ಇವು ಅತ್ಯಧಿಕ ಅಪಾರ್ಥಕ್ಕೆ ಗುರಿಯಾದ ಪದಗಳಾಗಿವೆ. ಕಾಫಿರ್ ಎಂಬ ಪದವು ಕುಫ್ರ್ ಎಂಬ ಮೂಲ ಪದದಿಂದ ಹುಟ್ಟಿದೆ. ‘ಕುಫ್ರ್’ ಎಂಬ ಪದಕ್ಕೆ ಅನೇಕ ಅರ್ಥಗಳಿವೆ. ನಿಘಂಟಿನ ಪ್ರಕಾರ ಆ ಅರಬಿ ಪದದ ಅರ್ಥ ‘ಬಚ್ಚಿಡುವುದು’ ಎಂದಾಗಿದೆ. ರಾತ್ರಿಯನ್ನು ‘ಕಾಫಿರ್’ ಎನ್ನುತ್ತಾರೆ. ಏಕೆಂದರೆ ಅದು ಎಲ್ಲವನ್ನೂ ಮರೆಸುತ್ತದೆ. ದಟ್ಟ ಮೋಡವನ್ನೂ ‘ಕಾಫಿರ್’ ಎನ್ನಲಾಗುತ್ತದೆ. ರೈತನು ಬೀಜವನ್ನು ನೆಲದಲ್ಲಿ ಬಚ್ಚಿಡುವುದರಿಂದ ಅವನನ್ನು ‘ಕಾಫಿರ್’ ಎನ್ನಲಾಗುತ್ತದೆ. ‘ಕುಫ್ರ್’ನ ಇನ್ನೊಂದು ಅರ್ಥ ಕೃತಘ್ನತೆಯಾಗಿದೆ. ಏಕೆಂದರೆ ಕೃತಘ್ನನಾದವನು ದೇವನ ಅನುಗ್ರಹಗಳನ್ನು ಮರೆಸುತ್ತಾನೆ.
ಕಾಫಿರ್ ಮತ್ತು ಕುಫ್ರ್ ಎಂಬ ಪದಗಳಿಗೆ ಯಾವುದೇ ಕೆಟ್ಟ ಅರ್ಥವಿಲ್ಲ. ಅದು ಮಾನಹಾನಿಕರವಾಗಲಿ ಶಾಪವಾಗಲಿ ಅಲ್ಲ. ‘ಕಾಫಿರ್’ ಎಂಬುದು ಮುಸ್ಲಿಮೇತರರು ಎಂಬುದಕ್ಕೆ ಪರ್ಯಾಯ ಪದವಲ್ಲ. ಮುಸ್ಲಿಮರಲ್ಲದವರೆಲ್ಲ ‘ಕಾಫಿರ್’ಗಳಲ್ಲ. ‘ಕಾಫಿರ್’ ಎಂದರೆ ನಿರಾಕರಿಸುವವನು, ನಿಷೇಧಿಸುವವನು ಮತ್ತು ಅಲ್ಲಗಳೆಯುವವನು. ಆ ಅರ್ಥದಲ್ಲಿ ನಮ್ಮಲ್ಲಿ ಪ್ರತಿಯೊಬ್ಬನು ಇನ್ನೊಬ್ಬನ ಧರ್ಮದ ಕಾಫಿರ್ ಆಗುತ್ತಾನೆ. ಸಮತಾವಾದಿಗಳು ಮತ್ತು ಬಂಡವಾಳಶಾಹಿಗಳಂತೆ ಅವರು ಪರಸ್ಪರರ ಪಾಲಿಗೆ ‘ಕಾಫಿರ್’ ಆಗಿದ್ದಾರೆ. ‘ತಾಗೂತ’ನ್ನು ನಿರಾಕರಿಸುವವನು* (ಅರ್ಥಾತ್ ಎಲ್ಲ ಮಿಥ್ಯ ಆರಾಧ್ಯರನ್ನು ಅಲ್ಲಗಳೆಯುವವನು) ಮತ್ತು ಅಲ್ಲಾಹನನ್ನು ದೃಢವಾಗಿ ನಂಬುವವನೇ ಸತ್ಯವಿಶ್ವಾಸಿಯಾಗಿದ್ದಾನೆ. (ಪವಿತ್ರ ಕುರ್ಆನ್, 2:256) ಒಬ್ಬ ಮುಸ್ಲಿಮನು ಉಚ್ಚರಿಸುವ ಮೂಲ ಮಂತ್ರವೇ ‘ಲಾ ಇಲಾಹ ಇಲ್ಲಲ್ಲಾಹ್’ (ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ). ಇದು ಎರಡು ಅಂಶಗಳನ್ನು ಒಳಗೊಂಡಿದೆ. ನಿಷೇಧಾತ್ಮಕವಾಗಿ ಎಲ್ಲ ದೇವರುಗಳನ್ನೂ ನಿರಾಕರಿಸುವುದು ಮತ್ತು ಸಕಾರಾತ್ಮಕವಾಗಿ ಏಕದೇವನಾದ ಅಲ್ಲಾಹನಲ್ಲಿ ವಿಶ್ವಾಸವಿರಿಸುವುದು.
ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದ, ಮಳೆಯನ್ನು ಸುರಿಸುವ, ಹೊಲ-ಗದ್ದೆಗಳನ್ನೂ ತೋಟಗಳನ್ನೂ ಬೆಳೆಸುವ, ನದಿಗಳನ್ನು ಹರಿಸುವ, ಪರ್ವತಗಳನ್ನು ನಾಟಿರುವ, ನೊಂದ ಜನರ ಕೂಗನ್ನು ಆಲಿಸುವ, ಅವರ ನೋವನ್ನು ನೀಗಿಸುವ, ನಿಮಗೆ ನೆಲ-ಜಲಗಳ ಅಂಧಕಾರದಲ್ಲಿ ಮಾರ್ಗದರ್ಶನ ಮಾಡುವ, ಜೀವವನ್ನು ಸೃಷ್ಟಿಸುವ ಮತ್ತು ಅದನ್ನು ಪುನರುಜ್ಜೀವನಗೊಳಿಸುವ ಆ ಏಕೈಕ ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಎಂದು ಪವಿತ್ರ ಕುರ್ಆನ್ ಹೇಳುತ್ತದೆ (27:59-64). ಅವನೇ ಎಲ್ಲ ಕಾಲ, ಎಲ್ಲ ದೇಶ ಮತ್ತು ಎಲ್ಲ ಜನಾಂಗಗಳಲ್ಲಿ ಪ್ರವಾದಿಗಳನ್ನು ಕಳುಹಿಸಿದವನು. ಆ ಪ್ರವಾದಿಗಳ ಪೈಕಿ ಕೊನೆಯವರು ಪ್ರವಾದಿ ಮುಹಮ್ಮದ್ರವರಾಗಿದ್ದಾರೆ. ಅವರಿಗೆ(ಸ) ಅಲ್ಲಾಹನು ತನ್ನ ಅಂತಿಮ ಗ್ರಂಥವಾದ ಕುರ್ಆನನ್ನು ಅವತರಿಸಿದನು. ಇದು ಇಡೀ ಮಾನವಕುಲವನ್ನು ಸನ್ಮಾರ್ಗದಲ್ಲಿ ಸಾಗಿಸಲಿಕ್ಕಾಗಿ ಬಂದಿದೆ. ಒಂದು ದಿನ ಎಲ್ಲ ಮಾನವರು ತಮ್ಮ ಸೃಷ್ಟಿಕರ್ತ-ಪ್ರಭುವಾದ ಅಲ್ಲಾಹನ ಬಳಿಗೆ ಮರಳುವರು. ಅಂದು ಅವರು ತಮ್ಮೆಲ್ಲ ವಿಶ್ವಾಸ ಕರ್ಮಗಳ ಬಗ್ಗೆ ವಿಚಾರಣೆಯನ್ನು ಎದುರಿಸುವರು. ಅವರ ಆಚಾರ -ವಿಚಾರಗಳಿಗೆ ಅನುಗುಣವಾಗಿ ಅವರಿಗೆ ಪುರಸ್ಕಾರ ಅಥವಾ ಶಿಕ್ಷೆ ಲಭಿಸುವುದು. ಯಾರು ಈ ಮೂಲಭೂತ ಸಿದ್ಧಾಂತಗಳ ಮೇಲೆ ವಿಶ್ವಾಸವಿರಿಸಿ ಅದರಂತೆ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೋ ಅವರು ಸತ್ಯವಿಶ್ವಾಸಿಗಳೆನಿಸಿಕೊಳ್ಳುತ್ತಾರೆ. ಯಾರು ಇವುಗಳನ್ನು ಅಥವಾ ಇವುಗಳ ಪೈಕಿ ಯಾವುದನ್ನಾದರೂ ನಿರಾಕರಿಸುತ್ತಾರೋ ಅವರು ಅವಿಶ್ವಾಸಿಗಳೆನಿಸಿಕೊಳ್ಳುತ್ತಾರೆ. ಅತ್ಯಂತ ಉದಾರಿಯಾದ ಅಲ್ಲಾಹನು ತನ್ನ ದಾಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾನೆ. ಅವರು ಅವನ ಈ ಮಾರ್ಗದರ್ಶನವನ್ನು ಸ್ವೀಕರಿಸಲೂ ಬಹುದು, ನಿರಾಕರಿಸಲೂಬಹುದು. ಪವಿತ್ರ ಕುರ್ಆನ್ ಅದನ್ನು ಬಹಳ ಸ್ಪಷ್ಟವಾಗಿ ಸಾರಿ ಹೇಳಿದೆ:
ಹೇಳಿರಿ, “ಇದು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯ. ಇಷ್ಟವಿದ್ದವರು ಇದನ್ನು ಸ್ವೀಕರಿಸಿಕೊಳ್ಳಲಿ. ಇಷ್ಟವಿದ್ದವರು ಇದನ್ನು ನಿರಾಕರಿಸಲಿ.”* (18:29)
ಈ ಆಯ್ಕೆಯ ಸ್ವಾತಂತ್ರದಲ್ಲಿ ಹೊಣೆಗಾರಿಕೆಯು ಸಂಪೂರ್ಣವಾಗಿ ನಮ್ಮ ಮೇಲಿರುವುದು.
ಪವಿತ್ರ ಕುರ್ಆನಿನ ಈ ವಚನಗಳಿಂದ ಸೃಷ್ಟಿಕರ್ತನಾದ ಅಲ್ಲಾಹನು ತನ್ನ ಸೃಷ್ಟಿಯಾದ ಮನುಷ್ಯನ ಬಗ್ಗೆ ಇಟ್ಟುಕೊಂಡಿರುವ ಯೋಜನೆಯು ಯಾವುದೇ ಸಂಶಯಕ್ಕೆ ಎಡೆಯಿಲ್ಲದಂತೆ ಸ್ಪಷ್ಟವಾಗುತ್ತದೆ. ಎಲ್ಲ ಮನುಷ್ಯರೂ ಸ್ವತಂತ್ರವಾಗಿ ಹುಟ್ಟಿದ್ದಾರೆ. ಅವರಿಗೆ ತಮ್ಮಿಷ್ಟದ ಮಾರ್ಗವನ್ನು ಆರಿಸುವ ಸ್ವಾತಂತ್ರ್ಯವಿದೆ. ಅವರು ತಮ್ಮ ಪರಮ ದಯಾಮಯನಾದ ದೇವನು ತೋರಿಸಿಕೊಟ್ಟ ಮಾರ್ಗವನ್ನು ಅನುಸರಿಸಬಹುದು ಅಥವಾ ತಮಗಿಷ್ಟ ಬಂದ ಬೇರಾವುದೇ ಮಾರ್ಗವನ್ನು ಆರಿಸಿಕೊಳ್ಳಬಹುದು. ಈ ವಿಷಯದಲ್ಲಿ ಯಾವುದೇ ರೀತಿಯ ಒತ್ತಾಯ ಅಥವಾ ಬಲಾತ್ಕಾರವಿಲ್ಲ. ಧರ್ಮವು ದೃಢನಂಬಿಕೆ ಮತ್ತು ಸ್ವತಂತ್ರ ಆಯ್ಕೆಯನ್ನು ಅವಲಂಬಿಸಿದೆ. ಧರ್ಮ ಸ್ವೀಕಾರಕ್ಕೆ ಯಾರನ್ನಾದರೂ ಬಲಾತ್ಕಾರ ಮಾಡಿದರೆ ಇವು ಅರ್ಥಹೀನವೆನಿಸುತ್ತವೆ. ಇನ್ನು ಸತ್ಯಧರ್ಮವನ್ನು ನಿರಾಕರಿಸುವವನ ವಿಷಯ. ಅವನ ನೈಜ ಶಿಕ್ಷೆ ಶಾಶ್ವತ ಪರಲೋಕದಲ್ಲಿದೆ. ಈ ತಾತ್ಕಾಲಿಕ ಪರೀಕ್ಷಾ ಲೋಕದಲ್ಲಲ್ಲ. ಕುರ್ಆನ್ ಹೇಳುತ್ತದೆ: ಯಾರು ಸತ್ಯವನ್ನು ನಿರಾಕರಿಸುವನೋ,* ಅವನ ನಿರಾಕರಣೆಯ ಅಪರಾಧ ಅವನ ಮೇಲೆಯೇ ಇದೆ. ಸತ್ಕರ್ಮ ಎಸಗಿದವರು ತಮಗಾಗಿಯೇ (ಯಶಸ್ಸಿನ ಮಾರ್ಗವನ್ನು) ಸುಗಮಗೊಳಿಸುತ್ತಿದ್ದಾರೆ. (30:44)
ಪರಮ ದಯಾಮಯನಾದ ಸೃಷ್ಟಿಕರ್ತ ಪ್ರಭುವು ತನ್ನ ಅಂತಿಮ ಪ್ರವಾದಿಯಾದ ಮುಹಮ್ಮದ್ರನ್ನು(ಸ) ಇಡೀ ಮಾನವಕುಲಕ್ಕೆ ಅನುಗ್ರಹವಾಗಿ ಕಳುಹಿಸಿಕೊಟ್ಟಿದ್ದಾನೆ. ಅವರ ಮೂಲಕ ತಮ್ಮ ಅಂತಿಮ ಸಂದೇಶವಾದ ಪವಿತ್ರ ಕುರ್ಆನನ್ನೂ ಸಮಸ್ತ ಮಾನವಕುಲಕ್ಕೆ ಮಾರ್ಗದರ್ಶನವಾಗಿ ರವಾನಿಸಿದ್ದಾನೆ.
ಈ ದೈವಿಕ ಮಾರ್ಗದರ್ಶನದ ಬಗ್ಗೆ ಅಜ್ಞಾನದಲ್ಲಿರುವ ಜನರಿರಬಹುದು. ಅವರಿಗೆ ಸತ್ಯದ ಸಂದೇಶವನ್ನು ಮುಟ್ಟಿಸಬೇಕೆಂದು ಪವಿತ್ರ ಕುರ್ಆನ್ ತನ್ನನ್ನು ನಂಬಿದವರಿಗೆ ಆದೇಶಿಸಿದೆ. ಆ ವ್ಯಕ್ತಿ ಯುದ್ಧನಿರತ ರಾಷ್ಟ್ರಕ್ಕೆ ಸೇರಿದವನಾಗಿದ್ದರೂ ಸರಿಯೆ.
ಇನ್ನು ಜಿಹಾದ್ನ ವಿಷಯಕ್ಕೆ ಬರೋಣ. ಜಿಹಾದ್ ಅಂದರೆ ಧರ್ಮಯುದ್ಧ. ಜಿಹಾದ್ ಅಂದರೆ ತನ್ನ ಚಿತ್ತವನ್ನು ದೈವಿಕ ನಿಯಮಕ್ಕೆ ಅಧೀನಗೊಳಿಸಲು ನಡೆಸುವಂತಹ ಸಂಘರ್ಷ, ಜಿಹಾದ್ ಅಂದರೆ ಮನುಷ್ಯ ನ್ಯಾಯಕ್ಕಾಗಿ ಮಾಡುವ ಹೋರಾಟ. ಈ ಕಾಲದಲ್ಲಿ ಸಶಸ್ತ್ರ ಹೋರಾಟ ಮಾಡುವ ಅಗತ್ಯ ಬಹಳ ಕಡಿಮೆ. ಇದು ಪ್ರಜಾಸತ್ತೆಯ ಯುಗ, ಈ ಯುಗದಲ್ಲಿ ಮಾತ್ರವಲ್ಲ, ಪ್ರವಾದಿವರ್ಯರ(ಸ) ಕಾಲದಲ್ಲಿ ಕೂಡಾ ಎಲ್ಲಿಯ ತನಕ ಶಾಂತಿಯುತವಾದ ರೀತಿಯಲ್ಲಿ ಈ ಹೋರಾಟವನ್ನು ನಡೆಸಲು ಸಾಧ್ಯವಿತ್ತೋ ಅಲ್ಲಿಯ ತನಕ ಅದಕ್ಕಾಗಿ ಶಸ್ತ್ರ ಎನ್ನುವ ಅನುಮತಿಯಿರಲಿಲ್ಲ. ಜಿಹಾದ್ ಅಂದರೆ ನಿರಪರಾಧಿಗಳ ಕೊಲೆಯಲ್ಲ. ಜಿಹಾದ್ ಅಂದರೆ ಅನ್ಯಾಯವಲ್ಲ. ಅದು ಎಲ್ಲ ರೀತಿಯ ಅನ್ಯಾಯಗಳಿಂದ ದುರ್ಬಲರ, ದೀನ-ದಲಿತರ ಮತ್ತು ಶೋಷಿತರ ರಕ್ಷಣೆಗಾಗಿ ಮಾಡುವ ಹೋರಾಟವಾಗಿದೆ. ಪ್ರವಾದಿಯವರು(ಸ) ತಮ್ಮ ಕಾಲದಲ್ಲಿ ಅದನ್ನು ಮಾಡಿದ್ದಾರೆ. ಇಂದಿನ ಕಾಲದಲ್ಲೂ ಅದನ್ನು ಮಾಡಬೇಕು. ಪ್ರವಾದಿ ಮುಹಮ್ಮದ್ರಿಗೆ(ಸ) ಪವಿತ್ರ ಕುರ್ಆನ್ ಈ ರೀತಿ ಆದೇಶಿಸುತ್ತದೆ, ”ಈ ಕುರ್ಆನನ್ನು ತೆಗೆದುಕೊಂಡು ಅವರ ವಿರುದ್ದ ಉಗ್ರ ಹೋರಾಟ ನಡೆಸಿರಿ.” (25:52) ಮೂಲದಲ್ಲಿ ಉಗ್ರ ಹೋರಾಟಕ್ಕೆ ದೊಡ್ಡ ಜಿಹಾದ್ ಎಂಬ ಪದವನ್ನು ಬಳಸಲಾಗಿದೆ. ದೊಡ್ಡ ಜಿಹಾದ್ ಎಂದರೆ ಈ ಕುರ್ಆನಿನ ಮೂಲಕ ವೈಚಾರಿಕ ಹೋರಾಟ ನಡೆಸುವುದಾಗಿದೆ. ಅದು ಪ್ರತಿಪಾದಿಸುವ ತತ್ವ ಸಿದ್ದಾಂತಗಳನ್ನು ಇತರ ಮಾನವ ನಿರ್ಮಿತ ಸಿದ್ಧಾಂತಗಳ ವಿರುದ್ದ ಜಗತ್ತಿನ ಮುಂದಿರಿಸುವುದಾಗಿದೆ. ಪ್ರವಾದಿ ಮುಹಮ್ಮದ್ ರವರ(ಸ) ಒಂದು ವಚನದ ಪ್ರಕಾರ ದುಷ್ಟ ಮತ್ತು ಅನ್ಯಾಯಗಾರ ಆಡಳಿತಗಾರನ ಮುಂದೆ ಸತ್ಯ ಮತ್ತು ನ್ಯಾಯವನ್ನು ಪ್ರತಿಪಾದಿಸುವುದು ದೊಡ್ಡ ಜಿಹಾದ್ ಆಗಿದೆ.
ಇನ್ನು ಧರ್ಮ ಯುದ್ಧವೆಂಬ ಅರ್ಥದಲ್ಲಿ ಜಿಹಾದ್ನ ಕುರಿತು ಕೆಲವು ಮಾತು. ಪ್ರವಾದಿ ಮುಹಮ್ಮದ್ರವರು(ಸ) ಮಕ್ಕಾದಲ್ಲಿ 13 ವರ್ಷ ಕಾಲ ಜೀವಿಸಿದ್ದರು. ಆ 13 ವರ್ಷಗಳಲ್ಲಿ ಪ್ರವಾದಿ ಮುಹಮ್ಮದ್(ಸ) ಮತ್ತು ಅವರ ಅನುಯಾಯಿಗಳು ಅನುಭವಿಸಿದ ಹಿಂಸೆ, ದೌರ್ಜನ್ಯಗಳಿಗೆ ಲೆಕ್ಕಮಿತಿಯಿರಲಿಲ್ಲ. ಆ ಸಂದರ್ಭಗಳಲ್ಲಿ ಅಲ್ಲಾಹನ ಆಜ್ಞೆ, “ನಿಮ್ಮ ಕೈಗಳನ್ನು ತಡೆದಿರಿಸಿರಿ” ಎಂದಾಗಿತ್ತು. ಯುದ್ಧ ಮಾಡುವ ಅನುಮತಿ ಅವರಿಗೆ ಅಲ್ಲಿ ಇರಲಿಲ್ಲ. ಎಲ್ಲ ರೀತಿಯ ಹಿಂಸೆ-ದೌರ್ಜನ್ಯಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳಬೇಕೆಂದೂ ಯಾವುದಕ್ಕೂ ಪ್ರತೀಕಾರವೆಸಗಬಾರದೆಂದೂ ಅವರಿಗೆ ಆದೇಶಿಸಲಾಗಿತ್ತು. ಇಸ್ಲಾಮಿನ ಕೇಂದ್ರ ಆರಾಧನಾಲಯವಾದ ಕಅಬಾ ಭವನದಲ್ಲಿ 360 ವಿಗ್ರಹಗಳನ್ನು ಇರಿಸಲಾಗಿತ್ತು. ಆ ಕಅಬಾದ ಒಂದು ಭಾಗದಲ್ಲಿ ಪ್ರವಾದಿಯವರು(ಸ) ನಮಾಝ್ ಮಾಡುತ್ತಿದ್ದರು. ಅಲ್ಲಿಯೂ ಹಲವೊಮ್ಮೆ ಜನರು ಅವರನ್ನು ತಡೆಯುತ್ತಿದ್ದರು. ಕೆಲವೊಮ್ಮೆ ನಮಾಝ್ ಮಾಡುವಾಗ ಪ್ರವಾದಿಯವರ(ಸ) ಕೊರಳಿಗೆ ಒಂಟೆಯ ಕರುಳಿನ ಮಾಲೆ ಹಾಕುತ್ತಿದ್ದರು. ಪ್ರವಾದಿ ಸಂಗಾತಿಗಳ ಮೇಲೆ ಹಿಂಸೆ-ದೌರ್ಜನ್ಯಗಳು ಮಿತಿವಿೂರಿದಾಗ, ‘ನಾವು ಇನ್ನೇನು ಮಾಡಬೇಕು’ ಎಂದು ಅವರು ಪ್ರವಾದಿವರ್ಯರಲ್ಲಿ(ಸ) ವಿಚಾರಿಸುತ್ತಿದ್ದರೆಂದು ಕುರ್ಆನಿನಲ್ಲಿ ಉಲ್ಲೇಖಿಸಲಾಗಿದೆ. ಅದಕ್ಕೆ ಪ್ರವಾದಿಯವರ(ಸ) ಉತ್ತರ, “ಸಹನೆ ವಹಿಸಿರಿ” ಎಂದಾಗಿತ್ತು. ಕಟ್ಟ ಕಡೆಗೆ ಮಕ್ಕಾದಲ್ಲಿ ಪ್ರವಾದಿಯವರ(ಸ) ಕೊಲೆಯ ಸಂಚು ಹೂಡಿದ ನಂತರ ಪ್ರವಾದಿ(ಸ) ಮತ್ತು ಅವರ ಅನುಯಾಯಿಗಳು ಅಲ್ಲಿಂದ ಮದೀನಾಕ್ಕೆ ವಲಸೆ ಹೋದರು. ಅಲ್ಲಿ ಹೋದ ನಂತರವೂ ತಮ್ಮ ಮನೆ-ಮಠಗಳಿಂದಲೂ ದೇಶದಿಂದಲೂ ಹೊರಹಾಕಲ್ಪಟ್ಟ ಜನರು ತಾವಾಗಿ ಯುದ್ಧಕ್ಕೆ ಮುಂದಾಗಿರಲಿಲ್ಲ. ಅದರ ಬಗ್ಗೆ ಕುರ್ಆನ್ ಹೀಗೆ ಹೇಳುತ್ತದೆ, “ಯಾರ ವಿರುದ್ಧ ಯುದ್ಧ ನಡೆಸಲಾಗುತ್ತಿದೆಯೋ ಅವರಿಗೆ ಅನುಮತಿ ನೀಡಲಾಗಿದೆ. ಏಕೆಂದರೆ ಅವರು ಶೋಷಿತರಾಗಿದ್ದಾರೆ.” (22:39) ಯುದ್ಧದ ಕುರಿತು ಬಂದ ಪ್ರಪ್ರಥಮ ಆದೇಶವಿದು. ಅತ್ಯಂತ ಯುದ್ಧ ಪ್ರಿಯರಾಗಿದ್ದ ಅರಬರು ಇಸ್ಲಾಮಿನ ಶಿಕ್ಷಣದ ಕಾರಣ ಎಷ್ಟು ಶಾಂತಿ ಪ್ರಿಯರಾದರೆಂದರೆ ಪ್ರವಾದಿಯವರ(ಸ) ಅನುಯಾಯಿಗಳಿಗೆ ಯುದ್ಧದ ಬಗ್ಗೆ ವೈರಾಗ್ಯ ಮೂಡಿತ್ತು. ಆದ್ದರಿಂದ ಅಲ್ಲಾಹನು ಕುರ್ಆನಿನಲ್ಲಿ ಹೀಗೆ ಹೇಳಿದನು, “ಯುದ್ಧವು ನಿಮ್ಮ ಮೇಲೆ ಕಡ್ಡಾಯಗೊಂಡಿದೆ. ಆದರೆ ಅದು ನಿಮಗೆ ಅರೋಚಕವಾಗಿದೆ.” ಹೀಗೆ ಯುದ್ಧಕ್ಕೆ ಅನುಮತಿ ನೀಡಿದುದಕ್ಕೆ ಕುರ್ಆನ್ ಎರಡು ಕಾರಣಗಳನ್ನು ಕೊಡುತ್ತದೆ: 1) ಯಾವುದೇ ಆರಾಧನಾಲಯದ ಧ್ವಂಸವನ್ನು ತಡೆಯುವುದು ಇಸ್ಲಾವಿೂ ಜಿಹಾದ್ನ ಉದ್ದೇಶವಾಗಿದೆ. 2) ಹೀಗೆ ಅಲ್ಲಾಹನು ಮಾನವರ ಒಂದು ವಿಭಾಗವನ್ನು ಇನ್ನೊಂದು ವಿಭಾಗದ ಮೂಲಕ ನೀಗಿಸಿ ಬಿಡದಿರುತ್ತಿದ್ದರೆ ಭೂಮಿಯ ವ್ಯವಸ್ಥೆಯು ಕೆಟ್ಟು ಹೋಗುತ್ತಿತ್ತು. (2:251) ಒಂದು ವರ್ಗದ ಜನರು ಭೂಮಿಯಲ್ಲಿ ಅರಾಜಕತೆಯನ್ನುಂಟು ಮಾಡಲು ಹೊರಟರೆ ಅವರ ವಿರುದ್ಧ ಯುದ್ಧಕ್ಕೆ ಅನುಮತಿಯಿದೆ. ಈ ರೀತಿ ಇಸ್ಲಾಮ್ ಅತ್ಯಂತ ಅನಿವಾರ್ಯ ಪರಿಸ್ಥಿತಿಯಲ್ಲಿ ಒಂದು ಇಸ್ಲಾವಿೂ ರಾಷ್ಟ್ರಕ್ಕೆ ಧರ್ಮ ಯುದ್ಧದ ಅನುಮತಿ ನೀಡುತ್ತದೆ.
ಇಸ್ಲಾಮಿನ ಆದೇಶ ಪ್ರಕಾರ ನಡೆದಂತಹ ಯುದ್ಧದ ವೇಳೆಯಲ್ಲಿಯೂ ಸೇನೆಗೆ ಜನಸಾಮಾನ್ಯರನ್ನು, ವೃದ್ಧರನ್ನು, ಮಹಿಳೆಯರನ್ನು ಮತ್ತು ಮಕ್ಕಳನ್ನು ಸಂರಕ್ಷಿಸುವಂತೆ ಹಾಗೂ ಆಕ್ರಮಿತ ಪ್ರದೇಶದ ಪೈರು, ತೋಟ, ಸಾರ್ವಜನಿಕ ಸೊತ್ತು-ವಿತ್ತಗಳನ್ನು ಸಂರಕ್ಷಿಸುವಂತೆ ಆಜ್ಞಾಪಿಸಲಾಗುತ್ತಿತ್ತು. ಇಸ್ಲಾಮಿನ ಇತಿಹಾಸದಲ್ಲಿ ಯಾವುದೇ ನಿರಪರಾಧಿ ಜನರನ್ನು ಕೊಂದ ಬಗ್ಗೆ ಅಥವಾ ಭಿನ್ನ ಧಾರ್ಮಿಕ ಚಿಂತನೆಗಳನ್ನು ಹೊಂದಿದ ಕಾರಣಕ್ಕಾಗಿ ಶೋಷಣೆಗೆ ಒಳಪಡಿಸಿದ ಒಂದು ಘಟನೆಯೂ ಜರಗದಿರುವುದು ಇಸ್ಲಾಮಿನ ನ್ಯಾಯಪರ, ಶಾಂತಿಯುತ, ಸೌಹಾರ್ದಮಯ ಬೋಧನೆಗಳಿಗೆ ಹಿಡಿದ ಕನ್ನಡಿಯಾಗಿದೆ.
ಜಿಹಾದ್ ಅಥವಾ ಇಸ್ಲಾವಿೂ ಯುದ್ಧಗಳನ್ನು ಜಗತ್ತಿನ ಇತರ ಯುದ್ಧಗಳೊಂದಿಗೆ ತಳಕು ಹಾಕುವುದೇ ಒಂದು ಆಭಾಸವಾಗಿದೆ. ಜಿಹಾದ್ನ ದೃಷ್ಟಿಕೋನ, ಧ್ಯೇಯೋದ್ದೇಶ, ಜಿಹಾದ್ಗೆ ಕಾರಣಗಳು, ಅದಕ್ಕೆ ಪ್ರೇರಣೆಗಳು ಜಗತ್ತಿನ ಇತರ ಯುದ್ಧಗಳಿಗಿಂತ ತೀರಾ ಭಿನ್ನವಾಗಿದೆ. ಈ ಯುದ್ಧಗಳಲ್ಲಿ ಹೋರಾಡುವವರು ಹೋರಾಡಿ, ತಮ್ಮ ಶತ್ರುಗಳನ್ನು ಸೃಷ್ಟಿಸಲಿಲ್ಲ. ಏಕೆಂದರೆ ಅವರು ತಮ್ಮ ವೈಯಕ್ತಿಕ ದ್ವೇಷ, ಅಸೂಯೆ, ಹಗೆತನ ಸಾಧಿಸಲಿಕ್ಕಾಗಿ ಹೋರಾಡಿರಲಿಲ್ಲ. ಅಲ್ಲಿ ತಂದೆ ಮಕ್ಕಳೊಂದಿಗೆ, ಸಹೋದರ ಸಹೋದರರೊಂದಿಗೆ, ಮಿತ್ರರು ಮಿತ್ರರೊಂದಿಗೆ ಹೋರಾಡಿದ್ದರು. ಇದರಿಂದ ಹೋರಾಟದ ಕಾರಣ ಬೇರೆಯೇ ಇತ್ತೆಂದು ವ್ಯಕ್ತವಾಗುತ್ತದೆ. ಮುಸ್ಲಿಮರ ವಿರುದ್ಧ ಹೋರಾಡಿದವರಿಗೆ ಯುದ್ಧದ ನೈಜತೆಯ ಅರಿವಾದಾಗ ಅವರು ತಮ್ಮ ‘ಶತ್ರು’ಗಳನ್ನು ಆಲಂಗಿಸಿಕೊಂಡರು.
ಜಿಹಾದ್ನ ಉದ್ದೇಶ ಸಂಪತ್ತಿನ ಗಳಿಕೆ, ಸಾಮ್ರಾಜ್ಯ ವಿಸ್ತರಣೆಯ ಹೆಬ್ಬಯಕೆ, ದುರ್ಬಲ ರಾಷ್ಟ್ರಗಳ ಮೇಲೆ ಶಕ್ತಿ ಪ್ರದರ್ಶನ ಮಾಡುವುದಲ್ಲ. ಜಿಹಾದ್ನ ಮೂಲ ಉದ್ದೇಶ, ಸಮಾಜ ದಲ್ಲಿ ಕ್ಷೋಭೆಯನ್ನು ಕೊನೆಗಾಣಿಸುವುದಾಗಿದೆ. ಸಮಾಜದಲ್ಲಿ ಎಲ್ಲರಿಗೂ ಗೌರವದಿಂದ, ಸ್ವಾಭಿಮಾನದಿಂದ ಬಾಳುವ ಹಕ್ಕಿದೆ. ತಮಗೆ ಸರಿ ಕಂಡ, ತಾವು ಉತ್ತಮವೆಂದು ಸ್ವೀಕರಿಸಿದ ಧಾರ್ಮಿಕ ಚಿಂತನೆಯಂತೆ ಬಾಳುವ ಹಕ್ಕಿದೆ. ಯಾರಿಗೂ ಆ ಹಕ್ಕನ್ನು ಕಸಿಯುವ, ಆ ಹಕ್ಕಿನಿಂದ ವಂಚಿತರನ್ನಾಗಿ ಮಾಡುವ ಅಧಿಕಾರವಿಲ್ಲ. ವಿಶೇಷವಾಗಿ ಸೃಷ್ಟಿಕರ್ತನ ಸಂದೇಶ ಇಡಿಯ ಮಾನವ ಕುಲಕ್ಕಾಗಿದ್ದು, ಇದರಿಂದ ಭೂಲೋಕದಲ್ಲಿ ಶಾಂತಿ, ಕ್ಷೇಮ, ಸುಭಿಕ್ಷೆ ನೆಲೆಸುವುದರಲ್ಲಿ ಯಾವ ಸಂಶಯವೂ ಇಲ್ಲ.
ಜಿಹಾದ್ನ ಬಗ್ಗೆ ಇಸ್ಲಾಮಿನ ಬೋಧನೆ ಇದಾಗಿದೆ. ಮಾರಣ ಹೋಮ ಇಸ್ಲಾಮಿನ ಬೋಧನೆಯಾಗಿರುತ್ತಿದ್ದರೆ ಯುದ್ಧ ಪ್ರಿಯರಾಗಿದ್ದ ಅರಬರಿಂದ ಲಕ್ಷಗಟ್ಟಲೆ ಪ್ರಾಣ ಹರಣವಾಗಬೇಕಿತ್ತು. ಪ್ರವಾದಿ ಮುಹಮ್ಮದ್ರವರ(ಸ) ನೇತೃತ್ವದಲ್ಲಿ ನಡೆದ ಯುದ್ಧಗಳಲ್ಲಿ ಇತ್ತಂಡಗಳಲ್ಲಿ ಮಡಿದವರ ಸಂಖ್ಯೆ ಕೇವಲ 384 ಆಗಿತ್ತು. ಜಿಹಾದ್ನ ಈ ಸ್ಫೂರ್ತಿ ಯಿಂದಾಗಿಯೇ ಇದಕ್ಕೆ ಆರಾಧನೆಯ ಸ್ಥಾನವನ್ನು ನೀಡಲಾಯಿತು. ಒಳಿತಿನ ಕಾರ್ಯಗಳಲ್ಲಿ ಶ್ರೇಷ್ಠ ಕಾರ್ಯ ಜಿಹಾದ್ ಎಂದು ಸಾರಲಾಯಿತು.
‘ತಪ್ಪು ಕಲ್ಪನೆಗಳು’ ಎಂಬ ಕೃತಿಯಿಂದ
IslamKannada News Portal
