Home / ಲೇಖನಗಳು / ಆರಾಧನಾ ಸ್ವಾತಂತ್ರ್ಯ

ಆರಾಧನಾ ಸ್ವಾತಂತ್ರ್ಯ

 

ಇಸ್ಲಾಮ್, ಸಂಪೂರ್ಣವಾಗಿ ಏಕದೇವ ವಿಶ್ವಾಸದ ಬುನಾದಿಯಲ್ಲಿದೆ. ಬಹುದೇವ ವಿಶ್ವಾಸವನ್ನೂ ಅದಕ್ಕೆ ಸಂಬಂಧಿಸಿದ ಎಲ್ಲ ಕಲ್ಪನೆ, ಸ್ವಭಾವ ಮತ್ತು ಚಿಹ್ನೆಗಳನ್ನೂ ಅದು ನಿರಾಕರಿಸುತ್ತದೆ. ಆದ್ದರಿಂದಲೇ ಇಸ್ಲಾಮ್, ವಿಗ್ರಹಾರಾಧನೆಯನ್ನು ತೊರೆಯಬೇಕೆಂದು ಬಲವಾಗಿ ಪ್ರತಿಪಾದಿಸುತ್ತದೆ. ಮಾನವ ಜೀವನದಲ್ಲಿ ಅದರ ಒಂದು ಸಣ್ಣ ಅಂಶವನ್ನೂ ಅದು ಮೆಚ್ಚುವುದಿಲ್ಲ. ಹಾಗಿದ್ದರೂ ವಿಗ್ರಹ ಹಾಗೂ ಇತರ ಆರಾಧ್ಯ ವಸ್ತುಗಳನ್ನು ತೆಗಳಿ ನಿಂದಿಸುವುದನ್ನು ಇಸ್ಲಾಮ್ ಬಲವಾಗಿ ನಿಷೇಧಿಸಿದೆ. ಅವುಗಳ ಆರಾಧಕರ ಮನನೋಯಿಸುವ, ಅವರ ಭಾವನೆಗಳನ್ನು ಘಾಸಿಗೊಳಿಸುವ ಎಲ್ಲ ರೀತಿಯ ಟೀಕೆಗಳನ್ನು ತೊರೆಯಬೇಕೆಂದೂ ಆಜ್ಞಾಪಿಸಿದೆ. ಆದ್ದರಿಂದ, ವಿಶ್ವಾಸಿಗಳ ಮನನೋಯುವಂತೆ ಆರಾಧ್ಯ ವಸ್ತುಗಳನ್ನೂ ಆದರಣೀಯ ವ್ಯಕ್ತಿಗಳನ್ನೂ ನಿಂದಿಸುವುದು ಅರೋಚಕ ಕೃತ್ಯವಾಗಿದೆ.
ಪವಿತ್ರ ಕುರ್‌ಆನ್ ಹೀಗೆ ಆಜ್ಞಾಪಿಸಿರುತ್ತದೆ: ಅಲ್ಲಾಹನ ಹೊರತು ಯಾರನ್ನು ಪ್ರಾರ್ಥಿಸುತ್ತಿರುವರೋ ಅವರನ್ನು ತೆಗಳಬೇಡಿರಿ. (ಪವಿತ್ರ ಕುರ್ ಆನ್ , 6:108)

ಇಸ್ಲಾಮ್, ಅನ್ಯಧರ್ಮಿಯರ ಆರಾಧ್ಯ ವಸ್ತುಗಳನ್ನು ನಿಂದಿಸಬಾರದೆಂದು ಆಜ್ಞಾಪಿಸಿದ್ದು ಅವರಿಗೆ ಸಂಪೂರ್ಣ ಆರಾಧನಾ ಸ್ವಾತಂತ್ರ್ಯವನ್ನು ನೀಡಿದೆ. ಪ್ರವಾದಿಗಳ ಕಾಲದಲ್ಲಿ ಅವರ ಮಸೀದಿಯಲ್ಲಿಯೂ ಕ್ರೈಸ್ತ ಬಾಂಧವರಿಗೆ ಆರಾಧನೆ ನಿರ್ವಹಿಸುವ ಅವಕಾಶ ನೀಡಿದ್ದರು. ಒಮ್ಮೆ ನಜ್ರಾನ್‌ನ ಕ್ರೈಸ್ತರು ಪ್ರವಾದಿಯವರೊಡನೆ ವಿಚಾರ ವಿನಿಮಯ ನಡೆಸಲಿಕ್ಕಾಗಿ ಮದೀನಾದ ಮಸೀದಿಗೆ ಬಂದರು. ಅವರು ತಮ್ಮ ಧರ್ಮದ ಬಗ್ಗೆ ಹೇಳುತ್ತಿರುವಾಗ ಪ್ರವಾದಿಯವರು ಬಹಳ ಶ್ರದ್ಧೆಯಿಂದ ಆಲಿಸಿದ್ದರು. ತರುವಾಯ ಅವರಿಗೆ ಇಸ್ಲಾಮ್ ಧರ್ಮವನ್ನು ಪರಿಚಯಿಸಿದರು. ತನ್ಮಧ್ಯೆ ನಜ್ರಾನ್‌ನಿಂದ ಬಂದ ಅತಿಥಿಗಳಿಗೆ ಅವರ ಪ್ರಾರ್ಥನೆಯ ವೇಳೆಯಾಯಿತು. ಆ ಕೂಡಲೇ ಪ್ರವಾದಿವರ್ಯರು(ಸ) ಅವರಿಗೆ ಅದೇ ಮಸೀದಿಯಲ್ಲಿ ಅವರ ಆಚಾರ ಪ್ರಕಾರ ಪ್ರಾರ್ಥಿಸುವುದಕ್ಕಾಗಿ ಎಲ್ಲ ಅನುಕೂಲತೆಗಳನ್ನೂ ಒದಗಿಸಿದರು. ಅದರ ಇನ್ನೊಂದು ಪಾರ್ಶ್ವದಲ್ಲಿ ಅವರು ತಮ್ಮ ಅನುಯಾಯಿಗಳ ಜೊತೆಯಲ್ಲಿ ನಮಾಝ್ ನಿರ್ವಹಿಸಿದರು. ಹೀಗೆ ಮುಸ್ಲಿಮರು ಮತ್ತು ಕ್ರೈಸ್ತರು ಒಂದೇ ಮಸೀದಿಯಲ್ಲಿ ತಂತಮ್ಮ ಧರ್ಮಾಚಾರದಂತೆ ಆರಾಧನಾ ಕರ್ಮಗಳನ್ನು ನಿರ್ವಹಿಸುವ ಉದಾತ್ತ ವರ್ತನೆಗೆ ಪ್ರವಾದಿಯವರೇ ನಾಂದಿ ಹಾಕಿದರು.

ಹಾಗೆಯೇ ಇತಿಯೋಪಿಯದಿಂದ ಪ್ರವಾದಿಯವರ ದರ್ಶನಕ್ಕಾಗಿ ಬಂದ ಕ್ರೈಸ್ತ ಬಾಂಧವರಿಗೆ ಮಸೀದಿಯಲ್ಲಿಯೇ ಉಳಕೊಳ್ಳುವ ಸೌಲಭ್ಯ ಒದಗಿಸಿದ್ದರು.ಪ್ರವಾದಿಯವರು(ಸ)ಅವರನ್ನು ಆದರದಿಂದ ಸ್ವಾಗತಿಸಿ ಅವರಿಗೆ ಅಗತ್ಯವಿರುವ ಎಲ್ಲ ಏರ್ಪಾಡುಗಳನ್ನು ಮಾಡಿದರು.

ಪ್ರವಾದಿ(ಸ) ಮತ್ತು ಅವರ ಸಂಗಾತಿಗಳು ಅನ್ಯ ಧರ್ಮಿಯರಿಗೆ ರಕ್ಷಣೆ ನೀಡಿದಾಗ ಅವರ ವಿಶ್ವಾಸ ಮತ್ತು ಆರಾಧನಾ ಸ್ವಾತಂತ್ರ್ಯಕ್ಕೂ ಭದ್ರತೆ ನೀಡಿದ್ದರು. ನಜ್ರಾನ್‌ನ ಕ್ರೈಸ್ತರೊಡನೆ ಪ್ರವಾದಿವರ್ಯರು(ಸ) ಮಾಡಿಕೊಂಡ ಒಪ್ಪಂದದ ಶರ್ತದಲ್ಲಿ ಹೀಗಿದೆ: “ನಜ್ರಾನ್‌ನ ಕೈಸ್ತರಿಗೂ ಅವರ ಸಂಗಡಿಗರಿಗೂ ಅಲ್ಲಾಹನ ಅಭಯ ಮತ್ತು ದೇವ ಪ್ರವಾದಿಯಾದ ಮುಹಮ್ಮದ್‌ ಕರ್ತವ್ಯಬದ್ಧ ಸಂರಕ್ಷಣೆಯಿದೆ. ಇದು ಅವರ ಪ್ರಾಣ, ಧರ್ಮ, ಆಸ್ತಿ, ಸಂಪತ್ತು ಇತ್ಯಾದಿಗಳಿಗೂ ಇಲ್ಲಿ ಉಪಸ್ಥಿತರಿರುವವರಿಗೂ ಇಲ್ಲದವರಿಗೂ ಅವರ ಒಂಟೆ ಮತ್ತು ಪ್ರತಿನಿಧಿ ತಂಡಗಳಿಗೂ ಶಿಲುಬೆ ಮತ್ತು ಚರ್ಚ್‌ಗಳಂಥ ಧಾರ್ಮಿಕ ಸಂಕೇತಗಳಿಗೂ ಅನ್ವಯವಾಗುತ್ತದೆ. ಪ್ರಚಲಿತ ಸ್ಥಿತಿಯನ್ನು ಕಿಂಚಿತ್ತೂ ಬದಲಾಯಿಸುವುದಿಲ್ಲ, ಅವರ ಯಾವ ಹಕ್ಕುಗಳನ್ನೂ ಧಾರ್ಮಿಕ ಚಿಹ್ನೆಗಳನ್ನೂ ಬದಲಾಯಿಸುವುದಿಲ್ಲ. ಅವರ ಪಾದ್ರಿ, ಪುರೋಹಿತ ಅಥವಾ ಚರ್ಚ್‌ನ ಸೇವಕನನ್ನು ಸ್ಥಾನ ಭ್ರಷ್ಟಗೊಳಿಸುವುದಿಲ್ಲ.”

ಪ್ರವಾದಿವರ್ಯರ(ಸ) ಪ್ರಥಮ ಉತ್ತರಾಧಿಕಾರಿ ಹಝ್ರತ್ ಅಬೂಬಕರ್‌ರು(ರ) ಹೀರಾ ನಿವಾಸಿಗಳೊಂದಿಗೆ ಹೀಗೆ ಒಪ್ಪಂದ ಮಾಡಿದ್ದರು: “ಅವರ ಆರಾಧನಾಲಯ ಮತ್ತು ಇಗರ್ಜಿ ಹಾಗೂ ಅವರು ವೈರಿಗಳಿಂದ ರಕ್ಷಣೆ ಪಡೆಯುವ ಕೋಟೆಗಳನ್ನು ನಾಶಪಡಿಸುವುದಿಲ್ಲ, ಘಂಟಾನಾದ ಮತ್ತು ಹಬ್ಬದ ದಿನ ಶಿಲುಬೆ ಮೆರವಣಿಗೆಗೆ ಅಡ್ಡಿಪಡಿಸುವುದಿಲ್ಲ.”

ಸಿರಿಯಾಕ್ಕೆ ನೇಮಿಸಿದ ಸೇನೆಗೆ ಅಬೂಬಕರ್‌ರು(ರ) ನೀಡಿದ ಹತ್ತು ಆದೇಶಗಳಲ್ಲಿ ಪುರೋಹಿತರು ಮತ್ತು ಅರ್ಚಕರನ್ನು ಹಿಂಸಿಸಬಾರದು, ಅವರ ಆರಾಧನಾಲಯಗಳನ್ನು ಧ್ವಂಸಗೊಳಿಸಬಾರದೆಂಬುದು ಪ್ರಮುಖವಾಗಿತ್ತು.

ಮುಸ್ಲಿಮ್ ಸೇನಾಧಿಪತಿ ಅಬೂ ಉಬೈದಾ ಬಅ್ ಲಬಾದ ನಿವಾಸಿಗಳೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಹೀಗಿತ್ತು: “ಇದು ಬಅ್ ಲಬಾದ ನಿವಾಸಿಗಳು ಮತ್ತು ಅವರೊಂದಿಗಿರುವ ರೋಮನ್ ಹಾಗೂ ಪರ್ಶಿಯನ್ ಅರಬರಿಗೆ ಅನ್ವಯವಾಗುವ ಸಾಮಾನ್ಯ ಒಪ್ಪಂದವಾಗಿದೆ. ನಗರದಲ್ಲಿಯೂ ಹೊರ ವಲಯದಲ್ಲಿಯೂ ಅವರ ಮನೆ, ಚರ್ಚ್, ಪ್ರಾಣ, ಸೊತ್ತುಗಳಿಗೆ ಅಭಯವಿದೆ.”

ವಿಶ್ವವಿಖ್ಯಾತ ಸೇನಾನಿ ಖಾಲಿದ್ ಬಿನ್ ವಲೀದ್ ಹೀಗೆ ಒಪ್ಪಂದ ಮಾಡಿಕೊಂಡಿದ್ದರು. “ಅವರ ಮಠ ಮತ್ತು ಚರ್ಚ್‌ಗಳನ್ನು ನಾಶಪಡಿಸುವುದಿಲ್ಲ. ನಮಾಝ್ ವೇಳೆಯ ಹೊರತು ರಾತ್ರಿ ಮತ್ತು ಹಗಲಿನಲ್ಲಿ ಅವರು ಬಯಸಿದಾಗ ಗಂಟೆ ಬಾರಿಸಬಹುದು. ವಿಶೇಷ ದಿನಗಳಲ್ಲಿ ಶಿಲುಬೆ ಉತ್ಸವ ನಡೆಸಬಹುದು.”

ಹಬೀಬ್ ಬಿನ್ ಮಸ್ಲಮರು ಖಬೀಲ್ ನಿವಾಸಿಗಳೊಂದಿಗೂ ಹುದೈಫ ಬಿನ್ ಯಮಾನ್‌ರು ಜುರ್‌ಜಾನ್ ನಿವಾಸಿಗಳೊಂದಿಗೂ ಇಂಥ ಒಪ್ಪಂದಗಳನ್ನು ಮಾಡಿರುವುದಾಗಿ ಇತಿಹಾಸ ದಾಖಲೆಗಳಿಂದ ತಿಳಿದು ಬರುತ್ತದೆ. ಮಧ್ಯಪೂರ್ವ ದೇಶದ ಕ್ರೈಸ್ತ ವಿಶ್ವಾಸಿಗಳು ಮುಸ್ಲಿಮ್ ಆಡಳಿತದ ಆಶ್ರಯದಲ್ಲಿ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸಿದ್ದರಿಂದ ಬಹಳ ಸಂತುಷ್ಟರಾಗಿದ್ದರು. ಸುದೀರ್ಘ 5 ಶತಮಾನಗಳ ಕಾಲ ಇಸ್ಲಾಮಿ ಆಡಳಿತದ ಅಧೀನವಿದ್ದರೂ ಈ ಸ್ಥಿತಿ ಅಥವಾ ಅಭಿಪ್ರಾಯವು ಬದಲಾಗಲಿಲ್ಲ. ರೋಮನರ ಆಡಳಿತಕ್ಕಿಂತ ಮುಸ್ಲಿಮರ ಆಡಳಿತವು ನಮಗೆ ಉತ್ತಮವೆಂದು ಬಹಿರಂಗವಾಗಿ ಸಾರಲೂ ಅವರು ಹಿಂಜರಿಯಲಿಲ್ಲ. ಹನ್ನೆರಡನೆಯ ಶತಮಾನದ ದ್ವಿತೀಯಾರ್ಧದಲ್ಲಿ ಅಂಟೋಕ್ಯಾದ ಯಾಕೋಬಾ ಪೇಟ್ರಿಯಾರ್ಕಿಸ್ ಆಗಿದ್ದ ಹಿರಿಯ ಮೈಕಲ್, ರೋಮ್ ಚಕ್ರವರ್ತಿಯಾಗಿದ್ದ ಹರ್ಕ್ಯುಲೆಸ್‌ನ ದೌರ್ಜನ್ಯದ ಕಥೆಗಳ ಕುರಿತು ಹೀಗೆ ಬರೆದಿದ್ದಾರೆ: “ಈ ಹಿನ್ನೆಲೆಯಲ್ಲಿ ಸರ್ವಶಕ್ತನೂ ಮಾನವರ ಸಾಮ್ರಾಜ್ಯಗಳನ್ನು ತನ್ನ ಹಿತಾನುಸಾರ ಬದಲಾಯಿಸುವ, ತಾನಿಚ್ಛಿಸುವವರಿಗೆ ಸಾಮ್ರಾಜ್ಯವನ್ನು ನೀಡುವ ಮತ್ತು ಬಡವರ ಉದ್ಧಾರಕನಾದ ಪ್ರತೀಕಾರದ ದೇವನು, ರೋಮನರ ಹಸ್ತಗಳಿಂದ ನಮ್ಮನ್ನು ರಕ್ಷಿಸಲಿಕ್ಕಾಗಿ ಇಸ್ರೇಲಿ ಸಂತಾನಗಳನ್ನು ದಕ್ಷಿಣದಿಂದ ಕರೆತಂದನು. ರೋಮನರು ನಮ್ಮ ಚರ್ಚ್ ಮತ್ತು ಮಠಗಳನ್ನು ದೋಚಿ, ನಮ್ಮನ್ನು ನಿರ್ದಯೆಯಿಂದ ಹಿಂಸಿಸುತ್ತಿದ್ದುದನ್ನು ದೇವನು ನೋಡುತ್ತಿದ್ದನು. ವಸ್ತುತಃ ನಮಗೆ ಸ್ವಲ್ಪ ನಷ್ಟವಾಗಿದ್ದರೂ ಅದಕ್ಕೆ ಕಾಲಿಡೋನಿಯನ್ ವತಿಯಿಂದ ವಹಿಸಿಕೊಡಲಾದ ನಮ್ಮ ಚರ್ಚ್‌ಗಳು ಅವರ ವಶವಿರುವುದೇ ಕಾರಣವಾಗಿದೆ. ಅರಬರು ನಗರಗಳನ್ನು ಸ್ವಾಧೀನಪಡಿಸಿದಾಗ ಚರ್ಚ್‌ಗಳ ಯಥಾಸ್ಥಿತಿಯನ್ನು ಕಾಪಾಡಿದರು. ಏನಿದ್ದರೂ ನಮಗೆ ರೋಮನರ ಕ್ರೌರ್ಯ, ದೌರ್ಜನ್ಯ, ರೋಷ, ಧರ್ಮಾಂಧತೆಗಳಿಂದ ವಿಮೋಚನೆ ದೊರಕಿ ನಾವು ನೆಮ್ಮದಿಯಿಂದಿರುವುದು ಸಾಮಾನ್ಯ ವಿಷಯವಲ್ಲ.”(Michal The Elder, Vol: II, P.P. 412, 413 ಉದ್ಧರಣೆ: ಸರ್ ಥಾಮಸ್ ಅರ್ನಾಳ್ಡ್ ಇಸ್ಲಾಮ್ ಬೋಧನೆ ಮತ್ತು ಪ್ರಚಾರ ಪುಟ: 67)

ಡಾ| ಮುಸ್ತಫಾಸಬಾಯಿ ಹೀಗೆ ಬರೆದಿದ್ದಾರೆ: ಕ್ರೈಸ್ತರು ಅಮವಿ ಆಡಳಿತ ಕಾಲದಲ್ಲಿಯೇ ತಮ್ಮ ಧಾರ್ಮಿಕ ಆಚಾರ ಮತ್ತು ಉತ್ಸವಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೆರವೇರಿಸುತ್ತಿದ್ದರು. ಶಿಲುಬೆ ಹೊತ್ತು ಮೆರವಣಿಗೆ ನಡೆಸುವುದು ಅವರ ರೂಢಿಯಾಗಿತ್ತು. ಧಾರ್ಮಿಕ ನಾಯಕರು ಸಾಂಪ್ರದಾಯಿಕ ಉಡುಪು ಧರಿಸಿ ಅದರಲ್ಲಿ ಭಾಗವಹಿಸುತ್ತಿದ್ದರು.

ಒಮ್ಮೆ ಪೇಟ್ರಿಯಾರ್ಕಿಸ್ ಮೈಕೆಲ್ (Michal) ಒಂದು ಬೃಹತ್ ಮೆರವಣಿಗೆಯೊಂದಿಗೆ ಅಲೆಕ್ಸಾಂಡ್ರಿಯಾ ನಗರಕ್ಕೆ ಆಗಮಿಸಿದರು. ಶಿಲುಬೆ, ಮೇಣದ ಬತ್ತಿ ಮತ್ತು ಬೈಬಲ್ ಹಿಡಿದವರು ಅದರ ಮುಂಚೂಣಿಯಲ್ಲಿದ್ದರು. ಭಕ್ತ ಜನರು ತಮ್ಮ ಪೇಟ್ರಿಯಾರ್ಕಿಸನ ಶ್ರೇಷ್ಠತೆಯನ್ನು ಗಟ್ಟಿಯಾಗಿ ಘೋಷಿಸುತ್ತಿದ್ದರು. ಈ ಘಟನೆ ಹಿಶಾಮ್ ಬಿನ್ ಅಬ್ದುಲ್ ಮಲಿಕ್‌ರ ಕಾಲದಲ್ಲಿ ನಡೆದಿತ್ತು.

“ಹಾರೂನ್ ರಶೀದ್‌ರ ಕಾಲದಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಕ್ರೈಸ್ತರು ದೊಡ್ಡ ಶಿಲುಬೆಗಳನ್ನು ಹೊತ್ತು ಭಾರೀ ಮೆರವಣಿಗೆ ನಡೆಸಿದ್ದರು.” (ಡಾ| ಮುಸ್ತಫಾಸಬಾಯಿ: ಇಸ್ಲಾಮೀ ನಾಗರಿಕತೆ ಕೆಲವು ಶೋಭಾಯಮಾನ ಚಿತ್ರಗಳು ಪುಟ: 113)

‘ಅಹ್ಸನುತ್ತಕಾಸಿಮ್’ ಎಂಬ ಗ್ರಂಥದಲ್ಲಿ ಮಕ್ದಿಸ್ ಹೀಗೆಂದಿದ್ದಾರೆ: “ಕ್ರೈಸ್ತ ಹಬ್ಬದ ವೇಳೆ ಶೀರೋಸ್ ಪೇಟೆಯನ್ನು ಅಲಂಕರಿಸುವ ರೂಢಿಯಿತ್ತು. ನೈಲ್ ನದಿಯಲ್ಲಿ ನೆರೆ ಬಂದ ಸಂದರ್ಭದಲ್ಲಿ ಕ್ರೈಸ್ತರು ಜರಗಿಸುತ್ತಿದ್ದ ಶಿಲುಬೆ ಏರಿಸುವ ಆಚರಣೆಯಲ್ಲಿ ಈಜಿಪ್ಟ್ ನಿವಾಸಿಗಳೂ ಅತಿಥಿಗಳಾಗಿ ಭಾಗವಹಿಸುತ್ತಿದ್ದರು.”

‘ಮಕ್ರೀಸಿ’ ತಮ್ಮ ಖುತ್ವತ್’ ಎಂಬ ಗ್ರಂಥದಲ್ಲಿ ಹೀಗೆ ಹೇಳಿದ್ದಾರೆ: “ಅಖ್ಸೀದಿಗಳ ಕಾಲದಲ್ಲಿ ಜನಸಾಮಾನ್ಯರು ಜ್ಞಾನ ಸ್ನಾನವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಹಿಜರಿ ಶಕ 230 ರಲ್ಲಿ ಜ್ಞಾನ ಸ್ನಾನದ ಪ್ರಯುಕ್ತ ಬಹಳ ಆಕರ್ಷಕ ಉತ್ಸವ ಜರಗಿತು. ಆಗ ‘ಅಲ್ ಮನೀಲ್’ ದ್ವೀಪದ ವಿಶೇಷ ಅರಮನೆಯಲ್ಲಿ ಕುಳಿತು ಅಖ್ಸೀದಿ ಚಕ್ರವರ್ತಿ ಮುಹಮ್ಮದ್ ತ್ವಗ್ಜ್ ಅದನ್ನು ವೀಕ್ಷಿಸಿದರು. ಹೀಗೆ ಜ್ಞಾನ ಸ್ನಾನ ಆಚರಣೆಯಲ್ಲಿ ಎಲ್ಲ ಜನ ವಿಭಾಗಗಳೂ ಸಂತೋಷದಿಂದ ಭಾಗವಹಿಸಿದುವು.”

ಕಳೆದ 14 ಶತಮಾನಗಳ ಇಸ್ಲಾಮಿ ಇತಿಹಾಸದಲ್ಲಿ ಮುಸ್ಲಿಮ್ ಆಡಳಿತಗಾರರು ಅಥವಾ ವಿದ್ವಾಂಸರು ಅನ್ಯಧರ್ಮಿಯರ ಆರಾಧನಾ ಸ್ವಾತಂತ್ರ್ಯವನ್ನು ನಿರೋಧಿಸಿದ್ದರೂ ಮೊಟಕುಗೊಳಿಸಿದ್ದರೆಂದು ಸಾಬೀತುಪಡಿಸಲು ಸಾಧ್ಯವಿಲ್ಲ, ಸಿಂಧನ್ನು ಸ್ವಾಧೀನಪಡಿಸಿದ ಮುಹಮ್ಮದ್ ಬಿನ್ ಕಾಸಿಮ್‌ ಕುರಿತು ಈಶ್ವರೀ ಪ್ರಸಾದ್‌ ಹೀಗೆಂದಿದ್ದಾರೆ: “ಅವರು ಬ್ರಾಹ್ಮಣರೊಂದಿಗೆ ಅವರ ಘನತೆಗೆ ತಕ್ಕಂತೆ ಗೌರವದಿಂದ ವರ್ತಿಸುತ್ತಿದ್ದರು… ಧಾರ್ಮಿಕ ಸ್ವಾತಂತ್ರ್ಯವನ್ನೂ ಅನುಮತಿಸಲಾಗಿತ್ತು. ಆರಾಧನೆಗೆ ಸಂಬಂಧಿಸಿ ಬ್ರಾಹ್ಮಣರ ಅಭೀಷ್ಟಗಳಿಗೆ ಮನ್ನಣೆ ನೀಡಲಾಗಿತ್ತು.” (History of Muslim Rule P: 46)

ಮುಂದೆ ಅವರು ಹೀಗೆಂದಿದ್ದಾರೆ: “ಅವರು ಅಧೀನಪಡಿಸಿದ ಜನರಿಗೆ ಆರಾಧನಾ ಸ್ವಾತಂತ್ರ್ಯವನ್ನು ನೀಡಿ ಅವರೊಂದಿಗೆ ಸಹಿಷ್ಣುತೆಯಿಂದ ವರ್ತಿಸಿದ್ದರು.” (Ibid, P: 49)

ಮುಸ್ಲಿಮ್ ಯೋಧರು ಅಂಗೀಕರಿಸಿದ ಉದಾರ ನೀತಿಯ ಕುರಿತು ಡಾ| ತಾರಾಚಂದ್ ಹೀಗೆ ಬರೆದಿದ್ದಾರೆ: “ಮುಸ್ಲಿಮ್ ಯೋಧರು ಸೋತವರೊಡನೆ ಬಹಳ ಉತ್ತಮವಾಗಿ ವರ್ತಿಸುತ್ತಿದ್ದರು. ಹಿಂದೂ ವಿದ್ವಾಂಸರಿಗೂ ಪೂಜಾರಿಗಳಿಗೂ ತಂತಮ್ಮ ದೇವಾಲಯಗಳಲ್ಲಿ ಆರಾಧನೆಗಳನ್ನು ನಡೆಸುವ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದರು. ಪೂಜಾರಿಗಳಿಗೂ ದೇವಾಲಯಗಳಿಗೂ ಸಾಂಪ್ರದಾಯಿಕ ಕಾಣಿಕೆಗಳನ್ನು ನೀಡಲು ರೈತರಿಗೆ ಒಪ್ಪಿಗೆಯಿತ್ತರು.” (ಅಹ್ಲೆ ಹಿಂದ್ + ಮುಕ್ತಸರ್ ತಾರೀಕ್ ಪುಟ: 153)

ಮೊಗಲ್ ಆಡಳಿತದ ಸ್ಥಾಪಕನಾದ ಬಾಬರ್ ಚಕ್ರವರ್ತಿ ಪರಧರ್ಮಿಯರೊಡನೆ ಬಹಳ ಔದಾರ್ಯದಿಂದ ವರ್ತಿಸುತ್ತಿದ್ದರು ಮತ್ತು ಅವರ ಕಾಲದಲ್ಲಿ ಹಿಂದುಗಳಿಗೆ ಯಾವ ತೊಂದರೆಯೂ ಇರಲಿಲ್ಲವೆಂದು ಸ್ಟೇನ್ಲಿ ಲೆಯಿನ್‌ವೂಲ್ ಸ್ಪಷ್ಟವಾಗಿ ಸಾಬೀತುಪಡಿಸಿದ್ದಾರೆ: (Illustrated Weekly 12-10-1975)

ಮಗ ಹುಮಾಯೂನನಿಗೆ ಬಾಬರ್ ನೀಡಿದ ಅಂತ್ಯೋಪದೇಶದಲ್ಲಿ ಹಿಂದೂ ಸಹೋದರರೊಡನೆ ಉದಾರವಾಗಿ ವರ್ತಿಸಬೇಕೆಂದು ವಿಶೇಷ ತಾಕೀತು ಮಾಡಿದ್ದರು. ಮಾಜೀ ರಾಷ್ಟ್ರಪತಿ ಡಾ| ರಾಜೇಂದ್ರ ಪ್ರಸಾದ್ ಉಲ್ಲೇಖಿಸಿರುವ ಪ್ರಸ್ತುತ ಅಂತ್ಯೋಪದೇಶಗಳಲ್ಲಿ ಹೀಗೆ ಹೇಳಲಾಗಿದೆ: “ಭಾರತವು ವಿವಿಧ ಧರ್ಮಗಳ ದೇಶವಾಗಿದೆ. ಅದಕ್ಕಾಗಿ ನೀನು ಕೃತಜ್ಞತೆ ಸಲ್ಲಿಸಬೇಕು. ಅಲ್ಲಾಹನು ನಿನಗೆ ಅಧಿಕಾರವನ್ನು ನೀಡಿದರೆ ನೀನು ಧರ್ಮ ಪಕ್ಷಪಾತಿಯಾಗಬಾರದು. ಹಿಂದುಗಳ ಮನನೋಯುವಂತೆ ದನಗಳನ್ನು ಕಡಿಯಬಾರದು. ಹಾಗೆ ಮಾಡಿದರೆ ಜನರು ನಿನ್ನನ್ನು ದ್ವೇಷಿಸಬಹುದು. ಮಂದಿರ ಮತ್ತು ಆರಾಧನಾಲಯಗಳನ್ನು ಕೆಡಹಬಾರದು. ರಾಜನು ಪ್ರಜೆಗಳನ್ನೂ ಪ್ರಜೆಗಳು ರಾಜನನ್ನೂ ಪ್ರೀತಿಸುವಂತಹ ವಾತಾವರಣವನ್ನು ಸೃಷ್ಟಿಸಬೇಕು. ದಯೆಯ ಹೃದಯದಿಂದ ಇಸ್ಲಾಮನ್ನು ಸಾರ್ಥಕಗೊಳಿಸಬೇಕು, ಬಲಾತ್ಕಾರ ಮಾಡಬಾರದು.” (ಉದ್ಧರಣೆ: ಮಿಸೆಸ್ ನಿಲೋಫರ್ ಅಹ್ಮದ್, ಇನ್‌ಸ್ಟಿಟ್ಯೂಟ್ ಆಫ್ ಒಬ್ಜಕ್ಟಿವ್ ಸ್ಟಡೀಸ್, ನವದೆಹಲಿ.)

ಪಾಟ್ನಾ ವಾರ್ಸಿಟಿಯ ಇತಿಹಾಸ ಉಪನ್ಯಾಸಕ ಶ್ರೀ ರಾಮ್ ಪ್ರಸಾದ್ ಖೋಸ್ಲಾ ಬಾಬರ್ ಚಕ್ರವರ್ತಿಯನ್ನು “ಧರ್ಮ ಪಕ್ಷಪಾತ ಮತ್ತು ಸಂಕುಚಿತ ದೃಷ್ಟಿಕೋನಗಳಿಲ್ಲದ ಆಡಳಿತಗಾರ”ನೆಂದು ಬಣ್ಣಿಸಿದ್ದಾರೆ. (Moghal Kingship ಪುಟ: 207)

ಪಂಡಿತ ಜವಾಹರಲಾಲ್ ನೆಹ್ರೂರವರು ಝಹೀರುದ್ದೀನ್ ಮುಹಮ್ಮದ್ ಬಾಬರ್‌ನನ್ನು ನ್ಯಾಯನಿಷ್ಠ ಮತ್ತು ಸಮರ್ಥ ಆಡಳಿತಗಾರನೆಂದು ವರ್ಣಿಸಿದ್ದಾರೆ. (Discovery of India)

ಅಲಹಾಬಾದ್ ವಾರ್ಸಿಟಿಯ ಇತಿಹಾಸ ಉಪನ್ಯಾಸಕ ಡಾ| ರಾಮಪ್ರಸಾದ್ ತ್ರಿಪಾಠಿಯವರು, ಬಾಬರ್ ಮತಾಂಧನಾಗಿರಲಿಲ್ಲ, ಅವನು ಹಿಂದುಗಳೊಡನೆ ಸೌಹಾರ್ದದಿಂದ ವರ್ತಿಸುತ್ತಿದ್ದನೆಂದು ಸಾಧಾರ ಸ್ಪಷ್ಟಪಡಿಸಿದ್ದಾರೆ. (Rise & Fall of the Moghal Empire)

ಖ್ಯಾತ ಇತಿಹಾಸಗಾರ ರೂಶ್ ಬ್ರೂಕ್ ವಿಲ್ಲಿಯಮ್ ಹೀಗೆ ಬರೆದಿದ್ದಾರೆ. “ಬಾಬರ್, ಸದ್ಗುಣ ಸಂಪನ್ನರಾಗಿದ್ದರು. ಉದಾತ್ತ ಭಾವನೆ, ನಿಷ್ಟುರ ನ್ಯಾಯಪ್ರಜ್ಞೆ, ದಿಗ್ವಿಜಯ ಸಾಮರ್ಥ್ಯ, ಪ್ರಜಾ ಪ್ರೇಮ, ದೇವವಿಶ್ವಾಸಿಗಳೊಡನೆ ಗೌರವಭಾವ, ಸೈನಿಕರ ಮನ ಸೆಳೆಯುವ ಪ್ರತಿಭೆ, ಅದಮ್ಯ ನ್ಯಾಯ ನಿಷ್ಠೆ ಇತ್ಯಾದಿ ಗುಣ ವೈಶಿಷ್ಟ್ಯಗಳು ಬಾಬರನಲ್ಲಿ ರಕ್ತಗತವಾಗಿತ್ತು.” (Rush brook William the Empire builder of 16th century)

ಅಕ್ಬರ್ ಚಕ್ರವರ್ತಿಯ ಮಗ ಜಹಾಂಗೀರನ ಕಾಲದಲ್ಲಿ ಕೇವಲ ವಾರಣಾಸಿಯಲ್ಲಿಯೇ 70 ಹೊಸ ಹಿಂದೂ ದೇವಾಲಯಗಳನ್ನು ನಿರ್ಮಿಸಲಾಗಿತ್ತು. ಮೊಗಲರ ಕಾಲದ ವಿವಾದಾಸ್ಪದ ವ್ಯಕ್ತಿಯಾಗಿರುವ ಔರಂಗಝೇಬರ ಕಾಲದಲ್ಲಿಯೂ ಅನೇಕ ಹೊಸ ದೇವಾಲಯಗಳನ್ನು ನಿರ್ಮಿಸಲಾಗಿತ್ತು. ‘ಆಲಂಗೀರ ನಾಮದಲ್ಲಿ ಹೀಗೆ ಬರೆಯಲಾಗಿದೆ: “ಔರಂಗಝೇಬನು ಬಂಗಾಳ ಮತ್ತು ಅಸ್ಸಾಮ್ ಗಳಲ್ಲಿ ಕೆಲವು ಹಿಂದೂ ದೇವಾಲಯಗಳನ್ನು ಕಟ್ಟಿಸಿ, ಬುದ್ಧಗಯಾಕ್ಕೆ ಅಪಾರ ಭೂಮಿಯನ್ನು ಉಂಬಳಿಯಾಗಿ ನೀಡಿದನು.” (Illustrated Weekly 5-10-75)

ಔರಂಗಝೇಬನ ಕಾಲದಲ್ಲಿ (1671ರಲ್ಲಿ) ಕಾಶಿ ವಿಶ್ವನಾಥ ಕ್ಷೇತ್ರ ಮತ್ತು ವಾರಣಾಸಿಯ ವಿವಿಧ ದೇವಾಲಯಗಳಿಗೆ ಜಮೀನು ಮತ್ತಿತರ ನೆರವುಗಳನ್ನು ಒದಗಿಸಲಾಗಿತ್ತು. ಅವರ ಕಾಲದಲ್ಲಿಯೇ ಕುಮಾರ ಗುರುಗಳು ಉತ್ತರ ಭಾರತದಲ್ಲಿ ಕಾಶೀಮಠ ಮತ್ತು ಕೇದಾರನಾಥ ಕ್ಷೇತ್ರವನ್ನು ಕಟ್ಟಿಸಿದರು. ಚಕ್ರವರ್ತಿಯು ಅವುಗಳಿಗೆ ಅವಶ್ಯಕ ಸಹಾಯ ಸಹಕಾರಗಳನ್ನು ನೀಡಿದ್ದನು.

ಪಂಡಿತ್ ಸುಂದರಲಾಲ್ ಹೀಗೆಂದಿದ್ದಾರೆ: “ಅಕ್ಬರ್, ಜಹಾಂಗೀರ್ ಮತ್ತು ಶಾಜಹಾನ್‌ರ ಕಾಲದಲ್ಲಿಯೂ ಔರಂಗಝೇಬ್ ಮತ್ತು ಅವರ ಉತ್ತರಾಧಿಕಾರಿಗಳ ಕಾಲದಲ್ಲಿಯೂ ಹಿಂದುಗಳು ಮತ್ತು ಮುಸ್ಲಿಮರೊಡನೆ ಸಮಾನ ಧೋರಣೆಯನ್ನು ಅನುಸರಿಸಲಾಗುತ್ತಿತ್ತು. ಉಭಯ ಧರ್ಮಿಯರನ್ನು ಸಮಾನವಾಗಿ ಗೌರವಿಸಲಾಯಿತು. ಧರ್ಮದ ಹೆಸರಲ್ಲಿ ಯಾರೊಡನೆಯೂ ಯಾವ ಪಕ್ಷಪಾತವನ್ನೂ ತೋರಿಸಿರಲಿಲ್ಲ. ಎಲ್ಲ ರಾಜಂದಿರೂ ಅನೇಕ ಕ್ಷೇತ್ರಗಳಿಗೆ ಹಲವು ಭೂಸೊತ್ತುಗಳನ್ನು ನೀಡಿದ್ದರು. ಇಂದಿಗೂ ಭಾರತದ ವಿವಿಧ ಕ್ಷೇತ್ರ ಪೂಜಾರಿಗಳ ಬಳಿ ಔರಂಗಝೇಬ್‌ರ ಸಹಿಯಿರುವ ರಾಜಾಜ್ಞೆಗಳಿವೆ. ಅವು ಔರಂಗಝೇಬನು ಪಾರಿತೋಷಕ ಮತ್ತು ಜಮೀನುಗಳನ್ನು ನೀಡಿರುವುದರ ದಾಖಲೆಗಳಾಗಿವೆ. ಇಂತಹ ಎರಡು ಆಜ್ಞೆಗಳು ಈಗಲೂ ಅಲಹಾಬಾದ್‌ನಲ್ಲಿವೆ. ಆ ಪೈಕಿ ಒಂದು ಸೋಮನಾಥ ದೇವಾಲಯದ ಪೂಜಾರಿಯ ವಶದಲ್ಲಿದೆ.

ಔರಂಗಝೇಬ್ ಹೊರಡಿಸಿದ ಹಲವು ಸಾರ್ವಜನಿಕ ಫರ್ಮಾನುಗಳಲ್ಲಿ ಹಿಂದೂ ಸಹೋದರರ ಆರಾಧನಾ ಕರ್ಮಗಳಿಗೆ ಅಡ್ಡಿಯುಂಟು ಮಾಡಬಾರದೆಂಬ ವಿಶೇಷ ಎಚ್ಚರಿಕೆ ಕಂಡು ಬರುತ್ತದೆ. ‘ಈ ಶುಭ ಮುಹೂರ್ತದಲ್ಲಿ ನಮ್ಮ ಆಜ್ಞೆಯೇನೆಂದರೆ, ರಂಜೀವನೆಂಬ ಪುರೋಹಿತನ ನಿವಾಸದ ಮುಂಭಾಗದಲ್ಲಿ ಗಂಗಾ ತೀರದ ಬನೀಮಾಧವ ಕಡವಿನ ಸಮೀಪ ಹಾಗೂ ಅಲ್ಲಿನ ಪ್ರಧಾನ ಮಸೀದಿಯ ಬದಿಯಲ್ಲಿ ಹರಡಿಕೊಂಡಿರುವ 588,1/2, ದಿರ ವಿಸ್ತೀರ್ಣದ ಸ್ಥಳವೂ ಅವುಗಳ ಮೇಲ್ಬಾಗದಲ್ಲಿರುವ ಇನ್ನೊಂದು ಸ್ಥಳವೂ ಜನವಾಸ ಅಥವಾ ಕಟ್ಟಡಗಳಿಲ್ಲದೇ ಖಾಲಿಯಾಗಿದೆ. ಅಲ್ಲಿಗೆ ಬರುವ ಹಿಂದುಗಳನ್ನು ಕೆಲವರು ಬೆದರಿಸಿ ಓಡಿಸುತ್ತಿದ್ದಾರೆ ಮತ್ತು ಅಲ್ಲಿ ಅಕ್ರಮ ಪ್ರವೇಶ ನಡೆಸುತ್ತಿರುವರೆಂಬ ಸುದ್ದಿ ನಮಗೆ ಬಂದಿದೆ. ಆ ಸ್ಥಳದಲ್ಲಿರುವ ಬ್ರಾಹ್ಮಣರನ್ನು ಅಥವಾ ಇತರ ಹಿಂದುಗಳನ್ನು ಇನ್ನು ಮುಂದೆ ಯಾರೂ ಬೆದರಿಸಿ ಪೀಡಿಸಬಾರದು, ಹಿಂದಿನಂತೆಯೇ ಅವರು ತಮ್ಮ ಕೆಲಸ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸುತ್ತಾ ದೇವದತ್ತವಾಗಿರುವ ಮತ್ತು ಅನಾದಿ ಕಾಲದ ತನಕ ಉಳಿಯಬೇಕಾದ ನಮ್ಮ ರಾಷ್ಟ್ರದ ಕ್ಷೇಮಾಭಿವೃದ್ಧಿಗಾಗಿ ಪ್ರಾರ್ಥಿಸುವುದಕ್ಕೆ ಯಾವ ರೀತಿಯಲ್ಲಿಯೂ ಅಡ್ಡಿಯುಂಟು ಮಾಡಬಾರದು. (ಬಂಗಾಳ್’ ಏಷ್ಯಾಟಿಕ್ ಸೊಸೈಟಿ ಜರ್ನಲ್, 1911 ಪುಟ: 689) (ಹಿಜರಿ 1069 ಜುಮಾದಿಲ್ ಅಖಿರ್ 15 (A.D.1659)]

ಪ್ರವಾದಿಯವರ ಕಾಲದಿಂದ ಈ ತನಕ ಇಸ್ಲಾಮಿ ಆಡಳಿತದ ಆಶ್ರಯದಲ್ಲಿ ಮುಸ್ಲಿಮೇತರ ಸಹೋದರರಿಗೆ ಆರಾಧನಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನೀಡಲಾಗುತ್ತಿತ್ತು. ಪಾಕಿಸ್ಥಾನ, ಬಾಂಗ್ಲಾದೇಶ, ಇಂಡೋನೇಶ್ಯಾ, ಮಲೇಶ್ಯಾ, ಸಿರಿಯಾ, ಈಜಿಪ್ಟ್ ನಂಥ ಎಲ್ಲ ಮುಸ್ಲಿಮ್ ರಾಷ್ಟ್ರಗಳಲ್ಲಿಯೂ ಮುಸ್ಲಿಮೇತರರಿಗೆ ಪೂರ್ಣ ಆರಾಧನಾ ಸ್ವಾತಂತ್ರವಿದೆ. ಧಾರ್ಮಿಕ ವಿದ್ವಾಂಸರಾಗಲಿ, ಸರಕಾರಗಳಾಗಲಿ ಅದರಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ. ಪಾಕಿಸ್ತಾನದಲ್ಲಿ ಕೃಷ್ಣ ಜನ್ಮಾಷ್ಟಮಿ, ದೀಪಾವಳಿ ಮುಂತಾದ ಹಬ್ಬದ ದಿನಗಳಲ್ಲಿ ಹಿಂದೂ ಬಾಂಧವರಿಗೆ ಅಕ್ಕಿ, ಸಕ್ಕರೆ ಇತ್ಯಾದಿಗಳ ಖೋಟಾ ಹೆಚ್ಚಿಸಲಾಗುತ್ತದೆ. ಅದಲ್ಲದೆ, ಲಾಹೋರ್ ಜಿಲ್ಲೆಯ ಅಂಗೀಕೃತ ಶಾಲಾ ಕಾಲೇಜುಗಳಲ್ಲಿ ಕಲಿಯುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸರಕಾರವು ಸ್ಕಾಲರ್ ಶಿಪ್ ನೀಡುತ್ತಲಿದೆ. ಲಾಹೋರ್‌ನ ಕ್ರೈಸ್ತ ಧರ್ಮಿಯರಿಗೆ ದಫನ ಭೂಮಿ ನಿರ್ಮಾಣಕ್ಕೆ ಸರಕಾರವು ಆರ್ಥಿಕ ನೆರವು ನೀಡಿದೆ.

ಬಾಂಗ್ಲಾದೇಶದ ಸ್ಥಿತಿಯೂ ಭಿನ್ನವಾಗಿಲ್ಲ, ಕೆಲವು ವರ್ಷಗಳ ಹಿಂದೆ ಅಲ್ಲಿಂದ ಬಂದ ವಾರ್ತೆಯೊಂದು ಹೀಗಿತ್ತು: ಬಾಂಗ್ಲಾದೇಶದ ಹಿಂದೂ ದೇವಾಲಯ ಮತ್ತು ಧಾರ್ಮಿಕ ಸಂಸ್ಥೆಗಳ ಪುನರುದ್ಧಾರಕ್ಕಾಗಿ ಸರಕಾರವು 6 ಲಕ್ಷ ರೂ. ಮಂಜೂರು ಮಾಡಿದೆ. ಈ ನಿರ್ಧಾರ ಕೈಗೊಂಡ ಕಾನೂನು ಮತ್ತು ಧಾರ್ಮಿಕ ವ್ಯವಹಾರಗಳ ಸಚಿವ ಕೆ.ಎಮ್. ನೂರುಲ್ ಇಸ್ಲಾಮ್‌ರು, ನಾವು ಎಲ್ಲ ಧರ್ಮಗಳ ಹಿತಚಿಂತಕರಾಗಿರುವೆವೆಂದು ತಿಳಿಸಿದರು. (ಮಾತೃಭೂಮಿ, 4-10-85)

ಮಸ್ಕತ್, ಬಹ್ರೈನ್, ದುಬೈ ಮುಂತಾದ ಅರಬ್ ಮುಸ್ಲಿಮ್ ರಾಷ್ಟ್ರಗಳಲ್ಲಿ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರು ವಿಶ್ವಾಸ-ಆರಾಧನಾ ಸ್ವಾತಂತ್ರ್ಯವೂ ಸೇರಿ ಎಲ್ಲ ರೀತಿಯ ಸೌಲಭ್ಯಗಳನ್ನೂ ಹೊಂದಿರುವರೆಂಬುದು ನಿರ್ವಿವಾದವಾಗಿದೆ. ಆರೆಸ್ಸೆಸ್‌ನ ಮಲಯಾಳ ಪತ್ರಿಕೆ ‘ಕೇಸರಿ’ ಸ್ವತಃ ಹೀಗೆ ಬರೆದಿದೆ: “ಮಸ್ಕತ್, ಬಹರೈನ್, ದುಬೈ ಮೊದಲಾದ ಗಲ್ಫ್ ರಾಷ್ಟ್ರಗಳು ವಿದೇಶಿ ಆಡಳಿತಾಧೀನವಿದ್ದ ಕಾಲದಿಂದಲೂ ಭಾರತೀಯರು ಮತ್ತು ಹಿಂದುಗಳಾದ ಸಿಂಧೀ ಜನರು ಅಲ್ಲಿ ವ್ಯಾಪಾರಾರ್ಥ ನೆಲೆಸಿದ್ದರಿಂದ ಆ ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಗಣ್ಯಪಾತ್ರ ವಹಿಸಿದ್ದರು. ಈ ವಾಸ್ತವಿಕತೆಯನ್ನು ಮನಗಂಡು ಅಲ್ಲಿನ ಆಡಳಿತಗಾರರು ಅವರಿಗೆ ವಿಶೇಷ ಮಾನ್ಯತೆ ನೀಡಿದ್ದರು.” (ಕೇಸರಿ 6-4-86)

“ದುಬೈಯ ಶೇಖ್‌ರು ಅವರಿಗೆ (ಹಿಂದುಗಳಿಗೆ) ಅವಶ್ಯಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಸಿಂಧೀಯರ ಅಗತ್ಯಕ್ಕಾಗಿ ಹಿಂದೂ ದೇವಾಲಯ ಮತ್ತು ಇಷ್ಟದೇವತೆಗಳನ್ನು ಇರಿಸಿ ಪೂಜಿಸುವ ಅನುಮತಿ ಹಾಗೂ ಉತ್ಸವಾದಿಗಳ ಆಚರಣೆಗೂ ಮನ್ನಣೆ ನೀಡಲಾಗಿದೆ. ಹಿಂದುಗಳ ಶವ ಸಂಸ್ಕಾರಕ್ಕಾಗಿ ಪ್ರತ್ಯೇಕ ರುದ್ರಭೂಮಿಯನ್ನೂ ಅನುಮತಿಸಲಾಗಿದೆ. (Ibid 5-1-86)

ಇನ್ನೊಂದು ಮುಸ್ಲಿಮ್ ರಾಷ್ಟ್ರವಾಗಿರುವ ಇಂಡೋನೇಶ್ಯಾದ ಕುರಿತು ಅದೇ ಸಾಪ್ತಾಹಿಕ ಹೀಗೆ ಬರೆದಿತ್ತು: “ಎಲ್ಲ ಜನ ವಿಭಾಗಗಳಿಗೂ ಆರಾಧನಾ ಸ್ವಾತಂತ್ರ್ಯವನ್ನು ನೀಡುವ ಇಂಡೋನೇಶ್ಯನ್ ಸಂವಿಧಾನವು ಆ ರಾಷ್ಟ್ರದ ಜಾತ್ಯತೀತ ಸ್ವರೂಪವನ್ನು ಸ್ಪಷ್ಟಪಡಿಸುತ್ತದೆ. ಇಸ್ಲಾಮ್, ಕ್ರೈಸ್ತ, ಬೌದ್ಧ ಮತ್ತು ಹಿಂದೂ ಹೀಗೆ 4 ಧರ್ಮಗಳಿಗೂ ಸರಕಾರವು ಸಮಾನ ಮನ್ನಣೆ ಮತ್ತು ಪ್ರೋತ್ಸಾಹ ನೀಡುತ್ತಿದೆ. ಅದಕ್ಕಾಗಿ ಸರಕಾರದ ಆಶ್ರಯದಲ್ಲಿ ವಿಶೇಷ ಖಾತೆಯೇ ಇದೆ. ಇಲ್ಲಿ ವಿವಿಧ ಧರ್ಮಾನುಯಾಯಿಗಳು ಪರಸ್ಪರ ಪ್ರೀತಿ ಸೌಹಾರ್ದದಿಂದ ಬಾಳುತ್ತಿದ್ದಾರೆ.” (Ibid 7-6-87)

ಆಧುನಿಕ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅನುಮತಿಸಿರುವುದಕ್ಕಿಂತ ಅಧಿಕ ಅನುಕೂಲತೆ ಮತ್ತು ಸೌಲಭ್ಯಗಳನ್ನು, ಮುಸ್ಲಿಮ್ ರಾಷ್ಟ್ರಗಳು ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ, ಒದಗಿಸುತ್ತಿವೆ. ರಾಷ್ಟ್ರದ ಅನ್ಯಧರ್ಮಿಯ ಪೌರರಿಗೆ ವಿಶ್ವಾಸ ಮತ್ತು ಆರಾಧನಾ ಸ್ವಾತಂತ್ರ್ಯವನ್ನು ನೀಡದ ಯಾವ ಮುಸ್ಲಿಮ್ ರಾಷ್ಟ್ರವೂ ಇಲ್ಲ. ಆ ಕುರಿತು ಪವಿತ್ರ ಕುರ್‌ಆನ್ ಮತ್ತು ಪ್ರವಾದಿಚರ್ಯೆಯು ಅನುಸರಿಸಿರುವ ಸ್ಪಷ್ಟ ಮತ್ತು ಖಚಿತ ಧೋರಣೆಯೇ ಇದಕ್ಕೆ ಕಾರಣವಾಗಿದೆ.

  • ಇಸ್ಲಾಮ್ ಮತ್ತು ಪರಧರ್ಮ ಸಹಿಷ್ಣುತೆ ಎಂಬ ಕೃತಿಯಿಂದ
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …