Home / ಲೇಖನಗಳು / ಪ್ರವಾದಿ ಮುಹಮ್ಮದ್ (ಸ) ಎಂಬ ಶ್ರೇಷ್ಠ ಆಡಳಿತಗಾರ ; ಅವರು ಕೈಗೊಂಡ ಅಂತರ್ ಧರ್ಮೀಯ ಒಪ್ಪಂದಗಳು

ಪ್ರವಾದಿ ಮುಹಮ್ಮದ್ (ಸ) ಎಂಬ ಶ್ರೇಷ್ಠ ಆಡಳಿತಗಾರ ; ಅವರು ಕೈಗೊಂಡ ಅಂತರ್ ಧರ್ಮೀಯ ಒಪ್ಪಂದಗಳು

ಲೇಖಕರು: ಸಯ್ಯದ್ ಕಾಝಿಮ್, ಬೆಂಗಳೂರು
ಅನುವಾದ : ಅಬೂ ಕುತುಬ್

ಸಾಮಾನ್ಯವಾಗಿ ಓರ್ವ ಆಡಳಿತಗಾರ ಸ್ವತಃ ರಾಜಕಾರಣಿ ಹಾಗೂ ರಾಜತಾಂತ್ರಿಕನಾಗಿರುತ್ತಾನೆ ಅಥವಾ ಗಮನಾರ್ಹ ಸಾರ್ವಜನಿಕ ವ್ಯಕ್ತಿಯಾಗಿರುತ್ತಾನೆ. ಅವರು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದೀರ್ಘ ಗೌರವಾನ್ವಿತ ವೃತ್ತಿ ಜೀವನವನ್ನು ಹೊಂದಿರುತ್ತಾರೆ. ರಾಜ್ಯವನ್ನು ಮುನ್ನಡೆಸುವುದು ಭೂಮಿಯ ಮೇಲೆ ಅತ್ಯಂತ ಕಷ್ಟಕರ ಕೆಲಸಗಳಲ್ಲಿ ಒಂದು. ಈ ಕಾರ್ಯವನ್ನು ಪ್ರವಾದಿ ಮುಹಮ್ಮದ್ (ಸ) ಅವರು ಅತ್ಯಂತ ಕರಾರುವಾಕ್ಕಾಗಿ ಕಾರ್ಯಗತಗೊಳಿಸಿದರು. ಪ್ರವಾದಿ (ಸ) ರವರು ಕೇವಲ ರಾಜ್ಯಾಡಳಿತವನ್ನು ಮುನ್ನಡೆಸಿದ್ದಲ್ಲ ಬದಲಾಗಿ ಅವರು ಒಂದು ಹೊಸ ಆಡಳಿತಾತ್ಮಕ ರಾಜ್ಯವನ್ನೇ ಸ್ಥಾಪಿಸಿದರು.

ಕುರಾನಿನಲ್ಲಿ ದೇವರು ನೀಡಿದ ತತ್ವಗಳ ನೆಲೆಯಲ್ಲಿ ನೋಡುವಾಗ ನ್ಯಾಯದಿಂದ ಕೂಡಿದ ರಾಜ್ಯವನ್ನು ಸ್ಥಾಪಿಸುವುದು ಇಸ್ಲಾಮಿನ ಮುಖ್ಯ ಉದ್ದೇಶವಾಗಿದೆ. ಇದೇ ಉದ್ದೇಶದ ಈಡೇರಿಕೆಗಾಗಿ ಪ್ರವಾದಿ ಮುಹಮ್ಮದ್ (ಸ) ಮತ್ತು ಇತರ ಎಲ್ಲ ಪ್ರವಾದಿಗಳು ಬಂದರು. ಮದೀನಾಕ್ಕೆ ವಲಸೆ ಹೋದ ನಂತರ, ಪ್ರವಾದಿ (ಸ) ಆ ಪ್ರದೇಶವನ್ನು ಕುರಾನಿನ ಮಾರ್ಗದರ್ಶನದಂತೆ ನಡೆಯುವ ಸಮಾಜವಾಗಿ ಪರಿವರ್ತಿಸಿದರು. ಅಲ್ಲಿ ಎಲ್ಲಾ ಕಾನೂನುಗಳು ದೇವರ ಮಾರ್ಗದರ್ಶನದ ಆಧಾರದ ಮೇಲೆ ನಡೆಯುತ್ತಿತ್ತು. ಮಾತ್ರವಲ್ಲ ಆಯಾ ಧರ್ಮಗಳ ಅನುಯಾಯಿಗಳಿಗೆ ಅವರ ಧರ್ಮ ಗ್ರಂಥದಂತೆ ಬದುಕುವ ವ್ಯವಸ್ಥೆ ರೂಪಿಸಿದರು. ಅವರ ಧರ್ಮದ ಕಾನೂನಿನಂತೆ ನಡೆಯಲು ಅವರಿಗೆ ಅವಕಾಶ ನೀಡಲಾಯಿತು. ಮಕ್ಕಾದ ಹದಿಮೂರು ವರ್ಷಗಳ ಹೋರಾಟವು ಇದಕ್ಕೆ ಬಲವಾದ ಅಡಿಪಾಯವನ್ನು ಹಾಕಿತು ಮತ್ತು ಮದೀನಾ ತಲುಪಿದ ನಂತರ ಅದನ್ನು ಅನುಷ್ಠಾನಕ್ಕೆ ತರುವ ಸಮಯವಾಗಿತ್ತು. ಒಂದು ರಾಜ್ಯವನ್ನು ಸ್ಥಾಪಿಸುವುದು ಸುಲಭದ ಕೆಲಸವಲ್ಲ. ಅದು ಕೆಲವೇ ದಿನಗಳಲ್ಲಿ ಸಾಧಿಸಬಹುದಾದ ಸಂಗತಿಯೂ ಅಲ್ಲ. ಅದೊಂದು ಕಾರ್ಯ ಯೋಜನೆ, ಪ್ರಕ್ರಿಯೆ ಮತ್ತು ಹಲವು ದಿನಗಳ ಅವಿಶ್ರಾಂತ ಹೋರಾಟದ ಫಲವಾಗಿರುತ್ತದೆ. ಪ್ರವಾದಿ (ಸ) ಅಂತಹ ಆಡಳಿತಾತ್ಮಕ ರಾಜ್ಯ ಸ್ಥಾಪಿಸಲು ನಾಲ್ಕು ನಿರ್ಣಾಯಕ ಯೋಜನೆಗಳನ್ನು ಕೈಗೆತ್ತಿಕೊಂಡರು.

ಮದೀನಾದ ಸಮಾಜ ಅರಬ್ಬರು ಮತ್ತು ಯಹೂದಿಗಳ ಮಿಶ್ರಿತ ಸಮಾಜವಾಗಿತ್ತು . ಎರಡು ಪ್ರಮುಖ ಅರಬ್ ಬುಡಕಟ್ಟು ಜನಾಂಗದವರು ಮತ್ತು ಮೂರು ಸಣ್ಣ ಯಹೂದಿ ಬುಡಕಟ್ಟು ಜನಾಂಗದವರು ಇದ್ದರೂ, ಅಲ್ಲಿ ಅರಬ್ ಸಮುದಾಯವು ಯಹೂದಿಗಳಿಗಿಂತ ಸಂಖ್ಯಾ ಬಲದಲ್ಲೂ ಮತ್ತು ಅಧಿಕಾರವಾಗಿಯೂ ಪ್ರಭಾವಶಾಲಿಯಾಗಿತ್ತು. ಮಕ್ಕಾದಿಂದ ಮದೀನಾಕ್ಕೆ ವಲಸೆ ಬಂದ ನಂತರ, ಪ್ರವಾದಿ (ಸ) ರವರನ್ನು ಮದೀನಾದ ಆಡಳಿತಾಧಿಕಾರಿಯಾಗಿ ಶಾಂತಿಯುತವಾಗಿ ಸ್ವಇಚ್ಛೆಯಿಂದ ಹಾಗೂ ಬಹುಸಂಖ್ಯಾತ ಜನರ ಒಪ್ಪಂದದೊಂದಿಗೆ ಅಲ್ಲಿನ ಜನತೆ ಆಯ್ಕೆ ಮಾಡಿತು.

ಮದೀನಾದಲ್ಲಿ ಆರಂಭಿಕ ಚಟುವಟಿಕೆಗಳು

ಮದೀನಾಕ್ಕೆ ಹಿಜ್ರತ್ (ವಲಸೆ) ಬಂದ ನಂತರ ಪ್ರವಾದಿ (ಸ) ಈ ಕೆಳಗಿನ ಎರಡು ಚಟುವಟಿಕೆಗಳನ್ನು ಮದೀನಾದ ಆಡಳಿತಾಧಿಕಾರಿ ಮುಖ್ಯಸ್ಥರಾಗಿ ಪ್ರಾರಂಭಿಸಿದರು:

1. ಒಪ್ಪಂದ ಮಾಡಿಕೊಳ್ಳುವುದು

ಆಡಳಿತಾತ್ಮಕ, ರಾಜಕೀಯ ಮತ್ತು ಸೈದ್ಧಾಂತಿಕ ಐಕ್ಯತೆಯ ಬಲವಾದ ಬುನಾದಿಯಲ್ಲಿ ಹೊಸ ಇಸ್ಲಾಮಿ ಸಮುದಾಯದ ಆಧಾರ ಸ್ತಂಭಗಳು ಉತ್ತಮವಾಗಿ ಸ್ಥಾಪಿತವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ಪ್ರವಾದಿ (ಸ) ಮುಸ್ಲಿಮೇತರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಾರಂಭಿಸಿದರು. ಈ ಒಪ್ಪಂದವು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಸಂಬಂಧಗಳನ್ನು ಒಳಗೊಂಡಿತ್ತು. ಕೇವಲ ಎಲ್ಲಾ ಮಾನವ ಕುಲಕ್ಕೆ ಶಾಂತಿ, ಸುರಕ್ಷತೆ ಮತ್ತು ಸಮೃದ್ಧಿಯನ್ನು ಒದಗಿಸುವುದು ಈ ಎಲ್ಲಾ ಕಾರ್ಯಗಳ ಉದ್ದೇಶವಾಗಿತ್ತು. ಮಾತ್ರವಲ್ಲ, ಆ ಪ್ರದೇಶದಲ್ಲಿ ಪರಸ್ಪರ ಒಡನಾಟ ಮತ್ತು ಸಾಮರಸ್ಯದ ಮನೋಭಾವವನ್ನು ಉತ್ತೇಜಿಸಲು ಆಗಿತ್ತು.

ಭೌಗೋಳಿಕವಾಗಿ, ಯಹೂದಿಗಳು ಮದೀನಾ ಪ್ರದೇಶಕ್ಕೆ ತುಂಬಾ ಹತ್ತಿರದವರಾಗಿದ್ದರು. ತಮ್ಮ ದುಷ್ಟ ಉದ್ದೇಶಗಳು ಮತ್ತು ಕಹಿ ದ್ವೇಷವನ್ನು ಒಳಗೊಳಗೇ ಪೋಷಿಸುವಾಗಲೂ ಅವರು ಕನಿಷ್ಠ ಪ್ರತಿರೋಧವನ್ನು ಅಥವಾ ಸಣ್ಣದೊಂದು ದ್ವೇಷವನ್ನು ಕೂಡ ಬಾಹ್ಯವಾಗಿ ತೋರಿಸಲಿಲ್ಲ. ವಿಶ್ವಾಸ ಮತ್ತು ಸೊತ್ತಿನ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವ ಷರತ್ತುಗಳೊಂದಿಗೆ ಒಪ್ಪಂದವನ್ನು ಅಂಗೀಕರಿಸಲು ಪ್ರವಾದಿ (ಸ) ಅವರೊಂದಿಗೆ ನಿರ್ಧರಿಸಿದರು. ಗಡಿಪಾರು, ಸಂಪತ್ತು ಮತ್ತು ಭೂ ಆಸ್ತಿಯನ್ನು ವಶಪಡಿಸಿಕೊಳ್ಳುವುದು ಅಥವಾ ಹಗೆತನ, ಶತ್ರುತ್ವವನ್ನು ಒಳಗೊಂಡ ಯಾವುದೇ ತೀವ್ರ ನೀತಿಗಳನ್ನು ಅವರ ಮೇಲೆ ಹೇರಲಿಲ್ಲ.
ಈ ಒಪ್ಪಂದವು ಅಂತರ್-ಮುಸ್ಲಿಂ ಸಂಬಂಧಗಳಿಗೆ ದೊಡ್ಡ ಚೌಕಟ್ಟು ಒದಗಿಸಿತು. ಒಪ್ಪಂದದ ಪ್ರಮುಖ ನಿಬಂಧನೆಗಳು ಈ ಕೆಳಗಿನಂತಿವೆ:

• ಯಹೂದಿಗಳು ಮತ್ತು ವಿಶ್ವಾಸಿಗಳು ಒಂದೇ ಸಮುದಾಯ ಎಂಬ ನೆಲೆಯಲ್ಲಿ ಪರಿಗಣಿಸಲಾಗುವುದು. ಯಹೂದಿಗಳು ತಮ್ಮ ಧರ್ಮ ವಿಶ್ವಾಸದಂತೆ ಬದುಕಬಹುದು, ಪ್ರಚಾರ ಮಾಡಬಹುದು ಮತ್ತು ಮುಸ್ಲಿಮರು ತಮ್ಮ ಧರ್ಮದಂತೆ ಬದುಕಬಹುದು, ಪ್ರಚಾರ ಮಾಡಬಹುದು.
• ಯಹೂದಿಗಳು ಮತ್ತು ಮುಸ್ಲಿಮರು ತಮ್ಮ ತಮ್ಮ ಖರ್ಚಿಗೆ ಅವರವರೇ ಜವಾಬ್ದಾರರಾಗಿರುತ್ತಾರೆ, ಹೊಣೆಗಾರರಾಗಿರುತ್ತಾರೆ.
• ಯಾವುದೇ ಮೂರನೇ ವಿಭಾಗದಿಂದ ಆಕ್ರಮಣವಾದರೆ ಒಟ್ಟಾಗಿ ಪರಸ್ಪರ ಸಹಕಾರದೊಂದಿಗೆ ಎದುರಿಸುವುದು.
• ಯಾವುದೇ ವಿಷಯದಲ್ಲಿ ಪರಸ್ಪರ ಸಲಹೆ ಸಮಾಲೋಚನೆಯೊಂದಿಗೆ ಮುನ್ನಡೆಯಲಾಗುವುದು. ಪರಸ್ಪರ ಸಂಬಂಧವನ್ನು ಒಳಿತು ಸದಾಚಾರದ ಮೇಲೆ ಸ್ಥಾಪಿತವಾಗಿರಬೇಕು , ಕೆಡುಕು ಪಾಪವನ್ನು ಸಂಪೂರ್ಣವಾಗಿ ಹೊರಗಿಡಲಾಗುವುದು.
• ಇತರರ ಪೂರ್ವಾಗ್ರಹಕ್ಕೆ ಒಳಗಾಗಿ ಪಾಪಗಳನ್ನು ಮಾಡಬಾರದು.
• ಅನ್ಯಾಯಕ್ಕೊಳಗಾದ ವಿಭಾಗಕ್ಕೆ ನೆರವು ನೀಡಲಾಗುವುದು.
• ವಿಶ್ವಾಸಿಗಳ ಜೊತೆಗೂಡಿ ಹೋರಾಡುವವರೆಗೆ ಯಹೂದಿಗಳೂ ಯುದ್ಧ ವೆಚ್ಚಕ್ಕೆ ಕೊಡುಗೆ ನೀಡಬೇಕು.
• ಈ ಒಪ್ಪಂದಕ್ಕೆ ಒಳಪಡುವ ಎಲ್ಲರಿಗೂ ಮದೀನಾ ಪವಿತ್ರ ಮತ್ತು ಪರಮ ಪಾವನವಾಗಿರುವುದು.
• ಈ ಒಪ್ಪಂದಕ್ಕೆ ಸಹಿ ಮಾಡಿದವರ ನಡುವೆ ಯಾವುದೇ ಭಿನ್ನಾಭಿಪ್ರಾಯ ತಲೆದೋರಿದರೆ ಸರ್ವಶ್ರೇಷ್ಠ ದೇವರು ಮತ್ತು ದೇವರ ಪ್ರವಾದಿ (ಸ) ಈ ವಿವಾದವನ್ನು ಬಗೆಹರಿಸುವರು.
• ಈ ಒಪ್ಪಂದಕ್ಕೆ ಸಹಿ ಹಾಕಿದವರು ಖುರೈಶ್ ರನ್ನು ವಾಣಿಜ್ಯಿಕವಾಗಿ ಬಹಿಷ್ಕರಿಸಬೇಕು; ಅವರಿಗೆ ಯಾವುದೇ ಬೆಂಬಲ ನೀಡುವುದನ್ನು ಅವರು ತೊರೆಯಬೇಕು.
• ಮದೀನಾದ ಮೇಲೆ ವಿದೇಶಿ ದಾಳಿ ನಡೆದ ಸಂದರ್ಭದಲ್ಲಿ, ಅದನ್ನು ಎದುರಿಸಲು ಆಯಾ ಪ್ರದೇಶದಲ್ಲಿ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು.
• ಕಾನೂನು ಬದ್ಧ ಸೇಡು ತೀರಿಸುವುದಕ್ಕೆ ಈ ಒಪ್ಪಂದವು ಎರಡೂ ಪಕ್ಷಗಳಿಗೆ ಅಡ್ಡಿಯಾಗಬಾರದು.

ಪ್ರವಾದಿವರ್ಯರಿಗೆ ಮದೀನಾದ ಅಧಿಕಾರ ಸಿಕ್ಕಿದಾಗ ಮತ್ತು ಅವರು ಅಲ್ಲಿನ ಸರ್ವ ಜನತೆಗೆ ಎಲ್ಲಾ ರೀತಿಯ ಭದ್ರತೆಯನ್ನು ಖಚಿತ ಪಡಿಸಿದ ಬಳಿಕ ಈ ಒಪ್ಪಂದಕ್ಕೆ ಸರ್ವರಿಂದ ಅಂಗೀಕಾರ ಸಿಕ್ಕಿತು. ನಂತರ ಮದೀನಾ ಮತ್ತು ಅದರ ಉಪನಗರಗಳು ಸಮ್ಮಿಶ್ರ ರಾಜ್ಯವಾಗಿ ಮಾರ್ಪಟ್ಟವು. ಮದೀನಾ ರಾಜಧಾನಿಯಾಗಿಯೂ ಮತ್ತು ಪ್ರವಾದಿ (ಸ) ಅಲ್ಲಿನ ಆಡಳಿತಾಧಿಕಾರಿಯಾಗಿ ಕಾರ್ಯಭಾರ ನಿರ್ವಹಿಸಲು ತೊಡಗಿದರು. ಶಾಂತಿ ಮತ್ತು ಸುರಕ್ಷತೆಯ ವಲಯವನ್ನು ವಿಸ್ತರಿಸಲು ಪ್ರವಾದಿ (ಸ) ‘ತನ್ನ ರಾಜ್ಯ’ ದಲ್ಲಿ ವಾಸಿಸುವ ಇತರ ಜನಾಂಗದವರೊಂದಿಗೂ ಇದೇ ರೀತಿಯ ಒಪ್ಪಂದಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದರು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …