ಪ್ರಕೃತಿಯು ಇತರ ಎಲ್ಲ ಸೃಷ್ಟಿಗಳಂತೆ ಮಾನವರನ್ನೂ ಜೋಡಿಗಳಾಗಿ ಸೃಷ್ಟಿಸಿದೆ ಮತ್ತು ಅವರ ಮಧ್ಯೆ ಪರಸ್ಪರ ಆಕರ್ಷಣೆ-ಆಸಕ್ತಿಗಳನ್ನು ಇರಿಸಿದೆ. ಇತರ ಸೃಷ್ಟಿಗಳಲ್ಲಿ ಈ ಸ್ತ್ರೀ-ಪುರುಷ ವರ್ಗೀಕರಣ ಮತ್ತು ಆಕರ್ಷಣೆಯು ಸಂತಾನಾಭಿವೃದ್ದಿಗಾಗಿ ಮಾತ್ರ ಸೀಮಿತವಾಗಿದೆ. ಆದರೆ ಮಾನವರಲ್ಲಿ ಈ ವಿಂಗಡನೆ ಮತ್ತು ಆಕರ್ಷಣೆಯು ಸೀಮಾತೀತವಾಗಿದೆ, ಅನಿಯಂತ್ರಿತವಾಗಿದೆ ಮತ್ತು ಇತರ ಎಲ್ಲ ಜೀವಿಗಳಿಗಿಂತ ಹೆಚ್ಚಾಗಿದೆ. ಅದಕ್ಕೆ ಸಮಯ ಮತ್ತು ಋತುವಿನ ಬಂಧನವಿಲ್ಲ. ಸ್ತ್ರೀ-ಪುರುಷರಲ್ಲಿ ಪರಸ್ಪರ ಶಾಶ್ವತವಾದ ಆಕರ್ಷಣೆಯನ್ನೂ ಇರಿಸಲಾಗಿದೆ. ಅವರಲ್ಲಿ ಒಬ್ಬರನ್ನೊಬ್ಬರು ಬಯಸುವ ಮತ್ತು ಲೈಂಗಿಕವಾಗಿ ಆಕರ್ಷಿಸುವ ಅಪಾರ ಸಾಮರ್ಥ್ಯವನ್ನು ಇರಿಸಲಾಗಿದೆ. ಅವರ ಮನದಲ್ಲಿ ಪರಸ್ಪರರ ಬಗ್ಗೆ ಪ್ರೀತಿ-ಪ್ರೇಮಗಳ ಭಾವನೆಯನ್ನು ಇರಿಸಲಾಗಿದೆ. ಅವರ ಶರೀರದ ರಚನೆ, ವರ್ಣ, ರೂಪ, ಸ್ವರ ಮತ್ತು ಪ್ರತಿಯೊಂದು ಅಂಗದಲ್ಲಿಯೂ ಪರಸ್ಪರರಿಗೆ ಆಕರ್ಷಣೆಯನ್ನು ಸೃಷ್ಟಿಸಲಾಗಿದೆ. ಅವರ ಸ್ವರ, ಹಾವಭಾವ, ನಡೆ-ನುಡಿ, ಚಲನ-ವಲನಗಳಲ್ಲಿ ಪರಸ್ಪರರನ್ನು ಆಕರ್ಷಿಸುವ ಅಪಾರ ಶಕ್ತಿಯನ್ನು ತುಂಬಲಾಗಿದೆ.
ಸ್ತ್ರೀ-ಪುರುಷರಲ್ಲಿರುವ ಈ ಲೈಂಗಿಕ ಆಕರ್ಷಣೆಯ ಉದ್ದೇಶ ಕೇವಲ ಸಂತಾನಾಭಿವೃದ್ಧಿ ಅಲ್ಲ. ನಿಸರ್ಗದ ಈ ನಿಯಮವನ್ನು ಯಥೋಚಿತವಾಗಿ ಉಪಯೋಗಿಸಿ, ಮಾನವ ಕುಲದ ಧ್ಯೇಯೋದ್ದೇಶಗಳನ್ನು ತಿಳಿದುಕೊಂಡು ಮಾನವೀಯ ಸಂಸ್ಕ್ರತಿಯನ್ನು ಪೋಷಿಸಿ ಸರ್ವಾಂಗ ಸುಂದರವೂ ಸರ್ವೋತ್ಕ್ರಷ್ಟವೂ ಆದ ಸಾಮಾಜಿಕ ಜೀವನವನ್ನು ರೂಪಿಸಬೇಕೆಂಬುದೇ ಪ್ರಕೃತಿಯ ಉದ್ದೇಶ. ಅದಕ್ಕಾಗಿ ಸ್ತ್ರೀ-ಪುರುಷರಲ್ಲಿ ಜೀವನ ಪರ್ಯಂತ ನೆಲೆ ನಿಲ್ಲಬಲ್ಲ ಮೈತ್ರಿ-ವಿಶ್ವಾಸ, ನಲ್ಮೆ-ನಂಬುಗೆ, ಆತ್ಮೀಯತೆ-ಅವಲಂಬನೆ ಮತ್ತು ಸಹಕಾರಗಳನ್ನು ಉಂಟು ಮಾಡುವುದೇ ನಿಸರ್ಗದ ಗುರಿ.
ಸಂತಾನ ಪ್ರೇಮ
ಮಾನವ ಶಿಶು ಇತರೆಲ್ಲ ಪ್ರಾಣಿ-ಪಕ್ಷಿಗಳ ಮರಿಗಳಿಗಿಂತ ಹೆಚ್ಚು ದುರ್ಬಲವೂ ಕೋಮಲವೂ ಆಗಿದೆ. ಅದು ತನ್ನ ಪಾಲನೆ-ಪೋಷಣೆ ಮತ್ತು ರಕ್ಷಣೆಗೆ ಮಾತಾಪಿತರನ್ನು ಬಹುಕಾಲದ ವರೆಗೆ ಅತ್ಯಧಿಕ ಆಶ್ರಯಿಸಬೇಕಾಗುತ್ತದೆ. ಇದು ಸ್ತ್ರೀ-ಪುರುಷರ ಸಂಬಂಧ ಕೇವಲ ಲೈಂಗಿಕ ಆಕರ್ಷಣೆ ಮತ್ತು ಆಸಕ್ತಿಗಳಿಗೆ ಮಾತ್ರ ಸೀಮಿತವಾಗಿ ಉಳಿಯದೆ ಅವರು ಪರಸ್ಪರರನ್ನು ಅರಿಯುವಂತೆಯೂ ಅವಲಂಬಿಸುವಂತೆಯೂ ಗೌರವಿಸುವಂತೆಯೂ ಪ್ರೇರೇಪಿಸುತ್ತದೆ. ಅಂತೆಯೇ ಮನುಷ್ಯನು ತನ್ನ ಸಂತಾನದ ಬಗ್ಗೆ ಇತರ ಯಾವ ಪ್ರಾಣಿಗಿಂತಲೂ ಹೆಚ್ಚಿನ ಮಮತೆ-ವಾತ್ಸಲ್ಯಗಳನ್ನು ಹೊಂದಿದ್ದಾನೆ.
ಪ್ರಾಣಿಗಳು ತಮ್ಮ ಸಂತಾನವನ್ನು ಅತ್ಯಲ್ಪ ಕಾಲ ಮಾತ್ರ ಪೋಷಿಸುತ್ತವೆ. ಆ ಬಳಿಕ ಅವುಗಳನ್ನು ತೊರೆದು ಬಿಡುತ್ತವೆ. ಮಾತ್ರವಲ್ಲ ಅವುಗಳನ್ನು ಗುರುತಿಸುವ ಶಕ್ತಿಯನ್ನೂ ಕಳೆದುಕೊಳ್ಳುತ್ತವೆ. ಆದರೆ ಮಾನವನು ತನ್ನ ಸಂತಾನದ ಬಗೆಗಿನ ಪ್ರೀತಿ, ವಾತ್ಸಲ್ಯ, ಅಭಿಮಾನಗಳನ್ನು ತಲೆತಲಾಂತರದವರೆಗೆ ಕಾಯ್ದುಕೊಂಡು ಅದರ ಕ್ಷೇಮಾಭ್ಯುದಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಾನೆ. ಇದುವೇ ಮನುಷ್ಯನ ಕುಟುಂಬ ಜೀವನದ ಅಸ್ತಿವಾರ. ಮಕ್ಕಳ ಮದುವೆ ಸಂಬಂಧಗಳ ಮೂಲಕ ಅನೇಕ ಕುಟುಂಬಗಳ ಮಧ್ಯೆ ಬಾಂಧವ್ಯ ಬೆಳೆದು ಅದು ಸುವ್ಯವಸ್ಥಿತ ಸಾಮಾಜಿಕ ಜೀವನಕ್ಕೆ ಆಧಾರವಾಗುತ್ತದೆ.
ಅದಮ್ಯ ಕಾಮಾಸಕ್ತಿ
ಪ್ರತಿಯೊಬ್ಬ ಮನುಷ್ಯನಲ್ಲಿಯೂ ಪಾಶವೀ ಪ್ರವೃತ್ತಿಗಳೂ ಮಾನವೀಯ ಗುಣಗಳೂ ವಿಭಿನ್ನ ಪ್ರಮಾಣಗಳಲ್ಲಿ ಇವೆ. ಈ ಪ್ರವೃತ್ತಿಗಳ ಸಮತೋಲನದಿಂದಲೇ ಸ್ತ್ರೀ-ಪುರುಷ ಸಂಬಂಧಗಳು ಅನ್ಯೋನ್ಯವಾಗಿಯೂ ಮಧುರವಾಗಿಯೂ ಬೆಳೆದು ಒಂದು ಪರಿಶುದ್ಧ ಸಮಾಜ ಜೀವನವು ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಮಾನವನಲ್ಲಿರುವ ಅಪಾರ ಕಾಮ ಪ್ರಚೋದನೆ ಮತ್ತು ಲೈಂಗಿಕ ಆಸಕ್ತಿಯನ್ನು ನಿಯಂತ್ರಿಸುವುದು ಪ್ರಧಾನ ಸಮಸ್ಯೆ. ಕಾಮ ಪ್ರಚೋದಕ ಪರಿಸರ, ಸಂಗೀತ-ಕಲೆಗಳ ಹೆಸರಲ್ಲಿ ಪ್ರಸ್ತುತ ಪಡಿಸಲಾಗುವ ಲೈಂಗಿಕ ಆಕರ್ಷಣೆಯ ಉದ್ರೇಕಕಾರಿ ವಿಚಾರಗಳು ಆತನ ಈ ದಾಹವನ್ನು ಉಲ್ಬಣಗೊಳಿಸುತ್ತದೆ. ಈ ರೀತಿ ಉಲ್ಬಣಗೊಂಡ ದಾಹವನ್ನು ನೀಗಿಸುವ ಸಾಧನಗಳೂ ಲಭ್ಯವಾದಾಗ ಅದು ಮಿತಿ ವಿೂರಿ ಬೆಳೆಯುವುದಲ್ಲದೆ ಆತನು ಲಜ್ಜೆ, ಸಂಕೋಚಗಳ ಎಲ್ಲ ಮೇರೆಗಳನ್ನು ವಿೂರಿ ಪಶುವಿನಂತೆ ವರ್ತಿಸ ತೊಡಗುತ್ತಾನೆ.
ಅನಿಯಂತ್ರಿತ ಲೈಂಗಿಕ ಆಸಕ್ತಿಯಂತೆ ಅದರ ಸಂಪೂರ್ಣ ನಿಗ್ರಹವೂ ಸನ್ಯಾಸವೂ ನಿಸರ್ಗದ ವಿರುದ್ಧ ಹೋರಾಟವಾಗಿದ್ದು ಮಾನವಕುಲದ ಸಮಗ್ರ ಹಿತಾಸಕ್ತಿಗಳಿಗೆ ಮಾರಕವಾಗಿದೆ. ಕಾಮ ಪ್ರಚೋದನೆ ಮತ್ತು ಲೈಂಗಿಕ ಆಸಕ್ತಿಯನ್ನು ವಿವಾಹ ಸಂಬಂಧದ ಮೂಲಕ ಪತಿ-ಪತ್ನಿಯರಾದವರ ಮಧ್ಯೆ ಸೀಮಿತಗೊಳಿಸುವುದು ಇಸ್ಲಾಮಿನ ಉದ್ದೇಶ.
ವಸ್ತ್ರಧಾರಣೆ
ನಾಚಿಕೆ-ಲಜ್ಜೆ ಮತ್ತು ಶಿಷ್ಟಾಚಾರಗಳು ಮಾನವನ ಸಹಜ ಪ್ರಕೃತಿಯಲ್ಲಿರುವಂತಹ ಗುಣಗಳಾಗಿವೆ. ಆದುದರಿಂದಲೇ ಅನಾಗರಿಕ ಕಾಲದಿಂದಲೇ ಸ್ತ್ರೀ-ಪುರುಷರು ತಮ್ಮ ಗುಪ್ತಾಂಗಗಳನ್ನು ಮುಚ್ಚುವ ಒಂದಲ್ಲ ಒಂದು ವಿಧಾನವನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ಇದು ಮಾನವನನ್ನು ಪ್ರಾಣಿಗಳಿಂದ ಬೇರ್ಪಡಿಸುವ ಒಂದು ಪ್ರಧಾನ ಮಾಧ್ಯಮ. ಸೃಷ್ಟಿಕರ್ತನು ಮನುಷ್ಯನಿಗೆ ನೀಡಿರುವ ಈ ಲಜ್ಜೆ ಮತ್ತು ನಾಚಿಕೆ ಪ್ರಜ್ಞೆಯಿಂದಾಗಿಯೇ ಇತರ ಪ್ರಾಣಿಗಳಿಗೆ ವ್ಯತಿರಿಕ್ತವಾಗಿ ಮಾನವನು ತನ್ನ ಕಾಮಾಸಕ್ತಿಯ ಚಟುವಟಿಕೆಗಳನ್ನು ರಹಸ್ಯವಾಗಿಡಲು ನಿರ್ಬಂಧಿತನಾಗುತ್ತಾನೆ. ಇತಿಹಾಸದುದ್ದಕ್ಕೂ ಮಾನವ ಸಮುದಾಯಗಳ ಮಧ್ಯೆ ಇದ್ದ ತಾತ್ವಿಕ, ಸೈದ್ಧಾಂತಿಕ, ಸಾಂಪ್ರದಾಯಿಕ ಮತ್ತು ಸಾಂಸ್ಕ್ರತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ವಸ್ತ್ರಧಾರಣೆ ಅನಿವಾರ್ಯವೆಂಬುದನ್ನು ಮಾನವಕುಲವು ಸರ್ವಾನುಮತದಿಂದ ಅಂಗೀಕರಿಸಿದೆ.
ಇದೇ ರೀತಿ ಎಲ್ಲ ಮಾನವ ವರ್ಗಗಳೂ ವಸ್ತ್ರಧಾರಣೆಯ ನಿಟ್ಟಿನಲ್ಲಿ ಪುರುಷನಿಗಿಂತ ಸ್ತ್ರೀಯ ಹೊಣೆಗಾರಿಕೆ ಅಧಿಕವೆಂಬುದನ್ನು ಒಪ್ಪುತ್ತವೆ. ಸ್ತ್ರೀಯ ದೇಹ ರಚನೆಯಲ್ಲಿರುವ ವಿಶಿಷ್ಟ ಆಕರ್ಷಣೆಯು ಪುರುಷನಿಗಿಂತ ಎಷ್ಟೋ ಪಾಲು ಮಿಗಿಲಾಗಿರುವುದರಿಂದ ಸ್ತ್ರೀ-ಪುರುಷರಿಬ್ಬರನ್ನೂ ಸೃಷ್ಟಿಸಿರುವ ಅಲ್ಲಾಹನು ಸ್ತ್ರೀಯಲ್ಲಿ ಪುರುಷನಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಲಜ್ಜೆಯನ್ನು ಮೈಗೂಡಿಸಿರುವನು. ಆದ್ದರಿಂದಲೇ ಇಸ್ಲಾಮಿನಲ್ಲಿ ಈ ಬಗ್ಗೆ ಸ್ಪಷ್ಟ ಮತ್ತು ಸಮಗ್ರ ಆದೇಶಗಳನ್ನು ನೀಡಲಾಗಿದೆ. ಮಾನವಕುಲದ ಆರಂಭದಲ್ಲೇ ಮಾನವರಿಗೆ ಮೈ ಮುಚ್ಚಿಕೊಳ್ಳಬೇಕೆಂಬ ಆದೇಶವನ್ನು ನೀಡಲಾಗಿತ್ತೆಂದು ಪವಿತ್ರ ಕುರ್ಆನಿನ ಮೂಲಕ ತಿಳಿದು ಬರುತ್ತದೆ.
ಪ್ರಾಕೃತಿಕ ಹೊಣೆ
ಇಸ್ಲಾಮ್ ನಿರ್ದೇಶಿಸಿರುವ ಜೀವನ ವ್ಯವಸ್ಥೆಯಲ್ಲಿ ಕುಟುಂಬದ ಪಾಲನೆ, ಪೋಷಣೆ, ಶಿಕ್ಷಣ, ತರಬೇತಿಗಳ ಆರ್ಥಿಕ ಹೊಣೆಯನ್ನು ಕೇವಲ ಪುರುಷನಿಗೇ ವಹಿಸಿಕೊಡಲಾಗಿದೆ. ಏಕೆಂದರೆ ಸ್ತ್ರೀಯ ಮೇಲೆ ಪ್ರಕೃತಿಯು ಅದಕ್ಕಿಂತ ದೊಡ್ಡ ಹೊಣೆಯನ್ನು ವಹಿಸಿಕೊಟ್ಟಿದೆ. ಪುರುಷನು ಒಂದು ಘಳಿಗೆಯ ಮಟ್ಟಿಗೆ ಸ್ತ್ರೀಯ ಜೊತೆ ಸೇರಿ ಶಾಶ್ವತವಾಗಿ ಅವಳಿಂದ ಮತ್ತು ಅವಳ ಜೊತೆ ಸೇರಿರುವುದರ ಹೊಣೆಗಾರಿಕೆಗಳಿಂದ ಮುಕ್ತನಾಗಬಹುದು. ಆದರೆ ಸ್ತ್ರೀಯನ್ನು ಈ ಭೇಟಿಯ ಪರಿಣಾಮವು ಜೀವನದಾದ್ಯಂತ ಹಿಡಿದಿರಿಸುತ್ತದೆ. ಗರ್ಭ ಧಾರಣೆಯಾದ ಐದು ವರ್ಷಗಳ ತನಕವಂತೂ ಅದರ ಪರಿಣಾಮವು ಆಕೆಯನ್ನು ಬಿಟ್ಟಗಲುವುದೇ ಇಲ್ಲ. ಇದು ಪ್ರಕೃತಿಯ ನಿಯಮ. ಮಗುವಿನ ಬಗ್ಗೆ ತಾಯಿಗಿರುವಷ್ಟು ಆತ್ಮೀಯತೆ ತಂದೆಗೆ ಇಲ್ಲದಿರುವುದೂ ನಿಸರ್ಗ ನಿಯಮವೇ. ಆದುದರಿಂದ ಈ ಹೊಣೆಯಿಂದ ಸ್ತ್ರೀಯು ಮುಕ್ತಳಾಗುವಂತಿಲ್ಲ. ಈ ಪ್ರಕೃತಿದತ್ತ ಹೊಣೆಯ ಜೊತೆ ಜೀವನದ ಇನ್ನಿತರ ಹೊಣೆಗಳನ್ನು ಆಕೆಯ ಮೇಲೆ ಹೇರುವುದು ಮಹಾ ಅನ್ಯಾಯ. ಅನಿವಾರ್ಯವೂ ನಿಸರ್ಗ ಸಹಜವೂ ಆದ ಹೊಣೆಗಳನ್ನು ಮಾತ್ರ ಆಕೆಯ ಮೇಲೆ ಹೇರಬೇಕು. ಪುರುಷನು ತನ್ನ ಹೊಣೆಗಾರಿಕೆಯನ್ನು ಆಕೆಯ ಮೇಲೆ ಹೇರಿರುವುದು ಇಂದಿನ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯ ಪ್ರಮುಖ ದೋಷ. ಸಂತಾನೋತ್ಪತ್ತಿ ಮತ್ತು ಬೆಳವಣಿಗೆಗೆ ಸ್ತ್ರೀ- ಪುರುಷರಿಬ್ಬರೂ ಸಮಾನ ಪಾಲುದಾರರೆಂದ ಮೇಲೆ ಅದರ ಪೋಷಣೆಯ ಹೊಣೆಯನ್ನೂ ಇಬ್ಬರೂ ಸಮಾನವಾಗಿಯೇ ನಿರ್ವಹಿಸಬೇಕಾದುದು ನ್ಯಾಯ ಸಮ್ಮತ. ಪುರುಷನು ಕುಟುಂಬದ ಸಂಪೂರ್ಣ ಆರ್ಥಿಕ ಹೊರೆಯನ್ನು ಹೊರಬೇಕೆಂಬುದು ಈ ಸಮಾನ ಪಾಲುದಾರಿಕೆಯ ಅನಿವಾರ್ಯ ಬೇಡಿಕೆಯಾಗಿದೆ.
ಮಾನವಕುಲದ ಸಂತುಲಿತ ಬೆಳವಣಿಗೆಗೆ ಮತ್ತು ನಾಗರಿಕತೆ, ಸಂಸ್ಕ್ರತಿಗಳ ಪ್ರಸಾರಕ್ಕೆ ಅನಿವಾರ್ಯವಾದ ಈ ಸ್ತ್ರೀ-ಪುರುಷ ಕಾರ್ಯ ವಿಂಗಡನೆಯಲ್ಲಿ ಪ್ರತಿಯೊಬ್ಬರೂ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಬೇಕಾದುದು ಅತ್ಯಗತ್ಯ. ನಿಸರ್ಗದ ಈ ನೈಜ ಗುರಿಯನ್ನು ಸರಿಯಾಗಿ ತಿಳಿದ ಪ್ರವಾದಿಗಳು ಸ್ತ್ರೀ- ಪುರುಷರ ಸಹಜ ಬಯಕೆ-ಬೇಡಿಕೆಗಳ ಪೂರೈಕೆಗಾಗಿಯೂ ಜನಾಂಗದ ಅಭ್ಯುದಯಕ್ಕಾಗಿಯೂ ಮದುವೆಯೊಂದೇ ಉತ್ತಮ ವ್ಯವಸ್ಥೆ ಎಂದು ಸಾರಿದರು. ವಿವಾಹಾತೀತ ಲೈಂಗಿಕ ಸಂಬಂಧಗಳನ್ನು ಬಲವಾಗಿ ನಿಷೇಧಿಸಿದರು. ಈ ನಿಷೇಧಗಳನ್ನು ಮುರಿಯುವವರಿಗೆ ಅತ್ಯುಗ್ರ ಶಿಕ್ಷೆಗಳನ್ನು ನೀಡಿದರು. ಮಾತ್ರವಲ್ಲ ವಿವಾಹಾತೀತ ಲೈಂಗಿಕ ಸಂಬಂಧವನ್ನು ತಡೆಯಲಿಕ್ಕಾಗಿ ಶಿಕ್ಷಣ-ತರಬೇತಿಯ ಮೂಲಕ ಜನರು ಇಂತಹ ಹೇಯ ಕಾರ್ಯಗಳನ್ನು ದ್ವೇಷಿಸುವಂತೆ ಮಾಡಲಾಯಿತು. ಜನಾಭಿಪ್ರಾಯವನ್ನು ರೂಪಿಸಿ ವಿವಾಹಾತೀತ ಲೈಂಗಿಕ ಸಂಬಂಧವನ್ನು ದ್ವೇಷ ಮತ್ತು ತಿರಸ್ಕಾರ ಭಾವದಿಂದ ಕಾಣುವಂತೆ ಮಾಡಲಾಯಿತು. ಇಂತಹ ಹೀನ ಮತ್ತು ದೂಷಣೀಯ ಕೆಲಸಕ್ಕೆ ಪ್ರೇರಕವಾಗುವ ಎಲ್ಲ ಅಂಶಗಳನ್ನು ತೊಡೆದು ಹಾಕಲಾಯಿತು. ವಿವಾಹಾತೀತ ಲೈಂಗಿಕ ಸಂಬಂಧಕ್ಕೆ ಅವಕಾಶವೇ ಇಲ್ಲದಂತೆ ಸಮಾಜ ಜೀವನವನ್ನು ಪುನರ್ ವ್ಯವಸ್ಥೆಗೊಳಿಸಲಾಯಿತು.
ಅನಿರ್ಬಂಧಿತ ಮಿಲನಕ್ಕೆ ತಡೆ
ಸಮಾಜದಲ್ಲಿ ಸ್ತ್ರೀ-ಪುರುಷರು ಅನಿರ್ಬಂಧಿತ ರೀತಿಯಲ್ಲಿ ಬೆರೆಯುವುದರಿಂದ ಆಗಬಹುದಾದ ಅನಾಹುತ, ಅನೀತಿಗಳನ್ನು ತಪ್ಪಿಸಲು ಅವರನ್ನು ಪರಸ್ಪರರಿಂದ ಬೇರ್ಪಡಿಸಿದರೆ ಅಥವಾ ಸ್ತ್ರೀ-ಪುರುಷ ಮಿಲನಕ್ಕೆ ಪ್ರತಿಬಂಧಗಳನ್ನು ಹೇರಿದರೆ ಅವರ ನೀತಿ-ಚಾರಿತ್ರ್ಯಗಳನ್ನು ಶಂಕಿಸಿದಂತಾಗುವುದಿಲ್ಲ. ಬಾಗಿಲಿಗೆ ಬೀಗ ಹಾಕಿದರೆ ಜಗತ್ತಿನಲ್ಲಿರುವವರೆಲ್ಲ ಕಳ್ಳರೆಂದಾಗುತ್ತದೆಯೇ? ಪೊಲೀಸ್ ವ್ಯವಸ್ಥೆ ಇದ್ದ ಮಾತ್ರಕ್ಕೆ ದೇಶದಲ್ಲೆಲ್ಲ ದುಷ್ಕರ್ಮಿಗಳೇ ತುಂಬಿದ್ದಾರೆಂದಾಗುತ್ತದೆಯೇ? ವ್ಯವಹಾರಗಳ ದಾಖಲೆ ಪತ್ರ ಮಾಡುವುದರಿಂದ ಪರಸ್ಪರ ನಂಬಿಕೆ ಇಲ್ಲವೆಂದಾಗುತ್ತದೆಯೇ? ಖಂಡಿತ ಇಲ್ಲ. ಹಾಗಾದರೆ ಸ್ತ್ರೀ-ಪುರುಷರ ಅನಿರ್ಬಂಧಿತ ಒಡನಾಟದಿಂದಾಗಬಹುದಾದ ಅನರ್ಥಗಳ ನಿವಾರಣೆಗೆ ಮಾಡುವ ಮುಂಜಾಗ್ರತೆಯ ಬಗ್ಗೆ ಇಂತಹ ಪೂರ್ವಗ್ರಹ ಏಕೆ?
ಅತ್ಯಂತ ಸವಿೂಪದ ರಕ್ತ ಸಂಬಂಧದಿಂದಾಗಿ ಒಂದೇ ಕುಟುಂಬದಲ್ಲಿ ಬಾಳಬೇಕಾದ ಸ್ತ್ರೀ-ಪುರುಷರ ಮಧ್ಯೆ ಇಸ್ಲಾಮ್ ವಿವಾಹ ಸಂಬಂಧವನ್ನು ನಿಷೇಧಿಸಿದೆ.
ಈ ಬಗ್ಗೆ ಪವಿತ್ರ ಕುರ್ಆನಿನಲ್ಲಿ ಬಂದಿರುವ ಆದೇಶವು ಹೀಗಿದೆ:
“ನಿಮಗೆ ಈ ಸ್ತ್ರೀಯರು ವಿವಾಹಕ್ಕೆ ನಿಷಿದ್ಧರು:- ನಿಮ್ಮ ಮಾತೆಯರು, ಪುತ್ರಿಯರು, ಸಹೋದರಿಯರು, ಸೋದರತ್ತೆಯರು, ತಾಯಿಯ ಸೋದರಿಯರು, ಸೋದರ ಪುತ್ರಿಯರು, ಸೋದರಿ ಪುತ್ರಿಯರು, ನಿಮಗೆ ಮೊಲೆ ಹಾಲುಣಿಸಿದ ಸಾಕು ತಾಯಂದಿರು, ನಿಮ್ಮೊಂದಿಗೆ ಸ್ತನಪಾನ ಸಂಬಂಧವಿರುವ ಸೋದರಿಯರು, ನಿಮ್ಮ ಪತ್ನಿಯರ ತಾಯಂದಿರು ನಿಮ್ಮ ಮಡಿಲಲ್ಲಿ ಪೋಷಣೆ ಪಡೆದಿರುವ ನಿಮ್ಮ ಪತ್ನಿಯ ಪುತ್ರಿಯರು, ಯಾವ ಪತ್ನಿಯರೊಂದಿಗೆ ನೀವು ಸಂಭೋಗ ಮಾಡಿರುವಿರೋ ಅವರ ಪುತ್ರಿಯರು, ಆದರೆ (ಬರೇ ನಿಕಾಹ್ ಆಗಿದ್ದು) ನೀವು ಸಂಭೋಗ ಮಾಡಿರದಿದ್ದರೆ (ಅವರನ್ನು ಬಿಟ್ಟು ಅವರ ಪುತ್ರಿಯರನ್ನು ವಿವಾಹ ಮಾಡಿಕೊಳ್ಳುವುದರಲ್ಲಿ) ದೋಷವಿಲ್ಲ. ನಿಮ್ಮ ಸ್ವಂತ ಪುತ್ರರ ಪತ್ನಿಯರೂ ನಿಮಗೆ ನಿಷಿದ್ಧ. ಒಂದು ವಿವಾಹ ಬಂಧನದಲ್ಲಿ ಇಬ್ಬರು ಸಹೋದರಿಯನ್ನಿರಿಸಿಕೊಳ್ಳುವುದೂ ನಿಷಿದ್ಧವಾಗಿದೆ. ಆದರೆ ಹಿಂದೆ ಆದುದು ಆಗಿ ಹೋಯಿತು. ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಿಸುವವನೂ ಕೃಪೆ ದೋರುವವನೂ ಆಗಿರುತ್ತಾನೆ.” (4:23)
ಸ್ತ್ರೀಗೆ ವಿನಾಯಿತಿ
ಮನೆಯ ಹೊರಗಿನ ಎಲ್ಲ ಧಾರ್ಮಿಕ ಕರ್ತವ್ಯಗಳಿಂದಲೂ ಸ್ತ್ರೀಯನ್ನು ಮುಕ್ತಗೊಳಿಸಲಾಗಿದೆ. ಕಡ್ಡಾಯ ನಮಾಝ್ಗಳನ್ನು ಆಕೆ ಮನೆಯಲ್ಲೇ ನಿರ್ವಹಿಸಿದರೆ ಸಾಕು, ಮಾತ್ರವಲ್ಲ ಮಸೀದಿಯಲ್ಲಿ ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಇರುವಾಗಲೂ ಆಕೆಗೆ ಮಸೀದಿಗೆ ಹೋಗಬೇಕೆಂಬ ನಿರ್ಬಂಧವಿಲ್ಲ. ಆಕೆಯ ಮಟ್ಟಿಗೆ ಮನೆಯೇ ಉತ್ತಮವೆಂದು ಸಾರಲಾಗಿದೆ. ಶುಕ್ರವಾರದ ಕಡ್ಡಾಯ ನಮಾಝ್ನಿಂದಲೂ ಆಕೆಗೆ ವಿನಾಯಿತಿ ನೀಡಲಾಗಿದೆ. ಧರ್ಮ ಯುದ್ಧದಲ್ಲಿಯೂ ಆಕೆಯು ಪಾಲ್ಗೊಳ್ಳಬೇಕಾಗಿಲ್ಲ. ಶವ ಸಂಸ್ಕಾರದಂತಹ ದುಃಖದ ಕಾರ್ಯಗಳಲ್ಲಿಯೂ ಭಾಗವಹಿಸಬೇಕಾಗಿಲ್ಲ. ಸ್ತ್ರೀಯು ಏಕಾಂಗಿಯಾಗಿ ಪ್ರಯಾಣಿಸುವುದನ್ನು ಇಸ್ಲಾಮ್ ನಿಷೇಧಿಸಿದೆ. ಹಜ್ಜ್ ಯಾತ್ರೆಯನ್ನು ಆಕೆ ತನ್ನ ಪತಿ ಅಥವಾ ವಿವಾಹ ನಿಷಿದ್ಧವಾದ ರಕ್ತ ಸಂಬಂಧಿಯ ಜೊತೆಯೇ ಕೈಗೊಳ್ಳಬೇಕು. ಇದರಿಂದ ಅನಿವಾರ್ಯ ಅಗತ್ಯವಿಲ್ಲದೆ ಸ್ತ್ರೀಯು ತನ್ನ ನೈಜ ಕಾರ್ಯ ಕ್ಷೇತ್ರವಾದ ಕುಟುಂಬವನ್ನು ಬಿಟ್ಟು ಹೊರ ಹೋಗಬಾರದೆಂದು ಇಸ್ಲಾಮ್ ಬಯಸಿದೆ ಎಂಬುದು ಸ್ಪಷ್ಟವಾಗುತ್ತದೆ.
ಪುರುಷರು ಪರ ಸ್ತ್ರೀಯತ್ತ ದುರ್ನೋಟ ಬೀರುವುದನ್ನು ಮತ್ತು ಸ್ತ್ರೀಯು ತನ್ನ ಪತಿಯ ಮತ್ತು ಆಪ್ತ ಬಂಧುಗಳ ಹೊರತು ಇತರರ ಮುಂದೆ ತನ್ನ ಸೌಂದರ್ಯ ಪ್ರದರ್ಶಿಸುವುದನ್ನು, ತನ್ನ ಸ್ವರ ಮಾಧುರ್ಯದ ಮೂಲಕ ಪರ ಪುರುಷರನ್ನು ಆಕರ್ಷಿಸುವುದನ್ನು ಹಾಗೂ ಕಾಮ ಪ್ರಚೋದಕ ಗಾಯನ, ಸಂಗೀತಗಳನ್ನು ಇಸ್ಲಾಮ್ ನಿಷೇಧಿಸಿದೆ. ಸ್ತ್ರೀಯು ಪರ ಪುರುಷರೆದುರು ನೃತ್ಯ ಮಾಡುವುದಂತಿರಲಿ ಕೈಯ ಬಳೆ, ಕಾಲ ಗೆಜ್ಜೆಯಂತಹ ಆಭರಣಗಳಿಂದ ಸದ್ದು ಮಾಡಿ ನಡೆಯುವುದನ್ನು, ಸುಗಂಧ ದ್ರವ್ಯಗಳನ್ನು ಲೇಪಿಸಿಕೊಂಡು ಮಾರ್ಗದಲ್ಲಿ ನಡೆದಾಡುವುದನ್ನು ಮತ್ತು ಪುರುಷ ಸಮೂಹದ ಮಧ್ಯೆ ಹೋಗುವುದನ್ನು ಇಸ್ಲಾಮ್ ಅನುಮತಿಸಿಲ್ಲ.
ಸ್ತ್ರೀ-ಪುರುಷರಿಗೆ ವಸ್ತ್ರಧಾರಣೆಯ ನಿಯಮಗಳು
ಬೇರಾವ ನಾಗರಿಕತೆಯೂ ಮಾನವನು ತನ್ನ ಗುಪ್ತಾಂಗಗಳನ್ನು ಮುಚ್ಚಿಕೊಂಡಿರಬೇಕೆಂದು ಕಾನೂನು ಮೂಲಕ ಸ್ಪಷ್ಟಪಡಿಸದೆ ಇದ್ದಾಗಲೂ ತಾನು ಅದನ್ನು ಕಡ್ಡಾಯಗೊಳಿಸುವ ಮೂಲಕ ಇಸ್ಲಾಮ್ ಮಾನವ ಸಹಜ ಲಜ್ಜೆಗೆ ಮಾನ್ಯತೆ ನೀಡಿದೆ. ಅಂಗಾಂಗ ಪ್ರದರ್ಶನವನ್ನು ನಾಗರಿಕತೆಯ ಪ್ರತೀಕವೆಂದು ಪರಿಗಣಿಸುವ ಆಧುನಿಕತೆಯು ಮಾನವನನ್ನು ಈ ನಿಸರ್ಗ ಸಹಜ ಲಜ್ಜೆಯಿಂದ ಮುಕ್ತಗೊಳಿಸಿ ಪೂರ್ಣ ನಗ್ನತೆಯತ್ತ ಒಯ್ಯುತ್ತಿದೆ. ಬಟ್ಟೆ ತೊಡುವುದು ಅಲಂಕಾರಕ್ಕಾಗಿಯೇ ಹೊರತು ನಗ್ನತೆಯನ್ನು ಮುಚ್ಚಲಿಕ್ಕಲ್ಲ ಎಂಬುದು ಅದರ ಧೋರಣೆಯಾಗಿದೆ. ಆದರೆ ಇಸ್ಲಾಮಿನ ದೃಷ್ಟಿಯಲ್ಲಿ ಅಲಂಕಾರಕ್ಕಿಂತಲೂ ಹೆಚ್ಚಿನ ಮಹತ್ವ ನಗ್ನತೆಯನ್ನು ಮರೆಸುವುದಕ್ಕಿದೆ. ಸ್ತ್ರೀಯರನ್ನು ಆಕರ್ಷಿಸಬಹುದಾದ ಪುರುಷರ ಅಂಗಾಂಗಗಳನ್ನೂ ಪುರುಷರಲ್ಲಿ ಚಿತ್ತ ಚಾಂಚಲ್ಯವನ್ನುಂಟು ಮಾಡಬಲ್ಲ ಸ್ತ್ರೀಯರ ಅಂಗಾಂಗಗಳನ್ನೂ ಮುಚ್ಚಲೇಬೇಕೆಂದು ಇಸ್ಲಾಮ್ ತನ್ನ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದೆ.
ಅಪರಿಚಿತರಾದ ಸ್ತ್ರೀ- ಪುರುಷರ ಮಿಲನಕ್ಕೆ ಮತ್ತು ಅವರು ಪರಸ್ಪರರನ್ನು ಆಕರ್ಷಿಸುವುದಕ್ಕೆ ಇಷ್ಟೆಲ್ಲಾ ಪ್ರತಿಬಂಧಗಳು ಸಮಾಜದಲ್ಲಿರುವಾಗಲೂ ಅವುಗಳನ್ನೆಲ್ಲಾ ಮುರಿದು ವಿವಾಹೇತರ ಲೈಂಗಿಕ ಕ್ರಿಯೆಯಲ್ಲಿ ಏರ್ಪಡುವ ಅಥವಾ ವ್ಯಭಿಚಾರವೆಸಗುವ ಸ್ತ್ರೀ-ಪುರುಷರಿಗೆ ಇಸ್ಲಾಮ್ ಅತ್ಯುಗ್ರವಾದ ಶಿಕ್ಷೆಯನ್ನೂ ವಿಧಿಸಿದೆ. ಅವಿವಾಹಿತರಾದ ವ್ಯಭಿಚಾರಿಗಳಿಗೆ ನೂರು ಛಡಿಯೇಟು ಬಾರಿಸಬೇಕೆಂದೂ ವಿವಾಹಿತ ವ್ಯಭಿಚಾರಿಗಳನ್ನು ಕಲ್ಲೇಟಿನಿಂದ ವಧಿಸಬೇಕೆಂದೂ ಇಸ್ಲಾಮ್ ಆಜ್ಞಾಪಿಸಿದೆ.
ಸ್ತ್ರೀ-ಪುರುಷರು ಕಡ್ಡಾಯವಾಗಿ ಮುಚ್ಚಿಕೊಳ್ಳಲೇಬೇಕಾದ ಅಂಗಾಂಗಗಳ ವಿವರಗಳನ್ನು ಇಸ್ಲಾಮ್ ಸ್ಪಷ್ಟವಾಗಿ ನೀಡಿದೆ. ಪುರುಷರು ಮೊಣಕಾಲಿನಿಂದ ಹೊಕ್ಕುಳದ ವರೆಗಿನ ದೇಹ ಭಾಗವನ್ನು ಸದಾ ಮುಚ್ಚಿರಬೇಕು. ತನ್ನ ಪತ್ನಿಯ ಹೊರತು ಯಾವುದೇ ಸ್ತ್ರೀ ಅಥವಾ ಪುರುಷರ ಮುಂದೆಯೂ ಅದನ್ನು ತೆರೆಯುವ ಅನುಮತಿ ಆತನಿಗಿಲ್ಲ. ಸ್ತ್ರೀಯು ಮುಖ ಮತ್ತು ಅಂಗೈಗಳನ್ನು ಹೊರತು ಪಡಿಸಿ ತನ್ನ ಸಂಪೂರ್ಣ ದೇಹವನ್ನು ಮುಚ್ಚಿಕೊಳ್ಳಬೇಕು. ಅದನ್ನು ಆಕೆ ತನ್ನ ಗಂಡನ ಹೊರತು ಇತರ ಯಾರಿಗೂ ಕಾಣದಂತೆ ಮುಚ್ಚಿಕೊಂಡಿರಬೇಕು. ಈ ನಿಯಮಗಳು ಸ್ತ್ರೀಯು ಪ್ರಬುದ್ಧಳಾದಂದಿನಿಂದ (ಋತುಮತಿಯಾದಂದಿನಿಂದ) ಆಕೆ ಲೈಂಗಿಕ ಆಕರ್ಷಣೆ ಕಳೆದುಕೊಳ್ಳುವ ಮುದಿ ಪ್ರಾಯಕ್ಕೆ ತಲುಪುವ ತನಕ ಕಡ್ಡಾಯವಾಗಿದೆ.
ವಿವಾಹ ನಿಷಿದ್ಧ ಸಂಬಂಧಿಗಳೆನಿಸಿದ ಸ್ತ್ರೀಯರು ತಮ್ಮ ಸಂಬಂಧಿಕ ಪುರುಷರ ಜೊತೆ ಹೇಗೆ ವ್ಯವಹರಿಸಬೇಕು ಮತ್ತು ಇತರ ಪುರುಷರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ನಿಯಮಗಳ ಸಮಾಹಾರವನ್ನೇ ಪರ್ದಾ ಅಥವಾ ಹಿಜಾಬ್ ಎನ್ನುತ್ತಾರೆ.
ಈ ಬಗ್ಗೆ ಪವಿತ್ರ ಕುರ್ಆನಿನ ಆದೇಶ ಈ ರೀತಿ ಇದೆ:
“ಓ ಪ್ರವಾದಿಗಳೇ, ನಿಮ್ಮ ಪತ್ನಿಯರಿಗೂ ಪುತ್ರಿಯರಿಗೂ ಸತ್ಯವಿಶ್ವಾಸಿಗಳಾದ ಸ್ತ್ರೀಯರಿಗೂ ತಮ್ಮ ಚಾದರಗಳನ್ನು ಹೊದ್ದು ಕೊಳ್ಳುವಂತೆ ಆಜ್ಞಾಪಿಸಿರಿ. ಇದು ಅವರು ಗುರುತಿಸಲ್ಪ ಡಲು ಮತ್ತು ಸತಾಯಿಸಲ್ಪಡದಿರಲು ಉತ್ತಮ ವಿಧಾನವಾಗಿದೆ. ಅಲ್ಲಾಹನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುವನು.” (33:59)
ಸ್ತ್ರೀಯು ತನ್ನ ಅಲಂಕಾರವನ್ನು ಪತಿ, ವಿವಾಹ ನಿಷಿದ್ಧ ಬಂಧುಗಳು, ಸೇವಕರು, ಎಳೆಯ ಬಾಲಕರು ಮತ್ತು ಇತರ ಸ್ತ್ರೀಯರ ಮುಂದೆ ಮಾತ್ರ ಪ್ರದರ್ಶಿಸಬಹುದು. ಈ ಸೀಮಿತ ವಲಯದಿಂದ ಹೊರಗಿರುವ ಎಲ್ಲ ಪುರುಷರ ಮುಂದೆಯೂ ಸ್ತ್ರೀಯು ಪರ್ದಾ ನಿಯಮವನ್ನು ಪಾಲಿಸಲೇಬೇಕು. ಈ ನಿರ್ಬಂಧವು ಯಾವುದೇ ರೀತಿಯಲ್ಲಿ ಸ್ತ್ರೀ ಸ್ವಾತಂತ್ರ್ಯ ಹರಣವಾಗಿರದೆ ಆಕೆಯ ಮಾನ ಮರ್ಯಾದೆಯನ್ನು ರಕ್ಷಿಸಿ ಸಮಾಜವನ್ನು ಅಶ್ಲೀಲತೆ, ಅನೈತಿಕತೆ ಮತ್ತು ಕೆಡುಕುಗಳಿಂದ ರಕ್ಷಿಸುವ ಉತ್ತಮ ಮಾಧ್ಯಮವೆಂಬುದು ನಿಷ್ಪಕ್ಷಮತಿಗಳಿಗೆ ಮೇಲಿನ ವಿವರಣೆಗಳಿಂದ ಸ್ಪಷ್ಟವಾಗಬಹುದು.
- ತಪ್ಪು ಕಲ್ಪನೆಗಳು ಕೃತಿಯಿಂದ
IslamKannada News Portal






