ನಾಯಕ
ಪರಿಚಯ
ಪ್ರವಾದಿ ಮುಹಮ್ಮದ್ (ಸ) ರವರು ಓರ್ವ ಸಮಗ್ರ ನಾಯಕ. ಪ್ರವಾದಿ ಮುಹಮ್ಮದ್ (ಸ) ರವರ ನಾಯಕತ್ವದ ಗುಣಗಳನ್ನು ಮೂರು ವಿಭಾಗವಾಗಿ ವಿಂಗಡಿಸಬಹುದು. ವೈಯಕ್ತಿಕ/ವ್ಯಕ್ತಿ ಆಧಾರಿತ, ಜನ ಸಮೂಹ ಆಧಾರಿತ ಮತ್ತು ಕಾರ್ಯಭಾರ ಆಧಾರಿತ ಎಂದು ವಿಂಗಡಿಸಬಹುದು. ಈ ಎಲ್ಲಾ ವಿಭಾಗಗಳನ್ನು ಕೆಳಗೆ ಚರ್ಚಿಸಲಾಗಿದೆ:
1. ವೈಯಕ್ತಿಕ/ವ್ಯಕ್ತಿ ಆಧಾರಿತ ಗುಣಗಳು
ಪ್ರವಾದಿ (ಸ) ಮೃದುವಾಗಿ ಮಾತನಾಡಿದರು, ವಿನಮ್ರವಾಗಿ ನಡೆದಾಡಿದರು, ಪ್ರಜ್ಞಾವಂತಿಕೆಯಿಂದ ಆಹಾರ ಸೇವಿಸಿದರು, ಸಭ್ಯವಾಗಿ ವಸ್ತ್ರ ಧರಿಸಿದರು, ನಯವಾಗಿ ಸಂವಹನ ಮಾಡಿದರು, ನಿರ್ಭಯರಾಗಿ ಕೆಲಸ ಮಾಡಿದರು, ತಾಳ್ಮೆಯಿಂದ ಕೆಲಸ ಮಾಡಿದರು, ಬುದ್ಧಿವಂತಿಕೆಯಿಂದ ಚಿಂತಿಸಿದರು, ನೈಜತೆಯೊಂದಿಗೆ ವಿಶ್ವಾಸ ಹೊಂದಿದರು, ಶಿಷ್ಟವಾಗಿ ನಡೆದುಕೊಂಡರು, ಪ್ರಾಯೋಗಿಕ ಕಾರ್ಯರೂಪವಾಗಿ ಕಲಿತುಕೊಂಡರು, ಪ್ರಾಮಾಣಿಕವಾಗಿ ಸಂಪಾದಿಸಿದರು, ವ್ಯವಸ್ಥಿತವಾಗಿ ಯೋಜನೆ ರೂಪಿಸಿದರು, ಜಾಣವಾಗಿ ಖರ್ಚು ಮಾಡಿದರು, ನಿಯಮಿತವಾಗಿ ತ್ಯಾಗ ಮಾಡಿದರು, ಸಮರ್ಪಣೆಯೊಂದಿಗೆ ಆರಾಧನೆ ಮಾಡಿದರು, ಸಂತೋಷದಿಂದ ಸೇವೆ ಸಲ್ಲಿಸಿದರು ಮತ್ತು ನೆರೆಹೊರೆಯವರನ್ನು ಸರಿಯಾಗಿ ಗೌರವಿಸಿದರು, ಈ ಎಲ್ಲ ಗುಣಗಳು ಅವರ ನಾಯಕತ್ವಕ್ಕೆ ಕಾರಣವಾಯಿತು. ಪ್ರವಾದಿ (ಸ) ರವರ ವೈಯಕ್ತಿಕ ಗುಣಗಳು ಅವರನ್ನು ಸ್ಪೂರ್ತಿದಾಯಕ ವ್ಯಕ್ತಿತ್ವವನ್ನಾಗಿ ಮಾಡಿತು.
2.ಜನ ಸಮೂಹ ಆಧಾರಿತ ಗುಣಗಳು
ಪ್ರವಾದಿ (ಸ) ಜನರೊಂದಿಗೆ ಮೃದುವಾಗಿ ವರ್ತಿಸುತ್ತಿದ್ದರು, ಅವರ ಸುತ್ತಮುತ್ತ ಇರುವ ಜನರ ಬಗ್ಗೆ ಕಾಳಜಿ ವಹಿಸುತ್ತಿದ್ದರು, ಸಂಗಾತಿಗಳ ಮೇಲೆ ದಯೆ ತೋರಿಸುತ್ತಿದ್ದರು ಮತ್ತು ಕರುಣಾಮಯಿಯಾಗಿದ್ದರು, ಜನರನ್ನು ಸಮಾನವಾಗಿ ಪರಿಗಣಿಸುತ್ತಿದ್ದರು, ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಂಗತಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು, ಜನರ ಸೇವೆ ಮಾಡುತ್ತಿದ್ದರು. ಸಂಗಾತಿಗಳು, ಅನುಯಾಯಿಗಳ ಜೊತೆ ಜೊತೆಗೆ ವಾಸಿಸಿ ಕೆಲಸ ಮಾಡುತ್ತಿದ್ದರು, ಜನರು ಗಂಭೀರ ಪಾಪಗಳನ್ನು ಮಾಡಿದ್ದರೂ ಸಹ ಕ್ಷಮಿಸುತ್ತಿದ್ದರು. ಅವರ ವೈಯಕ್ತಿಕ ಗುಣ ಲಕ್ಷಣಗಳ ಅರಿವು ಹೊಂದಿದ್ದರು, ಜನರ ಹೆಸರುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದರು, ಇತರ ಧರ್ಮಗಳ ಅನುಯಾಯಿಗಳ ಮೇಲೆ ಪ್ರಭಾವ ಬೀರುತ್ತಿದ್ದರು, ಅವರನ್ನು ಸ್ವತಃ ತಾನೇ ಸಂಪರ್ಕಿಸುತ್ತಿದ್ದರು, ಭಾವನಾತ್ಮಕ ಬುದ್ಧಿವಂತಿಕೆಯೊಂದಿಗೆ ವ್ಯವಹರಿಸುತ್ತಿದ್ದರು, ಎಲ್ಲರೊಂದಿಗೆ ಹೊಂದಾಣಿಕೆ ಮತ್ತು ಅನುಭೂತಿ ವ್ಯಕ್ತಪಡಿಸತ್ತಿದ್ದರು.
ಪ್ರವಾದಿ (ಸ) ಜನರಿಗೆ ಸಹಾಯ ಮಾಡುತ್ತಿದ್ದರು. ಜನರೊಂದಿಗೆ ವ್ಯವಹರಿಸುವಾಗ ವಿನಮ್ರವಾಗಿದ್ದರು. ಎಲ್ಲರನ್ನು ಸಮಾನವಾಗಿ ಪರಿಗಣಿಸುತ್ತಿದ್ದರು. ತನಗಿಂತ ಎಲ್ಲಾ ವಿಷಯದಲ್ಲಿ ಇತರರಿಗೆ ಪ್ರಾಶಸ್ತ್ಯ ಕೊಡುತ್ತಿದ್ದರು. ಎಲ್ಲ ವಿಷಯಗಳಲ್ಲಿ ನಿಸ್ವಾರ್ಥಿಯಾಗಿದ್ದರು. ಪ್ರತೀಕಾರ ತೀರಿಸಿಕೊಳ್ಳುವಾಗ ನ್ಯಾಯ ಮತ್ತು ಬುದ್ಧಿವಂತಿಕೆಯಿಂದ ವ್ಯವಹರಿಸುತಿದ್ದರು. ಜನರೊಂದಿಗೆ ಉತ್ತಮ ಪರಸ್ಪರ ಸಂಬಂಧವನ್ನು ಹೊಂದಿದ್ದರು. ಉತ್ತಮ ಉದಾಹರಣೆ ಮಾದರಿಯನ್ನು ಸ್ಥಾಪಿಸಿ ತೋರಿಸುತ್ತಿದ್ದರು. ಉತ್ತಮ ಕೇಳುಗರಾಗಿದ್ದರು, ಜನರಿಗೆ ವಿಷಯಗಳನ್ನು ಸುಲಭಗೊಳಿಸುತ್ತಿದ್ದರು, ಟೀಕೆಗಳಿಗೆ ಎಂದೂ ಪ್ರತಿಕ್ರಿಯಿಸುತ್ತಿರಲಿಲ್ಲ, ಸೌಮ್ಯವಾಗಿ ವ್ಯವಹರಿಸುತ್ತಿದ್ದರು, ಜನರ ಮೇಲೆ ಎಂದಿಗೂ ದಬ್ಬಾಳಿಕೆ ತೋರ್ಪಡಿಸಲಿಲ್ಲ, ಸ್ವಯಂ ಪ್ರೇರಿತವಾಗಿ ಸತ್ಕರ್ಮಗಳನ್ನು ಮಾಡಲು ಜನರಿಗೆ ಪ್ರೇರಣೆ ನೀಡುತ್ತಿದ್ದರು, ಅವರ ಮನವೊಲಿಸುತ್ತಿದ್ದರು ಮತ್ತು ಅವರ ತಪ್ಪುಗಳನ್ನು ಸರಿ ಪಡಿಸುತ್ತಿದ್ದರು ಮತ್ತು ತನ್ನ ಮಾತು ಕೃತಿಯಿಂದ ಯಾರನ್ನೂ ನೋಯಿಸುತ್ತಿರಲಿಲ್ಲ.
3. ಕಾರ್ಯಭಾರ ಆಧಾರಿತ ನಾಯಕತ್ವದ ಗುಣಗಳು
ಪ್ರವಾದಿ (ಸ) ದಾರ್ಶನಿಕರಾಗಿದ್ದರು, ಯಾವಾಗಲೂ ಧ್ಯೇಯವು ಅವರ ಆದ್ಯತೆಯಾಗಿತ್ತು, ದೇವರು ಅವರಿಗೆ ವಹಿಸಿಕೊಟ್ಟಿದ್ದ ಕಾರ್ಯಭಾರವನ್ನು ಸಾಧಿಸಲು ನಿರಂತರ ಗಮನಹರಿಸುತ್ತಿದ್ದರು, ತನ್ನ ಧ್ಯೇಯ ಸಾಧನೆಗಾಗಿ ಸಂಪೂರ್ಣವಾಗಿ ಬದ್ಧರಾಗಿರುತ್ತಿದ್ದರು, ಅಚಲರಾಗಿದ್ದರು, ಅವರು ತುಂಬಾ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವವರಾಗಿದ್ದರು, ಯಾವಾಗಲೂ ಆಶಾವಾದಿಯಾಗಿದ್ದರು, ತನ್ನ ಆಡಳಿತದಲ್ಲಿ ಕಾರ್ಯಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುತ್ತಿದ್ದರು, ಯಾವುದೇ ಕಾರ್ಯಭಾರಕ್ಕಾಗಿ ಜನರನ್ನು ಕಳುಹಿಸುವಾಗ ಉತ್ತರಾಧಿಕಾರಿಗಳನ್ನು ನೇಮಕ ಮಾಡುತ್ತಿದ್ದರು, ತುಂಬಾ ಆತ್ಮವಿಶ್ವಾಸ ಹೊಂದಿದ್ದರು. ಅಸಾಧ್ಯ ಎಂದು ಪರಿಗಣಿಸುವ ಹಾದಿಯನ್ನು ಸಾಧಿಸಿ ತೋರಿಸಿದರು, ಬಹಳ ಧೈರ್ಯಶಾಲಿಯಾಗಿದ್ದರು, ನಿರಂತರವಾಗಿ ಹೊಸತನವನ್ನು ಅಳವಡಿಸುತ್ತಿದ್ದರು, ಕಷ್ಟಗಳು ಮತ್ತು ವೈಫಲ್ಯಗಳನ್ನೂ ಬಹಳ ಪರಿಣಾಮಕಾರಿಯಾಗಿ ನಿಭಾಯಿಸುತ್ತಿದ್ದರು ಮತ್ತು ಯಾವಾಗಲೂ ಹೊಂದಿಕೊಳ್ಳುವ ಸ್ವಭಾವದವರಾಗಿದ್ದರು.
ಉಪ ಸಂಹಾರ
ಪ್ರವಾದಿ (ಸ) ರವರು ಸೂಕ್ಷ್ಮ ಸಣ್ಣ ಮತ್ತು ದೊಡ್ಡ ಮಟ್ಟದಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಿದ್ದಾರೆ. ಪ್ರವಾದಿತ್ವ (ಸ) ಕ್ಕಿಂತ ಮುಂಚೆ ದೇವರ ನಿಜವಾದ ಪರಿಕಲ್ಪನೆ ಸಮಾಜದಿಂದ ಕಳೆದು ಹೋಗಿತ್ತು. ಅವರ ಆಗಮನದ ನಂತರ ದೇವರ ನಿಜವಾದ ಪರಿಕಲ್ಪನೆಯನ್ನು ಪುನಃಸ್ಥಾಪಿಸಲಾಯಿತು.
ಜನರು ಅಜ್ಞಾನದಲ್ಲಿದ್ದರು, ನೈಜ ಜ್ಞಾನವನ್ನು ಗಳಿಸಲು ಅವರು (ಸ) ಜನರನ್ನು ಪ್ರೇರೇಪಿಸಿದರು. ಜನರು ಅಂಧಕಾರದಲ್ಲಿದ್ದರು, ಅವರು (ಸ) ಅವರನ್ನು ಬೆಳಕಿನೆಡೆಗೆ ಸಾಗಿಸಿದರು. ಜನರು ಕ್ರೂರಿ ಅನಾಗರಿಕ ಮತ್ತು ನಿರ್ದಯರಾಗಿದ್ದರು, ಅವರು (ಸ) ಅವರಿಗೆ ಕರುಣೆಯನ್ನು ಭೋದಿಸಿ ದಯಾಮಯಿಯಾಗಿ ಪರಿವರ್ತಿಸಿದರು. ಜನರು ಭಯಭೀತರಾಗಿದ್ದರು, ಅವರು (ಸ) ಅವರನ್ನು ಶಾಂತಿ ಭದ್ರತೆಯೆಡೆಗೆ ಸಾಗಿಸಿದರು. ಜನರು ವರ್ಗ ಮತ್ತು ವರ್ಣಾಧಾರಿತ ತಾರತಮ್ಯದಲ್ಲ್ಲಿ ಮುಳುಗಿದ್ದರು, ಪ್ರವಾದಿ (ಸ) ಅವರಲ್ಲಿ ಸಹೋದರತೆ ಮತ್ತು ಪ್ರೀತಿಯನ್ನು ಪ್ರೇರೇಪಿಸಿದರು. ಮಕ್ಕಳನ್ನು ಗುಲಾಮರನ್ನಾಗಿಸುತ್ತಿದ್ದರು, ಮಕ್ಕಳಿಗೆ ಗೌರವ ಕೊಡಲು ಪ್ರವಾದಿ (ಸ) ಕಲಿಸಿ ಕೊಟ್ಟರು. ಹೆಣ್ಣು ಮಕ್ಕಳನ್ನು ಕೊಲ್ಲುತ್ತಿದ್ದರು, ಹೆಣ್ಣು ಮಕ್ಕಳನ್ನು ಪ್ರೀತಿ ಮತ್ತು ಗೌರವದೊಂದಿಗೆ ಆರೈಕೆ ಮಾಡುವಂತೆ ಖಾತ್ರಿ ಪಡಿಸಿದರು. ಜನರು ಮದ್ಯ ಅಮಲು ವ್ಯಸನಿಗಳಾಗಿದ್ದರು, ಅವರು (ಸ) ಅವರನ್ನು ಸಂಪೂರ್ಣ ಮದ್ಯ ಮುಕ್ತರಾಗಿಸಿದರು. ಪ್ರಭಾವಶಾಲಿ ವ್ಯಕ್ತಿಗಳು ದುರ್ಬಲರ ಸಂಪತ್ತನ್ನು, ಆಸ್ತಿಯನ್ನು ಕಬಳಿಸುತ್ತಿದ್ದರು, ಸಂಪತ್ತು ಮತ್ತು ಆಸ್ತಿ ಸರಿಯಾಗಿ ವಿತರಣೆಯಾಗಬೇಕು ಎಂಬುದನ್ನು ಪ್ರವಾದಿ (ಸ) ಖಾತ್ರಿಪಡಿಸಿಕೊಂಡರು. ಜನರು ತಮ್ಮ ಪ್ರಭಾವದ ಆಧಾರದ ಮೇಲೆ ನಾಯಕರಾಗುತ್ತಿದ್ದರು, ನಾಯಕ ಪ್ರಜಾಸತ್ತಾತ್ಮಕವಾಗಿ ಚುನಾಯಿತನಾಗಬೇಕು ಎಂದು ಅವರು(ಸ) ಖಚಿತ ಪಡಿಸಿದರು . ಆ ಸಮಾಜದಲ್ಲಿ ಲೈಂಗಿಕ ಗುಲಾಮಗಿರಿ, ನಗ್ನತೆ ಮತ್ತು ಮಹಿಳೆಯ ಮೇಲೆ ಅತ್ಯಾಚಾರ ಕಿರುಕುಳ ವಿಪರೀತವಾಗಿತ್ತು, ಮಹಿಳೆಯರಿಗೆ ನೈಜ ಸ್ಥಾನಮಾನ ಮತ್ತು ಹಕ್ಕುಗಳನ್ನು ನೀಡುವಂತೆ ಅವರು (ಸ) ಖಚಿತ ಪಡಿಸಿದರು.
ಪ್ರಾಯೋಗಿಕ ಕುರ್ಆನ್ನ ತತ್ವಗಳ ಮೇಲೆ ಮದೀನಾ ರಾಜ್ಯವನ್ನು ಪ್ರವಾದಿ (ಸ) ಮುನ್ನಡೆಸಿ, ಅಲ್ಲಿ ಸುಂದರ ಮತ್ತು ಅದ್ಭುತವಾದ ಸಮಾಜವನ್ನು ಸೃಷ್ಟಿಸಿದರು. ಜೀವನದ ಪ್ರತಿಯೊಂದು ಅಂಶಗಳಲ್ಲೂ ಇಸ್ಲಾಂ ಧರ್ಮದ ಬೋಧನೆಯು ಅವಿಭಾಜ್ಯ ಅಂಗವಾಗುವ ಸಮಾಜವನ್ನು ರೂಪಿಸಿದರು. ಅಲ್ಲಿ ವೈಯಕ್ತಿಕ, ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ ಹೀಗೆ ಯಾವ ಕ್ಷೇತ್ರದ ವ್ಯವಹಾರಗಳೇ ಆಗಿರಲಿ, ತೀರ್ಪು ಮಾತ್ರ ದೇವರು ನೀಡಿದ ಮಾರ್ಗದರ್ಶನದ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತಿತ್ತು. ಶಾಂತಿ, ಸಮೃದ್ಧಿ ಮತ್ತು ಯಶಸ್ಸಿನಿಂದ ತುಂಬಿದ ರಾಜ್ಯವನ್ನು ಪ್ರವಾದಿ (ಸ) ನಿರ್ಮಿಸಿದರು. ಕಟ್ಟಕಡೆಗೆ ಕನಿಷ್ಠ ಸಂಪನ್ಮೂಲಗಳೊಂದಿಗೆ ಬೆರಗುಗೊಳಿಸುವ ಫಲಿತಾಂಶವನ್ನು ತನ್ನ ಪ್ರವಾದಿತ್ವದ ಅವಧಿಯಲ್ಲಿ ಸಾಧಿಸಿ ತೋರಿಸಿದರು.
ಒಬ್ಬ ನಾಯಕ ತಮ್ಮ ಕಾರ್ಯಭಾರವನ್ನು ಸಮರ್ಥ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಬೇಕಾದರೆ ಅವನ ಮುಂದೆ ಸ್ಪಷ್ಟ ದೂರದೃಷ್ಟಿ ಗುರಿ ಇರಬೇಕು, ನಂತರ ತನ್ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಪರಿಶೀಲಿಸಬೇಕು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ತನ್ನ ಉದ್ದೇಶಗಳನ್ನು ಸಾಧನೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಪ್ರವಾದಿ ಮುಹಮ್ಮದ್ (ಸ) ಅವರಿಗೆ ಒಂದು ದೊಡ್ಡ ಉದ್ದೇಶ ಗುರಿ ಇತ್ತು. ಆ ಗುರಿ ಸಾಧನೆ ಅವರನ್ನು ಪ್ರೇರೇಪಿಸಿತು. ಅವರು ಸೀಮಿತ ಸಂಪನ್ಮೂಲ ಹೊಂದಿದ್ದರೂ ಕೇವಲ 23 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಬೆರಗುಗೊಳಿಸುವ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಯಿತು. ಅಷ್ಟೊಂದು ಸೀಮಿತ ಸಂಪನ್ಮೂಲಗಳ ಮೂಲಕ ಅಂತಹ ದೊಡ್ಡ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಯಿತು ಎಂದು ಹೇಳಿಕೊಳ್ಳುವ ಮತ್ತೊಬ್ಬರನ್ನು ಮಾನವಕುಲದ ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ. ಸೂಕ್ತ ಸಂಪನ್ಮೂಲಗಳು ಇದ್ದು, ಪೂರಕ ವಾತಾವರಣ ಇದ್ದಾಗ ನಾಯಕನಾಗಿ ಪಾತ್ರವನ್ನು ನಿರ್ವಹಿಸುವುದು ಸುಲಭ, ಆದರೆ ಸರಿಯಾದ ಸಂಪನ್ಮೂಲಗಳು ಇಲ್ಲ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ನಾಯಕತ್ವವನ್ನು ನಿಭಾಯಿಸುವುದು ನಿಜವಾದ ಸವಾಲು ಆಗಿದೆ.
ಲೇಖಕರು: ಸಯ್ಯದ್ ಕಾಝಿಮ್, ಬೆಂಗಳೂರು
ಅನುವಾದ : ಅಬೂ ಕುತುಬ್
IslamKannada News Portal
