Home / ಲೇಖನಗಳು / ಕುರ್‍ಆನ್‍ನಲ್ಲಿ ಮಳೆ

ಕುರ್‍ಆನ್‍ನಲ್ಲಿ ಮಳೆ

 ಎಂ. ಮುಹಮ್ಮದ್ ಅಮೀನ್

ಮಳೆಯನ್ನು ಅನುಗ್ರಹವೆಂದು ಕುರ್‍ಆನ್ ವರ್ಣಿಸಿದೆ. ಯಾಕೆಂದರೆ ಮಳೆಯಿಂದಲೇ ಭೂಮಿಯಲ್ಲಿ ಜೀವಕಳೆ ಮಿಡಿಯುತ್ತದೆ. ಭೂಮಿಯಲ್ಲಿ ನೀರಿನ ಅಂಶವಿಲ್ಲದ ಯಾವೊಂದು ವಸ್ತುವೂ ಇಲ್ಲ. “ನಾವು ನೀರಿನಿಂದ ಎಲ್ಲ ಜೀವಿಗಳನ್ನು ಸೃಷ್ಟಿಸಿರುವೆವು” ಎಂದು ಕುರ್‍ಆನ್ ಸ್ಪಷ್ಟಪಡಿಸಿದೆ.

ನೀರಿನ ಉದ್ಭವ
ಭೂಮಿಯಲ್ಲಿ ನೀರಿನ ಉದ್ಭವದ ಕುರಿತು ಪ್ರಾಚೀನ ಕಾಲದಿಂದಲೇ ಜನರಲ್ಲಿ ವಿವಿಧ ಅಭಿಪ್ರಾಯಗಳಿವೆ. ಜಿ. ಗಸ್ಟನಿ (G. Gustany) ಮತ್ತು ಬಿ. ಬ್ಲವೋಕ್ಸ್ (B. Blavoux) ಬರೆದ ಯುನಿವರ್ಸಲಿಸ್ ಎನ್ಸೈಕ್ಲೋಪಿಡಿಯಾ ಗ್ರಂಥದ ಹೈಡ್ರೋಜಿಯೋಲಜಿ ಎಂಬ ಶೀರ್ಷಿಕೆಯಲ್ಲಿ ನೀರಿನ ಕುರಿತು ಪೌರಾಣಿಕ ದೃಷ್ಟಿಕೋನವನ್ನು ವಿವರಿಸಿದ್ದಾರೆ.

ಕ್ರಿ.ಪೂ. 7ನೇ ಶತಮಾನದಲ್ಲಿ ಟೈಲೆಟ್ಸ್ ಮಿಲೆಟಸ್ ಸಮರ್ಪಿಸಿದ ಸಿದ್ಧಾಂತದಂತೆ ಗಾಳಿಯಿಂದ ಭೂಖಂಡಗಳ ಒಳಭಾಗದಲ್ಲಿ ಸಿಂಪರಣೆಯಾಗುವ ಸಮುದ್ರ ಜಲವು ಭೂಮಿಯ ಮೇಲ್ಭಾಗದಿಂದ ಮಣ್ಣಿನ ತಳಕ್ಕೆ ಸೋಸಿ ಇಳಿಯುವುದೇ ಜಲ ಮೂಲಕ್ಕೆ ಹೇತುವಾಗಿದೆ. ಪ್ಲೇಟೋನ ದೃಷ್ಟಿಕೋನ ಅದೇ ಆಗಿತ್ತು. ಟಾರ್ಟರಸ್ ಎಂಬ ಸುರಂಗದ ಮೂಲಕ ಸಮುದ್ರಕ್ಕೆ ನೀರು ಮರಳುವುದೆಂದು ಆತನ ಅಭಿಪ್ರಾಯವಾಗಿತ್ತು. ಡೆಕಾರ್ಟೆಯಂಥ ಅನೇಕ ವಿಜ್ಞಾನಿಗಳು ಈ ಸಿದ್ಧಾಂತವನ್ನು ಅಂಗೀಕರಿಸಿದ್ದರು. ಅರಿಸ್ಟಾಟಲನ ಸಿದ್ಧಾಂತದಂತೆ, ಮಣ್ಣಿನಿಂದ ಆವಿಯಾದ ನೀರು, ಇಂಗಿ ಬೆಟ್ಟ ಕಣಿವೆಗಳಲ್ಲಿ ಶೇಖರವಾಗಿ ಅನಂತರ ಭೂಮಿಯೊಳಗೆ ತೊರೆಗಳು ನಿರ್ಮಾಣವಾಗುತ್ತವೆ. ಈ ಅಭಿಪ್ರಾಯವನ್ನು ಬೆಂಬಲಿಸಿದವರಲ್ಲಿ ಸಿನಕ (Sinaca) ಮತ್ತು ಓ. ಒಲ್ಗರ್ (O. Volgar) ಪ್ರಮುಖರಾಗಿದ್ದಾರೆ.
ಆದರೆ ಬರ್ನಾಡ್ ಪಾರಿಸಿ (Barnad Parrissy 1580) ಪ್ರಥಮವಾಗಿ ಸರಿಯಾದ ಕಲ್ಪನೆಯನ್ನು ಮಾಡಿದನು. ಮಳೆಯಿಂದ ಮಣ್ಣಿನಲ್ಲಿ ಇಂಗುವ ಮಳೆ ನೀರಿನಿಂದ ಭೂಗರ್ಭ ಜಲ ನಿರ್ಮಾಣವಾಗುವುದೆಂದು ಆತನು ವಾದಿಸಿದನು. 17ನೇ ಶತಮಾನದಲ್ಲಿ ಬಾಳಿದ ಈ. ಮರ್ಯೋಟ್ ((E. Mriottersalli)  ಮತ್ತು ಪಿ. ಪೆರೋಲ್ಟ್ (P. Perolt) ಈ ಸಿದ್ಧಾಂತವನ್ನು ಅಂಗೀಕರಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಆಧುನಿಕ ಲೋಕವೂ ಈ ಸಿದ್ಧಾಂತವನ್ನು ಅಂಗೀಕರಿಸಿದೆ. 14 ಶತಮಾನಗಳ ಹಿಂದೆ ಅವತೀರ್ಣವಾದ ಕುರ್‍ಆನ್‍ನ ವಿವರಣೆಗಳಿಗೆ ಈ ಸಿದ್ಧಾಂತವು ಹೋಲಿಕೆಯಾಗುತ್ತದೆ. ಕುರ್‍ಆನ್ ಘೋಷಿಸಿದೆ, “ನೀನು ನೋಡಿಲ್ಲವೇ ಆಕಾಶದಿಂದ ಅಲ್ಲಾಹನು ನೀರು ಸುರಿಸಿದನು. ಅನಂತರ ಅದನ್ನು ಚಿಲುಮೆ ಮತ್ತು ನದಿಗಳ ರೂಪದಲ್ಲಿ ಭೂಮಿಯೊಳಗೆ ಹರಿಸಿದನು. ತರುವಾಯ ಆ ಮೂಲಕ ವಿಭಿನ್ನ ವರ್ಗಗಳಲ್ಲಿರುವ ಬೆಳೆಯನ್ನು ಆತನು ಉತ್ಪಾದಿಸಿದನು…” (39:21) ಕುರ್‍ಆನ್ ಪುನಃ ಹೇಳುತ್ತದೆ, “ನಾವು ನಿರ್ದಿಷ್ಟ ಪ್ರಮಾಣದಲ್ಲಿ ಆಕಾಶದಿಂದ ನೀರನ್ನು ಸುರಿಸಿ ಅನಂತರ ನಾವು ಅದನ್ನು ಭೂಮಿಯಲ್ಲಿ ಇಂಗುವಂತೆ ಮಾಡುತ್ತೇವೆ. ನಿಶ್ಚಯವಾಗಿಯೂ ನಾವು ಅದನ್ನು ಇಂಗಿಸಿಬಿಡಲು ಶಕ್ತರಾಗಿದ್ದೇವೆ.” (23:18)

ಮಳೆ ಮತ್ತು ಕುರ್‍ಆನ್
ಸೂರ್ಯತಾಪದಿಂದ ಭೂಮಿಯ ಜಲಾಶಯಗಳ ನೀರು ಆವಿಯಾಗಿ ಅಂತರಿಕ್ಷಕ್ಕೇರಿ, ಘನೀ ಭವಿಸಿ ಪುನಃ ನೀರಾಗಿ ಭೂಮಿಗೆ ಸುರಿಯುವ ಪ್ರಕ್ರಿಯೆಯೆ ಮಳೆ. ಇದನ್ನು ಕೇವಲ ಒಂದೇ ವಚನದಲ್ಲಿ ವಿವರಿಸಿರುವ ಕುರ್‍ಆನ್‍ನ “ಪುನರಾವರ್ತಿಸಿ ಸೂಕ್ತಗಳು ಎಷ್ಟೊಂದು ಶ್ರೇಷ್ಠ! ಮಳೆ ಸುರಿಸುವ ಆಕಾಶದಾಣೆ.” (86:11)
ಇಲ್ಲಿ ಕುರ್‍ಆನ್ ಪ್ರಯೋಗಿಸಿರುವ ಅರಬಿ (ದಾತುರ್ರಜ್‍ಅï) ಪದವನ್ನು ಗಮನಿಸಿರಿ. ಈ ಪದವು ‘ಮರಳಿಸು’ ಎಂಬ ಅರ್ಥವನ್ನು ಸೂಚಿಸುತ್ತದೆ. ಕುರ್‍ಆನ್‍ನ ಅನುವಾದಕರು, ‘ಮರಳಿಸುವ ಆಕಾಶ’ವೆಂದು ವ್ಯಾಖ್ಯಾನಿಸಿದ್ದಾರೆ. ಯಾಕೆಂದರೆ, ಸೂರ್ಯನ ತಾಪಕ್ಕೆ ಭೂಮಿಯ ಜಲಾಶಯಗಳಿಂದ ನೀರು ಆವಿಯಾಗಿ ಅಂತರಿಕ್ಷದಲ್ಲಿ ತೇಲುತ್ತಾ ಸಾಂದ್ರೀಕರಿಸಿ ಅನಂತರ ಅನುಕೂಲ ಪರಿಸ್ಥಿತಿಯಲ್ಲಿ ಅಲ್ಲಾಹನ ಒಪ್ಪಿಗೆಯಿಂದ ಭೂಮಿಗೆ ಸುರಿಯುತ್ತದೆ.
‘ರಜ್‍ಅï’ ಪದಕ್ಕೆ ಆರಂಭದೆಡೆಗೆ ಮರಳುವುದು ಎಂಬರ್ಥವಿದೆ. ಮಳೆಯ ಸ್ಥಿತಿಯೂ ಅಷ್ಟೆ. ಇಲ್ಲಿ ‘ರಜ್‍ಅï’ ಎಂಬ ಪದದ ಬದಲಿಗೆ ‘ಮತ್‍ರ್’ (ಮಳೆ) ಎಂಬ ಪದ ಪ್ರಯೋಗವನ್ನು ಗಮನಿಸಿದರೆ ಕುರ್‍ಆನ್‍ನ ದೈವಿಕತೆ ಮತ್ತಷ್ಟು ಸ್ಪಷ್ಟವಾಗುತ್ತದೆ. ಆಕಾಶದಿಂದ ಭೂಮಿಗಿಳಿಯುವ ಎಲ್ಲ ವಸ್ತುಗಳು ಮರಳಿ ಆಕಾಶಕ್ಕೇರಿ ಪುನಃ ಭೂಮಿಗೆ ಮರಳುವ ಪ್ರಕ್ರಿಯೆಯು ‘ಪುನರಾವರ್ತಿಸುವ ಆಕಾಶದಾಣೆ (ವಸ್ಸಮಾಇ ದಾತಿರ್ರಜ್‍ಅï) ಎಂಬ ವಚನದ ತಾತ್ಪರ್ಯ.

ಮರಳಿಸು ಅಥವಾ ಸುರಿಸುವಿಕೆ (ರಜ್‍ಅï) ಆಕಾಶದ ಮೂಲ ವೈಶಿಷ್ಟ್ಯವಾಗಿದೆ. ಇಂಥ ಭಾಷ್ಪೀಕರಣ ಪ್ರಕ್ರಿಯೆಯಿಲ್ಲದಿರುತ್ತಿದ್ದರೆ, ಭೂಮಿಯಲ್ಲಿ ವಾಸ ವ್ಯವಸ್ಥೆಯೇ ಉಳಿಯುತ್ತಿರಲಿಲ್ಲ. ನೀರು ಮಾತ್ರವಲ್ಲದೆ ಕಾರ್ಬನ್ ಡೈ ಆಕ್ಸೈಡ್, ನೈಟ್ರೊಜನ್, ಅಮೋನಿಯಮ್, ಮಿಥೈನ್ ಇತ್ಯಾದಿ ಮ್ಯಾಗ್ನೆಟಿಕ್ ಮತ್ತು ರೇಡಿಯೋ ವಿಕಿರಣಗಳು ಭೂಮಿಯಿಂದ ಆವಿಯಾಗಿ ಆಕಾಶಕ್ಕೇರುತ್ತವೆ. ಆ ಸಂದರ್ಭದಲ್ಲಿ ಅವು ಮಳೆಯೊಂದಿಗೆ ಭೂಮಿಯಲ್ಲಿ ಸೇರಿಕೊಳ್ಳುತ್ತವೆ. ಇಲ್ಲಿ ಪ್ರಸ್ತಾವಿಸ ಲಾಗಿರುವ ಆಕಾಶವು, ಮೋಡ ಅಥವಾ ಮೋಡದ ಪರಿಸರದಲ್ಲಿರುವ ಪದರವಾಗಿದೆ.

ಪದರ ರೂಪದಲ್ಲಿ ಅಂತರಿಕ್ಷದ 5 ಪ್ರಮುಖ ಸ್ತರಗಳಿವೆ. 1. ಟ್ರೊಫೋಸ್ಪಿಯರ್, 2. ಸ್ಟ್ರಾಟೋಸ್ಪಿಯರ್, 3. ಮಿಸೋಸ್ಪಿಯರ್, 4. ಥರ್ಮೋಸ್ಪಿಯರ್ ಮತ್ತು 5. ಎಕ್ಸೋಸ್ಪಿಯರ್. ಈ ಪೈಕಿ ಟ್ರೊಫೋಸ್ಪಿಯರ್, ಧ್ರುವಗಳಿಂದ 7 ಕಿ.ಮೀ. ಮತ್ತು ಭೂ ಮಧ್ಯೆ ರೇಖೆಯಿಂದ 16 ಕಿ.ಮೀ. ತನಕ ವ್ಯತ್ಯಾಸವಿರುವ ಭೂಮಿಯ ಮೇಲ್ತಳಕ್ಕೆ ಹತ್ತಿರವಿರುವ ಅಂತರಿಕ್ಷ ಪದರವಾಗಿದೆ. ಗಾಳಿ, ಮಳೆ, ಹಿಮವರ್ಷ, ಗುಡುಗು, ಮಿಂಚು ಇತ್ಯಾದಿ ಎಲ್ಲ ಹವಾಮಾನ ಪ್ರಕ್ರಿಯೆಗಳು ಈ ಟ್ರೊಫೋಸ್ಪಿಯರ್‍ ನಲ್ಲಿ ನಡೆಯುತ್ತದೆ.
ಆ ಕುರಿತು ಕುರ್‍ಆನ್ ಸಾರಿ ಹೇಳಿದೆ, “ಗಾಳಿಗಳ ಚಲನೆಯಲ್ಲಿಯೂ ಆಕಾಶ-ಭೂಮಿಗಳ ಮಧ್ಯೆ ನಿಯಂತ್ರಿತವಾಗಿ ಸಾಗುವ ಮೋಡಗಳಲ್ಲಿಯೂ ಆಲೋಚಿಸುವ ಜನರಿಗೆ ನಿದರ್ಶನಗಳಿವೆ.” (2:164)

ಆಕಾಶದ ಮರಳಿಸುವಿಕೆ
“ಮರಳಿಸುವ (ಸುರಿಸುವ) ಆಕಾಶದಾಣೆ!” (86:11) ಎಂಬ ವಚನದ ಆಧಾರದಲ್ಲಿ ಆಕಾಶದಿಂದ ಭೂಮಿಗೆ ಅದರ ಜೀವನ ಸುಖಮಯ ಗೊಳಿಸಲಿಕ್ಕಾಗಿ ವಿವಿಧ ಅಂಶಗಳು ಮರಳಿ ಬರುತ್ತದೆ.

1. ಶಬ್ದ ಶ್ರವಣಕ್ಕೆ ಬೇಕಾದ ವಾಯು ತರಂಗ:
ಪದರ ರೂಪದಲ್ಲಿರುವ ಅಂತರಿಕ್ಷದ ಸ್ತರಗಳಲ್ಲಿ ಭೂಮಿಯ ಮೇಲ್ತಳಕ್ಕೆ ಹತ್ತಿರವಾಗಿರುವ ಟ್ರೊಫೋಸ್ಪಿಯರ್‍ ನಲ್ಲಿ 78% ನೈಟ್ರೋಜನ್, 21.9% ಆಕ್ಸಿಜನ್, ಸ್ವಲ್ಪಂಶ ಓಝೋನ್, ಕಾರ್ಬನ್ ಡೈಆಕ್ಸೈಡ್, ಹೈಡ್ರೊಜನ್, ಅಲ್ಯೂಮಿನಿಯಂ ಇತ್ಯಾದಿಗಳು ಸೇರಿವೆ.
ಈ ಎಲ್ಲ ಅಂಶಗಳು ಭೂವಾಸಕ್ಕೆ ಅತ್ಯವಶ್ಯಕವಾಗಿವೆ. ಶ್ರವಣ ಶಕ್ತಿಯೂ ಅದರಲ್ಲಿ ಸೇರಿದೆ. ಈ ಘಟಕಗಳ ಸಾಂದ್ರೀಕರಣ ಹೆಚ್ಚಿದಂತೆಯೇ ಶಬ್ದ ಚಲನೆಯ ವೇಗವೂ ಹೆಚ್ಚುತ್ತದೆ. ಅದರ ಸಾಂದ್ರೀಕರಣ ಕಡಿಮೆಯಾದಂತೆಯೇ ಶ್ರವಣ ಶಕ್ತಿಯೂ ಕಡಿಮೆಯಾಗುತ್ತದೆ. ಯಾಕೆಂದರೆ, ಶಬ್ದದ ಚಲನೆಗೆ ಬೇಕಾದ ಗಾಳಿಯ ಸಾಂದ್ರತೆಯ ಕೊರತೆಯೇ ಇದಕ್ಕೆ ಕಾರಣವಾಗಿದೆ.
ಸಮುದ್ರದ ಮೇಲ್ತಳದಲ್ಲಿ ಶಬ್ದವು 1,200 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ನೀರಿನಲ್ಲಿ ಶಬ್ದದ ಚಲನೆಯು ಇದರ ನಾಲ್ಕು ಪಟ್ಟು ವೇಗದಲ್ಲಿದೆ. ಭೂತಳದ ಹತ್ತಿರವಾಗಿರುವ ಅಂತರಿಕ್ಷದ ಒಂದನೆಯ ಎಕ್ಸೊಸ್ಪಿಯರ್ ಪದರದಲ್ಲಿ ವಾಯು ಚಲನೆಯಿಲ್ಲದಿರುವುದರಿಂದ ಶಬ್ದ ಚಲನೆ ಹಾಗೂ ಶ್ರವಣ ಶಕ್ತಿಯೂ ಇಲ್ಲ.
ಶಬ್ದದ ಪ್ರತಿಧ್ವನಿಯ ರೂಪದಲ್ಲಿರುವ ವಾಯು ಸಂಚಾರದ ಮರಳಿಕೆಯು ಆಕಾಶದಿಂದಲೇ ನಡೆಯುತ್ತದೆ. ಅನ್ಯಥಾ ನಮಗೆ ಪರಸ್ಪರ ಕೇಳಿಸುತ್ತಿರಲಿಲ್ಲ ಅಥವಾ ಈ ಭೂಮಿಯಲ್ಲಿ ಜೀವನದ ಅಂಶವೇ ಉಳಿಯುತ್ತಿರಲಿಲ್ಲ.

2. ನೀರಿನ ಮರಳಿಕೆ:
ಭೂಮಿಯ 2/3 ಭಾಗದಲ್ಲಿ ನೀರಿದೆ. ಇದು ಸುಮಾರು 1.36 ಮಿಲಿಯ ಕಿಲೋ ಮೀಟರ್ ಗಳಾಗಬಹುದು. ಇದರಲ್ಲಿ 97.2% ಸಮುದ್ರ, 2.15% ಹಿಮಬೆಟ್ಟ ಮತ್ತು 0.69% ನದಿ-ತೊರೆಗಳಿವೆ. ಉಳಿದ ನೀರು, ಭೂಮಿಯ ಒಳ ಭಾಗದಲ್ಲಿದೆ. ಈ ನೀರು ಸಂಪೂರ್ಣ ಆವಿಯಾಗಿ ಟ್ರೊಫೋಸ್ಪಿಯರ್‍ ಗೇರಿ, ಘನೀಕರಿಸಿದ ಬಳಿಕ ಭೂಮಿಯ ಮೇಲ್ಭಾಗಕ್ಕೆ ಸುರಿಯುತ್ತದೆ. ಇದನ್ನು ಭೂಮಿಯ ಸುತ್ತಲಿನ ‘ಜಲಸಂಕ್ರಮಣ’ ಎನ್ನಲಾಗುತ್ತದೆ.
ನೀರಿನ ಈ ಸಂಕ್ರಮಣ ಕ್ರಿಯೆಯು ‘ಮರಳಿಸುವ ಆಕಾಶ’ದ ಇನ್ನೊಂದು ರೂಪವಾಗಿದೆ. ನೀರಿನ ಬಗ್ಗೆ ಇಂಥ ವ್ಯವಸ್ಥೆಯಿಲ್ಲದಿರುತ್ತಿದ್ದರೆ, ಪ್ರತಿ ನಿಮಿಷದಲ್ಲಿ ನೀರಿನಲ್ಲಿ ಸಾಯುವ ಜೀವಿಗಳಿಂದ ಎಲ್ಲ ನೀರು ಕೆಟ್ಟು, ಹಗಲಿನಲ್ಲಿ ವಿಪರೀತ ತಾಪ ಮತ್ತು ರಾತ್ರಿಯಲ್ಲಿ ಕಡು ಚಳಿಯಿಂದ ಈ ಭೂಮಿಯಲ್ಲಿ ಜೀವನವೇ ಅಸಾಧ್ಯವಾಗುತ್ತಿತ್ತು.

3. ಭೂಮಿಗೆ ತಾಪ ಶಕ್ತಿಯ ಮರಳಿಕೆ ಮತ್ತು ಭೂಮಿಯಿಂದ ಮೋಡದ ಮೂಲಕ ಶೂನ್ಯಾಕಾಶಕ್ಕೆ ತಾಪದ ಬಹಿರ್ಗಮನ:
ಪ್ರತಿಕ್ಷಣವೂ ಸೂರ್ಯನಿಂದ ಅತಿ ಕಠಿಣ ತಾಪವು ಭೂಮಿಗೆ ಬರುತ್ತದೆ. ಹಾಗಿದ್ದರೂ ವಾತಾವರಣದಲ್ಲಿ ವಾಯು ರೂಪದಲ್ಲಿರುವ ಪದರವು ಅತ್ಯುಷ್ಣದಿಂದ ನಮ್ಮನ್ನು ರಕ್ಷಿಸುತ್ತದೆ.
ಭೂಮಿಗೆ ಬರುವ ಸೂರ್ಯನ 59% ತಾಪ ಕಿರಣಗಳನ್ನು ವಾತಾವರಣದ ಪದರಗಳು ಛಿದ್ರಗೊಳಿಸುತ್ತವೆ. ಉಳಿದ 47% ಭೂಮಿಯ ಮಣ್ಣು ಮತ್ತು ಬಂಡೆಯು ಹೀರುತ್ತದೆ. ಭೂಮಿಯಿಂದ ತಾಪವು ಮರಳದಿರುತ್ತಿದ್ದರೆ ಭೂಮಿಯಲ್ಲಿ ಜೀವದ ಎಲ್ಲ ರೂಪಗಳೂ ಭಸ್ಮವಾಗುತ್ತಿದ್ದುವು. ಭೂಮಿಯ ನೀರು ಸಂಪೂರ್ಣ ಆವಿಯಾಗುತ್ತಿತ್ತು.
ಸೂರ್ಯಾಸ್ತಮಾನದೊಂದಿಗೆ ಭೂಮಿಯಿಂದ ಮಣ್ಣು ಮತ್ತು ಬಂಡೆಯು ಹೀರಿದ 49% ತಾಪಕಿರಣಗಳು ತರಂಗದಂತೆ ವಾತಾವರಣದಲ್ಲಿ ವ್ಯಾಪಿಸಿ ಭೂಮಿಯು ತಣಿದು ಮಂಜುಗಡ್ಡೆಯಾಗುವುದರಿಂದ ರಕ್ಷಿಸುತ್ತದೆ.

4. ಭೂಮಿಯ ಮೇಲ್ಭಾಗದಿಂದ ಓಝೋನ್ ಪದರಗಳ ಮೂಲಕ ಕೆಂಪು ಕಿರಣಗಳ ಮರಳಿಕೆ:
ಸೂರ್ಯನಿಂದ ಭೂಮಿಗೆ ಬೀಳುವ ಕೆಂಪು ಕಿರಣಗಳನ್ನು ಓಝೋನ್ (ಒ 3) ಪದರಗಳ ಮೂಲಕ ಭೂಮಿಯ ಮೇಲ್ತಳದಿಂದ ಹೀರಿ ಆ ಮೂಲಕ ಬಹುವಂಶ ತಾಪವನ್ನು ಭೂ ಅಂತರಿಕ್ಷದಿಂದ ಹೊರ ಹೋಗಲು ನೆರವಾಗುತ್ತದೆ. ಇದರಿಂದಲೇ ಹಸಿರೆಲೆಗಳು ಸುಟ್ಟು ಕರಟಿ ಹೋಗದಂತೆ ಮತ್ತು ಕ್ಯಾನ್ಸರ್‍ ನಂಥ ಮಾರಕ ರೋಗಗಳು ಹಾಗೂ ಭೂಮಿಯ ಎಲ್ಲ ನೀರು ಸಂಪೂರ್ಣ ಆವಿಯಾಗದಂತೆ ರಕ್ಷಿಸಲು ಸಾಧ್ಯವಾಗುತ್ತದೆ.

5. ರೇಡಿಯೋ ತರಂಗಗಳ ಮರಳಿಕೆ:
ಸಮುದ್ರದ ಮೇಲ್ತಳದಿಂದ 1,00,400 ಕಿ.ಮೀ. ತನಕ ವ್ಯಾಪಿಸಿರುವ ಪದರಗಳಲ್ಲಿರುವ ಪ್ರೋಟೋನ್ ಗಳು ಸೂರ್ಯನಿಂದ ಭೂಮಿಗೆ ಬೀಳುವ ಅತ್ಯುಷ್ಣ ತಾಪವನ್ನು ಹೀರುತ್ತದೆ. ಈ ಪದರದಲ್ಲಿರುವ ಎಲೆಕ್ಟ್ರೋನ್‍ಗಳು ಭೂ ಅಂತರಿಕ್ಷದ ರೇಡಿಯೋ ತರಂಗಗಳನ್ನು ತಡೆಯುವಂತೆ, ಸೂರ್ಯರಶ್ಮಿಗಳ ಜತೆ ಬರುವ ರೇಡಿಯೋ ವಿಕಿರಣಗಳನ್ನು ಭೂಮಿಯ ಮೇಲ್ತಳದಿಂದ ದೂರಗೊಳಿಸುತ್ತದೆ.

6. ಪ್ರಾಪಂಚಿಕ ರಶ್ಮಿಗಳ ಮರಳಿಕೆ:
ಮಳೆ ಸುರಿಯುವ ವೇಳೆಯಲ್ಲಿ ಸುರಿಯುವ ಮೊದಲ ಪ್ರಾಪಂಚಿಕ ರಶ್ಮಿಗಳು ಪ್ರಪಂಚದಲ್ಲಿ ತುಂಬಿ ಮೆಗ್ನೆಟಿಕ್ ಪ್ರಭಾವಲಯದೊಂದಿಗೆ ಪುನಃ ಭೂಮಿಯ ಮೇಲ್ತಳದಿಂದ ಮರಳುತ್ತವೆ. ಹಾಗಿದ್ದರೂ ಭೂಮಿಯ ಮೇಲ್ತಳಕ್ಕೆ ತಲುಪುವ ರಶ್ಮಿಗಳು ಕತ್ತಲೆ ಕವಿದ ರಾತ್ರೆಯಲ್ಲಿ ಪ್ರಭಾತ ಧ್ರುವಗಳಿಂದಿರುವ ಪ್ರಭಾಪೂರಿತ ಬಿಳಿ ರೇಖೆಗಳಿಗೆ ಕಾರಣವಾಗುತ್ತದೆ.

ಉಪಜೀವನ ಮಾರ್ಗ ಆಕಾಶದಿಂದ
ಆಹಾರ ಪದಾರ್ಥಗಳು ಭೂಮಿಯಲ್ಲಿ ಜೀವ ನಿರ್ವಹಣೆಗೆ ಅನಿವಾರ್ಯ. ಅವುಗಳ ವಿನಾ ಜೀವಲೋಕ ಕ್ರಮವೇ ಅನೂಹ್ಯ. ಅನ್ನಪಾನೀಯಗಳು ಅಲ್ಲಾಹನು ಇಳಿಸುವ ನೀರಿನಿಂದ ಉತ್ಪಾದನೆಯಾಗುತ್ತದೆ. ಆದ್ದರಿಂದ, ಮಳೆಯಿಲ್ಲದಿದ್ದರೆ ಜೀವನವೇ ಅಪಾಯಕ್ಕೆ ಸಿಲುಕುತ್ತದೆ. ಕುರ್‍ಆನ್ ಸ್ಪಷ್ಟಪಡಿಸಿದೆ. “ಆಕಾಶದಲ್ಲಿ ನಿಮಗೆ ಆಹಾರ ಸಾಧನಗಳು ಮತ್ತು ನಿಮಗೆ ವಾಗ್ದಾನ ಮಾಡಲಾಗುತ್ತಿರುವ ವಿಷಯಗಳೂ ಇವೆ.” (51:22)

ಕುರ್‍ಆನ್ ವ್ಯಾಖ್ಯಾನಗಾರರಾದ ಎಲ್ಲ ವಿದ್ವಾಂಸರು ಈ ವಚನದ ವಿವರಣೆಯಲ್ಲಿ ಮಳೆಯು ಆಕಾಶದಿಂದ ಬರುವ ಜೀವನಾಧಾರವೆಂದು ಹೇಳಿದ್ದಾರೆ. ಅದರ ವಿವರಣೆಯೆಂಬಂತೆ ಕುರ್‍ಆನ್ ಹೀಗೆ ಸಾರಿದೆ, “ಬರಡು ಭೂಮಿಗೆ ನಾವು ನೀರು ಹರಿಸಿ ಅದರಿಂದ ಇವರ ಜಾನುವಾರುಗಳಿಗೆ ಮತ್ತು ಇವರಿಗೆ ಬೇಕಾದ ಆಹಾರ ವಾಗಿ ಬೆಳೆ ಉತ್ಪಾದಿಸುವುದನ್ನು ಇವರು ನೋಡುವುದಿಲ್ಲವೇ?” ಬೆಳೆಗಳ ಉಳಿವು ಮಳೆ ನೀರನ್ನು ಅವಲಂಬಿಸಿದೆ. ಮಳೆಯೇ ಕೃಷಿಯ ಅವಿಭಾಜ್ಯ ಅಂಗಗಳಾಗಿರುವ ಜಾನುವಾರುಗಳ ಜೀವನೋಪಾಧಿಯಾಗಿದೆ. ಆಧುನಿಕ ಭೌತಿಕ ಅಧ್ಯಯನಗಳು, ಪ್ರಾಣಿ ಸಸ್ಯಲತಾದಿಗಳು ನೀರಿಲ್ಲದೆ ಬದುಕಲಾರವೆಂದು ಸ್ಪಷ್ಟಪಡಿಸಿವೆ. ತಾಯಿಯ ಗರ್ಭದಲ್ಲಿಯೇ ಸಾಯುವ ಭ್ರೂಣಸ್ತ ಶಿಶುಗಳಲ್ಲಿ 97% ಜನಿಸಿದ ಶಿಶುಗಳಲ್ಲಿ 91% ಮತ್ತು ಮಕ್ಕಳಲ್ಲಿ 66% ನೀರಿನ ಅಂಶವಿದೆ. ಅದಲ್ಲದೆ ರಕ್ತದಲ್ಲಿ 82% ಮತ್ತು ಮಿದುಳಿನಲ್ಲಿ 70% ನೀರಿನಾಂಶವಿದೆ. ಓರ್ವ ಮಾನವನಿಗೆ ಅನ್ನವಿಲ್ಲದೆ ವಾರಗಟ್ಟಲೆ ಬದುಕಬಹುದಾದರೂ ನೀರಿಲ್ಲದೆ ಮೂರು ದಿನಕ್ಕಿಂತ ಹೆಚ್ಚು ಪ್ರಾಣ ಉಳಿಯಲಾರದು.

ಎಲ್ಲ ಜೀವಜಾಲಗಳ ದೈಹಿಕ ಪ್ರಕ್ರಿಯೆಯಾಗಿರುವ ಪಚನಕ್ರಿಯೆ, ಉಸಿರಾಟ, ವಿಸರ್ಜನೆ ಇತ್ಯಾದಿ ಅನೇಕ ಕ್ರಿಯೆಗಳು ನೀರಿನಿಂದಲೇ ಸುಸೂತ್ರವಾಗುತ್ತವೆ. ಹಾಗೆಯೆ ಸಸ್ಯಗಳು ಬೇರುಗಳ ಮೂಲಕ ಭೂಮಿಯೊಳಗಿದ್ದ ನೀರು ಹೀರಿ ಬದುಕುತ್ತವೆ.

ನೀರು ಮೂರು ರೀತಿಯಲ್ಲಿದೆ. ಘನ, ದ್ರವ, ಅನಿಲ. ಜೀವ ರಕ್ಷಣೆಗೆ ಅತ್ಯಗತ್ಯವಾಗಿರುವ ಎಲ್ಲ ಅಂಶಗಳನ್ನು ನೀರು ಹೊಂದಿದೆ. ಕುರ್‍ಆನ್ ಸ್ಪಷ್ಟಪಡಿಸಿದೆ. “ಆಕಾಶಗಳ ಮತ್ತು ಭೂಮಿಯ ನಿರ್ಮಾಣದಲ್ಲಿ, ಇರುಳು ಹಗಲುಗಳು ಒಂದರ ಹಿಂದೆ ಇನ್ನೊಂದರಂತೆ ನಿರಂತರವಾಗಿ ಬರುತ್ತಿರುವುದರಲ್ಲಿ, ಜನೋಪಯೋಗಿ ಸಾಮಗ್ರಿಗಳನ್ನು ಹೊತ್ತುಕೊಂಡು ಜಲಧಿಗಳಲ್ಲಿ ಸಂಚರಿಸುತ್ತಿರುವ ನೌಕೆಗಳಲ್ಲಿ, ಅಲ್ಲಾಹನು ಆಕಾಶದಿಂದ ಸುರಿಸಿ ಅದರ ಮೂಲಕ ಭೂಮಿಯನ್ನು ನಿರ್ಜೀವಾವ ಸ್ಥೆಯ ಬಳಿಕ ಸಜೀವಗೊಳಿಸಿ, ಈ ವ್ಯವಸ್ಥೆಯ ಮೂಲಕ ಭೂಮಿಯಲ್ಲಿ ತರತರದ ಜೀವರಾಶಿಗಳು ಹರಡಿರುವಂತೆ ಮಾಡಿದ ಮಳೆ ನೀರಿನಲ್ಲಿ, ಮಾರುತಗಳ ಚಲನೆಯಲ್ಲಿ ಹಾಗೂ ಆಕಾಶ ಮತ್ತು ಭೂಮಿಯ ನಡುವೆ ನಿಯಂತ್ರಿಸಲ್ಪಟ್ಟಿರುವ ಮೋಡಗಳಲ್ಲಿ ನಿಶ್ಚಯವಾಗಿಯೂ ವಿಚಾರವಂತರಿಗೆ ಅನೇಕಾನೇಕ ದೃಷ್ಟಾಂತಗಳಿವೆ.” (2:164)

ಇಲ್ಲಿ ನಿರ್ಜೀವಿಯಾಗಿದ್ದ ಭೂಮಿಯನ್ನು ಮಳೆ ನೀರಿನಿಂದ ಸಜೀವಗೊಳಿಸಲಾಯಿತೆಂಬ ಪ್ರಸ್ತಾಪ ವಿಶೇಷ ಗಮನಾರ್ಹ. ಸಮೃದ್ಧವಾಗಿ ಬೆಳೆಯುವ ಮರ ಗಿಡಗಳು ಹೊರಬಿಡುವ ಆಮ್ಲಜನಕ ಮಾನವರಿಗೆ ಉಸಿರಾಟದ ಗಾಳಿಯಾಗಿ ಒದಗಿಸಿರುವ ಪ್ರಭು ಅವೆಲ್ಲವುಗಳ ಉಗಮಸ್ಥಾನವನ್ನು ನೀರಿನಲ್ಲಿ ಇರಿಸಿದ್ದಾನೆ.
“ನಾವು ಆಕಾಶದಿಂದ ಸುಸಮೃದ್ಧ ನೀರನ್ನಿಳಿಸಿದೆವು. ತರುವಾಯ ಅದರಿಂದ ಉದ್ಯಾನಗಳನ್ನೂ ಕೊಯ್ಲಿನ ಧಾನ್ಯಗಳನ್ನೂ ಫಲಭರಿತ ಗೊಂಚಲುಗಳು ಪದರು ಪದರುಗಳಾಗಿರುವ ಎತ್ತರವಾದ ಖರ್ಜೂರದ ಮರಗಳನ್ನೂ ಸೃಷ್ಟಿಸಿದೆವು. ಇದು, ದಾಸರಿಗೆ ಆಹಾರವೊದಗಿಸುವ ಏರ್ಪಾಡು. ಈ ನೀರಿನಿಂದ ನಾವು ಒಂದು ನಿರ್ಜೀವ ನೆಲಕ್ಕೆ ಜೀವದಾನ ಮಾಡುತ್ತೇವೆ. (ಸತ್ತು ಹೋದ ಮಾನವರು ಭೂಮಿಯಿಂದ) ಹೊರ ಬರುವುದೂ ಹೀಗೆಯೇ.” (50: 9-11)
ಆದ್ದರಿಂದ ಅವು ಸಂಪೂರ್ಣವಾಗಿ ಆಕಾಶದಿಂದ ದೊರೆಯುವ ಉಪಜೀವನವಾಗಿದೆ. ಜಲವು ಅವುಗಳಿಗೆ ಹೇತುವಾಗಿದೆ. ಮಳೆಯಿಂದ ಜಲ ಸಿಗುತ್ತದೆ. ಆಕಾಶವು ಮಳೆಯ ಮೂಲವಾಗಿದೆ. ಅದಕ್ಕಿಂತ ಮಿಗಿಲಾಗಿ ಅಲ್ಲಾಹನು ಈ ನೀರಿನಲ್ಲಿ ತಾಪದ ಅಂಶಗಳನ್ನು ಬೆರೆಸಿರುವುದರಿಂದಲೇ ನಮಗೆ ಹರಿದು ಹೋಗುವ ನೀರು ಲಭಿಸುತ್ತದೆ. 00C (ಸೊನ್ನೆ ಡಿಗ್ರಿ ಸೆಲ್ಸಿಯಸ್)ನಲ್ಲಿ ಜಗತ್ತಿನ ಎಲ್ಲ ನೀರು ಮಂಜುಗಡ್ಡೆಯಾಗುತ್ತದೆ. ಆದರೆ ಅಲ್ಲಾಹನು ಅದನ್ನು ಸಂಚರಿಸುವ ನೀರಾಗಿ, ಬದುಕಿಗೆ ನೆರವಾಗುವ ರೀತಿಯಲ್ಲಿ ಒದಗಿಸಿದ್ದಾನೆ. ಹಾಗೆಯೇ ಗಾಳಿ ಮತ್ತು ಅದರಲ್ಲಿರುವ ಆಕ್ಸಿಜನ್, ಕಾರ್ಬನ್ ಡೈಆಕ್ಸೈಡ್, ನೈಟ್ರೋಜನ್, ನೀರಾವಿ ಇತ್ಯಾದಿಗಳು ಆಕಾಶದಿಂದಿರುವ ಉಪ ಜೀವನವಲ್ಲವೇ.

ಮಳೆಯು ಅನುಗ್ರಹ
ಮಳೆಯು ಸದಾ ಅನುಗ್ರಹವಾಗಿದೆ. ಅದರಲ್ಲಿ ತಂಪಿದೆ, ನೆಮ್ಮದಿಯಿದೆ. ಮಾನವರಿಗೆ ಅದರಲ್ಲಿ ಶೈತಾನನಿಂದ ವಿಮೋಚನೆಯಿದೆ. ಕುರ್‍ಆನ್ ಸ್ಪಷ್ಟಪಡಿಸಿದೆ.
“ಅಲ್ಲಾಹನು ತನ್ನ ಕಡೆಯಿಂದ ತೂಕಡಿಕೆಯ ರೂಪದಲ್ಲಿ ನಿಮ್ಮ ಮೇಲೆ ನೆಮ್ಮದಿ ಹಾಗೂ ನಿರ್ಭಯತೆಯನ್ನು ಆಚ್ಛಾದಿಸುತ್ತಿದ್ದ ಹಾಗೂ ನಿಮ್ಮನ್ನು ಶುದ್ದೀಕರಿಸಲಿಕ್ಕೂ ಶೈತಾನನಿಂದ ಹಾಕಲ್ಪಟ್ಟ ಮಾಲಿನ್ಯವನ್ನು ನಿಮ್ಮಿಂದ ದೂರೀಕರಿಸಲಿಕ್ಕೂ ನಿಮ್ಮ ಹೃದಯಗಳಲ್ಲಿ ಧೈರ್ಯ ತುಂಬಲಿಕ್ಕೂ ತನ್ಮೂಲಕ ನಿಮ್ಮ ಪಾದಗಳನ್ನು ನೆಲೆಯೂರಿಸಲಿಕ್ಕೂ ಆಕಾಶದಿಂದ ನಿಮ್ಮ ಮೇಲೆ ಮಳೆ ಸುರಿಸುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ.” (8: 11)

ಇಲ್ಲಿ ಕುರ್‍ಆನ್, ನೀರಿನ ಅನಂತ ಗುಣಗಳನ್ನು ತಿಳಿಸಿದೆ. ಈ ವಚನವು ನೀರು ಲಭಿಸದ ಸತ್ಯವಿಶ್ವಾಸಿಗಳ ಮನಃಶಾಂತಿಗಾಗಿ ಅವತೀರ್ಣವಾಗಿದೆ. ಅನಂತರ ಅಲ್ಲಾಹನು ಮಳೆ ಸುರಿಸಿ ಅವರನ್ನು ಅನುಗ್ರಹಿಸಿದನು. ಮಾನವ ಜೀವನದ ಉಳಿವಿನ ಅವಿಭಾಜ್ಯ ಅಂಗವಾಗಿರುವ ಉಸಿರಾಟಕ್ಕೆ, ಗಿಡಮರಗಳು ಹೊರಬಿಡುವ ಆಕ್ಸಿಜನ್ ಆಧಾರವಾಗಿದೆ. ಈ ಗಿಡ ಮರ ಬಳ್ಳಿಗಳ ಸೃಷ್ಟಿ ಮತ್ತು ಅದರ ಬೆಳವಣಿಗೆ ಮತ್ತು ಉಳಿವು ಆಕಾಶದಿಂದ ಸುರಿಯುವ ಮಳೆ ನೀರನ್ನು ಅವಲಂಬಿಸಿದೆ.

ಕುರ್‍ಆನ್ ಹೇಳುತ್ತದೆ, “ಅವನೇ ಆಕಾಶದಿಂದ ನೀರನ್ನು ಸುರಿಸಿದನು. ಅನಂತರ ಅದರ ಮೂಲಕ ಎಲ್ಲ ವಿಧದ ವನಸ್ಪತಿಗಳನ್ನು ಉತ್ಪಾದಿಸಿದನು. ಆ ಮೇಲೆ ಅದರಿಂದ ಹಚ್ಚ ಹಸುರಾದ ಹೊಲಗಳನ್ನೂ ವೃಕ್ಪಗಳನ್ನೂ ಉಂಟು ಮಾಡಿದನು. ಆ ಬಳಿಕ ಅವುಗಳಿಂದ ಹಲವು ಪದರುಗಳಿಂದ ಹೊದಿಯಲ್ಪಟ್ಟ ಧಾನ್ಯಗಳನ್ನು ಹೊರ ತಂದನು ಮತ್ತು ಖರ್ಜೂರಗಳ ಮೊಗ್ಗುಗಳಿಂದ, ಭಾರದಿಂದಾಗಿ ಬಾಗುತ್ತಿರುವ ಫಲಗಳ ಗೊಂಚಲು ಗೊಂಚಲುಗಳನ್ನೇ ಉಂಟು ಮಾಡಿದನು. ದ್ರಾಕ್ಷೆ, ಝೈತೂನ್(ಇಪ್ಪೆ), ದಾಳಿಂಬೆಗಳ ತೋಟಗಳನ್ನು ಬೆಳೆಸಿದನು. ಅವುಗಳ ಫಲಗಳು ಪರಸ್ಪರ ಹೋಲುತ್ತಲೂ ಇವೆ ಮತ್ತು ಪ್ರತಿಯೊಂದರ ವೈಶಿಷ್ಟ್ಯಗಳು ವಿಭಿನ್ನವಾಗಿಯೂ ಇವೆ. ಈ ವೃಕ್ಪಗಳು ಫಲ ಬಿಡುವಾಗ ಅವುಗಳಲ್ಲಿ ಫಲ ಬರುವ ಮತ್ತು ಪಕ್ವವಾಗುವ ವಿದ್ಯಮಾನವನ್ನು ಸೂಕ್ಷ್ಮವಾಗಿ ಅವಲೋಕಿಸಿರಿ. ವಿಶ್ವಾಸವಿಡುವವರಿಗೆ ಇವುಗಳಲ್ಲಿ ನಿದರ್ಶನಗಳಿವೆ.” (6:99) “ನಿರ್ಜೀವಾದ ನೆಲವನ್ನು ನಾವು ಆ ಮೂಲಕ ಸಜೀವಗೊಳಿಸಿದೆವು.” (50:11)

ಇಲ್ಲಿ ಸಸ್ಯಲತಾದಿಗಳ ಚಿತ್ರಣವನ್ನು ನೀಡಲಾಗಿದೆ. ಮಳೆಯಿಂದ ಮಳೆತು ಬೆಳೆದ ಸಸ್ಯಗಳನ್ನು ಅಲ್ಲಾಹನು ಜನರಿಗೆ ಅನುಗ್ರಹವಾಗಿ ಮಾಡಿದ್ದಾನೆ. ಸಸ್ಯ ವರ್ಗಗಳಿಂದ ಭೂಮಿಯನ್ನು ಜೀವಂತಗೊಳಿಸಲಾಗಿದೆಯೆಂದು ಹೇಳುವಾಗ ಕುರ್‍ಆನ್‍ನ ಅಮಾನುಷಿಕತೆ ಮತ್ತಷ್ಟು ಹೆಚ್ಚುತ್ತದೆ. ಯಾಕೆಂದರೆ ಇಲ್ಲಿ ಸಸ್ಯಲತಾದಿಗಳ ಸಾನಿಧ್ಯದ ಅಗತ್ಯ ಎದ್ದು ತೋರುತ್ತದೆ. ನಿರ್ಜೀವವಾಗಿದ್ದ ನೆಲವನ್ನು ಸಜೀವಗೊಳಿಸುವ ಪ್ರಮುಖ ಘಟಕವಾದ ವಾಯು; ಸಸ್ಯಗಳು ಹೊರಬಿಡುವ ಆಕ್ಸಿಜನ್‍ನಿಂದ ತಯಾರಾಗುತ್ತದೆ. ಮಳೆಯ ಅನಂತ ಅನುಗ್ರಹಗಳ ಬಗ್ಗೆ ಪುನಃ ನೆನಪಿಸಲಾಗಿದೆ. “ಆಕಾಶದಿಂದ ನಾವು ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಸುರಿಸಿ ಅನಂತರ ನಾವು ಅದನ್ನು ಭೂಮಿಯಲ್ಲಿ ತಂಗಿಸಿದೆವು. ನಾವು ನಿಶ್ಚಯವಾಗಿಯೂ ಅದನ್ನು ಇಂಗಿಸಲು ಶಕ್ತರಾಗಿದ್ದೇವೆ.” (23:18)

ಮಳೆ ಮತ್ತು ಶಿಕ್ಷೆ
ಮಳೆಯು ಪ್ರತ್ಯಕ್ಷದಲ್ಲಿ ಅನುಗ್ರಹವಾಗಿದ್ದರೂ ಕೆಲವು ಸಂದರ್ಭಗಳಲ್ಲಿ ಅದು ಶಿಕ್ಷೆಯಾಗಿ ಪರಿಣಮಿಸುತ್ತದೆ. ಮಳೆಗೆ ನೆರವಾಗುವ ಗಾಳಿಯೊಂದಿಗೆ ಹೆಚ್ಚಾಗಿ ಶಿಕ್ಷೆಯು ಬರುತ್ತದೆ. ಸತ್ಯನಿಷೇಧ ಮತ್ತು ಅನೈತಿಕ ಜೀವನ ಸಾಗಿಸುವವರಿಗೆ ಎಚ್ಚರಿಕೆಯಾಗಿ ಈ ಶಿಕ್ಷೆ ಬರುತ್ತದೆ.
ಕುರ್‍ಆನ್ ಐತಿಹಾಸಿಕ ಹಿನ್ನೆಲೆಯೊಂದಿಗೆ ಅಂಥ ಶಿಕ್ಷೆಯ ಬಗ್ಗೆ ಹೇಳಿದೆ, “ತರುವಾಯ ಅವರು ಆ ಯಾತನೆಯು ತಮ್ಮ ಕಣಿವೆಗಳತ್ತ ಬರುತ್ತಿದ್ದುದನ್ನು ಕಂಡು, “ಇದು ನಮ್ಮ ಮೇಲೆ ಮಳೆ ಸುರಿಸಲಿಕ್ಕಾಗಿ ಬರುತ್ತಿರುವ ಮೋಡ” ಎಂದರು. “ಅಲ್ಲ! ವಾಸ್ತವದಲ್ಲಿ ಇದು ನೀವು ಆತುರ ಪಡುತ್ತಿರುವ ವಸ್ತುವೇ ಆಗಿದೆ. ಇದು ಬಿರುಗಾಳಿಯಾಗಿದ್ದು ಇದರಲ್ಲಿ ವೇದನಾಜನಕ ಯಾತನೆ ಇದೆ. ಇದು ತನ್ನ ಪ್ರಭುವಿನ ಅಪ್ಪಣೆಯಂತೆ ಸಕಲ ವಸ್ತುಗಳನ್ನೂ ನಾಶಗೊಳಿಸಿ ಬಿಡುವುದು.” ಕೊನೆಗೆ ಅವರ ಪಾಡೇನಾಯಿತೆಂದರೆ, ಅವರ ವಾಸಸ್ಥಾನಗಳ ಹೊರತು ಅಲ್ಲಿ ಬೇರೇನೂ ಕಂಡು ಬರುತ್ತಿರಲಿಲ್ಲ. ಈ ರೀತಿಯಲ್ಲಿ ನಾವು ಅಪರಾಧಿಗಳಿಗೆ ಪ್ರತಿಫಲ ಕೊಡುತ್ತೇವೆ.” (46: 24-25)

ಈ ವಚನದ ಬಳಿಕ ಆದ್ ಸಮುದಾಯಕ್ಕೆ ಅಲ್ಲಾಹನು ಸುರಿಸಿದ ಅನುಗ್ರಹಗಳನ್ನು ಎತ್ತಿ ಹೇಳಲಾಗಿದೆ. ಆದರೂ ಅವರು ತೋರಿದ ಸತ್ಯನಿಷೇಧ ಮತ್ತು ಕೃತಘ್ನತೆಯಿಂದ ಅವರ ಮೇಲೆ ಶಿಕ್ಷೆ ಬಂದೆರಗಿತೆಂದು ಕುರ್‍ಆನ್ ದೃಢೀಕರಿಸಿದೆ.
ಇದೊಂದು ಎಚ್ಚರಿಕೆಯಾಗಿದೆ: ವಿಶೇಷತಃ ದೇವನನ್ನು ಮರೆತು ಮೆರೆದಾಡುತ್ತಿರುವ ಆಧುನಿಕ ಸಮಾಜಕ್ಕೆ ಎಚ್ಚರಿಕೆ. ಪ್ರವಾದಿಯವರು(ಸ) ಆಕಾಶದಲ್ಲಿ ಕಾರ್ಮೋಡ ಕವಿಯುತ್ತಿರುವುದನ್ನು ಕಂಡರೆ, ತಾವು ಮಾಡುತ್ತಿರುವ ಕೆಲಸವನ್ನು ನಿಲ್ಲಿಸಿ, “ಪ್ರಭು, ರವಾನಿಸಲಾಗುತ್ತಿರುವ ಸಂಕಷ್ಟದಿಂದ ನಾನು ನಿನ್ನ ಅಭಯ ಯಾಚಿಸುತ್ತೇನೆ” ಎಂದು ಪ್ರಾರ್ಥಿಸುತ್ತಿದ್ದರು. ಇನ್ನು ಆಕಾಶದಿಂದ ಮಳೆ ಸುರಿದರೆ, ಅದು ಉಪಯುಕ್ತ ಮತ್ತು ನೆಮ್ಮದಿದಾಯಕವಾಗಲೆಂದು ಹೇಳುತ್ತಿದ್ದರು. (ನಸಾಇ 3879)

ಬೈಬಲ್ ಮತ್ತು ಪುರಾಣಗಳಲ್ಲಿ ಹಾಗೂ ಗಿಲ್‍ಮೇಷ್‍ನ ಇತಿಹಾಸ ಇತ್ಯಾದಿಗಳಲ್ಲಿ ವಿವರಿಸಲಾದ ನೂಹ್‍ರ(ಅ) ನೌಕೆ ಮತ್ತು ಜಲಪ್ರಳಯದ ವೃತ್ತಾಂತ ಕುರ್‍ಆನ್‍ನಲ್ಲಿಯೂ ಇದೆ. ಪ್ರಳಯದ ಭಯಾನಕ ಶಿಕ್ಷೆಗಳನ್ನು ಕುರ್‍ಆನ್‍ನ ಇತರೆಡೆಗಳಲ್ಲಿಯೂ ವಿವರಿಸಲಾಗಿದೆ.
ಈ ಭಯಾನಕ ಪ್ರಳಯ ಶಿಕ್ಷೆ ಅತಿವೃಷ್ಟಿಯಿಂದ ಬರುತ್ತದೆ. “ಆಗ ನಾವು ಧಾರಾಕಾರ ಮಳೆಯಿಂದ ಆಕಾಶದ ದ್ವಾರಗಳನ್ನು ತೆರೆದು ಬಿಟ್ಟೆವು; ನೆಲವನ್ನು ಸೀಳಿ ಚಿಲುಮೆಗಳಾಗಿ ಮಾರ್ಪಡಿಸಿ ಬಿಟ್ಟೆವು ಮತ್ತು ಈ ನೀರೆಲ್ಲ ವಿಧಿಸಲ್ಪಟ್ಟಿದ್ದ ಆ ಕಾರ್ಯವನ್ನು ಪೂರ್ತಿಗೊಳಿಸಲಿಕ್ಕಾಗಿ ಸೇರಿಕೊಂಡಿತು. ನೂಹರನ್ನು ನಾವು ಹಲಗೆ ಹಾಗೂ ಮೊಳೆಗಳಿದ್ದ ವಸ್ತುವೊಂದರ ಮೇಲೆ ಸವಾರಿ ಮಾಡಿಸಿದೆವು. ಅದು ನಮ್ಮ ಮೇಲ್ನೋಟದಲ್ಲಿ ಚಲಿಸುತ್ತಿತ್ತು. ಇದು ಅಪಮಾನಿಸಲ್ಪಟ್ಟ ವ್ಯಕ್ತಿಯ ಪರವಾಗಿ ಪ್ರತೀಕಾರವಾಗಿತ್ತು. ಆ ನಾವೆಯನ್ನು ನಾವು ಒಂದು ನಿದರ್ಶನವಾಗಿ ಉಳಿಸಿದೆವು. ಇದರಿಂದ ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ? ನೋಡಿರಿ, ಹೇಗಿತ್ತು ನನ್ನ ಶಿಕ್ಷೆ ಮತ್ತು ಹೇಗಿದ್ದುವು ನನ್ನ ಎಚ್ಚರಿಕೆಗಳು. ನಾವು ಈ ಕುರ್‍ಆನನ್ನು ಉಪದೇಶಕ್ಕಾಗಿ ಸುಲಭ ಸಾಧನವಾಗಿ ಮಾಡಿರುವೆವು. ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ?” (54: 11-17)

ಕೊನೆಗೆ ಅಲ್ಲಾಹನು ಆಜ್ಞಾಪಿಸಿದನು, “ ಭೂಮಿಯೇ, ನಿನ್ನ ನೀರನ್ನೆಲ್ಲ ಹೀರಿಕೋ ಮತ್ತು ಓ ಆಕಾಶವೇ, ತಡೆ!” ಎಂದು ಅಪ್ಪಣೆಯಾಯಿತು. ಆ ಪ್ರಕಾರ ನೀರು ನೆಲದೊಳಗೆ ಇಂಗಿತು. ತೀರ್ಮಾನ ಆಗಿ ಹೋಯಿತು. ನೌಕೆಯು ‘ಜೂದಿ’ಯಲ್ಲಿ ತಂಗಿತು. ಅಕ್ರಮಿಗಳ ಜನಾಂಗ ದೂರ ತೊಲಗಿತೆಂದು ಹೇಳಲಾಯಿತು.” (11: 44)

ಅನುಗ್ರಹವಾಗಿ ಸುರಿಯಬೇಕಾದ ಮಳೆಯು ಶಾಪ ಮತ್ತು ಶಿಕ್ಷೆಯಾಗಿ ಪರಿಣಮಿಸುವ ಪ್ರಕ್ರಿಯೆಯು ಇತ್ತೀಚೆಗಿನ ಕಾಲದಲ್ಲಿ ಆಮ್ಲ ಮತ್ತು ವಿಷ ಮಳೆಯಾಗಿ ಆಧುನಿಕ ಮಾನವನನ್ನೂ ಕಾಡುತ್ತಿದೆ. ಆದರೆ ಕಲ್ಲು ಹೃದಯದಿಂದ ಪರಸ್ಪರ ಕೊಲೆ, ಕೊಳ್ಳೆ ನಡೆಸುತ್ತಿರುವ ಸಮಾಜಕ್ಕೆ ಜ್ಞಾನೋದಯವಾಗದಿರುವುದು ಅತಿ ವಿಚಿತ್ರ.

ಆಧಾರ:
 ಕುರ್‍ಆನ್
 ಸುನನುನ್ನಸಾಈ (ಅಬೂ ಅಬ್ದುರ್ರಹ್ಮಾನುನ್ನಸಾಈ)
 The Bible, The Quran and Science (Moris Bucaille)
 ಉಲೂಮುಲ್ ಕುರ್‍ಆನ್‍ನಲ್ಲಿ ಕೌನಿಯ್ಯ (ಡಾ| ಸಅಲುಲ್ ಮಹಮದುನ್ನಜ್ಜಾರ್)
 Universalis Encylopedia (G. Gastany and B. Blavoux)

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …