ಪವಿತ್ರ ಕುರ್ಆನ್ ಅಥವಾ ಇಸ್ಲಾಮಿನ ಯಾವುದೇ ವಿಷಯವು ಯಾರಿಗಾದರೂ ಅರ್ಥವಾಗದಿದ್ದರೆ ಮತ್ತು ಅರ್ಥ ಮಾಡಿಕೊಳ್ಳುವ ಸಲುವಾಗಿ ಯಾರಾದರೂ ಆ ಬಗ್ಗೆ ಪ್ರಶ್ನೆ ಅಥವಾ ಆಕ್ಷೇಪವೆತ್ತಿದರೆ, ಅದರಿಂದೇನೂ ತೊಂದರೆಯಿಲ್ಲ. ಆದರೆ ಸಾಮಾನ್ಯವಾಗಿ ಪವಿತ್ರ ಕುರ್ಆನಿನ ಮೇಲಾಗುತ್ತಿರುವ ಆಕ್ಷೇಪಗಳು ವಸ್ತುತಃ ಆಕ್ಷೇಪಕರ ಅಧ್ಯಯನ ಅಥವಾ ಸಂಶೋಧನೆಯ ಪರಿಣಾಮವಾಗಿರುವುದಿಲ್ಲ. ಬದಲಾಗಿ, ಇಸ್ಲಾಮ್ ಮತ್ತು ಮುಸ್ಲಿಮರನ್ನು ಅವಮಾನಿಸಲು ಕುರ್ಆನಿನ ವಚನಗಳನ್ನು ಮನ ಬಂದಂತ ವ್ಯಾಖ್ಯಾನಿಸಲಾಗುತ್ತದೆ ಮತ್ತು ಕೆಲವೆಡೆಯಂತೂ ಅನುವಾದವನ್ನೇ ತಪ್ಪಾಗಿ ನೀಡಲಾಗುತ್ತದೆ. ವಚನಗಳನ್ನು ಅವುಗಳ ಹಿನ್ನೆಲೆ, ಪರಿಸ್ಥಿತಿ ಮತ್ತು ಸಂದರ್ಭಗಳಿಂದ ಬೇರ್ಪಡಿಸಿ ಪ್ರಸ್ತುತ ಪಡಿಸಲಾಗುತ್ತದೆ. ಈ ರೀತಿ ಒಂದು ಧರ್ಮದ ಪವಿತ್ರ ಗ್ರಂಥದಿಂದ ಯಾವುದಾದರೊಂದು ವಾಕ್ಯವನ್ನು ಉದ್ದರಿಸಿ ಅದರ ಕೇವಲ ಬಾಹ್ಯ ಹಾಗೂ ಶಬ್ದಾರ್ಥವನ್ನೇ ಆಧಾರವಾಗಿರಿಸಿ ಆಕ್ಷೇಪವೆತ್ತುವುದು, ಅದನ್ನು ಹೇಳುವ ಮತ್ತು ಬರೆಯುವವರ ಉದ್ದೇಶಕ್ಕೆ ಎದುರಾಗಿ ಅರ್ಥೈಸುವುದು ಅಥವಾ ಅದರ ಬಗ್ಗೆ ಸಂದರ್ಭ ಮತ್ತು ಪರಿಸ್ಥಿತಿಯನ್ನು ಪರಿಗಣಿಸದೆ ನಿಷ್ಕರ್ಷ ಮಾಡುವುದನ್ನು ತರ್ಕಬದ್ಧ ಹಾಗೂ ನ್ಯಾಯ ಸಮ್ಮತವೆಂದು ಹೇಳಲಾಗದು. ಯಾವ ಜನರು ಮತ್ತು ಸಂಘಟನೆಗಳು ಇಸ್ಲಾಮ್ ಮತ್ತು ಪವಿತ್ರ ಕುರ್ಆನಿನ ಅವಹೇಳನ ಮಾಡುತ್ತಾರೋ ಅವರಂತೂ ಇದೇ ಅನ್ಯಾಯಪೂರ್ಣ ತಪ್ಪು ನೀತಿಯನ್ನು ಅಂಗೀಕರಿಸುತ್ತಾರೆ.
ಇಂತಹ ನೀತಿಯನ್ನು ಅನುಸರಿಸುವವರ ಬಗ್ಗೆ ಹಿಂದೂ ಧರ್ಮದ ಮಹಾನ್ ವಿದ್ವಾಂಸ ಹಾಗೂ ಸುಧಾರಕರಾದ ಸ್ವಾಮಿ ದಯಾನಂದ ಸರಸ್ವತಿಯವರು ಹೀಗೆ ಬರೆದಿರುವರು-
“ಒಂದು ಮಾತನ್ನು ಹೇಳುವವರ ಉದ್ದೇಶಕ್ಕೆ ಅನುಸಾರವಾಗಿಯೇ ಅರ್ಥೈಸಬೇಕು. ಹೆಚ್ಚಿನ ಹಠಮಾರಿ, ದುರಾಗ್ರಹ ಪೀಡಿತ ವ್ಯಕ್ತಿಗಳು ಹೇಳುವವರ ಇಂಗಿತಗಳಿಗೆ ವಿರುದ್ಧವಾದ ಮಿಥ್ಯ ಕಲ್ಪನೆಗಳನ್ನು ಸೃಷ್ಟಿಸುತ್ತಾರೆ.”
ಒಂದು ವಿಷಯವನ್ನು ಅರ್ಥೈಸಲು ಮತ್ತು ಸರಿಯಾದ ತೀರ್ಮಾನಕ್ಕೆ ಬರಲು ಕೇವಲ ಶಬ್ದ ಮತ್ತು ವಾಕ್ಯಗಳ ಬಾಹ್ಯ ಅರ್ಥವನ್ನಷ್ಟೇ ನೋಡಿದರೆ ಸಾಲದು. ಬದಲಾಗಿ, ಅದರ
ಸರಿಯಾದ ಅರ್ಥ ಗ್ರಹಿಸಲು ಸಂಪೂರ್ಣ ವಿಷಯ ಮತ್ತು ಅದರ ಹಿನ್ನೆಲೆಯನ್ನೂ ಮುಂದಿರಿಸಬೇಕು. ಅಗತ್ಯಾನುಸಾರ ವಿದ್ವಾಂಸರು ಮತ್ತು ತಜ್ಞರನ್ನು ಸಂಪರ್ಕಿಸಬೇಕು. ಆದ್ದರಿಂದಲೇ ಧಾರ್ಮಿಕ ಗ್ರಂಥಗಳ ಬೃಹತ್ ವ್ಯಾಖ್ಯಾನ ಗ್ರಂಥಗಳನ್ನು ಆಯಾ ಧರ್ಮದ ವಿದ್ವಾಂಸರು ಬರೆದಿರುವರು. ಒಂದು ವೇಳೆ ವಿಷಯವು ಅಷ್ಟೊಂದು ಸುಲಭವಾಗಿದೆಯೆಂದಾಗಿದ್ದರೆ ವ್ಯಾಖ್ಯಾನ ಗ್ರಂಥಗಳನ್ನು ಬರೆಯುವುದರ ಅಗತ್ಯವಾದರೂ ಏನಿತ್ತು? ಹಾಗೆಯೇ ಇನ್ನೊಂದು ವಿಷಯವೂ ಗಮನಾರ್ಹ. ಅದೇನೆಂದರೆ, ವಿದ್ವಾಂಸರು ತಂತಮ್ಮ ಸಂಶೋಧನೆ, ಜ್ಞಾನದ ಆಧಾರದಲ್ಲಿ ಪದ ಅಥವಾ ವಾಕ್ಯಗಳ ವಿಭಿನ್ನ ಅರ್ಥಗಳನ್ನು ನೀಡಿದ್ದಾರೆ. ಆದ್ದರಿಂದಲೇ ಪ್ರತಿಯೊಂದು ಧಾರ್ಮಿಕ ಗ್ರಂಥಕ್ಕೂ ಬೇರೆ ಬೇರೆ ವಿದ್ವಾಂಸರು ವಿಭಿನ್ನವಾದ ವ್ಯಾಖ್ಯಾನಗಳನ್ನು ನೀಡಿರುವರು. ಹಾಗಾಗಿ, ಅನೇಕ ರೀತಿಯ ಅನುವಾದ ವ್ಯಾಖ್ಯಾನಗಳನ್ನೊಳಗೊಂಡ ವೇದಗ್ರಂಥಗಳೂ ಇವೆ. ಕುರ್ಆನ್ ಹಾಗೂ ಇನ್ನಿತರ ಅನೇಕ ಗ್ರಂಥಗಳೂ ಇವೆ. ಆದ್ದರಿಂದ ಒಂದು ವಿಷಯದ ಬಗ್ಗೆ ಯಾವುದೇ ನಿಷ್ಕರ್ಷೆ ತಾಳುವ ಮುನ್ನ ಅದರ ಹಿನ್ನೆಲೆ ಮತ್ತು ಸಂದರ್ಭವನ್ನೂ ಮುಂದಿರಿಸಬೇಕು. ಅಗತ್ಯಾನುಸಾರ ವ್ಯಾಖ್ಯಾನಗಳ ಸಹಾಯ ಪಡೆದು, ಆ ವ್ಯಾಖ್ಯಾನಗಾರರು ಯಾವ ರೀತಿಯ ವ್ಯಾಖ್ಯಾನವನ್ನು ನೀಡಿದ್ದಾರೆಂಬುದನ್ನೂ ನೋಡಬೇಕು. ಆ ಬಳಿಕವೇ ಯಾವುದೇ ನಿಷ್ಕರ್ಷೆಗೆ ಬರುವ ಸರಿಯೆನಿಸುತ್ತದೆ. ಇದುವೇ ಸರಿಯಾದ, ನ್ಯಾಯಪೂರ್ಣ ನೀತಿಯಾಗಿದೆ.
ನಾವು ನಮ್ಮ ಈ ಮಾತನ್ನು ಸ್ಪಷ್ಟ ಪಡಿಸಲು ಅನೇಕ ಉದಾಹರಣೆಗಳನ್ನು ನೀಡಬಲ್ಲೆವಾದರೂ ದೀರ್ಘವಾಗುವುದರಿಂದ ಕೇವಲ ಒಂದು ಉದಾಹರಣೆಯನ್ನಷ್ಟೇ ನಿಮ್ಮ ಮುಂದಿಡುತ್ತೇವೆ-
ಹಿಂದೂ ಧರ್ಮದ ಮಹಾನ್ ವಿದ್ವಾಂಸರೂ ವೇದಗ್ರಂಥಗಳ ಅನುವಾದಕರೂ ವ್ಯಾಖ್ಯಾನಗಾರರೂ ಆದ ಪಂಡಿತ್ ಕ್ಷೇಮ್ಕರಣ್ ದಾಸ್ ತ್ರಿವೇದಿಯವರು ಅಥರ್ವವೇದದ 20/93/1ಶ್ಲೋಕವನ್ನು ಈ ರೀತಿ ಅನುವಾದಿಸಿದ್ದಾರೆ “ವೇದ ವಿರೋಧಿಗಳನ್ನು ವಧಿಸಬೇಕು.” ಒಂದು ವೇಳೆ ಓರ್ವ ವ್ಯಕ್ತಿ ಅಥವಾ ಸಂಘಟನೆಯು ಪ್ರಸ್ತುತ ಶ್ಲೋಕದ ಬಾಹ್ಯ ಶಬ್ದ ಮತ್ತು ಅರ್ಥದ ಆಧಾರದಲ್ಲಿ ವೇದವು ಬೌದ್ದರು, ಜೈನರು, ಸಿಕ್ಖರು, ಕ್ರೈಸ್ತರು, ಯಹೂದ್ಯರು, ಮುಸ್ಲಿಮರು ಮತ್ತು ವೇದದಲ್ಲಿ ವಿಶ್ವಾಸವಿರಿಸದ ಇತರ ಎಲ್ಲ ಜನರನ್ನೂ ವಧಿಸಬೇಕೆಂದು ತನ್ನ ಅನುಯಾಯಿಗಳಿಗೆ ಕರೆ ಕೊಡುತ್ತದೆಯೆಂದು ಭಾವಿಸ ತೊಡಗಿದರೆ, ಈ ನೀತಿಯನ್ನು ಸರಿಯೆಂದು ಒಪ್ಪಬಹುದೆ?
ಇದಂತೂ ದೇವನ ವತಿಯಿಂದ ಬಂದಂತಹ ಗ್ರಂಥಗಳ ವಿಷಯ. ಇವುಗಳ ಬಗ್ಗೆ ಇವುಗಳ ಅನುಯಾಯಿಗಳಿಗೆ ಶ್ರದ್ಧಾ ಭಕ್ತಿಗಳಿವೆ. ಯಾವನೇ ವ್ಯಕ್ತಿ ಅಥವಾ ಸಂಘಟನೆಗೆ, ದೇಶದ ಸಂವಿಧಾನ ಮತ್ತು ಕಾನೂನು, ದಂಡ ಸಂಹಿತೆಗಳ ಯಾವುದಾದರೂ ಪುಸ್ತಕ, ಪದ ಅಥವಾ ವಾಕ್ಯದ ಬಾಹ್ಯ ಅರ್ಥದ ಆಧಾರದಲ್ಲಿ ಅದರ ಹಿನ್ನೆಲೆ, ಮಾರ್ಗದರ್ಶಕ ಸಿದ್ಧಾಂತ, ಅದಕ್ಕೆ ಸಂಬಂಧಿಸಿದ ಇತರ ಪರಿಚ್ಛೇದಗಳನ್ನು ಪರಿಗಣಿಸದೆ ಮನಬಂದಂತೆ ವ್ಯಾಖ್ಯಾನಿಸುವ ಅನುಮತಿ ದೊರೆತೀತೇ? ಒಂದು ವೇಳೆ ಈ ನೀತಿಯು ಸರಿಯೆಂದಾಗಿದ್ದರೆ, ಸಂವಿಧಾನ ಮತ್ತು ಕಾನೂನುಗಳಿಗೆ ಸಂಬಂಧಿಸಿದ ವಿಷಯಗಳ ಸಮೀಕರಣ, ವ್ಯಾಖ್ಯಾನ ಹಾಗೂ ಅವುಗಳ ಅರ್ಥ ನಿರ್ಧರಿಸಲು ಸಂವಿಧಾನ-ಕಾನೂನು ತಜ್ಞರ ಅಭಿಪ್ರಾಯ ಪಡೆಯುವ ಅಗತ್ಯವೇ ಬೀಳುತ್ತಿರಲಿಲ್ಲ. ಒಂದು ವೇಳೆ ಧಾರ್ಮಿಕ ಅಥವಾ ಕಾನೂನು ಸಂಬಂಧಿ ವಿಷಯಗಳಲ್ಲಿ ಈ ರೀತಿಯ ಮುಂಜಾಗ್ರತೆ ವಹಿಸದೇ ಇದ್ದಲ್ಲಿ, ಗಂಭೀರ ಹಾಗೂ ಭಯಾನಕ ಪರಿಸ್ಥಿತಿ ಉದ್ಭವಿಸೀತು. ಮಾತ್ರವಲ್ಲ ಈ ನೀತಿಯು ನೀರು ಮತ್ತು ಬೆಂಕಿಯೊಂದಿಗೆ ಚೆಲ್ಲಾಟವಾಡಿದಂತಾದೀತು!
‘ಅಪಾರ್ಥಕ್ಕೊಳಗಾದ ಕುರ್ಆನ್ ವಚನಗಳು’ ಎಂಬ ಕೃತಿಯಿಂದ
IslamKannada News Portal

