– ಜಸ್ಟಿಸ್ ಎಂ.ಎನ್. ವೆಂಕಟಾಚಲಯ್ಯ
ನಿವೃತ್ತ ಮುಖ್ಯ ನ್ಯಾಯಾಧೀಶರು, ಸರ್ವೋಚ್ಛ ನ್ಯಾಯಾಲಯ
ಪ್ರವಾದಿ ಮುಹಮ್ಮದರ ಕಾಲ:
ಹೆರಾಲ್ಡ್ ಲ್ಯಾಸ್ಕಿ ಹೇಳುತ್ತಾರೆ: “ಯಾವುದೇ ರಾಜ್ಯ ಸಿದ್ಧಾಂತವು ತನ್ನ ಕಾಲದ ಸಂದರ್ಭಕ್ಕೆ ಹೊರತಾಗಿ ಎಂದಿಗೂ ಅರ್ಥವಾಗುವುದಿಲ್ಲ.” ಅದೇ ರೀತಿ, ಪ್ರವಾದಿ ಮುಹಮ್ಮದರ ಕೊಡುಗೆಯನ್ನು, ಅವರ ಜನಗಳ ಲೋಕದೃಶ್ಯ ಮತ್ತು ಅವರ ಕಾಲದ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ, ಮೌಲ್ಯಾಂಕನ ಮಾಡಬೇಕಾಗುತ್ತದೆ. ಇದಕ್ಕೆ ಹಿನ್ನೆಲೆ ಎಂದರೆ 7ನೇ ಶತಮಾನದ ಅರೇಬಿಯಾ. ಇದರ ಕುರಿತು ಒಬ್ಬ ವಿದ್ವಾಸರು ಬರೆಯುತ್ತಾರೆ: “ಒಂದು ಬುಡಕಟ್ಟಿನ ಅತಿಥಿಯ ಒಂಟೆಯು ಇನ್ನೊಂದು ಬುಡಕಟ್ಟಿನವರ ಹುಲ್ಲುಗಾವಲಿನಲ್ಲಿ ಹಾದಿ ತಪ್ಪಿ ಹೋಯಿತು ಎನ್ನುವ ಕ್ಷಣಮಾತ್ರದ ಪ್ರಚೋದನೆಯಿಂದಾಗಿ ಎರಡೂ ಬುಡಕಟ್ಟಿನವರು ನಲವತ್ತು ವರ್ಷಗಳ ಕಾಲ ಕಾದಾಡಿದ್ದರು, ಎರಡೂ ಕಡೆ ಸೇರಿ 70,000 ಜೀವಗಳು ನಷ್ಟವಾಗಿ ಎರಡೂ ಬುಡಕಟ್ಟುಗಳು ವಿನಾಶ ಹೊಂದುವ ಆತಂಕ ಮೂಡುವವರೆಗೆ ಕಾದಾಡುತ್ತಲೇ ಇದ್ದರು; ಇಸ್ಲಾಮಿನ ಪ್ರವಾದಿಯವರು ಸ್ವನಿಯಂತ್ರಣ ಮತ್ತು ಯುದ್ಧ ಭೂಮಿಯಲ್ಲಿಯೇ ಐದು ಹೊತ್ತು ಪ್ರಾರ್ಥನೆಯನ್ನು ಮಾಡುವವರೆಗಿನ ಸಂಯಮ, ಶಿಸ್ತನ್ನು ಕಲಿಸಿದ್ದು ಇಂಥ ಉಗ್ರ ಆವೇಶದ ಅರಬರಿಗೆ.
” ಥಾಮಸ್ ಕಾರ್ಲೈಲ್ ಇಸ್ಲಾಮಿನ ಪ್ರವಾದಿಯವರ ಕಾಲದ ಬಗ್ಗೆ ಬರೆದ ಮಾತು ಇನ್ನೂ ಸೊಗಸಾಗಿದೆ: “ಮುಹಮ್ಮದರು ಜನಿಸಿದ ನಾಡಿನ ಈ ಅರಬ್ ಜನರೂ ಗಮನಾರ್ಹ, ಅವರ ನಾಡೂ ಗಮನಾರ್ಹ; ಈ ಪ್ರದೇಶ ಇಂಥ ಬುಡಕಟ್ಟಿಗೆ ಹೇಳಿ ಮಾಡಿಸಿದ ವಾಸಸ್ಥಾನ. ಬರ್ಬರವಾದ, ದುರ್ಗಮವಾದ ಬಂಡೆಗಲ್ಲು ಪರ್ವತಗಳು, ವಿಶಾಲವಾಗಿ ಕಣ್ಣಿನ ನೋಟ ತಲುಪವವರೆಗೂ ಹರಡಿರುವ ಕಠೋರವಾದ ಮರು ಭೂಮಿಗಳು, ನಡುನಡುವೆ, ನೀರು ಇದ್ದಲ್ಲಿ ಹಚ್ಚಹಸಿರು ಸಸ್ಯರಾಶಿಯ ಕಣ್ತಣಿಸುವ ಸೌಂದರ್ಯ; ಪರಿಮಳ ಬೀರುವ ಸಾಂಬ್ರಾಣಿ ಪೊದೆಗಳು, ಖರ್ಜೂರದ ಮರಗಳು, ಧೂಪ ದ್ರವ್ಯದ ಸಸ್ಯಗಳು. ಮರಳಿನ ಆ ವಿಶಾಲವಾದ ದಿಗಂತವನ್ನೊಮ್ಮೆ ಗಮನಿಸಿ, ಖಾಲಿ ಖಾಲಿ, ನಿಶ್ಯಬ್ದತೆ; ಒಂದು ವಸತಿ ಸ್ಥಾನವನ್ನು ಇನ್ನೊಂದರಿಂದ ದೂರವಿಡುವ ಮರಳಿನ ಸಮುದ್ರದ ಹಾಗೆ. ನೀವಲ್ಲಿ ಒಬ್ಬಂಟಿ, ವಿಶ್ವದೊಂದಿಗೆ ಉಳಿದಿರುವ ಏಕಾಂಗಿ; ಹಗಲು ಹೊತ್ತಿನಲ್ಲಿ ಕಣ್ಣು ಕೋರೈಸುವ ಉರಿ ಬಿಸಿಲನ್ನು ಉಗುಳುವ ಸೂರ್ಯ, ರಾತ್ರಿ ಹೊತ್ತಿನಲ್ಲಿ ನಕ್ಷತ್ರಗಳ ಉದ್ಯಾನದಂತಿರುವ ಆಳವಾದ ಆಕಾಶ.”
ಮುಂದುವರಿಯುತ್ತಾ ಥಾಮಸ್ ಕಾರ್ಲೀಲ್ ಹೇಳುತ್ತಾರೆ:“ಇಂಥ ನಾಡು ಚುರುಕು ಕೈಗಳ, ಆಳ ಹೃದಯಿಗಳ ಜನಗಳಿಗೇ ಸೂಕ್ತವಾಗಿದೆ. ಅರಬ್ ಸ್ವಭಾವದಲ್ಲಿ ಒಂದು ಬಗೆಯ ಚಾಕಚಕ್ಯತೆ, ಸಕ್ರಿಯತೆ, ಆದರೂ ಅತ್ಯಂತ ಧ್ಯಾನಸ್ಥ ಗುಣ ಕಂಡು ಬರುತ್ತದೆ. ಉತ್ಸಾಹ ಭರಿತ. ಪರ್ಶಿಯನ್ನರನ್ನು ಪೂರ್ವದ ಫ್ರೆಂಚರು ಎನ್ನುತ್ತಾರೆ; ನಾವು ಅರಬರನ್ನು ಪೌರ್ವಾತ್ಯ ಇಟ್ಯಾಲಿಯನ್ನರು ಎಂದು ಕರೆಯೋಣ; ಉದಾತ್ತ ಸ್ವಭಾವದ ಪ್ರತಿಭಾನ್ವಿತ ಜನ; ಹುಚ್ಚುಹುಚ್ಚಾದ ಅಚಲ ಭಾವನೆಗಳು, ಮತ್ತು ಇದರ ಮೇಲೆ ಬಲವಾದ ಸಂಯಮವನ್ನು ಹೊಂದಿರುವ ಜನ: ಉದಾತ್ತತೆ ಮತ್ತು ಪ್ರತಿಭೆ ಇವರ ಮೂಲ ಲಕ್ಷಣ. ಮೃದು ಸ್ವಭಾವದ ಒಬ್ಬ ಬದವೀ ವ್ಯಕ್ತಿ ಅಪರಿಚಿತನನ್ನು ತನ್ನ ಬಿಡಾರಕ್ಕೆ ಸ್ವಾಗತಿಸುತ್ತಾನೆ, ಅಲ್ಲಿರುವ ಎಲ್ಲದರ ಮೇಲೆಯೂ ಅತಿಥಿಗೆ ಅಧಿಕಾರವಿದೆ ಎನ್ನುವ ಹಾಗೆ; ಅವನು ಆತನ ಅತ್ಯಂತ ಕೆಟ್ಟ ವೈರಿಯಾಗಿದ್ದರೂ ಸರಿ, ಆತ ಅತಿಥಿಯಾದ್ದರಿಂದ ತನ್ನ ಮೆಚ್ಚಿನ ಆಡಿನ ಮರಿಯನ್ನು ಕೊಲ್ಲುತ್ತಾನೆ, ಪವಿತ್ರವಾದ ಅತಿಥಿ ಸತ್ಕಾರವನ್ನು ನೀಡುತ್ತಾನೆ.”
ಪ್ರವಾದಿ ಮುಹಮ್ಮದರ ಆಗಮನ
ಪ್ರವಾದಿಯವರ ಆಗಮನದ ಕುರಿತು ಕಾರ್ಲೈಲ್ ಹೇಳುತ್ತಾನೆ: “ಈ ರೀತಿಯಲ್ಲಿ ಬದುಕುತ್ತಿದ್ದ ಅರಬ್ ಜನರ ನಡುವೆ, ನಮ್ಮ ಯುಗದ 570ನೇ ವರ್ಷದಲ್ಲಿ ಹುಟ್ಟುತ್ತಾರೆ ಮುಹಮ್ಮದ್ ಎನ್ನುವ ವ್ಯಕ್ತಿ. ಹಾಶಿಮ್ ಕುಟುಂಬದವರು, ಖುರೈಷ್ ಬುಡಕಟ್ಟಿನವರು. ಬಡವರಾದರೂ ಅವರ ನಾಡಿನ ಪ್ರಧಾನ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದವರು. ಹುಟ್ಟುವ ಹೊತ್ತಿಗೆ ತಂದೆಯನ್ನು ಕಳೆದುಕೊಂಡರು; ಆರನೇ ವರ್ಷದಲ್ಲಿ ತನ್ನ ಸೌಂದರ್ಯ, ಶಾಲೀನತೆ, ವಿವೇಚನೆಗೆ ಹೆಸರಾಗಿದ್ದ ತಾಯಿಯೂ ಹೋದರು; ನೂರು ವರ್ಷ ವಯಸ್ಸಿನ ಅವರ ತಾತ ಅವರನ್ನು ಸಾಕಿದರು. ಮುಹಮ್ಮದರ ತಂದೆ ಅಬ್ದುಲ್ಲಾ ಅವರ ಪ್ರೀತಿಯ ಮಗನಾಗಿದ್ದರು. ಶತಮಾನದಷ್ಟು ವಯಸ್ಸಾದ ಕಣ್ಣುಗಳಿಂದ ಬದುಕನ್ನು ಕಂಡಿದ್ದ ತಾತ ಮುಹಮ್ಮದರಲ್ಲಿ ತಮ್ಮ ಮಗ ಅಬ್ದಲ್ಲಾ ಮರಳಿರುವುದನ್ನು ಕಂಡರು. ಅಬ್ದುಲ್ಲಾನ ನೆನಪಿನಲ್ಲಿ ಈಗ ಅವರ ಬಳಿ ಇದ್ದದ್ದು ಈ ಮುದ್ದು ಮಗು ಮಾತ್ರ. ಈ ಅನಾಥ ಮಗುವನ್ನು ಅವರು ಬಹಳವಾಗಿ ಪ್ರೀತಿಸುತ್ತಿದ್ದರು; ಅವರೆನ್ನುತ್ತಿದ್ದರು, ಈ ಸುಂದರ ಬಾಲಕನನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಅವರ ರಕ್ತ ಸಂಬಂಧಿಕರಲ್ಲಿ ಈತನಷ್ಟು ಅಮೂಲ್ಯವಾದ ಸ್ವತ್ತು ಬೇರೆ ಯಾವುದೂ ಇಲ್ಲ. ತಾತನೂ ಮರಣ ಹೊಂದಿದಾಗ ಮುಹಮ್ಮದ್ ಎರಡು ವರ್ಷದ ಮಗು. ಈಗ ಅವರನ್ನು ಸಾಕುವ ಹೊಣೆ, ದೊಡ್ಡಪ್ಪ ಮತ್ತು ಈಗ ಕುಟುಂಬದ ಮುಖ್ಯಸ್ಥರೂ ಆದ ಅಬುತಾಲಿಬ್ ಹೆಗಲ ಮೇಲೆ. ನ್ಯಾಯಪರ, ವಿವೇಚನಾಶೀಲ ವ್ಯಕ್ತಿಯಾಗಿದ್ದ ಇವರ ಆಶ್ರಯದಲ್ಲಿ ಮುಹಮ್ಮದ್ ಅತ್ಯುತ್ತಮ ಅರಬ್ ಸಂಪ್ರದಾಯದಲ್ಲಿ ಬೆಳೆದರು.”
ಇಸ್ಲಾಮೀ ಜಗದೃಶ್ಯ ಮತ್ತು ಅತ್ಯಗತ್ಯವಾದ ಸರ್ವ ಧರ್ಮಗಳ ಏಕತೆ
ಭಗವಾನ್ ದಾಸ್ ತಮ್ಮ ‘ಎಸೆನ್ಶಿಯಲ್ ಯುನಿಟಿ ಆಫ್ ರಿಲಿಜನ್ಸ್’ ಕೃತಿಯಲ್ಲಿ ಹೇಳುತ್ತಾರೆ: “ಇಸ್ಲಾಮ್ ಎನ್ನುವ ಪದದ ಅರ್ಥ ಬಹಳ ಗಹನವಾದುದು ಉದಾತ್ತವಾದುದು. ಅದೇ ಧರ್ಮದ ಮೂಲ ತತ್ವ. ‘ಸಿಲ್ಮ್’ ಎಂದರೆ ಶಾಂತಿ, ಇಸ್ಲಾಮ್ ಎಂದರೆ ದೇವರನ್ನು ಶಾಂತಿಯಿಂದ ಸ್ವೀಕರಿಸುವುದು ಎಂದರ್ಥ; ಮಹಾನ್ ಆತ್ಮಕ್ಕೆ ಪುಟ್ಟ ಆತ್ಮದ ಶಾಂತಿಪೂರ್ವಕ ಆತ್ಮ ಸಮರ್ಪಣೆ, ಪರವಶತೆ, ಶರಣಾಗತಿ. ಅಹಂಕಾರವನ್ನು ಹೊರಹಾಕಿ ವಿಶ್ವಭಾವವನ್ನು ಒಳ ಸ್ವೀಕರಿಸುವುದು.
”ಭಾರತೀಯ ತತ್ವಶಾಸ್ತ್ರದಲ್ಲಿ ಎರಡು ಮುಖ್ಯ ಶಾಖೆಗಳಿವೆ: ಒಂದು, ವೇದಾಂತದ ಪಾರಮ್ಯ ಸಿದ್ಧಾಂತ ಅಥವಾ ಅದ್ವೈತ ಸಿದ್ಧಾಂತ, ಮತ್ತು ಇನ್ನೊಂದು ವೇದಾಂತದ ಆಸ್ತಿಕವಾದ, ದೈವತ್ವದ ಪಾರಮ್ಯ. ಇಸ್ಲಾಮಿನ ಆಸ್ತಿಕವಾದಕ್ಕೂ ವೇದಾಂತದ ಆಸ್ತಿಕವಾದಕ್ಕೂ ಸ್ಥೂಲವಾದ ಹೋಲಿಕೆಗಳಿವೆ. “ನನಗಿಂತ ಬೇರೆಯಿಲ್ಲ, ನಾನು, ಸತ್ಯ” ಎನ್ನುತ್ತದೆ ಭಗವದ್ಗೀತೆ; ಪವಿತ್ರ ಕುರ್ಆನ್ ಹೇಳುತ್ತದೆ: ‘ನಾನು ನಿಮ್ಮ ಆತ್ಮಗಳಲ್ಲಿದ್ದೇನೆ! ನೀವು ಕಾಣುವುದಿಲ್ಲವೇಕೆ? ನಿಮ್ಮ ಒಂದೊಂದು ಉಸಿರಿನಲ್ಲಿ ನಾನಿದ್ದೇವೆ, ಆದರೆ ನಿಜವಾದ ಕಣ್ಣಿಲ್ಲದಿದ್ದಕ್ಕಾಗಿ ನೀವು ಕುರುಡರಾಗಿದ್ದೀರಿ, ನನ್ನನ್ನು ಕಾಣುತ್ತಿಲ್ಲ’, ‘ಲಾ ಇಲಾಹ ಇಲ್ಲಲ್ಲಾಹ್’: ‘ದೇವರ ಬದಲಿಗೆ ಅನ್ಯ ದೇವರಿಲ್ಲ.
’ ಇಸ್ಲಾಮ್ ಜ್ಞಾನದ, ಅರಿವಿನ ಮಹತ್ವದ ಗುಣಗಾನ ಮಾಡುತ್ತದೆ, ಶಿಕ್ಷಣವನ್ನು ಶಿಫಾರಸ್ಸು ಮಾಡುತ್ತದೆ. ಅದು ಹೇಳುತ್ತದೆ, ‘ವಿದ್ವಾಂಸರ (ಲೇಖನಿಯ) ಮಸಿ ಹುತಾತ್ಮರ ರಕ್ತಕ್ಕಿಂತ ಪವಿತ್ರ’. ಪ್ರವಾದಿಯವರು ವಿಜ್ಞಾನದ ಮಹತ್ವವನ್ನು ಮತ್ತು ಕಲಿಕೆಗೆ ಮೀಸಲಾದ ಬದುಕಿನ ಬದ್ಧತೆಯನ್ನು ಎತ್ತಿ ಹಿಡಿಯುತ್ತಾರೆ.
ಹಿಂದು ಮತ್ತು ಇಸ್ಲಾಮಿಕ್ ಮತ ಧರ್ಮಶಾಸ್ತ್ರೀಯ ಚಿಂತನೆಯಲ್ಲಿ ಎದ್ದು ಕಾಣುವ ಹೋಲಿಕೆಗಳಿವೆ. ದೇವರ ಕುರಿತು ಉಪನಿಷತ್ತುಗಳು ಹೇಳುತ್ತವೆ, ದೇವರು “ಕಿವಿಯ ಕೇಳುಗ, ಎಲ್ಲ ಮಾತುಗಳ ವಕ್ತೃ; ಕಣ್ಣಿನ ನೋಡುಗ ಮತ್ತು ಮನಸ್ಸಿನ ಮಾರ್ಗದರ್ಶಿ; ನಿಜಕ್ಕೂ ಆತ್ಮವು ಜೀವದ ಜೀವ”.
ಪವಿತ್ರ ಕುರ್ಆನ್ ಏನನ್ನು ಹೇಳುತ್ತದೆ ನೋಡಿ:“ಆತ ಆಲಿಸುವುದಕ್ಕೆ ನಾನು ಕಿವಿಯಾಗುತ್ತೇನೆ, ಮತ್ತು ಆತ ನೋಡುವುದಕ್ಕೆ ನಾನು ಕಣ್ಣಾಗುತ್ತೇನೆ”, ಇದೇ ಮಾತಿಗೆ ಉಪನಿಷತ್ತು ಹೇಳುತ್ತದೆ, “ನಾನು ಯಾವಾಗಲೂ, ನಾನು”. ಪವಿತ್ರ ಕುರ್ಆನ್ ಹೇಳುತ್ತದೆ, “ನಿಜಕ್ಕೂ ದೇವರಿಗಿಂತ ಭಿನ್ನವಾದ ದೇವರಿಲ್ಲ.” “ನಾನು ಅಲ್ಲದೇ ಅನ್ಯ ದೇವರಿಲ್ಲ.” ಭಗವದ್ಗೀತೆ ಇದೇ ಮಾತು ಪ್ರತಿಧ್ವನಿಸುತ್ತದೆ: “ಚೆನ್ನಾಗಿ ತಿಳಿ, ನನ್ನ ಹೊರತು ಅನ್ಯನಿಲ್ಲ.” ಪವಿತ್ರ ಕುರ್ಆನ್ ಹೇಳುತ್ತದೆ, “ಅವನು ಪ್ರಥಮ, ಅವನು ಅಂತಿಮ ಕೂಡ, ಅವನು ಬಹಿರಂಗ, ಅವನು ಅಂತರಂಗವೂ ಕೂಡ, ಸುವ್ಯಕ್ತ, ಆದರೂ ಅಪ್ರಕಟಿತ, ಪ್ರಭು, ನಿಯಾಮಕ, ಸರ್ವಜ್ಞ.”
ಭಗವಾನ್ ದಾಸ್ ಈ ಏಕತೆಯನ್ನು ಸಾರಾಂಶವಾಗಿಸಿ ಹೀಗೆ ಹೇಳುತ್ತಾರೆ: “ಎಲ್ಲ ಮಹಾನ್ ಧರ್ಮಗಳಲ್ಲಿ ನಾವು ಮುಖ್ಯವಾದ ಮೂರು ಭಾಗಗಳು ಅಥವಾ ಅಂಶಗಳನ್ನು ಪ್ರತ್ಯೇಕಿಸಿ ಕಾಣಬಹುದು. ವೈದಿಕ ಧರ್ಮದಲ್ಲಿ, ಇವುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ: ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಕರ್ಮ ಮಾರ್ಗ. ಇವುಗಳಿಗೆ ಸಾಮಾನ್ಯ ರೀತಿಯಲ್ಲಿ ಸಂವಾದಿಯಾಗಿರುವುದು ಎಂದರೆ, ಇಸ್ಲಾಮಿನ ಹಕೀಕತ್ ಅಥವಾ ಅಕಾಯದ್, ತರೀಕತ್ ಅಥವಾ ಇಬಾದತ್ ಮತ್ತು ಶರೀಯತ್ ಅಥವಾ ಮಾಮಿಲತ್. (ಎ) ಜ್ಞಾನ, ಅರಿವು, ನಾಸ್ಟಿಕ್ವಾದದ ಮಾರ್ಗ, (ಬಿ) ಆರಾಧನೆ, ಭಕ್ತಿ ಚಳುವಳಿ, ಅನುಭಾವ, (ಸಿ) ವಿಧಿಗಳು ಮತ್ತು ಆಚರಣೆಗಳು ಮತ್ತು ಸ್ವಯಂ ನಿರಾಕರಿಸುವ ಧರ್ಮಕಾರ್ಯಗಳು, ಕ್ರಿಯಾವಾದ, ಶಕ್ತಿವಾದ ಮತ್ತು ವ್ಯಾವಹಾರಿಕವಾದ- ಅದೇ ರೀತಿಯಲ್ಲಿ ಕ್ರಿಶ್ಚಿಯನ್ ದೇವತಾಶಾಸ್ತ್ರದಲ್ಲಿ ಇವುಗಳನ್ನು ಸಮಾನವಾಗಿ ಪ್ರತ್ಯೇಕಿಸಿ ತೋರಿಸಲಾಗಿದೆ ಮತ್ತು ಅಷ್ಟೇ ಮಹತ್ವವನ್ನು ನೀಡಲಾಗಿದೆ. ಇವುಗಳ ಲ್ಯಾಟಿನ್ ಹೆಸರುಗಳು ಎಂದರೆ Via contemplative, via uniitiva, via purgativa. ಕ್ರಿಶ್ಚಿಯನ್ ಚರ್ಚ್ನ ಪಿತಾಮಹರ ಬರಹಗಳಲ್ಲಿ ನಾವಿದನ್ನು ಕಾಣುತ್ತೇವೆ.
ಇಸ್ಲಾಮ್ ಮತ್ತು ಬಹುತ್ವ ಸಮಾಜಗಳು
ಜಗತ್ತಿನಲ್ಲಿ ಶಾಂತಿಯನ್ನು ಕಾಪಾಡಿಕೊಂಡು ಹೋಗುವಲ್ಲಿ ಇಸ್ಲಾಮಿನ ಅನುಯಾಯಿಗಳ ಪಾತ್ರದ ಕುರಿತು ಇವತ್ತು ಬಹಳ ವ್ಯಾಪಕವಾದ ಮತ್ತು ಗಂಭೀರವಾದ ವಾಗ್ವಾದ ನಡೆದಿದೆ. ಸಮಸ್ಯೆಯ ಆಳಕ್ಕೆ ಇಳಿದು ನೋಡಿದಾಗ ಹೆಚ್ಚಿನ ಶಾಂತಿ ಭಂಗಕ್ಕೆ ಪಾಶ್ಚಾತ್ಯ ಪ್ರಚೋದನೆಗಳು ಪ್ರೇರಕವಾಗಿರುವುದು ಕಂಡು ಬರುತ್ತದೆ. ಬಹುತ್ವತೆ ಮತ್ತು ಬಹುತ್ವ ಸಮಾಜಗಳ ಕಡೆಗೆ ಮುನ್ನಡೆಯುವ ಪ್ರವೃತ್ತಿಯು ಹೆಚ್ಚಿನ ಸಂಧರ್ಭಗಳಲ್ಲಿ ಮನುಷ್ಯನಿಗೆ ಆಯ್ಕೆರಹಿತ ಆನುವಂಶಿಕ ಲಕ್ಷಣವಾಗಿರುತ್ತದೆ ಮತ್ತು ಇದನ್ನು ಸಂಪೂರ್ಣ ತರ್ಕಬದ್ಧವಾದ ವಿಶ್ಲೇಷಣೆ ಅಥವಾ ತಾರ್ಕಿಕ ವಾದಗಳಿಗೆ ಸುಲಭವಾಗಿ ಒಳಪಡಿಸಲು ಆಗುವುದಿಲ್ಲ. ಆದ್ದರಿಂದ ಬಹುತ್ವ ಸಮಾಜಗಳಲ್ಲಿ ಕಾನೂನಿನ ಉದ್ದೇಶವು ಅಲ್ಪಸಂಖ್ಯಾತರನ್ನು ಕ್ರಮೇಣ ಬಹುಸಂಖ್ಯಾತ ಪರಿಸರದಲ್ಲಿ ಮಿಳಿತಗೊಳಿಸುವುದಾಗಿರುವುದಿಲ್ಲ. ಹಾಗಾದರೆ ಇಲ್ಲಿ ಕಾನೂನಿನ ಕಾರ್ಯವೇನು?
ಲಾರ್ಡ್ ಸ್ಕಾರ್ಮನ್ ಅವರ ಮಾತಿನಲ್ಲಿ ಹೇಳುವುದಾದರೆ: “…ಕಾನೂನಿನ ಉದ್ದೇಶ ಸಮಾಜ ನಿರ್ಮಾಣ ಮಾಡಿರುವ ಆಧಾರಗಳನ್ನು ಅಳಿಸುವುದಾಗಿರಬಾರದು, ಬದಲಿಗೆ ಅಂಥ ಆಧಾರಗಳು ಶಿಥಿಲಗೊಂಡು ಮುರಿದು ಹೋಗಿ ತಾವು ಒಳಗೊಳ್ಳುವ ಬಹುತ್ವ ಸಮಾಜವನ್ನು ನಾಶಪಡಿಸುವುದನ್ನು ತಡೆಗಟ್ಟಲು ಅಗತ್ಯವಾದ ರಾಜಕೀಯ, ಸಾಮಾಜಿಕ ಮತ್ತು ಕಾನೂನಾತ್ಮಕ ಮಾರ್ಗಗಳನ್ನು ರೂಪಿಸುವುದಾಗಿರುತ್ತದೆ.”
ಬಹುತ್ವ ಸಮಾಜದಲ್ಲಿ ಕಾನೂನಿನ ಕಾರ್ಯ ಮತ್ತು ಕಾನೂನು ನೀತಿಗಳ ಆಯ್ಕೆಯು ನಮ್ಮ ನಾಗರಿಕತೆಯ ಎದುರಿಗಿರುವ ಸ್ವಾರಸ್ಯಕರ ಸವಾಲುಗಳಾಗಿವೆ. ಭೂಗೋಳದ ಬಹು ದೊಡ್ಡ ಜನವಾಸ ಪ್ರದೇಶಗಳಲ್ಲಿ ವಾಸಿಸುತ್ತಿರುವುದು ಒಂದಲ್ಲ ಒಂದು ಬಗೆಯ ಬಹುತ್ವ ಸಮಾಜಗಳೇ. ಅವುಗಳ ಅಳತೆ ಮತ್ತು ವೈವಿಧ್ಯದಿಂದಾಗಿಯೇ ಸವಾಲುಗಳು ದಿಗ್ಭ್ರಮೆಗೊಳಿಸುತ್ತವೆ. ಸವಾಲುಗಳು ವ್ಯಾಪಕವಾಗಿವೆ; ಮತ್ತು ನ್ಯಾಯ, ಜನಸತ್ತಾತ್ಮಕ ವ್ಯವಸ್ಥೆ, ಕಾನೂನಿನ ನಿಯಮ, ರಾಜಕೀಯ ಅಧಿಕಾರದ ನೈತಿಕತೆ, ಸರಕಾರದ ವ್ಯವಸ್ಥೆ, ನ್ಯಾಯಾಂಗದ ಪಾತ್ರ ಇತ್ಯಾದಿಗಳ ಮೂಲಭೂತ ಕಲ್ಪನೆಗಳನ್ನೇ- ಅವು ಮೂಲಭೂತವಾಗಿರಬಹುದು ಅಥವಾ ಸರ್ವಸಮ್ಮತವಾಗಿರಬಹುದು- ಅಲುಗಾಡಿಸಿಬಿಡುತ್ತವೆ. ಈ ಸವಾಲುಗಳು ಹೆಚ್ಚು ಉನ್ನತವಾದ ಸಾಮಾಜಿಕ ಮತ್ತು ನಾಗರಿಕ ವ್ಯವಸ್ಥೆಗಳ ಬದಲಾಯಿಸಲಾಗದ ಮೌಲ್ಯಗಳಿಗಾಗಿ ಬೇಡುತ್ತವೆ. ಮಾನವೀಯ ಕಾನೂನು ಮತ್ತು ಮಾನವೀಯ ನ್ಯಾಯಗಳ ಕುರಿತ ಮನುಷ್ಯ ಸಾಮರ್ಥ್ಯವನ್ನು ಅಂತಿಮ ಪರೀಕ್ಷೆಗೆ ಒಳಪಡಿಸುತ್ತವೆ. ಅಂತಿಮ ಪ್ರಶ್ನೆ ಎಂದರೆ ಭೂಮಿಯ ಮೇಲಿನ ನಾಗರಿಕತೆಗಳು ಮಾನವ ವ್ಯಕ್ತಿಯನ್ನು ಎಲ್ಲವುಗಳ ಘಟಕ ಮತ್ತು ಅಳತೆಯನ್ನಾಗಿ ಒಪ್ಪಿಕೊಳ್ಳುವಷ್ಟು ನೈತಿಕ ಪ್ರಬುದ್ಧತೆಯನ್ನು ಹೊಂದಿವೆಯೇ ಎಂಬುದಾಗಿದೆ.
ಲಾರ್ಡ್ ಲೆಸ್ಲಿ ಸ್ಕಾರ್ ಮನ್ ಹೇಳುವ ಹಾಗೆ ಬಹುತ್ವ ಸಮಾಜಗಳು, “ಮತ್ತೆ ಪೂರ್ವಾವಸ್ಥೆಗೆ ಕೊಂಡೊಯ್ಯಲು ಅಸಾಧ್ಯವಾದ ಚಲನೆಗಳ ಫಲವಾಗಿವೆ. ಸಮಾಜವು ನ್ಯಾಯಯುತವಾಗಿರಬೇಕು ಎಂಬುದು ಹಳಸಲು ಮಾತಾಗಿದೆ. ಹಾಗಾದರೆ ಬಹುತ್ವ ಸಮಾಜದ ಸಂದರ್ಭದಲ್ಲಿ ನ್ಯಾಯ ಎಂಬುದರ ಅರ್ಥವೇನು? ನಾವು ನ್ಯಾಯವನ್ನು ಗುಂಪುಗುಂಪುಗಳ ನಡುವಿನ ಸಂಗತಿಯಾಗಿ ಕೇಳುತ್ತಿದ್ದೇವೆಯೇ? ಅಥವಾ ‘ಅಂತಿಮವಾಗಿ ಮುಖ್ಯವಾಗುವುದು ಪ್ರತಿಯೊಬ್ಬ ಮನುಷ್ಯನ ಹಕ್ಕು ಮತ್ತು ಕರ್ತವ್ಯ ಮತ್ತು ನ್ಯಾಯ ಎಂದರೆ, (ಯು.ಎಸ್. ಸುಪ್ರೀಮ್ ಕೋರ್ಟ್ ಕಟ್ಟಡದ ಪೋರ್ಟಿಕೋದ ಮೇಲೆ ಕೆತ್ತಲಾಗಿರುವ ಹಾಗೆ) ‘ಕಾನೂನಿನ ಅಡಿಯಲ್ಲಿ ಸಮಾನವಾದ ನ್ಯಾಯ’ ಎಂಬುದು ನಮ್ಮಲ್ಲಿ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ ಎಂಬ ಪಾಶ್ಚಾತ್ಯ ತತ್ವಕ್ಕೆ ನಾವು ನಿಷ್ಠರಾಗಿರುತ್ತೇವೆಯೋ ಎಂಬುದಾಗಿದೆ. ಮಹಾತ್ಮ ಗಾಂಧಿಯವರು ಸ್ತುತಿಸುತ್ತಿದ್ದ ಹಾಗೆ “ಹಿಂದು ಮುಸ್ಲಿಮ್ ಏಕತೆ ನಮ್ಮ ದೇಶದ ಶಾಂತಿ ಮತ್ತು ಸಮೃದ್ಧಿಯ ಬುನಾದಿಯಾಗಿದೆ. ಮುಸಲ್ಮಾನರು ಹಿಂದುಗಳಷ್ಟೇ ಜವಾಬ್ದಾರಿಯುಳ್ಳವರಾಗಿದ್ದಾರೆ. ಅದರೆ ಬಹುಸಂಖ್ಯೆಯಲ್ಲಿರುವವರು ಈ ಜವಾಬ್ದಾರಿಯ ಹೆಚ್ಚಿನ ಪಾಲನ್ನು ಹೊಂದಿದ್ದಾರೆ.”
ಹೊಸ ದಿಗಂತ : ಹಿಂದು, ಮುಸ್ಲಿಮ್ ಸೋದರತ್ವ
ಸರ್ ಸಯ್ಯದ್ ಅಹ್ಮದ್ ಖಾನ್ ಹೇಳಿದರು:“ಹಿಂದುಗಳು ಮತ್ತು ಮುಸಲ್ಮಾನರು ಈ ದೇಶದ ಹವಾಮಾನ ಮತ್ತು ಉತ್ಪನ್ನಗಳನ್ನು ಹಂಚಿಕೊಳ್ಳಬೇಕು ಮತ್ತು ಇಲ್ಲಿಯೇ ಬದುಕಬೇಕು, ಇಲ್ಲಿಯೇ ಸಾಯಬೇಕು ಎಂದು ದೇವರು ಅಪೇಕ್ಷಿಸಿ ಶತಮಾನಗಳೇ ಕಳೆದಿವೆ. ಎಂದರೆ ದೇಶದಲ್ಲಿ ಈ ಎರಡು ಸಮುದಾಯಗಳು ಸ್ನೇಹಿತರು, ಅಥವಾ ಇನ್ನೂ ಮೀರಿ ಇಬ್ಬರು ಸಹೋದರರ ತರಹ ಬದುಕಬೇಕು ಎಂಬುದು ದೇವರ ಇಚ್ಛೆಯಾಗಿದೆ.”
ಮೌಲಾನಾ ಅಬುಲ್ ಕಲಾಮ್ ಅಜಾದರ ಭಾವಪೂರ್ಣ ಮಾತುಗಳನ್ನು ಕೇಳಿ: “ಒಬ್ಬ ದೇವದೂತ ಸ್ವರ್ಗದಿಂದ ಇಳಿದು, ಕುತುಬ್ ಮೀನಾರ್ ಮೇಲೆ ನಿಂತು, ‘ನೀನು ಹಿಂದು-ಮುಸ್ಲಿಮ್ ಏಕತೆಯ ಹಠವನ್ನು ಬಿಟ್ಟುಬಿಡು, ಭಾರತಕ್ಕೆ 24 ಗಂಟೆಯೊಳಗೆ ಸ್ವ್ವರಾಜ್ಯ ಸಿಗುತ್ತದೆ’ ಎಂದು ಘೋಷಿಸಿದ್ದೇ ಆದರೆ, ನಾನು ಆತನಿಗೆ ಕಟುವಾಗಿ ಉತ್ತರಿಸುತ್ತೇನೆ, ‘ಇಲ್ಲ ಗೆಳೆಯಾ, ನಾನು ಬೇಕಾದರೆ ಸ್ವರಾಜ್ಯವನ್ನು ಬಿಟ್ಟುಕೊಡುತ್ತೇನೆ, ಹಿಂದು-ಮುಸ್ಲಿಮ್ ಏಕತೆಯನ್ನಲ್ಲ; ಏಕೆಂದರೆ, ಸ್ವರಾಜ್ಯ ಬರುವುದು ತಡವಾದರೆ ಭಾರತದ ನಷ್ಟವಾಗುತ್ತದೆ, ಆದರೆ ಹಿಂದು-ಮುಸ್ಲಿಮ್ ಏಕತೆ ನಾಶವಾದರೆ ಅದು ಇಡೀ ಮಾನವ ಕುಲದ ನಷ್ಟವಾಗುತ್ತದೆ.”
ಉಪಸಂಹಾರ : ಮುಂದಿನ ಹಾದಿ
ಭಾರತದಲ್ಲಿನ ಹಿಂದು ಮತ್ತು ಮುಸ್ಲಿಮ್ ಎರಡೂ ಸಮುದಾಯದ ಮುಖಂಡರು ತಮ್ಮ ತಮ್ಮ ‘ಧರ್ಮವು ಶಾಂತಿಯನ್ನು ಪ್ರತಿಪಾದಿಸುತ್ತದೆ’ ಎನ್ನುತ್ತಾರೆ. ಭಾರತವು, ಇಸ್ಲಾಮ್ ನಿಜವಾಗಿಯೂ ಶಾಂತಿಯ ಧರ್ಮ ಮತ್ತು ಹಿಂದುಗಳು, ಮುಸಲ್ಮಾನರು, ಕ್ರಿಶ್ಚಿಯನ್ನರು ಮತ್ತು ಇತರ ಎಲ್ಲ ಧರ್ಮಗಳ ಅನುಯಾಯಿಗಳು ಉತ್ಕೃಷ್ಟವಾದ ಸರ್ವೇಸಾಮಾನ್ಯ ಸಂಯುಕ್ತ ಸಂಸ್ಕೃತಿಯ ವಾರಸುದಾರರಾಗಬಲ್ಲರು ಎಂಬುದನ್ನು ಇಡೀ ಜಗತ್ತಿಗೆ ಸಮರ್ಥವಾಗಿ ತೋರಿಸಬಲ್ಲುದು. ಒಬ್ಬ ಮುಸ್ಲಿಮ್ ತನ್ನ ಧರ್ಮಕ್ಕೆ ನಿಷ್ಠರಾಗಿದ್ದರೆ ಮತ್ತು ಒಬ್ಬ ಹಿಂದು ತನ್ನ ಧರ್ಮಕ್ಕೆ ನಿಷ್ಠರಾಗಿದ್ದರೆ, ಸಮಸ್ಯೆಯೇ ಇರುವುದಿಲ್ಲ.
ಹಿಂದುಗಳು ಮತ್ತು ಮುಸಲ್ಮಾನರ ನಡುವಿನ ಕೋಮು ಸೌಹಾರ್ದದ ಮಟ್ಟ ಮತ್ತು ಸ್ವಭಾವದ ಕುರಿತು ಬಯ್ದು ಬಹಳಷ್ಟು ಹೇಳಿಯಾಗಿದೆ. ವಾಸ್ತವವೆಂದರೆ, ಎರಡೂ ಸಮುದಾಯಗಳು, ಸರ್ವೇಸಾಮಾನ್ಯವಾಗಿ, ಸೌಹಾರ್ದಯುತವಾಗಿ, ಮತ್ತು ಸಾಮಾಜಿಕ ಮತ್ತು ಆರ್ಥಿಕವಾಗಿ ಪರಸ್ಪರಾವಲಂಬಿಯಾಗಿಯೇ ಬದುಕುತ್ತಿವೆ. ಹೆಸರಾಂತ ವಿದ್ವಾಂಸರಾದ ಆಶಿಷ್ ನಂದಿ ಹೇಳುವ ಪ್ರಕಾರ, ‘ಹಿಂಸಾಚಾರಕ್ಕೆ ತಿರುಗಿದ ಕೋಮುಸಂಘರ್ಷಗಳಲ್ಲಿ 96.5% ರಷ್ಟು ಸಾವುಗಳು ಸಂಭವಿಸಿರುವುದು ನಗರ ಪ್ರದೇಶಗಳಲ್ಲಿಯೇ, ಈ ಪ್ರದೇಶಗಳು ಭೌಗೋಳಿಕವಾಗಿ ಈ ದೇಶದ 30%ರಷ್ಟನ್ನು ಮಾತ್ರ ಪ್ರತಿನಿಧಿಸುತ್ತವೆ. ಉಳಿದ 70%ರಷ್ಟು ಗ್ರಾಮೀಣ ಭಾಗದಲ್ಲಿ ಇಂಥ ಸಾವುಗಳ ಪ್ರಮಾಣವು ಕೇವಲ 3.5%ರಷ್ಟಾಗುತ್ತದೆ.
ಎರಡೂ ಸಮುದಾಯಗಳಲ್ಲಿ ದ್ವೇಷ ಮತ್ತು ಹಿಂಸಾಚಾರದ ಪ್ರವೃತ್ತಿಯನ್ನು ಹೊಂದಿರುವ ಜನರ ಪ್ರಮಾಣ ತುಂಬಾ ಗೌಣವಾಗಿದೆ. ಈ ಪರಸ್ಪರ ವಿಶ್ವಾಸದ ಉತ್ಕೃಷ್ಟ ಸಂಪತ್ತಿನ ಸಂವೃದ್ಧಿಗಾಗಿ ಎರಡೂ ಸಮುದಾಯಗಳು ಪರಿಶ್ರಮ ಪಡಬೇಕು, ಮತ್ತು ‘ಇನ್ಸಾನಿ ಬಿರಾದರಿ’, ‘ಮಾನವೀಯ ಭ್ರಾತೃತ್ವ’ವನ್ನು ಸದೃಢಗೊಳಿಸಬೇಕು. ನಾವು ಎಲ್ಲವನ್ನೂ ಕಳೆದುಕೊಂಡಿಲ್ಲ – ಇನ್ನೂ. ಮುಸಲ್ಮಾನರು ತಮ್ಮ ಧರ್ಮಕ್ಕೆ ನಿಜವಾಗಿಯೂ ನಿಷ್ಠರಾದರೆ, ಹಿಂದುಗಳು ತಮ್ಮ ಧರ್ಮಕ್ಕೆ ನಿಷ್ಠರಾದರೆ ಸುಂದರವಾದ ಭಾರತಕ್ಕೆ ಇನ್ನೂ ಸುವರ್ಣ ಭವಿಷ್ಯದ ಭರವಸೆಯಿದೆ. ಪ್ರವಾದಿ ಮುಹಮ್ಮದರ “ಉಮ್ಮತೆ ವಾಹಿದಾ” ಅದೇ ಆಗಿತ್ತು, ಮತ್ತು ನಮ್ಮ ಜಾತ್ಯತೀತ ಭಾರತದ ಕನಸೂ ಅದೇ ಆಗಿದೆ.
ಆಡಂಬರ, ಐಷಾರಾಮಿ, ವೈಭವ ಮತ್ತು ಪ್ರದರ್ಶನದಲ್ಲಿ ಜೀವನವನ್ನು ನಡೆಸುವ ರಾಜಕೀಯ ಮತ್ತು ಧಾರ್ಮಿಕ ಮುಖಂಡರಿಗೆ ಪ್ರವಾದಿ ಮುಹಮ್ಮದರ ಬದುಕಿನಲ್ಲಿ ಒಂದು ಮಹತ್ವದ ಪಾಠವಿದೆ. ಒಬ್ಬ ಆಫ್ರಿಕನ್ ಮಹಾರಾಜ ಹೈಕೋರ್ಟ್ ಕಟ್ಟಡದ ಎದುರಿಗೆ ತನ್ನದೇ ಪ್ರತಿಮೆಯನ್ನು ಸ್ಥಾಪಿಸಿದ ಮತ್ತು ಬೈಬಲಿನ ಉತ್ಕೃಷ್ಟ ಉಪದೇಶದವೊಂದನ್ನು ಅಪಭ್ರಂಶಗೊಳಿಸಿ ತನ್ನ ಪ್ರತಿಮೆಯ ಕೆಳಗೆ ಹೀಗೆ ಕೆತ್ತಿಸಿದ: “ನೀವು ರಾಜಕಾರಣದ ಸಾಮ್ರಾಜ್ಯವನ್ನು ಅರಸಿರಿ. ಉಳಿದೆಲ್ಲವೂ ನಿಮ್ಮಲ್ಲಿ ಸೇರಿಕೊಂಡಿರುತ್ತದೆ.” ಇದರಿಂದ ಜಗತ್ತಿಗೆ ಆಘಾತವಾಯಿತು! ಆದರೆ ಅದು ಆ ದಿನದ ರಾಜಕೀಯ ಸಂಸ್ಕೃತಿ ಎಂಬುದರ ಅರಿವಾಯಿತು.
ಆದರೆ ಪ್ರವಾದಿಯವರ ಜೀವನವು ಭಕ್ತಿ ಮತ್ತು ವಿನಮ್ರತೆಯ ಉಜ್ವಲವಾದ ಉದಾಹರಣೆಯಾಗಿದೆ. ಪ್ರೊ.ರಾಮಕೃಷ್ಣ ರಾವ್, ತಾವು ಬರೆದ ಪ್ರವಾದಿಯವರ ಜೀವನ ಕಥನದಲ್ಲಿ ಹೇಳುತ್ತಾರೆ: “ಮಕ್ಕಾದ ಪತನದ ನಂತರ ಹತ್ತು ಲಕ್ಷ ಚದರ ಮೈಲುಗಳಷ್ಟು ವಿಸ್ತಾರವಾದ ನಾಡು ಅವರ ಪಾದದಡಿಯಲ್ಲಿತ್ತು. ಅರೇಬಿಯಾದ ಪ್ರಭುವಾಗಿದ್ದ ಅವರು ತಮ್ಮ ಒರಟಾದ ಉಣ್ಣೆಯ ಉಡುಪುಗಳನ್ನು ತಾವೇ ಹೊಲಿದುಕೊಳ್ಳುತ್ತಿದ್ದರು, ಸವೆದು ಹರಿದು ಹೋದ ಚಪ್ಪಲಿಗಳನ್ನು ದುರಸ್ತಿ ಮಾಡಿಕೊಳ್ಳುತ್ತಿದ್ದರು, ಮೇಕೆಗಳ ಹಾಲನ್ನು ಕರೆಯುತ್ತಿದ್ದರು, ಅಡುಗೆ ಮನೆಯನ್ನು ಗುಡಿಸುತ್ತಿದ್ದರು, ಒಲೆಯನ್ನು ಹೊತ್ತಿಸುತ್ತಿದ್ದರು, ಇತರ ಚಿಕ್ಕಪುಟ್ಟ ಮನೆಗೆಲಸಗಳನ್ನೂ ಉಪೇಕ್ಷಿಸದೇ ಮಾಡುತ್ತಿದ್ದರು. ಅವರು ವಾಸವಿದ್ದ ಮದೀನಾ ನಗರ ಅವರ ಬದುಕಿನ ಕೊನೆಯ ದಿನಗಳಲ್ಲಿ ಸಮೃದ್ಧಿಯನ್ನು ಪಡೆಯಿತು. ಎಲ್ಲಿ ನೋಡಿದರೂ ಹೇರಳವಾಗಿ ಚಿನ್ನ, ಬೆಳ್ಳಿ ಇತ್ತು. ಆಷ್ಟು ಸಮೃದ್ಧಿಯ ಹೊರತಾಗಿಯೂ ಅರೇಬಿಯಾದ ಈ ಆಳರಸರ ಮನೆಯ ಒಲೆಯಲ್ಲಿ ಬೆಂಕಿ ಉರಿಯದೇ ಹಲವು ವಾರಗಳು ಕಳೆಯುತ್ತಿದ್ದವು; ಅವರ ಆಹಾರ ಕೇವಲ ಖರ್ಜೂರ ಮತ್ತು ನೀರು ಆಗಿರುತ್ತಿತ್ತು. ಅವರ ಕುಟುಂಬ ನಿರಂತರವಾಗಿ ಹಲವು ರಾತ್ರಿಗಳು ಹಸಿದು ಮಲಗುತ್ತಿತ್ತು. ಪ್ರವಾದಿಯವರು ಮೃದುವಾದ ಹಾಸಿಗೆಯ ಮೇಲೆ ಮಲಗುತ್ತಿರಲಿಲ್ಲ; ಸುದೀರ್ಘ ದಿನದ ದುಡಿಮೆಯ ಕೊನೆಯಲ್ಲಿ ಈಚಲು ಚಾಪೆಯ ಮೇಲೆ ಮಲಗುತ್ತಿದ್ದರು. ಹಲವು ಸಲ ರಾತ್ರಿಯ ಹೆಚ್ಚಿನ ಸಮಯವನ್ನು ಪ್ರಾರ್ಥನೆಯಲ್ಲಿ ಕಳೆಯುತ್ತಿದ್ದರು, ಅನೇಕ ಬಾರಿ ತನ್ನ ಕರ್ತವ್ಯವನ್ನು ನಿರ್ವಹಿಸುವ ಶಕ್ತಿಯನ್ನು ದಯಪಾಲಿಸು ದೇವರೇ ಎಂದು ಕಣ್ಣೀರಿಡುತ್ತಿದ್ದರು. ವರದಿಗಳ ಪ್ರಕಾರ, ಅಳುವಾಗ ಅವರ ಗಂಟಲು ಕಟ್ಟುತ್ತಿತ್ತು ಮತ್ತು ಬೆಂಕಿಯ ಮೇಲಿಟ್ಟ ಪಾತ್ರೆಯಲ್ಲಿನ ಅಡುಗೆಯು ಕುದಿಯಲು ಆರಂಭಿಸಿತೋ ಎನ್ನುವಂತೆ ಸದ್ದು ಬರುತ್ತಿತ್ತು. ಅವರು ಸ್ವರ್ಗಸ್ಥರಾದ ದಿನ ಅವರ ಬಳಿಯಿದ್ದ ಸ್ವತ್ತು ಎಂದರೆ ಕೇವಲ ಕೆಲವು ನಾಣ್ಯಗಳು, ಅದರಲ್ಲಿ ಒಂದು ಭಾಗವು ಸಾಲಗಳ ತೀರಿಕೆಯಲ್ಲಿ ಹೋಯಿತು ಮತ್ತು ಉಳಿದವು ಸಹಾಯ ಕೇಳಿ ಮನೆಗೆ ಬಂದ ಒಬ್ಬ ಬಡವನಿಗೆ ಕೈ ಸೇರಿದವು. ಅವರು ಕೊನೆಯುಸಿರು ಎಳೆದಾಗ ತೊಟ್ಟಿದ್ದ ಬಟ್ಟೆಗಳಲ್ಲಿ ಹರಿದ ಹಲವು ತೂತುಗಳಿದ್ದವು. ಜಗತ್ತಿಗೆ ಬೆಳಕನ್ನು ಪ್ರಸರಿಸಿದ ಮನೆಯು ಕತ್ತಲೆಯಲ್ಲಿ ಮುಳುಗಿತ್ತು, ದೀಪದಲ್ಲಿ ಎಣ್ಣೆ ಇರಲಿಲ್ಲ.” ಮಾನವ ಜನಾಂಗಕ್ಕೆ ಇದಕ್ಕಿಂತ ಮನೋನ್ನತವಾದ ಸ್ಫೂರ್ತಿಯ ಬೆಳಕು ಇನ್ನೊಂದು ಇರಲು ಸಾಧ್ಯವೇ?
IslamKannada News Portal
