ಉತ್ತರ: ಇಸ್ಲಾಮಿನಲ್ಲಿ ಪೌರೋಹಿತ್ಯವಿಲ್ಲ. ಧಾರ್ಮಿಕ ವಿಧಿಗಳನ್ನು ನಿರ್ವಹಿಸಲು ಯಾವುದೇ ವಿಶಿಷ್ಟ ವರ್ಗದ ಅಗತ್ಯವಿಲ್ಲ. ಇಸ್ಲಾಮಿನಲ್ಲಿ ಸನ್ಯಾಸವಿಲ್ಲ. ಧರ್ಮದ ಜ್ಞಾನ, ಕುರ್ಆನಿನ ವಿದ್ಯೆ, ದೇವಭಕ್ತಿ ಮತ್ತು ಧರ್ಮನಿಷ್ಠೆ ಇವುಗಳೇ ಇಮಾಮತ್ಗೆ(ನೇತೃತ್ವ) ಬೇಕಾದ ಗುಣಗಳು. ಈ ಗುಣಗಳಿರುವ ಯಾವ ವ್ಯಕ್ತಿಯೂ ಇಮಾಮತ್(ನೇತೃತ್ವ) ಮಾಡಬಹುದು. ಅವನ ಕುಲಗೋತ್ರಗಳಿಗಾಗಲೀ ವರ್ಣ, ವರ್ಗಗಳಿಗಾಗಲೀ ಯಾವುದೇ ಮಹತ್ವವಿಲ್ಲ.
ಇಮಾಮತ್ಗೆ ನೇಮಿಸಲ್ಪಟ್ಟ ವ್ಯಕ್ತಿ ಕಾರಣಾಂತರದಿಂದ ಯಾವುದಾದರೂ ನಮಾಝ್ಗೆ ಸಮಯಕ್ಕೆ ಸರಿಯಾಗಿ ಬರದೇ ಇದ್ದರೆ ಅವರ ಸ್ಥಾನದಲ್ಲಿ ನಮಾಝ್ಗೆ ಸೇರಿದವರ ಪೈಕಿ ಕುರ್ಆನ್ ಹೆಚ್ಚು ಬಲ್ಲವರು ಮತ್ತು ಹೆಚ್ಚು ದೇವಭಕ್ತಿಯುಳ್ಳವರನ್ನು ಇಮಾಮತ್ಗೆ ನಿಲ್ಲಿಸಲಾಗುತ್ತದೆ. ನಮಾಝ್ನಲ್ಲಿ ಎಲ್ಲರೂ ಸಮಾನವಾಗಿ ಒಂದೇ ಪಂಕ್ತಿಯಲ್ಲಿ ಭುಜಕ್ಕೆ ಭುಜ, ಪಾದಕ್ಕೆ ಪಾದ ತಾಗಿಸಿ ಸಾಲಾಗಿ ನಿಲ್ಲುತ್ತಾರೆ. ಮೊದಲು ಬಂದವರು ಮುಂದಿನ ಸಾಲಲ್ಲಿ ಮತ್ತು ಅನಂತರ ಬಂದವರು ಹಿಂದಿನ ಸಾಲುಗಳಲ್ಲಿ ನಿಲ್ಲಬೇಕು. ಇಲ್ಲಿ ಯಾರಿಗೂ ಸ್ಥಳ ಕಾದಿರಿಸುವಿಕೆಯಿಲ್ಲ. ಯಾರನ್ನೂ ಕಾಯುವ ಪ್ರಸಂಗವಿಲ್ಲ.
IslamKannada News Portal
