ಬೋಧಿಸಲಾಗಿತ್ತು:
“ನೀವೆಲ್ಲರೂ ಇಲ್ಲಿಂದ ಹೊರಗಿಳಿಯಿರಿ. ಮುಂದೆ ನನ್ನ ಕಡೆಯಿಂದ ಮಾರ್ಗದರ್ಶನವು ನಿಮ್ಮ ಬಳಿ ಬಂದಾಗ, ಯಾರು ಆ ಮಾರ್ಗದರ್ಶನದಂತೆ ನಡೆಯುವರೋ ಅವರಿಗೆ ಯಾವುದೇ ಭಯ ಮತ್ತು ಚಿಂತೆ ಇರಲಾರದು. ಆ ಮಾರ್ಗದರ್ಶನವನ್ನು ಮಾನ್ಯಮಾಡಲು ನಿರಾಕರಿಸುವವರೂ ನಮ್ಮ ‘ದೃಷ್ಟಾಂತ’ಗಳನ್ನು ಸುಳ್ಳಾಗಿಸುವವರೂ ನರಕಾಗ್ನಿಯಲ್ಲಿ ಬೀಳುವವರಾಗಿದ್ದು ಅಲ್ಲಿ ಅವರು ಸದಾ ಕಾಲವೂ ಇರುವರು.” (ಪವಿತ್ರ ಕುರ್‍ಆನ್, 2:38-39)

  • ತಪ್ಪು ಕಲ್ಪನೆಗಳು ಕೃತಿಯಿಂದ
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …