Home / ಪ್ರಶ್ನೋತ್ತರ / ಮೂಸಾ(ಅ)ರ ನಾಲಗೆಯ ತೊಡಕು ಮತ್ತು ಬೆಂಕಿಯ ಕೆಂಡ ವಾಸ್ತವವೇನು?

ಮೂಸಾ(ಅ)ರ ನಾಲಗೆಯ ತೊಡಕು ಮತ್ತು ಬೆಂಕಿಯ ಕೆಂಡ ವಾಸ್ತವವೇನು?

ಡಾ| ಮುಹಮ್ಮದ್ ರಝಿಯುಲ್ ಇಸ್ಲಾಮ್ ಉತ್ತರಿಸುತ್ತಾರೆ

ಪ್ರಶ್ನೆ: ಪ್ರವಾದಿಗಳು ತಂತಮ್ಮ ಕಾಲದ ಅತ್ಯುತ್ತಮ ವ್ಯಕ್ತಿಗಳಾಗಿರುತ್ತಿದ್ದರು. ಅವರಲ್ಲಿ ಯಾವುದೇ ಮಾನಸಿಕ ಮತ್ತು ಶಾರೀರಿಕ ನ್ಯೂನತೆಗಳಿರುವುದಿಲ್ಲವೆಂದು ನಮಗೆ ತಿಳಿದಿದೆ. ಪವಿತ್ರ ಕುರ್‍ಆನಿನಲ್ಲಿ ಮೂಸಾ(ಅ) ಅವರ ಒಂದು ಪ್ರಾರ್ಥನೆ ಇದೆ- “ಜನರು ನನ್ನ ಮಾತನ್ನು ಗ್ರಹಿಸುವಂತಾಗಲು ನನ್ನ ನಾಲಗೆಯ ತೊಡಕನ್ನು ನೀಗಿಸು.” (ತಾಹಾ: 27-28) ಇದರ ಬಗ್ಗೆ ಕೆಲವರು ಹೇಳುತ್ತಾರೆ- “ಮೂಸಾರ ನಾಲಗೆಯಲ್ಲಿ ತೊಡಕಿತ್ತು. ಅವರು ತೊದಲಲು ಕಾರಣ, ಅವರು ಮಗುವಾಗಿದ್ದಾಗ ಬೆಂಕಿಯ ಕೆಂಡವನ್ನು ಬಾಯಲ್ಲಿಟ್ಟಿದ್ದರು.” ಆದರೆ  ಇದು ಸರಿಯೆಂದು ನನಗನಿಸುವುದಿಲ್ಲ. ಇದು ಕೇವಲ ಊಹೆಯ ಮಾತೇ ಅಥವಾ ಇದಕ್ಕೇನಾದರೂ ಹದೀಸ್‍ನ ಆಧಾರವಿದೆಯೇ?  ದಯವಿಟ್ಟು ನನ್ನ ಸಂಶಯ ನಿವಾರಿಸಿರಿ.

ಉತ್ತರ: ಮೂಸಾ(ಅ)ರ ನಾಲಗೆಯಲ್ಲಿ ತೊಡಕಿತ್ತೆಂದು ಬೈಬಲ್‍ನಲ್ಲಿ ಹೇಳಲಾಗಿದೆ. ಅವರು ಹೇಳುತ್ತಾರೆ- “ನಾನು ತಡೆ ತಡೆದು ಮಾತಾಡುತ್ತೇನೆ. ನನ್ನ ನಾಲಗೆಯಲ್ಲಿ ತೊಡಕಿದೆ.” ಇದು ಅವರನ್ನು ಪ್ರವಾದಿಯಾಗಿ ನೇಮಕ ಮಾಡಲಾಗಿದ್ದು, ಫಿರ್‍ಔನನ ಬಳಿಗೆ ಹೋಗಲು ಅಲ್ಲಾಹನು ಆದೇಶಿಸಿದ್ದಾಗ, ಅವರು ಅಲ್ಲಾಹನಿಗೆ ಕೊಟ್ಟ ಉತ್ತರವಾಗಿತ್ತು. ತಲ್ಮೂದ್‍ನಲ್ಲಿ ಈ ವಿಷಯ ವಿವರವಾಗಿ, ಪ್ರಶ್ನೆಯಲ್ಲಿ  ಹೇಳಿದಂತೆ ಬಂದಿದೆ. ಅಂದರೆ ಬೆಂಕಿಯ ಕೆಂಡ ಬಾಯಲ್ಲಿಟ್ಟ ಕತೆ. ಪವಿತ್ರ ಕುರ್‍ಆನಿನಲ್ಲಿ ಈ ನಿಟ್ಟಿನಲ್ಲಿ ವಿವಿಧ ಹೇಳಿಕೆಗಳು ಕಾಣ ಸಿಗುತ್ತವೆ. ಅದರಲ್ಲಿ ಒಂದು ಪ್ರಾರ್ಥನೆ ಸೂರಾ, ತಾಹಾ: 25-28ನೇ ಸೂಕ್ತದಲ್ಲಿರುವುದಾಗಿದೆ. ಅದಲ್ಲದೆ ಇನ್ನೂ ಕೆಲವು ಕಡೆಗಳಲ್ಲಿರುವ ಸೂಕ್ತಗಳಿಂದ, ಮೂಸಾರ ನಾಲಗೆಯಲ್ಲಿ ತೊಡಕಿರುವುದು ಸ್ಪಷ್ಟವಾಗುವುದಿಲ್ಲ.

ತಫ್ಸೀರ್ ಗ್ರಂಥಗಳಲ್ಲಿ ಪ್ರಸ್ತುತ ಸೂಕ್ತದ ವ್ಯಾಖ್ಯಾನದಲ್ಲಿ ಸಾಮಾನ್ಯವಾಗಿ, ಮೂಸಾರು ಬೆಂಕಿಯ ಕೆಂಡವನ್ನು ಬಾಯಲ್ಲಿಟ್ಟಿರುವುದರಿಂದ ಅವರ ನಾಲಗೆಯಲ್ಲಿ ತೊಡಕುಂಟಾಗಿದೆಯೆಂದು ಹೇಳಲಾಗಿದೆ. ಇದು ಇಸ್ರಾಈಲೀ ಐತಿಹ್ಯಗಳ ಪ್ರಭಾವದಿಂದ ನಮ್ಮ ವ್ಯಾಖ್ಯಾನಗಾರರು ಸೇರಿಸಿದ್ದೆಂದು ಭಾಸವಾಗುತ್ತದೆ. ಆಧುನಿಕ ಕಾಲದ ಕೆಲವು ವ್ಯಾಖ್ಯಾನಗಾರರು ಪ್ರಸ್ತುತ ಘಟನೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಈ ಕುರಿತು ಕೆಲವು ಉದ್ಧರಣೆಗಳನ್ನು ನೀಡುವುದು ಸೂಕ್ತವೆನಿಸುತ್ತದೆ.

ಮೌಲಾನ ಶಮ್ಸ್ ಪೀರ್‍ಝಾದ ತನ್ನ ದಅïವತುಲ್ ಕುರ್‍ಆನ್‍ನಲ್ಲಿ ಹೀಗೆ ಬರೆಯುತ್ತಾರೆ- “ನಾಲಗೆಯ  ತೊಡಕೆಂದರೆ ಮಾತಾಡುವಾಗ ನಿರರ್ಗಳತೆಯ ಕೊರತೆಯಾಗಿದೆ. ತಫ್ಸೀರ್ ಗ್ರಂಥಗಳಲ್ಲಿರುವಂತೆ, ಅವರು ಬೆಂಕಿಯ ಕೆಂಡವನ್ನು ಬಾಯಲ್ಲಿಟ್ಟುದರಿಂದ ತೊಡಕುಂಟಾಯಿತೆಂಬುದು ಸರಿಯಲ್ಲ. ಇದು ಇಸ್ರಾಯಿಲೀ ಐತಿಹ್ಯಗಳಲ್ಲೊಂದಾಗಿದ್ದು, ತಿರಸ್ಕಾರ ಯೋಗ್ಯವಾಗಿದೆ. ವಾಸ್ತವದಲ್ಲಿ ಸಂದೇಶ ತಲಪಿಸಲು ಮಾತುಗಾರಿಕೆ ಅಗತ್ಯವಾಗಿದೆ. ಮೂಸಾರಿಗೆ ತನ್ನ ಮಾತು ನಿರರ್ಗಳವಾಗಿಲ್ಲವೆಂಬ ಅರಿವಿದ್ದ ಕಾರಣ ಅವರು ಅಲ್ಲಾಹನು ತನ್ನ ನಾಲಗೆಯ ತೊಡಕನ್ನು ನಿವಾರಿಸುವಂತೆ ಮತ್ತು ತಾನು ನಿರರ್ಗಳವಾಗಿ ಮಾತಾಡುವಂತೆ ಮಾಡು ಎಂದು  ಪ್ರಾರ್ಥಿಸಿದರು.

ಮೌಲಾನಾ ಅಮೀನ್ ಅಹ್ಸನ್ ಇಸ್ಲಾಹೀ ಬರೆಯುತ್ತಾರೆ- ನಾಲಗೆಯ ತೊಡಕಿನ ವಿಷಯ ತೌರಾತ್‍ನಲ್ಲಿದೆ. ಅಲ್ಲಿಂದಲೇ ನಮ್ಮ ತಫ್ಸೀರ್ ಗ್ರಂಥಗಳಲ್ಲಿ ಬಂದಿದೆ. ಅದನ್ನು ಅಧಿಕೃತವಾಗಿಸಲು ನಮ್ಮ ವ್ಯಾಖ್ಯಾನಗಾರರು ಚಿತ್ರ ವಿಚಿತ್ರ ಘಟನೆಯನ್ನು ಕಟ್ಟಿದ್ದಾರೆ. ಕುರ್‍ಆನಿನಲ್ಲಿ ತೊಡಕಿನ  ಪುರಾವೆಯಾಗಿ ಯಾವೊಂದು ವಿಷಯವೂ ಇಲ್ಲ. ಕುರ್‍ಆನಿನಲ್ಲೂ ತೊಡಕನ್ನು ನಿವಾರಿಸಬೇಕೆಂದು ವಿನಂತಿಸಲಾಗಿರುವುದು ನಾಲಗೆಯ  ತೊಡಕಲ್ಲ, ತನಗೆ ಮಾತನ್ನು ಅರ್ಥ ಮಾಡಿಕೊಡುವ ಯೋಗ್ಯತೆಯನ್ನು ನೀಡಬೇಕೆಂದಾಗಿತ್ತು. ಪ್ರವಾದಿತ್ವ ದೌತ್ಯ ನಿರ್ವಹಣೆಗೆ ಮತ್ತು ಸಂದೇಶ ಪ್ರಚಾರಕ್ಕೆ ಅದು ಅಗತ್ಯವಾಗಿತ್ತು. ಒಟ್ಟಿನಲ್ಲಿ ನಮ್ಮ ದೃಷ್ಟಿಯಲ್ಲಿ ತೊಡಕಿನ ವರದಿಯು ವಿಶ್ವಾಸಯೋಗ್ಯವಲ್ಲ. ಅಲ್ಲಾಹನು ಪ್ರವಾದಿಗಳನ್ನು ನೈತಿಕ ದೋಷಗಳಿಂದ ಸುರಕ್ಷಿತವಾಗಿರಿಸಿದಂತೆಯೇ ಶಾರೀರಿಕ ನ್ಯೂನತೆಗಳಿಂದಲೂ ರಕ್ಷಿಸಿದ್ದಾನೆ. ಅತ್ಯಂತ ಮಹತ್ವದ  ವಿಷಯವೇನೆಂದರೆ ಕುರ್‍ಆನಿನ ಈ ವರದಿಯನ್ನು
ಸಮರ್ಥಿಸುವ ಯಾವ ವಿಷಯವೂ ಇಲ್ಲವೆಂಬುದಾಗಿದೆ. (ತದಬ್ಬುರೆ ಕುರ್‍ಆನ್)

ಸೈಯದ್ ಮೌದೂದಿಯವರು, ಮೂಸಾರ ನಾಲಗೆಯ ತೊಡಕು ಮತ್ತು ಅದಕ್ಕೆ ಕಾರಣವಾದ ಘಟನೆ ಎರಡನ್ನೂ ತಿರಸ್ಕರಿಸಿದ್ದಾರೆ. ಅವರು ಬರೆಯುತ್ತಾರೆ- ಈ ಇಸ್ರಾಈಲಿ ವರದಿಯು ನಮ್ಮ ಕೆಲವು ವ್ಯಾಖ್ಯಾನಗಾರರಲ್ಲಿಯೂ ಸೇರಿಕೊಂಡಿದೆ. ಆದರೆ ಸಾಮಾನ್ಯ ಬುದ್ಧಿಯು ಇದನ್ನು ಒಪ್ಪುವುದಿಲ್ಲ. ಮಗುವು ಒಂದು ವೇಳೆ ಬೆಂಕಿಯ ಕೆಂಡವನ್ನು ಸ್ಪರ್ಶಿಸಿದರೂ, ಅದನ್ನು ಬಾಯಲ್ಲಿರಿಸುವ ಸಾಧ್ಯತೆ ಖಂಡಿತ ಇಲ್ಲ. ಬೆಂಕಿಯ ಬಿಸಿ ತಾಗಿದ ಕೂಡಲೇ ಕೈಯನ್ನು ಹಿಂದಕ್ಕೆಳೆಯಬಹುದಷ್ಟೇ. ಹೀಗಿರುತ್ತಾ ಅದನ್ನು ಬಾಯೊಳಗಿರಿಸುವುದು ಹೇಗೆ? ಕುರ್‍ಆನ್‍ನ  ಮಾತುಗಳಿಂದ ನಾವು ಹೀಗೆ ಗ್ರಹಿಸಬಹುದು. ಮೂಸಾರಲ್ಲಿ ಭಾಷಣದ ಕಲೆಯಿರಲಿಲ್ಲ. ಪ್ರವಾದಿತ್ವದ ನಿರ್ವಹಣೆಗೆ ಕೆಲವೊಮ್ಮೆ ಭಾಷಣ  ಮಾಡಬೇಕಾಗಿ ಬಂದರೆ (ಅದಕ್ಕಿಂತ ಮುಂಚೆ ಅವರಿಗೆ ಆ ಸಂದರ್ಭ ಬಂದಿರಲಿಲ್ಲ) ತನ್ನ ಈ ದೌರ್ಬಲ್ಯವು ಅದಕ್ಕೆ ಅಡ್ಡಿಯಾಗಬಹುದೆಂದು ಅವರು ಭಾವಿಸಿದರು. ಆದ್ದರಿಂದ ಅವರು, ದೇವಾ! ನನ್ನ ಬೋಧನೆಯನ್ನು ಜನರು ಉತ್ತಮ ರೀತಿಯಲ್ಲಿ ತಿಳಿಯಲಿಕ್ಕಾಗಿ ನನ್ನ  ನಾಲಗೆಯ ತೊಡಕನ್ನು ನಿವಾರಿಸು ಎಂದು ಪ್ರಾರ್ಥಿಸಿದ್ದರು. ಮೂಸಾರ ಈ ದೌರ್ಬಲ್ಯವನ್ನು ಬೆಟ್ಟುಮಾಡಿಯೇ ಫಿರ್‍ಔನನು ಅವರನ್ನು  ಹೀಗೆ ಮೂದಲಿಸಿದ್ದನು- ಈತನು ತನ್ನ ಮಾತನ್ನು ಸರಿಯಾಗಿ ಹೇಳಲಿಕ್ಕೂ ಅಶಕ್ತನಾಗಿದ್ದಾನೆ. (ಝುಖ್ರುಫ್: 52) ಈ ದೌರ್ಬಲ್ಯವನ್ನು  ಮನಗಂಡೇ ಅವರು ತನ್ನ ಅಣ್ಣ ಹಾರೂನ್‍ರನ್ನು ಸಹಾಯಕನಾಗಿ ಮಾಡುವಂತೆ ಅಲ್ಲಾಹನೊಡನೆ ವಿನಂತಿಸಿದ್ದರು. ಅಲ್‍ಕಸಸ್  ಅಧ್ಯಾಯದಲ್ಲಿ ಅಲ್ಲಾಹನು ಮೂಸಾರ ಮಾತನ್ನೇ ಉದ್ಧರಿಸಿದ್ದಾನೆ- ನನ್ನ ಅಣ್ಣ ಹಾರೂನ್‍ರು ನನಗಿಂತ ಉತ್ತಮ ಮಾತುಗಾರ. ಅವರನ್ನು  ನನ್ನ ಸಂಗಡ ಸಹಾಯಕನಾಗಿ ಕಳಿಸು. (ವಚನ- 34) ಕ್ರಮೇಣ ಅವರ ಈ ದೌರ್ಬಲ್ಯ ನಿವಾರಣೆಯಾಗಿ ಮುಂದೆ ಸ್ವತಃ ನಿರರ್ಗಳವಾಗಿ  ಭಾಷಣ ಮಾಡ ತೊಡಗಿದರೆಂದು ತಿಳಿದು ಬರುತ್ತದೆ. ಅದಕ್ಕೆ ಕುರ್‍ಆನ್ ಮತ್ತು ಬೈಬಲ್‍ನಲ್ಲಿ ಉದ್ಧರಿಸಿರುವ ಅವರ ಅನಂತರದ  ಉಪನ್ಯಾಸಗಳು ಅವರ ವಾಕ್ಚಾತುರ್ಯ ಮತ್ತು ನಿರರ್ಗಳತೆಗಳು ಸಾಕ್ಷಿಯಾಗಿವೆ. (ತಫ್ಹೀಮುಲ್ ಕುರ್‍ಆನ್: ಸೂರ ತಾಹಾ: ಟಿಪ್ಪಣಿ – 15)

SHARE THIS POST VIA

About editor

Check Also

ಮೃತದೇಹವನ್ನು ವಿಮಾನಗಳಲ್ಲಿ ಸಾಗಿಸುವುದರ ವಿಧಿ ಏನು?

– ಖದೀಜ ನುಸ್ರತ್ ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. …