Home / ಲೇಖನಗಳು / ಪ್ರವಾದಿ ಮುಹಮ್ಮದ್ (ಸ) ಎಂಬ ಶ್ರೇಷ್ಠ ಆಡಳಿತಗಾರ ; ಮದೀನದಲ್ಲಿ ಹೊಸ ಮಿಲಿಟರಿ ರಚನೆ ಮತ್ತು ಪ್ರದರ್ಶಿಸಿದ ರಾಜಕೀಯ ಧೋರಣೆಗಳು

ಪ್ರವಾದಿ ಮುಹಮ್ಮದ್ (ಸ) ಎಂಬ ಶ್ರೇಷ್ಠ ಆಡಳಿತಗಾರ ; ಮದೀನದಲ್ಲಿ ಹೊಸ ಮಿಲಿಟರಿ ರಚನೆ ಮತ್ತು ಪ್ರದರ್ಶಿಸಿದ ರಾಜಕೀಯ ಧೋರಣೆಗಳು

ಒಂದು ಹೊಸ ರಾಜ್ಯ ರಚನೆಯಾದ ಬಳಿಕ ಮದೀನಾದ ಮೇಲೆ ಮಕ್ಕಾದ ಜನರು ಆಕ್ರಮಣ ಮಾಡುವ ಬೆದರಿಕೆ ಇತ್ತು. ಒಂದು ವೇಳೆ ಮದೀನಾ ರಾಜ್ಯ ಬೆಳೆದು ಶಕ್ತಿಯಾಗಿ ಹೊರಹೊಮ್ಮಿದರೆ ಅವರು ಇತರ ಪ್ರದೇಶಗಳಿಂದಲೂ ದಾಳಿ ನಡೆಸಬಹುದು ಎಂಬ ಅಪಾಯ ಇತ್ತು. ಆದ್ದರಿಂದ ಪ್ರತಿ ತಂತ್ರವಾಗಿ ಶಕ್ತವಾದ ಸೈನ್ಯವನ್ನು ನಿರ್ಮಿಸುವುದು ಬಹಳ ಅವಶ್ಯಕವಾಗಿತ್ತು. ವಲಸೆಯ ನಂತರ ಯುದ್ಧಗಳಲ್ಲಿ ಹೋರಾಡಲು ಮದೀನಾ ವಾಸಿಗಳ ಹೆಚ್ಚಿನ ಯುದ್ಧ ಸಂಪನ್ಮೂಲಗಳು ಇರಲಿಲ್ಲ, ಆದರೆ ಪ್ರವಾದಿ (ಸ) ತನ್ನಲ್ಲಿ ಲಭ್ಯವಿರುವ ಸೀಮಿತ ಸಂಪನ್ಮೂಲಗಳೊಂದಿಗೆ ಯುದ್ಧ ಯೋಜನೆ ರೂಪಿಸಿ ಹೋರಾಟ ನಡೆಸಿದರು.

ಮದೀನಾದಲ್ಲಿ ಪ್ರವಾದಿ (ಸ) ತಮ್ಮ ಮಿಲಿಟರಿ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಮೊಟ್ಟಮೊದಲು ರಾಜಕೀಯ ವೈಶಿಷ್ಟ್ಯಗಳನ್ನು ಅನ್ವೇಷಿಸಲು ಮದೀನಾ ಪ್ರದೇಶದ ಸುತ್ತ ಮುತ್ತ ಮತ್ತು ಮೆಕ್ಕಾಗೆ ಹಾದು ಹೋಗುವ ರಸ್ತೆಗಳ ಭೌಗೋಳಿಕ ಸಮೀಕ್ಷೆ ನಡೆಸುವ ಜೊತೆಗೆ ಹತ್ತಿರದ ಬುಡಕಟ್ಟು ಜನಾಂಗದವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಮೀಕ್ಷೆ ಗಸ್ತು ನಡೆಸುವ ನಿಯೋಗ ರೂಪಿಸಿದರು. ಮದೀನಾದ ಬಹುದೇವಾರಾಧಕರು ಮತ್ತು ಯಹೂದಿಗಳು ಮತ್ತು ಅದರ ಸುತ್ತಮುತ್ತಲಿನ ಬೆಡೌಯಿನ್ (ಅರಬ್ ಬುಡಕಟ್ಟು) ಗಳ ಮೇಲೆ ಪ್ರಭಾವ ಬೀರಲು ಪ್ರವಾದಿ (ಸ) ಬಯಸಿದ್ದರು.

ಯಾಕೆಂದರೆ ಮುಸ್ಲಿಮರು ಈಗ ತಮ್ಮ ಹಳೆಯ ಭಯವನ್ನು ಮೀರಿ ಪ್ರಬಲರಾಗಿದ್ದಾರೆ, ಮಾತ್ರವಲ್ಲ ಒಂದು ವೇಳೆ ಯಾರಾದರೂ ಅವರ ಮೇಲೆ ಹಾನಿ ಮಾಡಲು ಬಯಸಿದರೆ ಅವರ ವಿರುದ್ಧ ಯುದ್ಧ ಮಾಡುವಷ್ಟು ಅವರು ಪ್ರಬಲರಾಗಿದ್ದಾರೆ. ಮಕ್ಕಾ ಕುರೈಶರು ಮದೀನಾದ ಮೇಲೆ ಯಾವುದೇ ಮಿಲಿಟರಿ ಆಕ್ರಮಣ ಮಾಡುವುದನ್ನು ನಿರುತ್ತೇಜಿಸಲು ಮತ್ತು ಒಂದು ವೇಳೆ ಅವರು ಆಕ್ರಮಣ ಮಾಡಿದರೆ ಅವರ ಆರ್ಥಿಕ ಜೀವನ ಮತ್ತು ಜೀವನೋಪಾಯಗಳಿಗೂ ಅಪಾಯ ಉಂಟಾಗಬಹುದು. ಹಾಗೆಯೇ ಮಕ್ಕಾದಲ್ಲಿ ಬಂಧನಕ್ಕೊಳಗಾದ ಅಸಹಾಯಕ ಮುಸ್ಲಿಮರನ್ನು ಹಿಂಸಿಸುವುದನ್ನು ತಡೆಯಲು ಪ್ರವಾದಿ (ಸ) ತಮ್ಮ ಅನುಯಾಯಿಗಳ ಶಕ್ತಿಯನ್ನು ಪ್ರದರ್ಶಿಸಲು ಬಯಸಿದ್ದರು.

ಪ್ರವಾದಿಯ ಸಂಗಾತಿಗಳು ವೃತ್ತಿಪರ ಸೈನಿಕರಲ್ಲ, ಅವರು ಕೇವಲ ಜನಸಾಮಾನ್ಯರಾಗಿದ್ದರು. ಆದ್ದರಿಂದ ಪ್ರವಾದಿ (ಸ) ಅವರ ದೈಹಿಕ ಮತ್ತು ಆಧ್ಯಾತ್ಮಿಕ ತರಬೇತಿಯ ಮೇಲೆ ಕೇಂದ್ರೀಕರಿಸಿದರು. ದೈಹಿಕ ಸುದೃಢ ತರಬೇತಿಯ ದೃಷ್ಟಿಕೋನದಿಂದ, ಪ್ರವಾದಿವರ್ಯರ ಸಂಗಾತಿಗಳ ಬದುಕು ದೈಹಿಕ ಚಟುವಟಿಕೆಯಿಂದ ಕೂಡಿತ್ತು. ಏಕೆಂದರೆ ಅವರು ಕೃಷಿಕರಾಗಿದ್ದರು. ಈ ನಿಟ್ಟಿನಲ್ಲಿ ದೈಹಿಕ ಸಾಮರ್ಥ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿರಲಿಲ್ಲ. ಆದಾಗ್ಯೂ, ನ್ಯೂನತೆಗಳ ಬಗ್ಗೆ ಪ್ರವಾದಿ (ಸ) ಗಮನ ಹರಿಸಿ ಅವರಿಗೆ ಈಜು, ಗುಂಡು ಹಾರಿಸುವುದು ಮತ್ತು ಕುದುರೆ ಸವಾರಿ ಕಲಿಯುವಂತೆ ಮಾರ್ಗದರ್ಶನ ನೀಡಿದರು.

ಆಧ್ಯಾತ್ಮಿಕ ತರಬೇತಿಗೆ ಸಂಬಂಧಿಸಿದಂತೆ,ವಿವಿಧ ಹೇಳಿಕೆಗಳೊಂದಿಗೆ ಸಂಗಾತಿಗಳನ್ನು ಪ್ರವಾದಿ (ಸ) ಪ್ರೇರೇಪಿಸಿದರು. ಪ್ರವಾದಿ (ಸ) ಹೇಳಿದರು, “ಸ್ವರ್ಗವು ಕತ್ತಿಗಳ ನೆರಳಿನಲ್ಲಿದೆ” (ಬುಖಾರಿ ಮತ್ತು ಮುಸ್ಲಿಂ). ಪ್ರವಾದಿ (ಸ) ಹೇಳಿದರು, “ಇಡೀ ತಿಂಗಳ ಉಪವಾಸ ಮತ್ತು ತಿಂಗಳಿಡೀ ಪ್ರಾರ್ಥನೆ ಸಲ್ಲಿಸುವುದಕ್ಕಿಂತ ದೇವರ ಹಾದಿಯಲ್ಲಿ ನೀಡುವ ಒಂದು ದಿನ ಉತ್ತಮವಾಗಿದೆ” (ಮುಸ್ಲಿಂ). ಪ್ರವಾದಿ (ಸ) ಅವರು, “ಯುದ್ಧ ಪ್ರಾರಂಭವಾಗುವ ಮೊದಲು ಶ್ರೇಣಿಯಲ್ಲಿ ನಿಲ್ಲುವುದು ಅರವತ್ತು ವರ್ಷಗಳ ಕಾಲ ದೇವರನ್ನು ಆರಾಧಿಸುವುದಕ್ಕಿಂತ ಉತ್ತಮವಾಗಿದೆ” (ಅಲ್-ಹಕೀಮ್).

ಮಕ್ಕಾದ ಖುರೈಶ್‌ನೊಂದಿಗಿನ ಮುಸ್ಲಿಮರು ನಡೆಸಿದ ಮೊದಲ ಯುದ್ಧ ಬದ್ರ್ ಯುದ್ಧ. ಈ ಯುದ್ಧವು ಹಿಜ್ರತ್ ನಡೆದ ಎರಡನೇ ವರ್ಷದಲ್ಲಿ ನಡೆಯಿತು. ಈ ಯುದ್ಧದಲ್ಲಿ 300 ಕ್ಕೂ ಹೆಚ್ಚು ಸಹಚರರು ಭಾಗವಹಿಸಿದರು. ಪ್ರವಾದಿಯವರ ಸೈನ್ಯವು ಮುಹಾಜಿರೀನ್ ಮತ್ತು ಅನ್ಸಾರ್ ರನ್ನು ಒಳಗೊಂಡಿತ್ತು. ಆಧ್ಯಾತ್ಮಿಕವಾಗಿ ಮತ್ತು ದೈಹಿಕವಾಗಿ ಹೋರಾಟಕ್ಕೆ ಸಿದ್ಧರಾಗಿರುವ ಜನರನ್ನು ಸೃಷ್ಟಿಸಲು ಕೇವಲ ಒಂದು ವರ್ಷದಲ್ಲಿ ಪ್ರವಾದಿ (ಸ) ಅವರಿಗೆ ಸಾಧ್ಯವಾಯಿತು.

ಪ್ರವಾದಿ (ಸ) ರವರು ಪ್ರದರ್ಶಿಸಿದ ರಾಜಕೀಯ ಗುಣಲಕ್ಷಣಗಳು ಈ ಕೆಳಗಿನಂತಿವೆ:

1. ಭದ್ರತೆ
ಪ್ರವಾದಿ ಮುಹಮ್ಮದ್ (ಸ) ಸಂರಚನೆ ಮಾಡಿದ ರಾಜಕೀಯ ಸ್ವರೂಪವು ಮದೀನಾ ರಾಜ್ಯ ಮತ್ತು ಅಲ್ಲಿನ ಜನರ ನಡುವಿನ ಸಂಬಂಧದಲ್ಲಿ ಪರಸ್ಪರ ಭದ್ರತೆಯನ್ನು ಒದಗಿಸಿತು; ಸಮಾಜದಲ್ಲಿನ ಯಹೂದಿಗಳು, ಬಹುದೇವಾರಾಧಕರು ಮತ್ತು ಕಪಟ ವಿಶ್ವಾಸಿಗಳು ಒಳಗೊಂಡಿದ್ದರು. ಆದರೆ ಅವರಿಗೆ ಅಲ್ಲಿನ ಬಾಂಧವ್ಯ, ಏಕತೆ ಮತ್ತು ಒಗ್ಗಟ್ಟನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅಲ್ಲಿನ ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಪ್ರವಾದಿಯರಿಗೆ ಸುಲಭವಾಯಿತು. ಪ್ರವಾದಿ (ಸ) ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವು ಮುಸ್ಲಿಮರು ಮತ್ತು ಮುಸ್ಲಿಮೇತರರ ನಡುವೆ ಭದ್ರತೆಯ ಭಾವನೆಯನ್ನು ಬಲಪಡಿಸಿತು. ಮುಸ್ಲಿಂ ಮತ್ತು ಮುಸ್ಲಿಮೇತರರನ್ನು ಅಲ್ಲಿ ನ್ಯಾಯ ಮತ್ತು ಸಮಾನತೆಯ ತತ್ವಕ್ಕೆ ಅನುಗುಣವಾಗಿ ಪರಿಗಣಿಸಲಾಯಿತು.

2. ಸ್ವಾತಂತ್ರ್ಯ
ಒಬ್ಬ ವ್ಯಕ್ತಿಯು ಇತರರಿಗೆ ಹಾನಿ ಮಾಡಬಾರದು ಎಂಬ ಮಿತಿಯಲ್ಲಿರುವವರೆಗೂ ಅಲ್ಲಿ ಸ್ವಾತಂತ್ರ್ಯವನ್ನು ಖಾತರಿಪಡಿಸಲಾಯಿತು. ಪ್ರತಿಯೊಬ್ಬ ವ್ಯಕ್ತಿಯನ್ನು ಅಲ್ಲಿ ಅವನ ಸಾಮಾಜಿಕ ಸ್ಥಿತಿ, ಆರ್ಥಿಕ ಸ್ಥಿತಿ ಅಥವಾ ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ಸಮಾನವಾಗಿ ಪರಿಗಣಿಸಲಾಗುತ್ತಿತ್ತು. ಎಲ್ಲಾ ಸಮುದಾಯದವರಿಗೆ ಸಮಾಜವು ಸುರಕ್ಷಿತ ಸ್ಥಳವಾಗಿ ಉಳಿಯುವುದನ್ನು ಖಾತ್ರಿಪಡಿಸಲಾಯಿತು. ಈ ನಿಟ್ಟಿನಲ್ಲಿ ಸಮಾಜದ ಸುರಕ್ಷತೆಯಾಗಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂಬ ಭರವಸೆಯಡಿಯಲ್ಲಿ ಸ್ವಾತಂತ್ರ್ಯವನ್ನು ಖಾತರಿಪಡಿಸಲಾಯಿತು.

3. ವೈಯಕ್ತಿಕ ಹಕ್ಕುಗಳು
ಪ್ರವಾದಿ (ಸ) ಅವರು “ ನೀವು ಸಮಾಜದ ಜನರನ್ನು ಗುಲಾಮರನ್ನಾಗಿ ಮಾಡಿದ್ದೀರಿ, ಆದರೆ ಅವರ ತಾಯಂದಿರು ಅವರನ್ನು ಸ್ವತಂತ್ರವಾಗಿ ಜನ್ಮ ನೀಡಿದರು” (ಅಹ್ಸನಾಲ್ಮಹಜೀರ್). ಪ್ರವಾದಿ (ಸ) ರವರು ವ್ಯಕ್ತಿಗಳ ಗೌರವದ ಬಗ್ಗೆ ತುಂಬಾ ಕಾಳಜಿಯನ್ನು ಹೊಂದಿದ್ದರು ಎಂಬುದನ್ನು ಆಡಳಿತದ ಈ ತತ್ವವು ತಿಳಿಸುತ್ತದೆ. ನಿಸ್ಸಂದೇಹವಾಗಿ ಈ ಸಿದ್ಧಾಂತದ ಪ್ರವರ್ತಕರೆಂದು ನಾವು ಪ್ರವಾದಿ (ಸ) ಅವರನ್ನು ಘೋಷಿಸಬಹುದು. ಮಾತ್ರವಲ್ಲ,ಒಬ್ಬ ವ್ಯಕ್ತಿ ಎಂಬ ನೆಲೆಯಲ್ಲಿ ಮನುಷ್ಯನಿಗೆ ಮಾನವೀಯ ಗೌರವದ ನೀಡಬೇಕು ಎಂಬ ನೀತಿ, ಧೋರಣೆಯನ್ನು ಪ್ರವಾದಿವರ್ಯರು ಘೋಷಿಸುತ್ತಾರೆ. ಅವರು (ಸ) ಹೇಳಿದರು, “ಕೆಟ್ಟ ಜನರು ಯಾರೆಂದರೆ ಮನುಷ್ಯರನ್ನು ಖರೀದಿಸಿ ಮಾರಾಟ ಮಾಡುವವರು” (ತಿರ್ಮಿದಿ).

4. ಧಾರ್ಮಿಕ ಸ್ವಾತಂತ್ರ್ಯ
ಧರ್ಮದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ, ಪ್ರವಾದಿ (ಸ) ಅವರು ದೇವರ ಸಂದೇಶವಾಹಕರಾಗಿದ್ದರೂ ಜನರು ಯಾವುದೇ ರೀತಿಯ ಧರ್ಮವನ್ನು ಅನುಸರಿಸಲು ಮತ್ತು ಆಚರಿಸಲು ಸ್ವೀಕರಿಸಲು ಸ್ವತಂತ್ರರು ಎಂದು ಪ್ರವಾದಿ (ಸ) ಪ್ರತಿಪಾದಿಸಿದರು. ಧರ್ಮದ ವಿಷಯದಲ್ಲಿ ಯಾವುದೇ ಬಲವಂತ ಒತ್ತಾಯ ಇಲ್ಲ ಎಂದು ಹೇಳಿದರು.

ಕುರ್‌ಆನ್ ಕೂಡ ಹೀಗೆ ಹೇಳುತ್ತದೆ, لَا إِكْرَاهَ فِي الدِّينِ ۖ قَدْ تَبَيَّنَ الرُّشْدُ مِنَ الْغَيِّ ۚ فَمَنْ يَكْفُرْ بِالطَّاغُوتِ وَيُؤْمِنْ بِاللَّهِ فَقَدِ اسْتَمْسَكَ بِالْعُرْوَةِ الْوُثْقَىٰ لَا انْفِصَامَ لَهَا ۗ وَاللَّهُ سَمِيعٌ عَلِيمٌ ‘ಧರ್ಮದ ವಿಷಯದಲ್ಲಿ ಯಾವುದೇ ಒತ್ತಾಯ ಬಲಾತ್ಕಾರಗಳಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಬೇರ್ಪಡಿಸಲ್ಪಟ್ಟಿದೆ. ಇನ್ನು ‘ತಾಗೂತ’ (ಅತಿಕ್ರಮ)ನ್ನು ನಿರಾಕರಿಸಿ ಅಲ್ಲಾಹನಲ್ಲಿ ವಿಶ್ವಾಸವಿಟ್ಟಾತನು ಎಂದೆಂದಿಗೂ ಮುರಿಯದಂತಹ ಬಲವಾದ ಆಧಾರವನ್ನು ನೆಚ್ಚಿಕೊಂಡನು. (ಅವನು ಆಶ್ರಯ ಪಡೆದ) ಅಲ್ಲಾಹ್ ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ..(ಅಧ್ಯಾಯ 2: ಅಲ್ ಬಕರಃ,ಸೂಕ್ತ : 256)

ಪ್ರವಾದಿ (ಸ) ಎಂದಿಗೂ ಜನರನ್ನು ಬಲವಂತವಾಗಿ ಇಸ್ಲಾಂ ಧರ್ಮದ ಕಡೆಗೆ ತರಲು ಬಯಸಲಿಲ್ಲ ಎಂದು ಈ ವಚನವು ಸ್ಪಷ್ಟವಾಗಿ ಹೇಳುತ್ತದೆ. ಪ್ರವಾದಿ (ಸ) ರವರ ಕರ್ತವ್ಯವೆಂದರೆ ದೇವರ ಸಂದೇಶವನ್ನು ಜನರಿಗೆ ತಲಪಿಸುವುದೇ ಹೊರತು ಅವರನ್ನು ಬಲವಾಗಿ ಇಸ್ಲಾಂಗೆ ಮತಾಂತರ ಮಾಡುವುದಲ್ಲ.

5. ಸಮಾನತೆ
ದೇವರು ಹೇಳುತ್ತಾನೆ, “ಓ ಪೈಗಂಬರರೇ, ನಾವು ಈ ಗ್ರಂಥವನ್ನು ನಿಮಗೆ ಕಳುಹಿಸಿದೆವು. ಇದು ಸತ್ಯದೊಂದಿಗೆ ಬಂದಿದೆ ಮತ್ತು ‘ಅಲ್ ಕಿತಾಬ್’ನ ಪೈಕಿ ತನ್ನ ಮುಂದಿರುವುದನ್ನೆಲ್ಲ ದೃಢಪಡಿಸುವಂತಹದೂ ಅದನ್ನು ಸಂರಕ್ಷಿಸುವಂತಹದೂ ಆಗಿರುತ್ತದೆ. ಆದುದರಿಂದ ನೀವು ಅಲ್ಲಾಹನಿಂದ ಅವತೀರ್ಣಗೊಂಡ ಕಾನೂನಿನ ಪ್ರಕಾರ ಜನರ ವ್ಯವಹಾರಗಳನ್ನು ತೀರ್ಮಾನಿಸಿರಿ ಮತ್ತು ನೀವು ನಿಮ್ಮ ಬಳಿಗೆ ಬಂದಿರುವ ಸತ್ಯದಿಂದ ವಿಮುಖರಾಗಿ, ಅವರ ಇಚ್ಛೆಗಳನ್ನನುಸರಿಸಬೇಡಿರಿ. ನಾವು ನಿಮ್ಮ (ಮಾನವರ) ಪೈಕಿ ಪ್ರತಿಯೊಬ್ಬನಿಗೆ ಒಂದು ಧರ್ಮಶಾಸ್ತ್ರ ಮತ್ತು ಕರ್ಮ ಮಾರ್ಗವನ್ನು ನಿಶ್ಚಯಿಸಿದೆವು. ನಿಮ್ಮ ದೇವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನು ಒಂದೇ ‘ಸಮುದಾಯ’ವನ್ನಾಗಿಯೂ ಮಾಡಲು ಸಾಧ್ಯವಿತ್ತು. ಆದರೆ ಅವನು ನಿಮಗೆ ಏನು ನೀಡಿರುವನೋ ಅದರಲ್ಲಿ ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ ಹೀಗೆ ಮಾಡಿದನು. ಆದುದರಿಂದ ಸತ್ಕರ್ಮಗಳಲ್ಲಿ ಪರಸ್ಪರ ಸ್ಪರ್ಧಿಸಲು ಪ್ರಯತ್ನಿಸಿರಿ. ಕೊನೆಗಂತು ನಿಮಗೆಲ್ಲರಿಗೂ ಅಲ್ಲಾಹನ ಕಡೆಗೆ ಮರಳಿ ಹೋಗಲಿಕ್ಕಿದೆ. ಆಗ ನೀವು ಭಿನ್ನಾಭಿಪ್ರಾಯವಿರಿಸಿಕೊಳ್ಳುತ್ತಿರುವ ವಿಷಯಗಳ ವಸ್ತುಸ್ಥಿತಿಯನ್ನು ಅವನು ನಿಮಗೆ ತೋರಿಸಿಕೊಡುವನು. ”(ಕುರ್‌ಆನ್ 5:48).

ಯಾವುದೇ ನಿರ್ಧಾರ ತೀರ್ಮಾನ ತೆಗೆದುಕೊಳ್ಳುವಾಗ ರಾಜ್ಯವು, ವಿಶೇಷವಾಗಿ ನ್ಯಾಯಾಂಗವು ನಿಷ್ಪಕ್ಷಪಾತವಾಗಿರಬೇಕು ಎಂಬುದನ್ನು ದೇವರು ಕಡ್ಡಾಯಗೊಳಿಸಿದ್ದಾನೆ. ಈ ಉಲ್ಲೇಖವು ಸಮಾನತೆಯ ನಿಯಮ ಮತ್ತು ಮಾನವೀಯತೆಯ ಗೌರವವನ್ನು ಸ್ಪಷ್ಟಪಡಿಸುತ್ತದೆ.

ಒಮ್ಮೆ ಖುರೈಶ್ ಗೋತ್ರದ ಮಹಿಳೆಯೊಬ್ಬರು ಏನೋ ಕದ್ದರು. ಆ ಗೋತ್ರದ ಜನರು ಒಸಾಮಾ (ರ) ಅವರನ್ನು ಪ್ರವಾದಿ (ಸ) ರನ್ನು ಕಳುಹಿಸಿ ಆ ಮಹಿಳೆಯನ್ನು ಬಿಟ್ಟು ಬಿಡುವಂತೆ ಕೋರಿದರು. ಒಸಾಮಾ (ರ) ಪ್ರವಾದಿ (ಸ) ರೊಂದಿಗೆ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ಪ್ರವಾದಿಯವರ (ಸ) ಮುಖಭಾವವು ಬದಲಾಯಿತು. ಅವರು (ಸ) ಜನರನ್ನು ಉದ್ದೇಶಿಸಿ ಹೀಗೆ ಹೇಳಿದರು, ಹಲವು ಜನಾಂಗಗಳು ನಾಶವಾದವು, ಯಾಕೆಂದರೆ ಅವರ ಶ್ರೀಮಂತರು ಕದ್ದರೆ ಬಿಟ್ಟು ಬಿಡುತ್ತಿದ್ದರು ಮತ್ತು ಬಡವರು ಕದ್ದರೆ ಶಿಕ್ಷಿಸುತ್ತಿದ್ದರು. ದೇವರಾಣೆ ಒಂದು ವೇಳೆ ನನ್ನ ಮಗಳು ಫಾತಿಮಾ ಕದ್ದರೂ ಆಕೆಯ ಕೈಕಡಿಯಲಾಗುವುದು ಎಂದು ಹೇಳಿದರು.

6. ವಿದೇಶ ನೀತಿಗಳು
ಪ್ರವಾದಿ (ಸ) ಇತರ ಸಮಾಜಗಳು ಮತ್ತು ಧರ್ಮಗಳ ಮುಖಂಡರ ಜೊತೆಗೆ ಸೌಮ್ಯವಾಗಿ ಮತ್ತು ಉದಾರವಾಗಿ ವರ್ತಿಸಿದರು. ಸಮಾಜದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು, ಶಾಂತಿಯುತ ಸಂಬಂಧವನ್ನು ಕಾಯ್ದುಕೊಳ್ಳಲು ಅವರಿಗೆ ಗೌರವವನ್ನು ನೀಡಿದರು. ಅವರ ಈ ಸ್ವಭಾವವು ಅವರ ವಿದೇಶಾಂಗ ನೀತಿಯ ಒಂದು ಭಾಗವಾಗಿತ್ತು. ಪ್ರವಾದಿ (ಸ) ಹೇಳಿದರು, “ಯಾವುದೇ ಒಂದು ಗೋತ್ರದ ಮುಖ್ಯಸ್ಥನು ನಿಮ್ಮ ಬಳಿಗೆ ಬಂದಾಗ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ” (ಇಬ್ನ್ ಮಜಾ). ಈ ವಿಷಯದಲ್ಲಿ ಧರ್ಮಗಳ ವ್ಯತ್ಯಾಸ ಇಲ್ಲ. ಪ್ರವಾದಿ (ಸ) ಕ್ರೈಸ್ತ ನಾಯಕರೊಂದಿಗೆ ವಿನಯದಿಂದ ನಡೆಸಿಕೊಂಡರು ಮತ್ತು ಅವರ ಸ್ಥಾನಕ್ಕೆ ಹೆಚ್ಚಿನ ಗೌರವವನ್ನು ತೋರಿಸಿದರು.

7. ಸಮಾಲೋಚನೆ
ಅಧಿಕಾರ ಮತ್ತು ಸ್ಥಿರತೆಯ ಕೇಂದ್ರೀಕರಣವನ್ನು ರಚಿಸಿದ ನಂತರ ಸರ್ಕಾರದ ಮನೋಧರ್ಮದಲ್ಲಿ ಸಮಾಲೋಚನೆಗೆ ಹೆಚ್ಚು ಆದ್ಯತೆ ನೀಡಿದರು. ಅವರು (ಸ) ಎಲ್ಲಾ ಸರ್ಕಾರಿ ಕೆಲಸಗಳನ್ನು ಸಮಾಲೋಚನೆಯ ಬೆಳಕಿನಲ್ಲಿ ನಿರ್ಧರಿಸಬೇಕು ಎಂದು ಆದೇಶಿಸಿದರು. ಪ್ರವಾದಿ (ಸ) ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಎಂದಿಗೂ ತಮ್ಮನ್ನು ಸರ್ವಾಧಿಕಾರಿ ಎಂದು ಘೋಷಿಸಲಿಲ್ಲ. ಸರ್ವಾಧಿಕಾರಿಗಳು, ಕಪಟಿಗಳು ಮತ್ತು ಮೇಲ್ವರ್ಗ ಮತ್ತು ಕೆಳವರ್ಗ ಎಂಬ ಶ್ರೇಣೀಕೃತ ವ್ಯವಸ್ಥೆಯನ್ನು ಪ್ರವಾದಿ (ಸ) ರವರು ತಿರಸ್ಕರಿಸಿದರು. ಆಡಳಿತದ ಉತ್ತಮ ಮಾರ್ಗವೆಂದರೆ ರಾಜ್ಯದ ಕ್ಯಾಬಿನೆಟ್‌ನೊಂದಿಗೆ ನಿಯಮಿತವಾಗಿ ಸಭೆ ನಡೆಸುವುದು ಎಂದು ಪ್ರವಾದಿ (ಸ) ನಂಬಿದ್ದರು.

8. ಪಕ್ಷಪಾತರಹಿತ ನೇಮಕಾತಿಗಳು
ಇಸ್ಲಾಮಿ ಅಧಿಕಾರ ಇರುವ ವಿವಿಧ ಭಾಗಗಳಿಗೆ ಅಧಿಕಾರಿಗಳನ್ನು ನೇಮಿಸಲಾಯಿತು. ಅಧಿಕಾರಿಯು ಕೆಲಸದ ಸ್ವರೂಪವನ್ನು ತಿಳಿದಿರಬೇಕು ಎಂಬುದು ನೇಮಕಾತಿಯ ಪ್ರಮಾಣಿತ ಅವಶ್ಯಕತೆಯಾಗಿತ್ತು. ಹೊಸದಾಗಿ ನೇಮಕಗೊಳ್ಳುವ ಅಧಿಕಾರಿಯು ಕೆಲಸದ ಸ್ವರೂಪದಲ್ಲಿ ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ, ಜವಾಬ್ದಾರಿ ನಿರ್ವಹಿಸುವಾಗ ಖುರಾನ್ ಮತ್ತು ಸುನ್ನತ್ ನ ಮಾನದಂಡ ಪ್ರಕಾರ ಕೈಗೊಳ್ಳುತ್ತಾನೆಯೇ ಎಂಬುದರ ಖಾತರಿಯನ್ನು ಸರ್ಕಾರ ಮಾಡುತ್ತಿತ್ತು. ಅಂತಹ ಮುಖ್ಯಸ್ಥರನ್ನು ನೇಮಕ ಮಾಡುವಾಗ ರಕ್ತ ಸಂಬಂಧಗಳು ಅಥವಾ ಸಾಮಾಜಿಕ ಪ್ರಭಾವಗಳನ್ನು ಎಂದಿಗೂ ಪ್ರವಾದಿ (ಸ) ಪರಿಗಣಿಸಲಿಲ್ಲ. ಭವಿಷ್ಯದಲ್ಲಿ ಅಧಿಕಾರಿಯನ್ನು ನೇಮಿಸುವಾಗ ಅನುಸರಿಸಬೇಕಾದ ಮಾನದಂಡಗಳು ಹೇಗಿರಬೇಕು ಎಂಬುದನ್ನು ಪ್ರವಾದಿ (ಸ) ಮಾದರಿಯಾಗಿ ತೋರಿಸಿಕೊಟ್ಟರು. ಅಂತಹ ಕೆಲವು ನೇಮಕಾತಿಗಳನ್ನು ಮಾಡುವಾಗ ಪ್ರವಾದಿ (ಸ) ರವರು ತನ್ನ ಸಂಗಾತಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ವ್ಯಕ್ತಿಯ ನೇಮಕಾತಿ ಅಥವಾ ವ್ಯಕ್ತಿಗೆ ಜವಾಬ್ದಾರಿಯನ್ನು ನೀಡುವ ಮೊದಲು ಅಧಿಕಾರಿಯ ಗುಣ ಲಕ್ಷಣಗಳನ್ನು ಪರಿಶೀಲಿಸುತ್ತಿದ್ದರು.

ಉಪಸಂಹಾರ
ರಾಜಕಾರಣಿಯಾಗಿ, ಶಾಂತಿ, ನ್ಯಾಯ ಮತ್ತು ಸುರಕ್ಷತೆಯ ವಾತಾವರಣವನ್ನು ಪ್ರವಾದಿ (ಸ) ಸ್ಥಾಪಿಸಿದರು. ಪ್ರವಾದಿ (ಸ) ಅವರ ನಾಯಕತ್ವದಲ್ಲಿ ಎಲ್ಲಾ ಸಮುದಾಯಗಳ ಜನರು ನೆಮ್ಮದಿದಾಯಕ ಜೀವನ ನಡೆಸಿದರು. ಅದು ಸಂತೋಷ ತುಂಬಿದ ಮತ್ತು ಎಲ್ಲಾ ರೀತಿಯ ದುಃಖ ಮತ್ತು ದುಃಖಗಳಿಂದ ಮುಕ್ತವಾದ ರಾಜ್ಯವಾಗಿತ್ತು. ಪ್ರವಾದಿ (ಸ) ರವರ ರಾಜಕಾರಣದ ಸಮಯದಲ್ಲಿ ಅವರು ದೇವರ ಸಂದೇಶವನ್ನು ಮನಮುಟ್ಟುವಂತೆ ನೀಡಿದರು. ಬದರ್ ಯುದ್ಧದಲ್ಲಿ ಮುಸ್ಲಿಂ ಸೈನ್ಯವು 313 ಆಗಿತ್ತು, ಈ ಯುದ್ಧವು ಕ್ರಿ.ಶ 624 ರಲ್ಲಿ ನಡೆಯಿತು, ಆದರೆ 7 ವರ್ಷಗಳ ನಂತರ, ಕ್ರಿ.ಶ 630 ರಲ್ಲಿ, ಮಕ್ಕಾ ವಿಜಯ ನಡೆದಾಗ, ಮುಸ್ಲಿಂ ಸೈನ್ಯವು 10,000 ಸೈನಿಕರನ್ನು ಒಳಗೊಂಡಿತ್ತು.

ಲೇಖಕರು: ಸಯ್ಯದ್ ಕಾಝಿಮ್, ಬೆಂಗಳೂರು
ಅನುವಾದ : ಅಬೂ ಕುತುಬ್

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …