Home / ಪ್ರಶ್ನೋತ್ತರ / ಪವಿತ್ರ ಕುರ್‍ಆನ್ ಮುಹಮ್ಮದ್ ಪೈಗಂಬರರ ಕೃತಿಯೇ?

ಪವಿತ್ರ ಕುರ್‍ಆನ್ ಮುಹಮ್ಮದ್ ಪೈಗಂಬರರ ಕೃತಿಯೇ?

ಉತ್ತರ: ಇಸ್ಲಾಮ್ ಧರ್ಮದ ಬಗ್ಗೆ ಹಾಗೂ ಪವಿತ್ರ ಕುರ್‍ಆನಿನ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕೆಲವರು ಪವಿತ್ರ ಕುರ್‍ಆನನ್ನು ಪ್ರವಾದಿ ಮುಹಮ್ಮದ್‍ರವರ(ಸ) ಕೃತಿಯೆಂದು ಹೇಳುವುದಿದೆ. ಆದರೆ ಇದು ತಪ್ಪು. ಪವಿತ್ರ ಕುರ್‍ಆನ್ ಮನುಷ್ಯ ಕೃತಿಯಲ್ಲವೆಂದೂ ಅದು ಸರ್ವಲೋಕ ಪರಿಪಾಲಕನಾದ ಅಲ್ಲಾಹನ ವಚನವೆಂದೂ ಸ್ವಯಂ ಆ ಗ್ರಂಥವೇ ಪ್ರತಿಪಾದಿಸುತ್ತದೆ. ಅಲ್ಲಾಹನು ತನ್ನ ವಚನವನ್ನು ದೇವದೂತರಾದ ಜಿಬ್ರೀಲ್‍ರ(ಅ) ಮೂಲಕ ತನ್ನ ದಾಸರಾದ ಮುಹಮ್ಮದ್‍ರವರ(ಸ) ಮೇಲೆ ಅವತೀರ್ಣಗೊಳಿಸಿದನು. ಈ ವಾಸ್ತವಿಕತೆಯನ್ನು ಪವಿತ್ರ ಕುರ್‍ಆನ್ ಅನೇಕ ಕಡೆ ಸಾರಿ ಹೇಳಿದೆ:
“ಇದು ಸರ್ವಲೋಕಗಳ ಪಾಲಕ ಪ್ರಭುವಿನಿಂದ ಅವತೀರ್ಣಗೊಂಡಿದೆ. ನೀವು (ದೇವ ವತಿಯಿಂದ ದೇವ ಸೃಷ್ಟಿಗಳಿಗೆ) ಎಚ್ಚರಿಕೆ ನೀಡುವವರಲ್ಲಿ ಸೇರಲಿಕ್ಕಾಗಿ, ಪ್ರಾಮಾಣಿಕ ಆತ್ಮವು ಇದರ ಜೊತೆ ನಿಮ್ಮ ಹೃದಯಕ್ಕೆ ಇಳಿದಿದೆ. ಇದು ಸುಸ್ಪಷ್ಟ ಅರಬೀ ಭಾಷೆಯಲ್ಲಿದೆ.”(26:192-195)

ಪವಿತ್ರ ಕುರ್‍ಆನಿಗಿಂತ ಮುಂಚೆ ಅವತೀರ್ಣಗೊಂಡ ದೇವಗ್ರಂಥಗಳಾದ ತೌರಾತ್ ಮತ್ತು ಇಂಜೀಲ್‍ಗಳಲ್ಲಿ ಇದರ ಬಗ್ಗೆ ಭವಿಷ್ಯವಾಣಿ ಮತ್ತು ಸುವಾರ್ತೆಗಳಿದ್ದುವು. ಒಂದು ಅಂತಿಮ ದೇವಗ್ರಂಥ ಬರಲಿಕ್ಕಿದೆ ಮತ್ತು ಓರ್ವ ಅಂತಿಮ ಪ್ರವಾದಿ ಬರಲಿಕ್ಕಿರುವರು ಎಂದು ಅವು ಭವಿಷ್ಯ ನುಡಿದಿದ್ದುವು. ಪವಿತ್ರ ಕುರ್‍ಆನ್ ಆ ಭವಿಷ್ಯ ನುಡಿಗಳಿಗೆ ಅನುಗುಣವಾಗಿಯೇ ಇದೆ ಎಂಬುದನ್ನು ಆ ಗ್ರಂಥದಲ್ಲೇ ಸ್ಪಷ್ಟಪಡಿಸಲಾಗಿದೆ- “ಕುರ್‍ಆನಿನಲ್ಲಿ ವಿವರಿಸಲ್ಪಡುತ್ತಿರುವುದೆಲ್ಲ ಕೃತಕ ವಿಷಯಗಳಲ್ಲ. ಪರಂತು ಇದಕ್ಕಿಂತ ಮುಂಚೆ ಬಂದಿರುವ ಗ್ರಂಥಗಳ ದೃಢೀಕರಣವೂ ಪ್ರತಿಯೊಂದು ವಿಷಯದ ವಿವರಣೆಯೂ ಸತ್ಯವಿಶ್ವಾಸವನ್ನು ಸ್ವೀಕರಿಸಿಕೊಳ್ಳುವವರಿಗೆ ಸನ್ಮಾರ್ಗದರ್ಶನವೂ ಅನುಗ್ರಹವೂ ಆಗಿರುತ್ತದೆ.” (12:111)

ಬೈಬಲ್‍ನ ಪುರಾವೆಗಳು
ತಮ್ಮ ಅನುಯಾಯಿಗಳಿಂದ ಹಸ್ತಕ್ಷೇಪಕ್ಕೆ ಒಳಗಾಗಿ ತಿದ್ದುಪಡಿಗೊಂಡು ವಿಕೃತವಾಗಿರುವ ತೌರಾತ್ ಮತ್ತು ಇಂಜೀಲ್‍ಗಳ ಇಂದಿನ ಅವಶೇಷವಾದ ಬೈಬಲ್‍ನಲ್ಲಿ ಕೂಡಾ ಅನೇಕ ಕಡೆಗಳಲ್ಲಿ ಈ ಸುವಾರ್ತೆಯ ಉಲ್ಲೇಖವಿರುವುದು ಕಂಡು ಬರುತ್ತದೆ.
(ನೋಡಿರಿ: ಮತ್ತಾಯನು ಬರೆದ ಸುವಾರ್ತೆ 21:42-45, ಯೋಹಾನನು ಬರೆದ ಸುವಾರ್ತೆ 16:12-13, 14:15-17, 29-3ಂ, 16:7-8)
ಯೇಸು ಅವರಿಗೆ ಹೇಳಿದನು: ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದ ಆಯಿತು; ನಿಮಗೆ ಆಶ್ಚರ್ಯವಾಗಿ ತೋರುತ್ತದೆ ಎಂಬ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ? ಆದ್ದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವುದು. ಈ ಕಲ್ಲಿನ ಮೇಲೆ ಬೀಳುವವನು ತುಂಡು ತುಂಡಾಗುವನು; ಇದು ಯಾರ ಮೇಲೆ ಬೀಳುತ್ತದೋ ಅವನನ್ನು ಪುಡಿಪುಡಿ ಮಾಡುವುದು.
(ಮತ್ತಾಯನು ಬರೆದ ಸುವಾರ್ತೆ- 21:42-45)
ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು; ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ. ಸತ್ಯದ ಆತ್ಮ ಬಂದಾಗ ಆತನು ನಿಮ್ಮನ್ನು ನಡೆಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ಸೇರಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತಾಡದೆ ಕೇಳಿದ ಮಾತುಗಳನ್ನೇ ಆಡುವನು ಮತ್ತು ಮುಂದಾಗುವ ಸಂಗತಿಗಳನ್ನು ನಿಮಗೆ ತಿಳಿಸುವನು.
(ಯೋಹಾನನು ಬರೆದ ಸುವಾರ್ತೆ- 16:12-13)
ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಗೊಂಡು ನಡೆಯುವಿರಿ. ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾ ಕಾಲ ನಿಮ್ಮ ಸಂಗಡ ಇರುವುದಕ್ಕೆ ಕೊಡುವನು.
(ಯೋಹಾನನು ಬರೆದ ಸುವಾರ್ತೆ- 14:15-17)
ಆದರೆ ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು. (ಯೋಹಾನನು ಬರೆದ ಸುವಾರ್ತೆ- 14:26)
ಅದೆಲ್ಲಾ ನಡೆಯುವಾಗ ನೀನು ನಮ್ಮನ್ನು ನಂಬುವಂತೆ ಅದು ನಡೆಯುವುದಕ್ಕಿಂತ ಮುಂಚೆಯೇ ಈಗ ನಿಮಗೆ ಹೇಳಿದ್ದೇನೆ. ಇನ್ನು ನಾನು ನಿಮ್ಮ ಸಂಗಡ ಬಹಳ ಮಾತುಗಳ ನ್ನಾಡುವುದಿಲ್ಲ. ಏಕೆಂದರೆ ಇಹಲೋಕಾಧಿಪತಿಯು ಬರುತ್ತಾನೆ. ಅವನಿಗೆ ಸಂಬಂಧಪಟ್ಟದ್ದು ಯಾವುದೊಂದೂ ನನ್ನಲ್ಲಿಲ್ಲ. (ಯೋಹಾನನು ಬರೆದ ಸುವಾರ್ತೆ- 14:29-3೦)
ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ಕೇಳಿರಿ; ನಾನು ಹೋಗುವುದು ನಿಮಗೆ ಹಿತಕರವಾಗಿದೆ, ಹೇಗೆಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿ ಕೊಡುತ್ತೇನೆ. ಆತನು ಬಂದು ಪಾಪ, ನೀತಿ, ನ್ಯಾಯ ತೀರ್ಪಿಗೆ ಈ ವಿಷಯಗಳಲ್ಲಿ ಲೋಕಕ್ಕೆ ಅರುಹನ್ನು ಹುಟ್ಟಿಸುವನು. (ಯೋಹಾನನು ಬರೆದ ಸುವಾರ್ತೆ- 16:7-8)
ಈ ಉದ್ಧರಣೆಗಳಲ್ಲಿ ಬಂದಿರುವ ಭವಿಷ್ಯವಾಣಿಯು ಪ್ರವಾದಿ ಮುಹಮ್ಮದ್(ಸ) ಮತ್ತು ಪವಿತ್ರ ಕುರ್‍ಆನಿನ ಬಗೆಗಾಗಿದೆ ಎಂಬುದು ಸ್ಪಷ್ಟ.
‘ಮುಖ್ಯವಾದ ಮೂಲೆಗಲ್ಲಾಯಿತು’ ಅಂದರೆ ಕೊನೆಗೆ ನಾಯಕತ್ವ ಪದವಿ ಪಡೆಯಿತು ಎಂದರ್ಥ.
“ಆದರೆ ಸದ್ಯಕ್ಕೆ ನೀವು ಅದನ್ನು ಹೊರಲಾರಿರಿ” ಎಂದರೆ ಇನ್ನಷ್ಟು ದೇವ ವಿಧಿಗಳ ಭಾರ ಹೊರುವ ಶಕ್ತಿ ನಿಮ್ಮಲ್ಲಿಲ್ಲ. ಆದ್ದರಿಂದ ಅಲ್ಲಾಹನು ನನ್ನ ಮೂಲಕ ತನ್ನಧರ್ಮವನ್ನು ಪೂರ್ಣಗೊಳಿಸದೆ ಅದಕ್ಕಾಗಿ ಇನ್ನೊಬ್ಬ ಪ್ರವಾದಿಯನ್ನು ನಿಯೋಗಿಸುವನೆಂದರ್ಥ.
‘ಸಹಾಯಕ’ ಎಂಬ ಪದದ ಹಿಬ್ರೂ ಮೂಲವನ್ನು ಅರಬಿ ಬೈಬಲ್‍ನಲ್ಲಿ ‘ಫಾರ್ಕಲೀತ್’ ಎಂದು ಅನುವಾದಿಸಲಾಗಿದೆ. ಇದು ಮುಹಮ್ಮದ್ ಮತ್ತು ಅಹ್ಮದ್ ಎಂಬ ಪದಗಳಿಗೆ ಸಮಾನವಾದ ಅರ್ಥವುಳ್ಳ ಪದವಾಗಿದೆ.
‘ಸದಾ ಕಾಲ ನಿಮ್ಮ ಸಂಗಡ’ ಇರುವುದಕ್ಕೆ ಎಂದರೆ ಅವನು ತರುವ ಧರ್ಮಗ್ರಂಥವು ತೌರಾತ್ ಮತ್ತು ಇಂಜೀಲ್‍ಗಳಂತೆ ಒಂದು ಸೀಮಿತ ಕಾಲಾವಧಿಗೆ ಆಗಿರದೆ ಸಾರ್ವಕಾಲಿಕ ವಾಗಿರುವುದೆಂದರ್ಥ.
‘ಇಹಲೋಕಾಧಿಪತಿ’ ಎಂದರೆ ಸಂಪೂರ್ಣ ವಿಶ್ವ ಮತ್ತು ಸಮಸ್ತ ಮಾನವಕುಲಕ್ಕೆ ಅಲ್ಲಾಹನ ಪ್ರವಾದಿ. ಯಾವುದೇ ಪ್ರತ್ಯೇಕ ಜನಾಂಗ ಅಥವಾ ರಾಷ್ಟ್ರಕ್ಕೆ ಅಲ್ಲ.
“ಅವನಿಗೆ ಸಂಬಂಧಪಟ್ಟ ಯಾವೊಂದೂ ನನ್ನಲ್ಲಿಲ್ಲ” ಎಂದರೆ ಅವನು ನನಗಿಂತ ಬಹಳ ಉನ್ನತ ಸ್ಥಾನಮಾನಗಳ ಪ್ರವಾದಿಯಾಗಿರುವನು ಎಂದರ್ಥ.
ಈ ವಚನಗಳ ಇಂಗಿತ ತಿಳಿಯಲು ಈ ಸಂಕ್ಷಿಪ್ತ ವಿವರಣೆ ಸಾಕು.

ಪವಿತ್ರ ಕುರ್‍ಆನ್ ಮಾನವ ಕೃತಿಯಾಗಿದ್ದರೆ 23 ವರ್ಷಗಳ ದೀರ್ಘ ಅವಧಿಯಲ್ಲಿ ಭಿನ್ನ ಭಿನ್ನ ಪರಿಸ್ಥಿತಿಗಳಲ್ಲಿ ಪೂರ್ಣಗೊಂಡ 114 ಅಧ್ಯಾಯಗಳ ಮತ್ತು 6236 ಸೂಕ್ತಗಳ ಈ ಬೃಹತ್ ಗ್ರಂಥದಲ್ಲಿ ಒಂದಲ್ಲ ಒಂದು ಕಡೆ ವಿರೋಧಾಭಾಸವಿರುವುದು ಅನಿವಾರ್ಯವಾಗಿತ್ತು. ಅಂತೆಯೇ ಇದರ ವಿಷಯಗಳು, ತತ್ವಗಳು, ವಿಚಾರಗಳು ಮತ್ತು ಶಿಕ್ಷಣಗಳಲ್ಲಿ ಸ್ವಾಭಾವಿಕವಾಗಿಯೂ ಭಿನ್ನತೆಗಳಿರುತ್ತಿದ್ದುವು. ಆದರೆ ಪವಿತ್ರ ಕುರ್‍ಆನಿನಲ್ಲಿ ಇಂತಹ ವಿರೋಧಾಭಾಸದ ಛಾಯೆಯನ್ನು ನಾವು ಕಾಣುವುದಿಲ್ಲ. ಕುರ್‍ಆನ್ ಸ್ವತಃ ಈ ರೀತಿ ಹೇಳುತ್ತದೆ:
“ಇದು ಅಲ್ಲಾಹನ ಹೊರತು ಇನ್ನಾರ ಕಡೆಯಿಂದಾದರೂ ಆಗಿರುತ್ತಿದ್ದರೆ ಇದರಲ್ಲಿ ಅನೇಕ ವಿರೋಧಾಭಾಸಗಳು ಕಂಡು ಬರುತ್ತಿದ್ದುವು.” (4:82)

SHARE THIS POST VIA

About editor

Check Also

ಮೃತದೇಹವನ್ನು ವಿಮಾನಗಳಲ್ಲಿ ಸಾಗಿಸುವುದರ ವಿಧಿ ಏನು?

– ಖದೀಜ ನುಸ್ರತ್ ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. …