ಇಸ್ಲಾಮ್, ದೇವದತ್ತ ಜೀವನ ಪದ್ಧತಿಯಾಗಿದೆ. ಅದಕ್ಕೆ ಸ್ಪಷ್ಟವಾದ ವಿಶ್ವಾಸ ಸಂಹಿತೆಯಿದೆ. ಅದರಿಂದಲೇ ಇಸ್ಲಾಮಿನ ಆಚಾರ-ಕರ್ಮಗಳ ರೀತಿಗಳು ರೂಪುಗೊಳ್ಳುತ್ತವೆ. ವಿಶ್ವಾಸ ಶ್ರದ್ಧೆಗಳನ್ನು ಮಾನವ ಮನಸ್ಸುಗಳು ಅಂಗೀಕರಿಸಬೇಕು. ಅನ್ಯಥಾ ನಾಲಗೆಯಿಂದ ಹೊರಡಿಸುವ ಘೋಷಣೆಗಳು ನಿರರ್ಥಕ ಮತ್ತು ನಿಷ್ಪಲವಾಗುತ್ತವೆ. ಆದ್ದರಿಂದಲೇ, ಇಸ್ಲಾಮ್, ಮಾನವ ಮನಸ್ಸುಗಳ ಸುಧಾರಣೆಗೆ ಹೆಚ್ಚು ಒತ್ತು ನೀಡಿದೆ. ಸಿದ್ಧಾಂತಗಳ ಅಂಗೀಕಾರವು ವ್ಯಕ್ತಿಗಳ ಇಷ್ಟಾನಿಷ್ಟಗಳಿಗೆ ಸಂಬಂಧಿಸಿದೆ. ಅವುಗಳನ್ನು ಯಾರ ಮೇಲೆಯೂ ಹೇರಲು ಸಾಧ್ಯವಿಲ್ಲ, ಈ ವಿಷಯದಲ್ಲಿ ಇಸ್ಲಾಮ್ ಬಹಳ ವಿಶಾಲ ಮತ್ತು ಸಹಿಷ್ಣುತೆಯ ಧೋರಣೆಯನ್ನು ಅಂಗೀಕರಿಸಿದೆ. ವಾಸ್ತವಿಕತೆಗಳನ್ನು ಮಾನವ ಮನಸ್ಸುಗಳ ಮುಂದೆ ಸ್ಪಷ್ಟವಾಗಿ ವಿವರಿಸಿದ ಬಳಿಕ, ಅವುಗಳಲ್ಲಿ ವಿಶ್ವಾಸವಿರಿಸುವ ಅಥವಾ ವಿಶ್ವಾಸವಿರಿಸದಿರುವ, ಅಂಗೀಕರಿಸುವ ಅಥವಾ ನಿರಾಕರಿಸುವ ಅನುಮತಿ ಮತ್ತು ಸ್ವಾತಂತ್ರ್ಯವನ್ನು ವ್ಯಕ್ತಿಗಳಿಗೆ ಅದು ನೀಡುತ್ತದೆ. ಇಸ್ಲಾಮನ್ನು ಅಂಗೀಕರಿಸುವಂತೆ ಅದು ಯಾರನ್ನೂ ಬಲಾತ್ಕರಿಸುವುದಿಲ್ಲ.
ಪವಿತ್ರ ಕುರ್ಆನ್ ಸುಸ್ಪಷ್ಟವಾಗಿ ಹೀಗೆ ಸಾರಿದೆ:
”ಧರ್ಮದ ವಿಷಯದಲ್ಲಿ ಯಾವುದೇ ಒತ್ತಾಯ ಬಲಾತ್ಕಾರಗಳಿಲ್ಲ, ಸನ್ಮಾರ್ಗವು ದುರ್ಮಾರ್ಗದಿಂದ ಬೇರ್ಪಡಿಸಲ್ಪಟ್ಟಿದೆ. (ಪವಿತ್ರ ಕುರ್ಆನ್, 2:256)
”ಸ್ಪಷ್ಟವಾಗಿ (ಹೀಗೆ) ಹೇಳಿಬಿಡಿರಿ- ಇದು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯ. ಇಷ್ಟವಿದ್ದವರು ಸ್ವೀಕರಿಸಿಕೊಳ್ಳಲಿ, ಇಷ್ಟವಿದ್ದವರು ನಿರಾಕರಿಸಲಿ.(ಪವಿತ್ರ ಕುರ್ಆನ್, 18:29)
ಧರ್ಮದ ಪ್ರಥಮ ಬೋಧಕರಾದ ಪ್ರವಾದಿಗಳೂ ದೇವಸಂದೇಶಗಳನ್ನು ತಲಪಿಸುವ ಹೊಣೆಯನ್ನು ಮಾತ್ರ ಹೊಂದಿದ್ದರು.
ಅಲ್ಲಾಹನು ಹೇಳಿದ್ದಾನೆ:
”ವಿಷಯಗಳನ್ನು ಸುಸ್ಪಷ್ಟವಾಗಿ ತಲುಪಿಸುವ ಹೊರತು ಬೇರಾವ ಹೊಣೆಗಾರಿಕೆಯಾದರೂ ಸಂದೇಶವಾಹಕರ ಮೇಲೆ ಇದೆಯೇ?” (ಪವಿತ್ರ ಕುರ್ಆನ್,16:35)
ಅಂತಿಮ ಪ್ರವಾದಿ ಮುಹಮ್ಮದ್ರಿಗೂ(ಸ) ಅದರ ಹೊರತು ಬೇರೆ ಹೊಣೆಗಾರಿಕೆಯಿರಲಿಲ್ಲವೆಂದು ಕುರ್ಆನಿನ ವಿವಿಧೆಡೆಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಪ್ರವಾದಿಯವರಿಗೆ(ಸ) ಅಲ್ಲಾಹನು ತಿಳಿಸಿರುತ್ತಾನೆ: ”ಸಂದೇಶವಾಹಕರೇ, ನಾವು ನಿಮ್ಮನ್ನು ಇವರ ಕಾವಲುಗಾರನಾಗಿಯಂತು ಕಳುಹಿಸಿಲ್ಲ. ನಿಮ್ಮ ಮೇಲಂತೂ ವಿಷಯವನ್ನು ತಲುಪಿಸಿ ಬಿಡುವ ಹೊಣೆಗಾರಿಕೆ ಮಾತ್ರ ಇದೆ.” (ಪವಿತ್ರ ಕುರ್ಆನ್, 42:48)
”ನಮ್ಮ ಸಂದೇಶವಾಹಕರಿಗೆ ಸುಸ್ಪಷ್ಟ ಆಜ್ಞೆಗಳನ್ನು ತಲಪಿಸುವ ಹೊಣೆಗಾರಿಕೆ ಮಾತ್ರವಿತ್ತೆಂಬುದನ್ನು ಅರಿತುಕೊಳ್ಳಿರಿ.” (ಪವಿತ್ರ ಕುರ್ ಆನ್, 5:92)
ಜನರನ್ನು ಬಲಾತ್ಕಾರದಿಂದ ವಿಶ್ವಾಸವಿರಿಸುವಂತೆ ಮಾಡುವ ಅನುಮತಿ ಪ್ರವಾದಿಯವರಿಗೂ ಇರಲಿಲ್ಲ, ಕುರ್ಆನ್ ಹೀಗೆ ಪ್ರಶ್ನಿಸಿದೆ:
“ಹೀಗಿರುವಾಗ ಜನರೆಲ್ಲರೂ ಸತ್ಯವಿಶ್ವಾಸಿಗಳಾಗಬೇಕೆಂದು ನೀವು ಒತ್ತಾಯ ಪಡಿಸುವಿರಾ? ಯಾರೊಬ್ಬನೂ ಅಲ್ಲಾಹನ ಅನುಮತಿಯ ಹೊರತು ವಿಶ್ವಾಸವಿಡಲಾರನು.” (ಪವಿತ್ರ ಕುರ್ಆನ್, 10:99-100)
”ಸರಿ! (ಸಂದೇಶವಾಹಕರೇ) ನೀವು ಉಪದೇಶ ಮಾಡುತ್ತಾ ಸಾಗಿರಿ. ನೀವು ಕೇವಲ ಉಪದೇಶಕರು. ಅವರ ಮೇಲೇನೂ ಬಲಾತ್ಕಾರ ಮಾಡುವವರಲ್ಲ.” (ಪವಿತ್ರ ಕುರ್ ಆನ್, 88:21-22)
ಇಸ್ಲಾಮ್ ಈ ರೀತಿಯಲ್ಲಿ ವಿಶ್ವಾಸ ಸ್ವಾತಂತ್ರ್ಯವನ್ನು ಸಾರುತ್ತದೆ. ಧರ್ಮವನ್ನು ಯಾರ ಮೇಲೆಯೂ ಹೇರಬಾರದೆಂದು ಆಜ್ಞಾಪಿಸುತ್ತದೆ. ಪ್ರತಿಯೊಬ್ಬರಿಗೂ ಸ್ವಂತ ವಿಶ್ವಾಸ ಮತ್ತು ದೃಷ್ಟಿಕೋನವನ್ನು ಇರಿಸಿಕೊಳ್ಳುವ ಮತ್ತು ಆರಾಧನೆ- ಆಚಾರ ಕ್ರಮಗಳನ್ನು ನಡೆಸುವ ಸ್ವಾತಂತ್ರ್ಯವಿದೆ. ಅದರಲ್ಲಿ ಹಸ್ತಕ್ಷೇಪಿಸುವ ಅಥವಾ ತಡೆಯುವ ಅಧಿಕಾರ ಯಾರಿಗೂ ಇಲ್ಲ. ಇದರಲ್ಲಿ ವ್ಯಕ್ತಿ, ಸಮಾಜ, ಸರಕಾರ ಇತ್ಯಾದಿ ಎಲ್ಲರೂ ಸಮಾನರು.
ಇಸ್ಲಾಮಿ ಸರಕಾರವು ಪ್ರಜೆಗಳ ವಿಶ್ವಾಸದ ವಿಷಯದಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ. ಕುರ್ಆನ್ ನಿಷ್ಠುರವಾಗಿ ಆಜ್ಞಾಪಿಸಿರುವಂತೆ, ಅವರು ತಮಗಿಷ್ಟವಿರುವ ಧರ್ಮವನ್ನು ಅಂಗೀಕರಿಸಬಹುದಾಗಿದೆ. ಮದೀನಾದಲ್ಲಿ ಪ್ರವಾದಿವರ್ಯರ(ಸ) ನಾಯಕತ್ವದಲ್ಲಿ ಇಸ್ಲಾಮಿ ಸರಕಾರ ಸ್ಥಾಪನೆಯಾದ ಮೊದಲ್ಗೊಂಡು ಈ ವರೆಗಿನ ಅನುಭವಗಳು ಅದಕ್ಕೆ ಸಾಕ್ಷಿಯಾಗಿವೆ.
ಮದೀನಕ್ಕೆ ತಲಪಿದ ಪ್ರವಾದಿಯವರು(ಸ) ಮುಹಾಜಿರ್ ಮತ್ತು ಅನ್ಸಾರರೊಡನೆ ಒಪ್ಪಂದ ಮಾಡಿಕೊಂಡರು. ಅದರಲ್ಲಿ ಅಲ್ಲಿನ ಯಹೂದಿಯರೊಂದಿಗೆ ಕೆಲವು ನಿಬಂಧನೆಗಳನ್ನು ಸೂಚಿಸಿ ಅವರಿಗೆ ಕೆಲವು ವಾಗ್ದಾನಗಳನ್ನೂ ನೀಡಿದರು. ಅದು ಇಸ್ಲಾಮೀ ರಾಷ್ಟ್ರದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನ ಮತ್ತು ಹಕ್ಕು ಬಾಧ್ಯತೆಗಳನ್ನು ವಿವರವಾಗಿ ತಿಳಿಸುವ ಒಂದು ದಾಖಲೆಯಾಗಿತ್ತು. ಅದರಲ್ಲಿ ಪ್ರವಾದಿಯವರು ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಿರುವಂಥ ಸ್ವಾತಂತ್ರ್ಯ ಮತ್ತು ಅನುಕೂಲತೆಗಳು ಜಗತ್ತಿನ ಯಾವುದೇ ಧರ್ಮಾಧಿಷ್ಠಿತ ಅಥವಾ ಧರ್ಮನಿರಪೇಕ್ಷ ರಾಷ್ಟ್ರಗಳಲ್ಲಿ ಕಾಣಿಸಲಾರದು. ಯಹೂದಿಯರಿಗೆ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವ ಆ ದಾಖಲೆಯಲ್ಲಿ ಹೀಗೆ ಹೇಳಲಾಗಿದೆ: “ನಮ್ಮ ಆಡಳಿತ” ಸೀಮೆಯಲ್ಲಿರುವ ಯಹೂದಿಯರಿಗೆ ಕೋಮು ಪಕ್ಷಪಾತೀ ವರ್ತನೆ ಮತ್ತು ಶೋಷಣೆಗಳಿಂದ ಸಂರಕ್ಷಣೆ ನೀಡಲಾಗುವುದು. ನಮ್ಮ ಸಹಾಯ, ಸಹಕಾರ, ಸಹಾನುಭೂತಿಯ ಸಂರಕ್ಷಣೆಗಳಲ್ಲಿ ಸ್ವಸಮುದಾಯದವರಂತೆಯೇ ಅವರಿಗೂ ಹಕ್ಕಿರುವುದು. ಅವರು ಮುಸ್ಲಿಮರ ಜತೆಗೂಡಿ ಏಕ ವ್ಯವಸ್ಥೆಯ ಒಂದೇ ರಾಷ್ಟ್ರವಾಗುವರು. ಮುಸ್ಲಿಮರಂತೆ ಅವರಿಗೂ ತಮ್ಮ ಧರ್ಮವನ್ನು ಸ್ವತಂತ್ರವಾಗಿ ಆಚರಿಸಬಹುದಾಗಿದೆ.”
ಅನಂತರ ಇಸ್ಲಾಮಿ ರಾಷ್ಟ್ರದ ನಾಶಕ್ಕಾಗಿ ಅವರು ಒಳಸಂಚು ನಡೆಸಿದಾಗ ಪ್ರವಾದಿಯವರಿಗೆ ಅವರನ್ನು ಗಡೀಪಾರು ಮಾಡಬೇಕಾಯಿತು. ಇದಕ್ಕೆ ಅವರ ಧಾರ್ಮಿಕ ಭಿನ್ನತೆಯು ಪ್ರೇರಕವಾಗಿರಲಿಲ್ಲ, ಬದಲಾಗಿ ರಾಜಕೀಯ ಕಾರಣಗಳಾಗಿದ್ದುವು. ಈ ವಿಷಯವನ್ನು ವಿಲಿಯಮ್ ಮ್ಯೂರ್ (Muir) ಕೂಡಾ ಒಪ್ಪಿದ್ದಾರೆ. ಅವರು ಹೀಗೆ ಬರೆದಿದ್ದಾರೆ: “ಮುಹಮ್ಮದ್, ಅವರ ವಿರುದ್ಧ (ಬನೂ ಕುರೈಝಾ ಎಂಬ ಯಹೂದಿ ಗೋತ್ರ) ಕ್ರಮ ಕೈಗೊಂಡಿರುವುದಕ್ಕೆ ರಾಜಕೀಯವೇ ಪ್ರಮುಖ ಕಾರಣವಾಗಿತ್ತು. ಅವರನ್ನು ಇಸ್ಲಾಮ್ ಸ್ವೀಕರಿಸುವಂತೆ ಒತ್ತಾಯಿಸಿರಲಿಲ್ಲ ಅಥವಾ ಅದಕ್ಕಾಗಿ ಅವರನ್ನು ದಂಡಿಸಿರಲಿಲ್ಲ.” (ಸಂಪುಟ:3, ಪುಟ:282)
ಯಹೂದಿಯರಂತೆಯೇ ಕ್ರೈಸ್ತ ಗೋತ್ರಗಳೊಡನೆಯೂ ಪ್ರವಾದಿಯವರು(ಸ) ಒಪ್ಪಂದ ಮಾಡಿದ್ದರು. ಆ ಪ್ರಕಾರ ಅವರಿಗೆ ಇಸ್ಲಾಮೀ ರಾಷ್ಟ್ರದಲ್ಲಿ ಸಂಪೂರ್ಣ ವಿಶ್ವಾಸ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ಸರ್ ಥಾಮಸ್ ಅರಾಳ್ ಹೀಗೆ ಬರೆದಿದ್ದಾರೆ- “ಮುಹಮ್ಮದ್ರು ಹಲವು ಅರಬ್ ಕ್ರೈಸ್ತ ಗೋತ್ರಗಳೊಡನೆ ಒಪ್ಪಂದ ಮಾಡಿಕೊಂಡಿದ್ದರು. ಅವರಿಗೆ ಭದ್ರತೆಯನ್ನೂ ಸ್ವಧರ್ಮಾಚರಣೆಯ ಸ್ವಾತಂತ್ರ್ಯವನ್ನೂ ನೀಡಿದ್ದರು. ಅವರ ಪುರೋಹಿತರ ವಿಶೇಷಾಧಿಕಾರಗಳನ್ನು ಯಥಾವತ್ತಾಗಿ ಉಳಿಸಿಕೊಂಡರು.” (ಸಂಪುಟ:3, ಪುಟ:282)
ಪ್ರವಾದಿವರ್ಯರ(ಸ) ಉತ್ತರಾಧಿಕಾರಿಗಳೂ ಅವರ ಸಹಿಷ್ಣುತೆಯ ಧೋರಣೆಯನ್ನುಯಥಾ ರೀತಿ ಅವಲಂಬಿಸಿದ್ದರು. ದ್ವಿತೀಯ ಖಲೀಫ ಉಮರ್ ಫಾರೂಕ್ ಈಲಿಯಾ ನಿವಾಸಿಗಳಿಗೆ ಬರೆದು ಕೊಟ್ಟ ಭದ್ರತಾ ಕರಾರುಗಳಲ್ಲಿ ಹೀಗೆ ಹೇಳಲಾಗಿತ್ತು: “ಇದು ದೇವನ ದಾಸ ಮತ್ತು ವಿಶ್ವಾಸಿಗಳ ನಾಯಕನಾಗಿರುವ ಉಮರ್, ಈಲಿಯಾದ ಜನರಿಗೆ ಬರೆಯುವ ಕರಾರು ಪತ್ರವಾಗಿದೆ. ಎಲ್ಲರ ಪ್ರಾಣ, ಸೊತ್ತು, ಚರ್ಚ್, ಶಿಲುಬೆ ಹಾಗೂ ಧರ್ಮಕ್ಕೆ ಸಂಬಂಧಿಸಿದ ಎಲ್ಲದಕ್ಕೂ ಭದ್ರತೆಯನ್ನು ಒದಗಿಸಲಾಗುವುದು. ಯಾರ ಚರ್ಚ್ಗಳನ್ನೂ ನಿವಾಸವಾಗಿ ಬಳಸಬಾರದು ಅಥವಾ ನಾಶಗೊಳಿಸಬಾರದು. ಅವು ಅಥವಾ ಅವುಗಳಿಗೆ ಸಂಬಂಧಿಸಿದ ಸೊತ್ತು ವಿತ್ತಗಳನ್ನು ಕಸಿಯಬಾರದು, ಹಾಗೆಯೇ ಅವರ ಸೊತ್ತು ಅಥವಾ ಶಿಲುಬೆಗಳನ್ನು ಸ್ವಾಧೀನಪಡಿಸಬಾರದು. ವಿಶ್ವಾಸದ ವಿಷಯದಲ್ಲಿ ಯಾರನ್ನೂ ಅಡ್ಡಿಪಡಿಸಬಾರದು, ಮತಾಂತರಕ್ಕೆ ಬಲಾತ್ಕರಿಸಬಾರದು. ಯಾರನ್ನೂ ಪೀಡಿಸಬಾರದು.” (ತ್ವಬ್ರಿ ಪುಟ: 2405)
ಉಮರ್ ಫಾರೂಕ್ರ ರಾಜ್ಯಪಾಲರಾಗಿದ್ದ ಅಮ್ರ್ ಬಿನ್ ಆಸ್ ರು ಈಜಿಪ್ಟ್ ನಲ್ಲಿ ಮಾಡಿಕೊಂಡ ಒಪ್ಪಂದದಲ್ಲಿ ಅಲ್ಲಿನ ಕೈಸ್ತ ವಿಶ್ವಾಸಿಗಳಿಗೆ ಎಲ್ಲ ರೀತಿಯ ಸಂರಕ್ಷಣೆಯ ಭರವಸೆ ನೀಡಿದ್ದರು. ಅಂದಿನಿಂದ ಈ ತನಕ ಕೋಸ್ಟ್ ಕೈಸ್ತರು ಅಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಯಾವ ರೀತಿಯ ಧಾರ್ಮಿಕ ಹಿಂಸೆಯನ್ನೂ ಅವರು ಅನುಭವಿಸಿರಲಿಲ್ಲ, ಆಧುನಿಕ ಈಜಿಪ್ಟ್ ನಲ್ಲಿ ಅವರಿಗೆ ಸುಮಾರು 1500 ಆರಾಧನಾಲಯಗಳು ಮತ್ತು 500 ಸಂಘಟನೆಗಳಿವೆ. ಅವೆಲ್ಲವೂ ಮುಸ್ಲಿಮರ ಆಡಳಿತ ಕಾಲದಲ್ಲಿಯೇ ಸ್ಥಾಪನೆಗೊಂಡಿವೆ. ಇಸ್ಲಾಮ್, ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿಲ್ಲದಿರುತ್ತಿದ್ದರೆ ಸುಮಾರು ಹದಿಮೂರು ಶತಮಾನಗಳಿಗಿಂತಲೂ ಅಧಿಕ ಕಾಲದ ಮುಸ್ಲಿಮ್ ಆಡಳಿತದ ಬಳಿಕವೂ ಅಲ್ಲಿ ಅನ್ಯಧರ್ಮಿಯರ ಇಷ್ಟೊಂದು ಆರಾಧನಾಲಯಗಳು ಉಳಿದಿರುತ್ತಿರಲಿಲ್ಲ.
ಮುಸ್ಲಿಮರ ಈ ಸಹಿಷ್ಣುತೆಯಿಂದಾಗಿ ಕ್ರೈಸ್ತ ಸಹೋದರರು ಅವರನ್ನು ಸ್ವಸಮುದಾಯದವರಿಗಿಂತ ಹೆಚ್ಚು ಮೆಚ್ಚಿದ್ದರು. ಅಬೂ ಉಬೈದಾರ ನಾಯಕತ್ವದಲ್ಲಿ ಮುಸ್ಲಿಮ್ ಸೇನೆಯು ಜೋರ್ಡಾನ್ ಕಣಿವೆಯಲ್ಲಿ ಬಿಡಾರ ಹೂಡಿದ್ದಾಗ ಅಲ್ಲಿನ ಕ್ರೈಸ್ತ ನಾಯಕರು ಅವರಿಗೆ ಹೀಗೆ ಬರೆದು ತಿಳಿಸಿದ್ದರು: “ಮುಸ್ಲಿಮರೇ, ನಾವು ಬೈಝಂಟ್ಯಾನ್ರಿಗಿಂತ ನಿಮ್ಮನ್ನು ಮೆಚ್ಚುತ್ತೇವೆ. ಅವರು ನಮ್ಮ ಧರ್ಮವಿಶ್ವಾಸದವರಾಗಿದ್ದರೂ, ನೀವು ಮಾತ್ರ ನಮ್ಮೊಡನೆ ವಚನ ಪಾಲಿಸಿ, ಕರುಣೆ ತೋರಿದಿರಿ. ಅಕ್ರಮವೆಸಗಲಿಲ್ಲ.” (ಸರ್ ಥೋಮಸ್ ಅರಾಫ್ಟ್ ಇಸ್ಲಾಮ್ ಬೋಧನೆ ಮತ್ತು ಪ್ರಚಾರ, ಪುಟ: 67)
ಭಾರತದಲ್ಲಿ ಸಿಂಧ್ ಪ್ರಾಂತ್ಯವನ್ನು ಆಕ್ರಮಿಸಿ ಸ್ವಾಧೀನ ಪಡಿಸಿದ ಮುಹಮ್ಮದ್ ಬಿನ್ ಕಾಸಿಮ್ರಿಗೆ ಸಿರಿಯನ್ ರಾಜ್ಯಪಾಲ ಹಜ್ಜಾಜ್ ಬಿನ್ ಯೂಸುಫ್ ಬರೆದ ಪತ್ರವು ಆ ಕಾಲದಲ್ಲಿ ನೀಡಲಾಗಿದ್ದ ವಿಶ್ವಾಸ ಸ್ವಾತಂತ್ರ್ಯವನ್ನು ದೃಢಪಡಿಸುತ್ತದೆ. ಅವರು ಹೀಗೆ ಬರೆದಿದ್ದರು: “ಅವರು ನಮ್ಮ ಭದ್ರತಾ ವ್ಯವಸ್ಥೆಗೆ ಬದ್ಧರಾಗಿ ತೆರಿಗೆದಾರರಾಗಿರುತ್ತಾ ನಾವು ಅವರಿಂದ ಇನ್ನೇನು ನಿರೀಕ್ಷಿಸಬೇಕು? ಅವರ ದೇವಂದಿರನ್ನು ಆರಾಧಿಸುವ ಸ್ವಾತಂತ್ರ್ಯವನ್ನು ನಾವು ಅವರಿಗೆ ನೀಡಿದ್ದೇವೆ. ಯಾರನ್ನೂ ಸ್ವಧರ್ಮದಿಂದ ಹಿಂಜರಿಸಬಾರದು ಮತ್ತು ಅವರ ಆರಾಧನಾ ಕರ್ಮಗಳಿಗೆ ಅಡ್ಡಿಪಡಿಸಬಾರದು.” (Elliot & Dowson: Vol:1, Chachanama PP 185-186)
ಔರಂಗಝೇಬ್, ಭಾರತೀಯ ಇತಿಹಾಸದಲ್ಲಿ ಅತ್ಯಧಿಕ ತಪ್ಪು ತಿಳುವಳಿಕೆಗೀಡಾದ ವ್ಯಕ್ತಿಯಾಗಿದ್ದಾರೆ. ಅವರಿಗೆ ಪರಮತ ವಿರೋಧಿ ಮತ್ತು ತೀವ್ರ ಕೋಮುವಾದಿಯೆಂಬ ಹಣೆಪಟ್ಟಿ ಹಚ್ಚಲಾಗಿದೆ. ಬ್ರಿಟಿಷರ ಸುಳ್ಳು ಪ್ರಚಾರವು ಇದಕ್ಕೆ ಪ್ರೇರಕವಾಗಿದೆ. ವಸ್ತುತಃ ಅವರು ಸಹೋದರ ಸಮುದಾಯದ ಧಾರ್ಮಿಕ ವ್ಯವಹಾರಗಳಲ್ಲಿ ಯಾವುದೇ ಹಸ್ತಕ್ಷೇಪ ನಡೆಸಿರಲಿಲ್ಲ. ಅವರು ವಿಶ್ವಾಸ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅನುಮತಿಸಿದ್ದರು. ಬನಾರಸ್ನ ರಾಜ್ಯಪಾಲರಾಗಿದ್ದ ಅಬುಲ್ ಹಸನ್ರಿಗೆ ಅವರು ಕಳುಹಿಸಿದ ಆಜ್ಞೆಯಲ್ಲಿ ಹೀಗಿದೆ: “ನಮ್ಮ ಈ ನ್ಯಾಯನಿಷ್ಠ ಆಡಳಿತ ಕಾಲದಲ್ಲಿಯೂ ಬನಾರಸ್ ಮತ್ತಿತರೆಡೆಗಳಲ್ಲಿ ವಾಸವಾಗಿರುವ ಹಿಂದೂ ಪ್ರಜೆಗಳನ್ನು ಕೆಲವರು ತಾತ್ಸಾರ ಮತ್ತು ದ್ವೇಷದಿಂದ ಹಿಂಸಿಸುತ್ತಿರುವರೆಂಬ ಸುದ್ದಿ ದೊರೆತಿದೆ. ಅಲ್ಲಿನ ಆರಾಧನಾಲಯ ಸಂರಕ್ಷಕರಾದ ಬ್ರಾಹ್ಮಣರನ್ನು ಬೆದರಿಸಿ ಅವರ ಕೆಲಸ ಕಾರ್ಯಗಳಲ್ಲಿ ಅಡ್ಡಿಪಡಿಸಲು ಪ್ರಯತ್ನಿಸುತ್ತಿರುವರೆಂದೂ ತಿಳಿದು ಬಂದಿದೆ. ಪ್ರಾಮಾಣಿಕ ಮತ್ತು ನಿಷ್ಠಾವಂತರಾಗಿರುವ ಅಬುಲ್ ಹಸನ್ರಿಗೆ ನಾವು ಹೀಗೆ ಆಜ್ಞಾಪಿಸುತ್ತಿದ್ದೇವೆ: ಈ ಆಜ್ಞೆ ತಲಪಿದ ಕೂಡಲೇ ಅಂಥ ಕುಕೃತ್ಯಗಳನ್ನು ತಡೆಯಬೇಕು. ಬ್ರಾಹ್ಮಣರ ಕರ್ತವ್ಯ ನಿರ್ವಹಣೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಅನಂತಕಾಲ ಉಳಿಯಬೇಕಾದ ಮತ್ತು ದೇವದತ್ತವಾಗಿರುವ ನಮ್ಮ ಸಾಮ್ರಾಜ್ಯದ ಉನ್ನತಿ ಮತ್ತು ಮಾನವಕೋಟಿಯ ಸಮಗ್ರ ಹಿತಕ್ಕಾಗಿ ಅವರು ನಡೆಸುವ ಪ್ರಾರ್ಥನೆಗಳು ನಿರ್ವಿಘ್ನವಾಗಿ ಸಾಗುವ ಅವಕಾಶ ಒದಗಿಸಬೇಕು. ಇದನ್ನು ಬಹಳ ಅಗತ್ಯದ ಕೆಲಸವೆಂದು ಪರಿಗಣಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು” (ಸಿ.ಕೆ. ಕರೀಮ್ ಇತಿಹಾಸ ಪಠನ, ಪುಟ:327) ಹಿಜರಿ 1090 ರಬೀವುಲ್ ಆಖಿರ್ 17.
ಔರಂಗಝೇಬರ ಧಾರ್ಮಿಕ ಧೋರಣೆಯನ್ನು ಅಲೆಕ್ಸಾಂಡರ್ ಹ್ಯಾಮಿಲ್ಟನ್ ಹೀಗೆ ವಿಶ್ಲೇಷಿಸಿದ್ದಾರೆ: “ಹಿಂದುಗಳಿಗೆ ಪರಿಪೂರ್ಣ ಧಾರ್ಮಿಕ ಸ್ವಾತಂತ್ರ್ಯ ಲಭಿಸುತ್ತಿದೆ. ಮಾತ್ರವಲ್ಲ ಹಿಂದೂ ರಾಜಂದಿರ ಆಶ್ರಯದಲ್ಲಿ ಅವರು ನಿರ್ವಹಿಸುತ್ತಿದ್ದ ವ್ರತಾನುಷ್ಠಾನ ಉತ್ಸವಾದಿಗಳ ಆಚರಣೆಯ ಸೌಲಭ್ಯಗಳಿವೆ. ಕೇವಲ ಮೀರತ್ ನಗರವೊಂದರಲ್ಲಿಯೇ ಹಿಂದುಗಳಲ್ಲಿ ನೂರಾರು ವಿಭಿನ್ನ ಗುಂಪುಗಳಿದ್ದರೂ ಪ್ರಾರ್ಥನೆ ಮತ್ತು ತತ್ವಸಿದ್ಧಾಂತಗಳ ಬಗ್ಗೆ ಅವರಲ್ಲಿ ಯಾವುದೇ ವಿವಾದವಿಲ್ಲ, ಪ್ರತಿಯೊಬ್ಬರಿಗೂ ತಾವು ಬಯಸಿದಂತೆ ದೇವಾರ್ಚನ ನಡೆಸುವ ಮತ್ತು ಆರಾಧಿಸುವ ಸ್ವಾತಂತ್ರ್ಯವಿದೆ. ಧರ್ಮ ಸಂಘರ್ಷಗಳು ಅಪರಿಚಿತವಾಗಿದೆ.” (A New Account of the East Indies).
ಮುಸ್ಲಿಮರು ಹಲವು ಶತಮಾನಗಳ ಕಾಲ ರಾಜ್ಯಭಾರ ನಡೆಸಿದ್ದರೂ ಅವರು ಇಲ್ಲಿ ಅಲ್ಪಸಂಖ್ಯಾತರಾಗಿಯೇ ಉಳಿದಿದ್ದಾರೆ. ಇದರಿಂದ ಭಾರತದಲ್ಲಿ ಬಲಾತ್ಕಾರದ ಮತಾಂತರ ನಡೆದಿಲ್ಲ. ಮತ್ತು ವಿಶ್ವಾಸ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅನುಮತಿಸಲಾಗಿತ್ತೆಂದು ನಿಸ್ಸಂದೇಹವಾಗಿ ಗ್ರಹಿಸಬಹುದು. ಮುಸ್ಲಿಮ್ ಆಡಳಿತಗಾರರ ರಾಜಧಾನಿಯಾಗಿದ್ದ ಉತ್ತರ ಪ್ರದೇಶದಲ್ಲಿ ಈಗಲೂ 11 ಮತ್ತು ಮೈಸೂರಿನಲ್ಲಿ ಕೇವಲ 5% ಮುಸ್ಲಿಮರಿದ್ದಾರೆ. ಭಾರತದ ಇತರೆಡೆಗಳಲ್ಲಿಯೂ ಮುಸ್ಲಿಮ್ ಆಡಳಿತಗಾರರ ಕಾಲದಲ್ಲಿ ಇಸ್ಲಾಮ್ ವ್ಯಾಪಿಸಿಲ್ಲವೆಂಬುದು ಗಮನಾರ್ಹವಾಗಿದೆ. ಬಂಗಾಳದ ಮತಾಂತರದ ಕುರಿತು ದೊರೆತ ದಾಖಲೆಯು ಈ ವಾಸ್ತವಿಕತೆಯನ್ನು ಸ್ಪಷ್ಟಪಡಿಸುತ್ತದೆ:
“ಬ್ರಿಟಿಷರ ಆಡಳಿತ ಕಾಲದಲ್ಲಿ ನಡೆದ ನಿರಂತರ ಮತಾಂತರಗಳಿಂದ ಒಂದು ವಿಷಯವು ನಿಚ್ಚಳಗೊಂಡಿತು. ರಾಜಕೀಯ ಅಧಿಕಾರವಿದ್ದರೂ ಇಲ್ಲದಿದ್ದರೂ ಬಂಗಾಳದಲ್ಲಿ ಇಸ್ಲಾಮ್ ನಿರಂತರ ವಿಕಾಸವಾಗುತ್ತಿದೆಯೆಂದು 1891ರ ಜನಗಣತಿ ಸೂಚಿಸುತ್ತದೆ. 1872ರ ಬಳಿಕ ಉತ್ತರ ಬಂಗಾಳದಲ್ಲಿ 10,000ಕ್ಕೆ 100 ರಂತೆ, ಪೂರ್ವ ಬಂಗಾಳದಲ್ಲಿ 262ರಂತೆ, ಪಶ್ಚಿಮ ಬಂಗಾಳದಲ್ಲಿ 110 ರಂತೆ ಮತ್ತು ಇಡೀ ಬಂಗಾಳ ಪ್ರಾಂತ್ಯದಲ್ಲಿ ಸರಾಸರಿ 159ರಂತೆ ಹೆಚ್ಚಳವುಂಟಾಗಿದೆ.” (Census of India 1891 Vol: 3)
ಸರ್, ಡಬ್ಲ್ಯೂ ಡಬ್ಲೂ, ಹಂಟರ್ ಹೀಗೆ ಬರೆದಿದ್ದಾರೆ: “ಮುಸ್ಲಿಮರ ಆಡಳಿತ ಕೇಂದ್ರಗಳಾಗಿದ್ದ ದೆಹಲಿ ಮತ್ತು ಆಗ್ರಾಗಳಲ್ಲಿ ಮುಸ್ಲಿಮರ ಸಂಖ್ಯೆ ಪರಿಮಿತವಾಗಿದೆ. ದೆಹಲಿಯಲ್ಲಿ 1/10 ಪಾಲು ಇದ್ದರೆ ಆಗ್ರಾದಲ್ಲಿ ಕಾಲಂಶವೂ ಇಲ್ಲ.” (The Religion of India)
ಇಸ್ಲಾಮಿನ ಈ ಸಹಿಷ್ಣುತೆಯ ಧೋರಣೆಯ ಕುರಿತು ಗ್ಲೋಬಿನೋ ಹೀಗೆ ಬರೆದಿದ್ದಾರೆ: “ಇಸ್ಲಾಮ್ ಧರ್ಮವು, ವೈಯಕ್ತಿಕ ವಿಶ್ವಾಸದಲ್ಲಿ ಹಸ್ತಕ್ಷೇಪ ನಡೆಸದ ಅತ್ಯಂತ ಉದಾರ ಧರ್ಮವೆಂದು ಕಂಡು ಬರುತ್ತದೆ. ರಾಷ್ಟ್ರದ ಭದ್ರತೆಯು ಅಪಾಯಕ್ಕೆ ಸಿಲುಕಿದಾಗಇಸ್ಲಾಮಿ ಸರಕಾರಗಳು ಧಾರ್ಮಿಕ ಐಕ್ಯದ ಎಲ್ಲ ಮಾರ್ಗಗಳನ್ನು ಅಂಗೀಕರಿಸಲು ಪ್ರೇರಿತವಾದುವು. ಆ ವೇಳೆಯಲ್ಲಿಯೂ ಇಸ್ಲಾಮಿ ಮೌಲ್ಯಗಳಿಂದ ಮಾಡಿದ ಈ ಉದಾರನೀತಿಯು ಅದರ ಉತ್ತುಂಗದಲ್ಲಿತ್ತು. ಹಿಂಸೆ ಮತ್ತು ಬಲಾತ್ಕಾರದ ಯಾವೊಂದು ಲಾಂಛನವೂ ನಮಗೆ ಎಲ್ಲಿಯೂ ಗೋಚರಿಸುವುದಿಲ್ಲ.” (ಸರ್ ಥಾಮಸ್ ಆರಾಳ್: ಇಸ್ಲಾಮ್ ಬೋಧನೆ ಮತ್ತು ಪ್ರಚಾರ, ಪುಟ: 551)
ಕಳೆದ 14 ಶತಮಾನಗಳ ಇತಿಹಾಸವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವವರಿಗೆ, ಇಸ್ಲಾಮಿ ಸರಕಾರಗಳು, ಮತಾಂತರಕ್ಕಾಗಿ ಯಾರನ್ನೂ ಬಲಾತ್ಕರಿಸಿಲ್ಲ, ರಾಷ್ಟ್ರದ ಎಲ್ಲ ಪ್ರಜೆಗಳಿಗೂ ಸಂಪೂರ್ಣ ವಿಶ್ವಾಸ ಸ್ವಾತಂತ್ರ್ಯವಿದ್ದಿತೆಂದು ಸ್ಪಷ್ಟವಾಗಿ ಮನವರಿಕೆಯಾದೀತು. ಕೆಲವು ದುಷ್ಟ ಮುಸ್ಲಿಮ್ ಆಡಳಿತಗಾರರ ಆಶ್ರಯದಲ್ಲಿ ಮುಸ್ಲಿಮರಂತೆಯೇ ಮುಸ್ಲಿಮೇತರ ಪ್ರಜೆಗಳೂ ಬಹಳಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದರೆಂಬ ವಾಸ್ತವಿಕತೆಯನ್ನು ಇಲ್ಲಿ ನಿರ್ಲಕ್ಷಿಸುವಂತಿಲ್ಲ, ಆದರೆ ಅವುಗಳಿಗೆ ಧಾರ್ಮಿಕ ಹಿನ್ನೆಲೆಗಳಿರಲಿಲ್ಲ, ಬದಲಾಗಿ ಅವೆಲ್ಲವೂ ಎಲ್ಲ ಕಾಲಗಳ ಮರ್ದಕ ರಾಜಂದಿರರ ಸಾಮಾನ್ಯ ಧೋರಣೆಯಾಗಿತ್ತು. ಇಸ್ಲಾಮ್ ಧರ್ಮವು ಬಲಾತ್ಕಾರದ ಮತಾಂತರವನ್ನು ನಿಷೇಧಿಸಿ, ಸಂಪೂರ್ಣ ವಿಶ್ವಾಸ ಸ್ವಾತಂತ್ರ್ಯವನ್ನು ಅನುಮತಿಸಿತ್ತು. ಆದ್ದರಿಂದ ಧಾರ್ಮಿಕ ಮೌಲ್ಯಗಳಿಗೆ ನಿಷ್ಠರಾಗಿದ್ದ ವಿದ್ವಾಂಸರು ಮತ್ತು ಆಡಳಿತಗಾರರು ತದ್ವಿರುದ್ಧ ಧೋರಣೆಯನ್ನು ಎಂದೂ ಅಂಗೀಕರಿಸಿರಲಿಲ್ಲ.
- ಇಸ್ಲಾಮ್ ಮತ್ತು ಪರಧರ್ಮ ಸಹಿಷ್ಣುತೆ ಎಂಬ ಕೃತಿಯಿಂದ
IslamKannada News Portal

