- ತಮಿಳು ದೈನಿಕ ‘ನೀರೋಟ್ಟಮ್’ನ ಪತ್ರಿಕೆಯ ಸಂಪಾದಕ ‘ಅಡಿಯಾರ್’ ತಮ್ಮ ಪತ್ರಿಕೆಯಲ್ಲಿ ಬರೆದಿದ್ದ “ನಾನ್ ಕಾದಲಿಕ್ಕುಮ್ ಇಸ್ಲಾಮ್” ಎಂಬ ಲೇಖನ ಮಾಲೆಯ ಒಂದು ಪುಟ್ಟ ಲೇಖನ.
‘ಮುಸ್ಲಿಮರು’ ಆಜ್ಞಾನಿಗಳು,ಹಠವಾದಿಗಳು,ಕೋಪಿಷ್ಠರು, ಆಕ್ರಮಿಗಳು,ಅಹಂಭಾವಿಗಳು ಎಂದೆಲ್ಲಾ ಮುಸ್ಲಿಮೇತರ ಬಂಧುಗಳ ಮಧ್ಯೆ ಪ್ರಚಾರವಿದೆ.
ಶೋಧ ನಡೆಸಿದರೆ ಮತ್ತು ಹತ್ತಿರ ಹೋಗಿ ನೋಡಿದರೆ ಬೇರೆಯೇ ಒಂದು ವಾಸ್ತವಿಕತೆ ಸೂರ್ಯನಿಗಿಂತ ಪ್ರಕಾಶಮಾನವಾಗಿ ಮುಂದೆ ಬರುತ್ತದೆ.
ಇಸ್ಲಾಮ್ ಎಂದರೆ ಶಾಂತಿ ಮತ್ತು ರಕ್ಷಣೆಯೆಂದರ್ಥ. ನನ್ನ ತಿಳುವಳಿಕೆಯ ಮಟ್ಟಿಗೆ ಮೃದು ಸ್ವಭಾವ, ವಿಕಾರಗಳ ಮೇಲೆ ನಿಯಂತ್ರಣ ಮತ್ತು ಸಂಯಮ ಶಕ್ತಿಯ ಅತ್ಯುತ್ತಮ ನಿದರ್ಶನವಿದ್ದರೆ ಅದು ಪ್ರವಾದಿ ಮುಹಮ್ಮದ್’ರ ವ್ಯಕ್ತಿತ್ವ ಮಾತ್ರ.
ಎಲ್ಲ ಉತ್ತಮ ವ್ಯಕ್ತಿಗಳು ಮತ್ತು ಸುಧಾರಕರು ಉನ್ನತ ಗುಣಗಳನ್ನು ಹೊಂದಿರುತ್ತಾರೆ. ಆದರೆ ಮಾನವ ಇತಿಹಾಸದಲ್ಲಿ ಪ್ರವಾದಿ ಮುಹಮ್ಮದ್(ಸ)ರಂಥ ಸಮಗ್ರ ವ್ಯಕ್ತಿತ್ವವು ಎಲ್ಲಿಯೂ ಕಾಣ ಸಿಗುವುದಿಲ್ಲ. ಈ ಮಾತನ್ನು ನಾನು ಹೃದಯಾಂತರಾಳದಿಂದ ಹೇಳುತ್ತಿದ್ದೇನೆ.
ಅರೆಬಿಯಾದ ಆಡಳಿತಗಾರನಾಗಿದ್ದರೂ ಪ್ರವಾದಿವರ್ಯರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ತಮ್ಮ ಪಾದರಕ್ಷೆಗಳನ್ನು ತಾವೇ ದುರಸ್ತಿ ಮಾಡಿಕೊಳ್ಳುತ್ತಿದ್ದರು. ತಮ್ಮ ಹರಿದ ಬಟ್ಟೆಗಳನ್ನು ತಾವೇ ಹೊಲಿದುಕೊಳ್ಳುತ್ತಿದ್ದರು. ಸಾಕು ಪ್ರಾಣಿಗಳಿಗೆ ತಮ್ಮ ಕೈಯಿಂದಲೇ ಆಹಾರ ನೀಡುತ್ತಿದ್ದರು ಮತ್ತು ಸ್ವ ಹಸ್ತಗಳಿಂದಲೇ ಹಾಲು ಕರೆಯುತ್ತಿದ್ದರು.
ಹಾಲು ಸೇವಿಸುವ ಮತ್ತು ಹಾಲಿನಲ್ಲೇ ಸ್ನಾನ ಮಾಡುವ ಆಡಳಿತಗಾರರನ್ನು ಜಗತ್ತು ಕಂಡಿದೆ. ಆದರೆ ಹಾಲು ಕರೆಯುವ ಏಕೈಕ ಆಡಳಿತಾಧಿಕಾರಿ ಪ್ರವಾದಿವರ್ಯರು ಮಾತ್ರ.
ದಕ್ಷಿಣ ಭಾರತದಲ್ಲಿ ನಡೆದ ಒಂದು ಘಟನೆ. ಓರ್ವ ಋಷಿ ‘ವಾಯಿಗೈ’ ನದಿಯ ಮಣ್ಣು ಹೊತ್ತು ಸಾಗಿಸಿದರು. ಅವರು ಕೂಲಿಗಾಗಿ ಮಣ್ಣು ಹೊತ್ತಿದ್ದರು. ಆದರೆ ರಾಜನಿಗೆ ಇದರ ಅರಿವಾದೋಡನೆ ಋಷಿಯಿಂದ ಮಣ್ಣು ಹೊರಿಸಿದವನಿಗೆ ಶಿಕ್ಷೆ ವಿಧಿಸಿದನು.
ಆದರೆ ಮದೀನಾದ ಮಸೀದಿ ನಿರ್ಮಾಣ ಕಾರ್ಯದಲ್ಲಿ ಪ್ರವಾದಿವರ್ಯರೂ(ಸ) ಪಾಲ್ಗೊಂಡಿರುವುದನ್ನು ನಾವು ಕಾಣುತ್ತೇವೆ. ಇದು ಇತಿಹಾಸದಲ್ಲೇ ಅಪೂರ್ವವಾದ ಮಾದರಿಯಾಗಿದೆ.
ಪ್ರವಾದಿವರ್ಯರ(ಸ) ಹಾಸಿಗೆಯೂ ಸರಳವಾಗಿತ್ತು. ಅವರು ಚಾಪೆ ಅಥವಾ ಚರ್ಮದ ಮೇಲೆ ಮಲಗುತ್ತಿದ್ದರು. ಕೆಲವೊಮ್ಮೆ ನೆಲದಲ್ಲೂ ಮಲಗುತ್ತಿದ್ದರು. ಅವರ ಮನೆಯೂ ಮಣ್ಣಿನದ್ದಾಗಿತ್ತು. ಖರ್ಜೂರದ ಎಲೆಗಳೇ ಅದರ ಮಾಡು.
ಅವರು ಲೋಕವಿರಕ್ತ ಸನ್ಯಾಸಿಯಾಗಿರಲಿಲ್ಲ. ತಮ್ಮ ಕಾಲದ ಓರ್ವ ಶಕ್ತಿಶಾಲಿ ಆಡಳಿತಗಾರರಾಗಿದ್ದರು. ಅದನ್ನು ಯೋಚಿಸುವಾಗಲೇ ಮನದ ಮೇಲೆ ಒಂದು ವಿಶೇಷ ಪ್ರಭಾವವಾಗುತ್ತದೆ.
ಸದಾ ನಗು ಮುಖದಿಂದ ಇರುವವರು. ಕೆರಳುವವರಲ್ಲ. ಸಿಟ್ಟು ಮಾಡುವವರಲ್ಲ. ಅಟ್ಟಹಾಸದ ನಗು ಬೀರುವವರಲ್ಲ. ಎಲ್ಲರಿಗೂ ನೆರವಾಗುವವರು. ಗಾಂಭೀರ್ಯದಿಂದ ನಡೆಯುವವರು.
ಯಾರ ಸಲಾಮ್’ಗಾಗಿಯೂ ನಿರೀಕ್ಷಿಸದೆ ಮುಂದಾಗಿ ಎಲ್ಲರಿಗೂ ಸಲಾಮ್ ಹೇಳುವವರು. ಪೀಡಿತರ, ಮರ್ದಿತರ, ಶೋಷಿತರ ಕರೆಗೆ ಓಗೊಟ್ಟು ನೆರವಿಗೆ ಧಾವಿಸುವವರು. ಇದು ಆ ಪಾವನ ಪ್ರವಾದಿಯ ಮಹಾನ್ ಚಾರಿತ್ರ್ಯವಾಗಿತ್ತು.
ಜೀವನದಾದ್ಯಂತ ಅವರು ಯಾರನ್ನು ಗದರಿಸಲಿಲ್ಲ. ಯಾರಿಗೂ ಛೀಮಾರಿ ಹಾಕಿರಲಿಲ್ಲ. ಯಾರನ್ನು ಬಯ್ಯಲಿಲ್ಲ.
ಎಷ್ಟೋ ಮಹಾತ್ಮರ ಕತೆ ನಮಗೆ ತಿಳಿದಿದೆ. ಅವರು ಬಾಹ್ಯ ಲೋಕಕ್ಕೆ ಮೃದು ಸ್ವಭಾವದವರು, ತಾಳ್ಮೆ ಸಂಯಮಗಳ ಸಾಕಾರ ಮೂರ್ತಿಯಂತೆ ಕಂಡರೂ ಮನೆಯಲ್ಲಿ ತಮ್ಮ ಮಡದಿ ಮಕ್ಕಳೊಂದಿಗೆ, ಆಳುಗಳೊಂದಿಗೆ, ತಮ್ಮ ಆಧೀನವಿರುವವರೊಂದಿಗೆ ದುಃಸ್ವಭಾವದವರೂ ಮಾತು ಮಾತಿಗೆ ರೇಗುವವರೂ ಕಠೋರ ಮಾತಿನವರೂ ಆಗಿರುತ್ತಾರೆ.
ಆದರೆ ಪ್ರವಾದಿವರ್ಯರ ಮಹಿಮೆಯೇ ವಿಸ್ಮಯಕರವಾದುದು. ಇತರರೊಂದಿಗೆ ಇದ್ದಂತೆ ತಮ್ಮ ಮನೆಯವ ರೊಂದಿಗೂ, ಆಳುಗಳೊಂದಿಗೂ, ಅಧೀನದಲ್ಲಿರುವವರೊಂದಿಗೂ ಅಷ್ಟೇ ಹಸನ್ಮುಖಿ, ಸುಸ್ವಭಾವಿ ಮತ್ತು ಮೃದುವಾಗಿದರು.
ಅವರನ್ನು ಭೇಟಿಯಾಗುವವರು ಹಸ್ತಲಾಘವಕ್ಕಾಗಿ ಚಾಚಿದರೆ ಆತನ ಕೈ ಹಿಡಿದೇ ಸಂಭಾಷಗೈಯುತ್ತಿದ್ದರು. ಭೇಟಿಗೆ ಬಂದ ವ್ಯಕ್ತಿ ತನ್ನ ಕೈ ಹಿಂತೆಗೆದುಕೊಳ್ಳುವ ತನಕ ಕೈ ಹಿಡಿದೇ ಇರುತ್ತಿದ್ದರು. ಸಂಗಾತಿಗಳೊಂದಿಗೆ ನಡೆಯುವಾಗ ಅವರ ಕೈ ಹಿಡಿದೇ ನಡೆಯುತ್ತಿದ್ದರು.
ಪ್ರತಿಯೊಬ್ಬನನ್ನೂ ಪ್ರೀತಿ ಆದರಗಳೋಂದಿಗೆ ಕೂಗಿ ಕರೆಯುತ್ತಿದ್ದರು. ಯಾರಾದರೂ ಅವರೊಂದಿಗೆ ಒರಟಾಗಿ ಮಾತನಾಡಿದರೆ ತಾಳ್ಮೆ ವಹಿಸುತ್ತಿದ್ದರು. ಅವರ ಲಜ್ಜೆಯು ಆದರ್ಶಪ್ರಾಯವಾಗಿತ್ತು. ಓರ್ವ ಕುಲೀನ ಮನೆತನದ ಪಾವನ ಕನ್ಯೆಯ ಲಜ್ಜೆಗಿಂತಲೂ ಅದು ಮಿಗಿಲಾಗಿತ್ತು.
ಇಂತಹ ಮಹಾನ್ ವ್ಯಕ್ತಿಯನ್ನು ತಮ್ಮ ನೇತಾರರಾಗಿ ಮಾಡಿಕೊಂಡ ಅದೃಷ್ಟ ಶಾಲಿಗಳೇ ಮುಸ್ಲಿಮರು. ಪ್ರವಾದಿವರ್ಯರ(ಸ) ಅನುಯಾಯಿಗಳಲ್ಲಿ ಅವರ ಈ ಗುಣಗಳು ಇಂದಿಗೂ ಪ್ರತಿಬಿಂಬಿತವಾಗಿದೆ. ಇವೆಲ್ಲವೂ ಆ ಮಹಾನ್ ಪ್ರವಾದಿಯ ಕೊಡುಗೆಗಳಾಗಿವೆ…!!!
IslamKannada News Portal


