ಇಸ್ಲಾಮ್, ಮಾನವರ ಹಸ್ತಕ್ಷೇಪಗಳಿಂದ ವಿರೂಪಗೊಳ್ಳದ ಏಕೈಕ ದೇವದತ್ತ ಜೀವನ ಪದ್ಧತಿಯಾಗಿದೆ. ಅದು ಮಾನವನ ಉಭಯ ಲೋಕ ವಿಜಯವನ್ನು ಖಚಿತ ಪಡಿಸುತ್ತದೆ. ಪರಲೋಕ ಮೋಕ್ಷದ ವಾಗ್ದಾನ ನೀಡುವುದರೊಂದಿಗೆ ಭೂಮಿಯಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯ ಜೀವನವನ್ನೂ ನೀಡುತ್ತದೆ.
ಗಾಳಿ, ನೀರು, ಸೂರ್ಯ, ಚಂದ್ರ ಎಲ್ಲವೂ ದೇವನದ್ದಾಗಿದೆ. ಸೃಷ್ಟಿಗಳು ಅವುಗಳ ಸಮಾನ ಹಕ್ಕುದಾರರಾಗಿದ್ದಾರೆ. ಇಸ್ಲಾಮ್ ಕೂಡಾ ಹಾಗೆಯೇ. ಅದು ಕೇವಲ ಮುಸ್ಲಿಮರದ್ದಲ್ಲ, ಎಲ್ಲ ಮಾನವರಿಗಾಗಿ ದೇವನು ಅವತೀರ್ಣಗೊಳಿಸಿದ್ದಾಗಿದೆ. ಪ್ರವಾದಿ ಮುಹಮ್ಮದ್(ಸ) ರನ್ನು ಇಡೀ ಜಗತ್ತಿಗಾಗಿ ನೇಮಿಸಲಾಗಿದೆ. ಅಲ್ಲಾಹನು ಹೀಗೆ ಹೇಳಿರುವನು: ”ಪೈಗಂಬರರೇ, ನಾವು ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.” (ಪವಿತ್ರ ಕುರ್ಆನ್, 21:107)
ಆದ್ದರಿಂದ, ಇಸ್ಲಾಮಿ ಸಂದೇಶ ದೊರೆತ ಮುಸ್ಲಿಮರು ಅದು ದೊರತಿಲ್ಲದವರಿಗೆ ತಲಪಿಸುವ ಹೊಣೆಯನ್ನು ಹೊಂದಿದ್ದಾರೆ. ಇದಕ್ಕೆ ಮಾನವರೊಂದಿಗಿನ ಹಿತಾಕಾಂಕ್ಷೆ, ಪ್ರೀತಿ, ಕರುಣೆ ಮತ್ತು ವಾತ್ಸಲ್ಯದ ಭಾವನೆಗಳೇ ಪ್ರೇರಕವಾಗಿದೆ. ದೇವಸಂಪ್ರೀತಿಯ ಅದಮ್ಯ ಆಕಾಂಕ್ಷೆಯು ಆಧಾರವಾಗಿದೆ. ಮರಣೋತ್ತರ ಜೀವನದಲ್ಲಿ ಸುರಕ್ಷಿತವಾದ ಏಕೈಕ ಮಾರ್ಗವೆಂದು ತಾವು ನಂಬುವ ದೈವಿಕ ಜೀವನ ಪದ್ಧತಿಯನ್ನು ದೇಶಬಾಂಧವರಿಗೆ ತಲಪಿಸದಿರಲು ಸಾಧ್ಯವಿದೆಯೇ? ಸತ್ಯವನ್ನು ಗ್ರಹಿಸಿದ ಬಳಿಕವೂ ಅದನ್ನು ಪ್ರಚಾರಗೊಳಿಸದವನಿಗಿಂತ ಕ್ರೂರಿ ಮತ್ತು ನೀಚ ಯಾರಿರಬಹುದು? ಆದ್ದರಿಂದ, ಇಸ್ಲಾಮಿ ಸಂದೇಶ ಪ್ರಚಾರವು ಎಲ್ಲ ಮುಸ್ಲಿಮರ ನೈತಿಕ ಮತ್ತು ಧಾರ್ಮಿಕ ಕರ್ತವ್ಯವಾಗಿದೆ. ಕುರ್ಆನ್ ಹೀಗೆ ಆಜ್ಞಾಪಿಸಿದ. ”ಓ ಪೈಗಂಬರರೇ, ಯುಕ್ತಿ ಹಾಗೂ ಸದುಪದೇಶದ ಮೂಲಕ ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ ಮತ್ತು ಜನರೊಂದಿಗೆ ಅತ್ಯುತ್ತಮ ರೀತಿಯಿಂದ ವಾದಿಸಿರಿ.” (ಪವಿತ್ರ ಕುರ್ಆನ್, 16:125)
ಧರ್ಮ ಪ್ರಚಾರವೇ ಮುಸ್ಲಿಮರ ಕರ್ತವ್ಯವಾಗಿದೆ. ಅರ್ಥಾತ್ ಇತರರಿಗೆ ಇಸ್ಲಾಮಿನ ಸಂದೇಶವನ್ನು ತಲಪಿಸುವ ಕರ್ತವ್ಯ. ಅವರಿಗೆ ಅದನ್ನು ಇತರರು ಅಂಗೀಕರಿಸುವಂತೆ ಮಾಡುವ ಹೊಣೆಗಾರಿಕೆಯಿಲ್ಲ, ಪ್ರವಾದಿಗಳೂ ಕೂಡಾ ಇತರರು ಧರ್ಮವನ್ನು ಅಂಗೀಕರಿಸುವಂತೆ ಮಾಡುವ ಹೊಣೆಗಾರರಾಗಿರಲಿಲ್ಲ, ಅಲ್ಲಾಹನು ಹೀಗೆ ತಿಳಿಸಿರುವನು: “ನಮ್ಮ ಸಂದೇಶವಾಹಕರಿಗೆ ಸುಸ್ಪಷ್ಟ ಆಜ್ಞೆಗಳನ್ನು ತಲಪಿಸುವ ಹೊಣೆಗಾರಿಕೆ ಮಾತ್ರವಿತ್ತೆಂಬುದನ್ನು ಅರಿತುಕೊಳ್ಳಿ. (ಪವಿತ್ರ ಆನ್, 5:92) “ಸಂದೇಶವಾಹಕರ ಮೇಲೆ ಸಂದೇಶವನ್ನು ತಲಪಿಸುವ ಹೊಣೆ ಮಾತ್ರವಿದೆ.” (ಪವಿತ್ರ ಕುರ್ ಆನ್, 5:99)
ಧರ್ಮ ಮತ್ತು ವಿಶ್ವಾಸವನ್ನು ಇತರರ ಮೇಲೆ ಹೇರುವ ಅನುಮತಿ ಪ್ರವಾದಿಗಳಿಗೂ ಇಲ್ಲ. ಆದ್ದರಿಂದ, ಮುಸ್ಲಿಮರು ಬಲಾತ್ಕಾರದ ಮತಾಂತರಕ್ಕೆ ಪ್ರಯತ್ನಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ.
ಇಸ್ಲಾಮಿನ ಪ್ರಸಾರಕ್ಕೆ ಖಡ್ಗವೇ ಕಾರಣವೆಂಬ ಪ್ರಚಾರವು ಅಸತ್ಯವಾಗಿದೆ. ಇಸ್ಲಾಮಿನ ಕ್ಷಿಪ್ರ ಪ್ರಸಾರಕ್ಕೆ, ಅದು ಪ್ರವೇಶಿಸಿದ ದೇಶಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಹಿನ್ನೆಲೆಗಳು ಅವಕಾಶ ಒದಗಿಸಿದ್ದುವು. ಇಸ್ಲಾಮಿನ ಪ್ರಸಾರದಲ್ಲಿ ಮುಸ್ಲಿಮ್ ಆಡಳಿತಗಾರರು ಮತ್ತು ಚಕ್ರವರ್ತಿಗಳಿಗಿಂತ ಹೆಚ್ಚಾಗಿ ಧರ್ಮ ಪ್ರಚಾರಕರು ಸಕ್ರಿಯರಾಗಿದ್ದರು. ವಿವಿಧ ರಾಷ್ಟ್ರಗಳಲ್ಲಿ ಇಸ್ಲಾಮ್ ಪ್ರಚುರಗೊಂಡ ಹಿನ್ನೆಲೆಯನ್ನು ವಿಸ್ತಾರವಾಗಿ ವಿವರಿಸುತ್ತಾ ಸರ್ ಥಾಮಸ್ ಅರ್ನಾಲ್ಡ್ ‘ಇಸ್ಲಾಮ್: ಬೋಧನೆ ಮತ್ತು ಪ್ರಚಾರ’ ಎಂಬ ವಿಶ್ವವಿಖ್ಯಾತ ಗ್ರಂಥವನ್ನು ಬರೆದಿದ್ದಾರೆ. ಅವರು ಈ ಬೃಹತ್ ಗ್ರಂಥದಲ್ಲಿ ಇಸ್ಲಾಮ್ ಖಡ್ಗದಿಂದ ಪ್ರಸಾರಗೊಂಡಿದೆಯೆಂಬ ಪಾಶ್ಚಾತ್ಯರ ಆರೋಪವನ್ನು ನಿರಾಧಾರವೆಂದು ಅಸಂದಿಗ್ಧವಾಗಿ ಸಾಬೀತುಪಡಿಸಿದ್ದಾರೆ.
ಮಧ್ಯಪೂರ್ವದಲ್ಲಿ ಇಸ್ಲಾಮಿನ ಪ್ರಸಾರವನ್ನು ವಿವರಿಸುತ್ತಾ ಅರ್ನಾಳ್ಡ್ ಹೀಗೆ ಬರೆದಿದ್ದಾರೆ: ಮೇಲಿನ ಉದಾಹರಣೆಗಳಿಂದ ಕ್ರೈಸ್ತ ಗೋತ್ರಗಳು ಮನಃಪೂರ್ವಕ ಇಸ್ಲಾಮ್ ಸ್ವೀಕರಿಸಿದ್ದುವೆಂದು ನಾವು ಊಹಿಸಬಹುದು. ವಿಜೇತರಾದ ಮುಸ್ಲಿಮರೂ ಅನಂತರದ ಮುಸ್ಲಿಮ್ ಪೀಳಿಗೆಗಳೂ ಅವರೊಂದಿಗೆ ತೋರಿದ ಸಹಿಷ್ಣುತೆಯು ಹಾಗೆ ನಿರ್ಧರಿಸಲು ನಮಗೆ ಪ್ರೇರಕವಾಗಿದೆ. ಮುಸ್ಲಿಮರೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಕ್ರೈಸ್ತ ಅರಬರು ಆ ಸಹಿಷ್ಣುತೆಯ ಜ್ವಲಂತ ಸಾಕ್ಷಿಯಾಗಿದ್ದಾರೆ. ಕಪ್ಪು ಸಮುದ್ರದ ಪೂರ್ವದಲ್ಲಿರುವ ಅಲ್ಕರಾಕ್ನಲ್ಲಿ ನಡೆ ನುಡಿ, ಉಡುಗೆ-ತೊಡುಗೆಗಳಲ್ಲಿ ಮುಸ್ಲಿಮ್ ಅರಬರಿಗಿಂತ ಕಿಂಚಿತ್ತೂ ಭಿನ್ನವಾಗಿಲ್ಲದ ಕ್ರೈಸ್ತ ಅರಬರನ್ನು ನೋಡಿದ ವಿಷಯವನ್ನು ಲಾಯ್ಡ್ ವಿವರಿಸಿದ್ದಾರೆ. ಕಳೆದ ಶತಮಾನಗಳ ತನಕ ಇಸ್ಲಾಮ್ ಸ್ವೀಕರಿಸದೆ ಬಾಳಿದ ಕೈಸ್ತರ ಕುರಿತು ಸೀನಾಯ್ ಪರ್ವತದ ಸನ್ಯಾಸಿಗಳು ಹೇಳಿದ ಮಾತುಗಳನ್ನು ಬಕಾರ್ಟ್ ಉಲ್ಲೇಖಿಸಿದ್ದಾರೆ: “ಶುದ್ಧ ಅರಬ್ ರಕ್ತವಿರುವ ಗಸ್ಸಾನ್ ಗೋತ್ರದ ಅನೇಕ ಸದಸ್ಯರು ನಾಲ್ಕನೆಯ ಶತಮಾನದಲ್ಲಿ ಕ್ರೈಸ್ತ ಧರ್ಮ ಸ್ವೀಕರಿಸಿದರು. ಅವರು ಆ ವಿಶ್ವಾಸವನ್ನು ಈಗಲೂ ಉಳಿಸಿಕೊಂಡು ಪೋಪ್ರ ಆದೇಶದನ್ವಯ ಧಾರ್ಮಿಕ ವ್ಯವಹಾರಗಳಿಗೆ ಅರಬಿ ಭಾಷೆಯನ್ನು ಬಳಸುತ್ತಿದ್ದಾರೆ. (ಇಸ್ಲಾಮ್ ಬೋಧನೆ ಮತ್ತು ಪ್ರಚಾರ ಪುಟ: 64)
ಅವರು ಹೀಗೆ ಮುಂದುವರಿಸುತ್ತಾರೆ: “ಕ್ರೈಸ್ತರೊಡನೆ ಮುಸ್ಲಿಮ್ ಆಡಳಿತವು ಆರಂಭದಲ್ಲಿ ತೋರಿದ ಸಹಿಷ್ಣುತೆಯ ಹಿನ್ನೆಲೆಯಲ್ಲಿ ಖಡ್ಗವು ಮತಾಂತರದ ಪ್ರಮುಖ ಉಪಕರಣವೆಂಬ ವಾದವು ತೀರಾ ಬಾಲಿಶವೆನಿಸುತ್ತದೆ.” (Ibid; ಪುಟ: 83)
ಭಾರತದಲ್ಲಿ ಆಡಳಿತಗಾರರಿಂದ ಇಸ್ಲಾಮ್ ಪ್ರಸಾರಗೊಂಡಿಲ್ಲ. ಆ ಪೈಕಿ ಹಲವರಿಗೆ ಧಾರ್ಮಿಕ ವ್ಯವಹಾರಗಳ ಕುರಿತು ಕಿಂಚಿತ್ತೂ ಆಸಕ್ತಿಯಿರಲಿಲ್ಲ. ಚೆಂಗೀಸ್ಖಾನ್ ಮತ್ತು ಹಲಾಕುಖಾನ್ನ ನಾಯಕತ್ವದಲ್ಲಿ ಮಂಗೋಲಿಯನರು ನಡೆಸಿದ ಆಕ್ರಮಣದಿಂದ ಪಲಾಯನ ಮಾಡಿದ ಧಾರ್ಮಿಕ ವಿದ್ವಾಂಸರು ಮತ್ತು ಸೂಫೀಸಂತರು ಉತ್ತರ ಭಾರತದಲ್ಲಿ ಇಸ್ಲಾಮಿನ ಪ್ರಚಾರ ನಡೆಸಿದ್ದರು.
ಭಾರತದಲ್ಲಿ ಪ್ರಬಲವಾಗಿದ್ದ ಜಾತಿ ವ್ಯವಸ್ಥೆಯು ಇಲ್ಲಿ ಇಸ್ಲಾಮಿನ ಪ್ರಸಾರಕ್ಕೆ ಅನುಕೂಲವಾಯಿತು. ಸಿ. ಅಚ್ಚುತ ಮೆನನ್ ಹೀಗೆ ಬರೆದಿದ್ದಾರೆ: “ಜಾತಿ ಪದ್ಧತಿಯೇ
ಪ್ರಧಾನ ವಿಷಯವಾಗಿತ್ತು. ಇಸ್ಲಾಮ್ ಧರ್ಮವು ಮಾನವ ಹಕ್ಕುಗಳನ್ನು ನಿಷೇಧಿಸಲಾಗಿದ್ದ ಕೋಟ್ಯಾಂತರ ಜನರಿಗೆ ವರದಾನವಾಯಿತು. ಅವರಿಗೆ (ಕೀಳ್ಜಾತಿಯವರಿಗೆ) ಮೂರಡಿಗಿಂತ ಎತ್ತರದ ಗುಡಿಸಲುಗಳಲ್ಲಿ ವಾಸಿಸಲು ಸರಕಾರ ಅನುಮತಿ ನೀಡುತ್ತಿರಲಿಲ್ಲ, ಮೇಲ್ಜಾತಿಯವರನ್ನು ಕಂಡಾಗ ಅವರು ಸಾಷ್ಟಾಂಗವರಗಬೇಕಾಗಿತ್ತು.” (Cochin State Manual 3: 44)
ಶೈಕ್ ಝೈನುದ್ದೀನ್ ಮಕ್ದೂಮ್ ಹೀಗೆ ಬರೆದಿದ್ದಾರೆ: “ಇಸ್ಲಾಮಿನ ಪ್ರಚಾರಕ್ಕಾಗಿ ಸಂಚರಿಸುತ್ತಿದ್ದ ಒಂದು ಮುಸ್ಲಿಮ್ ತಂಡವು ಮಲಬಾರ್ ಬಂದರಿಗೆ ಬಂದು ನೆಲೆಸಿತು. ಅವರಿಂದ ಇಸ್ಲಾಮ್ ಧರ್ಮದ ವೈಶಿಷ್ಟ್ಯಗಳನ್ನು ತಿಳಿದುಕೊಂಡ ಮಲಬಾರ್ ನಿವಾಸಿಗಳು ಸಾಮೂಹಿಕವಾಗಿ ಇಸ್ಲಾಮ್ ಸ್ವೀಕರಿಸಲಾರಂಭಿಸಿದರು. ಹೀಗೆ ಮಲಬಾರಿನಲ್ಲಿ ಇಸ್ಲಾಮ್ ಧರ್ಮಕ್ಕೆ ಯೋಗ್ಯ ರೀತಿಯಲ್ಲಿ ಪ್ರಚಾರ ಲಭಿಸಿ ಮುಸ್ಲಿಮರ ಸಂಖ್ಯೆ ಹೆಚ್ಚಿತು.”
ಅವರೇ ಮುಂದೆ ಹೀಗೆಂದಿದ್ದಾರೆ: “ಒಬ್ಬ ಹಿಂದು, ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರೆ ಇತರ ಹಿಂದುಗಳು ಆತನನ್ನು ಹಿಂಸಿಸುತ್ತಿರಲಿಲ್ಲ. ಬದಲಾಗಿ ಆತ ಎಷ್ಟೇ ಕೀಳ್ಜಾತಿಯವನಾಗಿದ್ದರೂ ಇಸ್ಲಾಮ್ ಧರ್ಮ ಸ್ವೀಕರಿಸಿದರೆ ಇತರ ಮುಸ್ಲಿಮರಂತೆಯೇ ಆತನೊಡನೆ ಸೌಹಾರ್ದದಿಂದ ವರ್ತಿಸುತ್ತಿದ್ದರು.” (ತುಹ್ ಫತುಲ್ ಮುಜಾಹಿದೀನ್ ಪುಟ:84)
ಡಾ| ರಾಯ್’ ಚೌಧರಿ ಬರೆದಿದ್ದಾರೆ: “ಬಂಗಾಳದ ದಲಿತ ಹಿಂದುಳಿದ ವರ್ಗಕ್ಕೆ ಇಸ್ಲಾಮ್ ಸಾಂತ್ವನ ಮತ್ತು ನೆಮ್ಮದಿ ನೀಡಿತು. ಸವರ್ಣೀಯರ ಹಿಂಸೆಯಿಂದ ಅವರು ವರ ದೊರೆತಂತೆ ಮುಕ್ತರಾದರು. (Dr. Roy Choudhry-History of Muslim rule; P:14)
ಡಾ| ಈಶ್ವರೀ ಪ್ರಸಾದ್ ಹೀಗೆ ಬರೆದಿದ್ದಾರೆ: “ಉನ್ನತ ಪದವಿ ಮತ್ತು ಜಾಗೀರುದಾರಿ ಹುದ್ದೆಗಳ ಆಸೆಯಿಂದ ಹಲವು ಸವರ್ಣಿಯರು ಮುಸ್ಲಿಮ್ ಆಡಳಿತದಲ್ಲಿ ಇಸ್ಲಾಮ್ಗೆ ಸೇರಿದರು. ಆದರೆ ಕೀಳ್ಜಾತಿಯ ಹಿಂದುಳಿದವರೇ ಬಹುಸಂಖ್ಯೆಯಲ್ಲಿದ್ದರು ಅದಕ್ಕೆ ಹಿಂದೂ ಧರ್ಮದಲ್ಲಿದ್ದ ಕ್ರೂರ ಜಾತಿ ಪದ್ಧತಿಯು ಅವರನ್ನು ಮೃಗ ಸಮಾನಗೊಳಿಸಿದ್ದಾಗ, ಇಸ್ಲಾಮ್ ಸಮಾನತೆ ಮತ್ತು ಸಹೋದರತೆಯ ಕೊಡುಗೆ ನೀಡಿದ್ದೇ ಕಾರಣವಾಗಿತ್ತು.” (Ram Gopal: Indian Muslims A Political History P:2)
ಹಲವು ಕಾಲ ಬಂಗಾಳದ ಸಿವಿಲ್ ಸರ್ವಿಸ್ನಲ್ಲಿದ್ದ ಸರ್ಹೆನ್ರಿ ಕೋಟನ್ ‘India & Home affairs’ ಎಂಬ ಕೃತಿಯಲ್ಲಿ ಹೀಗೆ ಬರೆದಿದ್ದಾರೆ: “ಪೂರ್ವ ಬಂಗಾಳದ ಮುಸ್ಲಿಮರೆಲ್ಲರೂ ಶೋಷಿತ ಹಿಂದುಗಳ ಪೀಳಿಗೆಯವರಾಗಿದ್ದಾರೆ. ಅವರ ಪೂರ್ವಜರು ಸಾಮಾಜಿಕ ನ್ಯಾಯಕ್ಕಾಗಿ ಇಸ್ಲಾಮ್ ಸ್ವೀಕರಿಸಿದ್ದರು.” (ಉದ್ದರಣೆ: ಇತಿಹಾಸ ಅಧ್ಯಯನ, ಪುಟ: 335)
ಭಾರತದಲ್ಲಿ ಮತಾಂತರಕ್ಕೆ ಇಂದಿಗೂ ಜಾತಿ ಪದ್ಧತಿಯು ಪ್ರಮುಖ ಕಾರಣವಾಗಿದೆ. ಆರ್ಯ ಸಮಾಜದ ನಾಯಕ ಸ್ವಾಮಿ ಅಗ್ನಿವೇಶ್ರು ಹೀಗೆಂದಿದ್ದಾರೆ: “ಮೀನಾಕ್ಷಿಪುರದ ಹರಿಜನರು ಈಗಲೂ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಅದನ್ನು ಸಹಿಸಲಾಗದೆ ಅಲ್ಲಿನ ಹರಿಜನರು ಇಸ್ಲಾಮ್ ಸ್ವೀಕರಿಸಲು ಮುಂದಾದರು.” (ಮಲೆಯಾಳ ಮನೋರಮ: 23-7-1986)
ಕೆ.ಆರ್. ಮಲ್ಕಾನಿ ಬರೆದಿದ್ದಾರೆ: “ಮುಸ್ಲಿಮರು ಪರಸ್ಪರ ಅಸ್ಪೃಶ್ಯರೆಂದು ಭಾವಿಸುವುದಿಲ್ಲ. ಈ ಧರ್ಮದಲ್ಲಿ ಸಾಮಾಜಿಕ ಮತ್ತು ಮಾನಸಿಕ ಆಕರ್ಷಣೆ ಯಾವಾಗಲೂ ಇತ್ತು. ಇಸ್ಲಾಮಿನ ಈ ವೈಶಿಷ್ಟ್ಯವು ಕೆಲವರನ್ನು ಆಕರ್ಷಿಸುತ್ತದೆ. ಆದ್ದರಿಂದ ಮುಸ್ಲಿಮರಿಗೆ ‘ಮೀನಾಕ್ಷಿ ಪುರಗಳು ಲಭಿಸುತ್ತವೆ. ಹೇರಳ ಸಂಖ್ಯೆಯಲ್ಲಿ ಆಫ್ರಿಕನ್ನರೂ ಅಮೇರಿಕದ ಕರಿಯರೂ ಮುಸ್ಲಿಮರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ.” (ಅಸ್ಪೃಶ್ಯರಲ್ಲಿ ಇಸ್ಲಾಮಿನ ಆಕರ್ಷಣೆ, ಸ್ಟೇಟ್ಸ್ಮನ್)
ಜಗತ್ತಿನ ಇತರೆಡೆಗಳಂತೆಯೇ ಭಾರತದ ಮತಾಂತರಗಳಲ್ಲಿಯೂ ಸರಕಾರದ ಒತ್ತಡ ಅಥವಾ ಬಲಾತ್ಕಾರ ಸ್ವಲ್ಪವೂ ಇರಲಿಲ್ಲ, ಹರ್ಬನ್ಸ್ಮುಖಿಯ ಹೀಗೆ ಬರೆದಿದ್ದಾರೆ: “ಮತಾಂತರ ನಡೆದಿದೆಯೆಂಬ ವಿಷಯವನ್ನು ಯಾರೂ ನಿರಾಕರಿಸಲಾರರು. ಸಾಮೂಹಿಕ ಮಟ್ಟದಲ್ಲಿ ಬಹುವಂಶ ಮನಃಪೂರ್ವಕರಾಗಿಯೇ ನಡೆದಿತ್ತು. ಜನರ ಮಧ್ಯೆ ನೆಲೆಸಿ ಅವರೊಡನೆ ಅವರ ಭಾಷೆಯಲ್ಲಿ ಮಾತಾಡುತ್ತಿದ್ದ ಸೂಫೀಸಂತರ ಪ್ರಭಾವವೇ ಅದಕ್ಕೆ ಕಾರಣವಾಗಿರಬಹುದು. ಸಾಮೂಹಿಕ ಮಟ್ಟದಲ್ಲಿ ಮತಾಂತರ ನಡೆಸಲು ಸರಕಾರದ ಕಾಳಜಿಯಿರಲಿಲ್ಲವೆಂದಷ್ಟೇ ಇಲ್ಲಿ ಸೂಚಿಸುತ್ತಿದ್ದೇನೆ.
“ಅಶೋಕ ಚಕ್ರವರ್ತಿಯು ಬೌದ್ಧ ಧರ್ಮದ ಪ್ರಚಾರ ಮತ್ತು ಜನರ ಮತಾಂತರಕ್ಕಾಗಿ ಆಡಳಿತ ಯಂತ್ರವನ್ನು ಸಕ್ರಿಯವಾಗಿ ಬಳಸಿ ತನ್ನಿಂದ ಸಾಧ್ಯವಿರುವುದನ್ನೆಲ್ಲ ಮಾಡಿದ್ದನು. ಹಾಗಿದ್ದರೂ ನಾವು ಆತನನ್ನು ಮಹಾನ್ ಚಕ್ರವರ್ತಿಯೆಂದು ಪರಿಗಣಿಸುತ್ತೇವೆ. ಅದೇ ವೇಳೆ ಮಧ್ಯಕಾಲೀನ ಭಾರತದಲ್ಲಿ ಸರಕಾರವು ಧರ್ಮಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ. ಹಾಗಿದ್ದರೂ ಅಂದಿನ ಆಡಳಿತದ ಬಗ್ಗೆ ಜನಮನದಲ್ಲಿ ಜನರನ್ನು ಕೇವಲ ಇಸ್ಲಾಮಿಗೆ ಸೇರಿಸುವ ಉಪಕರಣವೆಂಬ ಭಾವನೆ ಬೇರೂರಿದೆ. ಅಂತಹ ಧೋರಣೆಗೆ ನಮ್ಮ ಮನದಲ್ಲಿ ಲೀನವಾಗಿರುವ ಕೋಮುಭಾವನೆಯೇ ಪ್ರೇರಕವಾಗಿದೆ.’ (ಕೋಮುವಾದ ಮತ್ತು ಪ್ರಾಚೀನ ಭಾರತದ ಇತಿಹಾಸ ರಚನೆ, ಪುಟ: 48)
ಸಿ. ಅಚ್ಯುತ ಮೆನನ್ ಬರೆಯುತ್ತಾರೆ: “ವಸ್ತುತಃ ಮಧ್ಯಕಾಲದ ಸರಕಾರಗಳು ಇಸ್ಲಾಮ್ ಧರ್ಮವನ್ನು ಜನರ ಮೇಲೆ ಹೇರಲು ಅಥವಾ ಇಸ್ಲಾಮಿ ಧರ್ಮಾಚಾರದಂತೆ ಆಡಳಿತ ನಡೆಸಲು ಪ್ರಯತ್ನಿಸಿರಲಿಲ್ಲ.” (ಜನಯುಗ ಸಾಪ್ತಾಹಿಕ, 26-11-1978)
ದಕ್ಷಿಣ ಭಾರತದಲ್ಲಿ ಇಸ್ಲಾಮಿನ ಪ್ರಸಾರದ ಬಗ್ಗೆ ಡಾ| ತಾರಾಚಂದ್ ಹೀಗೆ ಬರೆದಿದ್ದಾರೆ: “ಹತ್ತನೆಯ ಶತಮಾನದ ಕೊನೆಯಲ್ಲಿ ಆಗಮಿಸಿದ ಅರಬರು ಭಾರತಕ್ಕೆ ಬಂದ ಪ್ರಥಮ ಮುಸ್ಲಿಮರಾಗಿದ್ದಾರೆ. ಅವರು ದಕ್ಷಿಣ ಭಾರತದಲ್ಲಿ ಸ್ಥಿರವಾಗಿ ನೆಲೆಸಿದರು. ಹೀಗೆ ಮುಸ್ಲಿಮರ ಪ್ರಭಾವ ಕ್ರಮೇಣ ವ್ಯಾಪಕವಾಯಿತು. ವ್ಯಾಪಾರಿಗಳೆಂಬ ನೆಲೆಯಲ್ಲಿ ಅವರು ಹಾರ್ದಿಕ ಸ್ವಾಗತ ಪಡೆದರು. ಮಲಬಾರಿನ ರಾಜಂದಿರು ಅವರಿಗೆ ಜಮೀನು ಖರೀದಿ ಮತ್ತು ಧರ್ಮಾಚಾರಗಳ ನಿರ್ವಹಣೆಗೆ ಮುಕ್ತ ಅವಕಾಶ ನೀಡಿದರು. ಇಸ್ಲಾಮ್, ಮಾದರೀ ಧರ್ಮವಾಗಿದ್ದುದರಿಂದ ಅದರ ವೈಶಿಷ್ಟ್ಯಗಳನ್ನು ಪ್ರಚಾರಪಡಿಸಿ ಸ್ಥಳೀಯರನ್ನು ಪರಿವರ್ತನೆಗೊಳಿಸಲು ಅರಬರಿಗೆ ಕಷ್ಟವಾಗಲಿಲ್ಲ. ಅವರ ವಿಶಿಷ್ಟ ವಿಶ್ವಾಸ, ಆರಾಧನಾ ಕ್ರಮ, ಪ್ರಚಾರ ರೀತಿ ಮತ್ತು ಧೈಯ ಇತ್ಯಾದಿಗಳು ಹಿಂದೂ ಜನಸಾಮಾನ್ಯರನ್ನು ಬಹಳವಾಗಿ ಆಕರ್ಷಿಸಿತು.” (Influence of Islam on Indian Culture, P:33)
ಬಿ.ಎನ್. ಪಾಂಡೆ ಹೀಗೆ ಬರೆಯುತ್ತಾರೆ: “ದಕ್ಷಿಣ ಭಾರತದಲ್ಲಿ ಇಸ್ಲಾಮಿಗೆ ಬಹಳ ಅನುಕೂಲಕರ ವಾತಾವರಣವಿತ್ತು. ದಕ್ಷಿಣ ಭಾರತದಲ್ಲಿ ಬೌದ್ಧರು ಮತ್ತು ಜೈನರ ಅಧಿಕಾರ ಪೈಪೋಟಿಯಲ್ಲಿ ನವ ಹಿಂದೂವಾದವು ತಲೆಯೆತ್ತಿದುದರಿಂದ ಧಾರ್ಮಿಕ ಸಂಘರ್ಷಗಳು ವ್ಯಾಪಕವಾಗಿದ್ದುವು. ಧಾರ್ಮಿಕ ರಂಗವು ಜನಸಾಮಾನ್ಯರನ್ನು ಭಯಭೀತಗೊಳಿಸಿದಂತಹ ವಾತಾವರಣದಲ್ಲಿ ಸರಳ ವಿಶ್ವಾಸ ಸಂಹಿತೆ, ಆಚಾರ ಕ್ರಮ ಮತ್ತು ಸ್ಪಷ್ಟ ಕಾನೂನುಗಳನ್ನು ಪ್ರಕಟಪಡಿಸಿ, ಇಸ್ಲಾಮ್ ಸಕ್ರಿಯವಾಯಿತು. ಅನೇಕ ವಿವೇಕಮತಿಗಳು ತಾವಾಗಿಯೇ ಮತಾಂತರಗೊಂಡರು. ಒಂಭತ್ತನೆಯ ಶತಮಾನದ ಮೊದಲ ದಶಕದಲ್ಲಿ ಮಲಬಾರ್ ರಾಜಂದಿರಾದ ಚೇರಮಾನ್ ಪೆರುಮಾಳ್ರಲ್ಲಿ ಕೊನೆಯವರೂ ಹೊಸ ಧರ್ಮಕ್ಕೆ ಸೇರಿದರು. (ಇಸ್ಲಾಮ್ ಮತ್ತು ಭಾರತೀಯ ಸಂಸ್ಕೃತಿ, ಪುಟ: 96)
“ಸಾಮೂದಿರಿ: ರಾಜನು ತನ್ನ ಜನರನ್ನು ನುರಿತ ನಾವಿಕರನ್ನಾಗಿ ತರಬೇತಿಗೊಳಿಸಬೇಕೆಂಬ ಬಯಕೆಯಿಂದ, ತನ್ನ ದೇಶದ ಪ್ರತಿಯೊಂದು ಬೆಸ್ತ ಕುಟುಂಬದ ಒಂದೆರಡು ಮಂದಿ ಮುಸ್ಲಿಮರಾಗಬೇಕೆಂಬ ಆಜ್ಞೆ ಹೊರಡಿಸಿದ್ದನು.” (Thara Chand; Infulence of Islam on Indian Culture P:36)
ಇಸ್ಲಾಮ್ ಬಲಾತ್ಕಾರದ ಮತಾಂತರದಲ್ಲಿ ಎಂದೂ ನಂಬಿಕೆಯಿರಿಸಿಲ್ಲ. ಹಾಗೆಯೇ ಮುಸ್ಲಿಮರು ಮತಾಂತರಕ್ಕೆ ಖಡ್ಗದ ನೆರವು ಪಡೆದಿಲ್ಲ. ಸರ್ ಥಾಮಸ್ ಆರ್ನಾಲ್ಡ್ ಹೀಗೆ ಬರೆದಿದ್ದಾರೆ: “ಇಸ್ಲಾಮಿನ ಪ್ರಚಾರದ ಕಾರಣವನ್ನು ಕಂಡು ಹಿಡಿಯಲಿಕ್ಕಾಗಿ, ಒಂದು ಕೈಯಲ್ಲಿ ಕುರ್ಆನ್, ಇನ್ನೊಂದು ಕೈಯಲ್ಲಿ ಖಡ್ಗ ಹಿಡಿದು ಬಂದ ಅಜ್ಜಿ ಕಥೆಯ ಯೋಧನ ಬಳಿಗೆ ಹೋಗಬೇಕಾಗಿಲ್ಲ. ಅನೇಕ ವ್ಯಾಪಾರಿಗಳು ಮತ್ತು ಧರ್ಮಪ್ರಚಾರಕರು ನಡೆಸಿದ ಪರಿಶ್ರಮಗಳತ್ತ ಕಣ್ಣು ಹಾಯಿಸಬೇಕು.’ (ಇಸ್ಲಾಮ್, ಬೋಧನೆ ಮತ್ತು ಪ್ರಚಾರ)
ಗಾಂಧೀಜಿಯವರು ಹೀಗೆ ಬರೆದಿದ್ದಾರೆ. “ಇಂದು ಮಾನವ ವರ್ಗದ ಜನರ ಹೃದಯಗಳಲ್ಲಿ ನಿಷ್ಕಳಂಕ ಪ್ರಭಾವ ಬೀರಿರುವ ಓರ್ವರ ಜೀವನದ ಅತ್ಯುತ್ತಮ ಅಂಶವನ್ನು ನಾನು ತಿಳಿಯ ಬಯಸಿದೆ. ಆ ಕಾಲದ ಜೀವನ ಧಾರೆಯಲ್ಲಿ ಇಸ್ಲಾಮಿಗೆ ಸ್ಥಾನಗಳಿಸಿ ಕೊಟ್ಟದ್ದು ಖಡ್ಗವಲ್ಲವೆಂದು ಈಗ ನನಗೆ ಹಿಂದಿಗಿಂತ ಹೆಚ್ಚಾಗಿ ಮನವರಿಕೆಯಾಗಿದೆ. ಪ್ರವಾದಿಯ ನಿಸ್ಪೃಹ ಸರಳತೆ, ಉದಾತ್ತ ಮನೋಬಲ, ಪ್ರತಿಜ್ಞೆಗಳ ಬಗ್ಗೆ ಸುದೃಢ ನಿಷ್ಠೆ, ಅಪಾರತ್ಯಾಗ, ನಿರ್ಭೀತಿ, ದೇವನ ಬಗ್ಗೆ ಮತ್ತು ತನ್ನ ರಾಯಭಾರದಲ್ಲಿರುವ ಪರಮ ವಿಶ್ವಾಸವು ಎಲ್ಲವನ್ನೂ ಅವರ ಮುಂದೆ ತಂದೊಪ್ಪಿಸಿತು, ಎಲ್ಲ ಆತಂಕಗಳನ್ನೂ ನಿವಾರಿಸಲು ಸಹಾಯಕವಾಯಿತು.” (Young India 16-9-1924)
ಪಾಶ್ಚಾತ್ಯ ಸಾಹಿತಿ ರಾಬರ್ಟ್ಸನ್ ಹೀಗೆ ಬರೆದಿದ್ದಾರೆ: “ಧಾರ್ಮಿಕ ಸ್ಫೂರ್ತಿ ಮತ್ತು ಪರಧರ್ಮಿಯರೊಡನೆ ಸಹಿಷ್ಣುತೆಯ ಸ್ಫೂರ್ತಿಯನ್ನು ಕೇವಲ ಮುಸ್ಲಿಮರು ಮಾತ್ರ ಕಾಯ್ದುಕೊಂಡಿದ್ದರು. ಅವರು ಖಡ್ಗವೆತ್ತಿದ್ದರೂ, ಇಸ್ಲಾಮಿನಲ್ಲಿ ಆಸಕ್ತಿಯಿಲ್ಲದವರಿಗೆ ತಂತಮ್ಮ ಧರ್ಮದಲ್ಲಿಯೇ ಮುಂದುವರಿಯುವ ಅನುಮತಿ ನೀಡಿದ್ದರು.
(Civilization of Arabs.)
ಇಸ್ಲಾಮ್ ಮತ್ತು ಪರಧರ್ಮ ಸಹಿಷ್ಣುತೆ ಎಂಬ ಕೃತಿಯಿಂದ
IslamKannada News Portal
