ಜಗತ್ತಿನ ಎಲ್ಲ ಪ್ರಸಿದ್ಧ ಧರ್ಮಗಳಲ್ಲಿಯೂ ವೈಯಕ್ತಿಕ ಕಾನೂನುಗಳು (Personal Laws) ಧರ್ಮದ ಅವಿಭಾಜ್ಯ ಅಂಗವಾಗಿವೆ. ವಿವಾಹ, ವಿವಾಹ ವಿಚ್ಛೇದನ, ವಾರೀಸು ಹಕ್ಕು, ಶವ ಸಂಸ್ಕಾರದಂತಹ ಎಲ್ಲ ಕಾರ್ಯಗಳನ್ನೂ ತಂತಮ್ಮ ಧರ್ಮಾಚಾರಗಳಂತೆ ನಡೆಸಬೇಕೆಂದು ಹೆಚ್ಚಿನೆಲ್ಲ ಸಮುದಾಯದವರೂ ಬಯಸುತ್ತಾರೆ. ಹಾಗಿದ್ದರೂ ಆಧುನಿಕ ಜಗತ್ತಿನ ಕೆಲವು ಜಾತ್ಯತೀತ ಲೌಕಿಕ ರಾಷ್ಟ್ರಗಳು ಅದಕ್ಕೆ ಅನುಮತಿ ನೀಡುವುದಿಲ್ಲ. ಅವರು ರಾಷ್ಟ್ರದ ಅಖಂಡತೆ ಮತ್ತು ಸಾಂಸ್ಕೃತಿಕ ಐಕ್ಯದ ಹೆಸರಲ್ಲಿ ರಾಷ್ಟ್ರದ ಎಲ್ಲ ಜನರಿಗೂ ಅನ್ವಯವಾಗುವ ಸಮಾನ ಕಾನೂನುಗಳನ್ನು ರಚಿಸಿ ಜಾರಿಗೊಳಿಸಲು ತವಕ ಪಡುತ್ತಾರೆ. ಆದರೆ ಸಂಪೂರ್ಣ ಧರ್ಮಾಧಿಷ್ಠಿತವಾಗಿರುವ ಇಸ್ಲಾಮಿ ರಾಷ್ಟ್ರವು ರಾಷ್ಟ್ರದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅವರ ವೈಯಕ್ತಿಕ ಕಾನೂನುಗಳನ್ನು ಅನುಸರಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ. ಇಸ್ಲಾಮ್ ಅಂಗೀಕರಿಸಿದ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಮುಸ್ಲಿಮೇತರ ಪ್ರಜೆಗಳ ಪ್ರಸ್ತುತ ಹಕ್ಕುಗಳೂ ಸೇರುತ್ತವೆ. ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನು ಮತ್ತು ಪೌರ ಹಕ್ಕುಗಳನ್ನು ನಿಷೇಧಿಸುವುದನ್ನು ಪ್ರವಾದಿವರ್ಯರು(ಸ) ಬಲವಾಗಿ ವಿರೋಧಿಸಿದ್ದಾರೆ. ಅವರು ಹೀಗೆ ಹೇಳಿರುವರು: “ಎಚ್ಚರ ವಹಿಸಿರಿ, ಮುಸ್ಲಿಮೇತರ ಪ್ರಜೆಗಳನ್ನು ಯಾರಾದರೂ ಹಿಂಸಿಸಿದರೆ, ಅವರ ಮೇಲೆ ದುಬಾರಿ ತೆರಿಗೆ ಹೇರಿದರೆ, ಅವರೊಂದಿಗೆ ಕ್ರೂರವಾಗಿ ವರ್ತಿಸಿದರೆ, ಅವರ ಹಕ್ಕುಗಳನ್ನು ಮೊಟಕುಗೊಳಿಸಿದರೆ ವಿಧಿನಿರ್ಣಾಯಕ ದಿನದಲ್ಲಿ ನಾನು ಅಂಥವರ ವಿರುದ್ಧ ಸ್ವಯಂ ದೂರು ಸಲ್ಲಿಸುತ್ತೇನೆ.” (ಅಬೂ ದಾವೂದ್)
ಇಸ್ಲಾಮಿ ರಾಷ್ಟ್ರದಲ್ಲಿ ಮುಸ್ಲಿಮರಂತೆಯೇ ಧಾರ್ಮಿಕ ಅಲ್ಪಸಂಖ್ಯಾತರ ಪ್ರಾಣ ಸೊತ್ತು ಮತ್ತು ಮಾನವೆಲ್ಲವೂ ಪಾವನ ಮತ್ತು ಸುರಕ್ಷಿತವಾಗಿರುವುವು. ಪ್ರವಾದಿ(ಸ) ಹೀಗೆಂದಿದ್ದಾರೆ: “ಮುಸ್ಲಿಮೇತರ ಪ್ರಜೆಗಳನ್ನು ಹಿಂಸಿಸುವಾತನಿಗೆ ಸ್ವರ್ಗದ ಸುವಾಸನೆಯೂ ಲಭಿಸಲಾರದು.” (ಅಬೂ ಯೂಸುಫ್: ಕಿತಾಬುಲ್ ಖರಾಜ್, ಪುಟ: 71)
ಅವರ ಸ್ಮಶಾನಗಳನ್ನೂ ಅಗೌರವಿಸಬಾರದೆಂದು ಹನಫೀ ಕಾನೂನು ಗ್ರಂಥವಾಗಿರುವ ‘ಅಲ್ ಬಹರುರ್ರಾಹಿಕ್’ನಲ್ಲಿ ಸ್ಪಷ್ಟಪಡಿಸಲಾಗಿದೆ. (ಉದ್ಧರಣೆ: Hameedulla: Muslim Conduct of State. P.P. 114-115)
ಇಸ್ಲಾಮಿ ರಾಷ್ಟ್ರವು ಮುಸ್ಲಿಮೇತರ ಪ್ರಜೆಗಳ ವೈಯಕ್ತಿಕ ಕಾನೂನುಗಳಲ್ಲಿ ಹಸ್ತಕ್ಷೇಪ ಅಥವಾ ತಿದ್ದುಪಡಿ ಮಾಡುವುದಿಲ್ಲ. ಅಂಥ ವಿಷಯಗಳಲ್ಲಿ ಶರೀಅತ್ ನಿಯಮಗಳನ್ನು ಅವರ ಮೇಲೆ ಹೇರುವುದಿಲ್ಲ, ವಿವಾಹ, ವಿವಾಹ ವಿಚ್ಛೇದನ, ವಾರೀಸು ಹಕ್ಕು ಮುಂತಾದ ವಿಷಯಗಳಲ್ಲಿ ಅವರ ವಿವಾದಗಳನ್ನು ಅವರ ಧರ್ಮಾಚಾರಗಳನ್ವಯವೇ ಇಸ್ಲಾಮಿ ನ್ಯಾಯಾಲಯ ಬಗೆಹರಿಸುತ್ತದೆ. ಪ್ರವಾದಿವರ್ಯರ(ಸ) ಕಾಲದಲ್ಲಿ ಯಹೂದಿಗಳ ವಿವಾದವು ವಿಚಾರಣೆಗೆ ಬಂದರೆ ಮದೀನಾದ ‘ಬೈತುಲ್ ಮಿದ್ರಾಸ್’ ಎಂಬ ಯಹೂದಿ ವಿದ್ವಾಂಸ ಪರಿಷತ್ತನ್ನು ಸಂಪರ್ಕಿಸಿ ಅಲ್ಲಿನ ಪುರೋಹಿತರೊಡನೆ ತೌರಾತ್ನ ವಿಧಿಗಳನ್ನು ಕೇಳಿ ತಿಳಿದ ಬಳಿಕ ಅವರು ತೀರ್ಪು ನೀಡುತ್ತಿದ್ದರು. (ಇಬ್ನು ಹಿಶಾಮ್, ಸೀರತುನ್ನಬಿ, ಸಂಪುಟ: 2, ಪುಟ: 201)
ಡಾ| ಮುಸ್ತಫಾಸಬಾಯಿ ಹೀಗೆ ಬರೆದಿದ್ದಾರೆ: “ಇಸ್ಲಾಮಿ ರಾಷ್ಟ್ರದಲ್ಲಿ ಧಾರ್ಮಿಕ ಮುಖಂಡರಿಗೆ ಅವರ ವಲಯಗಳಲ್ಲಿ ಸಂಪೂರ್ಣ ಸ್ವಾತಂತ್ರ್ಯ ಮತ್ತು ಅವರ ಅನುಯಾಯಿಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ನೀಡಲಾಗಿತ್ತು. ಸರಕಾರವು ಅಂಥ ವಿಷಯಗಳಲ್ಲಿ ಕೈ ಹಾಕುತ್ತಿರಲಿಲ್ಲ, ರೋಮನ್ ಆಡಳಿತದ ಕಾಲದಲ್ಲಿ ತಿಳಿದಿರದ ಅಥವಾ ಅನುಭವಿಸಿಲ್ಲದ ಸ್ವಾತಂತ್ರ್ಯವು ಅಲ್ಲಿನ ಕೈಸ್ತರಿಗೆ ಮುಸ್ಲಿಮರಿಂದ ದೊರೆತಿತ್ತು. ಮಹಾನ್ ಮುಹಮ್ಮದುಲ್ ಫಾತಿಹ್ ಕಾನ್ಸ್ಟೆಂಟಿನೋಪಲನ್ನು ಸ್ವಾಧೀನಪಡಿಸಿದಾಗ ಅದು ಪೂರ್ವ ಪ್ರದೇಶಗಳ ಕೆಥೋಲಿಕ್ ಪೇಟ್ರಿಯಾರ್ಕ್ರ (Patriarch of Eastern Catholic Christians) ರಾಜಧಾನಿಯಾಗಿತ್ತು. ಆದ್ದರಿಂದ, ಅವರು ಅಲ್ಲಿನ ಎಲ್ಲ ಪ್ರಜೆಗಳಿಗೂ ಅಭಯ ನೀಡಿದ್ದರು. ಅವರೆಲ್ಲರೂ ಕ್ರೈಸ್ತ ಧರ್ಮಾವಲಂಬಿಗಳಾಗಿದ್ದರು. ಅವರು ಸಂಪತ್ತು, ಪ್ರಾಣ, ವಿಶ್ವಾಸ, ಶಿಲುಬೆ ಇತ್ಯಾದಿಗಳಿಗೆ ಭದ್ರತೆ ಒದಗಿಸಿ ಸೈನಿಕ ಸೇವೆಯಿಂದ ಅವರಿಗೆ ವಿನಾಯಿತಿ ನೀಡಿದರು. ತಮ್ಮ ಅನುಯಾಯಿಗಳ ನಡುವಣ ವಿವಾದಗಳಲ್ಲಿ ತೀರ್ಪು ನೀಡುವ ಮತ್ತು ಅವರಿಗೆ ಅಗತ್ಯವಿರುವ ಕಾನೂನುಗಳನ್ನು ರಚಿಸುವ ಅಧಿಕಾರವನ್ನು ಧಾರ್ಮಿಕ ಮುಖಂಡರಿಗೆ ನೀಡಿದರು. ಸರಕಾರವು ಅವುಗಳಲ್ಲಿ ಹಸ್ತಕ್ಷೇಪಿಸುತ್ತಿರಲಿಲ್ಲ. ಆದ್ದರಿಂದ, ಕಾನ್ಸ್ಟೆಂಟಿನೋಪಲ್ನ ನಿವಾಸಿಗಳು ಹಳೆಯ ಬೈಝಾಂಟಿಯಾನ್ ಮತ್ತು ಮುಹಮ್ಮದುಲ್ ಫಾತಿಹ್ರ ಆಡಳಿತ ಕಾಲಗಳ ವ್ಯತ್ಯಾಸವನ್ನು ಸ್ಪಷ್ಟವಾಗಿ ಮನಗಂಡರು. ಬೈಝಾಂಟಿಯರು, ವಿವಿಧ ಸಮುದಾಯಗಳ ನಡುವಣ ಸಮಸ್ಯೆ ಮತ್ತು ವಿವಾದಗಳಲ್ಲಿ ಹಸ್ತಕ್ಷೇಪ ನಡೆಸಿ ಪಕ್ಷಪಾತದಿಂದ ವರ್ತಿಸುತ್ತಿದ್ದರು. ಅವರು ಯಾವಾಗಲೂ ತಮ್ಮ ಕಕ್ಷಿ ಮತ್ತು ಚರ್ಚಿನ ಜನರ ಪರವಾಗಿ ತೀರ್ಪು ನೀಡುತ್ತಿದ್ದರು. ಆದ್ದರಿಂದ, ಅಲ್ಲಿನ ಕ್ರೈಸ್ತ ವಿಶ್ವಾಸಿಗಳು ಹೊಸ ಇಸ್ಲಾಮಿ ಸರಕಾರದಿಂದ ಸಂತೃಪ್ತರಾಗಿ ಅದರಲ್ಲಿ ಸಂಪೂರ್ಣ ಭರವಸೆಯಿರಿಸಿದ್ದರು. ಉದಾತ್ತ ಧಾರ್ಮಿಕ ಸಹಿಷ್ಣುತೆಯಿಂದ ಅವರಿಗೆ ಅಪಾರ ನೆಮ್ಮದಿಯುಂಟಾಯಿತು. ವಸ್ತುತಃ ಮುಹಮ್ಮದುಲ್ ಫಾತಿಹ್ ರೋಮನ್ ಪೆಟ್ರಿಯಾರ್ಕಿಸ್ರಿಗೆ ರಾಷ್ಟ್ರದೊಳಗೊಂದು ರಾಷ್ಟ್ರದ ಪದವಿ ಮತ್ತು ಸರಕಾರದೊಳಗೊಂದು ಸರಕಾರದ ಸ್ಥಾನವನ್ನು ನೀಡಿದ್ದರು. ಪೇಟ್ರಿಯಾರ್ಕಿಸ್ ಮತ್ತು ಅನುಯಾಯಿಗಳು ಇಸ್ಲಾಮಿ ರಾಷ್ಟ್ರದ ಈ ಸೌಲಭ್ಯಗಳನ್ನು 500 ವರ್ಷಗಳ ಸುದೀರ್ಘ ಕಾಲ ಅನುಭವಿಸಿದರು. ಅವರಿಗೆ ಸರ್ವಸ್ವಾತಂತ್ರ್ಯವಿತ್ತು. ಅದರ ಭದ್ರತೆಗಾಗಿ ಅವರು ಆರ್ಥಿಕ ಅಥವಾ ಸೈನಿಕ ಹೊಣೆಗಾರಿಕೆಗಳನ್ನು ವಹಿಸಬೇಕಾಗಲಿಲ್ಲ. ಎಲ್ಲವನ್ನೂ ಸರಕಾರವೇ ನಿರ್ವಹಿಸುತ್ತಿತ್ತು.(ಇಸ್ಲಾಮಿ ನಾಗರಿಕತೆ: ಕೆಲವು ಶೋಭಾಯಮಾನ ಚಿತ್ರಗಳು ಪುಟ: 106, 107)
ಈ ಕುರಿತು ವಾನ್ ಕ್ರೆಮರ್ ಹೀಗೆ ಬರೆದಿದ್ದಾರೆ: “ಮುಸ್ಲಿಮೇತರ ಸಮಾಜಗಳು ಬಹುವಂಶ ಸ್ವಾಯತ್ತತೆಯ ಹಕ್ಕನ್ನು ಹೊಂದಿದ್ದವು. ಅವರ ಆಂತರಿಕ ವಿಷಯಗಳನ್ನು ವ್ಯವಹರಿಸುವ ಸ್ವಾತಂತ್ರ್ಯವನ್ನು ಸರಕಾರವು ಅವರಿಗೆ ಬಿಟ್ಟುಕೊಟ್ಟಿತ್ತು. ಸಹಧರ್ಮಿಯರಿಗೆ ಸಂಬಂಧಿಸಿದ ಮೊಕದ್ದಮೆಗಳಲ್ಲಿ ಅವರ ನಾಯಕರಿಗೆ ನ್ಯಾಯ ತೀರ್ಮಾನದ ಅಧಿಕಾರವನ್ನೂ ನೀಡಲಾಗಿತ್ತು.” (ಉದ್ದರಣೆ: ಡಾ| ಸಈದ್ ರಮಝಾನ್, ಇಸ್ಲಾಮಿ ಕಾನೂನು:ಸಾಧ್ಯತೆ ಮತ್ತು ನ್ಯಾಯನಿಷ್ಠೆ- ಪುಟ: 146)
ಸರ್ ಥಾಮಸ್ ಅರ್ನಾಲ್ಡ್ ಹೀಗೆ ಬರೆದಿದ್ದಾರೆ: “ಮುಸ್ಲಿಮೇತರ ಸಮುದಾಯಗಳು ಬಹುವಂಶ ಸಂಪೂರ್ಣವಾಗಿ ಸ್ವಾಯತ್ತತೆಯನ್ನು ಅನುಭವಿಸುತ್ತಿದ್ದುವು. ಅವರ ಆಂತರಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಅಧಿಕಾರವನ್ನು ಸರಕಾರವು ಅವರಿಗೆ ನೀಡಿತ್ತು. ಧಾರ್ಮಿಕ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಅವರ ಪುರೋಹಿತರಿಗೆ ದೊರೆಯಿತು. ಅವರ ಚರ್ಚ್ ಮತ್ತು ಮಠಗಳಿಗೆ ಯಾವುದೇ ಕುಂದುಂಟಾಗದಂತೆ ನೋಡಿಕೊಳ್ಳಲಾಯಿತು.”(ಇಸ್ಲಾಮಿ ಬೋಧನೆ ಮತ್ತು ಪ್ರಚಾರ ಪುಟ: 78)
ಮುಸ್ಲಿಮೇತರ ಪ್ರಜೆಗಳಿಗೆ ತಮ್ಮ ಧರ್ಮಾಚಾರದನ್ವಯ ಆಹಾರ ಪಾನೀಯಗಳನ್ನು ಬಳಸುವ ಒಪ್ಪಿಗೆಯನ್ನು ಇಸ್ಲಾಮ್ ನೀಡುತ್ತದೆ. ಗ್ರಂಥದವರ ಆಹಾರವನ್ನು ಮುಸ್ಲಿಮರಿಗೆ ಧರ್ಮ ಸಮ್ಮತಗೊಳಿಸಲಾಗಿದೆ. ಅಲ್ಲಾಹನು ತಿಳಿಸಿರುತ್ತಾನೆ:’ಗ್ರಂಥದವರ ಆಹಾರ ನಿಮಗೂ ನಿಮ್ಮ ಆಹಾರ ಅವರಿಗೂ ‘ಧರ್ಮಸಮ್ಮತ’ ಆಗಿರುತ್ತದೆ.”(ಪವಿತ್ರ ಕುರ್ ಆನ್, 5:5)
ಆಡಳಿತಗಾರರು, ಮುಸ್ಲಿಮರಿಗೆ ನಿಷಿದ್ಧವಾದ ಆಹಾರ ಪಾನೀಯಗಳನ್ನು ಮುಸ್ಲಿಮೇತರರಿಗೆ ಅನ್ವಯಗೊಳಿಸಿರಲಿಲ್ಲ. ಅವರ ಧಾರ್ಮಿಕ ಕಾನೂನು ಮತ್ತು ಆಚಾರಗಳನ್ನು ಪಾಲಿಸುವ ಅನುಮತಿ ಅವರಿಗೆ ನೀಡಲಾಗಿತ್ತು. ಮಾತ್ರವಲ್ಲ ಕೆಲವೊಮ್ಮೆ ಸಹೋದರ ಸಮುದಾಯದವರ ಭಾವನೆಗಳನ್ನು ನೋಯಿಸದಿರಲಿಕ್ಕಾಗಿ ಅವರು ತೊರೆಯುವ ಆಹಾರ ಪದಾರ್ಥಗಳನ್ನು ಮುಸ್ಲಿಮ್ ಆಡಳಿತಗಾರರೂ ತೊರೆಯುತ್ತಿದ್ದರು. ಮೊಗಲ್ ಸಾಮ್ರಾಜ್ಯದ ಸ್ಥಾಪಕನಾದ ಮುಹಮ್ಮದ್ ಝಹೀರುದ್ದೀನ್ ಬಾಬರನು ಹಿಂದುಗಳ ಭಾವನೆಗಳನ್ನು ಗೌರವಿಸಿ ಸ್ವತಃ ಗೋಮಾಂಸವನ್ನು ತೊರೆಯಲು ಸನ್ನದ್ಧರಾಗಿದ್ದರು ಮತ್ತು ತಮ್ಮ ಪುತ್ರನಿಗೆ ಆ ಕುರಿತು ಉಪದೇಶ ನೀಡಿದ್ದರು. ಅವರು ಪುತ್ರ ಹುಮಾಯೂನ್ನಿಗೆ ನೀಡಿದ ಅಂತ್ಯೋಪದೇಶದಲ್ಲಿ ಹೀಗಿದೆ: “ನ್ಯಾಯನಿಷ್ಠೆಯಿಂದ ದೇಶವನ್ನು ಆಳಬೇಕು. ನಿನ್ನ ಪ್ರಜೆಗಳ ಮನಸೆಳೆಯಲಿಕ್ಕಾಗಿ ಗೋಮಾಂಸ ಭಕ್ಷಣೆಯನ್ನು ಉಪೇಕ್ಷಿಸು. ಹಾಗಾದರೆ ಅವರು ನಿನ್ನ ಸರಕಾರಕ್ಕೆ ಕೃತಜ್ಞರಾಗಬಹುದು.”(ಉದ್ಧರಣೆ: ಮಿಸೆಸ್, ನಿಲೋಫರ್ ಅಹ್ಮದ್, ಇನ್ಸ್ಟಿಟ್ಯೂಟ್ ಓಫ್ ಒಬ್ಜೆಕ್ಟಿವ್ ಸ್ಟಡೀಸ್ ನ್ಯೂಡೆಲ್ಹಿ)
ಮುಸ್ಲಿಮ್ ಸರಕಾರಗಳು, ಧಾರ್ಮಿಕ ಅಲ್ಪಸಂಖ್ಯಾತರ ವಿವಾಹ, ಕುಟುಂಬ ಜೀವನ, ವಾರೀಸು ಹಕ್ಕು ಮುಂತಾದ ವಿಷಯಗಳಲ್ಲಿ ಯಾವತ್ತೂ ಹಸ್ತಕ್ಷೇಪ ನಡೆಸಿರಲಿಲ್ಲ, ಸುದೀರ್ಘ 700 ವರ್ಷಗಳ ಮುಸ್ಲಿಮ್ ಆಡಳಿತದ ಬಳಿಕವೂ ಭಾರತದಲ್ಲಿ ಹಿಂದೂ ಆಚಾರ, ಸಾಂಸ್ಕೃತಿಕ ವೈಶಿಷ್ಟ್ಯಗಳು ಯಥಾವತ್ತಾಗಿ ಸುರಕ್ಷಿತವಾಗಿ ಉಳಿದುಕೊಂಡಿದೆ. ಇಸ್ಲಾಮಿ ಆಡಳಿತ ಕಾಲದಲ್ಲಿ ಪರಧರ್ಮಿಯರ ವೈಯಕ್ತಿಕ ಕಾನೂನುಗಳಲ್ಲಿ ಹಸ್ತಕ್ಷೇಪ ಅಥವಾ ತಿದ್ದುಪಡಿ ಮಾಡಿದ ಒಂದಾದರೂ ಘಟನೆಯನ್ನು ಎತ್ತಿತೋರಿಸಲು ಯಾರಿಂದಲೂ ಸಾಧ್ಯವಿಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾದೇಶವೂ ಸೇರಿದ ಮುಸ್ಲಿಮ್ ರಾಷ್ಟ್ರಗಳ, ಮುಸ್ಲಿಮೇತರರ ವೈಯಕ್ತಿಕ ಕಾನೂನುಗಳಲ್ಲಿ ಸರಕಾರಗಳು ಹಸ್ತಕ್ಷೇಪ ನಡೆಸಿಲ್ಲ ಅಥವಾ ಶರೀಅತ್ ಪ್ರಕಾರ ಅವುಗಳಲ್ಲಿ ತಿದ್ದುಪಡಿ ಮಾಡಿಲ್ಲ. ಈ ರಂಗದಲ್ಲಿ ಧಾರ್ಮಿಕ ಗುಂಪುಗಳ ವೈಯಕ್ತಿಕ ಕಾನೂನುಗಳಿಗೆ ಸೆಕ್ಯೂಲರ್ ಸರಕಾರಗಳಿಗಿಂತ ಹೆಚ್ಚಾಗಿ ಇಸ್ಲಾಮಿ ವ್ಯವಸ್ಥೆಯು ಭದ್ರತೆ ಒದಗಿಸುತ್ತದೆ. ಆಧುನಿಕ ಕಾಲದ ಅನುಭವಗಳೂ ಇದಕ್ಕೆ ಸಾಕ್ಷಿಯಾಗಿವೆ.
- ಇಸ್ಲಾಮ್ ಪರಧರ್ಮ ಸಹಿಷ್ಣುತೆ ಎಂಬ ಕೃತಿಯಿಂದ
IslamKannada News Portal
