Home / ಪ್ರಶ್ನೋತ್ತರ / ಸ್ವರ್ಗ-ನರಕ ವಿಶ್ವಾಸ ಮತ್ತು ವಂಚಕ ವ್ಯವಸ್ಥೆ?

ಸ್ವರ್ಗ-ನರಕ ವಿಶ್ವಾಸ ಮತ್ತು ವಂಚಕ ವ್ಯವಸ್ಥೆ?

ಧರ್ಮಗಳು ದರಿದ್ರ ಹಾಗು ಶೋಷಿತ ವರ್ಗಗಳಿಗೆ ಸ್ವರ್ಗ ಲಭಿಸುತ್ತದೆಂಬ ಆಸೆ ಹುಟ್ಟಿಸಿ, ಅವರ ಹೋರಾಟದ ಆವೇಶವನ್ನು ತಣಿಸುವಂತಹ ಕೆಲಸ ಮಾಡುತ್ತಿದೆಯಲ್ಲವೇ? ಸ್ವರ್ಗ-ನರಕದ ಕುರಿತು ಮಾತುಗಳಲ್ಲಿ ಶ್ರೀಮಂತ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶವಿದೆಯಲ್ಲವೇ?

ಧರ್ಮದ ಕುರಿತು ವ್ಯಾಪಕವಾಗಿರುವ ತಪ್ಪು ಕಲ್ಪನೆಗಳು ಇಂತಹ ಸಂಶಯಗಳಿಗೆ ಮೂಲ ಕಾರಣ. ಮರ್ದಿತರ -ಶೋಷಿತರ ಕಾವಲುಗಾರನಿಂದ ಧರ್ಮಗಳ ಕುರಿತು ಇಂತಹ ಗಂಭೀರ ಆರೋಪಗಳು ಬೆಳೆದು ಬರಲು ವಿಶ್ವಾಸಿಗಳು ಹಾಗೂ ಅಲ್ಲದವರೂ ಸಮಾನ ಕಾರಣಕರ್ತರಾಗಿದ್ದಾರೆ. ಸ್ವರ್ಗ-ನರಕ ವಿಶ್ವಾಸವು ಎಲ್ಲಾ ರೀತಿಯ ಶೋಷಣೆ ವಂಚನೆಗಳನ್ನು ಕೊನೆಗೊಳಿಸಿ, ಸಾಮಾಜಿಕ ಸಮಾನತೆ, ನ್ಯಾಯಯುತ ಆರ್ಥಿಕತೆಯನ್ನು ಸ್ಥಾಪಿಸುತ್ತದೆ. ಪವಿತ್ರ ಕುರ್‌ಆನಿನ ಆರ್ಥಿಕ ದೃಷ್ಟಿಕೋನವನ್ನು ಗಮನಿಸುವ ಎಲ್ಲರಿಗೂ ಇದು ಸ್ಪಷ್ಟವಾಗುತ್ತದೆ.

1.ಇಸ್ಲಾಮೀ ದ್ರಷ್ಟಿಕೋನದಂತೆ ಹಣವು ದೇವನದ್ದಾಗಿದೆ. ಮನುಷ್ಯರಲ್ಲಿ ಯಾರಿಗೂ ಅದರ ಮೇಲೆ ಸಂಪೂರ್ಣ ಅಧಿಕಾರವಿಲ್ಲ, ಅದನ್ನು ಖರ್ಚು ಮಾಡುವ ಅವಕಾಶ ಮಾತ್ರವಿದೆ. ಅದು ಕೂಡ ಅನಿಯಂತ್ರಿತವಾಗಿರದೆ ದೇವನಿಯಮಗಳಿಗೆ ಬದ್ಧವಾಗಿರಬೇಕು. ಶ್ರೀಮಂತರ ಸೊತ್ತಿನಲ್ಲಿ ದರಿದ್ರರಿಗೂ, ಅನಾಥರಿಗೂ ಹಕ್ಕಿದೆ ಎಂದು ಪವಿತ್ರ ಕುರ್‌ಆನ್ ಸ್ಪಷ್ಟಪಡಿಸಿದೆ. ಅದನ್ನು ನಿರಾಕರಿಸಿದರೆ ಅದು ಗಂಭೀರವಾದ ಧರ್ಮವಿರೋಧಿ ಕಾರ್ಯವೆಂದು ಇಸ್ಲಾಮ್ ಕಲಿಸುತ್ತದೆ. ನರಕ ಶಿಕ್ಷೆಗೆ ಕಾರಣವಾಗುವ ಕೆಡುಕುಗಳನ್ನು ಎರಡು ವಿಧಗಳಾಗಿ ವಿಂಗಡಿಸಿದೆ. ಅದರಲ್ಲಿ ಒಂದು ದರಿದ್ರರಿಗೆ ಹಾಗೂ ಅನಾಥರಿಗೆ ಆಹಾರ ನೀಡಲು ಪ್ರೇರೆಪಿಸದವನು ಎಂದು ಇಸ್ಲಾಮ್ ಹೇಳುತ್ತದೆ.

ಅಲ್ಲಾಹನು ಹೇಳುತ್ತಾನೆ:
ಯಾರ ಕರ್ಮಪತ್ರವನ್ನು ಅವನ ಎಡಗೈಯಲ್ಲಿ ಕೊಡಲಾಗುವುದೋ ಅವನು ಹೇಳುವನು ‘ಅಯ್ಯೋ’ ನನ್ನ ಕರ್ಮಪತ್ರವನ್ನು ನನಗೆ ಕೊಡದೆ ಇರುತ್ತಿದ್ದರೆ ಮತ್ತು ನನ್ನ ಕರ್ಮ ವೃತ್ತಾಂತವೇನೆಂದು ನನಗೆ ತಿಳಿಯದೆ ಇರುತ್ತಿದ್ದರೆ! ಅಯ್ಯೋ (ಭೂಲೋಕದಲ್ಲಿ ಬಂದಿದ್ದು ನನ್ನ ಈ ಮರಣವೇ ನಿರ್ಣಾಯಕವಾಗಿರುತ್ತಿದ್ದರೆ! ನನ್ನ ಸಂಪತ್ತು ಇಂದು ನನಗೇನೂ ಪ್ರಯೋಜನ ಕೊಡಲಿಲ್ಲ. ನನ್ನ ಅಂಹಕಾರವೆಲ್ಲವೂ ಕೊನೆಗೊಂಡಿತು. (ಆಗ ಹೀಗೆ ಅಪ್ಪಣೆಯಾಗುವುದು ಇವನನ್ನು ಹಿಡಿಯಿರಿ ಮತ್ತು ಇವನಿಗೆ ಕಂಠ ಕಡಗವನ್ನು ಹಾಕಿರಿ, ಅನಂತರ ಇವನನ್ನು ನರಕದೊಳಕ್ಕೆ ತಳ್ಳಿಬಿಡಿರಿ. ಆ ಬಳಿಕ ಅವನನ್ನು ಎಪ್ಪತ್ತು ಮೊಳ ಉದ್ದದ ಸಂಕೋಲೆಯಿಂದ ಬಿಗಿಯಿರಿ. ಇವನು ಮಹಿಮಾವಂತನಾದ ಅಲ್ಲಾಹನ ಮೇಲೆ ವಿಶ್ವಾಸವಿರಿಸುತ್ತಿರಲಿಲ್ಲ, ಮತ್ತು ದರಿದ್ರರಿಗೆ ಊಟ ಕೊಡಲು ಪ್ರೇರೆಪಿಸುತ್ತಲೂ ಇರಲಿಲ್ಲ, ಅದರಿಂದ ಇಲ್ಲಿ ಅವನಿಗೆ ಅನುಕಂಪ ತೋರುವವರಾರೂ ಇಲ್ಲ, ಮತ್ತು ಗಾಯದ ಕೀವಿನ ಹೊರತು ಬೇರೆ ಯಾವ ಆಹಾರವೂ ಇಲ್ಲ, ಇದನ್ನು ಪಾಪಿಗಳ ಹೊರತು ಇನ್ನಾರೂ ತಿನ್ನುವುದಿಲ್ಲ. (ಪವಿತ್ರ ಕುರ್ ಆನ್ 69:25-37).

ನರಕವಾಸಿಗಳು ತಮ್ಮ ತಪ್ಪನ್ನು ಹೇಳುವಾಗಲೂ ತಮ್ಮ ದುಃಸ್ಥಿತಿಗೆ ಬಡವರಿಗೆ ಆಹಾರ ನೀಡದ್ದು ಕಾರಣವೆಂದು ಹೇಳುತ್ತಾರೆ.
ಪ್ರತಿಯೊಬ್ಬನೂ ತನ್ನ ದುಡಿಮೆಯ ಬದಲಿಗೆ ಅಡವಿಡಲಟ್ಟಿದ್ದಾನೆ-ಬಲಗಡೆಯವರ ಹೊರತು, ಅವರು ಸ್ವರ್ಗದಲ್ಲಿರುವರು. ಅವರು ಅಪರಾಧಿಗಳೊಡನೆ ಹೀಗೆ ಹೇಳುವರು: ನಿಮ್ಮನ್ನು ನರಕಕ್ಕೆ ಒಯ್ದುದು ಯಾವುದು? ಅವರು ಹೇಳುವರು; ನಾವು ನಮಾಝ್ ಮಾಡುವವರಾಗಿರಲಿಲ್ಲ, ಮತ್ತು ದರಿದ್ರರಿಗೆ ಉಣಿಸುತ್ತಿರಲಿಲ್ಲ, ಮತ್ತು ಸತ್ಯದ ವಿರುದ್ಧ ಮಾತುಗಳನ್ನು ಸೃಷ್ಟಿಸುವವರ ಜೊತೆ ಸೇರಿ ನಾವೂ ಮಾತುಗಳನ್ನು ಸೃಷ್ಟಿಸುತ್ತಿದ್ದೆವು ಮತ್ತು ನಾವು ಪ್ರತಿಫಲದ ದಿನವನ್ನು ಸುಳ್ಳೆಂದು ಹೇಳುತ್ತಿದ್ದೆವು. ಕೊನೆಗೆ ಆ ಖಚಿತ ದಿನವು ನಮಗೆ ಎದುರಾಗಿಯೇ ಬಿಟ್ಟಿತು (ಪವಿತ್ರ ಕುರ್‌ಆನ್ 74:38-47)

ಹಾಗಾದರೆ ಈಗ ನೀವೇ ಹೇಳಿ, ಬಡವರು ದರಿದ್ರರಿಗೆ ಸ್ವರ್ಗ-ನರಕವು ಒಳಿತನ್ನು ಮಾಡುತ್ತದೋ ಅಥವಾ ಕೆಟ್ಟದ್ದನ್ನು ಮಾಡುತ್ತದೋ ಮತ್ತು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವುದೋ ಅಥವಾ ಉಳಿಸುತ್ತದೆಯೇ? ಕುರ್‌ಆನ್ ಪುನಃ ಹೇಳುತ್ತದೆ: ಶ್ರೀಮಂತರ ಸೊತ್ತುಗಳಲ್ಲಿ ಬೇಡುವವರಿಗೂ ವಂಚಿತರಿಗೂ ಹಕ್ಕಿತ್ತು.’ (ಪವಿತ್ರ ಕುರ್‌ಆನ್ 51:19)

‘ಸಂಬಂಧಿಕನಿಗೆ ಅವನ ಹಕ್ಕನ್ನೂ ದರಿದ್ರನಿಗೂ ಪ್ರಯಾಣಿಕನಿಗೂ ಅವನವನ ಹಕ್ಕನ್ನೂ ಕೊಡಿರಿ.” (ಪವಿತ್ರ ಕುರ್ ಆನ್ 17:26)

“ನೀವು ಕಂಡಿರಾ ಪರಲೋಕದ ಕರ್ಮಫಲಗಳನ್ನೂ ನಿರಾಕರಿಸುವವನನ್ನು? ಅವನೇ ತಾನೆ, ಅನಾಥನನ್ನು ದೂರ ದಬ್ಬುವವನು ಮತ್ತು ದರಿದ್ರನಿಗೆ ಊಟ ಕೊಡಲು ಪ್ರೇರೇಪಿಸದವನು.” ( ಪವಿತ್ರ ಕುರ್‌ಆನ್107:1-3)

ಈ ವಚನಗಳಲ್ಲಿ ನಂಬಿಕೆಯಿರಿಸುವವರು ಖಂಡಿತವಾಗಿಯೂ ಅನಾಥರನ್ನು ಕಡೆಗಣಿಸುವ, ದರಿದ್ರರಿಗೆ ಅವರ ಹಕ್ಕನ್ನು ನಿಷೇಧಿಸುವ ಕೆಲಸ ಮಾಡಲಾರರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೇ?

2.ಸಂಪತ್ತನ್ನು ಕೂಡಿಡುವವರಿಗೆ ಮರಣಾನಂತರ ಕಠಿಣ ಶಿಕ್ಷೆ ನೀಡಲಾಗುತ್ತದೆಂದು ಎಚ್ಚರಿಸುವ ಕುರ್‌ಆನ್, ಸಂಪತ್ತು ಶ್ರೀಮಂತ ವರ್ಗಗಳ ನಡುವೆ ಮಾತ್ರ ಸುತ್ತಾಡುವ ಪರಿಸ್ಥಿತಿ ಉಂಟಾಗಬಾರದೆಂದೂ ಹೇಳುತ್ತದೆ. ಅಲ್ಲದೆ ಅತಿಯಾದ ಹಣದ ವ್ಯಾಮೋಹವನ್ನು ತೀವ್ರವಾಗಿ ವಿರೋಧಿಸಿದೆ.

‘ಅವನು ಧನಕನಕಗಳ ಅತಿಯಾದ ಮೋಹದಲ್ಲಿ ಸಿಲುಕಿಕೊಂಡಿದ್ದಾನೆ.” (ಪವಿತ್ರ ಕುರ್ ಆನ್ 100:8)

”ಖಂಡಿತ ಅಲ್ಲ. ವಾಸ್ತವದಲ್ಲಿ ನೀವು ಅನಾಥರನ್ನು ಗೌರವದಿಂದ ಕಾಣುವುದಿಲ್ಲ. ಬಡವನಿಗೆ ಉಣಬಡಿಸುವಂತೆ ಪರಸ್ಪರರನ್ನು ಪ್ರೇರೇಪಿಸುವುದಿಲ್ಲ, ವಾರೀಸು ಸೊತ್ತನ್ನೆಲ್ಲಾ ಕಬಳಿಸಿ ಬಿಡುತ್ತೀರಿ ಮತ್ತು ಸಂಪತ್ತನ್ನು ಅತಿಯಾಗಿ ಪ್ರೀತಿಸುತ್ತೀರಿ.’ (ಪವಿತ್ರ ಕುರ್‌ಆನ್ 89:17-20)

“ಅಲ್ಲಾಹನು ನಾಡುಗಳ ಜನರಿಂದ ತನ್ನ ಸಂದೇಶವಾಹಕರ ಕಡೆಗೆ ಮರಳಿಸಿದೆಲ್ಲವೂ ಅಲ್ಲಾಹ್ ಮತ್ತು ಸಂದೇಶವಾಹಕರಿಗಾಗಿದೆ ಹಾಗು ಸಂಬಂಧಿಕರು, ಅನಾಥರು ದರಿದ್ರರು ಮತ್ತು ಪ್ರಯಾಣಿಕರದ್ದಾಗಿದೆ. ಅದು ನಿಮ್ಮ ಶ್ರೀಮಂತರ ನಡುವೆ ಮಾತ್ರ ಚಲಿಸುತ್ತ ಇರಬಾರದೆಂದು ಹೀಗೆ ಮಾಡಲಾಗಿದೆ.” (ಪವಿತ್ರ ಕುರ್‌ಆನ್ 59:7) |

“ಚಿನ್ನವನ್ನೂ ಬೆಳ್ಳಿಯನ್ನೂ ಸಂಗ್ರಹಿಸಿಟ್ಟು ಅವುಗಳನ್ನು ದೇವಮಾರ್ಗದಲ್ಲಿ ಖರ್ಚು ಮಾಡದವರಿಗೆ ವೇದನಾಯುಕ್ತ ಯಾತನೆಯ ಸುವಾರ್ತೆ ನೀಡಿರಿ. ಈ ಚಿನ್ನ-ಬೆಳ್ಳಿಗಳ ಮೇಲೆ ನರಕಾಗ್ನಿಯನ್ನು ಉರಿಸಲಾಗುವುದು. ತರುವಾಯ ಅದರಿಂದಲೇ ಅವರ ಹಣೆಗಳಿಗೂ ಪಾರ್ಶ್ವಗಳಿಗೂ ಬೆನ್ನುಗಳಿಗೂ ಬರೆ ಹಾಕಲಾಗುವುದು. ನೀವು ನಿಮಗಾಗಿ ಸಂಗ್ರಹಿಸಿಟ್ಟ ಸಂಪತ್ತು ಇದುವೇ, ಈಗ ನೀವು ಕೂಡಿ ಹಾಕಿದ್ದ ಸಂಪತ್ತನ್ನು ಸವಿಯಿರಿ ಎನ್ನಲಾಗುವುದು.” (ಪವಿತ್ರ ಕುರ್‌ಆನ್ 9:34-35)

ಹೀಗೆ ದೇವನ ಶಿಕ್ಷೆ-ರಕ್ಷೆಗಳಲ್ಲಿ ನಂಬಿಕೆಯಿರಿಸುವವರು ಹಣವನ್ನು ಸಂಗ್ರಹಿಸಿ ಇಡುವುದಿಲ್ಲ ಮತ್ತು ದೇವ ಮಾರ್ಗದಲ್ಲಿ ದರಿದ್ರರಿಗೆ ಅದನ್ನು ನೀಡುವರೆಂಬುದರಲ್ಲಿ ಸಂದೇಹವಿಲ್ಲ.

3. ಸಂಪತ್ತನ್ನು ಒಳಿತಾಗಿ ಖರ್ಚು ಮಾಡುವವರು ಮಾತ್ರ ವಿಶ್ವಾಸಿಗಳು ಹಾಗೂ ಸ್ವರ್ಗದ ಹಕ್ಕುದಾರರೆಂದು ಕಲಿಸುವ ಕುರ್‌ಆನ್ ಅದು ಅತ್ಯಂತ ಪುಣ್ಯದಾಯಕ ಕಾರ್ಯವೆಂದೂ, ಅದಕ್ಕೆ ಎಷ್ಟೋ ಪಟ್ಟು ಪ್ರತಿಫಲವಿದೆಯೆಂದೂ ಕಲಿಸುತ್ತದೆ.

“ನೀವು ನಿಮ್ಮ ಮುಖಗಳನ್ನು ಪೂರ್ವದಿಕ್ಕಿಗೆ ಅಥವಾ ಪಶ್ಚಿಮ ದಿಕ್ಕಿಗೆ ಮಾಡಿಕೊಳ್ಳುವುದು ಧರ್ಮಶೀಲತೆಯಲ್ಲ, ನಿಜವಾಗಿ ಒಬ್ಬನು ಅಲ್ಲಾಹನನ್ನೂ ನಿರ್ಣಾಯಕ ದಿನವನ್ನೂ ದೇವಚರರನ್ನೂ ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥವನ್ನೂ, ಅವನ ಸಂದೇಶವಾಹಕರನ್ನೂ ಹೃತೂರ್ವಕ ಒಪ್ಪಿಕೊಳ್ಳುವುದು. ಅಲ್ಲಾಹನ ಸಂಪ್ರೀತಿಗಾಗಿ ತನ್ನ ಮನಮೆಚ್ಚುಗೆಯ ಸಂಪತ್ತನ್ನು ಬಂಧುಗಳಿಗೂ, ಅನಾಥರಿಗೂ, ನಿರ್ಗತಿಕರಿಗೂ, ಪ್ರಯಾಣಿಕರಿಗೂ, ಸಹಾಯಾರ್ಥಿಗಳಿಗೂ, ದಾಸ್ಯ ವಿಮೋಚನೆಗಾಗಿಯೂ ವ್ಯಯಿಸುವುದು, ನಮಾಝನ್ನು ಸಂಸ್ಥಾಪಿಸುವುದು, ಝಕಾತನ್ನು ನೀಡುವುದು ಪುಣ್ಯ ಕಾರ್ಯವಾಗಿದೆ.’ (ಪವಿತ್ರ ಕುರ್‌ಆನ್ 2:177)

‘ನಾನು ಧನರಾಶಿಯನ್ನೇ ಖರ್ಚು ಮಾಡಿಬಿಟ್ಟೆನೆಂದು ಅವನು ಹೇಳುತ್ತಾನೆ. ಅವನನ್ನು ಯಾರೂ ಕಂಡಿಲ್ಲವೆಂದು ಅವನು ಭಾವಿಸುತ್ತಾನೆಯೇ? ನಾವು ಅವನಿಗೆ ಎರಡು ಕಣ್ಣುಗಳನ್ನೂ ಒಂದು ನಾಲಿಗೆಯನ್ನೂ ಎರಡು ತುಟಿಗಳನ್ನೂ ನೀಡಲಿಲ್ಲವೇ? ಮತ್ತು ಅವನಿಗೆ ಎರಡು ಸುಸ್ಪಷ್ಟ ದಾರಿಗಳನ್ನು ತೋರಿಸಿ ಕೊಡಲಿಲ್ಲವೇ? ಆದರೆ ಅವನು ದುರ್ಗಮ ಏರನ್ನು ಏರುವ ಸಾಹಸವನ್ನೇ ಮಾಡಲಿಲ್ಲ, ಆ ದುರ್ಗಮ ಏರು ಏನೆಂದು ನಿಮಗೇನು ಗೊತ್ತು? ಯಾವುದಾದರೂ ಕೊರಳನ್ನು ದಾಸ್ಯ ಬಂಧನದಿಂದ ವಿಮೋಚಿಸುವುದು ಅಥವಾ ಹಸಿವಿನ ದಿನ, ಹಸಿದ ಆಪ್ತ ಅನಾಥನಿಗೆ ಅಥವಾ ದಿಕ್ಕೆಟ್ಟ ದರಿದ್ರನಿಗೆ ಉಣಬಡಿಸುವುದು. ತರುವಾಯ, ಸತ್ಯವಿಶ್ವಾಸವಿರಿಸಿದ ಹಾಗೂ ಪರಸ್ಪರರಿಗೆ ಸಹನೆ ಮತ್ತು ಸೃಷ್ಟಿಗಳ ಮೇಲೆ ಕರುಣೆಯನ್ನು ಬೋಧಿಸಿದ ಜನರ ಸಾಲಿಗೆ ಸೇರುವುದು.’ (ಪವಿತ್ರ ಕುರ್‌ಆನ್ 90:6-17).

“ನೀವು ನಿಮಗೆ ಬಹಳ ಪ್ರಿಯವಾಗಿರುವ ವಸ್ತುಗಳನ್ನು (ಅಲ್ಲಾಹನ ಮಾರ್ಗದಲ್ಲಿ) ವ್ಯಯಿಸುವ ತನಕ ಪುಣ್ಯ ಮಟ್ಟವನ್ನು ತಲುಪಲಾರಿರಿ. ನೀವು ಏನೇನು ಖರ್ಚು ಮಾಡುತ್ತಿರೋ ಅದರ ಬಗ್ಗೆ ಅಲ್ಲಾಹನು ಅಜ್ಞನಲ್ಲ.’ (ಪವಿತ್ರ ಕುರ್‌ಆನ್ 3:92)

ಈ ಕುರ್‌ಆನ್ ವಾಕ್ಯಗಳನ್ನು ಒಪ್ಪುವವರು ಬಡವರಿಗೆ ಹಣ ವ್ಯಯಿಸಲು ಸ್ವಲ್ಪವೂ ಜಿಪುಣತ ತೋರಿಸಲಾರರು ಮತ್ತು ಬಡವರ ಕಷ್ಟಗಳ ಬಗ್ಗೆ ಬಹಳ ಕಾಳಜಿ ವಹಿಸುವರೆಂಬುದರಲ್ಲಿ ಸಂಶಯವಿಲ್ಲ.

4. ಇಸ್ಲಾಮ್ ಶೋಷಣೆಯ ಎಲ್ಲಾ ಮಾರ್ಗಗಳನ್ನು ಮುಚ್ಚಿ ಹಾಕುತ್ತದೆ. ಸಮಾಜಕ್ಕೆ ಹಾನಿಕರವಾದ ಸಂಪಾದನಾ ಮಾರ್ಗಗಳನ್ನು ನಿಷೇಧಿಸಿದೆ.
ಅಲ್ಲಾಹನು ಹೇಳುತ್ತಾನೆ: ”ತೂಕದಲ್ಲಿ ಕಡಿತಗೊಳಿಸಿ ಕೊಡುವವರಿಗೆ ವಿನಾಶವಿದೆ. ಅವರು ಜನರಿಂದ ಪಡೆಯುವಾಗ ಸಂಪೂರ್ಣವಾಗಿ ಪಡೆಯುತ್ತಾರೆ ಮತ್ತು ಅಳತೆ ಮಾಡಿ ಅಥವಾ ತೂಕ ಮಾಡಿ (ಜನರಿಗೆ) ಕೊಡುವಾಗ ಕಡಿಮೆ ಕೊಡುತ್ತಾರೆ. ಇವರನ್ನು ಎಬ್ಬಿಸಿ ತರಲಾಗುವುದೆಂದು ಇವರು ಗ್ರಹಿಸುವುದಿಲ್ಲವೇ? ಒಂದು ಮಹಾ ದಿನದಂದು. ಅದು ಎಲ್ಲ ಜನರು ಸರ್ವಲೋಕಗಳ ಪಾಲಕ ಪ್ರಭುವಿನ ಮುಂದೆ ನಿಲ್ಲುವ ದಿನವಾಗಿದೆ.” (ಪವಿತ್ರ ಕುರ್‌ಆನ್ 83:1-6)

“ಬಡ್ಡಿ ತಿನ್ನುವವರ ಅವಸ್ಥೆಯು ಶೈತಾನನ ಸೋಂಕಿನಿಂದ ಹುಚ್ಚನಾದವನಂತಿದೆ.” (ಪವಿತ್ರ ಕುರ್‌ಆನ್ 2:275)

ಬಡ್ಡಿಯು ಮಹಾ ಪಾಪವೆಂದೂ, ಅದನ್ನು ತಿನ್ನುವವರು ನರಕವಾಸಿಗಳೆಂದು ಇಸ್ಲಾಮ್ ಕಲಿಸುತ್ತದೆ. ಜೂಜಾಟದಂತಹ ಆರ್ಥಿಕ ಶೋಷಣೆಯನ್ನು ಅದು ಬಲವಾಗಿ ನಿಷೇಧಿಸುತ್ತದೆ. ಪ್ರವಾದಿ(ಸ)ರು ಹೇಳಿರುವರು: ‘ಯಾರು ವಂಚಿಸುವನೋ ಅವನು ನಮ್ಮವನಲ್ಲ,” (ಅಹ್ಮದ್, ತಿರ್ಮಿದಿ)
‘ಆಕ್ರಮವಾಗಿ ಸಂಪಾದಿಸಿದವನು ಪಾಪಿಯಾಗಿದ್ದಾನೆ.’ (ಮುಸ್ಲಿಮ್, ಅಬೂದಾವುದ್)
“ಕಾರ್ಮಿಕರಿಗೆ ಸಂಬಳ ಕೊಡದೆ ಸತಾಯಿಸುವವನಿಗೆ ಅಲ್ಲಾಹನು ಅಂತ್ಯ ದಿನದಲ್ಲಿ ಶತ್ರುವಾಗಿರುತ್ತಾನೆ.” (ಬುಖಾರಿ)

ಹೀಗೆ ಆರ್ಥಿಕ ಶೋಷಣೆಯ ದ್ವಾರಗಳನ್ನೆಲ್ಲಾ ಮುಚ್ಚಿಬಿಡುವ ಇಸ್ಲಾಮ್ ಜಿಪುಣತೆಯನ್ನು ತೀವ್ರವಾಗಿ ವಿರೋಧಿಸುತ್ತದೆ. ಅವರಿಗೆ ಕಠಿಣ ಶಿಕ್ಷೆಯ ಎಚ್ಚರಿಕೆಯನ್ನು ನೀಡುತ್ತದೆ. ಅಲ್ಲಾಹನು ತನ್ನ ಅನುಗ್ರಹದ ಅನಂತರವೂ ಜಿಪುಣತೆ ತೋರಿಸುವವರು -ಈ ಲೋಭವು ತಮ್ಮ ಪಾಲಿಗೆ ಶುಭಕರವೆಂದೆಣಿಸದಿರಲಿ. ಇದು ಅವರ ಮಟ್ಟಿಗೆ ಅತ್ಯಂತ ಅಶುಭಕರವಾದಗಿರುವುದು. ಅವರು ತಮ್ಮ ಜಿಪುಣತೆಯಿಂದ ಸಂಗ್ರಹಿಸಿಡುವ ವಸ್ತುವೇ ಪುನರುತ್ಥಾನ ದಿನಂದು ಅವರ ಕಂಠಕಡಗವಾಗುವುದು. ಭೂಮಿ-ಆಕಾಶಗಳ ಅಂತಿಮ ಒಡೆತನ ಅಲ್ಲಾಹನಿಗಾಗಿಯೇ ಇದೆ ನೀವು ಮಾಡುವುದನ್ನೆಲ್ಲಾ ಅಲ್ಲಾಹ್ ಬಲ್ಲವನಾಗಿರುತ್ತಾನೆ. (ಪವಿತ್ರ ಕುರ್‌ಆನ್ 3:180)

5. ಮರ್ದಿತರು, ಶೋಷಿತರು, ದರಿದ್ರರು ಅದೇ ಪರಿಸ್ಥಿತಿಯಲ್ಲಿರಬೇಕೆಂದು ಧರ್ಮ ಬಯಸುವುದಿಲ್ಲ, ಬದಲಾಗಿ ಅವರನ್ನು ಅಂತಹ ಸ್ಥಿತಿಯಿಂದ ಪಾರುಗೊಳಿಸಲು ಹೋರಾಡದವರಲ್ಲಿ ಕುರ್‌ಆನ್ ಹೇಳುತ್ತದೆ: “ಮರ್ದನಕ್ಕೊಳಗಾದ ಪುರುಷರು, ಸೀಯರು ಮತ್ತು ಮಕ್ಕಳಿಗಾಗಿ, ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ಕಾರಣವೇನು? ಆ ಜನರು ಹೇಳುತ್ತಾರೆ: ” ಓ ನಮ್ಮ ಪ್ರಭೂ, ಅಕ್ರಮಿಗಳು ವಾಸಿಸುವ ನಾಡಿನಿಂದ ನಮ್ಮನ್ನು ಪಾರುಗೊಳಿಸು; ನೀನು ನಿನ್ನ ಕಡೆಯಿಂದ ನಮಗೊಬ್ಬ ಮೇಲ್ವಿಚಾರಕನನ್ನು ಮತ್ತು ಒಬ್ಬ ಸಹಾಯಕನನ್ನು ನಿಯೋಜಿಸು.” (ಪವಿತ್ರ ಕುರ್ ಆನ್ 4:75)

ಪ್ರವಾದಿ (ಸ) ಹೇಳುತ್ತಾರೆ: ”ವಿಧವೆಯರು ಮತ್ತು ದುರ್ಬಲರಿಗಾಗಿ ದುಡಿಯುವನು ಅಲ್ಲಾಹನ ಮಾರ್ಗದಲ್ಲಿ ಹೋರಾಟ ಮಾಡುವವನಂತೆ.'(ಬುಖಾರಿ)
“ಎಲ್ಲಾ ಕಾಲುಗಳು ಎಡವಿ ನರಕಕ್ಕೆ ಬೀಳುವ ದಿನ ಮರ್ದಿತರ ಪರವಾಗಿ ಹೋರಾಡಿ, ಅವರ ಹಕ್ಕನ್ನು ಒದಗಿಸಲು ಪ್ರಯತ್ನಿಸುವವನ ಎರಡು ಕಾಲುಗಳು ಗಟ್ಟಿಯಾಗಿ ನಿಲ್ಲುತ್ತದೆ.”

ಧರ್ಮವು ಸೂಚಿಸಿರುವ ಸ್ವರ್ಗ-ನರಕ ವಿಶ್ವಾಸವು ಎಲ್ಲಾ ರೀತಿಯ ಶೋಷಣೆಗಳನ್ನು ಕೊನೆಗೊಳಿಸಿ, ಆರ್ಥಿಕ ಹಾಗೂ ಸಾಮಾಜಿಕ ನ್ಯಾಯವನ್ನು ಸ್ಥಾಪಿಸ ಬಯಸುತ್ತದೆಂದು ಈ ವಾಸ್ತವಿಕತೆಗಳು ಸ್ಪಷ್ಟಪಡಿಸುತ್ತದೆ. ಧರ್ಮದ ನೈಜ ಉದ್ದೇಶ ಮರ್ದಿತರ ವಿಮೋಚನೆಯಾಗಿದೆ. ಇತಿಹಾಸದಲ್ಲಿ ಎಲ್ಲಡೆಯೂ ಪ್ರವಾದಿಗಳ ಹಾಗೂ ಅವರ ಅನುಯಾಯಿಗಳ, ಸಂದೇಶ ಪ್ರಚಾರಕರ ಮುಖ್ಯ ವಿರೋಧಿಗಳಲ್ಲಿ ಶ್ರೀಮಂತ ವರ್ಗ ಹಾಗೂ ಮರ್ದಕ ಆಡಳಿತಗಾರರು ಅಧಿಕವಾಗಿದ್ದರು. ಮರ್ದಕರು, ಶೋಷಕರು ನರಕ ಪ್ರವೇಶಿಸುವರೆಂದೂ, ಸಜ್ಜನರು ಹಾಗೂ ಸತ್ಕರ್ಮಿಗಳು ಮಾತ್ರ ಸ್ವರ್ಗಕ್ಕೆ ಅರ್ಹರೆಂದೂ ತಿಳಿಸುವ ಧಾರ್ಮಿಕ ವಿಶ್ವಾಸ ವಂಚನೆಗೆ ಕಡಿವಾಣ ಹಾಕುತ್ತದೆ. ಬದಲಾಗಿ ಶೋಷಕ ವರ್ಗವನ್ನು ಬೆಂಬಲಿಸುವುದಿಲ್ಲವೆಂದು ಹಗಲಿನಷ್ಟೆ ಸ್ಪಷ್ಟ ವಿಚಾರವಾಗಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …