-ಇಬ್ರಾಹೀಮ್ ಸಈದ್
(ನೂರೆಂಟು ಚಿಂತನೆಗಳು ಕೃತಿಯಿಂದ)
ಜಗದ್ವಿಖ್ಯಾತ ಉದ್ಯಮಿಯಾದ ಅರಿಸ್ಟಾಟಲ್ ಓನಾಸೀಸ್‍ನ ಏಕೈಕ ಪುತ್ರಿ ಕ್ರಿಸ್ಟೀನಾ. ತಂದೆ ಮತ್ತು ಸೋದರ ಅಲೆಕ್ಸಾಂಡರ್ ತೀರಿಕೊಂಡ ಬಳಿಕ ಆಕೆ ಶತಕೋಟಿ ಡಾಲರ್ ಗೆ ಏಕೈಕ ವಾರಸುದಾರಳಾದಳು. ಆಕೆ ನಾಲ್ಕು ಸಲ ವಿವಾಹವಾದಳು. ಎಲ್ಲವೂ ವಿಚ್ಛೇದನದಲ್ಲಿ ಕೊನೆಗೊಂಡವು. ತಿಯರಿ ರೂಸಲ್‍ನ ದಾಂಪತ್ಯದಲ್ಲಿ ಏಕೈಕ ಪುತ್ರ ಅಧೀನ ಜನಿಸಿದನು. ಅಂದು ಆಕೆ ತನ್ನ ಗರ್ಭ ರಕ್ಷಣೆಗೆ 17ಲಕ್ಷ ವ್ಯಯಿಸಿದ್ದಳು. ಆದರೂ ಮಗು ಹುಟ್ಟಿದಾಗಲೇ ಕಾಮಾಲೆ ರೋಗ ಪೀಡಿತವಾಗಿತ್ತು. ಅಗಾಧ ಸೊತ್ತಿದ್ದೂ ಕ್ರಿಸ್ಟೀನಾ ವ್ಯಾಕುಲಚಿತ್ತಳೂ ಅಸಂತುಷ್ಟಳೂ ಆಗಿದ್ದಳು. ಅನೇಕ ಸಲ ಆಕೆ ಆತ್ಮಹತ್ಯೆಗೂ ಯತ್ನಿಸಿದ್ದಳು.
ಹೆಚ್ಚಿನವರು ಸಂಪತ್ತು ಮತ್ತು ಅದರಿಂದ ಬರುವ ಖ್ಯಾತಿಯಲ್ಲಿ ನೆಮ್ಮದಿಯನ್ನರಸುತ್ತಾರೆ. ಮನುಷ್ಯನಲ್ಲಿನ ಸಂಘರ್ಷ, ಕಣ್ಣೀರು ಮತ್ತು ಸಂಕಷ್ಟಕ್ಕೆ ಬಡತನವೇ ಕಾರಣವೆಂದು ಅನೇಕರು ತಿಳಿದಿರುತ್ತಾರೆ. ಹಸಿವು ನಿವಾರಣೆಯಾದರೆ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತದೆಂದು ಅವರು ಭಾವಿಸುತ್ತಾರೆ. ಆದ್ದರಿಂದ ಅವರು ಹಣ ಸಂಪಾದನೆಯಲ್ಲಿ ತಮ್ಮೆಲ್ಲ ಗಮನ ಮತ್ತು ಶ್ರಮವನ್ನು ಕೇಂದ್ರೀಕರಿಸುತ್ತಾರೆ. ಜೀವನದ ಉನ್ನತ ಮೌಲ್ಯ ಮತ್ತು ಸಿದ್ಧಾಂತಗಳನ್ನು ಸಂಪತ್ತಿನ ಶಿಲುಬೆಗೆ ಏರಿಸುತ್ತಾರೆ. ಜೀವನ ಸೌಲಭ್ಯಗಳು ಹೆಚ್ಚಬೇಕು. ಜೀವನ ಮಟ್ಟ ಸುಧಾರಿಸಬೇಕು ಎಂದು ಬಯಸದವರು ಯಾರೂ ಇರಲಾರರು. ಆದರೆ ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಈಡೇರುವ ಪ್ರತಿಯೊಂದು ಬಯಕೆಯ ಬೆನ್ನಲ್ಲಿ ಹೊಸ ಬಯಕೆ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಸಾಯುವ ತನಕ ಹೆಚ್ಚೆಚ್ಚು ಗಳಿಸಬೇಕೆಂಬ ಹಂಬಲಕ್ಕೆ ಸಾವಿಲ್ಲ.
17 ಲಕ್ಷ ವ್ಯಯಿಸಿಯೂ ಕ್ರಿಸ್ಟೀನಾಗೆ ಆರೋಗ್ಯವಂತ ಮಗುವನ್ನು ಹೆರಲಾಗಲಿಲ್ಲ. ಕೋಟಿ ಗಟ್ಟಲೆ ಸಂಪತ್ತಿದ್ದೂ ಕಣ್ಣಿಗೆ ತಂಪು ನೀಡುವ ಕುಟುಂಬ ಜೀವನದ ಕನಸು ಕಾಣಲು ಆಕೆಗೆ ಸಾಧ್ಯವಾಗಲಿಲ್ಲ. ಇಂತಹ ಕೋಟಿಗಟ್ಟಲೆ ಕ್ರಿಸ್ಟೀನಾಗಳು ಇಂದು ಜಗತ್ತಿನಾದ್ಯಂತ ಇದ್ದಾರೆ. ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಬಡತನವೇ ಕಾರಣವೆಂಬ ಮಿಥ್ಯೆಯನ್ನು ಅವರೆಲ್ಲರೂ ಅಲ್ಲಗಳೆಯುತ್ತಾರೆ. ಹೆಚ್ಚಿನ ವೇಳೆ ಸಂಪತ್ತು ಹೆಚ್ಚಿದಂತೆ ಸಮಸ್ಯೆಗಳು ಹೆಚ್ಚುವುದು ವಾಡಿಕೆ. ಜೀವನ ಸೌಲಭ್ಯಗಳು ವೃದ್ಧಿಸಿದಂತೆಲ್ಲ ಶರೀರದ ಅಂಗಾಂಗಗಳ ಕೆಲಸ ಕಡಿಮೆಯಾಗಿ ಅವುಗಳ ಸ್ಥಾನದಲ್ಲಿ ಯಂತ್ರಗಳು ಬರುತ್ತವೆ. ತನ್ಮೂಲಕ ನಿಷ್ಕ್ರಿಯವಾದಂತಹ ಅವಯವಗಳಿಗೆ ರೋಗ ಮತ್ತು ಮರವೆಯುಂಟಾಗುತ್ತದೆ. ದಿನ ಪೂರ್ತಿ ದುಡಿದು ರಾತ್ರಿ ಫುಟ್‍ಪಾತ್‍ನಲ್ಲಿ ಮಲಗಿ ಗೊರಕೆ ಹೊಡೆಯುವ ಬಡವನ ನೆಮ್ಮದಿ ಹಲವೊಮ್ಮೆ ಸುಖದ ಸುಪ್ಪತ್ತಿಗೆಯಲ್ಲಿರುವವರಿಗೆ ಮರೀಚಿಕೆಯಾಗಿರುತ್ತದೆ.
ಸಿರಿವಂತಿಕೆಯು ಧನಕನಕಗಳ ಭಂಡಾರದಿಂದ ಬರುವುದಲ್ಲ. “ನೈಜ ಸಿರಿವಂತಿಕೆಯು ಮನಸ್ಸಿನ ಸಿರಿವಂತಿಕೆಯಾಗಿದೆ” ಎಂಬ ಪ್ರವಾದಿ ವಚನವನ್ನು ಮುಂದಿರಿಸಿ ಆಸೆಗಳಿಗೆ ದೇವಭಯದ ಕಡಿವಾಣ ಹಾಕುವುದೇ ನೆಮ್ಮದಿಯ ಹಾದಿ.
IslamKannada News Portal
