Home / ಲೇಖನಗಳು / ಶ್ರೀರಾಮ ಹಾಗೂ ಶ್ರೀಕೃಷ್ಣ ಪ್ರವಾದಿಗಳಾಗಿದ್ದರೇ?

ಶ್ರೀರಾಮ ಹಾಗೂ ಶ್ರೀಕೃಷ್ಣ ಪ್ರವಾದಿಗಳಾಗಿದ್ದರೇ?

ದೇವಸಂದೇಶವು ಈ ಕಾಲದಲ್ಲೂ ಲಭಿಸುತ್ತಿದೆಯೇ? ದೀರ್ಘಕಾಲದ ತಪಸ್ಸಿನ ಮೂಲಕ ದಿವ್ಯಜ್ಞಾನ ಪಡೆಯಲು ಸಾಧ್ಯ ಹಾಗಾದರೆ ಅದು ಈಗಲೂ ಸಾಧ್ಯವಿಲ್ಲವೇ?

ದಿವ್ಯ ಸಂದೇಶಗಳನ್ನು ಇಂದ್ರಿಯಗಳಿಂದ ಗ್ರಹಿಸಲು ಅಥವಾ ಧ್ಯಾನದ ಮೂಲಕ ಗಳಿಸಲು ಸಾಧ್ಯವಿಲ್ಲ, ಇದು ಓರ್ವನ ಆಗ್ರಹ ಅಥವಾ ಆಶೆಯಿಂದ ಲಭಿಸುವಂತಹದಲ್ಲ. ಎಲ್ಲಾ ರೀತಿಯ ಲೌಕಿಕ ಚರ್ಚೆಗಳನ್ನು ಮೀರಿನಿಂತ ಅತ್ಯಂತ ಸೂಕ್ಷ್ಮವಾದ ಒಂದು ವಿಸ್ಮಯವಾಗಿದೆ. ದಿವ್ಯಸಂದೇಶವನ್ನು ಅದರೊಂದಿಗೆ ಹೋಲಿಸಬಹುದಾದರೂ ಪ್ರವಾದಿಗಳಿಗೆ ಲಭಿಸುವ ದಿವ್ಯಸಂದೇಶವು ಎಂದೂ ಮಿಥ್ಯವಾಗಲು ಸಾಧ್ಯವಿಲ್ಲ. ಅದು ಎಲ್ಲ ದೌರ್ಬಲ್ಯಗಳಿಂದಲೂ ಮುಕ್ತವಾಗಿದೆ. ಪ್ರವಾದಿತ್ವವು ದೇವನ ಕೊಡುಗೆಯಾಗಿದೆ. ಅವನು ತನ್ನಿಚ್ಛೆ ಪ್ರಕಾರ ಸಂದೇಶವಾಹಕರನ್ನು ಆಯ್ದುಕೊಳ್ಳುತ್ತಾನೆ. ಅವರನ್ನು ಮಾನವ ಸಮಾಜದ ಮಾರ್ಗದರ್ಶಕರಾಗಿ ನಿಯೋಜಿಸಲಾಗುತ್ತದೆ. ಅದರಲ್ಲಿ ಮಾನವನ ಇಚ್ಛೆ ಅಥವಾ ಪ್ರಯತ್ನಕ್ಕೆ ಯಾವುದೇ ಪಾತ್ರವಿರುವುದಿಲ್ಲ, ಅಲ್ಲಾಹನು ಹೇಳುತ್ತಾನೆ: “ನಿಮ್ಮ ಮೇಲೆ ಗ್ರಂಥವು ಇಳಿಸಲ್ಪಡುವುದೆಂದು ನೀವು ಖಂಡಿತ ನಿರೀಕ್ಷಿಸಿರಲಿಲ್ಲ. ಇದು ಕೇವಲ ನಿಮ್ಮ ಪ್ರಭುವಿನ ಕೃಪೆಯಿಂದ (ನಿಮ್ಮ ಮೇಲೆ ಅವತೀರ್ಣಗೊಂಡಿದೆ) ಆದ್ದರಿಂದ ನೀವು ಸತ್ಯನಿಷೇಧಿಗಳ ಸಹಕಾರಿಗಳಾಗಬೇಡಿರಿ.” (ಪವಿತ್ರ ಕುರ್‌ಆನ್ 28: 86)

”ಇದು ಆತನ ಅನುಗ್ರಹ. ಇದನ್ನು ಅವನು ತಾನಿಚ್ಚಿಸಿದವರಿಗೆ ನೀಡುತ್ತಾನೆ ಮತ್ತು ಅವನು ಮಹಾ ಅನುಗ್ರಹದಾನಿ.” (ಪವಿತ್ರ ಕುರ್ ಆನ್ 62: 4)

ದಿವ್ಯ ಸಂದೇಶವೆನೆಂದು ಅಥವಾ ದೇವಗ್ರಂಥವೇನೆಂದು ಮುಹಮ್ಮದ್(ಸ) ರಿಗೆ ಮೊದಲು ತಿಳಿದಿರಲಿಲ್ಲ ಎಂದು ಪವಿತ್ರ ಕುರ್‌ಆನ್ ಸ್ಪಷ್ಟಪಡಿಸುತ್ತದೆ: “”ನಾವು ನಮ್ಮ ಅಪ್ಪಣೆಯಿಂದ ಒಂದು ರೂಹನ್ನು ನಿಮ್ಮ ಕಡೆಗೆ ವಹ್ಯ್ ಮಾಡಿರುತ್ತೇವೆ. ಗ್ರಂಥವೆಂದರೆ ಏನೆಂದು ಸತ್ಯವಿಶ್ವಾಸ ಎಂದರೆ ಏನೆಂದು ನಿಮಗೆ ಗೊತ್ತಿರಲಿಲ್ಲ. ಆದರೆ ಆ ರೂಹನ್ನು ನಾವು ಒಂದು ಪ್ರಕಾಶವಾಗಿ ಮಾಡಿದೆವು. ಆ ಮೂಲಕ ನಾವು ನಮ್ಮ ದಾಸರ ಪೈಕಿ ನಾವಿಚ್ಛಿಸುವವರಿಗೆ ದಾರಿ ತೋರಿಸುತ್ತೇವೆ.’ (ಪವಿತ್ರ ಕುರ್ ಆನ್ 42:52)

ಪ್ರವಾದಿ ಮುಹಮದ್(ಸ)ರ ಹಿರಾವಾಸದ ಕಾರಣವೇನು?

ಪ್ರವಾದಿ ಮುಹಮದ್(ಸ)ರು ಪ್ರವಾದಿತ್ವಕ್ಕೆ ಮುಂಚೆ ಹಿರಾಗುಹೆಯಲ್ಲಿ ಏಕಾಂಗಿಯಾಗಿ ಧ್ಯಾನನಿರತರಾಗಲು ಕಾರಣವೇನು?

ದಿವ್ಯ ಸಂದೇಶವನ್ನು ಪಡೆಯುವ ವ್ಯಕ್ತಿಯು ಅದಕ್ಕೆ ಅರ್ಹನಾಗಿರಬೇಡವೇ? ಆತ ಸಜ್ಜನನೂ ಸಚ್ಚಾರಿತ್ರ್ಯವಂತನೂ ಆಗಿರಬೇಕು. ಬೇರೆ ಎಲ್ಲಾ ಪ್ರವಾದಿಗಳಂತೆ ಪ್ರವಾದಿ ಮುಹಮ್ಮದ್(ಸ)ರನ್ನು ದಿವ್ಯ ಸಂದೇಶವನ್ನು ವಹಿಸಲು ಅರ್ಹನಾಗಿರುವ ರೀತಿಯಲ್ಲಿ ಬೆಳಸಲಾಗಿತ್ತು. ಅವರು ಅಗತ್ಯವಾದ ಎಲ್ಲಾ ಯೋಗ್ಯತೆಗಳಿಂದಲೂ ಅನುಗ್ರಹಿಸಲ್ಪಟ್ಟಿದ್ದರು. ಆದ್ದರಿಂದ ಸುಳ್ಳು, ಮೋಸ, ವಂಚನೆಯು ಸೋಂಕದಂತೆ ಪರಿಶುದ್ಧರಾಗಿ ಅವರು ಬೆಳೆದು ಬಂದರು. ಸತ್ಯಸಂಧ, ಪ್ರಾಮಾಣಿಕನೆಂದು ಸಮಾಜದಲ್ಲಿ ಹೊಗಳಲ್ಪಡುವ ವ್ಯಕ್ತಿತ್ವವಾಗಿದ್ದರು. 40 ವರ್ಷವಾಗುವಾಗ ದೇವನ ಒಳಕರೆಯನ್ನು ಸ್ವೀಕರಿಸಿ, ಕೆಡುಕು ತುಂಬಿದ ಸಮಾಜದಿಂದ ದೂರವಾಗಿ ಹಿರಾಗುಹೆಯಲ್ಲಿ ಏಕಾಂತವಾಸ ಮಾಡಿದರು. ಪ್ರವಾದಿತ್ವಕ್ಕೆ ಅಗತ್ಯವಾದ ಪರಿಪೂರ್ಣತೆಯನ್ನು ಗಳಿಸಿದರು ಅಥವಾ ಅಲ್ಲಾಹನು ಅಂತ್ಯ ಸಂದೇಶವಾಹಕರಾಗಿ ಆರಿಸಿರುವ ವ್ಯಕ್ತಿಯನ್ನು ಅವನು ಅದಕ್ಕೆ ಅರ್ಹನಾಗಿಸಿದನು. ಹಿರಾಗುಹೆಯ ಧ್ಯಾನಭರಿತ ದಿನಗಳು ಅದರ ಒಂದು ಭಾಗವಾಗಿತ್ತು.

ಸಂದೇಶವಾಹಕರೆಂದು ಗುರುತಿಸಲ್ಪಡುವುದು ಹೇಗೆ?

ಸಂದೇಶವಾಹಕರು ಸಮಕಾಲೀನ ಸಮೂಹದ ಸತ್ಯಸಂಧನಾದ ಯಾವುದೇ ವ್ಯಕ್ತಿಯೂ ಗುರುತಿಸಲು ಸಾಧ್ಯವಾಗುವಂತಹ ವ್ಯಕ್ತಿತ್ವದವರಾಗಿರುತ್ತಾರೆ. ಅವರು ಪರಿಶುದ್ಧರಾಗಿರುತ್ತಾರೆ. ಜೀವನದಲ್ಲಿ ಸುಳ್ಳು, ಅಸಭ್ಯ, ದುಷ್ಕೃತ್ಯಗಳು, ಸಂದೇಶವಾಹಕರಲ್ಲಿ ಸಂಭವಿಸುವುದಿಲ್ಲ, ಸತ್ಯ, ನ್ಯಾಯ, ಸತ್ಕರ್ಮವನ್ನು ಇತರರಿಗೆ ಉಪದೇಶಿಸುವುದರೊಂದಿಗೆ ಸ್ವತಃ ಅನುಸರಿಸುತ್ತಾರೆ. ಅವರು ತಮ್ಮ ಮಾತಿಗೆ ವಿರುದ್ಧವಾದ ವರ್ತನೆ ತೋರಿದ ಉದಾಹರಣೆಯಿಲ್ಲ, ಯಾವಾಗಲು ಸತ್ಯನಿಷ್ಠೆ, ಸ್ತುತ್ಯರ್ಹ, ಸಂಶಯರಹಿತ ಮಾರ್ಗವನ್ನು ಅವಲಂಬಿಸುತ್ತಾರೆ. ಎಲ್ಲ ರೀತಿಯ ಸ್ವಾರ್ಥತೆಯಿಂದ ಮುಕ್ತರಾಗಿರುತ್ತಾರೆ. ಯಾರನ್ನೂ ವಂಚಿಸದ, ಹಕ್ಕನ್ನು ಕಸಿದುಕೊಳ್ಳದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಯಾರು ಎಷ್ಟೇ ಪ್ರಯತ್ನಿಸಿದರೂ ದೇವಸಂದೇಶವಾಹಕರ ಬದುಕಿನಲ್ಲಿ ನ್ಯೂನ್ಯತೆ ಗೋಚರಿಸಲು ಸಾಧ್ಯವಿಲ್ಲ.

ಕವಿಗಳನ್ನು ಅವರ ಕವಿತೆಗಳಿಂದಲೂ, ಕಲಾಕಾರರನ್ನು ಅವರ ಚಿತ್ರಗಳಿಂದಲೂ ಗುರುತಿಸುವಂತೆ ಸಮಾಜವು ಪ್ರವಾದಿಗಳನ್ನು ಅವರಿಗೆ ಅವತೀರ್ಣವಾಗುವ ಬೋಧನೆಗಳಿಂದ ಮನವರಿಕೆ ಮಾಡುತ್ತದೆ. ಇತರರು ಊಹಿಸಲಸಾಧ್ಯ ಕಾರ್ಯಗಳು ದೇವಸಂದೇಶವಾಹಕರ ಮನದಲ್ಲಿ ಮೂಡುತ್ತದೆ. ಅದು ಸತ್ಯವೆಂದು ಜನರಿಗೆ ಅರ್ಥವೂ ಆಗುತ್ತದೆ. ಹೀಗೆ ಎಲ್ಲಾ ಸಂದೇಶವಾಹಕರು ತಮ್ಮ ಸಮೂಹದ ಎಲ್ಲಾ ಸನ್ಮನಸ್ಸುಗಳಿಂದ ಗುರುತಿಸಲ್ಪಡುತ್ತಾರೆ.

ಶ್ರೀರಾಮ ಹಾಗೂ ಶ್ರೀಕೃಷ್ಣ

ಈ ಮಾನದಂಡದ ಆಧಾರದಂತ ಇಸ್ಲಾಮೀ ದೃಷ್ಟಿಕೋನದಲ್ಲಿ ಶ್ರೀರಾಮ ಹಾಗೂ ಶ್ರೀಕೃಷ್ಣ ಪ್ರವಾದಿಗಳಾಗಿದ್ದರೇ?

ಸಂದೇಶವಾಹಕರು ಆಗಮಿಸದ ಯಾವುದೇ ಜನಾಂಗವು ಗತಿಸಿಹೋಗಿಲ್ಲವೆಂದು ಇಸ್ಲಾಮ್ ಸ್ಪಷ್ಟವಾಗಿ ಹೇಳುತ್ತದೆ. ಪವಿತ್ರ ಕುರ್‌ಆನ್‌ನಲ್ಲಿ ಅಲ್ಲಾಹನು ಹೇಳುತ್ತಾನೆ. ಎಲ್ಲಾ ಸಮುದಾಯಗಳಿಗೂ ನಾವು ಸಂದೇಶವಾಹಕರನ್ನು ನಿಯೋಗಿಸಿದ್ದೇವೆ. (ಪವಿತ್ರ ಕುರ್ ಆನ್ 16:36)

ನಾವು ನಿಮ್ಮನ್ನು ಸುವಾರ್ತೆ ಮತ್ತು ಎಚ್ಚರಿಕೆ ನೀಡುವವರಾಗಿ ಸತ್ಯಸಹಿತ ಕಳುಹಿಸಿರುತ್ತೇವೆ. ಎಚ್ಚರಿಕೆ ಕೊಡುವವರಾರೂ ಬಂದಿರದಂತಹ ಸಮುದಾಯವೊಂದು ಗತಿಸಿಲ್ಲ. (ಪವಿತ್ರ ಕುರ್‌ಆನ್ 35:24)

ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತದಲ್ಲಿ ಸಂದೇಶವಾಹಕರು ಆಗಮಿಸಿದ್ದರು. ಮತ್ತು ದೇವಸಂದೇಶವು ಅವತೀರ್ಣಗೊಂಡಿದೆಯೆಂಬುದಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಆ ಪ್ರವಾದಿಗಳು ಯಾರೆಂದು ತಿಳಿಯಲು ಸಾಧ್ಯವಾಗುವಂತಹ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ, ನಮ್ಮ ದೇಶದ ಪೂರ್ವಿಕರಿಗೆ, ಮಹಾ ಪುರುಷರಿಗೆ ಸಂಬಂಧಿಸಿ ನಂಬಲು ಸಾಧ್ಯವಾಗದಂತಹ, ಅತಿಶಯೋಕ್ತಿಯೆನಿಸುವ, ಹಲವಾರು ವರ್ಣನೆಗಳು ಮಾತ್ರ ಇವೆ. ಸತ್ಯಾಸತ್ಯತೆಯನ್ನು ಬೇರ್ಪಡಿಸಲಾಗದ ರೀತಿಯಲ್ಲಿ ಅವು ಬಹಳ ಸಂಕೀರ್ಣತೆಯಿಂದ ಕೂಡಿದೆ. ಶ್ರೀರಾಮ,ಶ್ರೀಕೃಷ್ಣ ಹಾಗೂ ಬುದ್ಧರ ಚರಿತ್ರೆಯೂ ಇದಕ್ಕಿಂತ ಭಿನ್ನವಲ್ಲ, ಅವರ ಕುರಿತು ಹೇಳಲಾಗುವ ವಿಷಯಗಳು ಸತ್ಯವಾಗುವ ಸಾಧ್ಯತೆಯಿಲ್ಲ. ಆದ್ದರಿಂದ ಈಗಿರುವ ನಂಬಿಕೆ ಹಾಗೂ ಐತಿಹ್ಯವನ್ನು ಅವಲಂಬಿಸಿ ಅವರು ಪ್ರವಾದಿಯೋ ಅಲ್ಲವೋ ಎಂದು ನಿರ್ಧರಿಸಲು ಸಾಧ್ಯವಿಲ್ಲ ಆದರೆ, ಆ ಸಾಧ್ಯತೆಯನ್ನು ಸಂಪೂರ್ಣ ತಳ್ಳಿಹಾಕುವಂತಿಲ್ಲ. ನಮ್ಮ ದೇಶದ ಪೂರ್ವಿಕರಾದ ಮಹಾನ್ ವ್ಯಕ್ತಿಗಳ ನೈಜ ಚರಿತ್ರೆಯನ್ನು ಅನುಯಾಯಿಗಳು ಹಾಗೂ ಎದುರಾಳಿಗಳು ಕಪೋಲಕಲ್ಪಿತ ಕಥೆಗಳಿಂದ ದೂರವಾಗಿ ತೆರೆದಿಡಲು ಏನಾದರೂ ದಾರಿಯಿದೆಯೆಂದಾದರೆ ಅದು ದೊಡ್ಡ ವಿಜಯವಾಗಿರುತ್ತದೆ. ಸತ್ಯನಿಷ್ಠೆ ಹಾಗೂ ನಿಷ್ಪಕ್ಷವಾದ ಅಧ್ಯಯನಗಳಿಂದ ಅವರ ನೈಜ ಜೀವನವು ಬಹಿರಂಗವಾಗಿ ಅವರು ದೇವ ಪ್ರವಾದಿಯಾಗಿದ್ದರೆಂದು ಮನದಟ್ಟಾದರೆ ಅದರಿಂದ ಈ ದೇಶದಲ್ಲಿ ಹೆಚ್ಚಿನ ಸಂತೋಷ ಮುಸ್ಲಿಮರಿಗೆ ದೊರೆಯುತ್ತದೆ. ಏನಿದ್ದರೂ ಅಂತಹ ಒಂದು ಸಂಶೋಧನೆ ಅತಿ ಅಗತ್ಯವೆಂಬುದರಲ್ಲಿ ಸಂಶಯವಿಲ್ಲ.

“ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ”

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …